ಸೋಮವಾರ, ಮಾರ್ಚ್ 5, 2018

ಮನದ ಕತ್ತಲು ಕಳೆಯುವ ಕಾಮನ ಕಿರಣ

ಫೆಬ್ರವರಿ 24- ಮಾರ್ಚ್ 2, 2018ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಜೀವನವನ್ನೆಲ್ಲ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಳೆದ ವ್ಯಕ್ತಿಯೊಬ್ಬ ತನ್ನ ಏಕೈಕ ಮಗನಿಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕೂಡಿಟ್ಟು ಒಂದು ಶುಭಮುಂಜಾನೆ ಇಹಲೋಕ ತ್ಯಜಿಸಿದನಂತೆ. ತಂದೆಯ ವ್ಯವಹಾರವನ್ನು ಮುಂದುವರಿಸಿಕೊಂಡು ಬಂದಿದ್ದ ಮಗ ತನ್ನ ಬಿಡುವಿರದ ಕೆಲಸಕಾರ್ಯಗಳ ನಡುವೆಯೂ ಅಂತ್ಯಕ್ರಿಯೆಯನ್ನು ಸಾರ್ವಜನಿಕ ಸ್ಮಶಾನದಲ್ಲಿ ಮುಗಿಸಿ ವಾಪಸ್ ಬಂದ.

'ಅಲ್ಲಯ್ಯಾ, ಅಪ್ಪನೇ ನಿನಗಾಗಿ ಮಾಡಿರುವ ನಾಲ್ಕಾರು ಎಕರೆ ಜಮೀನಿದೆ. ಅದರಲ್ಲೇ ಒಂದು ಕಡೆ ಅಪ್ಪನನ್ನು ಮಣ್ಣುಮಾಡಿರುತ್ತಿದ್ದರೆ ಅಲ್ಲೇ ಒಂದು ಸಣ್ಣ ಸಮಾಧಿಯೇನಾದರೂ ಮಾಡಬಹುದಿತ್ತು. ಅಪ್ಪನ ಆತ್ಮಕ್ಕೆ ಒಂಚೂರು ಶಾಂತಿ ಸಮಾಧಾನ ಆಗೋದು’ ಎಂದು ಹಿರೀಕರೊಬ್ಬರು ಹಿತವಚನ ಹೇಳಿದರಂತೆ. 'ಹೋಗಿ ಸಾರ್, ಯಾಕೆ ಸುಮ್ನೆ ದುಡ್ಡು ಹಾಳು ಮಾಡೋ ಐಡಿಯಾ ಕೊಡ್ತೀರಾ? ಅಷ್ಟು ಜಾಗದಲ್ಲಿ ಒಂದು ಸೈಟಾದರೂ ಆಗೋದು. ಅಪ್ಪನ ಕಾಲ ಹೆಂಗೂ ಮುಗೀತು. ಎಲ್ಲಿ ಮಣ್ಣು ಮಾಡಿದರೂ ನಡೆಯುತ್ತೆ. ನಾನ್ಯಾಕೆ ಸುಮ್ನೆ ಮೂವತ್ತು ಲಕ್ಷದ ಸೈಟು ಹಾಳು ಮಾಡಿಕೊಳ್ಳಲಿ?’ ಎಂದು ತಿರುಗಿ ಕೇಳಿದನಂತೆ ಮಗ ಮಹಾಶಯ. ಅಯ್ಯೋ ಎಂಥಾ ಕಾಲ ಬಂತಪ್ಪಾ ಎಂದು ನಿಧಾನಕ್ಕೆ ಅಲ್ಲಿಂದ ಕಾಲ್ತೆಗೆದರಂತೆ ಆ ಹಿರೀಕರು.

ಮನುಷ್ಯ ಎಂತಹ ವಿಚಿತ್ರ ಪ್ರಾಣಿ! ಅಪ್ಪನಂತೆ ತಾನೂ ಒಂದು ದಿನ ಶಿವನಪಾದ ಸೇರಬೇಕಾದವನು ಎಂಬುದು ಮಗನಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಸಾಯುವಾಗ ಮೂವತ್ತು ಲಕ್ಷವೇನು, ಒಂದು ಪೈಸೆಯನ್ನೂ ಜತೆಗೆ ಒಯ್ಯಲಾಗದೆಂಬುದೂ ಅವನಿಗೆ ಅರ್ಥವಾಗದ್ದೇನಲ್ಲ. ಆದರೂ ಅಪ್ಪನ ಸಮಾಧಿ ಮಾಡಿದರೆ ಒಂದು ಸೈಟು ವೇಸ್ಟ್ ಆಗುತ್ತದಲ್ಲ ಎಂಬ ಚಿಂತೆ. ನಾಳೆ ತನ್ನ ಮಕ್ಕಳು ತನ್ನ ಬಗ್ಗೆ ಹೀಗೆಯೇ ಮಾತಾಡಿಕೊಂಡರೇನು ಗತಿಯೆಂದು ಅವನ ಮನಸ್ಸಿಗೆ ಹೊಳೆಯಿತೋ ಇಲ್ಲವೋ!

ಉಸಿರು ನಿಂತ ಮೇಲೆ ಉಳಿದದ್ದನ್ನು ಕಳೇಬರ ಎಂದಷ್ಟೇ ಜನ ಕರೆಯುತ್ತಾರೆ. ಅದಕ್ಕೆ ಹೆಸರೂ ಇರುವುದಿಲ್ಲ. ಇದು ತಿಳಿದಿದ್ದೂ ಮನುಷ್ಯ ಜೀವನವನ್ನೆಲ್ಲ ಕುರುಡು ಕಾಂಚಾಣದ ಹಿಂದಿನ ಓಟದಲ್ಲೇ ಕಳೆಯುತ್ತಾನೆ. ಪ್ರತಿನಿಮಿಷವೂ ಸಂಪಾದನೆಯ ಯೋಚನೆ, ತಾನು ತನ್ನದು ಎಂಬ ಮೋಹ. ತನ್ನ ಆಸ್ತಿ ಬೆಳೆಯುತ್ತಿರುವುದನ್ನು ನೋಡುತ್ತಾ ಮನಸ್ಸಿಗೆ ಅದೇನೋ ಸಂತೋಷ ತಂದುಕೊಳ್ಳುತ್ತಾನೆ. ಯಾರೋ ಬಡವನಿಗೆ ಮನಸಾರೆ ಕೈಯೆತ್ತಿ ಒಂದು ರೂಪಾಯಿ ನೀಡುವುದಕ್ಕೆ ಅವನ ಮನಸ್ಸು ಒಪ್ಪುವುದಿಲ್ಲ. ಕಾರಣ ಆಸೆ. ನಾಳೆ ತನಗೆ ಗಲ್ಲುಶಿಕ್ಷೆಯೇ ಕಾದಿದೆ ಎಂಬ ಅರಿವು ಇದ್ದ ವ್ಯಕ್ತಿಯೂ ಯಾವುದೋ ಕ್ಷಣದಲ್ಲಿ ಮನಸ್ಸಿನ ನಿಯಂತ್ರಣ ಕಳೆದುಕೊಂಡು ಒಂಟಿ ಹೆಣ್ಣಿನ ಮೇಲೆ ಅತ್ಯಾಚಾರ ಮಾಡುತ್ತಾನೆ. ಕಾರಣ ಕ್ಷಣಿಕ ಬಯಕೆ. ಎರಡಕ್ಕೂ ಇರುವ ಸಾಮಾನ್ಯ ಹೆಸರು ಕಾಮ.

ಆಸೆಯೆಡೆಗಿನ ನಡಿಗೆ
ಕಾಮ ಅಡರಿಕೊಂಡ ಮನಸ್ಸಿಗೆ ಬೇರೇನೂ ಕಾಣಿಸುವುದಿಲ್ಲ. ಎಷ್ಟೇ ಸಂಪಾದಿಸಿದರೂ, ಎಷ್ಟೇ ಸುಖಪಟ್ಟರೂ ಅದಕ್ಕೆ ಶಾಂತಿಯೂ ಲಭಿಸುವುದಿಲ್ಲ. ಅದು ಇನ್ನೂ ಬೇಕು ಎಂದಷ್ಟೇ ಹೇಳುತ್ತದೆ. ಏಕೆಂದರೆ ಕಾಮ ಕುರುಡು. ಅದನ್ನು ಹೊತ್ತುಕೊಂಡ ಮನುಷ್ಯನೂ ಕುರುಡು. ಅದಕ್ಕೇ ಕವಿ ಸ್ಯಾಮುವೆಲ್ ಜಾನ್ಸನ್ ಹೇಳುತ್ತಾನೆ: 'ಜೀವನವೆಂಬುದು ಆಸೆಯಿಂದ ಆಸೆಯೆಡೆಗಿನ ನಡಿಗೆ; ಸಂತೋಷದಿಂದ ಸಂತೋಷದೆಡೆಗಿನದ್ದಲ್ಲ.’

ಜಗತ್ತಿನ ಮಹಾತ್ಮರೆಲ್ಲರೂ ಬದುಕಿನ ನಶ್ವರತೆ ಹಾಗೂ ಕ್ಷಣಿಕತೆಯ ಬಗೆಗೇ ಮಾತನಾಡಿದರು. ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ. ಮನುಷ್ಯನ ಅವಶ್ಯಕತೆಗಳನ್ನು ಪೂರೈಸಬೇಕಾದ್ದೆಲ್ಲ ಜಗತ್ತಿನಲ್ಲಿದೆ, ಆದರೆ ಅವನ ದುರಾಸೆಗಳನ್ನಲ್ಲ ಎಂದರು ಗಾಂಧೀಜಿ. ಚಿನ್ನ ನೆಕ್ಕಿ ಬಾಳ್ವರಿಲ್ಲ, ಅನ್ನ ಸೂರೆ ಮಾಡಿರಿ ಎಂದರು ಬೇಂದ್ರೆ. ಯಾವುದೇ ಪ್ರತಿಫಲದ ಅಪೇಕ್ಷೆ ಇಟ್ಟುಕೊಳ್ಳಬೇಡ, ನಿನ್ನ ಕೆಲಸವನ್ನಷ್ಟೇ ಮಾಡು, ಅದರಿಂದ ಮಾತ್ರ ಮನಃಶಾಂತಿ ಲಭಿಸುವುದು ಸಾಧ್ಯ ಎಂದು ಎಲ್ಲರಿಗಿಂತಲೂ ಮೊದಲೇ ಘೋಷಿಸಿದ್ದ ಗೀತಾಚಾರ್ಯ.

ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್|
ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ||
ಯೋಗಿಯು ಕರ್ಮಫಲವನ್ನು ಬಿಟ್ಟು ನಿಷ್ಠಾರೂಪವಾದ ಶಾಂತಿಯನ್ನು ಪಡೆಯುತ್ತಾನೆ; ಅಮುಕ್ತನಾದವನು ಕಾಮಪ್ರೇರಣೆಯಿಂದ ಫಲದಲ್ಲಿ ಆಸಕ್ತನಾಗಿ ಬಂಧಿಸಲ್ಪಡುತ್ತಾನೆ - ಎಂಬುದು ಶ್ರೀಕೃಷ್ಣನ ಮಾತು.

