ಜನವರಿ 2021ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ
ಮಾನವನಲ್ಲಿರುವ ಅಭಿಜಾತ ಪರಿಪೂರ್ಣತೆಯ ಅಭಿವ್ಯಕ್ತಿಯೇ ಶಿಕ್ಷಣ – ಎಂಬುದು ಸ್ವಾಮಿ ವಿವೇಕಾನಂದರ ಬಹುಪ್ರಸಿದ್ಧ ವಾಣಿ.ಶಿಕ್ಷಣದ ಉದ್ದೇಶ ಏನು, ನಮ್ಮ ದೇಶದ ಶಿಕ್ಷಣದಲ್ಲಿರುವ ಲೋಪದೋಷಗಳೇನು, ಅವುಗಳನ್ನು ಹೋಗಲಾಡಿಸಲು ನಾವು ಮಾಡಬೇಕಾದ್ದೇನು ಎಂಬುದನ್ನು ಶತಮಾನದ ಹಿಂದೆಯೇ ವಿಸ್ತøತ ಪರಿಶೀಲನೆಗೆ ಒಳಪಡಿಸಿದವರು ಅವರು. ಇಷ್ಟು ವರ್ಷಗಳ ನಂತರ ಅವರ ಮಾತುಗಳನ್ನು ನೆನಪಿಗೆ ತಂದುಕೊಂಡರೆ ಎರಡು ಅಂಶಗಳು ಸ್ಪಷ್ಟವಾಗುತ್ತವೆ: ಒಂದು, ದಾರ್ಶನಿಕರ ಮಾತು ಸಾರ್ವಕಾಲಿಕ ಸತ್ಯ, ಅವು ದೇಶಕಾಲಗಳನ್ನು ಮೀರಿನಿಲ್ಲುವಂಥವು; ಎರಡು: ನೂರು ವರ್ಷ ಕಳೆದರೂ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಮುಖ ದೋಷಗಳು ಹಾಗೆಯೇ ಉಳಿದುಕೊಂಡಿವೆ – ಎಂಬುದು. ಮೊದಲನೆಯದ್ದು ಹೆಮ್ಮೆಯ ವಿಚಾರವಾದರೆ, ಎರಡನೆಯದ್ದು ಆತ್ಮಾವಲೋಕನವನ್ನು ಅಪೇಕ್ಷಿಸುವ ಅಂಶ.
ಆರಂಭದಲ್ಲೇ ಹೇಳಿರುವ Education is the manifestation of perfection already in man – ಶಿಕ್ಷಣವೆಂದರೆ ವ್ಯಕ್ತಿಯಲ್ಲಿರುವ ಅಭಿಜಾತ ಪರಿಪೂರ್ಣತೆಯನ್ನು ಮತ್ತೆ ಅಭಿವ್ಯಕ್ತಿಸುವುದು ಎಂಬ ಮಾತು ವಿವೇಕಾನಂದರಿಗೆ ಶಿಕ್ಷಣದ ಬಗೆಗಿದ್ದ ಒಟ್ಟಾರೆ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಒಬ್ಬೊಬ್ಬ ಜೀವಿಯೂ ಪರಾಶಕ್ತಿಯ ಸೃಷ್ಟಿ; ಪ್ರತಿಯೊಬ್ಬನ ಒಳಗಿರುವುದೂ ಅತ್ಯಂತ ಶ್ರೇಷ್ಠ ಆತ್ಮ; ಶಿಕ್ಷಣವೆಂದರೆ ವ್ಯಕ್ತಿಗೆ ಹೊಸದೇನನ್ನೂ ಹೇಳಿಕೊಡುವುದಲ್ಲ; ಆತನಲ್ಲಿ ಎಲ್ಲವೂ ಹುಟ್ಟಿನಿಂದಲೇ, ಸ್ವಾಭಾವಿಕವಾಗಿಯೇ ಇರುತ್ತದೆ; ಅದು ಸಮಗ್ರವಾಗಿ ಅಭಿವ್ಯಕ್ತಗೊಳ್ಳುವಂತೆ ಮಾಡಿದರಷ್ಟೇ ಸಾಕು- ಎಂಬ ಅವರ ಚಿಂತನೆ ವಿಸ್ಮಯಕಾರಿಯಾದದ್ದು. ಮುಂದೆ ಬಂದ ಗಾಂಧೀ, ಕುವೆಂಪು ಮುಂತಾದ ಮಹನೀಯರೆಲ್ಲ ಶಿಕ್ಷಣದ ಕುರಿತಾಗಿ ವ್ಯಕ್ತಪಡಿಸಿದ್ದೂ ಇದೇ ಚಿಂತನೆಯನ್ನು.
