ವಿಜಯವಾಣಿ | ಕಾರ್ಗಿಲ್ ವಿಜಯ ದಿವಸ ವಿಶೇಷ ಪುರವಣಿ | 26 ಜುಲೈ2017
ಅದು 1999ರ ಮೇ ತಿಂಗಳು. ಕಾಶ್ಮೀರದ ಗುಡ್ಡಗಾಡುಗಳಲ್ಲಿ ಓಡಾಡುತ್ತಿದ್ದ ಸಾಮಾನ್ಯ ಕುರಿಗಾಹಿಯೊಬ್ಬ ಭಾರತೀಯ ಸೇನೆ ಬೆಚ್ಚಿಬೀಳುವಂತಹ
ವಾರ್ತೆಯೊಂದನ್ನು ಹೊತ್ತು ತಂದಿದ್ದ: ‘ಗಡಿನಿಯಂತ್ರಣ ರೇಖೆಯ ಆಚೆಯಿಂದ ಪಾಕ್ ಅತಿಕ್ರಮಣಕಾರರು ಭಾರತದೊಳಕ್ಕೆ ನುಸುಳುತ್ತಿದ್ದಾರೆ...’ ಸಾಮಾನ್ಯವಾಗಿ ವಿಪರೀತ ಹಿಮಪಾತವಿರುವ ಚಳಿಗಾಲದ ಅವಧಿಯಲ್ಲಿ ಎರಡೂ ದೇಶಗಳ ಸೈನಿಕರು ಕಾರ್ಗಿಲ್, ದ್ರಾಸ್, ಮುಷ್ಕೋ ಕಣಿವೆ ಪ್ರದೇಶಗಳಲ್ಲಿ ಪಹರೆ ಕಾಯುವುದಿಲ್ಲ. ಸುರಕ್ಷಿತ ಸ್ಥಳಗಳಿಗೆ ತಮ್ಮ ನೆಲೆ ಬದಲಾಯಿಸಿಕೊಂಡು ಹಿಮಪಾತ ಕಡಿಮೆಯಾದ ಮೇಲೆ ಮತ್ತೆ ಸ್ವಸ್ಥಾನಕ್ಕೆ ಮರಳುತ್ತಾರೆ. ಉಭಯ ದೇಶಗಳ ನಡುವೆ ಇರುವ ಈ ಅಲಿಖಿತ ಒಪ್ಪಂದವನ್ನೇ ಲಾಭವನ್ನಾಗಿಸಿಕೊಂಡು ನುಸುಳುಕೋರರು ಕಾರ್ಯಾಚರಣೆಗಿಳಿದಿದ್ದರು. ಸೈನ್ಯ ಈ ಸುದ್ದಿಯನ್ನು ಕೇಳಿಯೂ ಸುಮ್ಮನೆ ಕುಳಿತಿರಲು ಸಾಧ್ಯವಿರಲಿಲ್ಲ.
ಕೊನೆಗೆ ಉಳಿಯುವುದೇನು? (ಚಿತ್ರ: ಇಂಟರ್ನೆಟ್) |
23ರ ನವತರುಣ ಕ್ಯಾಪ್ಟನ್ ಸೌರಭ್ ಕಾಲಿಯಾ ನೇತೃತ್ವದ ಆರು ಜನ ಸೈನಿಕರ ತಂಡ ಹೊರಟೇಬಿಟ್ಟಿತು. ಪರಿಸ್ಥಿತಿಯ ಮಾಹಿತಿ ಕಲೆಹಾಕುತ್ತಾ ಪರ್ವತ ಶಿಖರಗಳನ್ನು ಮೆಲ್ಲಮೆಲ್ಲನೆ ಏರಿತು. ಲಡಾಖ್‍ನ ಕಕ್ಸರ್ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಅವರಿಗಿದ್ದ ಮಾಹಿತಿ ದೃಢಪಟ್ಟಿತು. ಭಾರತದೊಳಕ್ಕೆ ದೊಡ್ಡ ಸಂಖ್ಯೆಯ ನುಸುಳುಕೋರರು ಬಂದು ಅದಾಗಲೇ ತಮ್ಮ ನೆಲೆಗಳನ್ನು ಭದ್ರಪಡಿಸಿಕೊಂಡಿದ್ದರು. ಹೆಚ್ಚು ಸಮಯ ಕಳೆಯದೆ ಕಾಲಿಯಾ ಸುಮಾರು 13,000 ಅಡಿ ಎತ್ತರದಲ್ಲಿರುವ ಬಜರಂಗ್ ಪೋಸ್ಟ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು.
