ಯಾವ ಹುತ್ತದಲ್ಲಿ ಯಾವ ಹಾವೋ ಅಂತ ನಾನು ಹೇಳಿದರೆ ನೀವು ಅಪಾರ್ಥ ಮಾಡಿಕೊಳ್ಳಬಾರದು. ಆದರೆ ನಮ್ಮ ಸಂದೀಪನ ಕವನಗಳನ್ನು ಓದಿದ ಬಳಿಕ ಥಟ್ಟನೆ ನಾನು ಹಾಗಂದುಕೊಂದದ್ದು ನಿಜಾ ನಿಜ.
ಹೌದು ಸಾರ್, ಈ ನಮ್ಮ ಸಂಕು ಸ್ವಲ್ಪ ಸೆನ್ಸ್ ಇರೋ ಜನ ಅಂತ ಮೊದಲ ಭೇಟಿಯಲ್ಲೇ ನಾನು ನಿರ್ಧರಿಸಿದ್ದೆ. ಆದರೆ ಇವ ಕವನಗಿವನ ಬರಿತಾನೆ ಅಂತ ದೇವರಾಣೆ ನನಗೆ ಗೊತ್ತಿರಲಿಲ್ಲ. ಇವತ್ತು ನಾನು ಬೆಚ್ಚಿ ಬಿದ್ದದ್ದಂತೂ ಸತ್ಯ ಕಣ್ರೀ.
ನಾನು ಸಂದೀಪ್ ಮೊದಲು ಭೇಟಿಯಾದದ್ದು ೨೦೦೨ರಲ್ಲಿ ಡಿಗ್ರಿಯಲ್ಲಿದ್ದಾಗ. ನಮ್ಮನ್ನು ಪರಿಚಯಿಸಿದ್ದು ಎನ್ನೆಸ್ಸೆಸ್. ಕೊಣಾಜೆಯಲ್ಲಿ ನಡೆದ ೧೦ ದಿನಗಳ ವಿಶೇಷ ಶಿಬಿರದಲ್ಲಿ ನಾವು ಒಂದೇ ತಂಡದಲ್ಲಿದ್ದೆವು. ಸಂಕು ನಮ್ಮ ಟೀಂ ಲೀಡರ್ ಆಗಿದ್ದ. ಆ ನಂತರ ನಾವು ಭೇಟಿಯಾದದ್ದು ಮತ್ತೆ ವಿ.ವಿ.ಯಲ್ಲಿ. ಆತ ಇತಿಹಾಸ ವಿಭಾಗವಾದರೆ ನನ್ನದು ಪತ್ರಿಕೋದ್ಯಮ. ಅಲ್ಲೂ ಸ್ಟೂಡೆಂಟ್ ಯೂನಿಯನ್, ಯಕ್ಷಗಾನ, ಸತ್ಯಾಗ್ರಹ, ಸಂಘಟನೆ ಅಂತ ಸದಾ ಓಡಾಡುತ್ತಿದ್ದ ನಮ್ಮ ಪದ್ಮಾರ್ ಟೀಂನಲ್ಲಿ ಸಂಕು ಸಕ್ರಿಯ ಸದಸ್ಯ. ಆ ಬಳಿಕವೂ ಈ ಬಂಧ ಮುಂದುವರಿಸಿದ್ದು ನಮ್ಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಗಳು. ಇಷ್ಟಾದ ಮೇಲೂ ಈ ಮನುಷ್ಯ ಪದ್ಯ ಬರೆಯಬಲ್ಲ ಅಂತ ನನಗೆ ಅರ್ಥವಾಗದ್ದೆ ಆಶ್ಚರ್ಯ.