ನಿಷೇಧಮಯ ಶಿಕ್ಷಣ
ವಿವೇಕಾನಂದರಿಗೆ ಇದ್ದ ಆತಂಕವೆಂದರೆ ಹುಟ್ಟಿನಿಂದಲೇ ಶ್ರೇಷ್ಠವಾಗಿರುವ ಜೀವರುಗಳನ್ನು ಶಿಕ್ಷಣವೆಂಬ ಹೆಸರಿನಲ್ಲಿ ಹಾಳುಗೆಡಹುತ್ತಿದ್ದೇವಲ್ಲ ಎಂಬುದು. ನಮ್ಮ ಶಿಕ್ಷಣವೆಲ್ಲ ನಿಷೇಧಾತ್ಮಕವಾಗಿದೆ; ವ್ಯಕ್ತಿಯನ್ನು ಬೆಳೆಸುವ ಬದಲು ಅದು ಆತನನ್ನು ಇನ್ನಷ್ಟು ನಿಸ್ಸತ್ವಗೊಳಿಸುತ್ತದೆ ಎಂಬುದು ಅವರಿಗಿದ್ದ ಬೇಸರ. “ಇದು ಪುರುಷಸಿಂಹರನ್ನು ಮಾಡುವ ವಿದ್ಯಾಭ್ಯಾಸವಲ್ಲ. ಇದು ಕೇವಲ ನಿಷೇಧಮಯವಾದುದು. ನಿಷೇಧಮಯ ಶಿಕ್ಷಣ ಮೃತ್ಯುವಿಗಿಂತ ಘೋರವಾದುದು” ಎಂದು ಎಚ್ಚರಿಸುತ್ತಾರೆ ಅವರು. ನಮ್ಮ ಶಿಕ್ಷಣ ಅದನ್ನು ಮಾಡಬೇಡ, ಇದನ್ನು ಮಾಡಬೇಡ ಎಂದು ಬೋಧಿಸುತ್ತದೆಯೇ ಹೊರತು, ಇದನ್ನು ಮಾಡು ಎಂದು ವಿದ್ಯಾರ್ಥಿಗೆ ಸ್ಪಷ್ಟ ನಿರ್ದೇಶನವನ್ನು ನೀಡುವಲ್ಲಿ ಸೋತಿದೆ ಎಂಬುದೇ ಅವರ ಭಾವನೆ.
ಆತ್ಮವಿಶ್ವಾಸ, ಧನಾತ್ಮಕ ಚಿಂತನೆಯನ್ನು ಮೂಡಿಸಬೇಕಾದ ಶಿಕ್ಷಣ ವ್ಯಕ್ತಿಗಳಲ್ಲಿ ಕೇವಲ ನೇತ್ಯಾತ್ಮಕ ಚಿಂತನೆಗಳನ್ನು ಬೆಳೆಸುತ್ತಾ ಹೋದರೆ ಅದು ಅವರನ್ನು ಕೊಂದಂತೆಯೇ ಅಲ್ಲವೇ ಎಂಬುದು ವಿವೇಕಾನಂದರ ಪ್ರಶ್ನೆ. “ಮಗು ಶಾಲೆಯಲ್ಲಿ ಕಲಿಯುವ ಮೊದಲನೇ ಪಾಠವೇ ತನ್ನ ತಂದೆ ಮೂರ್ಖ ಎಂದು ತಿಳಿಯುವುದು. ಎರಡನೆಯದೇ ತನ್ನ ಅಜ್ಜ ಹುಚ್ಚ ಎಂದು ತಿಳಿಯುವುದು. ಮೂರನೆಯದೇ ಗುರುಗಳೆಲ್ಲ ಮಿಥ್ಯಾಚಾರಿಗಳು ಎಂಬುದು. ನಾಲ್ಕನೆಯದೇ ನಮ್ಮ ಶಾಸ್ತ್ರಗಳೆಲ್ಲ ಸುಳ್ಳಿನ ಕಂತೆ ಎಂಬುದು. ಮಗುವಿಗೆ ಹದಿನಾರು ವರ್ಷಗಳು ಆಗುವ ಹೊತ್ತಿಗೆ ಅವನೇ ಒಂದು ಕೆಲಸಕ್ಕೆ ಬಾರದ ಕಂತೆ ಆಗುವನು. ನಿರ್ಜೀವವಾಗಿ ನಿತ್ರಾಣವಾಗುವನು” ಎನ್ನುತ್ತಾರೆ ಸ್ವಾಮೀಜಿ.
ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು, ಶ್ರೇಷ್ಠತೆಯನ್ನು ಅವರಿಗೆ ಮನದಟ್ಟು ಮಾಡುವಲ್ಲಿ ಶಿಕ್ಷಣ ಸೋತಿದೆ ಎಂಬುದು ಅವರ ಅಭಿಮತ. “ಹುಡುಗರಾದಾಗಿನಿಂದಲೂ ನಮಗೆ ನಿಷೇಧಮಯ ವಿದ್ಯಾಭ್ಯಾಸವೇ ಆಗಿದೆ. ನಾವು ಯಾವ ಕೆಲಸಕ್ಕೂ ಬಾರದವರೆಂಬುದನ್ನು ಮಾತ್ರ ತಿಳಿದುಕೊಂಡಿದ್ದೇವೆ. ನಮ್ಮ ದೇಶದಲ್ಲಿ ಮಹಾಪುರುಷರು ಜನಿಸಿದ್ದರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ನಾವೇ ಸ್ವತಂತ್ರವಾಗಿ ಕೆಲಸಮಾಡುವುದನ್ನು ಕಲಿತಿಲ್ಲ. ನಾವು ಬರೀ ದೌರ್ಬಲ್ಯಗಳನ್ನು ಕಲಿತಿರುವೆವು” ಎನ್ನುತ್ತಾರೆ ಅವರು.