ಎಲ್ಲ ಸಮಸ್ಯೆಗಳಿಗೂ ಮೂಲಕಾರಣ ಮನುಷ್ಯನ ಮನಸ್ಸು ಮತ್ತು ಅದರ ಚಾಂಚಲ್ಯ. ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಮಾತ್ರವೇ ಅವನ ಉದ್ಧಾರ ಸಾಧ್ಯ ಎನ್ನುತ್ತದೆ ಭಗವದ್ಗೀತೆ.
'ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ | ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ’ ಎಂಬಲ್ಲಿ ಶ್ರೀಕೃಷ್ಣ 'ಮನಸ್ಸೇ ತನ್ನ ಬಂಧು, ಮನಸ್ಸೇ ತನ್ನ ಶತ್ರು’ ಎಂಬ ಸಾರ್ವಕಾಲಿಕ ಸತ್ಯವನ್ನು ಬೋಧಿಸುತ್ತಾನೆ. ಶತ್ರುವನ್ನು ತನ್ನೊಳಗೇ ಇಟ್ಟುಕೊಂಡ ಮನುಷ್ಯ ಜೀವನಪೂರ್ತಿ ಅದೇ ಶತ್ರುವನ್ನು ಹುಡುಕಿಕೊಂಡು ಜಗತ್ತನ್ನೇ ಜಾಲಾಡುತ್ತಾನೆ.

ಬಯಕೆಗಳನ್ನು ಸುಟ್ಟುಹಾಕುವ
ಬಣ್ಣಗಳ ಹಬ್ಬ ಹೋಳಿ ಕಾಮದಹನದ ಕಥೆ ಹೇಳುತ್ತದೆ. ನಮ್ಮೊಳಗಿನ ಮೇರೆಮೀರಿದ ಬಯಕೆಗಳನ್ನು ಸುಟ್ಟುಹಾಕುವ ಸುಂದರ ಪ್ರತಿಮೆ ಅದು. ಭಾರತೀಯ ಸಂಸ್ಕೃತಿಯಲ್ಲಿ ಕಾಮಕ್ಕೆ ವಿಶಿಷ್ಟ ಸ್ಥಾನವಿದೆ. ಇದು ಕಾಮವನ್ನು ನಿರಾಕರಿಸಿದ ದೇಶ ಅಲ್ಲ; ಅದರ ಇತಿಮಿತಿಗಳನ್ನು ಜಗತ್ತಿಗೆ ತೋರಿಸಿಕೊಟ್ಟ ನೆಲ. ಅರ್ಥ-ಕಾಮಗಳನ್ನು ಧರ್ಮದ ಚೌಕಟ್ಟಿನಲ್ಲಿ ಇರಿಸಿದರಷ್ಟೇ ಮೋಕ್ಷದ ಹಾದಿ ಕಾಣಿಸೀತೆಂದು ಹೇಳಿದ ದೇಶ ಭೂಮಿಯಲ್ಲಿ ಬೇರೆಲ್ಲೂ ಸಿಗದು. ಕಾಮನ ಹುಣ್ಣಿಮೆಯ ಬೆಳಕು ನಮ್ಮ ಸುತ್ತಲಿನ ಕತ್ತಲನ್ನು ತೊಲಗಿಸೀತೇ?

ಸೋಮವಾರ, ಫೆಬ್ರವರಿ 12, 2018

ಬರ್ತ್‌ಡೇಗೆ ಯಕ್ಷಗಾನದ ಉಡುಗೊರೆ

(ದಿನಾಂಕ: ೧೦-೦೨-೨೦೧೮ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ.)
Unedited

ಪಾರ್ಟಿ ಹಾಲ್ ರಂಗುರಂಗಿನ ಬಟ್ಟೆ ತೊಟ್ಟ ಮಕ್ಕಳಿಂದ ತುಂಬಿ ಹೋಗಿದ್ದರೆ ಎದುರಿನ ವೇದಿಕೆ ತರಹೇವಾರಿ ಬಲೂನುಗಳಿಂದ ಹೊಳೆಯುತ್ತಿತ್ತು. ಹೊಸ ಡ್ರೆಸ್ ತೊಟ್ಟು ಶರಧಿ-ಸಮನ್ವಿ ಪುಟಾಣಿಗಳು ವೇದಿಕೆ ತುಂಬ ಚಿಟ್ಟೆಗಳಂತೆ ಓಡಾಡುತ್ತಿದ್ದರೆ ಸೇರಿದ ಓರಗೆಯವರೆಲ್ಲ ಬರ್ತ್‌ಡೇ ವಿಶ್ ಮಾಡಲು ಕಾತರದಿಂದ ಕಾಯುತ್ತಿದ್ದರು.

ಕೇಕ್ ಹಂಚಿದ್ದಾಯಿತು. ಹಾಡು ಹಾಡಿದ್ದಾಯಿತು. ಒಂದಷ್ಟು ಆಟಗಳನ್ನೂ ಆಡಿದ್ದಾಯಿತು. ಇನ್ನೇನು ಮ್ಯಾಜಿಕ್ ಶೋ ಅಥವಾ ಆರ್ಕೆಸ್ಟ್ರಾ ಆರಂಭವಾಗಬಹುದು ಎಂದುಸೇರಿದ ಪ್ರೇಕ್ಷಕರೆಲ್ಲ ಕಾಯುತ್ತಿದ್ದರೆ ಪಕ್ಕದ ಚೌಕಿಯಲ್ಲಿ ಚೆಂಡೆಯ ಸದ್ದು ಮೊಳಗಿತು. 'ಗಜಮುಖದವಗೆ ಗಣಪಗೇ’ ಎಂದು ಹಾಡಿ ಭಾಗವತರು ತಮ್ಮ ಮೇಳದೊಂದಿಗೆ ವೇದಿಕೆಏರಿಯೇ ಬಿಟ್ಟರು.
ಓಡಾಟ ಗಲಾಟೆ ನಿಲ್ಲಿಸಿ ಗಪ್‌ಚುಪ್ಪಾಗಿ ಇದೇನಿದೆಂದು ಮಕ್ಕಳೆಲ್ಲ ವಿಸ್ಮಯದಿಂದ ನೋಡುತ್ತಾ ನಿಂತರೆ ಬರ್ತ್‌ಡೇ ಪಾರ್ಟಿಗೆ ಯಕ್ಷಲೋಕ ಇಳಿದುಬಂದಿತ್ತು. ಮುಂದಿನ ಎರಡುಗಂಟೆ ಕಾಲ ಸುಮಾರು ಮುನ್ನೂರು ಮಂದಿ ಪ್ರೇಕ್ಷಕರು 'ಜಾಂಬವತಿ ಕಲ್ಯಾಣ’ವೆಂಬ ಯಕ್ಷಗಾನವನ್ನು ನೋಡಿ ಕಣ್ಣು ಮನಸ್ಸು ತುಂಬಿಕೊಂಡರು.

ಬರ್ತ್‌ಡೇ ಪಾರ್ಟಿಗೆ ಯಕ್ಷಗಾನವೆಂಬ ಈ ಸರ್‌ಪ್ರೈಸ್ ಗಿಫ್ಟ್ ಪ್ಯಾಕ್ ಮಾಡಿದ್ದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ವಿಜಯಕೃಷ್ಣ. ಕ್ಯಾಂಡಲ್ ಆರಿಸಿ,ಕೇಕ್ ಕಟ್ ಮಾಡಿ, ಮ್ಯಾಜಿಕ್ ಶೋ ಮಾಡಿಸಿ ಬರ್ತ್‌ಡೇ ಮಾಡುವವರ ನಡುವೆ ತಮ್ಮಿಬ್ಬರು ಪುಟಾಣಿ ಹೆಣ್ಣುಮಕ್ಕಳ ಬರ್ತ್‌ಡೇಯನ್ನು ವಿಭಿನ್ನವಾಗಿ ಹೇಗೆ ಮಾಡಿದರೆ ಚೆನ್ನಎಂದು ತಲೆಕೆಡಿಸಿಕೊಂಡಿದ್ದ ವಿಜಯ್-ಸುಮಾ ದಂಪತಿಗಳಿಗೆ ಅದು ಹೇಗೋ ಯಕ್ಷಗಾನದ ಕನಸು ಹತ್ತಿಬಿಟ್ಟಿತು.

'ತುಮಕೂರಿನಲ್ಲಿ ಆರತಿ ಪಟ್ರಮೆ ಮತ್ತು ಸ್ನೇಹಿತರು ’ಯಕ್ಷದೀವಿಗೆ’ ಹೆಸರಿನ ತಂಡವೊಂದನ್ನು ಕಟ್ಟಿಕೊಂಡು ಯಕ್ಷಗಾನ ಆಡುವುದು ನನ್ನ ಗಮನದಲ್ಲಿತ್ತು. ಸಂಬಂಧದಲ್ಲಿ ಆಕೆನನ್ನ ತಂಗಿಯೂ ಆಗಿದ್ದರಿಂದ ನನ್ನ ಮಕ್ಕಳ ಬರ್ತ್‌ಡೇ ಸಂದರ್ಭಕ್ಕೊಂದು ಚಂದದ ಯಕ್ಷಗಾನ ಆಡಬಹುದೇ ಎಂದು ಸಲುಗೆಯಿಂದ ಕೇಳಿದೆ. ಅವರು ಖುಷಿಯಿಂದಒಪ್ಪಿಕೊಂಡು ಬಿಟ್ಟರು. ನನ್ನ ಯೋಚನೆಯನ್ನು ಮನೆಮಂದಿಯೂ ಉತ್ಸಾಹದಿಂದ ಬೆಂಬಲಿಸಿದರು’ ಎಂದು ತಮ್ಮ ಪ್ರಯೋಗದ ಕಥೆಯನ್ನು ಬಿಚ್ಚಿಡುತ್ತಾರೆ ವಿಜಯ್.

ಯಕ್ಷಗಾನದ ಯೋಚನೆಯೇನೋ ಚೆನ್ನಾಗಿಯೇ ಇತ್ತು. ಆದರೆ ಅದನ್ನು ಜಾರಿಗೊಳಿಸುವ ದಾರಿ ಮಾತ್ರ ತುಂಬ ಸವಾಲಿನದ್ದೇ ಆಗಿತ್ತು. ಯಕ್ಷಗಾನಕ್ಕೆ ಹೊಂದುವ ಪಾರ್ಟಿಹಾಲ್ ಯಾವ ಹೊಟೇಲಿನಲ್ಲಿದೆ, ಯಕ್ಷಗಾನದ ಚೆಂಡೆ-ಮದ್ದಳೆಗಳ ಸದ್ದಿಗೆ ಅವರು ತಕರಾರು ಹೇಳಿದರೇನು ಮಾಡುವುದು, ಅಲ್ಲಿ ಎಂತಹ ಸ್ಟೇಜ್ ಹಾಕಬೇಕು, ಸರಿಯಾದಸೌಂಡ್ ಸಿಸ್ಟಮ್-ಬೆಳಕಿನ ವ್ಯವಸ್ಥೆ ಹೇಗೆ ಎಂಬಲ್ಲಿಂದ ತೊಡಗಿ ಹಿಮ್ಮೇಳ-ಮುಮ್ಮೇಳದ ಸಮಯ ಹೊಂದಾಣಿಕೆ, ವೇಷಭೂಷಣಗಳ ವ್ಯವಸ್ಥೆ, ಕಲಾವಿದರಿಗೆ ಉಪಾಹಾರದವ್ಯವಸ್ಥೆ, ಬರ್ತ್‌ಡೇಗೆ ಬರುವವರ ಊಟೋಪಚಾರದ ವ್ಯವಸ್ಥೆಯೆಂದು ತಲೆಕೆಡಿಸಿಕೊಂಡು ವಿಜಯ್ ತಮ್ಮ ಸಾಫ್ಟ್‌ವೇರ್ ಗಡಿಬಿಡಿಗಳ ನಡುವೆಯೂ ಭರ್ತಿ ಒಂದು ತಿಂಗಳುಓಡಾಡಿದರು.

