ಸೋಮವಾರ, ಆಗಸ್ಟ್ 24, 2009

ಮೇಸ್ಟ್ರು ಬರೆದ ಆತ್ಮಕಥೆ


ಕೈಗೆ ಸಿಗುತ್ತಿದ್ದ ಕೂಡಲೆ ಒಂದೇ ಉಸಿರಿಗೆ ಈ ಪುಸ್ತಕವನ್ನು ಓದಿ ಮುಗಿಸುವುದಕ್ಕೆ ೩ ಮುಖ್ಯ ಕಾರಣಗಳಿದ್ದವು: ಮೊದಲನೆಯದಾಗಿ, ಇದೊಂದು ಆತ್ಮಕಥೆ; ಎರಡನೆಯದಾಗಿ, ಇದು ಶಿಕ್ಷಕರೊಬ್ಬರ ಆತ್ಮಕಥೆ; ಎಲ್ಲದಕ್ಕಿಂತ ಮುಖ್ಯವಾಗಿ, ಇದು ಕಷ್ಟಜೀವಿಯೊಬ್ಬರ ಆತ್ಮಕಥೆ. ಪುಸ್ತಕದ ಮೊದಲ ಮತ್ತು ಕೊನೆಯ ಪುಟಗಳು ತಾವಾಗಿಯೇ ಇದನ್ನು ಹೇಳಿಬಿಟ್ಟವು.


ಯಾಕೋ ಗೊತ್ತಿಲ್ಲ, ಆತ್ಮಕಥೆಗಳೆಂದರೆ ನನಗೆ ಮೊದಲಿನಿಂದಲೂ ಇಷ್ಟ. ಅವುಗಳಲ್ಲಿರೋ ಜೀವನಪ್ರೀತಿ, ಆತ್ಮಶೋಧನೆ, ಸರಳ ಫಿಲಾಸಫಿಗಳು ಅಷ್ಟು ಸುಲಭಕ್ಕೆ ಬೇರೆಲ್ಲೂ ಕಾಣಸಿಗವು. ವಯಸ್ಸಿನ ಜತೆಜತೆಯಾಗಿ ಬದುಕೂ ಬೆಳೆದುಕೊಂಡು ಬರುವ ಪರಿಯನ್ನು ಓದುತ್ತಾ ಓದುತ್ತಾ ನಮ್ಮೊಳಗೂ ಅಂತಹದೇ ಒಂದು ಪ್ರಪಂಚವನ್ನು ಕಟ್ಟುತ್ತಾ ಹೋಗುವುದೇ ಒಂದು ವಿಸ್ಮಯಕಾರಿ ಅನುಭವ.


ಅದೇ ಥರ, ಅಧ್ಯಾಪಕ ಎಂಬುದೂ ನನಗೆ ಅಯಸ್ಕಾಂತದಂತಹ ಒಂದು ಶಬ್ದ. ಅವರು ನನ್ನ ಮೇಸ್ಟ್ರಾಗಿದ್ದಿರಬೇಕೆಂದೇನೂ ಇಲ್ಲ. ಯಾರ ಮೇಸ್ಟ್ರಾಗಿಯೂ ಇದ್ದಿರಬಹುದು. ಅವರ ಬಗ್ಗೆ ಯಾರಾದರೂ ನಾಲ್ಕು ಒಳ್ಳೆ ಮಾತು ಹೇಳಿದರೆ ಮುಗಿಯಿತು, ಅವರನ್ನು ನನ್ನದೇ ಗುರುಗಳೆಂದು ನಾನು ಸ್ವೀಕರಿಸಿಬಿಡುತ್ತೇನೆ. ನನ್ನ ಅಧ್ಯಾಪಕರುಗಳ ಬಗ್ಗೆ ಕೇಳಿದಾಗ, ಅವರನ್ನು ನೋಡಿದಾಗ ಎಂತಹ ಗೌರವಭಾವ ಮೂಡುತ್ತದೋ ಈ ಮಂದಿಯ ಬಗ್ಗೆ ಕೇಳಿದಾಗ ಇಲ್ಲವೇ ನೋಡಿದಾಗಲೂ ಅದೇ ಬಗೆಯ ಭಾವ ಒಸರುತ್ತದೆ. ಅದಕ್ಕೆ ನನಗೆ ಪಾಠ ಹೇಳಿಕೊಟ್ಟ ಮಹಾನುಭಾವರುಗಳೇ ಕಾರಣವಿರಬಹುದು.


ಕಠಿಣತಮ ಹಾದಿ ಸವೆಸಿ ಹತ್ತು ಜನ ‘ಭಲರೆ’ ಎಂಬಂತಹ ಬದುಕು ಕಟ್ಟಿಕೊಂಡವರನ್ನು ಕಂಡರಂತೂ ನನ್ನೊಳಗೆ ಅದೆಂಥದೋ ಒಂದು ಪೂಜ್ಯ ಭಾವ. ಅವರ ಜೀವನಾನುಭವ ಕೇಳುತ್ತ ಹೋದ ಹಾಗೆಲ್ಲ ನಾನು ನನ್ನಷ್ಟಕ್ಕೇ ಭಾರೀ ಕಷ್ಟ ಅಂದುಕೊಂಡದ್ದೆಲ್ಲ ತೀರಾ ಗೌಣವಾಗಿಬಿಡುತ್ತದೆ. ಚಿಂತೆ ಆವರಿಸಿದ್ದ ಮನಸ್ಸಿನಲ್ಲಿ ಚೈತನ್ಯ ತುಂಬಿಕೊಳ್ಳುತ್ತದೆ. ಮತ್ತೆ ಹೊಸ ಕೆಲಸಕ್ಕೆಳಸುವ ಆತ್ಮವಿಶ್ವಾಸ ಚಿಗುರುತ್ತದೆ.