ಹಾಗೆಂದು ಸಮಾಧಾನಪಟ್ಟುಕೊಂಡು ನಿಟ್ಟುಸಿರುಬಿಡುವ ಮುನ್ನ ವೈರಿಪಡೆ ಗುಂಡಿನ ಮಳೆ ಆರಂಭಿಸಿಬಿಟ್ಟಿತು. ಕಾಲಿಯಾ ನೇತೃತ್ವದ ತಂಡಕ್ಕೂ ನುಸುಳುಕೋರರಿಗೂ ದೊಡ್ಡ ಕದನವೇ ನಡೆದುಹೋಯಿತು. ಆದರೆ ನೂರಾರು ಸಂಖ್ಯೆಯಲ್ಲಿದ್ದ ವೈರಿಗಳೆಲ್ಲಿ? ಕೇವಲ ಆರು ಮಂದಿಯ ಕಾಲಿಯಾ ತಂಡವೆಲ್ಲಿ? ಅವರ ಬಳಿಯಿದ್ದ ಆಪತ್ಕಾಲೀನ ಮದ್ದುಗುಂಡುಗಳು ಬಹುಬೇಗನೆ ಮುಗಿದುಹೋದವು. ಭಾರತೀಯ ತುಕಡಿಗಳು ಅವರ ಸಹಾಯಕ್ಕೆ ಧಾವಿಸುವ ಮುನ್ನವೇ ಪಾಕ್ ಸೇನೆ ಅವರನ್ನು ಸುತ್ತುವರಿದು ಹೊತ್ತೊಯ್ದಾಗಿತ್ತು. ಆಮೇಲೆ ನಡೆದುದು ಮಾತ್ರ ಅತ್ಯಂತ ಪೈಶಾಚಿಕ ಘೋರ ಕೃತ್ಯ.
ಇಪ್ಪತ್ತು ದಿನಗಳ ಬಳಿಕ ಪಾಕ್ ಸೇನೆ ಕಾಲಿಯಾ ತಂಡದ ಛಿದ್ರಛಿದ್ರ ಮೃತ ದೇಹಗಳನ್ನು ಭಾರತಕ್ಕೆ ಹಸ್ತಾಂತರಿಸಿತು. ಆರು ಮಂದಿ ವೀರಯೋಧರನ್ನು ಅಸಹಾಯಕರನ್ನಾಗಿಸಿ ಅತ್ಯಂತ ಅಮಾನವೀಯ ರೀತಿಯಲ್ಲಿ ಚಿತ್ರಹಿಂಸೆ ನೀಡಿ ವೈರಿಪಡೆ ಕೊಂದುಹಾಕಿತ್ತು. ಅವರ ದೇಹಗಳನ್ನು ಅಲ್ಲಲ್ಲಿ ಸಿಗರೇಟಿನಿಂದ ಸುಡಲಾಗಿತ್ತು; ಕಿವಿಗಳಿಗೆ ಬಿಸಿ ರಾಡ್‍ಗಳನ್ನು ತೂರಿಸಲಾಗಿತ್ತು; ಕಣ್ಣುಗಳನ್ನು ಕಿತ್ತು ತೆಗೆಯಲಾಗಿತ್ತು; ಹಲ್ಲು ಮತ್ತು ಮೂಳೆಗಳನ್ನು ಮುರಿದು ಹಾಕಲಾಗಿತ್ತು; ಮೂಗು ತುಟಿಗಳನ್ನು ಸೀಳಲಾಗಿತ್ತು; ಕೈಕಾಲುಗಳನ್ನು ಅಷ್ಟೇ ಏಕೆ ಗುಪ್ತಾಂಗಗಳನ್ನು ಕತ್ತರಿಸಲಾಗಿತ್ತು.
ಈ ರೌದ್ರ ಘಟನೆಯ ಬಗ್ಗೆ ತಿಳಿದು ಇಡೀ ದೇಶವೇ ಬೆಚ್ಚಿಬಿದ್ದಿತು, ಮಮ್ಮಲ ಮರುಗಿತು. ಸ್ವತಃ ನಾನೇ ಚಿತ್ರಹಿಂಸೆಗೊಳಗಾದಂತೆ ಭಾಸವಾಗುತ್ತಿದೆ ಎಂದು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ದುಃಖಿಸಿದರು. ಪಾಕ್ ಪಡೆಯ ನೀಚ ಕೃತ್ಯ ಇಡೀ ಭಾರತದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿತು. 1971ರ ಯುದ್ಧದ ಸಂದರ್ಭದಲ್ಲಿ ಭಾರತವು ಪಾಕಿಸ್ತಾನದ 93 ಸಾವಿರ ಸೈನಿಕರನ್ನು ಸೆರೆಹಿಡಿದಿತ್ತು. ಆದರೆ ಯುದ್ಧದ ತರುವಾಯ ಅಷ್ಟೂ ಮಂದಿಯನ್ನು ಸುರಕ್ಷಿತವಾಗಿ ತವರಿಗೆ ಬಿಟ್ಟುಕೊಡಲಾಗಿತ್ತು. ಭಾರತದ ಔದಾರ್ಯಕ್ಕೆ ಪ್ರತಿಯಾಗಿ ಸಿಕ್ಕಿದ್ದು ಮಾತ್ರ ಪಾಕ್‍ನ ಪೈಶಾಚಿಕತೆ. ಆದರೆ ಈ ಹೀನ ಕೆಲಸ ಜಿನೀವಾ ಅಂತಾರಾಷ್ಟ್ರೀಯ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಭಾರತೀಯ ಸೇನೆಗೆ ಪ್ರತಿರೋಧ ತೋರದೆ ಬೇರೆ ದಾರಿಯೇ ಇರಲಿಲ್ಲ. ಪ್ರತಿರೋಧ ತೋರುವುದಕ್ಕಿಂತಲೂ ರಾಷ್ಟ್ರದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು. ಅದರ ಪರಿಣಾಮವೇ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಘೋರ ಕಾರ್ಗಿಲ್ ಯುದ್ಧ.
