ಶನಿವಾರ, ಜನವರಿ 7, 2012

ಜಾಹೀರಾತು ನಿಯಂತ್ರಣ ಶೀಘ್ರ: ಕ್ಷಮಿಸಿ, ಷರತ್ತುಗಳು ಅನ್ವಯಿಸುತ್ತವೆ!

ಹೊಸದಿಗಂತ, ಮಾಧ್ಯಮ ಶೋಧ-೧೧, ೦೫-೦೧-೨೦೧೨


ಯುವಕನೊಬ್ಬ ಟಿಕೆಟ್ ಇಲ್ಲದೆ ತರಾತುರಿಯಲ್ಲಿ ರೈಲು ಏರುತ್ತಾನೆ. ಆಗ ಟಿ.ಸಿ.ಯ ಆಗಮನ. ಟಿ.ಸಿ. ಒಬ್ಬಳು ಯುವತಿ. ಯುವಕನ ಬಳಿ ಟಿಕೆಟ್ ಕೇಳುತ್ತಾಳೆ. ಉತ್ತರವಾಗಿ ಯುವಕ ಬಾಯ್ತೆರೆದು ಆಕೆಯ ಮುಖದತ್ತ 'ಹಾ’ ಎನ್ನುತ್ತಾನೆ. ಅಷ್ಟೇ! ಆ ಯುವತಿ ಸಮ್ಮೋಹಕ್ಕೆ ಒಳಗಾದವಳಂತೆ ಯುವಕನನ್ನು ಹಿಂಬಾಲಿಸಿ ನಡೆದುಬಿಡುತ್ತಾಳೆ. ಅಂದಹಾಗೆ, ಯುವತಿಯಲ್ಲಿ ಆದ ಈ ಅಮೋಘ ಬದಲಾವಣೆಗೆ ಕಾರಣ ಯುವಕ ಬಳಸಿದ ಟೂತ್‌ಪೇಸ್ಟ್ ಮತ್ತು ಅದರ ಪರಿಣಾಮವಾಗಿ ಆತನ ಬಾಯಿಯಿಂದ ಹೊರಹೊಮ್ಮುವ ಸುಗಂಧ.


***


ಕಟುಮಸ್ತಾದ ಯುವಕ ಠಾಕುಠೀಕಾಗಿ ಮಾಲ್ ಒಂದನ್ನು ಪ್ರವೇಶಿಸುತ್ತಾನೆ. ಶಾಪಿಂಗ್‌ನಲ್ಲಿ ತೊಡಗಿರುವ ಮಾದಕ ಯುವತಿಯರೆಲ್ಲಾ ಅನಾಮತ್ತಾಗಿ ಉನ್ಮತ್ತರಾಗಿ ಅವನನ್ನು ಮುತ್ತಿಕೊಂಡು ಸರಸಕ್ಕೆ ಮುಂದಾಗುತ್ತಾರೆ ಮತ್ತು ಆತನ ಹಿಂದೆಯೇ ನಡೆದುಬಿಡುತ್ತಾರೆ. ಹೌದು, ಇದೆಲ್ಲ ಆ ಯುವಕ ಬಳಸಿದ ಸುಗಂಧ ದ್ರವ್ಯದ ಕಾರುಬಾರು.


***


ಪಾರ್ಕ್‌ನ ಬೆಂಚ್ ಮೇಲೆ ಆಸೀನರಾದ ಇಬ್ಬರು ಚಾಕೋಲೇಟ್ ಒಂದನ್ನು ಮೆಲ್ಲತೊಡಗುತ್ತಾರೆ. ಚಾಕೋಲೇಟ್ ತಿನ್ನುತ್ತಾ ತಿನ್ನುತ್ತಾ ಅವರೊಂದು ಭ್ರಮಾಲೋಕಕ್ಕೆ/ಲಹರಿಗೆ ಜಾರಿಬಿಡುತ್ತಾರೆ. ಪಿಕ್‌ಪಾಕೆಟ್ ಮಾಡುವವನೊಬ್ಬ ಇದೇ ಸಮಯ ಸಾಧಿಸಿ ಅವರನ್ನು ದೋಚಿ ಪರಾರಿಯಾಗುತ್ತಾನೆ. ಸಂದೇಶ: ಈ ಚಾಕೋಲೇಟ್ ಎಷ್ಟು ಸೊಗಸಾಗಿದೆಯೆಂದರೆ ಇದನ್ನು ತಿಂದ ನೀವು ಜಗತ್ತನ್ನೇ ಮರೆತುಬಿಡುತ್ತೀರಿ.


