ಬುಧವಾರ, ಜೂನ್ 16, 2021

ಪರಿಸರ ಕಾಳಜಿಯ ಶಿಕ್ಷಣ: ಆಗಬೇಕಿರುವುದೇನು?

ವಿದ್ಯಾರ್ಥಿಪಥ ಜೂನ್ 2021ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಪದೇಪದೇ ಉದ್ಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳು, ಒಂದರಮೇಲೊಂದು ಎರಗುತ್ತಿರುವ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಯೋಚಿಸುವಾಗೆಲ್ಲ ‘ಭೂಮಿಯು ಮನುಷ್ಯನ ಎಲ್ಲ ಆಸೆಗಳನ್ನು ಪೂರೈಸಬಲ್ಲುದು, ಆದರೆ ದುರಾಸೆಗಳನ್ನು ಅಲ್ಲ’ ಎಂಬ ಮಹಾತ್ಮ ಗಾಂಧೀಜಿಯವರ ಮಾತು ಬಹಳ ಕಾಡುತ್ತದೆ. ಮನುಷ್ಯನ ದುರಾಸೆಯ ಕಡೆಗಿನ ಪ್ರಕೃತಿಯ ಸಿಟ್ಟೇನೋ ಮೇರೆ ಮೀರಿ ಹರಿದಂತೆ ತೋರುತ್ತದೆ; ಆದರೆ ನಾವು ಎಚ್ಚೆತ್ತುಕೊಳ್ಳುವ ಎಳ್ಳಷ್ಟಾದರೂ ಅವಕಾಶವನ್ನು ಆಕೆ ಕೊಡಲಾರಳೇ? ಎಲ್ಲವೂ ಮುಗಿದುಹೋಯಿತು ಎಂಬ ನಿರಾಸೆ ಎದುರಾಗುವಾಗ ಒಂದಿಷ್ಟು ಧೈರ್ಯವನ್ನು ತುಂಬಬಲ್ಲವಳು ಪ್ರಕೃತಿಯೇ. ಏಕೆಂದರೆ ಅವಳು ತಾಯಿ. ಎಷ್ಟೇ ಮುನಿದರೂ ಆಕೆಯ ಕಣ್ಣಂಚಲ್ಲಿ ಒಂದು ಹಿಡಿ ಪ್ರೀತಿ ಇದ್ದೇ ಇರುತ್ತದೆ. ಅಂತಹದೊಂದು ಕಡೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ದಾರಿ ನಮಗಿದ್ದರೆ ಅದನ್ನು ಬಳಸದೆ ಬಿಡಕೂಡದು.


ಈಗ ಉಳಿದಿರುವುದು ನಮ್ಮ ಹೊಸ ಪೀಳಿಗೆಯನ್ನು ಈ ಅವಕಾಶದತ್ತ ಸೆಳೆಯುವುದು. ನಮ್ಮ ಮಕ್ಕಳು, ಯುವಕರು ಪ್ರಕೃತಿಯ ಕಡೆಗಿನ ತಮ್ಮ ಜವಾಬ್ದಾರಿಯನ್ನು ತಿಳಿದುಕೊಳ್ಳದೇ ಹೋದರೆ ಮುಂದಕ್ಕೆ ಉಳಿಯುವುದು ಕಡುಗತ್ತಲು ಮಾತ್ರ ಎಂಬುದನ್ನೀಗ ನಾವು ಅರ್ಥ ಮಾಡಿಕೊಳ್ಳಬೇಕು. ಇದು ಆಗಬೇಕೆಂದರೆ ಪರಿಸರ ಜಾಗೃತಿ ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಬೇಕು. ಪರಿಸರ ಮತ್ತು ಅದರ ಕಡೆಗಿನ ಹೊಣೆಗಾರಿಕೆ ಬಹಳ ಹಿಂದಿನಿಂದಲೂ ನಮ್ಮ ಶಿಕ್ಷಣದ ಭಾಗವೇನೋ ಆಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ನಾಗರಿಕರ ವ್ಯಕ್ತಿತ್ವದ ಭಾಗವಾಗಿ ಪರಿವರ್ತನೆ ಆಗಿದೆ ಎಂಬುದು ಮುಖ್ಯ. ವರ್ಷಗಟ್ಟಲೆ ಪರಿಸರದ ಪಾಠಗಳನ್ನು ಉರುಹೊಡೆದೂ ಒಬ್ಬ ವ್ಯಕ್ತಿ ಪ್ರಕೃತಿಯ ಕಡೆಗೆ ಸಣ್ಣ ಗೌರವವನ್ನು ಬೆಳೆಸಿಕೊಳ್ಳಲಿಲ್ಲ ಎಂದಾದರೆ ಅವನು ಪಡೆದ ಶಿಕ್ಷಣಕ್ಕೆ ಏನು ಅರ್ಥ?

ಶಿಕ್ಷಣದಲ್ಲಿ ಪರಿಸರ:

ಪರಿಸರದೊಂದಿಗಿನ ಶಿಕ್ಷಣ ಭಾರತೀಯ ಪರಂಪರೆಯ ಒಂದು ಭಾಗ. ನಮ್ಮಲ್ಲಿ ಪ್ರಕೃತಿಯ ಹೊರತಾದ ಶಿಕ್ಷಣದ ಪರಿಕಲ್ಪನೆಯೇ ಇಲ್ಲ. ಇಲ್ಲಿ ಎಲ್ಲವೂ ನಡೆಯುತ್ತಿದ್ದುದು ಪರಿಸರದ ನಡುವೆಯೇ. ಗುರುಕುಲ ಶಿಕ್ಷಣದಲ್ಲಿ ತರಗತಿ ಕೊಠಡಿಗಳೇ ಇಲ್ಲ. ಪ್ರಕೃತಿಯೇ ಶಾಲೆ, ಅದರೊಳಗೆ ನಡೆಯುವುದೆಲ್ಲವೂ ಶಿಕ್ಷಣವೇ. ಅದು ಪ್ರಕೃತಿಯೊಂದಿಗೆ ನಡೆಸುವ ಬಹುದೊಡ್ಡ ಅನುಸಂಧಾನ. ಗುರು ಈ ಅನುಸಂಧಾನಕ್ಕೊಂದು ಭದ್ರ ಕೊಂಡಿ. ಹೀಗಾಗಿ ನಮ್ಮಲ್ಲಿ ಶಿಕ್ಷಣವೆಂದರೆ ವಾಸ್ತವವಾಗಿ ಪ್ರಕೃತಿಯೊಂದಿಗೆ ಬದುಕುವುದು.

ಆಧುನಿಕತೆ ಮನುಷ್ಯನನ್ನು ಪ್ರಕೃತಿಯಿಂದ ದೂರಮಾಡುತ್ತಾ ಹೋದ ಹಾಗೆ ಆಧುನಿಕ ಶಿಕ್ಷಣವೂ ಆತನನ್ನು ಪ್ರಕೃತಿಯೊಂದಿಗಿನ ಸಹಬಾಳ್ವೆಗಿಂತ ದೂರಮಾಡುತ್ತಾ ಬಂತು ಎನಿಸುತ್ತದೆ. ನಾವು ತರಗತಿ ಕೊಠಡಿಗಳನ್ನು ಕಟ್ಟಿಕೊಂಡಾಗ ಯಥಾರ್ಥವಾಗಿ ಪ್ರಕೃತಿಗೂ ನಮಗೂ ನಡುವೆ ಗೋಡೆಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ ಎಂದು ಅರ್ಥವಾಗಲೇ ಇಲ್ಲ. ಹಾಗೆಂದು ನಾವು ಪರಿಸರವನ್ನು ಪೂರ್ಣವಾಗಿ ಮರೆತೇಬಿಟ್ಟೆವು, ಕಡೆಗಣಿಸಿದೆವು ಎಂದು ಇದರ ಅರ್ಥವಲ್ಲ. ಬದಲಾದ ಕಾಲದೊಂದಿಗೆ ನಾವೂ ಬದಲಾಗುವುದು, ಶಿಕ್ಷಣ ಪದ್ಧತಿಯಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು. ಅದರೊಂದಿಗೆ ಪರಿಸರ ಶಿಕ್ಷಣದ ಪರಿಕಲ್ಪನೆಯನ್ನೂ ತಕ್ಕಮಟ್ಟಿಗೆ ಮುಂದುವರಿಸಿಕೊಂಡೇ ಬಂದೆವು.

1986ರ ರಾಷ್ಟ್ರೀಯ ಶಿಕ್ಷಣ ನೀತಿಯು ಪರಿಸರದ ಕುರಿತಂತೆ ನಮ್ಮ ಶಿಕ್ಷಣ ಮಾಡಬೇಕಾದದ್ದೇನು ಎಂಬ ಬಗ್ಗೆ ಸ್ಪಷ್ಟ ನಿಲುವು, ನಿರ್ದೇಶನಗಳನ್ನು ಹೊಂದಿತ್ತು. ಪರಿಸರ ಜಾಗೃತಿಯು ಪ್ರಾಥಮಿಕ ಶಿಕ್ಷಣದಿಂದ ತೊಡಗಿ ಉನ್ನತ ವ್ಯಾಸಂಗದವರೆಗೆ ವಿದ್ಯಾಭ್ಯಾಸದ ವಿವಿಧ ಹಂತಗಳ ಅವಿಭಾಜ್ಯ ಅಂಗವಾಗಿರಬೇಕು ಎಂಬುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯು ಸ್ಪಷ್ಟವಾಗಿ ಹೇಳಿತ್ತು. 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಧಾರದಲ್ಲಿ ಒಂದನೇ ತರಗತಿಯಿಂದ ಹನ್ನೆರಡನೇ ತರಗತಿವರೆಗೆ ಹೇಗೆ ಪರಿಸರ ಶಿಕ್ಷಣವನ್ನು ರೂಪಿಸಬಹುದು ಎಂಬ ಬಗ್ಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಸಮಗ್ರ ಸಾಧ್ಯತೆಗಳನ್ನು ಅನಾವರಣಗೊಳಿಸಿತ್ತು. ಇದರ ಆಧಾರದಲ್ಲಿ ನಮ್ಮಲ್ಲಿ ಒಂದನೇ ತರಗತಿಯಿಂದಲೇ ‘ಪರಿಸರ ಅಧ್ಯಯನ’ವನ್ನು ಒಂದಲ್ಲ ಒಂದು ರೀತಿಯಿಂದ ಅಳವಡಿಸಿಕೊಂಡು ಬರಲಾಗಿದೆ.