'ಎಲ್ಲ ಓಡಾಟಗಳೂ ಸಾರ್ಥಕ ಅನಿಸಿದ್ದು ಯಕ್ಷಗಾನದಿಂದಾಗಿ ಇಡೀ ಬರ್ತ್‌ಡೇ ಪಾರ್ಟಿಗೆ ಒಂದು ಹೊಸ ಆಯಾಮವೇ ದೊರೆತಾಗ. ಬಂದವರೆಲ್ಲ ಯಕ್ಷಗಾನದಐಡಿಯಾವನ್ನು ಮನಸಾರೆ ಮೆಚ್ಚಿ ಶುಭಾಶಯ ಕೋರಿ ಹೋದರು. ಬಂದವರಲ್ಲಿ ಹೊಸ ಪ್ರೇಕ್ಷಕರಿದ್ದರೂ ತುಂಬ ಮಂದಿ’ ಎನ್ನುತ್ತಾರೆ ವಿಜಯ್.

ಶನಿವಾರ, ಫೆಬ್ರವರಿ 10, 2018

ಶಿಕ್ಷಣ ವ್ಯವಸ್ಥೆಗೆ ಪರೀಕ್ಷಾ ಕಾಲ


ಖಾಸಗಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸ್ನೇಹಿತರೊಬ್ಬರು ಬೆಳ್ಳಂಬೆಳಗ್ಗೆಯೇ ಎಕ್ಸಾಂ ಡ್ಯೂಟಿಯೆಂದು ದೌಡಾಯಿಸುತ್ತಿದ್ದರು. 'ಕಳೆದ ವಾರ, ಅದರಹಿಂದಿನ ವಾರ, ಅದಕ್ಕಿಂತ ಹಿಂದಿನ ತಿಂಗಳೂ ಪರೀಕ್ಷೆಯೆಂದು ಒದ್ದಾಡುತ್ತಿದ್ದಿರಿ; ಏನು ನಿಮ್ಮಲ್ಲಿ ವರ್ಷವಿಡೀ ಪರೀಕ್ಷೆ ಮಾಡುತ್ತೀರೋ ಹೇಗೆ? ಪರೀಕ್ಷೆ ವಿದ್ಯಾರ್ಥಿಗಳಿಗೋ,ನಿಮಗೋ ಅದನ್ನಾದರೂ ಹೇಳಿ ಸ್ವಾಮಿ' ಎಂದು ತಮಾಷೆ ಮಾಡಿದೆ. 'ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ, ನಮ್ಮ ಅವಸ್ಥೆ ನಿಮಗೆಲ್ಲಿ ಅರ್ಥವಾಗಬೇಕು' ಎಂದು ಗೊಣಗಾಡಿದರು ಅವರು.

ಮುಂದಿನ ಮಾರ್ಚ್‌ನಲ್ಲಿ ಪರೀಕ್ಷೆ ನಿಗದಿಯಾಗಿದ್ದರೆ ಹಿಂದಿನ ಅಕ್ಟೋಬರಿನಲ್ಲಿಯೇ ಸಿಲೆಬಸ್ ಮುಗಿದಿರುವುದು ಕಡ್ಡಾಯ. ಅಲ್ಲಿಂದ ಮುಂದೆ ನಾಲ್ಕು ತಿಂಗಳು ಪರೀಕ್ಷೆಗಳಮ್ಯಾರಾಥಾನ್. ಪ್ರಶ್ನೆಪತ್ರಿಕೆ ತಯಾರಿಸು, ಪರೀಕ್ಷೆ ನಡೆಸು, ಮೌಲ್ಯಮಾಪನ ಮಾಡು- ಇವಿಷ್ಟು ಅಧ್ಯಾಪಕರ ದಿನಚರಿಯಾದರೆ ಓದು, ಪರೀಕ್ಷೆ ಬರೆ, ಪುನಃ ಓದು- ಇವಿಷ್ಟುವಿದ್ಯಾರ್ಥಿಗಳ ದಿನಚರಿ. ಕಾಲೇಜುಗಳು ಏನನ್ನು ಕಲಿಸುತ್ತಿವೆ? ವಿದ್ಯಾರ್ಥಿಗಳು ಏನನ್ನು ಕಲಿಯುತ್ತಿದ್ದಾರೆ?

ಎಷ್ಟು ಚೆನ್ನಾಗಿದ್ದವು ಆ ದಿನಗಳು! ಜೂನ್‌ನಲ್ಲಿ ತರಗತಿಗಳು ಆರಂಭವಾದರೆ ಅಕ್ಟೋಬರ್‌ನಲ್ಲೊಂದು ಅರ್ಧವಾರ್ಷಿಕ ಪರೀಕ್ಷೆ, ಜತೆಗೆ ದಸರಾ ರಜೆಯ ಸಡಗರ. ಮತ್ತೆನವೆಂಬರ್‌ನಲ್ಲಿ ತರಗತಿಗಳು ಪುನರಾರಂಭವಾದರೆ ಮಾರ್ಚ್‌ನಲ್ಲಿ ವಾರ್ಷಿಕ ಪರೀಕ್ಷೆ, ಏಪ್ರಿಲ್-ಮೇ ಎರಡು ತಿಂಗಳು ಭರ್ಜರಿ ಬೇಸಿಗೆ ರಜೆ. ಏನು ಓಡಾಟ, ಎಷ್ಟೊಂದುತಿರುಗಾಟ. ಅಜ್ಜನ ಮನೆಯ ತೋಟ, ಚಿಕ್ಕಮ್ಮನ ಮನೆಯ ಗುಡ್ಡ, ದೊಡ್ಡಪ್ಪನ ಮನೆಯ ಹೊಳೆ, ನೆಂಟರಿಷ್ಟರ ಊರಿನ ಜಾತ್ರೆ, ಮನೆಮಂದಿಯೊಂದಿಗಿನ ಪ್ರವಾಸ. ಎರಡೇತಿಂಗಳಲ್ಲಿ ಹೊಸದೊಂದು ಪ್ರಪಂಚದ ದರ್ಶನವಾಗುವ ಹೊತ್ತಿಗೆ ರಜೆಯೂ ಮುಗಿದು ಮೈಮನಗಳೆಲ್ಲ ಅರಳಿ ಹೊಸ ಕಲಿಕೆಗೆ ವೇದಿಕೆ ಸಿದ್ಧವಾಗಿರುತ್ತದೆ.

ಹತ್ತಿಪ್ಪತ್ತು ವರ್ಷಗಳ ಅವಧಿಯಲ್ಲಿ ಕಾಲವೇ ಬದಲಾಗಿ ಹೋಯಿತು ನೋಡಿ. ಮಕ್ಕಳಿಗೆ ರಜೆಯ ಕಲ್ಪನೆ ಹೋಗಲಿ, ಮುಂಜಾನೆ ಮುಸ್ಸಂಜೆಗಳ ಕಲ್ಪನೆಯೇ ಇಲ್ಲ. ವಾರಾಂತ್ಯದಬಿಡುವಂತೂ ಇಲ್ಲವೇ ಇಲ್ಲ. ಚಳಿಯಿರಲಿ ಮಳೆಯಿರಲಿ, ಬೆಳಗ್ಗೆ ಐದು ಗಂಟೆಗೆ ಬ್ಯಾಗು ಬೆನ್ನಿಗೇರಿಸಿ ಟ್ಯೂಷನ್ ಸೆಂಟರುಗಳ ಮುಂದೆ ಕ್ಯೂ ನಿಂತಿರಬೇಕು. ತಿಂಡಿಯ ಶಾಸ್ತ್ರಮಾಡಿ ಕಾಲೇಜು ಸೇರಿದರೆ, ಸಂಜೆ ಮನೆಗೆ ಬರದಿದ್ದರೂ ಮತ್ತೆ ಟ್ಯೂಷನ್ ಸೆಂಟರ್‌ಗಳ ಎದುರು ಜಮಾಯಿಸಲೇಬೇಕು. ಎಂಟೋ ಒಂಬತ್ತೋ ಗಂಟೆಗೆ ಮನೆಗೆ ಬಂದರೆ ಮತ್ತೆಓದು, ಬರೆ, ಉರುಹೊಡೆ, ಪರೀಕ್ಷೆಗೆ ತಯಾರಾಗು. ಬಾಲ್ಯ, ಆಟ, ಬಿಡುವು, ಹರಟೆಗಳ ಚೆಲುವು, ಸೂರ್ಯೋದಯ ಸೂರ್ಯಾಸ್ತಗಳ ಸೊಬಗು, ಮನುಷ್ಯ ಸಂಬಂಧಗಳಗೊಡವೆ ಇಲ್ಲದೆ ಇವರೆಲ್ಲ ಎಲ್ಲಿಗೆ ಓಡುತ್ತಿದ್ದಾರೆ? ಯಾವ ಗುರಿಯನ್ನು ತಲುಪಹೊರಟಿದ್ದಾರೆ?

ಸ್ಪರ್ಧೆಯ ಯುಗ ಹೌದು. ಆದರೆ ಯಾರ ವಿರುದ್ಧ ಈ ಸ್ಪರ್ಧೆ? ಯಾರನ್ನೋ ಸೋಲಿಸಿ ಮುನ್ನಡೆಯುವ ನೆಪದಲ್ಲಿ ನಮ್ಮನ್ನು ನಾವೇ ಸೋಲಿಸುತ್ತಿರುವುದು ಏಕೆ ನಮಗೆಅರ್ಥವಾಗುತ್ತಿಲ್ಲ? ಶಾಲಾ-ಕಾಲೇಜುಗಳಲ್ಲಿ ಪಾಠದ ಬಳಿಕ ಪರೀಕ್ಷೆ ಬರೆಯುತ್ತೇವೆ, ನಿಜ ಜೀವನದಲ್ಲಿ ಪರೀಕ್ಷೆ ಬಳಿಕ ಪಾಠ ಕಲಿಯುತ್ತೇವೆ ಎಂಬ ಹಿರಿಯರ ಮಾತುನೆನಪಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ನಿಜವಾಗಿಯೂ ಪಾಠಗಳು ನಡೆಯುತ್ತಿವೆಯೇ? ಅವು ಯಾವ ಬಗೆಯ ಪಾಠಗಳು? ಆ ಪಾಠಗಳಿಂದ ನಮ್ಮ ಯುವಕರು ಬದುಕಿನಪರೀಕ್ಷೆಗಳನ್ನು ಬರೆಯಲು ಸಮರ್ಥರಾಗುತ್ತಿದ್ದಾರೆಯೇ? ಸಿಲೆಬಸ್‌ಗಳು ಬದಲಾಗುತ್ತಿವೆ, ಹೊಸ ಬೋಧನಾ ವಿಧಾನಗಳು ಬರುತ್ತಿವೆ ನಿಜ; ಆದರೆ ನಮ್ಮ ಮಕ್ಕಳು ಪಾಠಗಳನ್ನುಕಲಿಯುತ್ತಿದ್ದಾರೆಯೇ? ಮಾರ್ಚ್-ಒಕ್ಟೋಬರ್‌ಗಳ ನಡುವೆ ಸಿಲೆಬಸ್‌ಗಳನ್ನು ಮುಗಿಸುವುದೇ ನಮ್ಮ ಕಾಲೇಜುಗಳ ಸಾಧನೆಯೇ? ಅವುಗಳಿಂದಾಚೆ ಶಿಕ್ಷಣ ಸಂಸ್ಥೆಗಳಜವಾಬ್ದಾರಿ ಏನೂ ಇಲ್ಲವೇ?