ಬದಲಾಗದ ಪಾಕ್ ಚಾಳಿ
ಭಾರತ-ಪಾಕ್ ವಿಭಜನೆಯಾದಲ್ಲಿಂದಲೂ ಕಾಶ್ಮೀರದ ಸಮಸ್ಯೆಯನ್ನು ಪಾಕಿಸ್ತಾನ ಜೀವಂತವಾಗಿಯೇ ಉಳಿದುಕೊಂಡಿದೆ. 1965 ಹಾಗೂ 1971ರಲ್ಲಿ ಅದು ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡಿತು ಅಷ್ಟೇ. ಅದರ ಹೊರತಾಗಿ ಗಡಿಪ್ರದೇಶದಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಲೆಕ್ಕವೇ ಇಲ್ಲ. ಅಂತಾರಾಷ್ಟ್ರೀಯ ಸಮುದಾಯದ ಟೀಕೆಗೆ ಹೆದರಿ ಆಗಿಂದಾಗ್ಗೆ ‘ಶಾಂತಿಯುತ ಪರಿಹಾರ’ದ ಮಾತುಗಳನ್ನಾಡುತ್ತಿದ್ದರೂ ತಾನೇ ಸಾಕಿದ ಉಗ್ರರನ್ನಾಗಲೀ ತನ್ನದೇ ಸೇನೆಯನ್ನಾಗಲೀ ನಿಯಂತ್ರಿಸುವುದು ಅದರಿಂದ ಸಾಧ್ಯವಾಗಿಲ್ಲ.
ಕಾಶ್ಮೀರ ಸಮಸ್ಯೆಗೆ ಸೌಹಾರ್ದಯುತ ಪರಿಹಾರವೊಂದನ್ನು ಕಂಡುಕೊಳ್ಳುವುದಕ್ಕೆ ಉತ್ಸುಕರಾಗಿದ್ದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದರು. ದೆಹಲಿ-ಲಾಹೋರ್ ನಡುವೆ ಬಸ್ ಸೇವೆ ಆರಂಭಿಸಿದ ಅವರ ಕ್ರಮವಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಬಸ್ ರಾಜತಾಂತ್ರಿಕತೆ’ ಎಂದೇ ಪ್ರಸಿದ್ಧಿ ಪಡೆದು ಸರ್ವಪ್ರಶಂಸೆಗೆ ಪಾತ್ರವಾಯಿತು. 1999 ಫೆಬ್ರವರಿ 20ರಂದು ಸ್ವತಃ ವಾಜಪೇಯಿಯವರೇ ಬಸ್ ಮೂಲಕ ಲಾಹೋರಿಗೆ ಪ್ರಯಾಣಿಸಿ ಪಾಕ್ ಪ್ರಧಾನಿಯನ್ನು ಭೇಟಿಯಾದರು. ಭಾರತ-ಪಾಕ್ ಸಮಸ್ಯೆಯನ್ನು ದಶಕಗಳ ಕಾಲ ನೋಡಿ ಕೈಚೆಲ್ಲಿ ಕುಳಿತಿದ್ದ ಅಂತಾರಾಷ್ಟ್ರೀಯ ಸಮುದಾಯ ಭಾರತದ ಈ ಹೊಸ ನಡೆಯನ್ನು ನೋಡಿ ಮೆಚ್ಚುಗೆಯಿಂದ ತಲೆದೂಗಿತು. ಅಂತೂ ಎರಡೂ ದೇಶಗಳ ನಡುವೆ ಒಂದು ಸೌಹಾರ್ದತೆಯ ವಾತಾವರಣ ಸೃಷ್ಟಿಯಾಯಿತಲ್ಲ ಎಂದು ಜನಸಾಮಾನ್ಯರು ಖುಷಿಪಟ್ಟರು. ‘ಜಂಗ್ ನ ಹೋನೇ ದೇಂಗೇ’ (ಯುದ್ಧ ಎಂದೂ ನಡೆಯಕೂಡದು) ಎಂದು ಎರಡೂ ದೇಶಗಳ ಮುಖ್ಯಸ್ಥರು ಪರಸ್ಪರ ಒಪ್ಪಂದ ಮಾಡಿಕೊಂಡದ್ದು ನೋಡಿ ಜನತೆ ಸಂಭ್ರಮಿಸಿದರು. ವಾಜಪೇಯಿಯವರನ್ನು ತಬ್ಬಿಕೊಂಡು, ಕೈಕುಲುಕಿ ನವಾಜ್ ಷರೀಫ್ ಕಳುಹಿಸಿಕೊಟ್ಟರು. ಕಾರ್ಗಿಲ್ ಕದನ ನಡೆಯುವವರೆಗೆ ಇದೆಲ್ಲ ಬರೀ ನಾಟಕ ಎಂದು ಭಾರತಕ್ಕಾಗಲೀ ಅಂತಾರಾಷ್ಟ್ರೀಯ ಸಮುದಾಯಕ್ಕಾಗಲೀ ಅರ್ಥವಾಗಲೇ ಇಲ್ಲ!
