ಶನಿವಾರ, ಸೆಪ್ಟೆಂಬರ್ 12, 2009

ಮೇಷ್ಟ್ರು ಪತ್ರ ಬರೆದಿದ್ದಾರೆ

'ದೃಷ್ಟ-ಅದೃಷ್ಟ’ದ ಕರ್ತೃ ಎಳ್ಯಡ್ಕ ಎಸ್. ಈಶ್ವರ ಭಟ್ರು ಪತ್ರ ಬರೆದಿದ್ದಾರೆ. ಇದೊಂದು ಖಾಸಗಿ ಪತ್ರವಾಗಿದ್ದರೂ, ನೀವೂ ಗಮನಿಸಬಹುದಾದಂತಹ ಒಂದೆರಡು ಅಮೂಲ್ಯ ಮಾತುಗಳು ಇದರಲ್ಲಿವೆ ಎಂಬ ಕಾರಣಕ್ಕಾಗಿ ಅದನ್ನಿಲ್ಲಿ ಪ್ರಕಟಿಸುತ್ತಿದ್ದೇನೆ. "ಮರದಿಂದ ಬೀಳುವ ಹಣ್ಣು ನಮಗೆ ಆಹಾರವಾಗಿ ಬಳಸಿ ಸಂತಸಪಡುವುದೇ ಬೇರೆ. ಕಾಯಿ ಕೀಳಲು ಹೋಗಿ ಅಪಾಯ ಎದುರಿಸುವುದೇ ಬೇರೆ" ಎಂಬ ಪತ್ರದ ಕೊನೇ ಸಾಲಂತೂ ನನ್ನನ್ನು ಬಹಳವಾಗಿ ಕಾಡಿತು. ಭಟ್ರ ಅನುಮತಿ ಪಡೆದೇ ಇಡೀ ಪತ್ರವನ್ನು ಏನೂ ಬದಲಾವಣೆಯಿಲ್ಲದೆ ಇಲ್ಲಿ ಕೊಡುತ್ತಿದ್ದೇನೆ. ನೀವೂ ಓದಿ.





ಎಳ್ಯಡ್ಕ

೬.೯.೦೯

ಆತ್ಮೀಯರಾದ ಪದ್ಮನಾಭ ಸಿಬಂತಿಯವರಿಗೆ 'ದೃಷ್ಟ-ಅದೃಷ್ಟ’ ಬಳಗದ ಪರವಾಗಿ ನಮಸ್ಕಾರಗಳು. ವಿಶೇಷ ಸಿದ್ಧತೆ, ತಯಾರಿಗಳಿಲ್ಲದೆ, ಮುಂದಿನ ರೂಪು-ರೇಷೆಗಳ ಯೋಜನೆಯಿಲ್ಲದೆ, ಮಗ ಮಹೇಶನ ಕೇಳಿಕೆಯ ಮೇರೆಗೆ, ಗುರುಗಳ ಆಗಮನದ ನಿರೀಕ್ಷೆಯೊಂದಿಗೆ ಅಕಸ್ಮಾತ್ತಾಗಿ ಹೊರಬಂದ ಕೃತಿ 'ದೃಷ್ಟ-ಅದೃಷ್ಟ’. ಮುದ್ರಣಕ್ಕೆ ಮೊದಲೇ ಆತುರಾತುರವಾಗಿ ಬರೆದು, ಪ್ರೌಢಶಾಲಾ ತರಗತಿಯಲ್ಲಿ ನನ್ನ ವಿದ್ಯಾರ್ಥಿನಿ, ಈಗ ಪ್ರೌಢೆಯಾಗಿರುವ ನಮ್ಮ ನೆಚ್ಚಿನ ಶಿಷ್ಯೆ ಹಾಗೂ ನೆರೆಹೊರೆಯ ಕುಮಾರಿ ಅಕ್ಷತಾಳಿಂದ ಗಣಕ ಯಂತ್ರಕ್ಕೆ ಸಾಗಿಸಿ, ವಿದ್ಯುನ್ಮಾನ ಅಂಚೆಯ ಮೂಲಕವೇ ಬೆಂಗಳೂರು, ಕ್ಯಾಲಿಫೋರ್ನಿಯಾಗಳಲ್ಲಿರುವ ಮಕ್ಕಳ ಕೈ ಸೇರಿ, ಅವರಿಂದ ಕುಟುಂಬದ ಅತ್ಮೀಯರಾದ ಕುಮಾರಿ ಮನೋರಮಾ ಅವರ ಕೈಸೇರಿ, ಅವರಿಂದ ಪುಸ್ತಕ ರೂಪ ಪಡೆದು, ಅದೇ ಮಾರ್ಗವಾಗಿ, ಶ್ರೀ ಗುರುಗಳ ಪಾದಗಳಿಗೆ ಒಪ್ಪಿಸಲ್ಪಟ್ಟು, ಅವರಿಂದ ಆಶೀರ್ವಚನಗಳೊಂದಿಗೆ ಅಕ್ಷರೋದ್ಯಮದ ಸುನೀಲ್ ಜೀ ಯವರಿಂದ ವಿನ್ಯಾಸಗೊಂಡು ಮಿಂಚಿನವೇಗದಲ್ಲಿ ಪ್ರಕಟವಾದ ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ, ಮೆಚ್ಚುಗೆಯ ಮಾತುಗಳನ್ನು ಬರೆದು 'ಬ್ಲಾಗ್’ ಮೂಲಕ ದೇಶ-ದೇಶಾಂತರದ ನೂರಾರು ಓದುಗರಿಗೆ ಪರಿಚಯಿಸಿದ ಹೆಮ್ಮೆ ನಿಮ್ಮದಾಗಿದೆ.