ಬರೀ ಪರೀಕ್ಷೆಗಳನ್ನೇ ಮಾಡುತ್ತಿದ್ದೀರಿ, ಪಾಠಗಳನ್ನು ಯಾವಾಗ ಮಾಡುತ್ತೀರಿ ಸಾರ್ ಎಂದು ಮೇಲೆ ಹೇಳಿದ ಉಪನ್ಯಾಸಕ ಮಿತ್ರರನ್ನು ಕೇಳಿದೆ. ಅವರಲ್ಲಿ ಉತ್ತರವಿಲ್ಲ.ವಾಸ್ತವವಾಗಿ ಪಾಠಗಳನ್ನು ಮಾಡುವುದು ಅವರ ಮ್ಯಾನೇಜ್ಮೆಂಟಿನ ಭೂಪರಿಗೆ ಬೇಕಾಗಿಲ್ಲ. ಅವರು ಕೇಳುತ್ತಿರುವುದು ರಿಸಲ್ಟ್ ಮಾತ್ರ. ಪಾಠ ಮಾಡಿದಿರೋ ಇಲ್ಲವೋ ಬೇರೆಪ್ರಶ್ನೆ, ಎಲ್ಲರೂ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಬೇಕು, ಕಾಲೇಜಿನ ಎದುರು ಸಾಧಕ ವಿದ್ಯಾರ್ಥಿಗಳ ಫ್ಲೆಕ್ಸುಗಳು ರಾರಾಜಿಸುತ್ತಿರಬೇಕು; ಮುಂದಿನ ವರ್ಷ ಹೊಸ ಪ್ರವೇಶಾತಿಗೆವಿದ್ಯಾರ್ಥಿಗಳು ಮತ್ತವರ ಪೋಷಕರು ಸರತಿಯಲ್ಲಿ ಬರುತ್ತಿರಬೇಕು, ಹಣದ ಹೊಳೆ ಹರಿಯುತ್ತಿರಬೇಕು. ಆಮೇಲೆ ಆ ಹುಡುಗರು ಬದುಕಿದರೋ, ಬೆಳೆದರೋ, ನೆಮ್ಮದಿಯಾಗಿಸಂಸಾರ ಮಾಡಿದರೋ, ನೇಣಿಗೆ ಕೊರಳೊಡ್ಡಿದರೋ ಅವರಿಗೆ ಬೇಕಾಗಿಲ್ಲ. ಈ ಹಣದ ದಾಹ ಎಲ್ಲಿಯವರೆಗೆ?

ನಿಮ್ಮ ಕಾಲೇಜಿನಲ್ಲಿ ಮಕ್ಕಳು ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತಾರೆ ಎಂದು ಅದೇ ಸ್ನೇಹಿತರನ್ನು ಕೇಳಿದೆ. ಹಾಗೆ ಕೇಳುವುದೇ ದೊಡ್ಡ ಮೂರ್ಖತನ. ಬಿಡುವು ಎಂದರೆಟೈಂ ವೇಸ್ಟ್ ಎಂಬ ಶಿಕ್ಷಣ ತಜ್ಞರ ಕೂಟ ಅದು. ಶೌಚಾಲಯಕ್ಕೆ ಹೋಗುವುದಕ್ಕೋ, ಒಂದು ಗುಟುಕು ನೀರು ಕುಡಿಯುವುದಕ್ಕೋ ಬಿಡುವು ಕೊಡದೆ ಬೆಳಗ್ಗಿನಿಂದಸಂಜೆಯವರೆಗೆ ಸಿಲೆಬಸ್‌ನ್ನು ಅರೆದರೆದು ಕುಡಿಸುವ ಪಡಿಪಾಟಲಿನಲ್ಲಿ ಮಕ್ಕಳು ಮನಸ್ಸು ಬಿಚ್ಚಿ ಒಂದು ನಿಮಿಷ ನಕ್ಕು ಹಕ್ಕಿಗಳಂತೆ ಹಗುರಾಗುವ ಕಲ್ಪನೆ ಎಷ್ಟುಕ್ಷುಲ್ಲಕವಾದದ್ದು!

ಭಾಷಣ, ಪ್ರಬಂಧ, ಭಾವಗೀತೆ, ನಾಟಕ, ಯಕ್ಷಗಾನ, ಚರ್ಚಾಸ್ಪರ್ಧೆ, ರಸಪ್ರಶ್ನೆ, ಕೋಲಾಟ, ಸಂಗೀತ- ಹಾಗೆಂದರೆ ಏನೆಂದು ಈ ಮಕ್ಕಳನ್ನು ಕೇಳಿನೋಡಿ. ಅವರಿಗೆ ಟ್ಯೂಷನ್,ಪರೀಕ್ಷೆಗಳನ್ನುಳಿದು ಇನ್ನೇನೂ ಗೊತ್ತಿಲ್ಲ. ಸಾಂಸ್ಕೃತಿಕ-ಸಾಹಿತ್ಯಿಕ ಚಟುವಟಿಕೆಗಳ ಕಲ್ಪನೆಯೇ ಈ ಕಾಲೇಜುಗಳಲ್ಲಿಲ್ಲ. ಭಾಷಾ ತರಗತಿಗಳನ್ನು ತೆಗೆದುಕೊಳ್ಳುವ ಅಧ್ಯಾಪಕರುಏನಾದರೂ ಒಂದಿಷ್ಟು ಉಪಕ್ರಮ ತೋರಬಹುದೇ ಎಂದುಕೊಂಡರೆ ಅಂಥವರು ಮ್ಯಾನೇಜ್ಮೆಂಟಿಗೆ ದೊಡ್ಡ ಹೊರೆ. ಮುಂದೆ ಇಂಜಿನಿಯರುಗಳು ಡಾಕ್ಟರುಗಳಾಗಬೇಕಾದಪ್ರಚಂಡ ಅಂಕಶೂರರಿಗೆ ಭಾಷಾಪಾಠಗಳಿಂದ ವಿಶೇಷ ಅನುಕೂಲವೇನೂ ಇಲ್ಲ. ಭಾಷಾ ಶಿಕ್ಷಕರು ತಮ್ಮ ಪಾಠಗಳನ್ನು ಆದಷ್ಟು ಬೇಗ ಮುಗಿಸಿ ತಮ್ಮ ಅವಧಿಗಳನ್ನು ಕೋರ್ಸಬ್ಜೆಕ್ಟ್‌ನ ಶಿಕ್ಷಕರಿಗೆ ಬಿಟ್ಟುಕೊಡಬೇಕೆಂಬುದು ಇಲ್ಲಿನ ಅಲಿಖಿತ ಸಂವಿಧಾನ.

ದಿನಕ್ಕೆ ಅರ್ಧ ಗಂಟೆಯನ್ನು ವಿದ್ಯಾರ್ಥಿಗಳು ಗ್ರಂಥಾಲಯದಲ್ಲಾದರೂ ಕಳೆಯುತ್ತಾರೋ ಎಂದರೆ ಈ ಕಾಲೇಜುಗಳಲ್ಲಿ ಲೈಬ್ರರಿಗಳೇ ಇಲ್ಲ. ’ನಾಲ್ಕೈದು ವರ್ಷಗಳ ಹಿಂದೆಒಂದು ಸಣ್ಣ ಲೈಬ್ರರಿ ಇತ್ತು, ಅದರಿಂದಾಗಿ ಜಾಗ ವೇಸ್ಟ್ ಆಗುತ್ತದೆ ಎಂದು ತಿಳಿದ ನಮ್ಮ ಮ್ಯಾನೇಜ್ಮೆಂಟು ಅಲ್ಲಿದ್ದ ಪುಸ್ತಕಗಳನ್ನೆಲ್ಲ ಗೋಣಿಚೀಲಗಳಲ್ಲಿ ತುಂಬಿಸಿ ಗೋಡೌನ್‌ಗೆಸಾಗಿಸಿತು. ಹೊಸ ಸೆಕ್ಷನ್ ಆರಂಭಿಸಲು ಒಂದು ಕ್ಲಾಸ್‌ರೂಂ ದೊರೆತಂತಾಯಿತು’ ಎಂದು ವಿವರಿಸಿದರು ಉಪನ್ಯಾಸಕ ಮಿತ್ರರು. ಭಲರೇ, ಎಂತಹ ಶ್ರೇಷ್ಠ ಉಪಾಯ.ಒಂದು ಲೈಬ್ರರಿಯನ್ನು ಮುಚ್ಚಿದರೆ ಕಾಲೇಜಿಗೆ ಹೊಸ ಆದಾಯದ ಮೂಲ ತೆರೆದಂತೆ ಎಂಬುದು ಸದ್ಯದ ಹೊಸ ಗಾದೆ.

ಹೆಚ್ಚೆಂದರೆ ಐವತ್ತು ವಿದ್ಯಾರ್ಥಿಗಳು ಕೂರಬಲ್ಲ ಒಂದೇ ಕೊಠಡಿಯುಳ್ಳ ಒಂದು ಪಿಯು ಕಾಲೇಜನ್ನು ಇತ್ತೀಚೆಗೆ ನೋಡಿದೆ. ಆ ಕಾಲೇಜಿನ ನಿಜವಾದ ವಿದ್ಯಾರ್ಥಿಗಳ ಸಂಖ್ಯೆಒಂದು ಸಾವಿರಕ್ಕೂ ಹೆಚ್ಚು. ಅರೆ, ಈ ವಿದ್ಯಾರ್ಥಿಗಳೆಲ್ಲ ಎಲ್ಲಿದ್ದಾರೆ ಎಂದು ನೋಡಿದರೆ ಟ್ಯೂಷನ್ ಕೇಂದ್ರಗಳಲ್ಲಿ. ಸರ್ಕಾರದ ಮಾನ್ಯತೆ ದೃಷ್ಟಿಯಿಂದ ಒಂದಷ್ಟು ಸಾವಿರ ಕೊಟ್ಟುಸದರಿ ಕಾಲೇಜಿನಲ್ಲಿ ದಾಖಲಾತಿ ಮಾತ್ರ ಪಡೆಯುತ್ತಾರೆ ಈ ವಿದ್ಯಾರ್ಥಿಗಳು. ಆಮೇಲೆ ತಮ್ಮ ಆಯ್ಕೆಯ ಟ್ಯೂಷನ್ ಸೆಂಟರ್‌ಗಳನ್ನು ಸೇರಿ ಲಕ್ಷಾಂತರ ಶುಲ್ಕ ತೆತ್ತು, ಕೊನೆಗೆಪರೀಕ್ಷೆ ವೇಳೆಗೆ ಕಾಲೇಜಿಗೆ ಬಂದು ಪ್ರವೇಶಪತ್ರ ಪಡೆದುಕೊಳ್ಳುತ್ತಾರೆ. ಕಾಲೇಜಿಗೂ ವಿದ್ಯಾರ್ಥಿಗೂ ಇರುವ ಸಂಬಂಧ ದಾಖಲಾತಿ ಮತ್ತು ಅಂಕಪಟ್ಟಿಯದ್ದು ಮಾತ್ರ. ನಾವುನಿಜಕ್ಕೂ ಎದುರಿಸುತ್ತಿರುವ ಪರೀಕ್ಷೆ ಯಾವುದು?