ಮಹತ್ವಾಕಾಂಕ್ಷೆಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ಯಲ್ಲಿ ಕೂಡ ಪರಿಸರ ಶಿಕ್ಷಣದ ಬಗ್ಗೆ ಸಾಕಷ್ಟು ಪ್ರಾಧಾನ್ಯ ಇದೆ. ಸಮುದಾಯ ಸಹಭಾಗಿತ್ವ, ಪರಿಸರ ಶಿಕ್ಷಣ ಹಾಗೂ ಮೌಲ್ಯಾಧಾರಿತ ಶಿಕ್ಷಣ ಕುರಿತಾದ ಕ್ರೆಡಿಟ್-ಆಧಾರಿತ ಕೋರ್ಸುಗಳು ಉನ್ನತ ಶಿಕ್ಷಣ ಸೇರಿದ ಹಾಗೆ ವಿದ್ಯಾಭ್ಯಾಸದ ಎಲ್ಲ ಹಂತಗಳಲ್ಲೂ ಇರಬೇಕೆಂದು ಎನ್‌ಇಪಿ ಸ್ಪಷ್ಟವಾಗಿ ಸೂಚಿಸಿದೆ.

ಅನುಷ್ಠಾನದ ಸವಾಲು:

ಪರಿಸರದ ಕುರಿತಾದ ಜಾಗೃತಿ, ಜ್ಞಾನ, ಧೋರಣೆ, ಕೌಶಲ ಹಾಗೂ ಭಾಗವಹಿಸುವಿಕೆ- ಇವು ಪರಿಸರ ಶಿಕ್ಷಣದ ಪ್ರಮುಖ ಉದ್ದೇಶಗಳಾಗಬೇಕೆಂದು ಯುನೇಸ್ಕೋ ಬಹಳ ಹಿಂದೆಯೇ ಹೇಳಿದೆ. ನಮ್ಮಲ್ಲಿ ಕಾಣ್ಕೆಗಳಿಗೂ ಯೋಜನೆಗಳಿಗೂ ಕೊರತೆಯಿಲ್ಲ. ಸಮಸ್ಯೆ ಇರುವುದು ಅನುಷ್ಠಾನದಲ್ಲಿ. ಎಷ್ಟೇ ಉತ್ತಮ ಯೋಜನೆಗಳಿದ್ದರೂ ಮೂಲ ಉದ್ದೇಶದಂತೆಯೇ ಜಾರಿಯಾಗದೇ ಹೋದರೆ ಅವು ವ್ಯರ್ಥವೇ.

ಮುಖ್ಯವಾಗಿ ಗಮನಿಸಬೇಕಾದ ವಿಷಯ ಇಷ್ಟೇ: ಕೇವಲ ಪರಿಸರ ಅಧ್ಯಯನದ ಪಠ್ಯಪುಸ್ತಕಗಳಿಂದ, ಉಪನ್ಯಾಸಗಳಿಂದ, ಭಾಷಣಗಳಿಂದ, ಬೀದಿ ಜಾಥಾಗಳಿಂದ ವಿದ್ಯಾರ್ಥಿಗಳಲ್ಲಿ ಪ್ರಕೃತಿಯನ್ನು ಸಂರಕ್ಷಿಸಿ ಪೋಷಿಸಿಕೊಂಡು ಹೋಗಬೇಕಾದ ಕಾಳಜಿಯನ್ನು ಬೆಳೆಸಲಾರೆವು. ಅದು ಒಳಗಿನಿಂದ ಮೂಡಬೇಕು. ವ್ಯಕ್ತಿತ್ವದ ಭಾಗವಾಗಬೇಕು.

ಶಾಲಾ ಕಾಲೇಜುಗಳಲ್ಲಿ ಆಯೋಜನೆಯಾಗುವ ಪರಿಸರ ದಿನ, ವನಮಹೋತ್ಸವ ಇನ್ನಿತರ ಕಾರ್ಯಕ್ರಮಗಳು ನಿಜವಾಗಿಯೂ ಪರಿಸರದ ಕುರಿತ ಪ್ರೀತಿಯನ್ನು ಮಕ್ಕಳಲ್ಲಿ ಮೂಡಿಸುತ್ತಿವೆಯೇ? ಅವು ಅವರ ವ್ಯಕ್ತಿತ್ವದಲ್ಲಿ, ಮನೋಭಾವದಲ್ಲಿ ಬದಲಾವಣೆಯನ್ನು ತರುತ್ತಿವೆಯೇ? ಪ್ರಕೃತಿಯೊಂದಿಗಿನ ಅವರ ವರ್ತನೆಗಳು ಯಥಾರ್ಥದಲ್ಲಿ ಬದಲಾವಣೆ ಆಗಿವೆಯೇ? ಇಂತಹ ಪ್ರಶ್ನೆಗಳನ್ನು ನಾವೀಗ ಕೇಳಿಕೊಳ್ಳಬೇಕಿದೆ.

ತರಗತಿ ಕೊಠಡಿಗಳ ಒಳಗೆ ಕುಳಿತು ಮಾಡುವ ಪರಿಸರದ ಪಾಠಗಳಿಂದ, ವೈಯಕ್ತಿಕ ಬದ್ಧತೆಯಿಲ್ಲದ ರಾಜಕಾರಣಿಗಳು ಮಾಡುವ ಪರಿಸರ ದಿನಾಚರಣೆಯ ಭಾಷಣಗಳಿಂದ, ಹೆಕ್ಟೇರುಗಟ್ಟಲೆ ಅರಣ್ಯನಾಶ ಮಾಡಿರುವ ಪುಢಾರಿಗಳು ಮಾಡುವ ಗಿಡನೆಡುವ ನಾಟಕಗಳಿಂದ, ಘೋಷಣೆಗಳಿಗೆ ಸೀಮಿತವಾದ ಕಿಲೋಮೀಟರುಗಟ್ಟಲೆ ಜಾಥಾಗಳಿಂದ ವಿದ್ಯಾರ್ಥಿಗಳಲ್ಲಿ ನಿಜದರ್ಥದ ಪರಿಸರಪ್ರೀತಿ ಮೂಡುವುದು ದೂರದ ಮಾತು. ಮಕ್ಕಳಿಗೂ ಕಪಟ ಅರ್ಥವಾಗುತ್ತದೆ. ಇವರದ್ದೆಲ್ಲ ಹಗಲು ನಾಟಕ ಎಂದು ಬಹುಬೇಗ ಗೊತ್ತಾಗಿಬಿಡುತ್ತದೆ. 

ಮನೆಯಲ್ಲೇ ಆರಂಭ:

ಹಾಗಾದರೆ ನಿಜವಾಗಿಯೂ ಆಗಬೇಕಾದ್ದೇನು? ಚಿಂತನೆ, ಧೋರಣೆ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆ ಬರಬೇಕೆಂದರೆ ಅದು ಮನೆಮಂದಿಯಿಂದಲೇ ಆರಂಭವಾಗಬೇಕು. ಮನೆಯಲ್ಲೇ ಸಿಗದ ಪಾಠ ಇನ್ನೆಲ್ಲೇ ಸಿಕ್ಕರೂ ವ್ಯರ್ಥ. ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಸುಮ್ಮನೇ ಹುಟ್ಟಿಕೊಂಡಿತೇ? ಪರಿಸರ ಪ್ರೀತಿಯೂ ಅಲ್ಲೇ ಕುಡಿಯೊಡೆಯಬೇಕು.

ಮಕ್ಕಳಿಗೆ ಬಾಯ್ಮಾತಿನ ಪಾಠಗಳು ಬೇಕಿಲ್ಲ. ಅವರು ಹೇಳಿದ್ದನ್ನು ಕೇಳುವುದಿಲ್ಲ, ಮಾಡಿದ್ದನ್ನು ಮಾಡುತ್ತಾರೆ. ಅಂದರೆ ಮನೆಮಂದಿ, ತಮ್ಮ ಹಿರಿಯರು ಏನು ಮಾಡುತ್ತಾರೋ ಅದನ್ನು ಅನುಸರಿಸುತ್ತಾರೆ. ಮನೆಮಂದಿಯಲ್ಲಿ ಪರಿಸರದ ಕುರಿತಾದ ಗೌರವ ಇದ್ದರೆ ಮಾತ್ರ ಅದು ಮಕ್ಕಳಲ್ಲಿ ಪ್ರತಿಫಲಿಸಲು ಸಾಧ್ಯ. ಮರ, ಗಿಡ, ಹುಲ್ಲು, ಪ್ರಾಣಿ, ಪಕ್ಷಿ, ಕಾಡು, ನದಿ, ನೀರು, ಸಮುದ್ರ, ಗಾಳಿ ಇತ್ಯಾದಿಗಳನ್ನು ನಮ್ಮಂತೆಯೇ ಕಾಣುವ, ಕಾಪಾಡುವ ಧೋರಣೆ ದೊಡ್ಡವರಲ್ಲಿ ಇಲ್ಲದೇ ಹೋದರೆ ಮಕ್ಕಳಲ್ಲಿ ಮೂಡುವುದು ಹೇಗೆ?