ಇತ್ತ ವಾಜಪೇಯಿ ಮರಳಿ ದೆಹಲಿಗೆ ಬರುತ್ತಿದ್ದಂತೆ ಅತ್ತ ಪಾಕಿಸ್ತಾನ ಮುಜಾಹಿದ್ದೀನ್ ಸೋಗಿನಲ್ಲಿ ತನ್ನ ಅರೆಸೇನಾ ಪಡೆಗಳನ್ನು ರಹಸ್ಯವಾಗಿ ಗಡಿನಿಯಂತ್ರಣ ರೇಖೆಯೊಳಕ್ಕೆ ಕಳುಹಿಸಲು ಆರಂಭಿಸಿತು. ಅಸಲಿಗೆ 1998ರಲ್ಲಿ ಮುಷರ್ರಫ್ ಪಾಕ್ ಸೇನಾ ಮುಖ್ಯಸ್ಥರಾಗಿ ನೇಮಕವಾದಲ್ಲಿಂದಲೇ ಈ ‘ಆಪರೇಷನ್ ಬದ್ರ್’ನ ನೀಲನಕ್ಷೆ ತಯಾರಾಗತೊಡಗಿತ್ತು. ವಾಜಪೇಯಿ ಹೊರಟು ಬಂದಲ್ಲಿಂದ ಅದರ ಅನುಷ್ಠಾನಕ್ಕೆ ವೇಗ ಲಭಿಸಿತ್ತು.
ತಮಾಷೆಯೆಂದರೆ ಇಂದಿನವರೆಗೂ ಪಾಕಿಸ್ತಾನ ಕಾರ್ಗಿಲ್ ಕದನದ ಹಿಂದೆ ತನ್ನ ಪಾತ್ರವಿದೆಯೆಂದು ಅಧಿಕೃತವಾಗಿ ಒಪ್ಪಿಕೊಂಡೇ ಇಲ್ಲ. ಗಡಿನಿಯಂತ್ರಣ ರೇಖೆಯಿಂದೀಚೆಗೆ ನುಸುಳಿದ್ದು ಯಾರೆಂದೇ ಅದಕ್ಕೆ ಗೊತ್ತಿಲ್ಲವಂತೆ. ನವಾಜ್ ಷರೀಫ್ ಅಂತೂ ವಾಜಪೇಯಿ ತಮಗೆ ತುರ್ತು ಫೋನ್ ಕರೆ ಮಾಡುವವರೆಗೆ ಕಾರ್ಗಿಲ್‍ನಲ್ಲಿ ನಡೆದ ಘಟನೆಗಳ ಬಗ್ಗೆ ಏನೇನೂ ಮಾಹಿತಿಯಿರಲಿಲ್ಲವೆಂದು ಹಸಿಹಸಿ ಸುಳ್ಳುಹೇಳಿದರು. ಆದರೆ ಪಾಕ್ ಪ್ರಧಾನಿಯಿಂದ ತೊಡಗಿ ಸೇನಾ ಮುಖ್ಯಸ್ಥರುಗಳವರೆಗೆ ಅನೇಕ ಮಂದಿ ಕಾರ್ಗಿಲ್ ಯುದ್ಧದ ಬಳಿಕ ಬೇರೆಬೇರೆ ಸಂದರ್ಭಗಳಲ್ಲಿ ನೀಡಿದ ಹೇಳಿಕೆಗಳು ಒಟ್ಟಾರೆ ಘಟನೆಯ ಹಿಂದೆ ಪಾಕಿಸ್ತಾನದ ಸಕ್ರಿಯ ಪಾತ್ರ ಇದ್ದುದನ್ನು ದೃಢಪಡಿಸಿವೆ. ಕಾರ್ಗಿಲ್ ದಾಳಿಯ ಯೋಜನೆಯ ಬಗ್ಗೆ ವಾಜಪೇಯಿ ಭೇಟಿಗೂ ಎರಡು ವಾರ ಮುನ್ನವೇ ತಾನು ಷರೀಫ್ ಜೊತೆಗೆ ಚರ್ಚೆ ಮಾಡಿದ್ದುದಾಗಿ ಮುಷರ್ರಫ್ ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಂದಮೇಲೆ, ಲಾಹೋರ್ ಘೋಷಣೆ ಒಪ್ಪಂದಗಳೆಲ್ಲ ಬರೀ ಬೂಟಾಟಿಕೆ ಅಲ್ಲದೆ ಇನ್ನೇನು?