ಯಾವುದರ ಪರಿಣಾಮವಾಗಿ ಹಲವು ತಲೆಮಾರಿನಿಂದ ಇಚ್ಛಾಶಕ್ತಿಯ ವಿಕಾಸಕ್ಕೆ ಅಡಚಣೆಯುಂಟಾಗಿದೆಯೋ, ಇಲ್ಲ ಅದು ಸಂಪೂರ್ಣ ನಿರ್ನಾಮವಾಗಿದೆಯೋ ಅದನ್ನು ಶಿಕ್ಷಣವೆಂದು ಹೇಳಬಹುದೇ? ಮನುಷ್ಯನನ್ನು ಒಂದು ಯಂತ್ರಸದೃಶವನ್ನಾಗಿ ಮಾಡುವುದು ವಿದ್ಯಾಭ್ಯಾಸವೇ? ಎಂದು ಪ್ರಶ್ನಿಸುತ್ತಾರೆ ವಿವೇಕಾನಂದರು. “ನನ್ನ ದೃಷ್ಟಿಯಲ್ಲಿ ಒಬ್ಬ ಇಚ್ಛಾನುಸಾರ ಸ್ವಂತ ಬುದ್ಧಿವಂತಿಕೆಯಿಂದ ತಪ್ಪು ಮಾಡುವುದು ಕೂಡ ಯಂತ್ರದಂತೆ ಒಳ್ಳೆಯದಾಗಿರುವುದಕ್ಕಿಂತ ಮೇಲು” – ಎಷ್ಟೊಂದು ಅದ್ಭುತವಾಗಿ ಹೇಳಿದ್ದಾರೆ!
ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಾಗಿವೆ, ಅಲ್ಲಿ ಗುಮಾಸ್ತರಷ್ಟೇ ತಯಾರಾಗುತ್ತಿದ್ದಾರೆ ಎಂದು ಮೊದಲು ಆತಂಕಪಟ್ಟವರು ವಿವೇಕಾನಂದರು. “ಈಗಿನ ಶಿಕ್ಷಣ ಕೇವಲ ಗುಮಾಸ್ತರನ್ನು ತಯಾರುಮಾಡುವ ಕಾರ್ಖಾನೆಯಂತಿದೆ... ಒಬ್ಬ ವ್ಯಕ್ತಿ ಕೆಲವು ಪರೀಕ್ಷೆಗಳನ್ನು ಪಾಸು ಮಾಡಿ ಚೆನ್ನಾಗಿ ಮಾತಾಡಿಬಿಟ್ಟರೆ ಆತ ವಿದ್ಯಾವಂತನೆಂದು ಭಾವಿಸುತ್ತೀರಿ. ಯಾವ ವಿದ್ಯಾಭ್ಯಾಸ ಜನಸಾಧಾರಣರಿಗೆ ಜೀವನೋಪಾಯಕ್ಕೆ ಸಹಾಯ ಮಾಡಲಾರದೋ, ಚಾರಿತ್ರ್ಯಶುದ್ಧಿಗೆ ಸಹಾಯ ಮಾಡಲಾರದೋ, ಜೀವಿಯ ಹೃದಯದಲ್ಲಿ ಪರೋಪಕಾರದ ಭಾವನೆಯನ್ನು ಮತ್ತು ಸಿಂಹಸದೃಶ ಧೈರ್ಯವನ್ನು ತುಂಬಲಾರದೋ, ಅದರಿಂದ ಏನು ಪ್ರಯೋಜನ?” ಎಂಬ ವಿವೇಕಾನಂದರ ಪ್ರಶ್ನೆಯನ್ನು ಇಂದಿನ ಶಿಕ್ಷಣವ್ಯವಸ್ಥೆಯ ಒಳಗಿರುವ ಪ್ರತಿಯೊಬ್ಬರೂ ಎದೆಮುಟ್ಟಿ ಕೇಳಿಕೊಳ್ಳಬೇಕಾಗಿದೆ.
ನಮ್ಮ ಸಮಾಜದಲ್ಲಿ ಇನ್ನೂ ಉಳಿದಿರುವ ಮೇಲುಕೀಳು ಭಾವನೆಗಳು, ಅತಿಯಾದ ಜಾತೀಯತೆ, ಅಸಹಿಷ್ಣುತೆ, ಸಹಬಾಳ್ವೆ-ಸಮನ್ವಯತೆಯ ಕೊರತೆ, ಸಂಪತ್ತಿನ ಬಗ್ಗೆ ಅತಿ ಆಸೆ, ಭ್ರಷ್ಟಾಚಾರ ಎಲ್ಲವುಗಳಿಗೂ ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಭೂತ ದೋಷಗಳೇ ಕಾರಣ ಎಂಬುದುನ್ನು ಅರ್ಥಮಾಡಿಕೊಳ್ಳಬೇಕು. ವ್ಯಕ್ತಿಗಳನ್ನು ನಮ್ಮ ಶಿಕ್ಷಣ ಆದರ್ಶಮಯ ವ್ಯಕ್ತಿತ್ವಗಳ್ನಾಗಿ ಬೆಳೆಸಲು ಸಾಧ್ಯವಾಗಿದ್ದರೆ ವಾಸ್ತವವಾಗಿ ಇಂತಹ ಸಮಸ್ಯೆಗಳು ಸಮಾಜದಲ್ಲಿ ಉಳಿದುಕೊಂಡಿರಲು ಸಾಧ್ಯವೇ ಇಲ್ಲ. ವಿಪರ್ಯಾಸವೆಂದರೆ ಹೆಚ್ಚುಹೆಚ್ಚು ಡಿಗ್ರಿಗಳನ್ನು ಪೇರಿಸಿಕೊಂಡಿರುವವರೇ ಹೆಚ್ಚು ಸಂಕುಚಿತರಾಗುತ್ತಾ ಹೋಗುವುದು, ಹೆಚ್ಚುಹೆಚ್ಚು ಜಾತೀಯತೆ, ಮತೀಯತೆಗಳನ್ನು ಬೆಳೆಸಿಕೊಳ್ಳುವುದು, ಇನ್ನೊಬ್ಬರ ಏಳಿಗೆಯನ್ನು ದ್ವೇಷಿಸುವುದು. ಇಂತಹ ಯೋಚನೆಗಳು ಕಡಿಮೆ ವಿದ್ಯಾಭ್ಯಾಸ ಪಡೆದಿರುವ ಜನಸಾಮಾನ್ಯರಲ್ಲಿ ಇಲ್ಲ. ಅಂದರೆ ವ್ಯಕ್ತಿ ಮೂಲತಃ ಉತ್ತಮನಾಗಿಯೇ ಇರುತ್ತಾನೆ, ನಮ್ಮ ಶಿಕ್ಷಣ ಆತನನ್ನು ಪತನಗೊಳಿಸಿದೆ ಎಂಬ ವಿವೇಕಾನಂದರ ಮಾತು ನೂರಕ್ಕೆ ನೂರು ನಿಜ ಎಂದಾಯಿತು.
