ಭಾನುವಾರ, ಡಿಸೆಂಬರ್ 27, 2009

ಗಂಗಾಧರ ಮಾಸ್ಟ್ರೂ ಬೀಚಿನ ಮಕ್ಕಳೂ

ಸ್ನಾನ ಮುಗಿಸಿ ಬಂದವನೇ ಸ್ವಲ್ಪ ಹಿಂದೆ ಮೊಬೈಲ್ ರಿಂಗಣಿಸುತ್ತಿದ್ದುದು ನೆನಪಾಗಿ ‘ಮಿಸ್ಡ್ ಕಾಲ್’ಗಳ ಯಾದಿ ತೆರೆದೆ. ಹೊಸ ನಂಬರ್. ಕುತೂಹಲದಿಂದ ತಿರುಗಿ ಡಯಲ್ ಮಾಡಿದೆ. ಅತ್ತಲಿಂದ ಕಾಲ್ ರಿಸೀವ್ ಮಾಡಿದವರು ಒಂದು ಕ್ಷಣ ಸುಮ್ಮನಿದ್ದು ಆ ಬಳಿಕ ಸಣ್ಣ ಧ್ವನಿಯಲ್ಲಿ ‘ಸಿಬಂತಿ ಪದ್ಮನಾಭ ಅಲ್ವಾ?’ ಎಂದರು. ‘ಹೌದು...’ ಎಂದೆ ಆ ಸ್ವರದ ಸ್ಪಷ್ಟ ಗುರುತು ಹತ್ತದೆ.

‘ನಾನು ಗಂಗಾಧರ ಮಾಸ್ಟ್ರು... ಗೊತ್ತಾಯ್ತಾ?’
‘ಹೋ! ಗಂಗಾಧರ ಮಾಸ್ಟ್ರೇ! ನಮಸ್ಕಾರಾ...’ ಮುಂದಿನ ಮಾತಿಗೆ ಕಾಯದೆ ನಾನು ಉದ್ಗರಿಸಿದೆ. ‘ಹೇಗಿದ್ದೀರಿ ಸಾರ್, ಬಹಳ ಸಮಯ ಆಗಿ ಹೋಯ್ತು... ಆರಾಮು ತಾನೇ?’ ನಾನು ಕೇಳಿದೆ.
‘ಆರಾಮ್ ಆರಾಮ್. ನೀವು ಹೇಗಿದ್ದೀರಿ? ತುಂಬ ಸಮಯ ಆಯ್ತು ನೋಡಿ...’ ಅವರೂ ಅದೇ ಮಾತು ಹೇಳಿದರು.
* * *

ಗಂಗಾಧರ ಮಾಸ್ಟ್ರು ಪರಿಚಯ ಆದದ್ದು ನಾನು ಮಂಗಳೂರು ವಿವಿಯಲ್ಲಿ ಎಂಸಿಜೆ ಓದುತ್ತಿದ್ದಾಗ (೨೦೦೩-೨೦೦೫). ನಾವೊಂದು ಒಂಭತ್ತು ಜನ ವಿದ್ಯಾರ್ಥಿಗಳು ನಮ್ಮಷ್ಟಕ್ಕೇ ಅಡುಗೆ ಮಾಡಿಕೊಂಡು ಕೊಣಾಜೆಯ ಇನ್ನೊಂದು ತುದಿಯಲ್ಲಿದ್ದ ಫಜೀರಿನ ‘ಸತ್ಯ ಸಾಯಿ ಮಂದಿರ’ದಲ್ಲಿ ಉಚಿತ ಆಶ್ರಯ ಪಡೆದಿರಬೇಕಾದರೆ ಈ ಗಂಗಾಧರ ಮಾಸ್ಟ್ರೇ ನಮ್ಮ ಆಪದ್ಬಾಂಧವ. ಎಲ್ಲಿಯವರೆಗೆಂದರೆ, ನಮ್ಮ ನಮ್ಮ ಮನೆಗಳಿಂದ ಯಾವುದಾದರೂ ತುರ್ತು ಸುದ್ದಿ ಹೇಳಬೇಕಾದರೆ ಅವರು ಮಾಸ್ಟ್ರ ಮನೆ ಲ್ಯಾಂಡ್‌ಲೈನಿಗೇ ಫೋನಾಯಿಸಬೇಕಿತ್ತು. (ಒಂಭತ್ತು ಮಂದಿಯ ಪೈಕಿ ಒಬ್ಬನಲ್ಲೂ ಮೊಬೈಲಿರಲಿಲ್ಲ, ಸಾಯಿ ಮಂದಿರಕ್ಕೂ ಟೆಲಿಫೋನ್ ಕನೆಕ್ಷನಿರಲಿಲ್ಲ.)