(ಚಿತ್ರ: ಇಂಟರ್ನೆಟ್) |
ಅದು ಕಾರ್ಗಿಲ್ ಕದನ!
ಜಗತ್ತಿನ ಅತ್ಯಂತ ದುರ್ಗಮ ಯುದ್ಧಭೂಮಿಯೆಂದೇ ಹೆಸರಾಗಿರುವ ಕಾರ್ಗಿಲ್‍ನಲ್ಲಿ ನಡೆದ ಕದನ ಭಾರತಕ್ಕೆ ನಿಜಕ್ಕೂ ಸತ್ತ್ವಪರೀಕ್ಷೆಯೇ ಆಗಿತ್ತು. ಪಾಕ್ ನುಸುಳುಕೋರರು ಅದಾಗಲೇ ಭಾರತ ಪ್ರವೇಶಿಸಿ ಆಯಕಟ್ಟಿನ ಪ್ರದೇಶಗಳಲ್ಲಿ ನೆಲೆಗಳನ್ನು ಭದ್ರಪಡಿಸಿಕೊಂಡಿದ್ದರಿಂದ ಪ್ರತಿರೋಧದ ಆರಂಭದಲ್ಲೇ ಹೆಚ್ಚಿನ ಪ್ರಮಾಣದ ಸಾವು ನೋವುಗಳಾಗುವುದು ಖಚಿತವೆಂದು ಸೇನೆ ಅಂದಾಜಿಸಿತ್ತು. ಆದರೆ ತ್ಯಾಗದ ಹೊರತು ಬೇರೆ ದಾರಿಯಿರಲಿಲ್ಲ. ವೈರಿ ಸಮೂಹ ಶಿಖರಾಗ್ರಗಳಲ್ಲಿ ಹೊಂಚುಹಾಕಿದ್ದರಿಂದ ಭಾರತದ ಎದುರು ದೈತ್ಯ ಸವಾಲೇ ಇತ್ತು. ಎತ್ತರದಲ್ಲಿದ್ದ ವೈರಿಪಡೆಗೆ ಸಹಜವಾಗಿಯೇ ಅನುಕೂಲಕರ ವಾತಾವರಣವಿತ್ತು. ಭಾರತೀಯ ತುಕಡಿಗಳು ಸಾಗಿಬರುವುದನ್ನು ಅವರು ತುಂಬ ಸುಲಭವಾಗಿ ನೋಡಬಹುದಿತ್ತು ಮತ್ತು ದಾಳಿ ನಡೆಸಬಹುದಿತ್ತು. ನಮ್ಮ ಸೈನಿಕರಾದರೋ ಕಡಿದಾದ ಬೆಟ್ಟಗಳನ್ನು ವಸ್ತುಶಃ ತೆವಳಿಕೊಂಡು ಏರಬೇಕಿತ್ತು ಮತ್ತು ಅದೇ ಪರಿಸ್ಥಿತಿಯಲ್ಲಿ ಪ್ರತಿದಾಳಿ ನಡೆಸಬೇಕಿತ್ತು. ಅದಕ್ಕೇ ಕಾರ್ಗಿಲ್‍ನಲ್ಲಿ ಭಾರತೀಯ ಸೈನಿಕರು ಸಾಧಿಸಿದ ವಿಜಯ ಒಂದು ಸಾರ್ವಕಾಲಿಕ ಮತ್ತು ಐತಿಹಾಸಿಕ ವಿಕ್ರಮ.