ಚಾರಿತ್ರ್ಯನಿರ್ಮಾಣವೇ ಗುರಿ
ಚಾರಿತ್ರ್ಯನಿರ್ಮಾಣ ಮತ್ತು ರಾಷ್ಟ್ರನಿರ್ಮಾಣ ಶಿಕ್ಷಣದ ಗುರಿಯಾಗಬೇಕು ಎಂಬುದು ವಿವೇಕಾನಂದರು ತಮ್ಮ ಬದುಕಿನುದ್ದಕ್ಕೂ ಸಾರಿದ ವಿಚಾರ. ವ್ಯಕ್ತಿಯ ಚಾರಿತ್ರ್ಯ ಬೆಳೆಯದೆ ಆತ ಸಮಾಜಕ್ಕೊಂದು ಸಂಪನ್ಮೂಲವಾಗಲಾರ ಎಂಬ ಅವರ ಚಿಂತನೆ ಅದ್ಭುತವಾಗಿದೆ. ಶೀಲ-ಚಾರಿತ್ರ್ಯ-ಸಂಸ್ಕಾರಗಳು ಅಭಿವೃದ್ಧಿಯಾಗದಿರುವುದೇ ಆತನ ತಿಳಿದುಕೊಂಡಿರುವುದಕ್ಕೆ ಮೌಲ್ಯ ಬರದಿರಲು ಕಾರಣ. ತಿನಿಸೊಂದು ಎಷ್ಟೇ ವಿಶಿಷ್ಟವಾಗಿ ತಯಾರಾಗಿದ್ದರೂ ಅದು ಕೊಳಚೆಯ ಮೇಲೆ ಬಿದ್ದಿದ್ದರೆ ಅದು ಸೇವನೆಗೆ ಯೋಗ್ಯವಲ್ಲ. ಹಾಗೆಯೇ, ತಲೆಗೆ ತುಂಬಿಕೊಂಡ ವಿಚಾರಗಳಿಗೆ ಚಾರಿತ್ರ್ಯದ ತಳಹದಿಯಿಲ್ಲದೇ ಹೋದರೆ ಅವೂ ಕೊಳಚೆಯಲ್ಲಿ ಮುಳುಗಿರುವ ತಿನಿಸಿಗೆ ಸಮ. ಅವು ಆತನಿಗಾಗಲೀ ಇನ್ನೊಬ್ಬನಿಗಾಗಲೀ ಪ್ರಯೋಜನಕ್ಕೆ ಬರುವುದಿಲ್ಲ.
“ವಿದ್ಯಾಭ್ಯಾಸ ಎಂದರೆ ಅದು ನಿಮ್ಮ ತಲೆಗೆ ತುರುಕಿದ ಸರಕಲ್ಲ. ಅದು ಅಲ್ಲಿ ಜೀವಾವಧಿ ಅಜೀರ್ಣವಾಗಿ ಚೆಲ್ಲಾಪಿಲ್ಲಿಯಾಗಿ ಇರುವುದಲ್ಲ. ನಿಜವಾದ ವಿದ್ಯಾಭ್ಯಾಸ ನಮ್ಮ ಜೀವನವನ್ನು ರೂಪಿಸಬೇಕು; ಪುರುಷಸಿಂಹರನ್ನು ಮಾಡಬೇಕು; ಶುದ್ಧಚಾರಿತ್ರ್ಯದವರನ್ನಾಗಿ ಮಾಡಬೇಕು. ಭಾವನೆಗಳನ್ನು ರಕ್ತಗತಮಾಡಿಕೊಳ್ಳವಂತೆ ಮಾಡಬೇಕು. ನೀವು ಐದು ಭಾವನೆಗಳನ್ನು ಚೆನ್ನಾಗಿ ತಿಳಿದುಕೊಂಡು ನಿಮ್ಮ ಜೀವನದಲ್ಲಿ ಅವನ್ನು ವ್ಯಕ್ತಪಡಿಸಿದರೆ ಆಗ ಒಂದು ಪುಸ್ತಕ ಭಂಡಾರವನ್ನೇ ಕಂಠಪಾಠ ಮಾಡಿಕೊಂಡಿರುವವನಿಗಿಂತ ಹೆಚ್ಚು ವಿದ್ಯಾವಂತರು ನೀವು” ಎಂಬುದು ವಿವೇಕಾನಂದರ ನುಡಿ.