ಗುರುವಾರ, ಜನವರಿ 11, 2018

ಇದು ಯುವೋತ್ಕರ್ಷದ ಕಾಲ

ದಿನಾಂಕ: 07-01-2018ರ 'ವಿಜಯ ಕರ್ನಾಟಕ' - 'ಸಾಪ್ತಾಹಿಕ ಲವಲVK'ಯಲ್ಲಿ ಪ್ರಕಟವಾದ ಲೇಖನ

(UNEDITED)

ಯೌವ್ವನವೆಂದರೆ ಏನು ಸೊಗಸು! ಎಂಥಾ ಪ್ರಕಾಶ!
ಎಷ್ಟೊಂದು ಭ್ರಮೆಗಳು, ಆಕಾಂಕ್ಷೆಗಳು, ಕನಸುಗಳು!
ಅದು ಕೊನೆಯೇ ಇಲ್ಲದ ಕಥೆಯ ಆರಂಭವೆಂಬ ಪುಸ್ತಕ
ಅಲ್ಲಿ ಪ್ರತೀ ಹುಡುಗಿಯೂ ನಾಯಕಿ, ಪ್ರತೀ ಪುರುಷನೂ ಸ್ನೇಹಿತ!
ಹೀಗೆ ಸಾಗುತ್ತದೆ ಕವಿ ಹೆನ್ರಿ ಲಾಂಗ್‌ಫೆಲೋ ಕವಿತೆ. ಯೌವ್ವನವೆಂದರೆ ಹಾಗೆಯೇ ಅಲ್ಲವೇ? ಅದು ಎಲ್ಲವನ್ನೂ ಮೀರಿ ನಿಂತ ಹಿಮಾಲಯ ಪರ್ವತ. ಕನಸುಗಳ ಬಿಳಲುಗಳನ್ನು ಸುತ್ತಲೂ ಹರಡಿ ಇನ್ನೆಂದೂ ಬೀಳದಂತೆ ನೆಲಕಚ್ಚಿ ನಿಂತ ಬೃಹತ್ ಆಲದ ಮರ. ಎಂತಹ ಬಂಡೆಗಲ್ಲುಗಳನ್ನೂ ಲೆಕ್ಕಿಸದೆ ಕೊಳೆಕಳೆಗಳನ್ನು ತೊಳೆಯುತ್ತಾ ರಭಸದಿಂದ ಹರಿಯುವ ಮಹಾಪ್ರವಾಹ. ಎಂತಹ ಕಠಿಣ ಗುರಿಗಳನ್ನೂ ಬೇಧಿಸಿ ಮುನ್ನುಗ್ಗುವ ಛಾತಿಯುಳ್ಳ ಬೆಂಕಿಚೆಂಡು. ಆತ್ಮವಿಶ್ವಾಸವೇ ಯೌವ್ವನದ ಸ್ಥಾಯೀಭಾವ.

ಯುವಜನತೆಯ ಈ ಆತ್ಮವಿಶ್ವಾಸದ ಔನ್ನತ್ಯವನ್ನೇ ಎಷ್ಟೊಂದು ಸುಂದರವಾದ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಯುವಕರ ಸಾರ್ವಕಾಲಿಕ ರೋಲ್ ಮಾಡೆಲ್ ಸ್ವಾಮಿ ವಿವೇಕಾನಂದರು: ಪ್ರತೀ ಮಗುವೂ ಒಬ್ಬ ಹುಟ್ಟು ಆಶಾವಾದಿ, ಅವನು ಬಂಗಾರದ ಕನಸುಗಳನ್ನು ಕಾಣುತ್ತಾನೆ. ಯೌವ್ವನದಲ್ಲಿ ಆತ ಇನ್ನಷ್ಟು ಆಶಾವಾದಿಯಾಗುತ್ತಾನೆ. ಸಾವೆಂಬುದೊಂದಿದೆ, ಸೋಲೆಂಬುದೊಂದಿದೆ ಎಂಬುದನ್ನು ನಂಬುವುದೂ ಅವನಿಗೆ ಕಷ್ಟ! ರಾಷ್ಟ್ರನಿರ್ಮಾಣದ ಕಾರ್ಯ ಇಂತಹ ಯುವಕರಿಂದಲೇ ಸಾಧ್ಯ ಹೊರತು ಕಷ್ಟಗಳಿಗೆ, ಸವಾಲುಗಳಿಗೆ ಹೆದರುವ ಪುಕ್ಕಲರಿಂದಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು.

ಸಾಧನೆಯ ಹಾದಿಯಲ್ಲಿ
ಆಧುನಿಕ ಬದುಕಿನ ಬಗ್ಗೆ ಒಂದು ಕ್ಷಣ ಕಣ್ಮುಚ್ಚಿ ಕುಳಿತು ಯೋಚಿಸಿದರೆ ಅದು ಒಡ್ಡಿರುವ ಒತ್ತಡಗಳು, ಸವಾಲುಗಳು ವಿಸ್ಮಯ ತರಿಸುತ್ತವೆ. ಬದುಕು ಎಷ್ಟೊಂದು ಬದಲಾಗಿ ಹೋಗಿದೆ! ಹುಟ್ಟಿದ್ದೇವೆ, ಒಂದಷ್ಟು ಶಿಕ್ಷಣ ಪಡೆದಿದ್ದೇವೆ, ಇನ್ನು ಏನಾದರೂ ಉದ್ಯೋಗ ಮಾಡಿಕೊಂಡು ಸಂಸಾರ ಮುನ್ನಡೆಸಿಕೊಂಡು ಬದುಕಬೇಕು ಎಂಬ ನಿರ್ಲಿಪ್ತ ಮನಸ್ಥಿತಿ ಈಗಿನದ್ದಲ್ಲ. ಎಲ್ಲರೂ ಒಂದಲ್ಲ ಒಂದು ದಿನ ಜೀವನ ಮುಗಿಸಲೇಬೇಕು, ಆದರೆ ಅದಕ್ಕೂ ಮೊದಲು ಏನಾದರೊಂದು ಸಾಧಿಸಬೇಕು; ಇತರರಿಗಿಂತ ಭಿನ್ನವಾಗಿ ನಿಲ್ಲಬೇಕು; ಹೊಸದನ್ನು ಮಾಡಿತೋರಿಸಬೇಕು- ಇದು ಇಂದಿನ ಯುವಕರ ಮನಸ್ಥಿತಿ.

ಈ ಮಂದಿಯೇಕೆ ಕುಟುಂಬಕ್ಕೂ ಸಮಯ ಕೊಡದಂತೆ ಹೀಗೊಂದು ರಣೋತ್ಸಾಹದಿಂದ ಓಡಾಟ ಒದ್ದಾಟಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಒಮ್ಮೊಮ್ಮೆ ಅನಿಸಿದರೂ ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಬಾರದೆಂಬ ಅವರ ತುಡಿತ, ಏನಾದರೂ ಸಾಧಿಸಬೇಕೆಂಬ ಅವರ ಹುಮ್ಮಸ್ಸು, ಎಲ್ಲವನ್ನೂ ನಾಜೂಕಾಗಿ ನಿಭಾಯಿಸಿಕೊಂಡು ಹೋಗುವ ಅವರ ಕೌಶಲಕ್ಕೆ ಮನಸ್ಸು ಶಹಭಾಸ್ ಎನ್ನುತ್ತದೆ. ಅದಕ್ಕೇ ಇರಬೇಕು ಹೆಲನ್ ಕೆಲ್ಲರ್ ಹೇಳಿದ್ದು: ಜಗತ್ತಿನಲ್ಲಿ ಯುವಕರು ಇರುವವರೆಗೆ ನಾಗರಿಕತೆ ಹಿಮ್ಮುಖವಾಗಿ ಚಲಿಸುವುದು ಸಾಧ್ಯವೇ ಇಲ್ಲ!

ವಿವೇಕಾನಂದರ ಇನ್ನೊಂದು ಮಾತು ಇಲ್ಲಿ ಉಲ್ಲೇಖನೀಯ: ನನಗೆ ನನ್ನ ದೇಶದ ಮೇಲೆ, ವಿಶೇಷವಾಗಿ ದೇಶದ ಯುವಕರ ಮೇಲೆ ವಿಶ್ವಾಸವಿದೆ... ಯಾವುದಕ್ಕೂ ಹೆದರಬೇಡಿ, ನೀವು ಅದ್ಭುತವಾದದ್ದನ್ನು ಸಾಧಿಸಬಹುದು. ನೀವು ಭಯಗೊಂಡ ಕ್ಷಣಕ್ಕೆ ನೀವು ಯಾರೂ ಅಲ್ಲ. ಜಗತ್ತಿನ ದುಃಖಕ್ಕೆ ಭಯವೇ ಅತಿದೊಡ್ಡ ಕಾರಣ. ಅದೇ ಪ್ರಪಂಚದ ಅತಿದೊಡ್ಡ ಮೂಢನಂಬಿಕೆ ಕೂಡಾ. ನಿರ್ಭಯತೆಯಿಂದ ಒಂದೇ ಕ್ಷಣದಲ್ಲಿ ಸ್ವರ್ಗವನ್ನೂ ಧರೆಗಿಳಿಸಬಹುದು. ಈ ಕೆಚ್ಚಿನ ನುಡಿಗಳಿಗಾಗಿಯೇ ವಿವೇಕಾನಂದರು ಇಂದಿಗೂ ಎಂದೆಂದಿಗೂ ನಮ್ಮ ಅಭಿಮಾನ ಗೌರವಗಳಿಗೆ ಪಾತ್ರರಾಗುತ್ತಾರೆ. ಎಚ್ಚರಿಕೆ ಹೇಳುವ ನೆಪದಲ್ಲಿ ಕುಗ್ಗಿಸುವವರು ನಮ್ಮ ಸುತ್ತಮುತ್ತ ಬೇಕಾದಷ್ಟು ಮಂದಿ ಸಿಗುತ್ತಾರೆ; ಮುಂದಕ್ಕೆ ಹೋಗು ನಾವಿದ್ದೇವೆ ನಿನ್ನ ಜತೆ ಎನ್ನುವವರ ಸಂಖ್ಯೆ ಕಡಿಮೆಯೇ. ಅಂತಹ ಸಂದರ್ಭ ಬಂದಾಗಲೆಲ್ಲ ವಿವೇಕವಾಣಿ ಯುವಕರ ಕಿವಿಗಳಲ್ಲಿ ಮಾರ್ದನಿಸಬೇಕು.

