ಇದು 22 ಜೂನ್ 2014ರಂದು 'ಕನ್ನಡ ಪ್ರಭ'ದಲ್ಲಿ ಪ್ರಕಟವಾದ ಲೇಖನ.
ಪದವಿ ಹಂತದಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗದ ತರಗತಿಗಳಿಗೆ ಆಗುತ್ತಿರುವ ಪ್ರವೇಶಾತಿಯನ್ನು ಗಮನಿಸಿದರೆ ಮಾನವಿಕ ಶಾಸ್ತ್ರ (Humanities), ಸಮಾಜವಿಜ್ಞಾನ ಹಾಗೂ ಮೂಲವಿಜ್ಞಾನಗಳ ಅವಸಾನ ಕಾಲ ಸನ್ನಿಹಿತವಾಗುತ್ತಿದೆಯೇ ಎಂಬ ಆತಂಕ ಕಾಡದಿರದು.
ಇಂಜಿನಿಯರಿಂಗ್-ಮೆಡಿಕಲ್ ಕೋರ್ಸುಗಳ ಕಡೆಗೆ ವಲಸೆ ಹೋಗುತ್ತಿರುವ ವಿದ್ಯಾರ್ಥಿಗಳಿಂದಾಗಿ ಬಿಎಸ್ಸಿ ತರಗತಿಗಳು ಬಿಕೋ ಎನ್ನುತ್ತಿದ್ದರೆ, ಭವಿಷ್ಯದ ಬಗ್ಗೆ ಭರವಸೆ ಮೂಡಿಸಲು ವಿಫಲವಾಗಿರುವ ಸಮಾಜ ವಿಜ್ಞಾನಗಳಿಂದಾಗಿ ಕಲಾ ವಿಭಾಗದ ಕೋರ್ಸುಗಳು ಪಾಳುಬಿದ್ದಿವೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳೆಲ್ಲರೂ ತಮಗೆ ಬಿ.ಕಾಂ. ಸೀಟು ಸಿಕ್ಕಿದರೆ ಸಾಕೆಂದು ಹಪಹಪಿಸುತ್ತಿರುವುದು ಸದ್ಯದ ಬೆಳವಣಿಗೆ.
ಕಳೆದ ವರ್ಷವಷ್ಟೇ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಸ್ವೀಕರಿಸಿದ ಪ್ರೊ. ಸಿ. ಎನ್. ಆರ್. ರಾವ್ ಅವರು ’ಇದು ಮೂಲವಿಜ್ಞಾನದಲ್ಲಿನ ಸಂಶೋಧನೆಗೆ ಸಂದ ಪುರಸ್ಕಾರ’ ಎಂದು ಉದ್ಗರಿಸಿದ್ದರು. ಅದರ ಬೆನ್ನಲ್ಲೇ ಮೂಲವಿಜ್ಞಾನಗಳು ಮೂಲೆಗುಂಪಾಗುತ್ತಿರುವ ಬಗೆಗೂ ಅವರು ತಮ್ಮ ಕಳವಳವನ್ನು ತೋಡಿಕೊಂಡಿದ್ದರು. ಪ್ರಸಿದ್ಧ ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಕೂಡ ಮಾನವಿಕಶಾಸ್ತ್ರಗಳು ಅವಗಣನೆಗೆ ಒಳಗಾಗುತ್ತಿರುವ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ಸಿಇಟಿಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆದುಕೊಳ್ಳಲಾಗದವರು ಅಥವಾ ಲಕ್ಷಾಂತರ ರುಪಾಯಿ ಹಣ ನೀಡಿಯಾದರೂ ಇಂಜಿನಿಯರಿಂಗ್-ಮೆಡಿಕಲ್ ಸೀಟು ಪಡೆದುಕೊಳ್ಳಲು ಅಶಕ್ತರಾದವರು ಮಾತ್ರ ಬಿಎಸ್ಸಿಗೆ ಸೇರಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಬೆಳೆದುಬಿಟ್ಟಿದೆ. ವೃತ್ತಿಪರ ಕೋರ್ಸುಗಳನ್ನು ಸೇರುವ ಅರ್ಹತೆಯಿದ್ದರೂ ಅವುಗಳನ್ನು ಬಿಟ್ಟು ಸಹಜ ಆಸಕ್ತಿಯಿಂದ ಮೂಲವಿಜ್ಞಾನವನ್ನು ಆಯ್ದುಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬಿಎಸ್ಸಿಗೆ ಸೇರಿದವರಿಗೂ ಬೇಕಾಗಿರುವುದು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತಿತರ ಕೆಲವೇ ಕೆಲವು ವಿಷಯಗಳು.
ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಂತೂ ಎಸ್.ಎಸ್.ಎಲ್.ಸಿ. ಹಂತದಿಂದಲೇ ಇಂಜಿನಿಯರಿಂಗ್-ಮೆಡಿಕಲ್ ಭೂತ ಮನೆಮಾಡಿಕೊಂಡುಬಿಡುತ್ತದೆ. ಎಸ್.ಎಸ್.ಎಲ್.ಸಿ.ಯಲ್ಲಿ ಒಳ್ಳೇ ಅಂಕ ಬರದಿದ್ದರೆ, ಆಮೇಲೆ ಪಿಯುಸಿಯಲ್ಲಿ ವಿಜ್ಞಾನ ಓದಲು ಒಳ್ಳೇ ಕಾಲೇಜು ಸಿಗದಿದ್ದರೆ, ನಂತರ ಸಿಇಟಿಯಲ್ಲಿ ಒಳ್ಳೇ ರ‍್ಯಾಂಕ್ ದೊರೆಯದಿದ್ದರೆ ತನ್ನ ಮಗ/ಮಗಳಿಗೆ ಭವಿಷ್ಯವೇ ಇಲ್ಲ ಎಂಬ ದಿಕ್ಕಿನಲ್ಲೇ ಹೆತ್ತವರ ಯೋಚನಾಲಹರಿ ಸಾಗುತ್ತದೆ. ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆರಿಸಿಕೊಳ್ಳುವವರು ಇನ್ನೇನನ್ನೂ ಓದಲಾಗದ ಶತದಡ್ಡರು, ಅದು ನಾಚಿಕೆಗೇಡು ಎಂಬುದು ಪ್ರಚಲಿತದಲ್ಲಿರುವ ಧೋರಣೆ. ಅದು ಪದವಿ ಹಂತದಲ್ಲೂ ಮುಂದುವರಿದಿರುವುದು ದುರದೃಷ್ಟಕರ.
ಈಗ ಏಕಾಏಕಿ ಬಿ.ಕಾಂ. ತರಗತಿಗಳಿಗೆ ಬೇಡಿಕೆ ಹೆಚ್ಚಾಗಿಬಿಟ್ಟಿದೆ. ನಗರ ಪ್ರದೇಶದ ಅನೇಕ ಕಾಲೇಜುಗಳು ಕಲಾ ವಿಭಾಗವನ್ನೇ ಮುಚ್ಚಿಬಿಟ್ಟಿವೆ; ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಮಾತ್ರ ನಡೆಸುತ್ತಿವೆ. ವಾಣಿಜ್ಯ ವಿಭಾಗದಲ್ಲಿ ನಾಲ್ಕೈದು ಸೆಕ್ಷನುಗಳನ್ನು ತೆರೆದರೂ ಮತ್ತಷ್ಟು ಬೇಡಿಕೆ ಕುದುರುತ್ತಲೇ ಇದೆ. ವಾಣಿಜ್ಯ ವಿಭಾಗಕ್ಕೆ ಹಾಗೂ ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸುಗಳಿಗೆ ಬೇಡಿಕೆ ಹೆಚ್ಚಾಗಿರುವುದು ಆಕ್ಷೇಪಾರ್ಹವೇನೂ ಅಲ್ಲ. ಆದರೆ ಈ ಓಟ ಇನ್ನೆಷ್ಟು ದಿನ? ಎಲ್ಲರೂ ಬಿ.ಕಾಂ. ಓದುತ್ತಲೇ ಹೋದರೆ ಅಥವಾ ಎಲ್ಲರೂ ಇಂಜಿನಿಯರುಗಳಾದರೆ ಅವರ ಭವಿಷ್ಯದ ಗತಿ ಏನು? ನಮ್ಮ ಮಾನವಿಕ ಶಾಸ್ತ್ರಗಳಿಂದ, ಸಮಾಜ ವಿಜ್ಞಾನಗಳಿಂದ ಯುವಜನತೆ ವಿಮುಖರಾಗಿರುವುದು ಏಕೆ? ಅವರನ್ನು ಮತ್ತೆ ಸೆಳೆಯುವುದು ಹೇಗೆ? ಈ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ.