ಎಲ್ಲ ಇತಿಮಿತಿಗಳ ನಡುವೆಯೂ ಭಾರತದ ದಂಡಯಾತ್ರೆ ಅಭೂತಪೂರ್ವವಾಗಿ ಸಾಗಿತು. ‘ಆಪರೇಷನ್ ವಿಜಯ್’ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿತು. ವಾಯುಸೇನೆ ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್‍ಗಳನ್ನು ಬಳಸಿ ಶತ್ರುನೆಲೆಗಳನ್ನು ಪತ್ತೆಹಚ್ಚಿದರೆ ಪದಾತಿ ಮತ್ತು ಫಿರಂಗಿ ದಳಗಳು ಅತಿಕ್ರಮಣಕಾರರನ್ನು ನಿಗ್ರಹಿಸುತ್ತಾ ಮುಂದುವರಿದವು. ಒಬ್ಬೊಬ್ಬ ಅತಿಕ್ರಮಣಕಾರನು ಗಡಿನಿಯಂತ್ರಣ ರೇಖೆಯಿಂದ ಆಚೆ ತೊಲಗುವವರೆಗೆ ಕದನವಿರಾಮದ ಪ್ರಶ್ನೆಯೇ ಇಲ್ಲ ಎಂದು ದೃಢವಾಗಿ ಹೇಳಿದರು ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್.
ಈ ನಡುವೆ ಪ್ರಧಾನಿ ವಾಜಪೇಯಿ ಶತ್ರುಗಳ ವಿರುದ್ಧ ಹೋರಾಡುತ್ತಿದ್ದ ಸೈನಿಕರಲ್ಲಿ ಉತ್ಸಾಹ ತುಂಬುವುದಕ್ಕಾಗಿ ಖುದ್ದು ಕಾರ್ಗಿಲ್‍ಗೆ ಭೇಟಿ ನೀಡಿದರು. ಭಾರತದ ಇತಿಹಾಸದಲ್ಲೇ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿಯೊಬ್ಬರು ಯುದ್ಧಕ್ಷೇತ್ರಕ್ಕೆ ಭೇಟಿಕೊಟ್ಟ ಈ ಅಪೂರ್ವ ಸಂದರ್ಭ ಸೈನಿಕರಲ್ಲಿ ಅಪಾರ ಹುಮ್ಮಸ್ಸನ್ನೂ ಮನೋಧೈರ್ಯವನ್ನೂ ತುಂಬಿತು. ವೈರಿಪಡೆ ವಶಪಡಿಸಿಕೊಂಡಿದ್ದ ಪ್ರದೇಶಗಳೆಲ್ಲ ಮತ್ತೆ ಒಂದೊಂದಾಗಿ ಭಾರತದ ತೆಕ್ಕೆಗೆ ಬರಲಾರಂಭಿಸಿದವು. 17000 ಅಡಿ ಎತ್ತರದಲ್ಲಿದ್ದ ತೊಲೊಲಿಂಗ್ ಪರ್ವತ ಪ್ರದೇಶ, ದ್ರಾಸ್ ವಲಯದ ದುರ್ಗಮ ಕಣಿವೆ, ಬಟಾಲಿಕ್ ವಲಯದ ಎರಡು ಪ್ರಮುಖ ನೆಲೆಗಳನ್ನು ಭಾರತ ವಶಪಡಿಸಿಕೊಳ್ಳುತ್ತಿದ್ದಂತೆ ಅತಿಕ್ರಮಣಕಾರರ ಶಕ್ತಿ ಕುಸಿಯತೊಡಗಿತು.
ಶ್ರೀನಗರ-ಲೇಹ್ ಹೆದ್ದಾರಿಗೆ ಅಭಿಮುಖವಾಗಿರುವ ಟೈಗರ್ ಹಿಲ್ಸ್ ಮೇಲೆ ವಿಜಯ ಪತಾಕೆ ಊರಿದಾಗಲಂತೂ ಭಾರತ ಆತ್ಮವಿಶ್ವಾಸದಿಂದ ನಳನಳಿಸುತ್ತಿತ್ತು. ಜುಬಾದ್ ಹಿಲ್ಸ್ ವಶಪಡಿಸಿಕೊಂಡು ಅದರ ತುದಿಯಲ್ಲಿದ್ದ ವೈರಿಪಡೆಯ ಮದ್ದುಗುಂಡುಗಳ ಕೋಠಿಯನ್ನು ನಾಶಪಡಿಸಿದ ಮೇಲೆ ಅತಿಕ್ರಮಣಕಾರರಿಗೆ ಪಲಾಯನವಲ್ಲದೆ ಬೇರೆ ದಾರಿಯೇ ಇರಲಿಲ್ಲ. ಕೊನೆಗೂ ಜುಲೈ 26ರಂದು ಭಾರತ ಕದನವನ್ನು ನಿಲ್ಲಿಸಿ ವಿಜಯ ದುಂದುಭಿಯನ್ನು ಮೊಳಗಿಸಿತು. ಅದರ ಸವಿನೆನಪೇ ನಾವಿಂದು ಹೆಮ್ಮೆಯಿಂದ ಆಚರಿಸುತ್ತಿರುವ ಕಾರ್ಗಿಲ್ ದಿನ.