“ವಿಷಯ ಸಂಗ್ರಹವೇ ಶಿಕ್ಷಣವಾದರೆ ಪ್ರಪಂಚದಲ್ಲಿ ಪುಸ್ತಕಾಲಯಗಳೇ ಮಹಾಮುನಿಗಳಾಗಿರುತ್ತಿದ್ದವು. ವಿಶ್ವಕೋಶಗಳೇ ಮಹಾಋಷಿಗಳಾಗುತ್ತಿದ್ದವು!” ಎಂಬ ಅವರ ಮಾತಂತೂ ಬರಿಯ ಮಾಹಿತಿ ಎಷ್ಟೊಂದು ನಿಷ್ಪ್ರಯೋಜಕ ಎಂಬುದನ್ನು ಎತ್ತಿತೋರಿಸುತ್ತದೆ. ಬರೀ ಪುಸ್ತಕ ಪಾಂಡಿತ್ಯದಿಂದ ಏನೂ ಪ್ರಯೋಜನವಿಲ್ಲ. ಯಾವ ವಿದ್ಯಾಭ್ಯಾಸದಿಂದ ನಮ್ಮಲ್ಲಿ ಶುದ್ಧಚಾರಿತ್ರ್ಯ ಮೂಡುವುದೋ, ನಮ್ಮ ಮಾನಸಿಕ ಶಕ್ತಿ ವೃದ್ಧಿಯಾಗುವುದೋ, ಬುದ್ಧಿವಿಕಾಸವಾಗುವುದೋ, ವ್ಯಕ್ತಿ ಸ್ವತಂತ್ರನಾಗಿ ಬಾಳತಕ್ಕ ಸ್ಥಿತಿಗೆ ಬರಬಲ್ಲನೋ, ಅಂತಹ ತರಬೇತು ನಮಗೆ ಬೇಕು ಎನ್ನುತ್ತಾರೆ ಸ್ವಾಮೀಜಿ.
ವಿದ್ಯಾರ್ಥಿಯ ಕರ್ತವ್ಯ
ಶಿಕ್ಷಣ ವ್ಯವಸ್ಥೆಯ ಹುಳುಕು, ಅದರ ಸುಧಾರಣೆಯ ಬಗ್ಗೆ ಮಾತಾಡಿದಷ್ಟೇ, ಶಿಕ್ಷಣದ ವಿಚಾರದಲ್ಲಿ ಗುರುಶಿಷ್ಯರ ಕರ್ತವ್ಯಗಳೇನು ಎಂಬ ಬಗೆಗೂ ವಿವೇಕಾನಂದರು ವಿಸ್ತಾರವಾಗಿ ಮಾತಾಡಿದ್ದಾರೆ. “ನನಗೆ ನಚಿಕೇತನ ಶ್ರದ್ಧೆ ಇರುವವರು ಬೇಕು. ನಮ್ಮೆಲ್ಲರಿಗೂ ಅಗತ್ಯವಿರುವುದು ಅಂತಹ ಆತ್ಮಶ್ರದ್ಧೆಯೇ. ಅದನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳುವ ಮಹಾಕಾರ್ಯ ಆಗಬೇಕಿದೆ... ಸಮರ್ಥರಾಗಿ, ಶ್ರದ್ಧಾವಂತರಾಗಿ. ಮಿಕ್ಕೆಲ್ಲವೂ ತಾನಾಗಿಯೇ ಬರುತ್ತದೆ” ಎಂಬುದು ಅವರ ಮೊದಲ ನಿರ್ದೇಶನ.
ಅಧ್ಯಯನದಲ್ಲಿ ಏಕಾಗ್ರತೆ ಮತ್ತು ಉಳಿದೆಲ್ಲ ವಿಷಯಗಳಲ್ಲಿ ಅನಾಸಕ್ತಿ, ಕಠಿಣ ಬ್ರಹ್ಮಚರ್ಯ, ಶ್ರದ್ಧೆ, ಶೀಲ ಹಾಗೂ ಗುರುಕುಲ ವಿದ್ಯಾಭ್ಯಾಸ ವಿದ್ಯಾರ್ಥಿಯ ಪ್ರಮುಖ ಕರ್ತವ್ಯಗಳೆಂದು ಸ್ವಾಮೀಜಿ ಗುರುತಿಸಿದ್ದಾರೆ. ಮನುಷ್ಯನ ಶಕ್ತಿಗೆ ಒಂದು ಮೇರೆ ಇಲ್ಲ. ನಾವು ಅದನ್ನು ಏಕಾಗ್ರ ಮಾಡಿದಷ್ಟು ಪ್ರಬಲವಾಗುತ್ತದೆ ಎನ್ನುವ ವಿವೇಕಾನಂದರು ವಿದ್ಯಾರ್ಥಿ ತನ್ನ ಶಕ್ತಿಯನ್ನು ಏಕಾಗ್ರಗೊಳಿಸುವ ಅವಶ್ಯಕತೆಯೇನೆಂಬುದನ್ನು ಒತ್ತಿಹೇಳಿದ್ದಾರೆ.