ಗಂಗಾಧರ ಮಾಸ್ಟ್ರು ನೂರಕ್ಕೊಬ್ಬರು ಎಂದು ನನಗನಿಸಿತ್ತು. ಅವರ ಪತ್ನಿಯೂ ಅಧ್ಯಾಪಕಿ. ಇಬ್ಬರೂ ತುಂಬ ಸಾತ್ವಿಕರು, ಸಾಧು ಸ್ವಭಾವದವರು. ರಾತ್ರಿ ಹತ್ತೂವರೆಗೆ ಯಾರಾದರೂ ನಮ್ಮ ಹತ್ತಿರ ಮಾತಾಡುವುದಕ್ಕೆಂದು ಫೋನಾಯಿಸಿದರೂ ಅವರು ಒಂದು ಫರ್ಲಾಂಗು ದೂರವಿರುವ ನಮ್ಮ ಮನೆಗೆ ದೌಡಾಯಿಸುತ್ತಿದ್ದರು ಇಲ್ಲವೇ ತಮ್ಮ ಮಕ್ಕಳಲ್ಲೊಬ್ಬರನ್ನು ಕಳಿಸುತ್ತಿದ್ದರು. ವಾರಕ್ಕೊಮ್ಮೆಯಾದರೂ ನಾವೆಲ್ಲ ಅವರ ಮನೆಯಲ್ಲಿ ಸೇರುವುದಿತ್ತು. ರಜೆ ದಿನ ಪೇಪರು ಓದುವುದಕ್ಕೆಂದು ನಾನವರಲ್ಲಿಗೆ ಹೋಗುತ್ತಿದ್ದೆ. ವರ್ಷದಲ್ಲೊಂದು ದಿನ (ಬಹುಶಃ ದೀಪಾವಳಿಗೆ) ಮಾಸ್ಟ್ರ ಮನೆಯಲ್ಲಿ ನಮಗೊಂದು ಖಾಯಂ ಔತಣ. ಸಾಯಿ ಮಂದಿರದಲ್ಲಿದ್ದ ಅಷ್ಟೂ ಮಂದಿಯನ್ನು ಖುದ್ದು ಆಹ್ವಾನಿಸಿ ಅಧ್ಯಾಪಕ ದಂಪತಿ ತಾವೇ ತಯಾರಿಸಿದ ವಿಶೇಷ ಅಡುಗೆಯನ್ನು ಉಣಬಡಿಸುತ್ತಿದ್ದರು. ನಾವು ಪಿ.ಜಿ. ಮುಗಿಸುವ ಕೊನೆಯ ದಿನಗಳಲ್ಲಿ ಗಂಗಾಧರ ಮಾಸ್ಟ್ರು ತುಂಬ ಕುಗ್ಗಿದ್ದರು. ಕಾರಣ, ದೂರದ ಶಿರ್ಲಾಲಿಗೆ ಅವರಿಗೆ ವರ್ಗ ಆಗುವುದರಲ್ಲಿತ್ತು. ಅವರ ಮನೆಯಿಂದ ಶಿರ್ಲಾಲಿಗೆ ಏನಿಲ್ಲವೆಂದರೂ ೮೦-೯೦ ಕಿ.ಮೀ. ದೂರ. ಪ್ರತಿದಿನ ಮೂರು-ನಾಲ್ಕು ಬಸ್ಸು ಹಿಡಿದು ಅಷ್ಟು ದೂರ ಹೋಗಿ ಬರುವುದು ಕನಸಿನ ಮಾತು. ಹಾಗಂತ ಮಾಸ್ಟ್ರು ಮನೆ ಶಿಫ್ಟ್ ಮಾಡುವಂತಿರಲಿಲ್ಲ. ಅವರು ಫಜೀರಿನಲ್ಲಿ ಸೆಟ್ಲ್ ಆಗಿದ್ದರು. ಅವರ ಪತ್ನಿ ಅಲ್ಲೇ ಪಕ್ಕದ ಶಾಲೆಯೊಂದರಲ್ಲಿ ಅಧ್ಯಾಪನ ಮಾಡುತ್ತಿದ್ದರು. ಇಬ್ಬರು ಮಕ್ಕಳೂ ಅಲ್ಲೇ ಪ್ರೈಮರಿ-ಹೈಸ್ಕೂಲ್ ಓದುತ್ತಿದ್ದರು. ಇಷ್ಟು ಜವಾಬ್ದಾರಿಯಿದ್ದುದರಿಂದ ಶಿರ್ಲಾಲಿನಲ್ಲೇ ಒಂದು ರೂಮು ಮಾಡಿ ಅವರು ಒಬ್ಬರೇ ಇರುವಂತೆಯೂ ಇರಲಿಲ್ಲ. ಟ್ರಾನ್ಸ್‌ಫರ್ ಬೇಡವೆಂದರೆ ತಾನಾಗಿ ಒದಗಿಬಂದ ಪ್ರಮೋಶನೂ ಕೈತಪ್ಪುತ್ತದೆ. ಇನ್ನೇನು ದಾರಿಯೆಂದು ಮಾಸ್ಟ್ರು ತುಂಬ ಚಿಂತಿತರಾಗಿದ್ದರು. ಆ ಬಗ್ಗೆ ಏನು ಮಾಡಬಹುದೆಂದು ನಮ್ಮೊಂದಿಗೆ ಹಲವು ಬಾರಿ ಚರ್ಚಿಸಿಯೂ ಇದ್ದರು. ‘ಬೇರೆ ಕಡೆ, ಸ್ವಲ್ಪ ಹತ್ತಿರಕ್ಕೆ ವರ್ಗಾವಣೆ ಸಿಗುತ್ತದೋ ನೋಡಬಹುದು’ ಎಂದು ಹೇಳುವುದರ ಹೊರತಾಗಿ ನಮಗೂ ಏನೂ ಹೊಳೆಯುತ್ತಿರಲಿಲ್ಲ.