ಯಾವುದೇ ಮಾತುಗಳನ್ನು ಅರ್ಥೈಸಿಕೊಳ್ಳಲು ವ್ಯಕ್ತಿ ಸಾಕಷ್ಟು ಪಕ್ವತೆಯನ್ನು ಪಡೆದಿರಬೇಕು. ಭಗವದ್ಗೀತೆ ಅರ್ಜುನನಿಗಾದ ಅರ್ಥ ಸಾಮಾನ್ಯನಿಗಾಗದು. ಶಂಕರ, ಮಧ್ವ, ರಾಮಾನುಜರಿಗಾದ ಅರ್ಥ ನಮಗಾಗದು. ನಮಗಾದ ಅರ್ಥ ವಿದೇಶೀಯನಿಗಾಗದು. ಸಾಮಾನ್ಯ ಅದೇ ರೀತಿಯ ಸನ್ನಿವೇಶಗಳನ್ನು ಎದುರಿಸಿದ ನಿಮ್ಮ ಕುಟುಂಬದ ಬವಣೆ ತಮಗೆ ಅದನ್ನು ಅರ್ಥ ಮಾಡಿಕೊಳ್ಳಲು ಸುಲಭ ಮಾಡಿತು.



ನನ್ನ ಪ್ರಧಾನ ಗುರಿ ನನ್ನ ಮಕ್ಕಳು, ಪ್ರೀತಿಯ ಶಿಷ್ಯ ವೃಂದ ಹಾಗೂ ನನ್ನ ಅಭಿಮಾನಿಗಳು. ಯಾವುದೇ ಅತಿಶಯೋಕ್ತಿಗಳನ್ನಾಗಲೀ, ಮಾಡದ ಸಾಧನೆಗಳನ್ನಾಗಲೀ ಬರೆದು ನನ್ನನ್ನು ತೀರಾ ಸನಿಹದಿಂದ ಬಲ್ಲ ಓದುಗರ, ಮಕ್ಕಳ, ಶಿಷ್ಯಂದಿರ ಮುಂದೆ ಹೆಚ್ಚುಗಾರಿಕೆ ಹೇಳಿ ಅವರನ್ನು ದಾರಿ ತಪ್ಪಿಸುವ ಉದ್ದೇಶ ನಮಗಿಲ್ಲ. ಯಾರ ದೆಸೆಯಿಂದ ನಾವು ದಿಕ್ಕಾಪಾಲಾಗಿದ್ದೆವೋ ಅದೇ ಚಂಬ್ಳಿತ್ತಿಮಾರಿನ ಇಂದಿನ ಮಕ್ಕಳು ಈ ಕೃತಿಯನ್ನು ಅಭಿಮಾನಪೂರ್ವಕವಾಗಿ ಓದಿ ಮೆಚ್ಚುಗೆ ತೋರಿದ ಸನ್ನಿವೇಶ ಹಾಗೂ ಇನ್ನಷ್ಟು ಪ್ರತಿಗಳಿಗಾಗಿ ಕಳಕಳಿಯ ಕೇಳಿಕೆ ನಿಜಕ್ಕೂ ಸಂತೋಷದಾಯಕ.



ಬಡತನದ ಬವಣೆಯ ಕಾಲದಲ್ಲೂ ಸ್ವಾಭಿಮಾನ, ಧೈರ್ಯ, ಅಪರಿಗ್ರಹ, ಸಮಚಿತ್ತಗಳಿಂದ ಮುನ್ನಡೆಸಿದ ನಮ್ಮ ತಂದೆ ಮೂವರು ಮೊಮ್ಮಕ್ಕಳನ್ನೂ, ಅವರ ಸನ್ನಡತೆಯನ್ನೂ ನೋಡಿಯೇ ಕಣ್ಣುಮುಚ್ಚಿದರೂ ನಮ್ಮೆಲ್ಲರ ಪೂಜನೀಯರಾಗಿದ್ದಾರೆ. ಸಂತೋಷದ ಮುಖವಾಡದ ಹಿಂದಿದ್ದ ಹಸಿವು, ಬವಣೆಗಳನ್ನು ಸಮಾಜಕ್ಕೆ ಕಾಣದಂತೆ ಮರೆಮಾಚಿ ಬದುಕಿದ ನಾವು ಒಡನಾಡುತ್ತಿದ್ದುದು ಉದಾತ್ತ ಗುಣವುಳ್ಳ ಅನುಕೂಲಸ್ಥರ ಜೊತೆಯಲ್ಲಿ ಎಂಬುದು ಕರಿಕಳ ಗೋಪಾಲಕೃಷ್ಣಯ್ಯ, ಕುಂಞಿಹಿತ್ಲು ಶಿವರಾಮ ಭಟ್ಟರ ಒಡನಾಟದಿಂದ ನೀವು ತಿಳಿದಿರಬಹುದು. ಮರದಿಂದ ಬೀಳುವ ಹಣ್ಣು ನಮಗೆ ಆಹಾರವಾಗಿ ಬಳಸಿ ಸಂತಸಪಡುವುದೇ ಬೇರೆ. ಕಾಯಿ ಕೀಳಲು ಹೋಗಿ ಅಪಾಯ ಎದುರಿಸುವುದೇ ಬೇರೆ.



ಕೃತಿಯ ಬಗ್ಗೆ ಮೆಚ್ಚುಗೆ ತೋರಿದ್ದಕ್ಕೆ ಅನಂತ ಕೃತಜ್ಞತೆಗಳೊಂದಿಗೆ-

ತಮ್ಮ ಆತ್ಮೀಯ,
ಎಸ್. ಈಶ್ವರ ಭಟ್, ಎಳ್ಯಡ್ಕ