ವಿದ್ಯಾರ್ಥಿ ಕಠಿಣ ಬ್ರಹ್ಮಚರ್ಯವನ್ನು ಪಾಲಿಸುವುದರಿಂದಾಗುವ ಲಾಭವನ್ನೂ ಅವರು ತಿಳಿಸಿದ್ದಾರೆ. “ಕಾಯಾ ವಾಚಾ ಮನಸಾ ಎಲ್ಲ ಸ್ಥಿತಿಗಳಲ್ಲಿಯೂ ಪರಿಶುದ್ಧವಾಗಿರುವುದೇ ಬ್ರಹ್ಮಚರ್ಯೆ... ಬ್ರಹ್ಮಚರ್ಯದ ನಿಷ್ಠೆಯಿಂದ ಅತ್ಯಲ್ಪ ಕಾಲದಲ್ಲಿ ನಾವು ವಿಷಯಗಳನ್ನು ಸಂಗ್ರಹಿಸಬಹುದು. ಒಂದು ಸಲ ನೋಡಿದರೆ ಸಾಕು; ಅದನ್ನು ಮರೆಯದಂತೆ ಜ್ಞಾಪಕದಲ್ಲಿಟ್ಟುಕೊಳ್ಳಬಹುದು. ಬ್ರಹ್ಮಚರ್ಯದೀಕ್ಷಿತನಾದವನಿಗೆ ಅದ್ಭುತವಾದ ಇಚ್ಛಾಶಕ್ತಿ, ಕ್ರಿಯಾಶಕ್ತಿಗಳು ಬರುವುವು” ಎನ್ನುವ ವಿವೇಕಾನಂದರು “ಲೈಂಗಿಕ ಶಕ್ತಿಯನ್ನು ಆಧ್ಯಾತ್ಮಿಕ ಶಕ್ತಿಯನ್ನಾಗಿ ಪರಿವರ್ತಿಸಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದುಂಟು.
ಯಾವುದು ಒಬ್ಬನನ್ನು ಮಹಾಪುರುಷನನ್ನಾಗಿ ಮಾಡುವುದೋ ಅದೇ ಶ್ರದ್ಧೆ ಎನ್ನುತ್ತಾರೆ ಸ್ವಾಮೀಜಿ. “ನಾವು ಅನಂತಾತ್ಮನ ಪಾವಿತ್ರ್ಯದ ಕಿಡಿಗಳು. ನಾವು ಹೇಗೆ ನಿಷ್ಪ್ರಯೋಜಕರಾಗಬಲ್ಲೆವು? ನಾವೇ ಸರ್ವಸ್ವವೂ. ನಾವು ಏನನ್ನು ಬೇಕಾದರೂ ಮಾಡಲು ಸಿದ್ಧರಾಗಿರುವೆವು. ನಾವೆಲ್ಲವನ್ನೂ ಸಾಧಿಸುವೆವು. ನಮ್ಮ ಪೂರ್ವಿಕರಲ್ಲಿ ಇಂತಹ ಆತ್ಮಶ್ರದ್ಧೆ ಇತ್ತು” ಎಂದು ಜ್ಞಾಪಿಸುವ ಅವರು, ಇಂತಹ ಆತ್ಮಶ್ರದ್ಧೆಯಿಂದಲೇ ಶಿಕ್ಷಣದ ಸಾಕ್ಷಾತ್ಕಾರವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸೂಚಿಸುತ್ತಾರೆ. “ಲಕ್ಷಲಕ್ಷ ಗುರುಗಳು ದೊರಕುವರು. ಆದರೆ ನಿಜವಾದ ಶಿಷ್ಯ ದೊರಕುವುದು ಕಷ್ಟ” ಎಂದು 1900ರಸ್ಯಾನ್ಫ್ರಾನ್ಸಿಸ್ಕೋದ ತಮ್ಮ ಭಾಷಣವೊಂದರಲ್ಲಿ ವಿವೇಕಾನಂದರು ಹೇಳಿದ್ದಿದೆ.
ಶ್ರದ್ಧೆಯೊಂದಿಗೆ ಶೀಲ-ಚಾರಿತ್ರ್ಯಗಳು ಸೇರಿದಾಗ ಅದ್ಭುತಗಳನ್ನು ಸಾಧಿಸಬಹುದೆಂಬುದು ಅವರ ಅಭಿಮತ. “ನಿಮಗೆ ಇಂದು ಬೇಕಾಗಿರುವುದು ನಿಮ್ಮ ಇಚ್ಛಾಶಕ್ತಿಯನ್ನು ವೃದ್ಧಿಮಾಡಬಲ್ಲಂತಹ ಚಾರಿತ್ರ್ಯ. ನೀವು ನಿಮ್ಮ ಇಚ್ಛಾಶಕ್ತಿಯನ್ನು ರೂಢಿಸಿಕೊಂಡಂತೆ ಅದು ನಿಮ್ಮನ್ನು ಮೇಲಮೇಲಕ್ಕೆ ಒಯ್ಯುವುದು. ವಜ್ರದಂತಹ ಕಷ್ಟದ ಕೋಟೆಗಳನ್ನು ಕೂಡ ಸೀಳಿಕೊಂಡು ಹೋಗುವುದು ಚಾರಿತ್ರ್ಯ” ಎನ್ನುವ ವಿವೇಕಾನಂದರು ವಿದ್ಯಾರ್ಥಿಗಳ ಯಶಸ್ಸಿನ ರಹಸ್ಯ ಚಾರಿತ್ರ್ಯ ಹಾಗೂ ಶ್ರದ್ಧೆಗಳೆಂಬ ಎರಡು ಪದಗಳಲ್ಲಿರುವುದನ್ನು ಮತ್ತೆಮತ್ತೆ ಹೇಳಿದ್ದಾರೆ.