ಭಗತ್‌ಸಿಂಗ್, ಸಾವರ್ಕರ್, ರಾಜಗುರು, ಸುಖದೇವ್, ಗಾಂಧೀ, ಪಟೇಲ್, ಖುದಿರಾಮ್, ಮಂಗಲ್‌ಪಾಂಡೆ, ಆಜಾದ್, ತಿಲಕ್ ಮುಂತಾದವರೆಲ್ಲ ತಮ್ಮ ಏರು ಜವ್ವನದ ದಿನಗಳನ್ನು ದೇಶಕ್ಕಾಗಿ ಮುಡಿಪಾಗಿಡದೇ ಹೋಗಿರುತ್ತಿದ್ದರೆ ಇಂದು ನಾವು ಏನಾಗಿರುತ್ತಿದ್ದೆವು? ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೊಮ್ಮೆ ಕಣ್ತೆರೆದು ನೋಡಿಕೊಂಡರೆ ಸಾಕು, ನಮ್ಮ ಯುವಕರಿಗೆ ಸಾಲುಸಾಲು ಮಾದರಿಗಳ ದರ್ಶನವಾಗುತ್ತದೆ. ಯೌವ್ವನದಲ್ಲಿ ದೃಢತೆಯನ್ನು ಹೊಂದುವ ವ್ಯಕ್ತಿಗಳು ಬಹಳ ಸಂತುಷ್ಟರು; ಆ ಉತ್ಸಾಹವನ್ನು ಜೀವನದುದ್ದಕ್ಕೂ ಕಾಯ್ದುಕೊಂಡವರು ಅವರಿಗಿಂತಲೂ ಮೂರು ಪಟ್ಟು ಸಂತುಷ್ಟರು ಎಂಬ ಮಾತಿದೆ. ಮೇಲೆ ಹೇಳಿರುವ ಹೆಸರುಗಳು ಅವರ ಬದುಕಿನ ನಂತರವೂ ಶತಮಾನಗಳ ಕಾಲ ಚಿರಮಾದರಿಗಳಾಗಿ ಯುವಜನಾಂಗದ ಎದುರು ಕಾಣಿಸಿಕೊಳ್ಳುತ್ತವೆ ಎಂದರೆ ಆ ಚೇತನಗಳಿಗೆ ಸಾವಿಲ್ಲ ಎಂದೇ ಅರ್ಥ.

ಹೊಳೆವ ತಾರೆಗಳು ಹಲವು
ಭಾರತದ ಮೊತ್ತಮೊದಲ ಫಾರ್ಮುಲಾ ವನ್ ರೇಸಿಂಗ್ ಡ್ರೈವರ್ ನಾರಾಯಣ್ ಕಾರ್ತಿಕೇಯನ್‌ಗೆ ಈಗಿನ್ನೂ ಮೂವತ್ತು ವರ್ಷ. ಜಗತ್ತಿನ ಮೊತ್ತಮೊದಲ ಅತಿಕಿರಿಯ ಮಹಿಳಾ ಚೆಸ್ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಆ ಹೆಗ್ಗಳಿಕೆಗೆ ಪಾತ್ರರಾದಾಗ ಆಕೆಯ ವಯಸ್ಸು ಕೇವಲ ಹದಿನೈದು. ಕ್ರಿಕೆಟ್ ಪ್ರಿಯರ ಕಣ್ಮಣಿ ವಿರಾಟ್ ಕೊಹ್ಲಿ, ಕೋಟ್ಯಂತರ ಅಭಿಮಾನಿಗಳನ್ನು ಪಡೆದಿರುವ ದೀಪಿಕಾ ಪಡುಕೋಣೆ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್‌ನ ಭರವಸೆ ಸೈನಾ ನೆಹ್ವಾಲ್, ಗ್ರಾಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಅನುಷ್ಕಾ ಶಂಕರ್, ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್‌ನ ಸಿಇಒ ಸತ್ಯಾ ನಾದೆಲ್ಲ, ಜಗತ್ಪ್ರಸಿದ್ಧ ಗೂಗಲ್ ಕಂಪೆನಿಯ ಸಿಇಒ ಸುಂದರ್ ಪಿಚೈ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟ ಮೊದಲ ಮಹಿಳೆ ಪಿ. ವಿ. ಸಿಂಧು... ತಮ್ಮ ಯೌವ್ವನದ ದಿನಗಳಲ್ಲೇ ಕೀರ್ತಿ ಶಿಖರ ಏರಿರುವ ಇಂತಹ ಸಾಧಕರ ಪಟ್ಟಿ ಮಾಡುತ್ತಾ ಹೋದರೆ ಪುಟಗಳು ಸಾಲವು. ಹೊರಗೆಲ್ಲೂ ಕಾಣಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ತೆರೆಯ ಹಿಂದೆಯೇ ಇರುತ್ತಾ ಶ್ರೇಷ್ಠ ಕೆಲಸಗಳನ್ನು ಸಾಧಿಸುತ್ತಿರುವ ಮುತ್ತುರತ್ನಗಳು ಇನ್ನೆಷ್ಟು ಇವೆಯೋ!

ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು ಇರುವ ವ್ಯಕ್ತಿಗಳು. ಅವರು ದುರ್ದಮವಾದ ಪ್ರಪಂಚದ ರಹಸ್ಯವನ್ನೆಲ್ಲ ಭೇದಿಸಿ ತಮ್ಮ ಇಚ್ಛೆಯನ್ನು ನೆರವೇರಿಸಿಕೊಳ್ಳಬಲ್ಲವರಾಗಿರಬೇಕು. ಸಮುದ್ರದ ಆಳಕ್ಕೆ ಬೇಕಾದರೂ ಹೋಗಿ ಮೃತ್ಯುವನ್ನಾದರೂ ಎದುರಿಸಲು ಅವರು ಸಿದ್ಧರಾಗಿರಬೇಕು- ಹೀಗೆಂದು ವಿವೇಕಾನಂದರು ನುಡಿದು ಶತಮಾನವೇ ಉರುಳಿದೆ. ಆದರೆ ಇಂದಿಗೂ ಆ ಮಾತೇ ನಮಗೆ ಮಾದರಿ, ಅದೇ ಯುವಜನಾಂಗದ ಎದುರಿರುವ ಘೋಷವಾಕ್ಯ.

ಶ್ರೀಕಾಂತ್ ಬೊಲ್ಲ ಅವರ ಹೆಸರು ನೀವು ಕೇಳಿರಬಹುದು. ಆಂಧ್ರಪ್ರದೇಶ ಮೂಲದ ಹುಟ್ಟು ಅಂಧ. ವ್ಯವಸಾಯವನ್ನೇ ನಂಬಿದ್ದ ಕುಟುಂಬದಲ್ಲಿ ಕುರುಡು ಮಗುವೊಂದು ಜನಿಸಿದಾಗ ಅದು ಹುಟ್ಟಿಯೇ ಇಲ್ಲ ಎಂದು ಭಾವಿಸಿ ಉಸಿರುಗಟ್ಟಿಸಿ ಎಲ್ಲಾದರೂ ಎಸೆದುಬಿಡಿ ಎಂದು ಸಲಹೆ ಕೊಟ್ಟವರೂ ಇದ್ದರಂತೆ. ಆದರೆ ಅಪ್ಪ ಅಮ್ಮ ಅಷ್ಟೊಂದು ನಿರ್ದಯಿಗಳಾಗಿರಲಿಲ್ಲ. ನಿರ್ಲಕ್ಷ್ಯ ಅಪಮಾನಗಳ ನಡುವೆಯೇ ಶ್ರೀಕಾಂತ್ ಬೆಳೆದ, ಶಿಕ್ಷಣ ಪಡೆದ. ಹತ್ತನೇ ತರಗತಿ ಬಳಿಕ ವಿಜ್ಞಾನ ಓದುವುದಕ್ಕೆ ಅವನಿಗೆ ಅವಕಾಶ ನಿರಾಕರಿಸಲಾಯಿತು. ಛಲ ಬಿಡದ ಶ್ರೀಕಾಂತ್ ಆ ಅವಕಾಶ ಪಡೆದುಕೊಂಡು ಶೇ. ೯೮ ಅಂಕ ಗಳಿಸಿದ್ದಲ್ಲದೆ, ಉನ್ನತ ವ್ಯಾಸಂಗಕ್ಕೆ ಅಮೇರಿಕದ ಪ್ರತಿಷ್ಠಿತ ಎಂಐಟಿ ವಿಶ್ವವಿದ್ಯಾನಿಲಯದಲ್ಲಿ ಸೀಟು ಪಡೆದುಕೊಂಡ. ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪ್ರಡೆದ ಮೊತ್ತಮೊದಲ ಅಂತಾರಾಷ್ಟ್ರೀಯ ಅಂಧ ವಿದ್ಯಾರ್ಥಿ ಶ್ರೀಕಾಂತ್ ಬೊಲ್ಲ ಇಂದು ರೂ. ೫೦ ಕೋಟಿ ವ್ಯವಹಾರವುಳ್ಳ ಬೊಲ್ಲಾಂಟ್ ಇಂಡಸ್ಟ್ರೀಸ್‌ನ ಹೆಮ್ಮೆಯ ಮಾಲೀಕ. ಆತನಿಗಿನ್ನೂ ೨೫ ವರ್ಷ ವಯಸ್ಸು ಎಂದರೆ ಅವನಿಗೆ ಅವಕಾಶಗಳನ್ನು ನಿರಾಕರಿಸಿದ ಸಮಾಜವೇ ನಂಬುತ್ತಿಲ್ಲ!

ಯುವಕರ ಶಕ್ತಿಯ ಬಗ್ಗೆ ನಾವಿನ್ನೂ ಅನುಮಾನಗಳನ್ನು ಇಟ್ಟುಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಯುವಜನತೆಯಿಂದ ಜಗತ್ತಿನಲ್ಲಿ ನೂರಾರು ತಪ್ಪುಗಳು ಘಟಿಸುತ್ತಿರಬಹುದು. ಅವುಗಳನ್ನು ನಿವಾರಿಸಲು ಪ್ರಯತ್ನಿಸೋಣ; ಆದರೆ ಅದೇ ಯುವಜನತೆ ಮಾಡುತ್ತಿರುವ ಸಾವಿರಾರು ಸಾಹಸಗಳು ನಮ್ಮೆದೆಯ ನೆಮ್ಮದಿಯನ್ನು ಹೆಚ್ಚಿಸಲಿ, ಮನಸ್ಸುಗಳನ್ನು ತಂಪಾಗಿರಿಸಲಿ!

ಮಂಗಳವಾರ, ಜನವರಿ 2, 2018

ಚಾರಣ ಹೋಮ! ಒಂದು ಟ್ರೆಕ್ಕಿಂಗ್ ಸ್ಟೋರಿ


ಉದಯವಾಣಿ 'ಜೋಶ್' ಪುರವಣಿಯಲ್ಲಿ ಜನವರಿ 2, 2018ರಂದು ಪ್ರಕಟವಾದ ಲೇಖನ

'ಭಾನುವಾರ ಎಲ್ಲರೂ ಫ್ರೀ ಇದ್ದೀರೇನ್ರೋ? ನಿಮ್ಗೆಲ್ಲ ಓಕೆ ಅಂದ್ರೆ ದೇವರಾಯನದುರ್ಗಕ್ಕೆ ಒಂದು ಟ್ರೆಕ್ಕಿಂಗ್ ಹೋಗ್ಬರೋಣ’
ಅಂದಿದ್ದೇ ತಡ ಇನ್ನೇನು ಸೇತುವೆ ಕಟ್ಟಿಯೇ ಸಿದ್ಧ ಎಂದು ಹೊರಟ ವಾನರ ಸೈನ್ಯದಂತೆ ಇಡೀ ಕ್ಲಾಸು ಜೈ ಎಂದು ಎದ್ದು ನಿಂತಿತು. 'ಅಂದ್ರೆ ನಡ್ಕೊಂಡೇ ಹೋಗೋದಾ ಸಾರ್?’ ಎಂದು ಸೈನ್ಯದ ನಡುವಿನಿಂದ ಕೀರಲು ಅಶರೀರವಾಣಿಯೊಂದು ಕೇಳಿಬಂದದ್ದೂ, 'ಅಲ್ಲ ನನ್ ತಾತ ಫ್ಲೈಟ್ ತರ್ತಾರೆ, ಟೆನ್ಷನ್ ಮಾಡ್ಕೋಬೇಡ’ ಎಂದು ಮತ್ತೊಂದು ದನಿ ಛೇಡಿಸಿದ್ದೂ, 'ಟ್ರೆಕ್ಕಿಂಗ್ ಅಂದ್ರೆ ನಡ್ಕೊಂಡೇ ಹೋಗೋದು ಕಣಮ್ಮಾ’ ಎಂದು ಇನ್ನೊಬ್ಬ ಸ್ಪಷ್ಟೀಕರಣ ಕೊಟ್ಟಿದ್ದೂ ಮುಂದಿನ ಮೂರು ಕ್ಷಣಗಳಲ್ಲಿ ನಡೆದುಹೋಯಿತು.