ಹೌದು, ಒಂದು ಆತ್ಮಕಥೆ ಮಾಡುವ/ಮಾಡಬೇಕಾದ ಕೆಲಸವೇ ಅದು. ಹಾಗೆ ಮಾಡದೇ ಹೋದರೆ ಅದು ಪ್ರತಿದಿನ ಪ್ರಿಂಟಾಗುವ ನೂರು ಪುಸ್ತಕಗಳ ಜತೆಗೆ ನೂರಾ ಒಂದನೆಯದಾಗುತ್ತದೆ ಅಷ್ಟೆ. ಶೇಣಿ ಗೋಪಾಲಕ್ರ್ ಷ್ಣ ಭಟ್ಟರ ’ಯಕ್ಷಗಾನ ಮತ್ತು ನಾನು’ ಅಥವಾ ಕುಂಬ್ಳೆ ಸುಂದರ ರಾಯರ ’ಸುಂದರ ಕಾಂಡ’ ಅಥವಾ ಸೂರಿಕುಮೇರಿ ಗೋವಿಂದ ಭಟ್ಟರ ’ಯಕ್ಷೋಪಾಸನೆ’ ಓದಿದ ಯಾವ ಸಹ್ರ್ ದಯಿಯೂ ಈ ಮಾತನ್ನು ಒಪ್ಪದೇ ಇರಲಾರ. ಮಹಾಕವಿ ಕುವೆಂಪು ಅವರ ’ನೆನಪಿನ ದೋಣಿಯಲ್ಲಿ’ ಅಥವಾ ಶಿವರಾಮ ಕಾರಂತರ ’ಹುಚ್ಚುಮನಸ್ಸಿನ ಹತ್ತು ಮುಖಗಳು’, ಲಂಕೇಶ್ ಅವರ ’ಹುಳಿಮಾವಿನ ಮರ’, ಎಸ್ ಎಲ್ ಭೈರಪ್ಪನವರ ’ಭಿತ್ತಿ’, ಸಿದ್ಧಲಿಂಗಯ್ಯನವರ ’ಊರುಕೇರಿ’ ಓದಿದ ಯಾವನೇ ಆದರೂ ಆತ್ಮಕಥೆಗಳ ಅಂತಃಶಕ್ತಿಯನ್ನು ಅಲ್ಲಗಳೆಯಲಾರ.ಎಳ್ಯಡ್ಕ ಎಸ್ ಈಶ್ವರ ಭಟ್ಟರ ’ದ್ರ್ ಷ್ಟ ಅದ್ರ್ ಷ್ಟ’ ಓದಿ ಮುಗಿಸಿದಾಗ ಇಂತಹದೇ ಒಂದು ದಟ್ಟ ಅನುಭವ ದೊರೆಯಿತೇ ಇಲ್ಲವೇ ಖಚಿತವಾಗಿ ಹೇಳಲಾರೆ. ಆದರೆ ಯಾವ ೩ ಅಂಶಗಳನ್ನು ನೆಪವಾಗಿಸಿಕೊಂಡು ಈ ಪುಸ್ತಕವನ್ನು ಕೈಗೆತ್ತಿಕೊಂಡೆನೋ ಅವುಗಳ ವಿಚಾರದಲ್ಲಿ ನನಗೆ ನಿರಾಸೆಯಾಗಲಿಲ್ಲ ಎಂಬುದು ಮಾತ್ರ ಸತ್ಯ.


ಬಾಲ್ಯ, ವಿದ್ಯಾರ್ಥಿ ಜೀವನದ ಅಷ್ಟೂ ವರ್ಷಗಳನ್ನು ಕಡುಬಡತನ ಕಷ್ಟನಷ್ಟಗಳಲ್ಲಿ ಕಳೆದು, ನಾಲ್ಕು ದಶಕಗಳ ಕಾಲ ಸುದೀರ್ಘ ಅಧ್ಯಾಪನ ನಡೆಸಿ ೨೦೦೫ರಲ್ಲಿ ನಿವ್ರ್ ತ್ತಿ ಹೊಂದಿದ ಈಶ್ವರ ಭಟ್ಟರು ತಮ್ಮ ವಿಶ್ರಾಂತ ಬದುಕಿನ ಮಗ್ಗುಲಲ್ಲಿ ನಿಂತು ನಡೆಸಿದ ಸಿಂಹಾವಲೋಕನವೇ ಈ ಆತ್ಮ ವ್ರ್ ತ್ತಾಂತ. "ಬಡತನವು ಒಂದು ಶಾಪವಲ್ಲ; ಅದನ್ನು ಹದವರಿತು ಬಳಸಿಕೊಂಡರೆ ಬಾಳನ್ನು ಸವಿಗೊಳಿಸುವ ಕಲ್ಲುಸಕ್ಕರೆಯೂ ಆಗಬಲ್ಲುದು ಎನ್ನುವುದನ್ನು ಅವರು (ಭಟ್ಟರು) ಇಲ್ಲಿ ವಿಶದಗೊಳಿಸಿದ್ದಾರೆ" ಎಂದು ಒಂದೇ ಮಾತಿನಲ್ಲಿ ಇಡೀ ಪುಸ್ತಕದ ಸಾರವನ್ನು ಓದುಗನ ಮುಂದಿಡುತ್ತಾರೆ ಸ್ವತಃ ಅಧ್ಯಾಪಕರಾಗಿದ್ದ ಹಿರಿಯ ಸಾಹಿತಿ ವಿ. ಬಿ. ಅರ್ತಿಕಜೆಯವರು (ಮುನ್ನುಡಿ).