***


ಗಂಡಹೆಂಡತಿ ಒಂದೇ ಛತ್ರಿ ಹಿಡಿದುಕೊಂಡು ಮಳೆಯಲ್ಲಿ ನಡೆಯುತ್ತಿದ್ದಾರೆ. ಇನ್ನು ಹೆಚ್ಚುದಿನ ಹೀಗೆ ನಡೆದುಹೋಗಬೇಕಾಗಿಲ್ಲ, ತನಗೆ ಮ್ಯಾನೇಜರ್ ಆಗಿ ಭಡ್ತಿ ದೊರೆತಿದೆ ಎಂದು ಗಂಡ ಹೇಳುತ್ತಾನೆ. ಹೆಂಡತಿಯೂ ಗಂಡನ ಬಳಿ ಆತನಿಗೊಂದು ಸ್ವೀಟ್‌ನ್ಯೂಸ್ ಇದೆಯೆಂದು ಹೇಳುತ್ತಾಳೆ. ಗಂಡ ಸಂಭ್ರಮ-ಕುತೂಹಲಗಳಿಂದ ಆಕೆಯತ್ತ ನೋಡುತ್ತಾನೆ. 'ನನಗೆ ಇನ್‌ಕ್ರಿಮೆಂಟ್ ಸಿಕ್ಕಿದೆ’ ಎನ್ನುತ್ತಾಳೆ ಪತ್ನಿ. ಪತಿ ತಾನು ನಿರೀಕ್ಷಿಸಿದ್ದು ಅದಲ್ಲ ಎಂಬ ಹಾಗೆಯೋ ಅದೇನು ಮಹಾ ಎಂಬಂತೆಯೋ ಮುಖ ಮಾಡುತ್ತಾನೆ; ರಸ್ತೆ ದಾಟಲು ಮುಂದಾಗುತ್ತಾನೆ. ಅದೆಲ್ಲಿತ್ತೋ ಒಂದು ವಾಹನ, ಮಿಂಚಿನ ವೇಗದಲ್ಲಿ ಮುನ್ನುಗ್ಗಿ ಬರುತ್ತದೆ. ಪತ್ನಿ ಭಯದಿಂದ ಕಿರಿಚುತ್ತಾಳೆ. ಗಂಡ ಕೂದಲೆಳೆಯಲ್ಲಿ ಪಾರಾಗಿರುತ್ತಾನೆ. ಇದು ಖಾಸಗಿ ಜೀವವಿಮಾ ಕಂಪೆನಿಯೊಂದರ ಜಾಹೀರಾತು.