ಬಿಎ ಅಥವಾ ಬಿಎಸ್ಸಿ ಓದಿದವರಿಗೆ ಭವಿಷ್ಯ ಇಲ್ಲ ಎಂಬ ಅಭಿಪ್ರಾಯ ತುಂಬ ಗಾಢವಾಗಿ ಸಮಾಜದಲ್ಲಿ ಹರಡಿಕೊಂಡಿರುವುದು ಸದ್ಯದ ಪರಿಸ್ಥಿತಿಗೆ ಒಂದು ಕಾರಣ. ಈ ವಿಭಾಗದಲ್ಲಿ ಡಿಗ್ರಿ ಮುಗಿಸಿದವರು ಬಿಎಡ್ ಅಥವಾ ಸ್ನಾತಕೋತ್ತರ ಡಿಗ್ರಿ ಪಡೆದು ಮೇಸ್ಟ್ರಾಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ನಮ್ಮ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಪೋಷಕರಲ್ಲಿ ಬಲವಾಗಿಯೇ ಬೇರೂರಿದೆ. ಬಿಎ/ಬಿಎಸ್ಸಿ ಓದಿದವರ ಭವಿಷ್ಯದ ಬಗ್ಗೆ ಇರುವ ಅನುಮಾನಗಳಲ್ಲಿ ಸತ್ಯ ಇಲ್ಲದಿಲ್ಲ. ಆದರೆ ಸತ್ಯಕ್ಕಿಂತಲೂ ಹೆಚ್ಚು ಪೂರ್ವಾಗ್ರಹ ಅಥವಾ ಅಜ್ಞಾನ ಇದೆ ಎಂಬುದೇ ಹೆಚ್ಚು ನಿಜ. ಒಂದೆಡೆ, ಸಮಾಜ ವಿಜ್ಞಾನ ಹಾಗೂ ಮೂಲವಿಜ್ಞಾನಗಳನ್ನು ಓದುವ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ಮತ್ತವರ ಪೋಷಕರಿಗೆ ಮನದಟ್ಟು ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಇನ್ನೊಂದೆಡೆ, ಸಮಾಜ ವಿಜ್ಞಾನ ಮತ್ತು ಮೂಲವಿಜ್ಞಾನದ ಕೋರ್ಸುಗಳನ್ನು ಪ್ರಸಕ್ತ ಜಗತ್ತಿನ ಆದ್ಯತೆಗಳಿಗನುಗುಣವಾಗಿ ಪುನರ್ರಚಿಸುವಲ್ಲಿ ಹಾಗೂ ಅಷ್ಟೇ ಆಕರ್ಷಕವಾಗಿ ಅವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ನಾವು ಸೋತಿದ್ದೇವೆ.
ಈ ಎರಡು ವಿಚಾರಗಳಲ್ಲಿ ಸುಧಾರಣೆ ತರದ ಹೊರತು ಮಾನವಿಕ ಶಾಸ್ತ್ರಗಳಿಗಾಗಲೀ, ಮೂಲವಿಜ್ಞಾನಕ್ಕಾಗಲೀ ಖಂಡಿತ ಉಳಿಗಾಲವಿಲ್ಲ. ಆದರೆ ಇದು ಒಬ್ಬಿಬ್ಬರಿಂದ ಆಗುವಂತಹ ಕೆಲಸ ಅಲ್ಲ. ಅಧ್ಯಾಪಕರು, ಶಿಕ್ಷಣ ಸಂಸ್ಥೆಗಳು, ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ನೀತಿನಿಯಮಗಳನ್ನು ರೂಪಿಸುವ, ಅನುಷ್ಠಾನಗೊಳಿಸುವ ಸಂಸ್ಥೆಗಳೆಲ್ಲರ ಸಹಭಾಗಿತ್ವದಲ್ಲಿ ನಡೆಯಬೇಕಾದ ಒಂದು ಸಮಷ್ಠಿ ಕಾರ್ಯ ಅಥವಾ ಆಂದೋಲನ.
ಇಡೀ ಸಮಾಜ ಒಂದು ಸಜೀವ ದೇಹವೆಂದು ಭಾವಿಸಿದರೆ ಅದರ ಸಮಗ್ರ ಬೆಳವಣಿಗೆ ಮತ್ತು ಅಭ್ಯುದಯಕ್ಕೆ ಮಾನವಿಕ ಶಾಸ್ತ್ರ ಹಾಗೂ ವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆ ತೀರಾ ಅನಿವಾರ್ಯ. ಈ ತಿಳುವಳಿಕೆಯನ್ನು ಮತ್ತೆ ಸಮಾಜದಲ್ಲಿ ಮೂಡಿಸುವ ಅವಶ್ಯಕತೆ ಇದೆ. ಜೊತೆಗೆ, ಬಿಎಯಂತಹ ಕೋರ್ಸುಗಳು ನಿರುಪಯುಕ್ತವಲ್ಲ ಎಂಬ ಭಾವನೆಯನ್ನು ಬಲಗೊಳಿಸುವ ಕೆಲಸ ನಡೆಯಬೇಕಿದೆ. ಬಿಎ/ಬಿಎಸ್ಸಿ ಓದಿದವರು ನಾಳೆ ನಿರುದ್ಯೋಗಿಗಳಾಗಬೇಕಿಲ್ಲ ಅಥವಾ ಗುಮಾಸ್ತರಾಗಿ ಉಳಿಯಬೇಕಾಗಿಲ್ಲ, ಆ ಹಾದಿಯಲ್ಲಿ ಮುಂದುವರಿದು ಐಎಎಸ್/ಐಪಿಎಸ್ ಅಧಿಕಾರಿ, ವಿದೇಶೀ ರಾಯಭಾರಿ, ಶ್ರೇಷ್ಠ ಸಂಶೋಧಕ ಕೂಡ ಆಗಬಹುದೆಂಬ ಭರವಸೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕಿದೆ.