ಆ ಹೊತ್ತಿಗೆ ನಮ್ಮ ಪಿ.ಜಿ. ಮುಗಿದಿತ್ತು. ಒಂದಷ್ಟು ಮಂದಿ ನಮ್ಮ ಕಿರಿಯ ಮಿತ್ರರು ಮಂದಿರದಲ್ಲೇ ಮುಂದುವರಿದರು, ಇನ್ನೂ ಒಂದಿಬ್ಬರು ಹೊಸಬರು ಸೇರಿಕೊಂಡರು. ನಾವು ಉದ್ಯೋಗ ಹಿಡಿದು ಒಂದೊಂದು ಕಡೆ ಸೇರಿಯಾಗಿತ್ತು. ಮತ್ತೆ ಒಂದೆರಡು ತಿಂಗಳ ಬಳಿಕ ನಾನು ‘ವಿಜಯ ಟೈಮ್ಸ್’ನಲ್ಲಿರಬೇಕಾದರೆ ಒಂದು ಬಾರಿ ಮಾಸ್ಟ್ರು ಸ್ಟೇಟ್‌ಬ್ಯಾಂಕ್ ಬಸ್ಟ್ಯಾಂಡಲ್ಲಿ ಸಿಕ್ಕಿದ್ದರು. ಅವರ ಮುಖದಲ್ಲಿ ಅಪಾರ ಸಂತೋಷ ಎದ್ದು ಕುಣಿಯುತ್ತಿತ್ತು. ‘ನಂಗೆ ಬೈಕಂಪಾಡಿಯ ಒಂದು ಶಾಲೆಗೆ ಆಯಿತು. ಈಗಷ್ಟೇ ಕೌನ್ಸೆಲಿಂಗ್ ಮುಗಿಸಿ ಬರ್ತಾ ಇದ್ದೇನೆ. ಈಗ ಮನೆಗೆ ಫೋನ್ ಮಾಡ್ಬೇಕು...’ ಅವರು ಹೆಚ್ಚುಕಮ್ಮಿ ಒಂದು ಆವೇಶದಲ್ಲಿದ್ದರು, ಗದ್ಗದಿತರಾಗಿದ್ದರು. ತುಂಬ ಹತ್ತಿರವಲ್ಲದಿದ್ದರೂ ಇದು ಪರ್ವಾಗಿಲ್ಲ, ಶಿರ್ಲಾಲಿಗಿಂತ ಆಗಬಹುದು ಎಂದು ನಾವಾಗ ಮಾತಾಡಿಕೊಂಡೆವು.