***


ಈ ಜಾಹೀರಾತುದಾರರೆಲ್ಲ ಸಮಾಜಕ್ಕೆ ಅದೇನು ಸಂದೇಶ ರವಾನಿಸಬೇಕೆಂದಿದ್ದಾರೆ? 'ಹೆಚ್ಚು ಕೊಳ್ಳು, ಹೆಚ್ಚು ತಿನ್ನು, ಹೆಚ್ಚು ಖರ್ಚು ಮಾಡು’ - ಸಾಲಮಾಡಿಯಾದ್ರೂ ತುಪ್ಪ ತಿನ್ನು ಎಂಬ ಕೊಳ್ಳುಬಾಕ ಸಂಸ್ಕೃತಿಯ ಆಧುನಿಕ ಮಂತ್ರವನ್ನು ಬೋಧಿಸುವುದಷ್ಟೇ ಅಲ್ಲದೆ, ಮನುಷ್ಯ ಸಂಬಂಧಗಳಿಗೆ, ಭಾವನೆಗಳಿಗೆ ಬೆಲೆಯಿಲ್ಲದ ಅದ್ಯಾವ ಬರಡು ಬದುಕನ್ನು ನಿರ್ಮಿಸಲು ಹೊರಟಿದ್ದಾರೆ? ’ಇನ್ನೂ ಹೆಚ್ಚು ಬೇಕೆಂಬ ಇಚ್ಛೆಯನ್ನು ಮಾಡಿಕೊಳ್ಳಿ’ ಎಂದು ಕರೆ ನೀಡುತ್ತದೆ ಒಂದು ವಿಮಾ ಕಂಪೆನಿ. ತನ್ನಲ್ಲಿ ರೋಗಿಗಳಿಗೆ ಯಾವೆಲ್ಲ ಸೌಲಭ್ಯಗಳು ದೊರೆಯುತ್ತವೆ ಎಂದು ಮಾಹಿತಿ ನೀಡುವ ಬದಲು ತನ್ನಲ್ಲಿ ಯಾವೆಲ್ಲ ಆರೋಗ್ಯವಿಮಾ ಕಂಪೆನಿಗಳ ಕ್ಲೇಮ್ ಇದೆ ಎಂದು ದೊಡ್ಡದಾಗಿ ಬೋರ್ಡು ಬರೆಸುತ್ತದೆ ಅತ್ಯಾಧುನಿಕ ಆಸ್ಪತ್ರೆ. ಉಪಭೋಗೀ ಸಂಸ್ಕೃತಿ ಬದುಕಿನ ಇಂಚಿಂಚನ್ನೂ ಕಬಳಿಸುತ್ತಾ ಕೊನೆಗೆ ಏನನ್ನು ಉಳಿಸೀತು ಎಂಬ ಪ್ರಶ್ನೆ ಜಾಹೀರಾತುಗಳ ಕಾರಣದಿಂದಾಗಿ ಮತ್ತೆ ಮಾಧ್ಯಮಗಳ ಎದುರೇ ನಿಂತಿರುವುದು ಒಂದು ವಿಪರ್ಯಾಸ.


ಐದು ದಿನಗಳಲ್ಲಿ ಬೆಳ್ಳಗಾಗಿರಿ, ಏಳು ದಿನಗಳಲ್ಲಿ ಮೂರು ಕೆ.ಜಿ. ತೂಕ ಕಳೆದುಕೊಳ್ಳಿರಿ, ಒಂದೇ ವಾರದಲ್ಲಿ ಜೀರೋ ಡ್ಯಾಂಡ್ರಫ್, ಪುರುಷ ಶಕ್ತಿಯನ್ನು ವೃದ್ಧಿಸುವ ದಿವ್ಯೌಷಧ, ಮನದಿಚ್ಛೆಯನ್ನು ಕ್ಷಣಾರ್ಧದಲ್ಲಿ ಪೂರೈಸುವ ಪವಾಡದ ಉಂಗುರ... ಎಂಬಿತ್ಯಾದಿ ಜಾಹೀರಾತುಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎಗ್ಗಿಲ್ಲದಂತೆ ಕಾಣಿಸಿಕೊಳ್ಳುತ್ತಲೇ ಇವೆ. ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ)ದಂತಹ ಪ್ರತಿಷ್ಠಿತ ಸಂಸ್ಥೆಗಳು, ಡ್ರಗ್ಸ್ ಅಂಡ್ ಮ್ಯಾಜಿಕ್ ರೆಮೆಡೀಸ್ (ಅಬ್ಜೆಕ್ಷನಬಲ್ ಅಡ್ವರ್ಟೈಸ್‌ಮೆಂಟ್ಸ್) ಆಕ್ಟ್, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೆಗ್ಯುಲೇಶನ್ ಆಕ್ಟ್ ಮುಂತಾದ ಹಲವಾರು ಕಾನೂನುಗಳು, ಗ್ರಾಹಕ ಹಕ್ಕು ರಕ್ಷಣೆಯ ಶಾಸನಗಳು ಇದ್ದಾಗ್ಯೂ ಈ ಬಗೆಯ ಚಿತ್ರವಿಚಿತ್ರ, ಆಧಾರರಹಿತ ಜಾಹೀರಾತುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.