ಹೀಗಾಗಿ ದೊಡ್ಡವರು ಎಲ್ಲ ವಿಚಾರದಲ್ಲೂ ಮಕ್ಕಳೆದುರು ವರ್ತಿಸುವಾಗ ಸಾಕಷ್ಟು ಎಚ್ಚರ ವಹಿಸಬೇಕು- ಪ್ರಕೃತಿಯ ವಿಷಯದಲ್ಲೂ. ನಮ್ಮ ಸುತ್ತಲಿನ ಪರಿಸರದ ಕುರಿತು ನಾವಾಡುವ ಒಂದು ಮಾತು, ವರ್ತನೆ ನಮ್ಮ ಮಕ್ಕಳ ಮೇಲೆ ಸಾಕಷ್ಟು ಪ್ರಭಾವ ಬೀರಬಹುದು, ಅವರ ಧೋರಣೆ ಹಾಗೂ ವ್ಯಕ್ತಿತ್ವಗಳನ್ನು ರೂಪಿಸಬಹುದು. ಮುಖ್ಯವಾಗಿ, ಕೃಷಿ, ಬೇಸಾಯ, ರೈತರ ಕುರಿತು ಯಾವ ಮಕ್ಕಳಿಗೆ ಗೌರವ-ಕಾಳಜಿ ಇಲ್ಲವೋ ಅಂತಹ ಮಕ್ಕಳು ಪರಿಸರವನ್ನು ಪ್ರೀತಿಸುವುದು ಕಷ್ಟ. ಎಲ್ಲರೂ ಕೃಷಿಕರಾಗಿ ಉಳಿಯುವುದು ಈ ಕಾಲದಲ್ಲಿ ಕಷ್ಟ. ಆದರೆ ಕೃಷಿ, ಕೃಷಿಕರ ಬಗ್ಗೆ ಕಾಳಜಿ, ಅನುಕಂಪಗಳನ್ನು ಉಳಿಸಿಕೊಳ್ಳುವುದು ಕಷ್ಟ ಅಲ್ಲ. ಅನ್ನಕೊಡುವ ರೈತರ, ದುಡಿಮೆಯ ಮೇಲೆ ನಂಬಿಕೆಯಿಟ್ಟಿರುವ ಬಡವರ ಕುರಿತ ಹಿರಿಯರ ಒಂದು ಅಸಡ್ಡೆಯ ಮಾತು ಮಕ್ಕಳ ಧೋರಣೆಯ ಮೇಲೆ ಸಾಕಷ್ಟು ಪ್ರಭಾವ ಬೀರಬಹುದು. ಅವರೂ ಸುಲಭವಾಗಿ ಅಂತಹದೊಂದು ಮನಸ್ಥಿತಿ ಬೆಳೆಸಿಕೊಳ್ಳಲು ಕಾರಣವಾಗಬಹುದು. ಇದು ಪರೋಕ್ಷವಾಗಿ ಅವರ ಪರಿಸರ ಪ್ರೀತಿಯ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಯೂ ಇದೆ.

ನೀರನ್ನು ಪೋಲುಮಾಡಿದರೆ ಮುಂದೆ ಉಂಟಾಗಬಹುದಾದ ಕಷ್ಟಗಳ ಬಗ್ಗೆ, ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳದೆ ಹೋದರೆ ಮುಂದಾಗಬಹುದಾದ ಅನಾಹುತಗಳ ಬಗ್ಗೆ, ನಾವಿರುವ ಪರಿಸರ, ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಬೇಕಾಬಿಟ್ಟಿ ಎಸೆದರೆ ಆಗುವ ತೊಂದರೆಗಳ ಬಗ್ಗೆ ಅಪ್ಪ-ಅಮ್ಮ ತಮ್ಮ ಮಕ್ಕಳ ಎಳವೆಯಲ್ಲೇ ಆಗಿಂದಾಗ್ಗೆ ಹೇಳುವ ಒಂದೆರಡು ಮಾತುಗಳು ಆ ಮಕ್ಕಳ ಒಟ್ಟಾರೆ ದೃಷ್ಟಿಕೋನವನ್ನೇ ಮುಂದೆ ಬದಲಾಯಿಸಬಹುದು.

ವರ್ತನೆಯೇ ಪಾಠ:

ಮಾತೇ ಬೇಕಾಗಿಲ್ಲ, ಈ ವಿಷಯಗಳಲ್ಲಿ ಅವರ ವರ್ತನೆಯೇ ಸಾಕು ಮಕ್ಕಳ ಮೇಲೆ ಪ್ರಭಾವ ಬೀರಲು. ಮಗುವಿನೊಂದಿಗೆ ಹೊರಗೆಲ್ಲೋ ಹೋಗುವಾಗ ಎದುರು ಸಿಗುವ ಪ್ಲಾಸ್ಟಿಕ್ ಅನ್ನು ಎತ್ತಿ ಕಸದ ಬುಟ್ಟಿಗೆ ಎಸೆಯುವ ಅಪ್ಪನ ವರ್ತನೆ, ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ ಅದನ್ನು ಮಗುವಿನ ಎದುರೇ ತಕ್ಷಣ ನಿಲ್ಲಿಸುವ ಅಮ್ಮನ ಒಂದು ವರ್ತನೆ. ಅಂಗಡಿಗೆ ಹೋಗುವಾಗ ತಾವೇ ಚೀಲವನ್ನು ಒಯ್ದು ಪ್ಲಾಸ್ಟಿಕ್ ಚೀಲ ಬೇಡ ಎಂದು ಮಗುವಿನೆದುರೇ ಅಪ್ಪ-ಅಮ್ಮ ಹೇಳುವ ಒಂದು ಮಾತು... ಇವೆಲ್ಲ ಯಾವ ಪಾಠಗಳಿಗೂ ಕಮ್ಮಿಯಿಲ್ಲ. ಮಕ್ಕಳು ತಾವಾಗಿಯೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಅಪ್ಪ-ಅಮ್ಮ ಹೀಗೆ ಮಾಡಿದರೆ, ಅದು ತಾವೂ ಮಾಡಬೇಕಾದ ಕೆಲಸ ಎಂಬುದು ಅವರ ಧೋರಣೆಯಲ್ಲೇ ಬಂದುಬಿಡುತ್ತದೆ. 

ಮನೆಯಲ್ಲೇ ಇರುವ ಒಂದು ಪುಟ್ಟ ಕೈತೋಟ, ಅದರ ಕೆಲಸಗಳಲ್ಲಿ ಮಕ್ಕಳನ್ನೂ ಸಾಧ್ಯವಾದಷ್ಟು ಮಟ್ಟಿಗೆ ತೊಡಗಿಸಿಕೊಳ್ಳುವುದು ಒಂದು ಅತ್ಯುತ್ತಮ ಪರಿಸರ ಕಾಳಜಿಯ ತರಬೇತಿ. ನಗರಗಳು, ಫ್ಲಾಟ್‌ಗಳು ಬೆಳೆಯುತ್ತಿರುವ ಇಂದಿನ ಕಾಲದಲ್ಲಿ ಎಲ್ಲ ಮನೆಗಳಲ್ಲೂ ಕೈತೋಟ ಮಾಡಿಕೊಳ್ಳುವುದು ಕಷ್ಟ. ಆದರೆ ಮನಸ್ಸಿದ್ದರೆ ಒಂದೆರಡಾದರೂ ಗಿಡ-ಬಳ್ಳಿ-ಹೂವುಗಳನ್ನು, ಸಣ್ಣಪುಟ್ಟ ತರಕಾರಿಯನ್ನು ಬೆಳೆಸುವ ಅವಕಾಶ ಬಹುತೇಕ ಇದ್ದೇ ಇರುತ್ತದೆ. ಎಳವೆಯಲ್ಲೇ ಮಕ್ಕಳಿಗೆ ಇವುಗಳ ಒಡನಾಟ ಸಿಕ್ಕರೆ ಮರಗಿಡಬಳ್ಳಿಗಳ ಕುರಿತಾದ ಪ್ರೀತಿ-ಕಾಳಜಿ ಅವರಲ್ಲಿ ತಾನಾಗೇ ಬೆಳೆಯುತ್ತಾ ಹೋಗುತ್ತದೆ. ಅಂತಹದೊಂದು ನವಿರು ಭಾವವನ್ನು ಮಕ್ಕಳಲ್ಲಿ ಉದ್ದೀಪಿಸುವುದು ಅಪ್ಪ-ಅಮ್ಮಂದಿರಿಗೆ ದೊಡ್ಡ ಕೆಲಸವೇನೂ ಅಲ್ಲ.

ಪ್ರಯೋಗಗಳ ಮಹತ್ವ:

ಗಂಟೆಗಟ್ಟಲೆ ಮಾಡುವ ಪಾಠಕ್ಕಿಂತ ಕೆಲವೇ ನಿಮಿಷಗಳ ಚಟುವಟಿಕೆಗಳು ಹೆಚ್ಚಿನ ಪರಿಣಾಮ ಉಂಟುಮಾಡಬಲ್ಲವು. ಇದೂ ಎಳವೆಯಲ್ಲೇ, ಅಂದರೆ ಪ್ರಾಥಮಿಕ ಶಾಲಾ ಹಂತದಲ್ಲೇ ಆದಷ್ಟೂ ಒಳ್ಳೆಯದು. ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುವ ಸಣ್ಣಪುಟ್ಟ ಚಟುವಟಿಕೆಗಳನ್ನು ಅಧ್ಯಾಪಕರು ಮಾಡುವುದಕ್ಕೆ ಸಾಕಷ್ಟು ಅವಕಾಶ ಇದೆ. ಉದಾಹರಣೆಗೆ, ಶಾಲೆಯ ಪರಿಸರದಲ್ಲೋ, ಮನೆಯ ಪಕ್ಕದಲ್ಲೋ ಒಂದು ಗಿಡವನ್ನು ತಾನೇ ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಮಗು ವಹಿಸಿಕೊಳ್ಳುವಂತೆ ಮಾಡಿ, ಅದಕ್ಕೆ ಅಂಕವನ್ನೋ ಬಹುಮಾನವನ್ನೋ ನೀಡುವ ಕೆಲಸ ಮಾಡಿದರೆ ಅದಕ್ಕಿಂತ ದೊಡ್ಡ ಉಪಕ್ರಮದ ಅಗತ್ಯ ಕಾಣಿಸದು. ಹಿಂದೆಲ್ಲಾ ಇಂತಹ ಕೆಲಸಗಳನ್ನು ಮಾಡಿಸುವುದಕ್ಕೆ ಶಾಲೆಗಳ ಸುತ್ತಮುತ್ತ ಸಾಕಷ್ಟು ಸ್ಥಳಾವಕಾಶವೂ ಇತ್ತು, ಸಮಯವೂ ಇತ್ತು. ಮಕ್ಕಳೇ ಪೋಷಿಸುವ ಕೈತೋಟಗಳು ಬಹುತೇಕ ಎಲ್ಲ ಶಾಲೆಗಳಲ್ಲೂ ಇದ್ದವು. ಕಾರ್ಪೋರೇಟ್ ಶಾಲೆಗಳು ತುಂಬಿಹೋಗಿರುವ ಈ ಕಾಲದಲ್ಲಿ ಇಂತಹ ದೃಶ್ಯಗಳು ಅಪರೂಪ.

ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಕೆಲಸಗಳನ್ನು ಪ್ರಾಯೋಗಿಕವಾಗಿಯೇ ಮಾಡುವ ಬೆರಳೆಣಿಕೆಯಷ್ಟು ಪ್ರಯತ್ನಗಳು ಇಂದಿಗೂ ಅಲ್ಲಲ್ಲಿ ಜೀವಂತವಾಗಿವೆ. ಕೇರಳ-ಕರ್ನಾಟಕ ಗಡಿನಾಡು ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಶಾಲೆಯ ಮಕ್ಕಳು ಬಿಡುವಿನ ವೇಳೆಯಲ್ಲಿ ಪೇಪರ್ ಹಾಗೂ ಬಟ್ಟೆಯ ಚೀಲಗಳನ್ನು ತಯಾರಿಸಿ ಆಸ್ಪತ್ರೆ, ಅಂಗಡಿಗಳಿಗೆ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದ್ದರು. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಂತೂ ಮಕ್ಕಳೇ ತಮ್ಮ ಮನೆಗಳಲ್ಲಿ ಇಂಗುಗುಂಡಿಗಳನ್ನು ರಚಿಸುವಂತೆ ಮಾಡಿ ಎಲ್ಲ ಶಾಲೆಗಳಿಗೂ ಮಾದರಿಯಾಗಿತ್ತು. ಆ ಶಾಲೆಯ 5ರಿಂದ 10ನೇ ತರಗತಿಯ ನೂರಕ್ಕೂ ಹೆಚ್ಚು ಮಕ್ಕಳು ತಮ್ಮತಮ್ಮ ಮನೆಯ ಆಸುಪಾಸಿನಲ್ಲಿ ಇಂಗುಗುಂಡಿಗಳನ್ನು ರಚಿಸಿ ಮಳೆನೀರು ಇಂಗುವಂತೆ ಮಾಡಿ, ನೆರೆಹೊರೆಯವರಿಗೂ ಪ್ರೇರಣೆ ನೀಡಿದ್ದರು. ಇಂತಹ ಕೆಲಸಗಳು ಪರೀಕ್ಷೆ ಬರೆದ ಮೇಲೆ ಮರೆತು ಹೋಗುವ ನೀರಸ ಪಾಠಗಳಲ್ಲ, ಜೀವನಪೂರ್ತಿ ಉಳಿಯುವ ನೆನಪುಗಳು. ಇವು ಭವಿಷ್ಯದಲ್ಲಿ ನಿಸ್ಸಂಶಯವಾಗಿ ಅವರ ವ್ಯಕ್ತಿತ್ವದ ಭಾಗವೇ ಆಗುತ್ತವೆ. 

ಪ್ರೌಢಶಾಲೆ, ಪಿಯುಸಿ, ಕಾಲೇಜು ಹಂತಗಳಲ್ಲೂ ಇದು ಮುಂದುವರಿಯಬೇಕು. ಎನ್ನೆಸ್ಸೆಸ್, ಎನ್‌ಸಿಸಿ, ರೋವರ್ಸ್ & ರೇಂಜರ್ಸ್ ನಂತಹ ಯೋಜನೆಗಳು ಇಂತಹ ಚಟುವಟಿಕೆಗಳನ್ನು ಹೇರಳವಾಗಿ ಹೊಂದಿರುವವಾದರೂ, ಎಷ್ಟು ಶಾಲಾ ಕಾಲೇಜುಗಳಲ್ಲಿ ಇವುಗಳ ಪ್ರಾಮಾಣಿಕ ಅನುಷ್ಠಾನ ಆಗುತ್ತದೆ ಎಂಬುದು ಪ್ರಶ್ನಾರ್ಹವೇ. ಅನೇಕ ಕಡೆಗಳಲ್ಲಿ ಪರಿಸರ ಸಂರಕ್ಷಣೆಯ ಚಟುವಟಿಕೆಗಳು, ಶಿಬಿರಗಳು, ಸಾಮುದಾಯಿಕ ಸಹಭಾಗಿತ್ವದ ಯೋಜನೆಗಳು ಫೋಟೋ ದಾಖಲೀಕರಣಕ್ಕಾಗಿ, ಪತ್ರಿಕಾ ಪ್ರಚಾರಕ್ಕಾಗಿಯಷ್ಟೇ ನಡೆಯುವುದುಂಟು. ಇವುಗಳಿಂದ ಪರಿಸರಕ್ಕೂ ಪ್ರಯೋಜನವಿಲ್ಲ, ವಿದ್ಯಾರ್ಥಿಗಳ ಮನಸ್ಸಿನ ಮೇಲೂ ಒಳ್ಳೆಯ ಪರಿಣಾಮ ಬೀರುವುದಿಲ್ಲ.

ಶ್ರೀ ಕ್ಷೇತ್ರ ಧರ್ಮಸ್ಥಳದ ಉಸ್ತುವಾರಿಯಲ್ಲಿ ಉಜಿರೆಯಲ್ಲಿ ಅನೇಕ ದಶಕಗಳಿಂದ ನಡೆದುಕೊಂಡು ಬರುತ್ತಿರುವ ರತ್ನಮಾನಸ, ಸಿದ್ಧವನ ಗುರುಕುಲದಂತಹ ವ್ಯವಸ್ಥೆಗಳು ಪ್ರಕೃತಿಯ ನಡುವೆಯೇ ವಿದ್ಯಾರ್ಥಿಗಳು ಬೆಳೆಯುವ ಹಾಗೆ ಮಾಡಿವೆ. ಇಂತಹ ಉದಾಹರಣೆಗಳು ನಮ್ಮ ಸುತ್ತಮುತ್ತ ಸಾಕಷ್ಟು ಇವೆ. ಇವು ಉಳಿದ ಶಿಕ್ಷಣ ಸಂಸ್ಥೆಗಳಿಗೆ, ಅಧ್ಯಾಪಕರಿಗೆ ಹಾಗೂ ಒಟ್ಟಾರೆ ಶಿಕ್ಷಣ ವ್ಯವಸ್ಥೆಗೆ ಮಾದರಿಯಾಗಬೇಕು. ಒಳಗೆ ಟೊಳ್ಳು ಇರಿಸಿಕೊಂಡು ತೋರಿಕೆಗೆ ಎಂತಹದೇ ನಾಟಕವಾಡಿದರೂ ಅಂತಿಮವಾಗಿ ಯಾವ ಫಲವೂ ಇಲ್ಲ. ಪ್ರಕೃತಿಗೆ ಅರ್ಥವಾಗದ್ದು ಇದೆಯೇ? 

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಜೂನ್ 15, 2021

ಭಾಷೆಯೆಂಬ ಯಾರಿಗೂ ಬೇಡದ ಕೂಸು

'ವಿದ್ಯಾರ್ಥಿಪಥ' ಮೇ 2021ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಶಿಕ್ಷಣ ವ್ಯವಸ್ಥೆಯಲ್ಲಿ ಭಾಷೆಯ ಪಾತ್ರವೇನು ಎಂಬ ಬಗ್ಗೆ ಹಿಂದಿನಿಂದಲೂ ಸಾಕಷ್ಟು ಚರ್ಚೆ ನಡೆದಿದೆ. ಭಾಷೆ ಸಮಾಜದ ಬೆನ್ನೆಲುಬು ಆಗಿರುವಂತೆಯೇ ಶಿಕ್ಷಣದ ತಳಹದಿಯೂ ಹೌದು. ಭಾಷೆಯಿಲ್ಲದೆ ಯಾವ ಶಿಕ್ಷಣವೂ ಅಸಾಧ್ಯ. ಅದು ವಿದ್ಯಾಭ್ಯಾಸದ ಅವಿಭಾಜ್ಯ ಅಂಗ. ಆದರೆ ಶಿಕ್ಷಣ ಎಂದಿನಿಂದ ದುಡ್ಡಿನ ಮರವಾಗಿ ಬದಲಾಯಿತೋ ಅಂದಿನಿಂದ ಶಿಕ್ಷಣಕ್ಕೂ ಭಾಷೆಗೂ ಇರುವ ನಿಕಟ ಸಂಬಂಧವೂ ಶಿಥಿಲವಾಗುತ್ತಾ ಹೋಗಿರುವುದು ನಮ್ಮ ಕಣ್ಣೆದುರೇ ಇರುವ ದುರಂತ.

ಮಿತಿಮೀರಿದ ಇಂಗ್ಲಿಷ್ ವ್ಯಾಮೋಹದಿಂದಾಗಿ ಪ್ರಾಥಮಿಕ ಶಾಲಾ ಹಂತದಿಂದಲೇ ಭಾಷಾ ಕಲಿಕೆಯು ಹಿಂದೆ ಬಿದ್ದಿದೆ. ಅತ್ತ ಇಂಗ್ಲಿಷನ್ನೂ ಅರಗಿಸಿಕೊಳ್ಳಲಾಗದ, ಇತ್ತ ಮಾತೃಭಾಷೆಯನ್ನೂ ಸರಿಯಾಗಿ ಕಲಿಯಲಾಗದ ಶುದ್ಧ ಎಡಬಿಡಂಗಿ ತಲೆಮಾರೊಂದು ಸೃಷ್ಟಿಯಾಗಿದೆ. ಇದು ಕಲಿಕಾ ಮಾಧ್ಯಮಕ್ಕೆ ಸಂಬಂಧಪಟ್ಟ ಪ್ರತ್ಯೇಕ ಪ್ರಶ್ನೆಯಾದರೂ, ಒಟ್ಟಾರೆ ಭಾಷಾ ಶಿಕ್ಷಣದ ಪರಿಸ್ಥಿತಿಯನ್ನು ಅವಲೋಕಿಸುವಾಗ ಪ್ರಾಥಮಿಕ ಶಿಕ್ಷಣದಲ್ಲಿ ಆಗಿರುವ ಈ ಸ್ಥಿತ್ಯಂತರವನ್ನೂ ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ.

ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಸೃಷ್ಟಿಯಾಗಿರುವ ಈ ಅತಂತ್ರ ಪರಿಸ್ಥಿತಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಂತವನ್ನು ದಾಟಿ, ಸ್ನಾತಕ-ಸ್ನಾತಕೋತ್ತರ ಹಂತಕ್ಕೂ ವ್ಯಾಪಿಸಿಕೊಂಡಿದೆ. ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೂ, ಯಾವುದಾದರೂ ಒಂದು ಭಾಷೆಯಲ್ಲಾದರೂ ಸರಿಯಾಗಿ ಸಂವಹನ ಮಾಡಲಾಗದ ತಲೆಮಾರೊಂದು ನಮ್ಮೆದುರಿಗಿರುವುದು ಈ ಕಾಲದ ವ್ಯಂಗ್ಯವೆಂದೇ ಹೇಳಬೇಕು. ಕರ್ನಾಟಕದಲ್ಲಿದ್ದೂ ತಪ್ಪಿಲ್ಲದೆ ಕನ್ನಡ ಬರೆಯಲಾಗದ, ತಡವರಿಸದೆ ಮಾತನಾಡಲಾಗದ, ಅದಿಲ್ಲವೆಂದರೆ ಅನ್ಯ ಭಾಷೆಯಲ್ಲಾದರೂ ಸುಲಲಿತವಾಗಿ ವ್ಯವಹರಿಸಲಾಗದ ಮಂದಿ ಕಾಲೇಜು, ವಿಶ್ವವಿದ್ಯಾನಿಲಯ ಹಂತಕ್ಕೆ ಬಂದಿದ್ದಾರೆಂದರೆ ಅದಕ್ಕೆ ಅವರನ್ನು ಹಳಿಯಬೇಕೇ? ನಮ್ಮ ವ್ಯವಸ್ಥೆಯನ್ನು ದೂಷಿಸಬೇಕೇ?

ಭಾಷಾ ಶಿಕ್ಷಣದ ನಿರ್ಲಕ್ಷ್ಯ:

ಭಾಷಾ ಶಿಕ್ಷಣವನ್ನು ಆರಂಭದಿಂದಲೂ ನಿರ್ಲಕ್ಷಿಸಿರುವುದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ. ತೀರಾ ಎಳವೆಯಲ್ಲೇ ಮಕ್ಕಳ ಮೇಲೆ ಭಾಷೆಯ ಮೂಟೆಯನ್ನು ಹೊರಿಸಬೇಡಿ, ಅವರನ್ನು ಮುಕ್ತವಾಗಿ ಬಿಟ್ಟು ಬಿಡಿ, ತಮ್ಮ ಪರಿಸರದಿಂದಲೇ ಅವರು ಪದಗಳನ್ನು, ವಾಕ್ಯಗಳನ್ನು ಗ್ರಹಿಸುವಂತೆ ಮಾಡಿ, ಭಾಷೆ ಮುಂದೆ ತಾನಾಗಿಯೇ ಅವರದ್ದಾಗುತ್ತದೆ- ಎಂಬ ಸಿದ್ಧಾಂತವೇನೋ ಸರಿಯಾಗಿಯೇ ಇದೆ. ಆದರೆ ಅದನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲಾಗದ ಮತ್ತು ಅದೇ ಧ್ವನಿಯಲ್ಲಿ ಅನುಷ್ಠಾನಗೊಳಿಸಲಾಗದ ನಾವು ಭಾಷೆಯನ್ನು ಬಹಳ ಎತ್ತರದಲ್ಲಿ ಇಟ್ಟುಬಿಟ್ಟಿದ್ದೇವೆ. ಪರಿಣಾಮ, ನಮ್ಮ ಮಕ್ಕಳಿಗೆ ಭಾಷೆಯ ಮಹತ್ವವೂ ಅರಿವಾಗುತ್ತಿಲ್ಲ, ಅದು ಕೈಗೂ ಎಟುಕುತ್ತಿಲ್ಲ. ಪ್ರಾಥಮಿಕ ಶಿಕ್ಷಣವಾದರೂ ಸಂಪೂರ್ಣವಾಗಿ ಮಾತೃಭಾಷೆಯಲ್ಲಿ ದೊರಕುವಂತಾಗಬೇಕು ಎಂಬ ತಜ್ಞರ ಅಭಿಪ್ರಾಯವನ್ನು ಕಡೆಗಣಿಸಿದ್ದರ ಫಲವಾಗಿ, ಇತ್ತ ಮಾತೃಭಾಷೆಯೂ ಅತ್ತ ಇಂಗ್ಲೀಷೂ ಸರಿಯಾಗಿ ಕರಗತವಾಗದೆ ಮಕ್ಕಳು ಪ್ರೌಢಶಾಲೆ ಪ್ರವೇಶಿಸುವಂತೆ ಆಗಿದೆ.

ಪಾಯವೇ ಸರಿಯಿಲ್ಲದ ಮೇಲೆ ಕಟ್ಟಡದ ಪಾಡೇನು? ಪ್ರಾಥಮಿಕ ಶಾಲಾ ಹಂತದಲ್ಲಿ ಭಾಷೆಯನ್ನು ಸರಿಯಾಗಿ ಕಲಿಯದ, ತಪ್ಪುಗಳನ್ನು ತಿದ್ದಿಕೊಳ್ಳದ ಮಕ್ಕಳು ಪ್ರೌಢಶಾಲೆಯಲ್ಲಿ ಏನು ತಾನೇ ಮಾಡುತ್ತಾರೆ? ಅವೇ ತಪ್ಪುಗಳು ಮುಂದುವರಿಯುತ್ತವೆ. ಕಾಲೇಜು ಹಂತಕ್ಕೂ ವ್ಯಾಪಿಸುತ್ತವೆ. ಇಲ್ಲಿ ನಾವು ವರ್ಣಮಾಲೆ ಕಲಿಸಿಕೊಂಡು ಕೂರುವುದಕ್ಕಾಗುತ್ತದೋ ಎಂದು ಕಾಲೇಜು, ವಿಶ್ವವಿದ್ಯಾನಿಲಯ ಹಂತದ ಅಧ್ಯಾಪಕರು ಪ್ರಶ್ನೆ ಮಾಡುತ್ತಾರೆ. ವಿಶ್ವವಿದ್ಯಾನಿಲಯದವರು ಕಾಲೇಜು ಅಧ್ಯಾಪಕರನ್ನು ದೂರುವುದು, ಕಾಲೇಜು ಉಪನ್ಯಾಸಕರು ಪದವಿಪೂರ್ವ ಹಂತವನ್ನು ದೂಷಿಸುವುದು, ಪಿಯು ಕಾಲೇಜುಗಳಲ್ಲಿರುವವರು ಪ್ರೌಢಶಾಲೆಗಳನ್ನು ಟೀಕಿಸುವುದು, ಪ್ರೌಢಶಾಲೆಗಳವರು ಪ್ರಾಥಮಿಕ ಶಾಲೆಗಳನ್ನು ಬೊಟ್ಟುಮಾಡುವುದು ನಿರಂತರವಾಗಿ ನಡೆದುಕೊಂಡು ಬಂದಿದೆಯೇ ಹೊರತು ಸಮಸ್ಯೆಗೆ ಪರಿಹಾರ ಲಭಿಸಿಲ್ಲ. 

ಯಾರಿಗೂ ಬೇಡದ ಕೂಸು:

ಎಲ್ಲರೂ ಹಣದ ಬಗ್ಗೆಯೇ ತಲೆಕೆಡಿಸಿಕೊಂಡಿರುವಾಗ ಭಾಷೆಯೆಂಬ ಕೂಸು ಯಾರಿಗೆ ಬೇಕು? ಪದವಿಪೂರ್ವ ಹಂತದ ಶಿಕ್ಷಣವಂತೂ ಇಂದು ಸಂಪೂರ್ಣ ವ್ಯಾಪಾರವಾಗಿ ಬದಲಾಗಿದೆ. ವಾಣಿಜ್ಯ ಮತ್ತು ವಿಜ್ಞಾನದ ಕೋರ್ಸುಗಳು ಹಣವನ್ನೇ ಸುರಿಸುವ ಕಲ್ಪವೃಕ್ಷ, ಕಾಮಧೇನುಗಳಾಗಿವೆ. ಇಂಜಿನಿಯರಿಂಗ್, ಮೆಡಿಕಲ್ ಹೊರತಾಗಿ ತಮ್ಮ ಮಕ್ಕಳು ಇನ್ನೇನು ಓದಿದರೂ ನಿಷ್ಪ್ರಯೋಜಕ ಎಂಬ ಭಾವ ಪೋಷಕರಲ್ಲಿ ಮೊದಲು ಬೆಳೆಯಿತೋ, ಅಥವಾ ಅಂತಹ ಮನಸ್ಥಿತಿಯನ್ನು ಶಿಕ್ಷಣ ಸಂಸ್ಥೆಗಳೇ ಬೆಳೆಸಿದವೋ, ಅಂತೂ ಎಲ್ಲರೂ ವೃತ್ತಿಪರ ಕೋರ್ಸುಗಳನ್ನೇ ಬೆಂಬತ್ತಿದ ಪರಿಣಾಮವಾಗಿ ಶಿಕ್ಷಣದ ಮಾರುಕಟ್ಟೆ ಯಾರ ಹತೋಟಿಗೂ ಸಿಕ್ಕದ ಹುಚ್ಚು ಕುದುರೆಯಾಗಿದೆ.