ಹದಿನೈದೂ ಕಿ.ಮೀ ನಡ್ಕೊಂಡು ಹೋಗೋದು ಬೇಡ, ಆಮೇಲೆ ಬೆಟ್ಟ ಹತ್ತೋದಕ್ಕಾಗಲೀ ಇಳಿಯೋದಕ್ಕಾಗಲೀ ಬ್ಯಾಟರಿ ಉಳಿಯದೆ ಅಲ್ಲೇ ತಪಸ್ಸಿಗೆ ಕೂರುವ ಪರಿಸ್ಥಿತಿ ಬಂದೀತೆಂದು ಯೋಚನೆ ಮಾಡಿ ನಾಮದ ಚಿಲುಮೆಯವರೆಗೆ ಲೋಕಲ್ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಮುಂದಕ್ಕೆ ನಡೆದುಕೊಂಡು ಹೋಗೋಣವೆಂದು ತೀರ್ಮಾನಿಸಿದ್ದಾಯಿತು.

ಹೊರಟಿತು ಸವಾರಿ
ಅಂತೂ ಭಾನುವಾರದ ಚುಮುಚುಮು ಮುಂಜಾನೆ ಎಲ್ಲರನ್ನೂ ಹೊತ್ತು ತುಮಕೂರಿನಲ್ಲೇ ವರ್ಲ್ಡ್‌ಫೇಮಸ್ಸಾದ ಡಕೋಟಾ ಬಸ್ಸು ಬೆಳಗುಂಬ ಗ್ರಾಮ ದಾಟಿ ಮುಂದಕ್ಕೆ ತೆವಳಿತು. ಅಪರೂಪಕ್ಕೆ ಹುಡುಗ ಹುಡುಗಿಯರಿಂದಲೇ ತುಂಬಿ ತೊನೆದಾಡುತ್ತಿದ್ದ ಬಸ್ಸು ಯಾವ ಕೋನದಿಂದ ನೋಡಿದರೂ ಮದುವೆ ದಿಬ್ಬಣಕ್ಕಿಂತ ಕಡಿಮೆಯಿರಲಿಲ್ಲ. ಅರ್ಧ ಗಂಟೆಯಲ್ಲಿ ನಾವು ನಾಮದ ಚಿಲುಮೆ ತಲುಪಿಯಾಗಿತ್ತು. ಜಿಂಕೆವನಕ್ಕೆ ಸುತ್ತು ಹಾಕಿ, ಬಂಡೆಗಲ್ಲಿನ ನಡುವೆ ವರ್ಷವಿಡೀ ಬತ್ತದೆ ಹರಿಯುವ ಚಿಲುಮೆಯನ್ನು ನೋಡಲು ಮುನ್ನುಗ್ಗಿತು ಕಪಿಸೇನೆ.

ವನವಾಸದ ವೇಳೆ ಕಾಡಿನಿಂದ ಕಾಡಿಗೆ ಸಂಚರಿಸುತ್ತಾ ಶ್ರೀರಾಮ ಈ ಪ್ರದೇಶಕ್ಕೆ ಬಂದಾಗ ನೀರಿನ ಸೆಲೆ ಕಾಣದೆ ತಾನೇ ಬಾಣ ಪ್ರಯೋಗಿಸಿ ಒರತೆಯೊಂದನ್ನು ಚಿಮ್ಮಿಸಿದ ಕತೆಯನ್ನು ತಾನೇ ಕಣ್ಣಾರೆ ಕಂಡಂತೆ ವರ್ಣಿಸಿದಳು ಅದೇ ಏರಿಯಾದ ಮೂಲನಿವಾಸಿ ಸವಿತಾ. ಅಲ್ಲೇ ಸಮೀಪದ ಕಲ್ಲುಮಂಟಪವನ್ನು ಏರಿ ಫೋಟೋ ಸೆಶನ್ ಮುಗಿಸಿಕೊಂಡ ಮೇಲೆ ಆರಂಭವಾಯಿತು ನಿಜವಾದ ಟ್ರೆಕ್ಕಿಂಗ್.

ನಡೆ ಮುಂದೆ ನಡೆ ಮುಂದೆ
ತಂದಾನಿ ತಾನೋ ತಾನಿ ತಂದಾನೋ ಎಂದು ಕೈಕೈ ಹಿಡಿದು ಹುಡುಗಿಯರ ತಂಡ ಮುಂದುವರಿದರೆ ಡಕ್ಕಣಕಾ ಣಕಾ ಜಕಾ ಎಂದು ತಮ್ಮದೇ ಸ್ಟೈಲಲ್ಲಿ ಹೆಜ್ಜೆ ಹಾಕುತ್ತಾ ತಿರುವುಗಳಲ್ಲಿ ಸಾಗಿ ಬೆಟ್ಟದ ಬುಡ ತಲುಪಿತು ಹುಡುಗರ ಗಡಣ. ದುರ್ಗದ ಬಾಗಿಲಲ್ಲಿರುವ ಯೋಗಾನರಸಿಂಹಸ್ವಾಮಿ ದೇವಾಲಯದ ಎದುರೇ ಮನೆಕಟ್ಟಿಕೊಂಡಿರುವ ಕವಿತಾ ಜ್ಯೂಸು ಪಾನಕಗಳೊಂದಿಗೆ ಆಗಲೇ ಸಿದ್ಧವಾಗಿದ್ದರಿಂದ ಬೆಟ್ಟವೇರುವ ಸೈನ್ಯದ ಉತ್ಸಾಹ ಇಮ್ಮಡಿಸಿತು. ತಮ್ಮ ತಮ್ಮ ಟ್ಯಾಂಕ್‌ಗಳನ್ನು ಮತ್ತೊಮ್ಮೆ ಭರ್ತಿ ಮಾಡಿಕೊಂಡ ಹುಡುಗರು ಬೆಟ್ಟದತ್ತ ಸರಭರನೆ ಹೆಜ್ಜೆಯಿಟ್ಟೇಬಿಟ್ಟರು.

ಬ್ಯಾಗ್ ಹೊತ್ತೊಯ್ದ ಕೋತಿ
ಹುಡುಗಿಯರು ಸಲೀಸಾದ ಡಾಂಬಾರು ರಸ್ತೆಯಲ್ಲಿ ಗುಂಪುಗುಂಪಾಗಿ ಗೀಗೀಪದ ಹೊಸೆದುಕೊಂಡು ಸಾಗಿದರೆ ಹುಡುಗರು ತಮ್ಮ ಸಹಜ ಧರ್ಮವನ್ನು ಬಿಡಲಾಗದೆ ಕಲ್ಲುಬಂಡೆಗಳ ನಡುವೆ ಹಾದಿ ಹುಡುಕಿಕೊಂಡು ಏರತೊಡಗಿದರು. ದೇವರಾಯನದುರ್ಗವೆಂದರೆ ಕೇಳಬೇಕೇ? ತಮ್ಮ ಸ್ನೇಹಿತ ವರ್ಗ ಬರುತ್ತಿದೆಯೆಂದು ಮೊದಲೇ ತಿಳಿದವರಂತೆ ಕಾದುಕುಳಿತಿದ್ದವು ನೂರಾರು ಕೋತಿಗಳು. ತಮಗಿಂತಲೂ ಚೆನ್ನಾಗಿ ಬೆಟ್ಟವೇರಲು ಗೊತ್ತಿದ್ದ ಹುಡುಗರನ್ನು ಕಂಡು ಸೋಜಿಗದಿಂದ ತಾವೂ ಮರದಿಂದ ಮರಕ್ಕೆ ನೆಗೆಯುತ್ತಾ ಹಿಂಬಾಲಿಸಿಯೇಬಿಟ್ಟವು. ಚುರುಮುರಿ ಸೌತೆಕಾಯಿ ಮೆಲ್ಲುತ್ತಾ ಬೆಟ್ಟದ ತಪ್ಪಲಿನ ರಮಣೀಯ ಹಸಿರನ್ನು ನಿರಾಳವಾಗಿ ಕಣ್ತುಂಬಿಕೊಳ್ಳುತ್ತಿದ್ದ ಹುಡುಗಿಯರ ಗುಂಪೊಂದು ಕಿಟಾರನೆ ಕಿರುಚಿಕೊಂಡಾಗಲೇ ಕೋತಿಗಳ ನಿಜವಾದ ಕೌಶಲ ಎಲ್ಲರಿಗೂ ಅರ್ಥವಾದದ್ದು. ಕೆಂಪು ಮೂತಿಯ ದಢೂತಿ ಗಡವವೊಂದು ಅನಿತಳ ಹೊಚ್ಚಹೊಸ ಹ್ಯಾಂಡ್‌ಬ್ಯಾಗನ್ನು ಸರಕ್ಕನೆ ಲಪಟಾಯಿಸಿಕೊಂಡು ಹೋಗಿ ಮರದ ತುದಿಯಲ್ಲಿ ಪ್ರತಿಷ್ಠಾಪಿತವಾಗಿತ್ತು.

ಮಿಷನ್ ಬ್ಯಾಗ್ ವಾಪಸಿ
ಜಗತ್ತನ್ನೇ ಗೆದ್ದು ಬರುವ ಉತ್ಸಾಹದಲ್ಲಿ ಬೀಗುತ್ತಿದ್ದ ಹುಡುಗರಿಗೆ ಕೋತಿಯ ಕೈಯಿಂದ ಬ್ಯಾಗನ್ನು ಪಡೆಯುವ ಕೆಲಸ ಮಾತ್ರ ಹರಸಾಹಸವಾಯಿತು. ಮರದಿಂದ ಮರಕ್ಕೆ ಬಂಡೆಯಿಂದ ಬಂಡೆಗೆ ಬ್ಯಾಗ್ ಸಮೇತ ನೆಗೆಯುತ್ತಾ ಕೋತಿ ಮಜಾ ತೆಗೆದುಕೊಳ್ಳುತ್ತಿದ್ದರೆ ಬ್ಯಾಗಿನ ಒಳಗೆ ಪ್ರಾಣವನ್ನೆಲ್ಲಾ ಪ್ಯಾಕ್ ಮಾಡಿಟ್ಟಿದ್ದ ಹುಡುಗಿಯ ಕಣ್ಣುಗಳಿಂದ ಸ್ವತಃ ಜಯಮಂಗಲಿಯೇ ಧಾರಾಕಾರವಾಗಿ ಹರಿಯುತ್ತಿದ್ದಳು. ಅಂತೂ ಹದಿನೈದು ನಿಮಿಷ ಹೋರಾಡಿ ಹುಡುಗರೆಲ್ಲ ಸೋಲೊಪ್ಪಿಕೊಂಡ ಬಳಿಕ ಬ್ಯಾಗನ್ನು ಬಂಡೆಯೊಂದರ ತುದಿಯಲ್ಲಿ ಬಿಟ್ಟು ಮಾಯವಾಯಿತು ಮಂಗ.