ಗುರುಕುಲವಾಸ ಶಿಕ್ಷಣದ ಪ್ರಮುಖ ಅವಶ್ಯಕತೆಯೆಂಬುದನ್ನು ಸ್ವಾಮೀಜಿ ಅಲ್ಲಲ್ಲಿ ವ್ಯಕ್ತಪಡಿಸಿದ್ದುಂಟು. ಭಾರತದ ಪ್ರಾಚೀನ ಶಿಕ್ಷಣಪದ್ಧತಿಯಾದ ಗುರುಕುಲ ವ್ಯವಸ್ಥೆ ಎಲ್ಲ ಕಾಲಕ್ಕೂ ಪ್ರಸ್ತುತ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಇಲ್ಲಿ ಬೊಟ್ಟು ಮಾಡುವ ಅಂಶ ಗುರು-ಶಿಷ್ಯರ ಪರಸ್ಪರ ಸಾಮೀಪ್ಯತೆಯ ಅವಶ್ಯಕತೆ. ಗುರುವಿನ ಜೀವನದ ನಿಕಟ ಪರಿಚಯವಿಲ್ಲದೆ ಯಾವ ವಿದ್ಯಾಭ್ಯಾಸವೂ ಸಾಧ್ಯವಿಲ್ಲ. ಪರಿಶುದ್ಧವಾದ ಜೀವನ ಯಾರಲ್ಲಿ ನಂದಾದೀವಿಗೆಯಂತೆ ಬೆಳಗುತ್ತಿದೆಯೋ ಅಂತಹ ಗುರುವಿನ ಸಮೀಪದಲ್ಲಿಯೇ ವ್ಯಕ್ತಿಯೊಬ್ಬ ಬೆಳೆಯಬೇಕು ಎಂದಿರುವ ವಿವೇಕಾನಂದರು, ಇಲ್ಲಿ ಗುರುವಿನ ಪಾತ್ರವೂ ಎಷ್ಟು ಮಹತ್ವದ್ದೆಂಬುದನ್ನು ಸಾರಿಹೇಳಿದ್ದಾರೆ.
ಗುರುವಿನ ಪಾತ್ರ
ವಿವೇಕಾನಂದರ ಪ್ರಕಾರ, ನಿಜವಾದ ಗುರು ಶಿಷ್ಯನ ಮಟ್ಟವನ್ನು ಅರಿತು ಪಾಠಮಾಡಬಲ್ಲವನು. “ನಿಜವಾದ ಗುರು ಶಿಷ್ಯನಿರುವ ಮೆಟ್ಟಿಲಿಗೆ ತಕ್ಷಣವೇ ಇಳಿದುಬರುವನು. ಶಿಷ್ಯನ ಹೃದಯದಲ್ಲಿರುವುದನ್ನು ತಿಳಿದುಕೊಳ್ಳುವನು. ಇಂತಹ ಗುರು ಮಾತ್ರ ನಿಜವಾಗಿ ಬೋಧಿಸಬಲ್ಲ” ಎನ್ನುತ್ತಾರೆ ಅವರು. ಗುರುವಿನ ಮನಸ್ಸಿನ ಅಲೆಗಳು ವಿದ್ಯಾರ್ಥಿಯ ಮನಸ್ಸಿಗೆ ಹೋಗಿ ಮುಟ್ಟಬೇಕಾದಲ್ಲಿ ಗುರುವಿನಲ್ಲಿ ಆ ಶಕ್ತಿ ಇರಬೇಕು. ಅದು ಶಕ್ತಿಕ್ಷೇಪಣೆಯ ಪ್ರಶ್ನೆ. ಕೇವಲ ನಮ್ಮ ಬೌದ್ಧಿಕ ಶಕ್ತಿಗಳಿಗೆ ಚಾಲನೆ ಕೊಡುವುದಷ್ಟೇ ಅಲ್ಲ. ವಾಸ್ತವಿಕವಾದ ಮತ್ತು ಅನುಭವಕ್ಕೆ ಬರುವಂತಹ ಒಂದು ಶಕ್ತಿ ಗುರುವಿನಿಂದ ಶಿಷ್ಯನಿಗೆ ಪ್ರಾಪ್ತವಾಗುತ್ತದೆ. ಮತ್ತು ಶಿಷ್ಯನ ಹೃದಯದಲ್ಲಿ ಅದು ವೃದ್ಧಿಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಗುರುವಿನ ಅಂತರಂಗ ಅತ್ಯಂತ ಶುದ್ಧವಾಗಿಯೂ ಇರಬೇಕಾದುದು ಅತ್ಯಾವಶ್ಯಕ ಎನ್ನುವ ಮೂಲಕ ವಿವೇಕಾನಂದರು ಶಿಕ್ಷಕನ ಜವಾಬ್ದಾರಿ ಎಷ್ಟು ‘ಗುರುತರ’ವಾದದ್ದು ಎಂಬುದನ್ನೂ ಸಾರಿದ್ದಾರೆ. ವಿದ್ಯಾರ್ಥಿಗಳು ಅಧ್ಯಾಪಕರು ಹೇಳಿದ್ದನ್ನು ಕಲಿಯುವುದಕ್ಕಿಂತಲೂ ಅವರನ್ನು ನೋಡಿ ಕಲಿಯುವುದೇ ಹೆಚ್ಚು. ಹೀಗಿರುವಾಗ ಅಧ್ಯಾಪಕನಾದವನು ಸ್ವತಃ ಉನ್ನತ ವ್ಯಕ್ತಿತ್ವವನ್ನು ಹೊಂದಿರುವುದು ಶಿಕ್ಷಣದ ಪ್ರಾಥಮಿಕ ಅವಶ್ಯಕತೆ ಎಂಬ ಸೂಚನೆ ವಿವೇಕಾನಂದರ ಮಾತಿನಲ್ಲಿ ಇರುವುದನ್ನು ಗಮನಿಸಬೇಕು.