ಕಾರ್ಪೋರೇಟ್ ಸಂಸ್ಥೆಗಳಾಗಿ ಬೆಳೆದಿರುವ ಖಾಸಗಿ ಪದವಿಪೂರ್ವ ಕಾಲೇಜುಗಳು ಪರ್ಸೆಂಟೇಜುಗಳ ಜಿದ್ದಿಗೆ ಬಿದ್ದಿರುವ ಪೋಷಕರಿಗೆ ಬಲು ಆಕರ್ಷಕವೆನಿಸಿವೆ. ಇವರ ಮಧ್ಯೆ ಸಿಲುಕಿಕೊಂಡಿರುವ ಮಕ್ಕಳು ಅಂಕಗಳಿಸುವ ಯಂತ್ರಗಳು ಅಷ್ಟೇ. ತಮ್ಮ ಕಾಲೇಜು, ಅಧ್ಯಾಪಕರು, ಪೋಷಕರು ಹೇಳುವುದಷ್ಟನ್ನೇ ಪಾಲಿಸುವ ಅನಿವಾರ್ಯತೆಗೆ ಸಿಲುಕಿರುವ ಈ ಮಕ್ಕಳು ಅಸಹಾಯಕ ಬಂದಣಿಕೆಗಳು. ತಾವೇನು ಮಾಡುತ್ತಿದ್ದೇವೆ, ತಾವೇನು ಮಾಡಬೇಕಿದೆ ಎಂಬ ಯಾವ ಸ್ವಂತ ಯೋಚನೆಯೂ ಇವರ ಹತ್ತಿರ ಸುಳಿಯಲಾಗದ ಭ್ರಮೆಯ ಭದ್ರ ಕೋಟೆಯೊಳಗೆ ಇವರೆಲ್ಲ ಬಂಧಿಗಳಾಗಿದ್ದಾರೆ.

ಇಂತಹ ಕಾಲೇಜುಗಳಲ್ಲಿ ಭಾಷಾ ಶಿಕ್ಷಣಕ್ಕೆ ಕನಿಷ್ಠ ಸ್ಥಾನಮಾನವೂ ಇಲ್ಲ. ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಿಸಿಎಂಬಿ ಇತ್ಯಾದಿ ಕೋರ್ ಸಬ್ಜೆಕ್ಟ್ಗಳನ್ನಷ್ಟೇ ಗಂಭೀರವಾಗಿ ತೆಗೆದುಕೊಂಡರೆ ಸಾಕು ಎಂಬ ಭಾವನೆಯನ್ನು ಕಾಲೇಜುಗಳೇ ವ್ಯವಸ್ಥಿತವಾಗಿ ಬೆಳೆಸಿವೆ. ಅವರಿಗೆ ಕನ್ನಡ, ಇಂಗ್ಲೀಷ್ ಮತ್ತಿತರ ಭಾಷಾ ಪಾಠಗಳು ಕಾಲಯಾಪನೆಯ ಅವಧಿಗಳಷ್ಟೇ. ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಅವು ನಾಮಕಾವಾಸ್ತೇ ವಿಭಾಗಗಳು ಅಷ್ಟೇ. ಒಬ್ಬರೋ ಇಬ್ಬರೋ ಅಧ್ಯಾಪಕರಿದ್ದರೆ ಧಾರಾಳ ಆಯ್ತು. ಇಲಾಖೆಗಳ ಮತ್ತು ಅಧಿಕಾರಿಗಳ ಮಾಹಿತಿಗಾಗಿ ವೇಳಾಪಟ್ಟಿಯಲ್ಲಿ ಎಲ್ಲವಕ್ಕೂ ಸಮಾನ ಪ್ರಾಶಸ್ತ್ಯ. ವಾಸ್ತವ ಬೇರೆಯೇ ಇರುತ್ತದೆ. ಕೋರ್ ಸಬ್ಜೆಕ್ಟ್ಗಳ ಅಧ್ಯಾಪಕರು ಗೈರುಹಾಜರಾಗಿದ್ದರೆ, ಆ ಖಾಲಿ ಅವಧಿಯನ್ನು ತುಂಬಲು ಈ ಭಾಷಾ ಶಿಕ್ಷಕರುಗಳೆಂಬ ಜೋಕರುಗಳು ಬೇಕು. ದಿನವಿಡೀ ಬೇರೆ ವಿಷಯಗಳನ್ನು ಕೇಳಿ ದಣಿದಿರುವವರ ಎದುರು ಇವರು ಹೋಗಿ ಹಾಡಿ ಕುಣಿದು ಮನರಂಜನೆ ನೀಡಬೇಕು. ಇಂತಹ ಪರಿಸ್ಥಿತಿಯನ್ನು ಶಿಕ್ಷಣ ಸಂಸ್ಥೆಗಳೇ ಸೃಷ್ಟಿಸಿರುವುರಿಂದ ಭಾಷಾ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೂ ಗೌರವ ಇಲ್ಲ. 

ಹಣದ ಆಸೆಗೆ ಬಿದ್ದಿರುವ ಮ್ಯಾನೇಜ್ಮೆಂಟುಗಳು ದಾಖಲಾತಿ ಹೆಚ್ಚಿಸಲು ಎಲ್ಲ ಬಗೆಯ ನಾಟಕಗಳನ್ನು ಆಡಿರುತ್ತವೆ. ಎಸ್ಸೆಸೆಲ್ಸಿ ಫಲಿತಾಂಶ ಬರುತ್ತಿದ್ದಂತೆ ಪದವಿ ಪೂರ್ವ ಕಾಲೇಜುಗಳ ಪ್ರತಿನಿಧಿಗಳು ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಅವರ ಮನೆಗೇ ಹೋಗಿ ಹೂಗುಚ್ಛ ನೀಡಿ ತಮ್ಮ ಸಂಸ್ಥೆಗೆ ಸ್ವಾಗತ ಕೋರುವುದು, ಪೋಷಕರಿಗೆ ಪದೇಪದೇ ಫೋನ್ ಮಾಡಿ ತಮ್ಮ ಇರುವಿಕೆಯನ್ನು ನೆನಪಿಸುವುದು, ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ತರಹೇವಾರಿ ಪ್ರಹಸನ ಆಡುವುದು ಇತ್ಯಾದಿಗಳೆಲ್ಲ ನಿರಂತರ ನಡೆಯುತ್ತವೆ. 

ಇದರಿಂದಾಗಿ, ‘ನಾವೇನು ನಿಮ್ಮ ಕಾಲೇಜನ್ನು ಹುಡುಕಿಕೊಂಡು ಬಂದಿಲ್ಲ, ನೀವೇ ನಮ್ಮನ್ನು ಹುಡುಕಿಕೊಂಡು ಬಂದದ್ದು. ನಾವು ಲಕ್ಷಾಂತರ ರೂಪಾಯಿ ಶುಲ್ಕ ನೀಡಿರುವುದರಿಂದ ನೀವು ಬದುಕಿದ್ದೀರಿ. ನಮ್ಮಿಂದಾಗಿ ನೀವು’ ಎಂಬ ಭಾವನೆ ವಿದ್ಯಾರ್ಥಿಗಳಲ್ಲೇ ಬಲವಾಗಿ ಬೇರೂರಿರುತ್ತದೆ. ಹೀಗಾಗಿ ಅಧ್ಯಾಪಕರ ಬಗ್ಗೆ ಅವರಲ್ಲಿ ಸದಾ ಉಡಾಫೆ; ಅದರಲ್ಲೂ ಭಾಷಾ ಶಿಕ್ಷಕರೆಂದರೆ ಅವರಿಗೆ ದಿವ್ಯನಿರ್ಲಕ್ಷ್ಯ. ನಿಮ್ಮ ಇಂಜಿನಿಯರಿಂಗ್, ಮೆಡಿಕಲ್ ಸೀಟುಗಳಿರುವುದು ಕೋರ್ ಸಬ್ಜೆಕ್ಟ್ಗಳಲ್ಲೇ ಹೊರತು ಭಾಷಾ ವಿಷಯಗಳಲ್ಲಿ ಅಲ್ಲ ಎಂಬ ಭ್ರಮೆಯನ್ನು ಆಯಾ ಅಧ್ಯಾಪಕರೇ ವಿದ್ಯಾರ್ಥಿಗಳಲ್ಲಿ ವ್ಯವಸ್ಥಿತವಾಗಿ ಬಿತ್ತುತ್ತಾರೆ.  ಹೀಗಾಗಿ ಭಾಷಾ ಪಾಠಗಳನ್ನಾಗಲೀ ಪಾಠ ಮಾಡುವವರನ್ನಾಗಲೀ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಅವರಿಗೆ ಅವರೇ ತೀರ್ಮಾನಿಸಿರುತ್ತಾರೆ. ಬಹುತೇಕರಿಗೆ ‘ಪಾಸ್’ ಆದರೆ ಸಾಕು. ಪಾಸ್ ಆಗಲೂ ಅವರು ಸ್ವಂತ ಪ್ರಯತ್ನ ಹಾಕಲು ಸಿದ್ಧರಿಲ್ಲ. ಅದು ಅವರಿಗೆ ‘ಟೈಮ್ ವೇಸ್ಟ್’. ಭಾಷಾ ಶಿಕ್ಷಕರೇ ಅವರಿಗೆ ನೋಟ್ಸ್ ಸಿದ್ಧಪಡಿಸಿಕೊಡಬೇಕು. ಅದನ್ನು ಅಷ್ಟೋ ಇಷ್ಟೋ ಉರುಹೊಡೆದು ಅವರು ತೇರ್ಗಡೆಯಾದರೆ ಸಾಕು. ಇದರ ನಡುವೆ ಸ್ವತಂತ್ರ ಓದು, ಸ್ವತಂತ್ರ ಟಿಪ್ಪಣಿ, ಆ ಮೂಲಕ ಬೆಳೆಯುವ ಸ್ವಂತಿಕೆಗಳೆಲ್ಲ ಶುದ್ಧ ತಮಾಷೆಯೇ. 