ಆತ್ಮಾವಲೋಕನದ ಸಮಯ
ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಕಾರ್ಗಿಲ್ ವಿಜಯ ಅಷ್ಟೊಂದು ಅನಾಯಾಸವಾಗಿಯೇನೂ ಒದಗಿಬರಲಿಲ್ಲ ಎಂಬುದನ್ನು ಮನಗಾಣುವುದು ಮುಖ್ಯ. ಈ ವಿಜಯದ ಹಿಂದೆ ಹತ್ತುಹಲವು ಬಲಿದಾನಗಳ ಕರುಣಾಜನಕ ಕಥೆಗಳಿವೆ. ಐದುನೂರಕ್ಕೂ ಹೆಚ್ಚು ಕೆಚ್ಚೆದೆಯ ವೀರರು ಈ ಕದನದಲ್ಲಿ ಪ್ರಾಣಾರ್ಪಣೆ ಮಾಡಬೇಕಾಯಿತು. ಸುಮಾರು 1500 ಸೈನಿಕರು ಗಾಯಗೊಂಡರು, ಅನೇಕರು ಶಾಶ್ವತವಾಗಿ ಅಂಗವಿಕಲರಾದರು. ಅದೆಷ್ಟೋ ಮಹಿಳೆಯರು ವಿಧವೆಯರಾದರು, ಅಮ್ಮ-ಅಪ್ಪಂದಿರು ತಮ್ಮ ಭರವಸೆಯ ಕುಡಿಗಳನ್ನು ಕಳೆದುಕೊಂಡರು, ಮಕ್ಕಳು ತಬ್ಬಲಿಗಳಾದರು. ರಕ್ತದಷ್ಟೇ ದುಃಖದ ಕಣ್ಣೀರೂ ಕೋಡಿಯಾಗಿ ಹರಿಯಿತು.
“ಒಂದೋ ನಾನು ತ್ರಿವರ್ಣಧ್ವಜವೇರಿಸಿ ಬರುತ್ತೇನೆ. ಇಲ್ಲವೇ ಅದೇ ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ಬರುತ್ತೇನೆ. ಆದರೆ ನಾನು ಬಂದೇ ಬರುತ್ತೇನೆ...” ಹೀಗೆಂದು ಯುದ್ಧರಂಗಕ್ಕೆ ಹೋಗಿ, ಸಾವನ್ನಪ್ಪಿದ 24 ವರ್ಷದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಶೌರ್ಯದ ಕಥಾನಕ ನಮ್ಮ ಮುಂದಿದೆ. ಮದುವೆಯಾಗಿ ನಾಲ್ಕೇ ತಿಂಗಳಿಗೆ ಕನಸು ಕಂಗಳ ಪತ್ನಿಯನ್ನು ಮನೆಯಲ್ಲಿ ಬಿಟ್ಟು ಕಾರ್ಗಿಲ್‍ಗೆ ತೆರಳಿ ಮತ್ತೆರಡು ತಿಂಗಳಲ್ಲಿ ಹೆಣವಾಗಿ ಮರಳಿದ ಜಸ್‍ವಿಂದರ್ ಸಿಂಗ್‍ನ ಬಲಿದಾನದ ಕಥೆ ನಮ್ಮ ಮುಂದಿದೆ. ಯುದ್ಧದಿಂದ ಮರಳಿದ ಕೂಡಲೇ ನೀನು ಹುಡುಕಿದ ಹುಡುಗಿಯನ್ನು ಮದುವೆಯಾಗುತ್ತೇನಮ್ಮ ಎಂದು ತಾಯಿಗೆ ಭಾಷೆಯಿತ್ತು ಹೋಗಿ ಯುದ್ಧಭೂಮಿಯಲ್ಲಿ ಪ್ರಾಣತ್ಯಾಗಗೈದ ಕ್ಯಾಪ್ಟನ್ ಅಮೋಲ್ ಕಾಲಿಯಾ ಅವರ ಹೋರಾಟದ ಗಾಥೆಯಿದೆ.
ನಾಗರಿಕರು; ಕಾಲದ ನಾಳೆಗಳ ಲಾಭವನ್ನು ಬಯಸದವರು
ಸೈನಿಕರೆಂದರೆ ಕನಸುಗಾರರು; ಬಂದೂಕುಗಳು ಬೆಂಕಿಯುಗುಳುವ ವೇಳೆ
ಅವರು ಬೆಚ್ಚಗಿನ ಮನೆಗಳ, ಸ್ವಚ್ಛ ಹಾಸಿಗೆಗಳ,
ಮತ್ತು ತಮ್ಮ ಪತ್ನಿಯರ ಕನಸು ಕಾಣುವರು...