“ನನ್ನ ಜೀವನದ ಅತಿನಿಕಟ ಪ್ರೀತಿಗೆ ಪಾತ್ರನಾದ ಬಂಧುವೆಂದರೆ ಗುರು. ಅನಂತರ ನನ್ನ ತಾಯಿ, ಅನಂತರ ತಂದೆ. ಗುರುವಿಗೆ ನನ್ನ ಪ್ರಥಮ ಗೌರವ. ನನ್ನ ತಂದೆ ಮಾಡು ಎಂದದ್ದನ್ನು, ಗುರು ಮಾಡಬೇಡ ಎಂದರೆ, ನಾನು ಅದನ್ನು ಮಾಡುವುದಿಲ್ಲ. ತಂದೆ ತಾಯಿಗಳು ನನಗೆ ದೇಹವನ್ನು ಕೊಡುವರು. ಆದರೆ ಗುರು ನನಗೆ ಪುನರ್ಜನ್ಮವನ್ನು ಕೊಡುವನು” ಎಂಬ ವಿವೇಕಾನಂದರ ಮಾತಿನಲ್ಲಿ ಗುರುವಿನ ಸ್ಥಾನಮಾನ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ.
ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕನ ಪಾತ್ರ ಕೇಂದ್ರಸ್ಥಾನದಲ್ಲಿರುವಂಥದ್ದು ಎಂಬುದನ್ನು ಎಲ್ಲ ಶಿಕ್ಷಣತಜ್ಞರೂ ಹೇಳುತ್ತಲೇ ಬಂದಿದ್ದಾರೆ. ವಿವೇಕಾನಂದರ ಒಟ್ಟು ಮಾತು ಅದನ್ನೇ ಪ್ರತಿಫಲಿಸುತ್ತದೆ. ಎಲ್ಲ ಉದ್ಯೋಗಗಳಂತೆಯೇ ಅಧ್ಯಾಪನವೂ ಒಂದು ಜೀವನೋಪಾಯ ಎಂದು ಭಾವಿಸುವ ಶಿಕ್ಷಕರಿದ್ದರೆ ಅಂಥವರಿಂದ ಶಿಕ್ಷಣ ಕ್ಷೇತ್ರದ ಉದ್ಧಾರ ಕನಸಿನ ಮಾತು. ಬೇರೆಲ್ಲೂ ಉದ್ಯೋಗ ಸಿಗಲಿಲ್ಲ, ಆದ್ದರಿಂದ ಕೊನೆಗೆ ಎಲ್ಲಾದರೂ ಪಾಠ ಮಾಡಿಕೊಂಡಿರೋಣ ಎಂಬ ನಿರ್ಧಾರಕ್ಕೆ ಬಂದೆ ಎಂದು ಹೇಳುವ ಅಧ್ಯಾಪಕರಿರುವವರೆಗೆ ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಿಸುವುದಿಲ್ಲ.
ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕಾಲಘಟ್ಟದಲ್ಲಿದ್ದೇವೆ. ಶಿಕ್ಷಣದ ಬಗೆಗಿನ ಪರಿಕಲ್ಪನೆಯಲ್ಲೇ ಆಮೂಲಾಗ್ರ ಬದಲಾವಣೆಯನ್ನು ಅಪೇಕ್ಷಿಸುತ್ತದೆ ಹೊಸ ಶಿಕ್ಷಣ ನೀತಿ. ಅದರ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಆದರೆ ವಿವೇಕಾನಂದರು ಶಿಕ್ಷಣದ ಬಗ್ಗೆ ಇಟ್ಟುಕೊಂಡಿದ್ದ ಕಲ್ಪನೆಗಳು ಸಮಗ್ರವಾಗಿ ಅನುಷ್ಠಾನಕ್ಕೆ ಬಾರದೆ ಇಂತಹ ಹತ್ತು ನೀತಿಗಳು ಬಂದರೂ ನಮ್ಮ ಶಿಕ್ಷಣ ವ್ಯವಸ್ಥೆ ವಾಸ್ತವವಾಗಿ ಸುಧಾರಿಸದು.
- ಸಿಬಂತಿ ಪದ್ಮನಾಭ ಕೆ. ವಿ.