ಹೀಗಿದ್ದೂ ತಮಗೇಕೆ ಭಾಷಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಬರುತ್ತಿಲ್ಲ ಎಂಬ ಚಿಂತೆ ಕೆಲವು ಅಂಕವೀರರದ್ದು. ಗಣಿತದಲ್ಲೋ ರಸಾಯನಶಾಸ್ತ್ರದಲ್ಲೋ ನೂರಕ್ಕೆ ನೂರು ಅಂಕ ಬರುತ್ತದೆ, ಈ ಕನ್ನಡ-ಇಂಗ್ಲೀಷ್ ಮೇಷ್ಟ್ರುಗಳು ಬರೀ 97-98 ಕೊಟ್ಟಿದ್ದಾರೆ, ನೂರಕ್ಕೆ ನೂರು ಕೊಡಲು ಏನು ಧಾಡಿ ಎಂಬ ಅನುಮಾನ ಅವರದ್ದು. ಇವರಿಗೇಕೆ ನೂರಕ್ಕೆ ನೂರು ಅಂಕ ಕೊಟ್ಟಿಲ್ಲ ಎಂದು ಕಾಲೇಜು ಮುಖ್ಯಸ್ಥರು ಅಧ್ಯಾಪಕರನ್ನೇ ಕರೆದು ವಿಚಾರಿಸುವ ಪ್ರಸಂಗಗಳು ನಡೆಯುವುದಿದೆಯೇ ಹೊರತು, ಖುದ್ದು ವಿದ್ಯಾರ್ಥಿಗಳೇ ಅಧ್ಯಾಪಕರನ್ನು ಕಂಡು ತಾವು ಮಾಡಿದ್ದೇನು, ಮಾಡಬೇಕಿರುವುದೇನು ಎಂದು ಸಲಹೆ ಪಡೆಯುವ ಉದಾಹರಣೆಗಳಿಲ್ಲ. 

ಮೇಷ್ಟ್ರುಗಳಿಗೇನು ಗೊತ್ತಿದೆ, ನಾವೇ ಜಗತ್ತನ್ನು ತಿರುಗಾ ಮುರುಗಾ ಮಾಡಬಲ್ಲ ಸಮರ್ಥರು ಎಂಬ ಭ್ರಮೆಗಳಲ್ಲಿ ಮುಳುಗಿರುವ ಈ ನೂರು ಶೇಕಡಾ ಅಂಕವೀರರಿಗೆ ಬದುಕಿನ ವಾಸ್ತವಗಳ ಒಂದು ಶೇಕಡಾ ಅರಿವೂ ಇಲ್ಲ ಎಂಬುದು ವಿಷಾದದ ಸಂಗತಿ. ಇವರು ನಾಳೆ ಇಂಜಿನಿಯರು ಡಾಕ್ಟರುಗಳೂ ಆಗಬಹುದು, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆಯನ್ನೂ ಮಾಡಬಹುದು. ಆದರೆ ಮನುಷ್ಯರಾಗಿ ಬದುಕುವ ಬಂಡವಾಳ ಇದೆಯೇ ಎಂದು ಕೇಳಿದರೆ ನಮ್ಮ ಸುತ್ತಮುತ್ತಲಿನ ನೂರೆಂಟು ದುರಂತ ಕಥೆಗಳು ಕಣ್ಣೆದುರು ಬರುತ್ತವೆ.

ಬರಡು ಬದುಕಿನ ಬುದ್ಧಿವಂತರು:

ಈ ಕಂಠಪಾಠದ ಅತಿಬುದ್ಧಿವಂತರ ಭಾವಕೋಶಗಳೇ ವಿಕಸನಗೊಂಡಿಲ್ಲ. ಕಾಲೇಜು-ಟ್ಯೂಶನುಗಳೆಂಬ ಕಾಲಯಂತ್ರದಲ್ಲಿ ಸಿಲುಕಿ ಪರ್ಸೆಂಟೇಜುಗಳ ಲೆಕ್ಕಾಚಾರದಲ್ಲಿ ಬಾಲ್ಯ-ತಾರುಣ್ಯವನ್ನು ಕಳೆದಿರುವ ಇವರು ಸೂರ್ಯೋದಯ ಸೂರ್ಯಾಸ್ತಗಳನ್ನು ಸರಿಯಾಗಿ ಕಂಡಿಲ್ಲ. ಮಳೆಗಾಲ ಚಳಿಗಾಲಗಳ ಸೊಗಸು ಅನುಭವಿಸಿಲ್ಲ. ಎಳೆಬಿಸಿಲು, ಹೊಳೆಯುವ ಆಕಾಶ, ಹೂತಳಿರುಗಳ ವಸಂತ, ಧುಮ್ಮಿಕ್ಕುವ ಜಲಪಾತ, ಹಕ್ಕಿಪಕ್ಷಿಗಳ ಹಾಡು, ಹಸಿರು ತುಂಬಿದ ಕಾಡು- ಇವನ್ನು ಕಣ್ಣಾರೆ ಕಂಡದ್ದು ಬಿಡಿ, ಕಥೆ ಕವಿತೆಗಳಲ್ಲೂ ಓದಿಲ್ಲ. ಪಠ್ಯಪುಸ್ತಕಗಳ ಹೊರತಾಗಿ ಇನ್ನೇನೂ ಗೊತ್ತಿಲ್ಲ.

ಇವರು ಡಿಗ್ರಿಗಳನ್ನು, ಉದ್ಯೋಗವನ್ನು ಪಡೆದಾಗಿದೆ. ಒಳ್ಳೆಯ ಸಂಬಳವೂ ಇದೆ. ಆದರೆ ಬದುಕು ಗೊತ್ತಿಲ್ಲ. ಪರಿಸರದ ನಂಟು ಇಲ್ಲ. ನೆಂಟರಿಷ್ಟರೆಂದರೆ ಯಾರೆಂದು ಗೊತ್ತಿಲ್ಲ. ಮನುಷ್ಯ ಸಂಬಂಧಗಳ ಪರಿಚಯ ಇಲ್ಲ. ಮನಸ್ಸಿಗೆ ಬೇಸರವಾದರೆ ಹಂಚಿಕೊಳ್ಳಲು ಆಪ್ತ ಸ್ನೇಹಿತರಿಲ್ಲ. ಹೆಚ್ಚೇಕೆ, ಮದುವೆಯಾದ ಬಳಿಕ ಕೆಲವು ವರ್ಷವಾದರೂ ಮಧುರ ಜೀವನವನ್ನು ನಡೆಸುವ ವಿಧಾನ ಗೊತ್ತಿಲ್ಲ. ಕೈತುಂಬಾ ಸಂಬಳ, ಝಗಮಗಿಸುವ ಮನೆ, ಐಷಾರಾಮಿ ಕಾರು ಎಲ್ಲ ಇದ್ದೂ ಇವುಗಳನ್ನು ಅನುಭವಿಸಲು ಹೆಣ್ಣಿನ ಜತೆ ಗಂಡನಿಲ್ಲ, ಗಂಡಿನ ಜತೆ ಹೆಂಡತಿಯಿಲ್ಲ. ಮದುವೆಯಾಗಿ ವರ್ಷಗಳು ಹೋಗಲಿ, ಕೆಲವೇ ತಿಂಗಳಿಗೆ ಕಲಹ ಕೋಲಾಹಲ, ವಿಷಮ ದಾಂಪತ್ಯ, ಕೊನೆಗೆ ವಿಚ್ಛೇದನ, ಮರುಮದುವೆ, ಮತ್ತೆ ಇನ್ನೇನೋ.

ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡರೆ ಮನುಷ್ಯ ಬದುಕುವುದನ್ನು ಕಲಿತಿಲ್ಲ ಎಂಬುದೇ ಉತ್ತರ. ಎಷ್ಟೊಂದು ಬಡತನ, ಕಷ್ಟ ಕಾರ್ಪಣ್ಯಗಳಿದ್ದೂ ನಮ್ಮ ಹಿರಿಯ ತಲೆಮಾರು ತುಂಬುಜೀವನವನ್ನು ನಡೆಸುತ್ತಿತ್ತು. ಹಾಗಾದರೆ ಸಂಪಾದನೆಯೇ ಬದುಕಿನ ಸಂತೋಷದ ಮೂಲ ಅಲ್ಲ. ಬೇರೇನೋ ಇದೆ ಎಂದಾಯಿತು. ಇದನ್ನು ಅರ್ಥಮಾಡಿಕೊಳ್ಳಲು ನಮ್ಮ ಹೊಸ ತಲೆಮಾರು ಯಾಕೆ ವಿಫಲವಾಗಿದೆ ಎಂದು ಕೇಳಿದರೆ ಮತ್ತೆ ನಾವು ಬಂದುನಿಲ್ಲುವುದು ನಮ್ಮ ಶಿಕ್ಷಣ ವ್ಯವಸ್ಥೆಗೇ. ಹೌದು, ಅಲ್ಲಿಯೇ ನಾವು ಮುಗ್ಗರಿಸಿದ್ದೇವೆ. ಅದನ್ನು ಒಳಗಿನಿಂದ ಸರಿಪಡಿಸದೆ ಹೊರಗಿನಿಂದ ಎಷ್ಟೇ ಮುಲಾಮು ಹಚ್ಚಿದರೂ ಈ ಕಾಯಿಲೆ ವಾಸಿಯಾಗುವುದೆಂತು?

ಭಾಷೆ ಯಾಕೆ ಬೇಕು?

ಭಾಷಾ ಶಿಕ್ಷಣ ನಿರ್ಲಕ್ಷ್ಯಕ್ಕೊಳಗಾದದ್ದೇ ಇಷ್ಟು ದೊಡ್ಡ ದುರಂತದ ಮೂಲ ಕಾರಣ. ಬುದ್ಧಿ-ಭಾವಗಳ ವಿದ್ಯುದಾಲಿಂಗನವೇ ಭಾಷೆ ಎಂಬ ಮಾತಿದೆ. ಮೆದುಳನ್ನೂ ಹೃದಯವನ್ನೂ ಬೆಸೆಯುವ ಸೇತು ಅದು. ಮೆದುಳು ಎಷ್ಟೇ ಮುಂದುವರಿದರೂ ಅದಕ್ಕೆ ಹೃದಯದ ಸಾಂಗತ್ಯ ದೊರೆಯದೆ ಹೋದರೆ ಆ ಪ್ರಗತಿಗೆ ಮೌಲ್ಯವಿಲ್ಲ. ಭೂಮಿಗೂ ಮಂಗಳನಿಗೂ ಇರುವ ಅಂತರವೇನೋ ಕಡಿಮೆಯಾಗಿದೆ, ಆದರೆ ಹೃದಯ-ಹೃದಯಗಳ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ ಎಂಬ ಆತಂಕ ಹಿರಿಯ ತಲೆಮಾರಿನಿಂದ ವ್ಯಕ್ತವಾಗುತ್ತಲೇ ಇದೆ. ಬುದ್ಧಿಗೆ ಭಾವಸ್ಪರ್ಶ ನೀಡುವ ಕೆಲಸವನ್ನು ಮಾಡುವುದು ಭಾಷೆ. ಅದು ಕೇವಲ ಸಂವಹನಕ್ಕೆ ಅಗತ್ಯವಿರುವ ಸಂಕೇತ ವ್ಯವಸ್ಥೆ ಮಾತ್ರವಲ್ಲ. ಆ ಸಂಕೇತಗಳನ್ನು ಪರಸ್ಪರ ಬೆಸೆಯುವ ಒಂದು ಅಗೋಚರ ಶಕ್ತಿಯೂ ಹೌದು.