ಎಂದು ಬರೆಯುತ್ತಾರೆ ಸೀಗ್‍ಫ್ರೈಡ್ ಸಾಸೂನ್. ಮಾನವೀಯತೆಗೆ ಬೆಲೆ ಕೊಡುವ ಯಾರೂ ಯುದ್ಧವನ್ನು ಬಯಸುವವರಲ್ಲ. ಅದರಲ್ಲೂ ಭಾರತ ಮೊದಲಿನಿಂದಲೂ ಶಾಂತಿಪ್ರಿಯ ರಾಷ್ಟ್ರ. ಆದರೆ ಶತ್ರುಗಳು ತಾವಾಗಿಯೇ ಕಾಲುಕೆದರಿಕೊಂಡು ಬಂದಾಗ ಕೈಕಟ್ಟಿ ಕೂರುವುದು ಈ ದೇಶದ ಜಾಯಮಾನ ಅಲ್ಲ. ಆದರೆ ಇದರ ಅಂತಿಮ ಪರಿಣಾಮವಾಗುವುದು ನಮ್ಮ ಸೈನಿಕರ ಮೇಲೆ ಮತ್ತವರ ಮುಗ್ಧ ಕುಟುಂಬದ ಮೇಲೆ. ಬಿಸಿಲು, ಮಳೆ, ಗಾಳಿ, ಚಳಿಯೆನ್ನದೆ ಹಗಲಿರುಳೂ ಗಡಿಗಳಲ್ಲಿ ಪಹರೆ ಕಾಯುವ ಈ ಮಹಾನ್ ಯೋಧರಿಗಾಗಿ ಬೆಚ್ಚಗಿನ ಮನೆಗಳಲ್ಲಿ ಕುಳಿತು ಸುಖವಾಗಿ ಉಂಡುಟ್ಟು ಮಲಗುವ ನಾವು ಏನನ್ನು ಕೊಟ್ಟಿದ್ದೇವೆ? ನಾವಿಂದು ಸೆಣಸುತ್ತಿರುವುದು ನಿಮ್ಮ ಒಳ್ಳೆಯ ನಾಳೆಗಳಿಗಾಗಿ ಎಂಬ ಸೈನಿಕರ ಅಂತರಂಗದ ಮಾತುಗಳನ್ನು ಸರ್ಕಾರಗಳಾಗಲೀ, ಜಾತಿ ಮತಗಳನ್ನು ಎತ್ತಿಕಟ್ಟಿ ರಾಜಕೀಯ ಮಾಡುತ್ತಿರುವ ಅಧಿಕಾರ ಲಾಲಸೆಯ ರಾಜಕಾರಣಗಳಾಗಲೀ ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ?
ಕಾರ್ಗಿಲ್ ಕದನದ ಮೊತ್ತಮೊದಲ ಹೀರೋ ಕ್ಯಾ| ಸೌರಭ್ ಕಾಲಿಯಾ. ವೈರಿಪಡೆಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿ ಘೋರ ಸಾವನ್ನಪ್ಪಿದ ಕಾಲಿಯಾ ಆತ್ಮಕ್ಕೆ 18 ವರ್ಷಗಳ ನಂತರವೂ ನ್ಯಾಯ ದೊರಕಿಲ್ಲ. ಮಗನ ಆಸರೆಯಲ್ಲಿ ವೃದ್ಧಾಪ್ಯ ಕಳೆಯಬೇಕಿದ್ದ 70ರ ಇಳಿವಯಸ್ಸಿನ ಆತನ ತಂದೆ ಎನ್. ಕೆ. ಕಾಲಿಯಾ ಪಾಕಿಸ್ತಾನದ ಪೈಶಾಚಿಕ ಕೃತ್ಯವನ್ನು ಪ್ರಶ್ನಿಸಿ ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಬೇಕೆಂದು ಬೇಡಿಕೊಳ್ಳುತ್ತಿರುವುದು ಇಂದಿಗೂ ಅರಣ್ಯ ರೋದನವಾಗಿಯೇ ಉಳಿದಿದೆ. ರಾಜತಾಂತ್ರಿಕ ಸಂಬಂಧಗಳ ನೆಪ ಹೇಳಿ ಈ ಎರಡು ದಶಕಗಳಲ್ಲಿ ಬಂದಿರುವ ಅಷ್ಟೂ ಸರ್ಕಾರಗಳು ಕಾಲಿಯಾ ತಂದೆಯ ಮನವಿ ಬಗ್ಗೆ ದಿವ್ಯ ಮೌನವನ್ನು ತಾಳುತ್ತಲೇ ಬಂದಿವೆ. ಇದುವೇ ಏನು ದೇಶಕ್ಕಾಗಿ ಹುತಾತ್ಮರಾದ ವೀರಯೋಧರನ್ನು ನಾವು ಸ್ಮರಿಸಿಕೊಳ್ಳುವ ರೀತಿ?