"...ಅಪ್ಪ ಮತ್ತು ನಾನು ಇಬ್ಬರೇ ಇದ್ದ ಸಮಯ. ದಾರುಣ ಬಡತನ. ಪುಡಿಗಾಸಿಗಾಗಿ ಹಗಲು ರಾತ್ರಿ ಚರಕದಲ್ಲಿ ನೂಲು ತೆಗೆದು ಗುಂಡಿಗಳನ್ನು ಬದಿಯಡ್ಕದಲ್ಲಿ ಖಾದಿಗಾಗಿ ಮಾರುತ್ತಿದ್ದರು. ದೂರ ದೂರ ಸಂಚರಿಸಿ ಕಾಡು ಕೂವೆ, ಗಡ್ಡೆಗಳನ್ನು ತಂದು ಹಿಟ್ಟು ತೆಗೆದು ಮಾರುತ್ತಿದ್ದರು. ಕೂವೆ ಗಡ್ಡೆ ಸಿಕ್ಕದಾಗ ಚಿಕ್ಕಚಿಕ್ಕ ತೋಡುಗಳ ಬಳಿ ಬೆಳೆಯುವ ಹಳದಿ ಬಣ್ಣದ ಆನೆಮಂಜಾಲು ಎಂಬ ಗಡ್ಡೆಯನ್ನು ತಂದು ಹಿಟ್ಟು ತೆಗೆದು ಆಹಾರಕ್ಕೆ ಬಳಸುತ್ತಿದ್ದರಂತೆ..." (ಪುಟ ೨೬) ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಬರೆಯುವ ಭಟ್ಟರು ಪುಸ್ತಕದ ಕೊನೆಯ ಪುಟಗಳಲ್ಲಿ ಹೇಳುತ್ತಾರೆ: "ಮೊದಲಿಗೆ ರಸ್ತೆ, ವಿದ್ಯುತ್ ಸೌಕರ್ಯ ಕಂಡ ಮನೆ ಮುಂದೆ ನಿಧಾನವಾಗಿ ದೂರವಾಣಿ, ಟಿ.ವಿ., ರೇಡಿಯೋ, ಕಂಪ್ಯೂಟರ್, ಫ್ರಿಡ್ಜ್, ವಾಷಿಂಗ್ ಮಷಿನ್, ಇಂಟರ್ ನೆಟ್ ಇತ್ಯಾದಿಗಳಿಂದ ಅಲಂಕ್ರ್ ತಗೊಳ್ಳಲು ಶುರುವಾಯಿತು..." (ಪುಟ ೬೪). ಅದು ಒಬ್ಬ ಕಷ್ಟಜೀವಿಯ ಟ್ರಾನ್ಸ್ ಫಾರ್ಮೇಶನ್. ಆ ಮಾತುಗಳ ಹಿಂದಿನ ಧನ್ಯತಾಭಾವ ಅರ್ಥವಾಗಬೇಕಾದರೆ ಪುಸ್ತಕದ ಪ್ರತೀ ಪುಟ ಓದಲೇಬೇಕು. ಅದನ್ನು ನಾನಿಲ್ಲಿ ಸಂಕ್ಷೇಪಗೊಳಿಸಿದರೆ ನೈಜ ಓದಿನ ಸ್ವಾರಸ್ಯ ದೊರೆಯದು. ನೀವೇ ಓದಿಬಿಡಿ.


ಪುಸ್ತಕ ಚಿಕ್ಕದಾಗಿ ಚೊಕ್ಕದಾಗಿದೆ. ಸುಮಾರು ೭೦ ಪುಟಗಳಿವೆ. ಮಂಗಳೂರು ಅಕ್ಷರೋದ್ಯಮದ ಶ್ರೀ ಸುನಿಲ್ ಕುಲಕರ್ಣಿಯವರಿಂದ ವಿನ್ಯಾಸಗೊಂಡು, ಮಡಿಕೇರಿಯ ಶ್ರೀ ಸಾನ್ನಿಧ್ಯ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಅವರಿಂದ ಪ್ರಕಟಗೊಂಡ ಈ ಹೊತ್ತಗೆ ತಾಂತ್ರಿಕವಾಗಿಯೂ ಒಪ್ಪವಾಗಿದೆ. ಹಾಗೆಂದು ಪ್ರೂಫ್ ಮಿಸ್ಟೇಕುಗಳು ಇಲ್ಲವೇ ಇಲ್ಲ ಎಂದಲ್ಲ. ಆದರೆ ಅವು ನಗಣ್ಯ. ಮುಖಪುಟವಂತೂ ಓದುಗನನ್ನು ಯೋಚನೆಗೆ ಹಚ್ಚುವಷ್ಟು ಸಶಕ್ತವಾಗಿದೆ. ಉಳಿದಂತೆ, ಆತ್ಮಚರಿತ್ರೆಗಳ ಸಾಲಿನಲ್ಲಿ ’ದ್ರ್ ಷ್ಟ ಅದ್ರ್ ಷ್ಟ’ ಎಲ್ಲಿ ನಿಲ್ಲುತ್ತದೆ ಅಥವಾ ಇದೊಂದು ಪರಿಪೂರ್ಣ ಅಟೋಬಯೋಗ್ರಫಿಯೇ ಎಂಬಿತ್ಯಾದಿ ವಿಚಾರಗಳನ್ನು ನಾನು ಚರ್ಚಿಸಲಾರೆ. ಏಕೆಂದರೆ ನಾನು ವಿಮರ್ಶಕನಲ್ಲ, ಒಬ್ಬ ಸಾಮಾನ್ಯ ಓದುಗ.


"...ಕೆಲವೊಂದು ಬಾರಿ ನೆಂಟರಿಷ್ಟರಿಗಿಂತ ನಾವಾಗೇ ಬೆಳೆಸಿಕೊಂಡ ಸ್ನೇಹ ಸಂಬಂಧಗಳೇ ಕೈ ಹಿಡಿದು ಕಾಪಾಡುತ್ತವೆ. ಕೆಲವೊಮ್ಮೆ ದೇವರೇ ನಡೆಸಿದ ಎಂಬಂತೆ ಗುರುತು ಪರಿಚಯವಿಲ್ಲದವರೇ ನಮ್ಮನ್ನು ಆದರಿಸಿ ಉಪಕರಿಸುತ್ತಾರೆ. ನಮ್ಮವರೆಂದು ತಿಳಿದುಕೊಳ್ಳುವ ಅದೆಷ್ಟೋ ವ್ಯಕ್ತಿತ್ವಗಳು ನಮ್ಮವರಾಗಿರುವುದಿಲ್ಲ. ಹೊರಗಿನವರು ಎಂದು ಬಗೆದ ಮಂದಿಯೇ ಅವರ ಸಹ್ರ್ ದಯತೆಯಿಂದ ನಮ್ಮ ಜೀವನವನ್ನು ಆವರಿಸಿಕೊಂಡುಬಿಡುತ್ತಾರೆ..." ಎಂದು ತಮ್ಮ ವ್ರ್ ತ್ತಾಂತದ ಒಂದೆಡೆ ಬರೆಯುತ್ತಾರೆ ಈಶ್ವರ ಭಟ್ಟರು. ಇಡೀ ಪುಸ್ತಕದಲ್ಲಿ ನನ್ನನ್ನು ಕಾಡಿದ ಭಾಗವದು. ಜೀವನಾನುಭವದ ಮೂಸೆಯಲ್ಲಿ ಬೆಂದು ಹದಗೊಂಡ ಇಂತಹ ಅನೇಕ ಮಾತುಗಳು ಅಲ್ಲಲ್ಲಿ ಕಾಣಸಿಗುತ್ತವೆ, ಕಾಡುತ್ತವೆ.