ಆ ಬಳಿಕ ಮಾಸ್ಟ್ರನ್ನು ಭೇಟಿಯಾಗುವ ಮಾತಾಡುವ ಅವಕಾಶವೇ ಬಂದಿರಲಿಲ್ಲ. ಕಾರ್ಯಕ್ರಮಗಳ ವರದಿಗೆ ಆಗೊಮ್ಮೆ ಈಗೊಮ್ಮೆ ಯೂನಿವರ್ಸಿಟಿಗೆ ಹೋಗುವುದಿದ್ದರೂ ಆ ಸಮಯದ ಮಿತಿಯಲ್ಲಿ ಅವರ ಮನೆಗೆ ಹೋಗುವುದು ಕಷ್ಟಸಾಧ್ಯ. ಅಲ್ಲದೆ ಶಾಲಾದಿನಗಳಲ್ಲಿ ಹಗಲು ಹೊತ್ತಲ್ಲಿ ಅವರು ಅಲ್ಲಿ ಸಿಗುವುದೂ ಇಲ್ಲ. ನಾಲ್ಕೂವರೆ ವರ್ಷಗಳ ಬಳಿಕ ಮಾಸ್ಟ್ರು ಫೋನಾಯಿಸಿದಾಗ ಇದೆಲ್ಲ ಮತ್ತೆ ನೆನಪಾಯಿತು. ಆದರೆ, ಇಷ್ಟು ಬರೆಯುವಂತೆ ಮಾಡಿದ್ದು ಅವರು ಫೋನಿನಲ್ಲಿ ಹೇಳಿದ ವಿಚಾರ.
* * *
‘... ಮೊನ್ನೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ನಿಮ್ಮ ಲೇಖನ ಓದಿದೆ. ಬೀಚಿನಲ್ಲಿ ಕಡ್ಲೆ ಮಾರುವ ಹುಡುಗಿಯರ ಬಗ್ಗೆ ಬರೆದಿದ್ದಿರಿ ನೋಡಿ, ಅವ್ರು ನನ್ನ ಸ್ಟೂಡೆಂಟ್ಸು...’ ಮಾಸ್ಟ್ರು ಹೇಳಿದರು. ನಾನೊಮ್ಮೆ ಅವಾಕ್ಕಾಗಿ ನಿಂತೆ. ತಿರುಗಿ ಏನು ಹೇಳಬೇಕೆಂದು ಹೊಳೆಯಲಿಲ್ಲ. ಏಕೆಂದರೆ ‘ಅವ್ರು ನನ್ನ ಸ್ಟೂಡೆಂಟ್ಸು...’ ಎಂಬ ಮಾತು ನನಗೆ ತುಂಬ ಅನಿರೀಕ್ಷಿತವಾಗಿತ್ತು. ಮದುವೆಯಾಗಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನಾನು, ಆರತಿ, ಖುಷಿ ಜತೆಯಾಗಿ ಪಣಂಬೂರು ಬೀಚಿಗೆ ಹೋದದ್ದು, ಅಲ್ಲಿ ಕಡ್ಲೆ ಮಾರೋ ಪುಟ್ಟ ಹುಡುಗಿಯರನ್ನು ಕಂಡು ಕುತೂಹಲ ಮೂಡಿ ಕತ್ತಲಾವರಿಸುವವರೆಗೆ ಅವರೊಂದಿಗೆ ಹರಟುತ್ತಾ ಕೂತದ್ದು, ಫೋಟೋ ತೆಗೆದದ್ದು, ಬೀಚಿಗೆ ಬರುವುದಾದರೂ ಏಕೆ ಬೇಕಿತ್ತೆಂದು ಮತ್ತೆ ಹೆಂಡತಿ ಕೈಯ್ಯಲ್ಲಿ ಬೈಸಿಕೊಂಡದ್ದು... ಇದೆಲ್ಲ ಆಗಿ ಇನ್ನೂ ವಾರ ಆಗಿಲ್ಲ. ಆ ಮಕ್ಕಳು ನನ್ನನ್ನು ಬಹುವಾಗಿ ಕಾಡಿಬಿಟ್ಟಿದ್ದರು. ಅವರ ಬಗ್ಗೆ ಏನಾದರೂ ಬರೆಯುವವರೆಗೆ ನನಗೆ ನೆಮ್ಮದಿಯಿರಲಿಲ್ಲ. ಬರೆದೂ ಆಯ್ತು. ಈಗ ಗಂಗಾಧರ ಮಾಸ್ಟ್ರು ಅಚಾನಕ್ಕಾಗಿ ‘ಅವ್ರು ನನ್ನ ಸ್ಟೂಡೆಂಟ್ಸು...’ ಎಂದಾಗ ನಿಜಕ್ಕೂ ಚಕಿತನಾಗಿಹೋದೆ. ‘ತುಂಬಾ ಬುದ್ಧಿವಂತ ಹುಡಿಗೀರು ಇವರೇ... ತುಂಬಾ ಶಾರ್ಪು. ಆದ್ರೆ ಸಿಕ್ಕಾಪಟ್ಟೆ ಬಡವರು. ತಂದೆ ತಾನು ದುಡಿದದ್ದನ್ನೆಲ್ಲ ಕುಡಿಯುವುದಕ್ಕೇ ಸುರೀತಾನೆ... ನಮ್ಮ ಶಾಲೆಯಲ್ಲಿ ಹೆಚ್ಚಿನವರು ಇಂಥಾ ಮಕ್ಕಳೇ ಇದ್ದಾರೆ. ಆದ್ರೆ ತುಂಬಾ ಒಳ್ಳೆಯವ್ರು. ಫೋಟೊ ನೋಡಿ ನಮ್ಮ ಮಕ್ಕಳೂಂತ ಗೊತ್ತಾಗಿ ಓದುತ್ತಾ ಹೋದೆ. ಕೊನೆಗೆ ನಿಮ್ಮ ಹೆಸ್ರು ಕಂಡು ಕುತೂಹಲ ಆಯ್ತು. ನೀವು ಎಲ್ಲಿದ್ದೀರಿ ಅಂತ ಗೊತ್ತಿರಲಿಲ್ಲ. ಮರುದಿನ ಆ ಮಕ್ಳನ್ನು ಕರೆದು ‘ಇನ್ನು ಅವರು ಪುನಃ ಬೀಚಿನಲ್ಲಿ ಸಿಕ್ಕಿದ್ರೆ ನಮ್ಮ ಮಾಸ್ಟ್ರು ನಿಮ್ಮನ್ನು ಕೇಳಿದ್ದಾರೆ ಅಂತ ಹೇಳಿ’ ಅಂದೆ. ಈಗ ಹೇಗೋ ನಿಮ್ಮ ನಂಬ್ರ ಸಿಕ್ಕಿತು. ಹಾಗೆ ಕಾಲ್ ಮಾಡಿದ್ದು...’ ಮಾಸ್ಟ್ರು ಹೇಳುತ್ತಾ ಹೋಗುತ್ತಿದ್ದರೆ ನಾನು ಗಾಢ ಯೋಚನೆಯಲ್ಲಿ ಮುಳುಗಿದ್ದೆ.