ಇವತ್ತು ಅಚಾನಕ್ಕಾಗಿ ತನ್ನ ಮೊದಲ ಸಾಲುಗಳು ಇಲ್ಲಿದ್ದಾವೆ ಅಂತ ಸಂದೀಪ್ ಕೆಲವು ಸಣ್ಣ ಪದ್ಯಗಳನ್ನು ಮೇಲ್ ಮಾಡಿದ್ದ. ನಾನು ನಿಜಕ್ಕೂ ಅಚ್ಚರಿಪಟ್ಟೆ. ಕೆಲವು ಸಾಲುಗಳಂತೂ ಅಬ್ಬ ಎನಿಸುವಷ್ಟು ಗಾಢವಾಗಿವೆ. ನನಗೆ ವಿಮರ್ಶೆ ಮಾಡಲು ಬರುವುದಿಲ್ಲ. ಆದರೆ ಒಬ್ಬ ಓದುಗನಾಗಿ ಸಂದೀಪನ ಕೆಲವು ಸಾಲುಗಳು ನನ್ನನ್ನು ಬಹುವಾಗಿ ಕಾಡಿದ್ದಂತೂ ಸುಳ್ಳಲ್ಲ.
'ಚಂಡವ್ಯ್ಯಾಘ್ರನ ನೆನಪು ಬಹಳ ಕಾಡುತಿದೆ ಆತನೇನು ಕಡಿಮೆ ದಯೆಯಲ್ಲಿ ಪುಣ್ಯಕೋಟಿಗಿಂತ..', 'ಇಂದು ಆ ಸಾಲುಗಳಿಲ್ಲ ನಿನ್ನ ಹಾಗೆಯೆ..', 'ನನ್ನತನವನ್ನು ನಿನ್ನತನವನ್ನು ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು', 'ಇಳೆಯ ಬೇಗೆಗಿಂತ ಮನದ ಕುದಿ ಸುಡುತ್ತಿದೆ', ಮುಂತಾದ ಸಾಲುಗಳು ಯಾರನ್ನು ತಾನೆ ಕಾಡುವುದಿಲ್ಲ ಹೇಳಿ?
ಅವನು ಕಳಿಸಿದ್ದಲ್ಲಿ ಕೆಲವನ್ನು ಆಯ್ದು (ಗೆಳೆಯನೆಂಬ ಸಲುಗೆಯಿಂದ ಅವನ ಅನುಮತಿಗೂ ಕಾಯದೆ) ನಿಮಗೆ ತೋರಿಸುತ್ತಿದ್ದೇನೆ. ಓದಿ ನೋಡಿ...
ದಯಾಳು
ಯಾಕೊ ಇಂದು
ಧರಣಿ ಮಂಡಲ ಮಧ್ಯದೊಳಗೆ
ಹಾಡು ನೆನಪಾಗುತಿದೆ...
ಪುಣ್ಯಕೋಟಿಯ ಜೊತೆಚಂಡವ್ಯ್ಯಾಘ್ರನ ನೆನಪು
ಬಹಳ ಕಾಡುತಿದೆ
ಆತನೇನು ಕಡಿಮೆ ದಯೆಯಲ್ಲಿ ಪುಣ್ಯಕೋಟಿಗಿಂತ..
ಕವಿತೆಯ ಸಾಲು
ನಾ ಬರೆದೆ ಕವಿತೆಯ ಸಾಲು ಮರೆತು ಹೋಗಿದೆ...
ನೀನೆಲ್ಲಿ ಸಖಿ???
ನನ್ನ ಸಾಲುಗಳನ್ನ ನೆನಪಿಸಲಾರೆಯ...
ಮರೆತು ಹೋದ ಸಾಲುಗಳಲ್ಲಿ ನೀನಿದ್ದೆಯೊ ನಾನರಿಯೆ...
ಇಂದು ಆ ಸಾಲುಗಳಿಲ್ಲ
ನಿನ್ನ ಹಾಗೆಯೆ..
ನಾನು ನೀನು
ನಾನು ಎಂಬ ಅಹಂ ನನ್ನಲಿಲ್ಲ ಎನ್ನಲಾರೆ.....
ಅದಿಲ್ಲದೆ ನಾನು ನಾನಾದೆನೆ?
ಆದರೆ ನಾನು ನೀನು ಸೇರಿ
ನನ್ನತನವನ್ನು ನಿನ್ನತನವನ್ನು
ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು
ಗೆಳೆತನದ ಹೂವ ಅರಳಿಸಬಲ್ಲೆವು
ಅಲ್ಲವೆ ಸ್ನೇಹಿತ?