ಇವೆಲ್ಲದರ ಹೊರತಾಗಿ ಒಂದು ಮಾತನ್ನು ನಾನಿಲ್ಲಿ ಹೇಳಲೇಬೇಕು: ಅರುವತ್ತು ವರ್ಷಗಳ ಕಾಲ ಏರಿಳಿತದ ಬದುಕನ್ನು ಕಂಡುಂಡ ಭಟ್ಟರು ತಮ್ಮ ಕಥೆ ಹೇಳಿಕೊಳ್ಳುವಾಗ ಯಾವ ಸಂದರ್ಭದಲ್ಲೂ ಒಂದಿನಿತೂ ಅಹಮಿಕೆಯ ಎಳೆ ನುಸುಳಿಲ್ಲ. ಕಂಡದ್ದನ್ನು ಕಂಡಹಾಗೆ, ಇದ್ದುದನ್ನು ಇದ್ದಹಾಗೆ, ಬಂದದ್ದನ್ನು ಬಂದಹಾಗೆ ಹೇಳಿಕೊಂಡು ಹೋಗಿದ್ದಾರೆ. ಅದೇ ಅವರ ಬಹುದೊಡ್ಡ ಸಾಧನೆ.

ಶನಿವಾರ, ಆಗಸ್ಟ್ 15, 2009

ಫಲ್ಗುಣಿಯಲ್ಲಿ ಸಮಾಧಿಯಾದ ಮುದ್ದು ಮಕ್ಕಳ ನೆನೆದು...



ಅವು ನಿರ್ಜೀವ ದೇಹಗಳೆಂದರೆ ಒಪ್ಪಲು ಮನಸ್ಸು ಸಿದ್ಧವಿರಲಿಲ್ಲ. ಹೆಸರು ಹಿಡಿದು ಕೂಗಿದರೆ ಮರುಕ್ಷಣ ಛಕ್ಕನೆ ಎದ್ದು ಕೂರುತ್ತಾರೇನೋ ಎಂಬಂತಿತ್ತು ಆ ಪುಟ್ಟ ಮಕ್ಕಳ ಮುಖಭಾವ. ಕಟವಾಯಿಯಲ್ಲಿ ಕೊಂಚ ಬಿಳಿನೊರೆ, ತೊಟ್ಟ ಯೂನಿಫಾರ್ಮೆಲ್ಲ ಒದ್ದೆಒದ್ದೆ ಎಂಬುದು ಬಿಟ್ಟರೆ ಅವರ ದೇಹದ ಇಂಚಿಂಚಿನಲ್ಲೂ ಜೀವಭಾವ ಹರಿದಾಡುತ್ತಿದೆಯೇನೋ ಎಂಬ ಹಾಗೆ ಭಾಸವಾಗುತ್ತಿತ್ತು. ಆದರೆ ಅವರೆಲ್ಲ ಶವಾಗಾರದಲ್ಲಿ ಮಲಗಿದ್ದರಲ್ಲ, ಛೇ.

ಹೌದು, ಉಳಾಯಿಬೆಟ್ಟು ದುರಂತ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. ಇಡೀ ದೇಶ ಅರವತ್ತೆರಡನೆ ಸ್ವಾತಂತ್ರ್ಯೋತ್ಸವದ ತಯಾರಿಯಲ್ಲಿ ತೊಡಗಿದ್ದರೆ, ದಕ್ಷಿಣ ಕನ್ನಡ ಮಾತ್ರ ಸಾವಿನ ಸೂತಕದಲ್ಲಿ ಮಿಂದೇಳುತ್ತಿತ್ತು. ಅವೊತ್ತು ಆಗಸ್ಟ್ ೧೪, ೨೦೦೮. ಬೆಳಗ್ಗಿನ ಉಪಹಾರಕ್ಕೆ ತೊಡಗಿದವರೆಲ್ಲ ಇನ್ನೂ ಕೈ ತೊಳೆಯುವ ಮುನ್ನವೇ ಬಡಿದಿತ್ತು ಸಿಡಿಲಿನಂತಹ ವಾರ್ತೆ: ಉಳಾಯಿಬೆಟ್ಟಿನಲ್ಲಿ ಶಾಲಾ ವಾಹನವೊಂದು ಫಲ್ಗುಣಿ ನದಿಗೆ ಉರುಳಿದೆಯಂತೆ, ಪೂರ್ತಿ ಮಕ್ಕಳಿದ್ದರಂತೆ, ನದಿಯೂ ಉಕ್ಕಿ ಹರಿಯುತ್ತಿತ್ತಂತೆ...


"ನಾನು ಉಳಾಯಿಬೆಟ್ಟಿಗೆ ಹೋಗ್ತಿದ್ದೇನೆ, ನೀವು ವೆನ್ ಲಾಕಿಗೆ (ಜಿಲ್ಲಾ ಸರ್ಕಾರಿ ಆಸ್ಪತ್ರೆ) ಹೋಗಿರಿ. ಭಕ್ತಿ ಆ ಶಾಲೆಗೆ ಹೋಗ್ತಾಳೆ" ಅಂತ ನೈನಾ ಗಡಿಬಿಡಿಯಲ್ಲಿ ಹೇಳಿ ಮುಗಿಸುತ್ತಿದ್ದಂತೆ ನಾನು ರೈನ್ ಕೋಟ್ ಸಿಗಿಸಿಕೊಂಡು ಸ್ಕೂಟರ್ ಏರಿದ್ದೆ.