ಪುರುಷನ ಉಸಿರಿನಿಂದಲೋ ದೇಹದಿಂದಲೋ ಹೊರಹೊಮ್ಮುವ ಸುವಾಸನೆಗೆ ಮಾರುಹೋಗಿ ಆತನ ಹಿಂದೆ ನಡೆದುಬಿಡುವಂತೆ ಮಹಿಳೆಯನ್ನು ಚಿತ್ರಿಸುವ ಮೂಲಕ ನಮ್ಮ ಜಾಹೀರಾತುದಾರರು ಏನನ್ನು ಸಾಧಿಸಲು ಹೊರಟಿದ್ದಾರೆ? ಸ್ತ್ರೀ-ಪುರುಷ ಅಸಮಾನತೆಯ ಬಗ್ಗೆ ಹೋರಾಟ ನಡೆಯುವ, ಎಲ್ಲರಿಗೂ ಸಮಾನ ಅವಕಾಶ ನೀಡುವ ಚರ್ಚೆಗಳು ನಡೆಯುವ ಈ ಹೊತ್ತಿನಲ್ಲೂ ಸಮಾಜದ ಒಂದು ಭಾಗ ಸ್ತ್ರೀಯನ್ನು ಚಂಚಲೆ, ಅಬಲೆ, ಭೋಗದ ವಸ್ತು ಎಂದೇ ಪ್ರತಿಪಾದಿಸುತ್ತಿದೆ ಎಂಬುದಕ್ಕೆ ಈ ಬಗೆಯ ಜಾಹೀರಾತುಗಳೇ ಸಾಕ್ಷಿಯಲ್ಲವೇ? ಅಲ್ಲದೆ ಜನರು ತಮ್ಮ ಈ ಪೂರ್ವಾಗ್ರಹವನ್ನು ಸಂಪತ್ತನ್ನು ಕೂಡಿಹಾಕುವ ಉದ್ದೇಶಕ್ಕೆ ಬಳಸುತ್ತಿರುವುದು ಯಾವ ಲಂಪಟತನಕ್ಕೆ ಕಮ್ಮಿ?


'ಮಗು ಹೆತ್ತ ಮೇಲೆ ಜೀವನ ಬದಲಾಗುತ್ತೆ... ತ್ವಚೆ ಒಣದಾಗುತ್ತೆ, ಮುಖದಲ್ಲಿ ಡಾರ್ಕ್ ಸ್ಪಾಟ್ಸ್...’ ಎನ್ನುತ್ತಾಳೆ ಜಾಹೀರಾತಿನಲ್ಲಿರುವ ತಾಯಿ. ಮಗು ಹೆತ್ತ ಮೇಲೆ ಜೀವನ ಬದಲಾಗುವುದು ಎಂದರೆ ಈ ಜಾಹೀರಾತಿನ ಪ್ರಕಾರ ತ್ಚಚೆ ಒಣಗುವುದು, ಮುಖದಲ್ಲಿ ಕಪ್ಪುಕಲೆಗಳು ಮೂಡುವುದು. 'ಹೆಣ್ಣೆಂದರೆ ಹೊನ್ನು ಬೇಕು’ ಎಂಬ ಪಲ್ಲವಿಯೊಂದಿಗೆ ಆರಂಭವಾಗುತ್ತದೆ ಇನ್ನೊಂದು ಜಾಹೀರಾತು. ಜಾಹೀರಾತುಗಳ ಭಾಷೆಯಂತೂ ಅವರಿಗೇ ಪ್ರೀತಿ. 'ಪ್ರದೂಷಣೆ, ಸನ್ ಮತ್ತು ಸ್ಟೈಲಿಂಗ್‌ನಿಂದ ನನ್ನ ಕೂದ್ಲು ಹಾಳಾಗ್ತಿತ್ತು. ಏನೇ ಟ್ರೈ ಮಾಡಿದ್ರೂ ಮತ್ತೆ ಹುಲ್ಲಿನಂತೆ. ಅಗೇನ್, ಅಗೇನ್...’ ಎನ್ನುವ ರೂಪದರ್ಶಿ, ತಾನು ನಿರ್ದಿಷ್ಟ ಶ್ಯಾಂಪೂ ಬಳಸಲು ಆರಂಭಿಸಿದ ಮೇಲೆ ಆದ ಪರಿಣಾಮವನ್ನೂ ಹೇಳುತ್ತಾಳೆ: 'ನೋ ಹುಲ್ಲು, ನೋ ಡ್ಯಾಮೇಜ್; ಓನ್ಲಿ ಹೆಲ್ದೀ ಹೇರ್’. ಅಬ್ಬಾ, ಇದ್ಯಾವ ಭಾಷೆ!


ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ಕಳೆದ ವರ್ಷ ೧೫೯ ಜಾಹೀರಾತುಗಳ ಬಗ್ಗೆ ಸುಮಾರು ೨೦೦ ದೂರುಗಳನ್ನು ಸ್ವೀಕರಿಸಿದ್ದರೆ ಈ ವರ್ಷ ೧೯೦ ಜಾಹೀರಾತುಗಳ ಬಗ್ಗೆ ಒಟ್ಟು ೭೭೭ ದೂರುಗಳನ್ನು ಸ್ವೀಕರಿಸಿದೆ. ವರ್ಷದಿಂದ ವರ್ಷಕ್ಕೆ ನಮ್ಮ ಜಾಹೀರಾತುಗಳ ಗುಣಮಟ್ಟ ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ ಮಾತ್ರ. ಬಾಯ್ತೆರೆದರೆ 'ಸೆಲ್ಫ್ ರೆಗ್ಯುಲೇಶನ್’ ಎಂಬ ಮಂತ್ರಪಠಿಸುವ ಮತ್ತು ಅದರಲ್ಲೇ ಎಲ್ಲದಕ್ಕೂ ಪರಿಹಾರ ಇದೆ ಎಂದು ನಂಬಿಸುವ ಆಡಳಿತಗಾರರಿಗೆ, ಅಧಿಕಾರಿಗಳಿಗೆ ಹಾಗೂ ತಥಾಕಥಿತ ಪಂಡಿತರಿಗೆ ಎಲ್ಲವೂ ವಾಣಿಜ್ಯೀಕರಣದ ಸುಳಿಗೆ ಸಿಲುಕಿರುವ ಈ ಆಧುನಿಕ ಜಗತ್ತಿನಲ್ಲಿ ಸ್ವಯಂನಿಯಂತ್ರಣ ಎಂಬ ಪರಿಕಲ್ಪನೆ ಎಷ್ಟೊಂದು ಅರ್ಥಹೀನ ಎಂಬುದು ಅರ್ಥವಾಗುತ್ತದೆಯೇ?


ಸದ್ಯಕ್ಕೆ ಕೇಂದ್ರ ಸರ್ಕಾರ ದಾರಿತಪ್ಪಿಸುವ ಮತ್ತು ಕೀಳು ಅಭಿರುಚಿಯ ಜಾಹೀರಾತುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಂತರ್ ಇಲಾಖಾ ಸಮಿತಿಯೊಂದನ್ನು ರಚಿಸುವ ಮಾತನ್ನಾಡುತ್ತಿದೆ. ಈವರೆಗೆ ಬಂದಿರುವ ಹತ್ತಾರು ಕಾನೂನುಗಳು ಹಾಗೂ ಸಮಿತಿಗಳ ಸಾಲಿಗೆ ಇದೂ ಒಂದು ಸೇರ್ಪಡೆಯಾಗಲಿದೆಯೇ ಅಥವಾ ಏನಾದರೂ ಒಂದಿಷ್ಟು ಪ್ರಯೋಜನ ಸಿಕ್ಕೀತೇ- ಈಗಲೇ ಹೇಳಲಾಗದು. ಏಕೆಂದರೆ, 'ಷರತ್ತುಗಳು ಅನ್ವಯಿಸುತ್ತವೆ’.

2 ಕಾಮೆಂಟ್‌ಗಳು:

ಸಮೀರ... ಹೇಳಿದರು...