ಬಿಎ ಅಧ್ಯಯನದ ಸಾಂಪ್ರದಾಯಿಕ ವಿಷಯಗಳಾದ ಇತಿಹಾಸ, ಸಾಹಿತ್ಯ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮುಂತಾದವುಗಳ ಬೋಧನೆಯನ್ನು ಇನ್ನಷ್ಟು ಆಕರ್ಷಕಗೊಳಿಸುವ ಮತ್ತು ಅವುಗಳ ಜೊತೆಗೆ ಉದ್ಯೋಗ ಜಗತ್ತಿಗೆ ತುಂಬ ಅವಶ್ಯಕತೆಯಿರುವ ಸಂವಹನ ಇಂಗ್ಲಿಷ್, ಕಂಪ್ಯೂಟರ್ ತರಗತಿಗಳು, ಭಾಷಾಂತರ, ತಾಂತ್ರಿಕ ಬರವಣಿಗೆ, ಛಾಯಾಗ್ರಹಣ, ಫ್ಯಾಶನ್ ಡಿಸೈನಿಂಗ್, ಜಾಹೀರಾತು ವಿನ್ಯಾಸ, ವ್ಯಕ್ತಿತ್ವ ವಿಕಸನದಂತಹ ಪ್ರಾಯೋಗಿಕ ಕೋರ್ಸುಗಳನ್ನು ಹೆಚ್ಚುವರಿಯಾಗಿ ಪರಿಚಯಿಸುವ ಅಗತ್ಯ ಇದೆ. ಇಂತಹವುಗಳ ಆಕರ್ಷಣೆಯಿಂದಲಾದರೂ ಹೆಚ್ಚುಮಂದಿ ಸಮಾಜ ವಿಜ್ಞಾನಗಳತ್ತ ಮುಖಮಾಡಿದರೆ ಅದೊಂದು ಧನಾತ್ಮಕ ಬೆಳವಣಿಗೆಯಾದೀತು. ಹಾಗೆಯೇ ಉದ್ಯೋಗಕ್ಕೆ ನೇರ ಸಂಬಂಧ ಹೊಂದಿರುವ ಪತ್ರಿಕೋದ್ಯಮ, ಮನಃಶಾಸ್ತ್ರ, ಪ್ರವಾಸೋದ್ಯಮದಂತಹ ವಿಷಯಗಳ ಔದ್ಯೋಗಿಕ ಸಾಧ್ಯತೆಗಳ ಬಗೆಗೂ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಬೇಕಿದೆ.
ಯುಜಿಸಿಯೇನೋ ಮೌಲ್ಯವರ್ಧಿತ ಕೋರ್ಸುಗಳನ್ನು ಬಿಎ/ಬಿಎಸ್ಸಿ ಹಂತದಲ್ಲಿ ಹೆಚ್ಚುಹೆಚ್ಚಾಗಿ ಆರಂಭಿಸುವುದಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ, ಕೋಟ್ಯಂತರ ರುಪಾಯಿಗಳನ್ನೂ ತೆಗೆದಿರಿಸುತ್ತಿದೆ. ಆದರೆ ಅವುಗಳನ್ನು ಪಡೆದುಕೊಳ್ಳುವ ಮತ್ತು ಅನುಷ್ಠಾನಗೊಳಿಸುವ ಹುರುಪು ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಕಾಣಿಸುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ ಬಿಎ, ಬಿಎಸ್ಸಿಯಂತಹ ಕೋರ್ಸುಗಳು ಕೆಲವೇ ವರ್ಷಗಳಲ್ಲಿ 'ಡೆಡ್ ಕೋರ್ಸು’ಗಳಾಗುವುದರಲ್ಲಿ ಸಂಶಯವಿಲ್ಲ.

2 ಕಾಮೆಂಟ್‌ಗಳು:
Very good analysis & write up.
Very good analysis & write up.
ಕಾಮೆಂಟ್ ಪೋಸ್ಟ್ ಮಾಡಿ