ಮಳೆ ಸುರಿಯುತ್ತಿತ್ತು ಧಾರಾಕಾರ. ಎರಡು ಮೂರು ದಿನಗಳಿಂದ ಅದೇ ಹಾಡು ಅದೇ ರಾಗ. ಇಲ್ಲಿ ಅದೇನೂ ಹೊಸತಲ್ಲ ಬಿಡಿ. ಆದರೆ ಈ ಬಾರಿಯಂತೂ ಅದೇ ಮಳೆ ಮ್ರ್ ತ್ಯು ಸ್ವರೂಪದಲ್ಲಿ ಗುಡುಗುಡಿಸುತ್ತಿತ್ತು. "ಜಿಲ್ಲೆಯ ಎಲ್ಲ ನದಿಗಳೂ ಉಕ್ಕಿ ಹರಿಯುತ್ತಲೇ ಇವೆ, ಅಂದರೆ ಫಲ್ಗುಣಿಯ ಕಥೆಯೂ ಭಿನ್ನವಿರಲಿಕ್ಕಿಲ್ಲ. ಮಕ್ಕಳೇ ತುಂಬಿತುಳುಕುತ್ತಿದ್ದ ಬಸ್ಸು ಆ ನದಿಗೆ ಬಿದ್ದಿತೆಂದರೆ..." ಇತ್ಯಾದಿ ನೂರೆಂಟು ಯೋಚನೆಗಳು ತಲೆತುಂಬೆಲ್ಲ ಓಡಾಡುತ್ತಿದ್ದಂತೆ ನಾನು ವೆನ್ಲಾಕಿನ ಮುಂದಿದ್ದೆ.


ಆಸ್ಪತ್ರೆಯ ಮುಂಭಾಗ ಆಗಲೇ ಗಿಜಿಗುಡುತ್ತಿತ್ತು. ಜನ ಜನ ಜನ. ಜತೆಗೆ ಅಳು, ಆತಂಕ, ವಿಷಾದ. ಯಾರೊಬ್ಬರಿಗೂ ಪರಿಸ್ಥಿಯ ಪೂರ್ತಿ ಅರಿವಿರಲಿಲ್ಲ. ಅವರಲ್ಲಿ ಬಹುತೇಕರು ಆ ಬಸ್ಸಿನಲ್ಲಿದ್ದ ಮಕ್ಕಳ ಅಪ್ಪ ಅಮ್ಮಂದಿರು ಅಥವಾ ಸಂಬಂಧಿಕರು. ’ಬಸ್ಸಿನಲ್ಲಿ ಮಕ್ಕಳಷ್ಟೇ ಅಲ್ಲದೆ ಕೆಲ ಸಾರ್ವಜನಿಕರೂ ಇದ್ದರಂತೆ. ನದಿಗುರುಳಿದ ಬಸ್ಸಿನಲ್ಲಿದ್ದ ಒಂದಷ್ಟು ಮಂದಿಯನ್ನು ಜೀವಂತ ಹೊರತರಲಾಗಿದೆ, ಅವರಲ್ಲಿ ಮಕ್ಕಳೆಷ್ಟು ದೊಡ್ಡವರೆಷ್ಟು? ಜೀವ ಕಳಕೊಂಡವರಲ್ಲಿ ಮಕ್ಕಳೆಷ್ಟು ದೊಡ್ಡವರೆಷ್ಟು? ಅವರು ಯಾರು, ಎಲ್ಲಿಯವರು? ಯಾರ ಮಕ್ಕಳು? ನಮ್ಮ ಮಗು ಆಸ್ಪತ್ರೆಗೆ ತಲುಪಿದೆಯೇ? ಯಾವ ಸ್ಥಿತಿಯಲ್ಲಿ?’ ಅವರ ಮನಸ್ಸಿನ ತುಂಬ ಪ್ರಶ್ನೆಗಳ ಮಹಾಪೂರ. ಸರಿಯಾಗಿ ಉತ್ತರಿಸುವವರು ಯಾರೂ ಇಲ್ಲ. ಹೊರಗೆ ಮತ್ತೆ ಮಳೆಯ ಅಬ್ಬರ. ತಮ್ಮ ಮಗು ನದಿ ಪಾಲಾಗಿದೆ, ಜೀವಂತವಾಗಿದೆಯೋ ಇಲ್ಲವೋ ಎಂದು ಮಾಹಿತಿ ಇಲ್ಲ ಎಂಬ ಸನ್ನಿವೇಶದಲ್ಲಿ ಆ ಮಂದಿಯ ಮನೋಸ್ಥಿತಿಯನ್ನು ಕಲ್ಪಿಸಿಕೊಳ್ಳಿ.


ಸಮಯ ಉರುಳುತ್ತಲೇ ಇತ್ತು. ನದಿಯಿಂದ ಹೊರತೆಗೆಯಲಾದವರನ್ನು ಹೊತ್ತ ಅಂಬ್ಯುಲೆನ್ಸ್ ಗಳು ಒಂದರಹಿಂದೊಂದರಂತೆ ಬರುತ್ತಲೇ ಇದ್ದವು. ಪ್ರತೀ ವಾಹನ ಬಂದಾಗಲೂ ಹಾಹಾಕಾರ. ಅದರಿಂದ ಹೊರತರಲಾಗುವ ಮಕ್ಕಳ/ಮಂದಿಯ ಮುಖ ನೋಡಲು ನೂಕುನುಗ್ಗಲು. ಅವರು ಜೀವಂತವಿದ್ದಾರೋ ಎಂದು ತಿಳಿಯುವ ಆತಂಕಭರಿತ ಕುತೂಹಲ. ಇಷ್ಟೆಲ್ಲ ನೋಡುತ್ತಾ ನಾನು ಹಾಗೆಯೇ ನಿಂತು ಬಿಡುವಂತಿರಲಿಲ್ಲ. ನಾನು ಬಂದದ್ದು ಇವನ್ನೆಲ್ಲ ವರದಿ ಮಾಡುವುದಕ್ಕೆ...