12 ಕಾಮೆಂಟ್‌ಗಳು:

ಮನೋರಮಾ.ಬಿ.ಎನ್ ಹೇಳಿದರು...

baduku intaha adeshoo putta putta acchari, beragugalinda, mwnave uttaravagi nilluva gantanegalinda henedide. alwa?

ಮನೋರಮಾ.ಬಿ.ಎನ್ ಹೇಳಿದರು...

baduku intaha adeshoo putta putta acchari, beragugalinda, mwnave uttaravagi nilluva gantanegalinda henedide. alwa?

SAMPATH KUMAR ಹೇಳಿದರು...

Dear
Thanks for recalling about those memories with Gangadhar mastru, he is worth person to be recalled here for is unconditional love and affection.

Unknown ಹೇಳಿದರು...

Really your article made me to recall everything about Sai Mandir and Gangadhar Mastru.... both would be very pleasant days of our PG life.... and worth to recall also

ಆಚಕರೆ ಮಾಣಿ ಹೇಳಿದರು...

ಪದ್ದೂ.... ಎನಗೊಂದು ಆ ಆರ್ಟಿಕಲ್ಲಿನ ಕಾಪಿ ಫಾರ್ವರ್ಡ್ ಮಾಡು... ತುಂಬಾ ಆಸಕ್ತಿದಾಯಕವಾಗಿದ್ದು...