ಒಳ್ಳೆಯ ಲೇಖನ. ಇಂದಿನ ಜಾಹೀರಾತುಗಳನ್ನು ನೋಡಿದಾಗ ಅವುಗಳ ವಿನ್ಯಾಸಕಾರರ ಸ್ರಜನಶೀಲತೆ ತಪ್ಪು ಮಾಗ್ರದಲ್ಲೇ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ ಅನ್ನಿಸ್ಸುತ್ತಿದೆ. ಅಷ್ಟೇ ಅಲ್ಲ ಅವು ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ವಿಷಾದಕರ.
ಇತ್ತೀಚಿಗೆ ಒಂದು ಟಿ.ವಿ ಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ workshop ಎಂಬ ಜಾಹೀರಾತು ಬರುತ್ತಿತತು. ಅದರ ಪ್ರಕಾರ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದರೆ ಅವರ ಪರಿಪೂರ್ಣ ಬೆಳವಣಿಗೆ ಆದಂತೆ; ಹಾಗು ಹೆಚ್ಚು ಅಂಕ ತೆಗೆಯಬೇಕಾದರೆ ಎರಡು ವಿಷಯ ಅಚಿಎವೆ ಮಾಡಿದರೆ ಸಾಕು. ೧. ಉತ್ತಮ ಕೈಬರಹ (handwriting) ೨. ಉತ್ತಮ ಜ್ಞಾಪಕಶಕ್ತಿ (memory power). ಅವರ workshop ನಲ್ಲಿ ಇವುಗಳನ್ನು ಹೇಗೆ improve ಮಾಡುವುದು ಅಂತ ಕಲಿಸ್ತಾರಂತೆ. ಕೈಬರಹಕ್ಕೆ ಯಾವ ಪೆನ್ ಉಪಯೋಗಿಸಕು ಎಂದು scientific study ಮಾಡಿ ಕಳಿಸುತ್ತಾರಂತೆ. ಜ್ಞಾಪಕಶಕ್ತಿಗೆ ಇನ್ನೇನು ಕಲಿಸುತ್ತಾರೋ ಗೊತ್ತಿಲ್ಲ. Scientific ಎಂದು unscientific ವಿಷಯಗಳನ್ನು ಹೇಳಿಕೊಡುವುದು ಮತ್ತು ಜನರನ್ನು ತಪ್ಪು ದಾರಿಗೆಳೆಯುವುದು ಎಷ್ಟು ಸರಿ? ಮೇಲೆ ಹೇಳಿದ ವಿಷಯಗಳು ಪ್ರಮುಖ್ಯವಲ್ಲವೆಂದು ನಾನು ಹೇಳುತ್ತಿಲ್ಲ. ಆದರೆ ಅವೆರದರಿಂದಲೇ ಮಗುವಿನ ಸರ್ವತೋಮುಖ ಬೆಳವಣಿಗೆ ಆಗುವುದಿಲ್ಲ ಮತ್ತು ಒಬ್ಬ ವ್ಯಕ್ತಿಯ complete personality ನೋಡಿದಾಗ ಅವೆರಡು ಅತ್ಯಂತ ಪ್ರಾಮುಖ್ಯ ಅಂಶಗಳೂ ಅಲ್ಲ. ಆದರೆ ಅಂಕಗಳ ಹೆಸರಿನ್ನಲಿ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಖೇದಕರ. ಅಂಕಗಳ ಮೂಲಕವೇ ವಿದ್ಯಾರ್ಥಿಗಳನ್ನು ಅಳೆಯುವ ನಮ್ಮ ವ್ಯವಸ್ತೆ ಇದಕ್ಕೆ ಪುಷ್ಟಿ ಕೊಡುತ್ತಿರುವುದು ಖೇದಕರ.

shreekala ಹೇಳಿದರು...

Lekhana thumba chennagide. Prasthutha sanniveshadalli jahirathu olleyadannu niduvudakkintha kettadanne niduththide embudu sathya.. Prasthutha nanu japaninalli iddene... illiya jahirathugaligu bharathada jahirathugaligu sakasthu vyathyasaglive... Illin jahirathugalu information ge hechina othu niduthade.... asthe alla illiya janathe jahirathugalannu hechu prasthutha endu nambiruvudarinda jahirathugalalli nijavanne helalu bayasuthare...

shreekala bollaje