ಅಲ್ಲಿಂದ ಮೆಲ್ಲನೆ ಕಾಲ್ತೆಗೆದು ಇನ್ನೊಂದು ಹಾದಿಯಿಂದ ಶವಾಗಾರದತ್ತ ನಡೆದೆ. ಅಲ್ಲಿನ ಪರಿಸ್ಥಿತಿ ಆಸ್ಪತ್ರೆಯ ಮುಂಭಾಗಕ್ಕಿಂತ ಹತ್ತು ಪಾಲು ಭಯಾನಕವಾಗಿತ್ತು. ಸುತ್ತಮುತ್ತೆಲ್ಲ ಬರೀ ಆಕ್ರಂದನ. ಒಳಹೊಕ್ಕರೆ ಸಾಲುಸಾಲಾಗಿ ಮಲಗಿಸಿದ ಹನ್ನೊಂದು ದೇಹಗಳು. ಅವುಗಳಲ್ಲಿ ಏಳು ಪ್ರೈಮರಿ ಶಾಲೆಯ ಕಂದಮ್ಮಗಳದ್ದು. ಅವನ್ನು ನೋಡಲು, ಗುರುತಿಸಲು ಅಪ್ಪ ಅಮ್ಮಂದಿರ ನೂಕುನುಗ್ಗಲು, ಎದೆ ಹಿಂಡುವ ರೋದನ. ಶವಾಗಾರದ ಮುಂದೆ ಮೈಲುದ್ದಕ್ಕೆ ಇಂಥವರದೇ ಸಾಲು. ಅವರ ನಡುವೆ ಘಟನೆಯ ವಿವರ ಬರಕೊಳ್ಳುವ ನಾವು. ಮಕ್ಕಳ ಹೆಸರೇನು, ವಯಸ್ಸೆಷ್ಟು, ಎಲ್ಲಿಯವರು, ಅಪ್ಪ-ಅಮ್ಮ ಯಾರು... ಘಟನೆಯ ಬಗ್ಗೆ ಅವರ ಪ್ರತಿಕ್ರಿಯೆ ಏನು? ಅಲ್ಲ, ಮಕ್ಕಳನ್ನು ಕಳಕೊಂಡವರನ್ನು ಏನೆಂದು ಕೇಳೋಣ ಸ್ವಾಮಿ? ಕೇಳಿದರೂ ಅವರಾದರೂ ಏನು ಹೇಳಿಯಾರು? ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ಹಾಗಂತ ನಮ್ಮ ಕೆಲಸ ಮಾಡಲೇಬೇಕಿತ್ತಲ್ಲ!


ಇದೆಲ್ಲ ನಡೆದು ಒಂದು ವರ್ಷವೇ ಉರುಳಿದೆ. ಆದರೆ ಉಳಾಯಿಬೆಟ್ಟಿನಲ್ಲಿ ವಿಶೇಷ ಬದಲಾವಣೆಯೇನೂ ಆದಂತಿಲ್ಲ. ನಿಜ ಹೇಳಬೇಕೆಂದರೆ ಬಸ್ ನದಿಗುರುಳಲು ಕಾರಣವಾದ ತಡೆಗೋಡೆಯಿಲ್ಲದ ಕಿರಿದಾದ ಮಾರ್ಗದ ಸ್ಥಿತಿ ಹೆಚ್ಚುಕಮ್ಮಿ ಹಾಗೆಯೇ ಇದೆ. ಅದಕ್ಕೆ ಹೊಸ ಡಾಮಾರು ಬಂದಿದೆ; ನದಿಗೆ ವಾಹನಗಳು ಉರುಳದಂತೆ ಇಲಾಖೆ ಇನ್ನೆರಡು ತಿಂಗಳಲ್ಲಿ ಶಿಥಿಲವಾಗಬಹುದಾದಂತಹ ಬಿದಿರಿನ ಬೇಲಿ ಕಟ್ಟಿದೆ! ಅನತಿ ದೂರದಲ್ಲಿ 'ರಸ್ತೆಯು ನದಿ ದಂಡೆಯಲ್ಲಿ ಹಾದು ಹೋಗುತ್ತಿದ್ದು ರಸ್ತೆಯ ಮೇಲೆ ಪ್ರವಾಹ ಬಂದಾಗ ವಾಹನ ಸಂಚಾರ ನಿಷೇಧಿಸಲಾಗಿದೆ’ ಎಂಬ ಎಚ್ಚರಿಕೆಯ ಬೋರ್ಡು ಎದ್ದಿದೆ. ಇಷ್ಟೇ.

ಹಾಗೆ ನೋಡಿದರೆ ಉಳಾಯಿಬೆಟ್ಟಿನಲ್ಲಿ ದುರಂತವೇ ನಡೆಯುತ್ತಿರಲಿಲ್ಲ, ಬೇಲಿ ಹಾಕುವ ಪ್ರಮೇಯವೂ ಇರುತ್ತಿರಲಿಲ್ಲ. ಫಲ್ಗುಣಿ ಉಕ್ಕಿ ಹರಿದು ರಸ್ತೆಯ ಮೇಲೆ ಬಂದಾಗ ರಸ್ತೆಯ ಅಂಚನ್ನು ತೋರಿಸಲೋ ಎಂಬಂತೆ ಹತ್ತಾರು ಬ್ರ್ ಹತ್ ಮರಗಳು ಅಲ್ಲಿ ಸಾಲಾಗಿ ಬೆಳೆದಿದ್ದವು. ಒಂದು ವೇಳೆ ಆಯ ತಪ್ಪಿ ವಾಹನವೊಂದು ಉರುಳಿದರೂ ಅದು ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ಅವು ತಡೆಯುತ್ತಿದ್ದವು. ವಿನಾಕಾರಣ ಹನ್ನೊಂದು ಮಂದಿ ಜಲಸಮಾಧಿಯಾಗುವುದೂ ತಪ್ಪುತ್ತಿತ್ತು.

ಆದರೆ ಆ ಹೊತ್ತು ಅಲ್ಲಿ ಒಂದು ಮರವೂ ಇರಲಿಲ್ಲ. ಕೆಲವೇ ತಿಂಗಳುಗಳ ಹಿಂದೆ ಮರಳು ಸಾಗಾಟದ ದಂಧೆಯವರು ತಮ್ಮ ಲಾರಿಗಳನ್ನು ಇಳಿಸುವುದಕ್ಕೆ ಅಷ್ಟೂ ಮರಗಳನ್ನು ಕಡಿದು ಕೆಡವಿದ್ದರು.