ಭಾಷೆ ಸಾಹಿತ್ಯದ ಜಗತ್ತನ್ನೂ ವ್ಯಕ್ತಿಗೆ ತೆರೆದುತೋರಿಸುತ್ತದೆ. ಭಾಷಾ ವಿಷಯವನ್ನು ಅಧ್ಯಯನ ಮಾಡುತ್ತಲೇ ವಿದ್ಯಾರ್ಥಿಗೆ ವಿವಿಧ ಕವಿಗಳು, ಕಥೆಗಾರರು, ಲೇಖಕರ ಪರಿಚಯವಾಗುತ್ತದೆ. ಕಥೆ, ಕವಿತೆ, ನಾಟಕ, ವಿಡಂಬನೆಗಳನ್ನು ಓದುತ್ತಲೇ, ಪುರಾಣ, ಇತಿಹಾಸ, ವಚನಗಳನ್ನು ಕೇಳುತ್ತಲೇ ಅವುಗಳ ಮೌಲ್ಯಗಳೂ ಆತನೊಳಗೆ ನಿಧಾನವಾಗಿ ಇಳಿಯುತ್ತಾ ಹೋಗುತ್ತದೆ. ಹೊಲವೊಂದನ್ನು ಹಸನು ಮಾಡಿ, ಹದವಾಗಿ ಗೊಬ್ಬರ ಬೆರೆಸಿ, ಸುಪುಷ್ಟ ಬೀಜಗಳನ್ನು ಬಿತ್ತಿ, ಹಿತವಾಗಿ ನೀರುಣಿಸುವ ಒಂದು ವಿಶಿಷ್ಟ ದೀರ್ಘಕಾಲೀನ ಪ್ರಕ್ರಿಯೆ ಇದು. ಇದು ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೂ ದೊರೆತಾಗ ಮಾತ್ರ ಅವರಿಂದ ಒಂದು ಆರೋಗ್ಯಕರ ಸಮಾಜವನ್ನೂ, ಮೌಲ್ಯಯುತ ನಡವಳಿಕೆಯನ್ನೂ ನಿರೀಕ್ಷಿಸುವುದು ಸಾಧ್ಯ. 

ಬದುಕಿನ ಬಗ್ಗೆ ಪ್ರೀತಿ, ಒಡನಾಡಿಗಳ ಬಗ್ಗೆ ಸಹಾನುಭೂತಿ, ಕಷ್ಟದಲ್ಲಿರುವವರನ್ನು ಕಂಡಾಗ ಅನುಕಂಪ ಇವೆಲ್ಲ ಸಾಧ್ಯವಾಗುವುದು ವ್ಯಕ್ತಿಯ ಭಾವಕೋಶಗಳು ಪರಿಪೂರ್ಣವಾಗಿ ವಿಕಸನಗೊಂಡಾಗ ಮಾತ್ರ. ಆಧುನಿಕ ಪರಿಭಾಷೆಯಲ್ಲಿ ಇದನ್ನೇ ನಾವು ವ್ಯಕ್ತಿತ್ವ ವಿಕಸನ ಎಂಬ ಸರಳ ಪದದಿಂದ ಗುರುತಿಸುತ್ತೇವೆ. ಇಂಥ ಗುಣಗಳಿಲ್ಲದ ಮನುಷ್ಯನಿಗೂ ಕಲ್ಲುಬಂಡೆಗಳಿಗೂ ಏನು ವ್ಯತ್ಯಾಸ?

ಭಾಷೆ ಕಲಾವಿಭಾಗದ ಒಂದು ವಿಷಯ, ಮಾನವಿಕ ಶಾಸ್ತ್ರಗಳನ್ನು ಅಧ್ಯಯನ ಮಾಡುವವರು ಮಾತ್ರ ಭಾಷೆಯನ್ನು ಗಂಭೀರವಾಗಿ ತೆಗೆದುಕೊಂಡರೆ ಸಾಕು ಎಂಬ ಒಂದು ತಪ್ಪು ತಿಳುವಳಿಕೆ ಈಗಲೂ ಬಹುಪಾಲು ಹರಡಿಕೊಂಡಿದೆ. ವಿಜ್ಞಾನ, ವೈದ್ಯಕೀಯ, ತಾಂತ್ರಿಕ ವಿಷಯಗಳಲ್ಲಿ ವ್ಯಾಸಂಗ ಮಾಡುವವರು ಭಾಷಾ ವಿಷಯಗಳನ್ನು ಓದಿ ಮಾಡುವುದೇನಿದೆ ಎಂಬ ಉಡಾಫೆ ವಿದ್ಯಾರ್ಥಿಗಳಲ್ಲೇಕೆ, ಸಾಕಷ್ಟು ಮಂದಿ ಅಧ್ಯಾಪಕರಲ್ಲೂ ಇದೆ. ಭೌತಶಾಸ್ತ್ರವನ್ನೋ ಗಣಿತವನ್ನೋ ಅಭ್ಯಾಸ ಮಾಡುವವನಿಗೆ ಕನ್ನಡವನ್ನೋ ಹಿಂದಿಯನ್ನೋ ಕಲಿತು ಆಗುವುದೇನಿದೆ ಎಂಬ ಪ್ರಶ್ನೆ ಅವರದ್ದು.

ಭೌತಶಾಸ್ತ್ರವೋ ಜೀವಶಾಸ್ತ್ರವೋ ಮತ್ತೊಂದು ವಿಜ್ಞಾನವೋ ವ್ಯಕ್ತಿಗೆ ದಕ್ಕಬೇಕೆಂದರೆ ಅದಕ್ಕೆ ಭಾಷೆ ಎಂಬ ಮಾಧ್ಯಮ ಬೇಕೇಬೇಕು. ಅದು ತನ್ನ ಸ್ವರೂಪವನ್ನು ಅಭಿವ್ಯಕ್ತಗೊಳಿಸಬೇಕಾದರೆ, ವ್ಯಕ್ತಿಯಿಂದ ವ್ಯಕ್ತಿಗೆ ಪ್ರವಹಿಸಬೇಕಾದರೆ ಭಾಷೆಯ ಬಲ ಅನಿವಾರ್ಯ. ಜ್ಞಾನವೆಂಬ ಸ್ಥೂಲ ಜಗತ್ತಿಗೆ ಕಲೆ, ವಾಣಿಜ್ಯ, ವಿಜ್ಞಾನಗಳೆಂಬ ಭೇದವಿಲ್ಲ. ಎಲ್ಲವೂ ಜ್ಞಾನವೇ. ಭಾಷೆಯೆಂಬ ಕೀಲಿಕೈ ಇಲ್ಲದೆ ಆ ಜಗತ್ತು ತೆರೆದುಕೊಳ್ಳದು. ವ್ಯಕ್ತಿ ಆ ಜ್ಞಾನವನ್ನು ಪಡೆದುಕೊಂಡ ಮೇಲೆ ಅದನ್ನು ಇನ್ನಷ್ಟು ಆಕರ್ಷಕವಾಗಿ ಹೊರಜಗತ್ತಿಗೆ ತೆರೆದುತೋರಿಸಬಲ್ಲ. ಅದಕ್ಕೆ ಮತ್ತೆ ನೆರವಾಗುವುದು ಭಾಷೆ ಮತ್ತು ಅದರ ಮೂಲಕ ಅವನಲ್ಲಿ ಅರಳಿರುವ ಸೃಜನಶೀಲತೆ.

ಭಾಷಾ ಶಿಕ್ಷಣದ ವಿಷಯದಲ್ಲಿ ನಾವು ಎಚ್ಚೆತ್ತುಕೊಳ್ಳದೇ ಹೋದರೆ ಉಳಿಗಾಲವಿಲ್ಲ. ಈಗಲಾದರೂ ಶಾಲಾ-ಕಾಲೇಜುಗಳಲ್ಲಿ ಭಾಷಾ ಶಿಕ್ಷಣಕ್ಕೆ ಸೂಕ್ತ ಪ್ರಾಧಾನ್ಯ ಕೊಡದೇ ಇದ್ದರೆ ಈಗಾಗಲೇ ಉಂಟಾಗಿರುವ ಹಾನಿಯನ್ನು ಮುಂದೆಂದೂ ಸರಿಪಡಿಸಲಾರೆವು. ‘ಭಾಷೆ ರಾಷ್ಟ್ರದ ಪ್ರಗತಿಯ ಮುಖ್ಯ ಸಾಧನ ಮತ್ತು ಸೂಚ್ಯಂಕ’ ಎಂಬ ವಿವೇಕಾನಂದರ ಮಾತು ನಮಗೆ ನೆನಪಾಗಬೇಕು. ಜತೆಗೆ, ಪ್ರಗತಿ ಎಂದರೆ ಸಂಪತ್ತಿನ ಸಂಗ್ರಹ ಅಲ್ಲ, ಬದುಕಿನ ಸಂತೋಷದ ಅಭಿವೃದ್ಧಿ ಎಂಬುದೂ ಅರಿವಾಗಬೇಕು.

- ಸಿಬಂತಿ ಪದ್ಮನಾಭ ಕೆ. ವಿ.