ಇಂದಿನ ಪತ್ರಿಕೆ ನಾಳಿನ ಇತಿಹಾಸ ಎಂಬ ಮಾತನ್ನು ಸಾಕ್ಷೀಕರಿಸಲೋ ಎಂಬ ಹಾಗೆ ಅಷ್ಟೆತ್ತರದ ಪತ್ರಿಕಾ ರಾಶಿ ನಡುವೆ ಕುಳಿತಿದ್ದ ಎಕ್ಕಾರು ಉಮೇಶರಾಯರು ಆ ಕ್ಷಣಕ್ಕೆ ಒಬ್ಬ ಅಪ್ಪಟ ಇತಿಹಾಸಕಾರರಂತೆ ಕಂಡರು. ಹತ್ತಲ್ಲ, ನೂರಲ್ಲ, ಬರೋಬ್ಬರಿ ಮೂರು ಸಾವಿರ ಪತ್ರಿಕೆಗಳು.
ಭಾರತದಲ್ಲಿ ೬೦,೦೦೦ಕ್ಕೂ ಹೆಚ್ಚು ಪತ್ರಿಕೆಗಳಿವೆಯೆಂದು ಪರಿವೀಕ್ಷಣಾ ಸಂಸ್ಥೆಗಳು ಪ್ರಕಟಿಸುವಾಗ ‘ಹೌದಲ್ಲ... ಎಂತಹ ಮಾಧ್ಯಮ ಸಾಮ್ರಾಜ್ಯ ನಮ್ಮದು...’ ಎಂದು ಹೆಮ್ಮೆಪಡುವುದಿದೆ. ಹಾಗೆಂದು ಸುಮ್ಮನೇ ಕುಳಿತು ಒಂದಷ್ಟು ಪತ್ರಿಕೆಗಳ ಪಟ್ಟಿ ಮಾಡೋಣವೆಂದು ಗಂಟೆಗಟ್ಟಲೆ ತಲೆಕೆರೆದುಕೊಂಡರೂ ಅಬ್ಬಬ್ಬಾ ಎಂದರೆ ಇಪ್ಪತ್ತೋ ಮೂವತ್ತೋ ಹೆಸರುಗಳನ್ನು ಕಲೆಹಾಕುವುದೂ ಕಷ್ಟವೆನಿಸೀತು. ಅಂತಹುದರಲ್ಲಿ ಮೂರು ಸಾವಿರ ಪತ್ರಿಕೆಗಳನ್ನು ಸಂಗ್ರಹಿಸಿ ಕಾಪಾಡಿಕೊಂಡು ಬರುವುದೆಂದರೆ ಅದನ್ನೊಂದು ತಪಸ್ಸೆನ್ನದೆ ಬೇರೆ ವಿಧಿಯಿಲ್ಲ.
ಅದಕ್ಕೇ ಉಮೇಶರಾಯರು ಒಬ್ಬ ತಪಸ್ವಿಯಾಗಿಯೂ ಇತಿಹಾಸಕಾರರಾಗಿಯೂ ಕಾಣುತ್ತಾರೆ. ಅವರನ್ನು ಭೆಟ್ಟಿಯಾಗಿ ಅವರ ಅಪೂರ್ವ ಸಂಗ್ರಹವನ್ನು ಕಣ್ತುಂಬಿಕೊಂಡು ಅಭಿನಂದಿಸಿ ಬರೋಣವೆಂದು ಇತ್ತೀಚೆಗೆ (ಜನವರಿ ೩೧, ೨೦೧೦) ಖುದ್ದು ಎಕ್ಕಾರಿಗೆ ಪ್ರಯಾಣ ಬೆಳೆಸಿದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ತಂಡಕ್ಕೆ ಸಿಕ್ಕಿದ್ದೂ ಇದೇ ನೋಟ.ಹಲವಾರು ದಶಕಗಳಿಂದ ಜಗತ್ತಿನ ಬೇರೆಬೇರೆ ದೇಶ-ಭಾಷೆಗಳ ಪತ್ರಿಕೆಗಳನ್ನು ಸಂಗ್ರಹಿಸುತ್ತಾ ಅವುಗಳೊಂದಿಗೇ ಸಾಗುತ್ತಾ ಮಾಗುತ್ತಾ ಬಂದಿರುವ ೬೫ರ ಹರೆಯದ ಅವಿವಾಹಿತ ಉಮೇಶರಾಯರಿಗೆ ಪತ್ರಿಕೆಗಳೇ ಕುಟುಂಬ, ಪತ್ರಿಕೆಗಳೇ ಪ್ರಪಂಚ. ಸ್ವತಃ ಒಳ್ಳೆಯ ಬರಹಗಾರರೂ ಓದುಗರೂ ಆಗಿರುವ ರಾಯರು ತಮ್ಮ ಪತ್ರಿಕಾ ಒಡನಾಡಿಗಳೊಂದಿಗೆ ಮೌನವಾಗಿ ಮಾತಾಡಬಲ್ಲರು. ಅಂತಹದೊಂದು ವಿಶಿಷ್ಟ ಭಾಷೆ ಅವರಿಗೆ ಸಿದ್ಧಿಸಿದೆ...
ಪೂರ್ಣ ಓದಿಗಾಗಿ ನೋಡಿ: http://mangalorepress.blogspot.com/