Unknown ಹೇಳಿದರು...

Dear Sibanthi,
Nice to know the links through the student girls on the beach. Pls convey my regards to your Gangadhar Maastru too.
Ronnie.
1.27 am!

Unknown ಹೇಳಿದರು...

ನೀ ಪ್ರತಿ ಬಾರಿ ಬರೆದಾಗಲೂ ಮನದ ಮಾತು ಹೊರ ಬರದೆ ಕಣ್ಣು ತೆವಗೊಳ್ಳುವುದಷ್ಟೇ ಸಾಧ್ಯ ನನಗೆ.. ಭಾವ ಬುಧ್ಧಿಯ ಸಂಗಮಗಳೇ ಆಗಿರುವ ನಿನ್ನ ಬರಹಗಳನ್ನು ಅದೆಷ್ಟು ಮಿಸ್ ಮಾಡ್ಕೊತಿದ್ದೆ...

ಅನಾಮಧೇಯ ಹೇಳಿದರು...

ಸಿಬಂತಿ,

ಕಡಲೆ ಮಾರುವ ಈ ಹುಡುಗಿಯರನ್ನು ಕಂಡು ತಮಾಷೆ ಮಾಡುತ್ತಾ ಇರುತ್ತವಷ್ಟೆ
ಅವರ ಬವಣೆಗಳ ಬಿಚ್ಚಿಟ್ಟದಕ್ಕಾಗಿ ಧನ್ಯವಾದ.

ಗಂಗಾಧರ ಮಾಷ್ಟ್ರರಂತವರ ಸಂತತಿ ನೂರು ಸಾವಿರವಾಗಲಿ

ಇಂತೀ ನಿನ್ನ ಪ್ರೀತಿಯ
ಸಂದೀಪ್

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

ಮನೋರಮಾ, ಸಂಪತ್, ವೆಂಕಿ, ಆಚಕರೆ ಮಾಣಿ, ರೋನಾಲ್ಡ್, ಶಮಾ, ಸಂಕು ಶೆಟ್ಟಿ ನಿಮಗೆಲ್ಲ ಧನ್ಯವಾದ.

ಗೌತಮ್ ಹೆಗಡೆ ಹೇಳಿದರು...

sir ishtavaaytu.tumba ishtavaaytu.shte:)

ashoka vardhana gn ಹೇಳಿದರು...

‘ಅಸಹಾಯಕತೆಯ ಮಕ್ಕಳ’ ಬಗ್ಗೆ ಇಂಗ್ಲಿಷ್‍ನಲ್ಲಿ ಹೇಳಿದ್ದೀರಿ. ಮತ್ತದರದೇ ಇನ್ನೊಂದು ರೂಪವಾಗಿ ಅಸಹಾಯಕತೆಯ ಗಂಗಾಧರ ಮಾಸ್ಟ್ರೂ ಕಾಣಿಸಿಕೊಂಡದ್ದು ಹೃದಯ ಸ್ಪರ್ಷಿಯಾಗಿದೆ. ಮಕ್ಕಳನ್ನು ಮಾತ್ರವಲ್ಲ ಅವರನ್ನು ರೂಪಿಸುವ ಮಾಸ್ಟ್ರನ್ನೂ ಕುಶಿಯಾಗಿಡಬೇಕು, ಆದರೆ ಯಾರು ಎನ್ನುವ ನಿಮ್ಮ ಭರತ ವಾಕ್ಯಕ್ಕೆ (ಉದ್ಧರಣೆ)ಉತ್ತರಿಸಬೇಕಾದವರಿಗೆ ಇದೆಲ್ಲ ಕೇಳುವುದೇ ಇಲ್ಲವಲ್ಲಾ ಎಂಬ ವಿಷಾದ ಕಾದುತ್ತದೆ.
ಅಶೋಕವರ್ಧನ

SAMPATH KUMAR ಹೇಳಿದರು...

In continuation with above article I'm happy to inform all that this school has been selected for donation of Mid meal plates for the school by one of our classmates who is in UK. here is the link for the same, thanks the article in DeccanHerald by Sibanthi
link:http://www.udayavani.com/epaper/PDFList.aspx?Pg=A&Edn=MN&DispDate=2010-6-26