(ಮೊದಲನೇ ಫೋಟೋ: ದುರಂತ ಸಂಭವಿಸಿದ ಫಲ್ಗುಣಿಯ ಮಗ್ಗುಲು. ದುರಾಸೆಗೆ ಬಲಿಯಾದ ಮರಗಳ ಬೊಡ್ಡೆಗಳನ್ನೂ ಕಾಣಬಹುದು. ಎರಡನೇ ಫೋಟೋ: ಅದೇ ಸ್ಥಳದ ಈಗಿನ ನೋಟ. ಬಿದಿರ ಬೇಲಿ.)

ನೇಗಿಲಯೋಗಿ, ಅಪ್ಪ ಮತ್ತು ಸ್ವಾತಂತ್ರ್ಯೋತ್ಸವ


"ಉಳುವಾ ಯೋಗಿಯ ನೋಡಲ್ಲಿ" ಎಂದು ಹಾಡಬೇಕೆಂದು ನಿರ್ಧರಿಸಿತು ಸರ್ಕಾರ. "ಅಳುವಾ ರೋಗಿಯ ನೋಡಲ್ಲಿ" ಎಂದು ಹಾಡಬೇಕೆನಿಸುತ್ತಿದೆ ಎಂದಿತು ಬುದ್ಧಿಜೀವಿಗಳ ಗಡಣ. ನಾನು ಆ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಂಡವನಲ್ಲ. ಆದರೆ, ಈ ಬೆಳಗ್ಗೆ ಮಣೇಕ್ ಶಾ ಪರೇಡ್ ಮೈದಾನದಲ್ಲಿ ಡಾ. ಅಶ್ವಥ್ ನೇತ್ರ್ ತ್ವದ ಮಕ್ಕಳ ಸಮೂಹ "ಉಳುವಾ ಯೋಗಿಯ ನೋಡಲ್ಲಿ" ಎಂದು ಉಚ್ಛಸ್ಥಾಯಿಯಲ್ಲಿ ಹಾಡುತ್ತಿದ್ದರೆ ಅತ್ತ ನೇಗಿಲನ್ನೂ ಹಿಡಿಯಲಾಗದೆ ಇತ್ತ ಅದನ್ನು ಬಿಟ್ಟು ಪೇಟೆಗೂ ಬರಲಾಗದೆ ಒದ್ದಾಡುತ್ತಿರುವ ಎಂಭತ್ತು ವರ್ಷದ ಅಪ್ಪನ ನೆನಪಾಗಿ ಕಣ್ಣಂಚಲ್ಲಿ ನೀರಾಡಿದ್ದಂತೂ ಅನ್ನದ ಬಟ್ಟಲಿನಷ್ಟೇ ಸತ್ಯ.


ನನಗರಿವಿಲ್ಲದಂತೆಯೇ ಕೆಲ ವರ್ಷಗಳ ಹಿಂದೆ ಬರೆದ ಕವನವೊಂದು ಮತ್ತೆ ಮತ್ತೆ ನೆನಪಾಗಿ ಕಾಡಿತು. ನಾನು ಬಹಳ ಸಮಯದ ಬಳಿಕ ಒಬ್ಬನೇ ಕುಳಿತು ಬಿಕ್ಕಳಿಸಿದೆ. "ತೀರ್ಥರೂಪರಿಗೆ..." ಎಂಬುದು ಆ ಕವನದ ಶೀರ್ಷಿಕೆ. (ಪ್ರತ್ಯೇಕವಾಗಿ ಅದನ್ನು ಮುಂದೆ ಪ್ರಕಟಿಸುವೆ).


ಹುಟ್ಟಿದ ಎರಡೇ ವರ್ಷಕ್ಕೆ ತನ್ನ ಅಮ್ಮನನ್ನು ಕಳಕೊಂಡರಂತೆ ಅಪ್ಪ. ಹೊಟ್ಟೆ ಪಾಡು ಎಂಟನೇ ವರ್ಷಕ್ಕೆ ಮನೆ ಬಿಟ್ಟು ಹೊರಡಲು ತಾಕೀತು ಮಾಡಿತಂತೆ. ಅಲ್ಲಿಂದ ಸತತ ನಲವತ್ತು ವರ್ಷಗಳ ಕಾಲ ಯಾರ್ಯಾರದೋ ತೋಟ-ಮನೆಗಳಲ್ಲಿ ಜೀತ. ಮದುವೆಯಾದಾಗ ಅಪ್ಪನಿಗೆ ೪೦ ದಾಟಿತ್ತಂತೆ. ಭವಿಷ್ಯಕ್ಕಾಯಿತು ಎಂದು ತಾನು ದುಡಿಯುತ್ತಿದ್ದ "ಧಣಿ"ಯ ಜಮೀನಿನ ಪಕ್ಕದಲ್ಲೇ ಇದ್ದ ಸರ್ಕಾರಿ ಜಾಗವನ್ನು ಸಜ್ಜುಗೊಳಿಸಿಕೊಂಡರಂತೆ. ಕ್ರಮೇಣ ವಾಸ್ತವ್ಯ ಅಲ್ಲಿಗೆ ಬದಲಾಯಿತು. ಆ ಬಳಿಕದ್ದು ಅಪ್ಪ-ಅಮ್ಮ ಜತೆಯಾಗಿ ರಕ್ತ ಬೆವರು ಬಸಿದ ಕನಸುಗಳ ಮಹಾಸತ್ರ. ಎಲ್ಲ ಸಂಕಟಗಳ ನಡುವೆಯೂ ಮೂವರು ಅಕ್ಕಂದಿರು ಮತ್ತು ನಾನು ಅಜ್ಜನ ಮನೆಯ ಒತ್ತಾಸೆಯಲ್ಲಿ ಕಲಿತೆವು ಬಲಿತೆವು. ತನ್ಮಧ್ಯೆ ಅಪ್ಪ ಹಾಸಿಗೆ ಹಿಡಿದರು. ಚಿಮಿಣಿ ದೀಪಕ್ಕೆ ಕಣ್ಣೀರು ಎರೆದೇ ಅಮ್ಮ ಹತ್ತಾರು ಇರುಳುಗಳನ್ನು ಬೆಳಗು ಮಾಡಿದರು. ಆಪರೇಷನ್ ಆಯಿತು. ಸಾವಿರಗಟ್ಟಲೆ ಮುಗಿಯಿತು. ಮೂರು ಹೊತ್ತು ಗಂಜಿ ಕುಡಿಯುವುದಕ್ಕೂ ಗತಿಯಿಲ್ಲದ ಆ ಹೊತ್ತಿನಲ್ಲಿ ಅಷ್ಟೊಂದು ಹಣ ಹೇಗೆ ಒಟ್ಟಾಯಿತೋ ಅಪ್ಪ ಹೇಗೆ ಮತ್ತೆ ಮನೆಗೆ ಮರಳಿದರೋ ಅದೊಂದು ವಿಸ್ಮಯ.