ಬಾಳ ಬೆಳಕು
ಮನದ ಬೇಸರ ಕಳೆಯ ಬಯಸಿ
ಕಡಲ ಮರಳ ಮೇಲೆ
ಮನದ ಬಯಕೆಗಳ ಸಮಾಧಿ ಮಾಡಿ
ಮನಸಿಲ್ಲದ ಮನಸಿನಿಂದ
ಮನವ ಅಡವಿಟ್ಟು ಕುಳಿತಿದ್ದೆ...
ಮಿಂಚುಹುಳವೊಂದು ಕರೆಯಿತು
ಮಲೆನಾಡ ಕಡೆಗೆ ಹೊರಟೆ ನಾ
ಬೆಳಕ ಜಾಡು ಹಿಡಿದು
ಅದು ಬರಿಯ ಬೆಳಕಲ್ಲ...
ಬಾಳ ಇರುಳಲಿ ಜೂತೆನಡೆದು
ಕೈ ಹಿಡಿವ ದೀಪವಾಯಿತು ಕಾಣ...
ಬೇಗುದಿ
ಏನು ಹೊಳೆಯುತ್ತಿಲ್ಲ
ಮನವೆಲ್ಲ ಖಾಲಿ ಖಾಲಿ
ಇಳೆಯ ಬೇಗೆಗಿಂತ
ಮನದ ಕುದಿ ಸುಡುತ್ತಿದೆ
ಇಲ್ಲಿ ಹುಟ್ಟುವುದು ಹಾಡು
ಎಲ್ಲಿಂದಲೊ ಹಾರಿ ಬಂದ ಹಕ್ಕಿ
ಮನದ ಕಿಟಕಿಯಲ್ಲಿ ಕುಳಿತಿದೆ..
ಓಡಿಸಲು ಮನಸ್ಸಾಗದೆ ಮನ ತೆರೆದು ಆಹ್ವಾನಿಸಿದೆ...
ಮನದೊಳಗೆ ಕೂತು ಮನವನರಿತದೆ ಮನಕೆ ಮುದ.
ಮನದಾಳವ ತಲುಫಿದರೆ ಸಂತಸ
ಆದಂತೆ ಅತಿವೃಷ್ಟಿ
ಮಾನವ ಕೆದಕಿದರೆ
ಹೊಸ ತರಂಗಗಳ ಸೃಷ್ಟಿ
ಇದು ಹಾಡು ಹುಟ್ಟುವ ಸಮಯ
ನನ್ನ ಮನ
ನೀರವ ಹೆದ್ದಾರಿಯಂತೆ ಬಿದ್ದಿದೆ
ಭಾವನೆಗಳಿಗೆ ಎಡೆಯಿಲ್ಲದಂತೆ
ನೀರಾರಿದಕೆರೆಯ
ದಂಡೆಯಂತೆಹಕ್ಕಿಗಳಿಂಚರವಿರದನಿರ್ಜೀವ
ನೀಲಗಿರಿಯ ಕಾಡಂತೆ
ಮಕ್ಕಳ ಕಲರವವಿರದಬೇಸಿಗೆ ರಜೆಯ ಶಾಲೆಯಂತೆ
ಎಲೆಯುದುರಿ ಬೋಳಾದ ಕಾಡಂತೆ
3 ಕಾಮೆಂಟ್‌ಗಳು:
ನನ್ನ ಬರವಣಿಗೆಯ ಸ್ಪೂರ್ತಿ ಆ ಸುರೇಶ್ ಹೆಗ್ಡೆಯವರ ಪ್ರೀತಿಗೆ ಇ ಪದಗಳು....
ನನ್ನತನವನ್ನು ನಿನ್ನತನವನ್ನು
ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು
-ವಿಶಾಲ ಅರ್ಥ ಹೊಳೆಯಿಸುವ ಸಾಲುಗಳು....
hi
sir
very nice ur blog yaa
ಕಾಮೆಂಟ್ ಪೋಸ್ಟ್ ಮಾಡಿ