ಎಲ್ಲವೂ ಒಂದು ತಹಬದಿಗೆ ಬಂತೆನ್ನುವ ಹೊತ್ತಿಗೆ ಬಡಿದದ್ದು ಗಡಿ ತಕರಾರಿನ ಸಿಡಿಲು. ಅಷ್ಟು ವರ್ಷ ಚಾಕರಿ ಮಾಡಿಸಿಕೊಂಡ ಧಣಿ ಮಹಾಶಯನೇ ವರ್ಷಾನುಗಟ್ಟಲೆಯ ಬೆವರಿನ ಫಲಕ್ಕೆ ಕನ್ನವಿಟ್ಟ. ಅರ್ಧ ತೋಟ ಲಪಟಾಯಿಸಿದ. ಅಪ್ಪ ಕುಸಿದು ಹೋದರು. ಇನ್ನೂ ಶಾಲೆಗೆ ಹೋಗುತ್ತಿದ್ದ ನನ್ನನ್ನೂ ಸಣ್ಣಕ್ಕನನ್ನೂ ಕರೆದುಕೊಂಡು ತಿಂಗಳುಗಟ್ಟಲೆ ತಲಕಾವೇರಿ ಭಾಗಮಂಡಲ ಎಂದು ಹುಚ್ಚರಂತೆ ಅಲೆದರು. ಇತ್ತ ಅಮ್ಮ ಆ ಗೊಂಡಾರಣ್ಯದಲ್ಲಿ ಒಬ್ಬಂಟಿಯಾಗಿ ರೋದಿಸಿದರು. ಕೋರ್ಟು ಕಚೇರಿ ಪೋಲೀಸ್ ಸ್ಟೇಷನ್ ಅಂತ ಅಪ್ಪ ಮತ್ತೆ ಅಲೆದರು. ಇಷ್ಟರ ನಡುವೆಯೂ ಮೂವರು ಅಕ್ಕಂದಿರನ್ನು ಗೌರವಯುತವಾಗಿ ಮದುವೆ ಮಾಡಿಸಿದರು. "ನೀವು ತಿರುಗಾಡಿದ್ದು ಸಾಕು, ಇನ್ನು ಜಾಗದ ವಿಚಾರ ನಾನು ನೋಡಿಕೊಳ್ಳುವೆ" ಎಂದೆ ವಿದ್ಯಾಭ್ಯಾಸ ಮುಗಿಸಿದ ನಾನು. ನನಗೆ ಚೆನ್ನಾಗೇ ಗೊತ್ತಿತ್ತು ಅವರಿಗೆ ಬೇಕಿದ್ದುದು ಅದಲ್ಲ, ನನ್ನ ಸಾಮೀಪ್ಯ ಎಂಬುದು. ಆದರೆ ನೇಗಿಲ ಬಗ್ಗೆ ಅಪಾರ ಗೌರವವಿದ್ದಾಗ್ಯೂ ಆ ಸಂದರ್ಭ ನಾನು ಹೊರಗೆ ದುಡಿಯುವುದು ಅನಿವಾರ್ಯವಿತ್ತು. ದಶಕಗಳ ಕಾಲ ಇರುಳು ಹಗಲೆನ್ನದೆ ಬೇಸಾಯದ ತಪಸ್ಸು ಮಾಡಿದ ಅಪ್ಪ-ಅಮ್ಮ ಸಾಲದ ಸರಂಜಾಮಲ್ಲದೆ ಬೇರೇನನ್ನೂ ಕೂಡಿಡಲಾಗದೆ ಇದ್ದದ್ದು ನನಗೆ ಚೆನ್ನಾಗಿ ಅರಿವಿತ್ತು. ಇಷ್ಟು ವರ್ಷಗಳ ನಂತರವೂ ಜಾಗದ ತಕರಾರು ಹಾಗೆಯೇ ಇದೆ. ಇಂದಲ್ಲ ನಾಳೆ ಅದು ಮುಗಿಯುತ್ತದೆ, ಈ ಸುಳಿಯಿಂದ ಹೊರಬಂದು ಮಗನೊಂದಿಗೆ ನೆಮ್ಮದಿಯ ಬದುಕ ಸಂಜೆಗಳನ್ನು ಕಳೆಯಬಹುದೆಂಬ ಕನಸಿನೊಂದಿಗೆ ಅವರು ದಿನದೂಡುತ್ತಲೇ ಇದ್ದಾರೆ ಕರೆಂಟು, ಟೀವಿ, ಪತ್ರಿಕೆ ತಲುಪದ ಆ ವಿಚಿತ್ರ ದ್ವೀಪದಲ್ಲಿ. ಅವರೀಗ ಸ್ವಾತಂತ್ರ್ಯೋತ್ಸವಕ್ಕೆ ಕಾಯುತ್ತಿದ್ದಾರೆ.


ಹೇಳಿ, ಉಳುವಾ ಯೋಗಿಯ ನೋಡಲ್ಲಿ ಎಂಬ ಆರ್ದ್ರ ದನಿ ಕೇಳಿದಾಗಲೂ ನಾನು ಕಣ್ಣೀರಾಗದೆ ಉಳಿಯಲು ಹೇಗೆ ಸಾಧ್ಯ?