ಮರಳಿ ಮನೆಗೆ
ಬೆಟ್ಟದ ತುದಿ ತಲುಪಿ ದುರ್ಗವೇ ಬೆಚ್ಚಿಬೀಳುವಂತೆ ಡ್ಯಾನ್ಸ್ ಮಾಡಿ ಇದ್ದ ಏಕೈಕ ಕೂಲಿಂಗ್ ಗ್ಲಾಸನ್ನೇ ಒಬ್ಬರಾದಮೇಲೊಬ್ಬರಂತೆ ತೊಟ್ಟು ಫೋಟೋ ಹೊಡೆಸಿಕೊಳ್ಳುವ ಹೊತ್ತಿಗೆ ಚಿಪ್ಸು ಪಪ್ಸಾದಿ ಸರಕುಗಳೆಲ್ಲ ಬಹುತೇಕ ಖಾಲಿಯಾಗಿದ್ದವು. ಮಟಮಟ ಮಧ್ಯಾಹ್ನದ ಬಿಸಿಲಿನ ನಡುವೆಯೇ ಬೆಟ್ಟವಿಳಿದು ರಸ್ತೆ ಸೇರಿದಾಗ ಮತ್ತೆ ನಡೆದುಕೊಂಡು ನಗರ ಸೇರುವ ಉತ್ಸಾಹ ಯಾರಿಗೂ ಉಳಿದಿರಲಿಲ್ಲ. ನಡೆದುಕೊಂಡೇ ವಾಪಸ್ ಬಂದೆವೆಂದು ಮರುದಿನ ಪ್ರಚಾರ ಮಾಡುವುದೆಂಬ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಮೇಲೆ ಎಲ್ಲರೂ ಮತ್ತದೇ ಸೂಪರ್ ಡಿಲಕ್ಸ್ ಬಸ್ ಹತ್ತಿದ್ದಾಯಿತು.

ಮಾನವೀಯತೆಯೆಂಬ ದೈವತ್ವ

'ಬೋಧಿವೃಕ್ಷ' 16-22 ಡಿಸೆಂಬರ್ 2017 ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಅವನು ದನಮಾಝಿ. ಒಡಿಶಾ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಸೇರಿದ ಕಡುಬಡವ. ಕ್ಷಯರೋಗದಿಂದ ನರಳುತ್ತಿದ್ದ ಪತ್ನಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದ. ಆದರೆ ಅದೃಷ್ಟ ಕೈಹಿಡಿಯಲಿಲ್ಲ, ಪ್ರಾರ್ಥನೆಗಳು ಫಲಿಸಲಿಲ್ಲ. ಸಾವು ಬದುಕಿನ ನಡುವೆ ಹೋರಾಡಿದ ಆಕೆ ಎರಡು ದಿನಗಳ ಬಳಿಕ ಸಾವನ್ನಪ್ಪಿದಳು. ಇನ್ನೀಗ ಶವವನ್ನು ಊರಿಗೆ ಸಾಗಿಸಬೇಕು, ಅಂತ್ಯಕ್ರಿಯೆ ನಡೆಸಬೇಕು. ಬರಿಗೈದಾಸ ದನಮಾಝಿ ಬಾಡಿಗೆಗೆ ವಾಹನ ಗೊತ್ತುಮಾಡಿ ಶವವನ್ನು ಒಯ್ಯುವ ಸ್ಥಿತಿಯಲ್ಲಿರಲಿಲ್ಲ. ಒಂದು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ಗೋಗರೆದ. ಅವರೆಲ್ಲ ಬಂಡೆಗಲ್ಲುಗಳಂತೆ ಕುಳಿತಿದ್ದರು. ಪುಡಿಗಾಸೂ ಇಲ್ಲದ ಬಡಪಾಯಿಗೆ ನೆರವಾಗಿ ಅವರಿಗೇನೂ ಆಗಬೇಕಿರಲಿಲ್ಲ. ದನಮಾಝಿಗೆ ಬೇರೆ ದಾರಿಯಿರಲಿಲ್ಲ. ಹೆಂಡತಿಯ ಕಳೇಬರವನ್ನು ಬಟ್ಟೆಯಿಂದ ಸುತ್ತಿ ಹೆಗಲ ಮೇಲೆ ಹೊತ್ತು ನಡೆದೇ ನಡೆದ. ಒಂದೆರಡು ಫರ್ಲಾಂಗು ದೂರವಲ್ಲ, ಬರೋಬ್ಬರಿ ಹತ್ತು ಮೈಲಿ! ಅವನ ಹಿಂದೆಯೇ ಕಣ್ಣೀರಧಾರೆಯೊಂದಿಗೆ ಹೆಜ್ಜೆಹಾಕುತ್ತಿದ್ದಳು ಹನ್ನೆರಡು ವರ್ಷದ ಅಸಹಾಯಕ ಮಗಳು.

ಈ ಘಟನೆ ಕಂಡ ಕೆಲವು ಸ್ಥಳೀಯ ಪತ್ರಕರ್ತರು ಜಿಲ್ಲಾಡಳಿತಕ್ಕೆ ಸುದ್ದಿ ಮುಟ್ಟಿಸಿ, ಕೊನೆಗೂ ಅಂಬ್ಯುಲೆನ್ಸ್ ತರಿಸುವ ವ್ಯವಸ್ಥೆ ಮಾಡಿದರು. ಪತ್ನಿಯ ಶವ ಹೊತ್ತು ಮಗಳೊಂದಿಗೆ ಸಾಗುವ ದನಮಾಝಿಯ ದೌರ್ಭಾಗ್ಯವನ್ನು ಮರುದಿನ ಪತ್ರಿಕೆ-ಟಿವಿಗಳಲ್ಲಿ ಕಂಡ ಜನರು ಅಯ್ಯೋ ಎಂದು ಮರುಗಿದರು. ಆದರೆ ಕಾಲ ಮಿಂಚಿತ್ತು. ಈ ಪರಿಸ್ಥಿತಿಗೆ ಕಾರಣರಾದ ಮಂದಿಯ ಅಮಾನವೀಯತೆ ಜಗಜ್ಜಾಹೀರಾಗಿತ್ತು. ಗೌರವಯುತ ಬದುಕಂತೂ ಸಿಗಲಿಲ್ಲ, ಗೌರವಯುತವಾಗಿ ಸಾಯುವುದಕ್ಕೂ ನಿಮ್ಮಲ್ಲಿ ಅವಕಾಶವಿಲ್ಲವೇ ಎಂದು ಜಗತ್ತೇ ಕೇಳಿತು.

ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದುಹೋಗಿವೆ. ಬಡವ-ಹಿಂದುಳಿದವನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಶವವನ್ನು ಹೆಗಲ ಮೇಲೆ ಹೊತ್ತು ಹತ್ತಾರು ಮೈಲಿ ನಡೆಯುವ ಪರಿಸ್ಥಿತಿ ನಮ್ಮಲ್ಲಿದೆ ಎಂದಾದರೆ ನಮ್ಮ ಸ್ವಾತಂತ್ರ್ಯಕ್ಕಾಗಲೀ ಅಭಿವೃದ್ಧಿಗಾಗಲೀ ಮಾನವೀಯತೆಗಾಗಲೀ ಏನರ್ಥ? ಇನ್ನೊಬ್ಬನ ಕಷ್ಟಕ್ಕೆ ಮರುಗಲಾರದ ಮನಸ್ಸುಗಳು ಯಾವ ಹುದ್ದೆಯಲ್ಲಿದ್ದರೇನು, ಎಷ್ಟು ಸಂಪಾದಿಸಿದರೇನು? ದಯೆ, ಅನುಕಂಪ, ಸಹಾನುಭೂತಿ, ಪ್ರೀತಿ, ವಿಶ್ವಾಸಗಳಿಗೆ ಜಾತಿ-ಮತ-ಧರ್ಮ-ಪಂಥಗಳ ಹಂಗಿದೆಯೇ? ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೇ ಇರುತಿರಲು, ಕುಲಗೋತ್ರ ಎತ್ತಣದು ಎಂಬ ಸರ್ವಜ್ಞಕವಿಯ ಮಾತು ಇನ್ನೂ ಒಂದು ಶತಮಾನ ದಾಟಿದರೂ ನಮ್ಮ ಸಮಾಜದ ನರನಾಡಿಗಳಲ್ಲಿ ಹರಿದಾಡುವುದೇ?

ಇಡೀ ಜಗತ್ತು ನಿಂತಿರುವುದೇ ಮಾನವೀಯತೆ-ನಂಬಿಕೆಗಳೆಂಬ ಪರಮ ಸತ್ಯಗಳ ಮೇಲೆ. ಭೂಮಿಯ ಮೇಲೆ ಮನುಷ್ಯ ಹುಟ್ಟಿಕೊಂಡಾಗ ಅವನಿಗೆ ಯಾವ ಜಾತಿಯಿತ್ತು? ಅವನು ಯಾವ ಮತಕ್ಕೆ ಸೇರಿದವನಾಗಿದ್ದ? ಹಾಗಾದರೆ ಇವೆಲ್ಲ ಹೇಗೆ ಹುಟ್ಟಿಕೊಂಡವು? ಇದು ಮೇಲ್ಜಾತಿ, ಅದು ಕೀಳ್ಜಾತಿ, ಇದು ಶ್ರೇಷ್ಠ ಕುಲ, ಅದು ಕನಿಷ್ಠ ಕುಲ ಎಂದು ವಿಂಗಡಣೆ ಮಾಡಿದವರು ಯಾರು? ಬಾಯಾರಿದವನಿಗೆ ಬೇಕಾದದ್ದು ನೀರು. ಹಸಿದವನಿಗೆ ಬೇಕಾದದ್ದು ಊಟ. ಜೀವ ಉಳಿಸಿಕೊಳ್ಳಲು ಬೇಕಾದದ್ದು ಗಾಳಿ. ಈ ನೀರು-ಗಾಳಿ-ಆಹಾರವೆಲ್ಲ ಯಾರ ಆಸ್ತಿ? ಯಾವ ಜಾತಿಗೆ ಸೇರಿದ್ದು? ಯಾವ ಕುಲಕ್ಕೆ ಸೇರಿದ್ದು? ಯಾವ ಧರ್ಮಕ್ಕೆ ಸೇರಿದ್ದು?

ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವನ ಕಂಬನಿಯನೊರೆಸಿ ಸಂತೈಸುವೊಡೆ
ಶಾಸ್ತ್ರಪ್ರಮಾಣವದಕಿರಲೆ ಬೇಕೇನು?
ಎಂದು ಕೇಳುತ್ತಾರೆ ಮಹಾಕವಿ ಕುವೆಂಪು. ಅವರ ಪ್ರಕಾರ 'ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ’. ಸರಿಯಾದುದನ್ನು ಮಾಡಲು, ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸಲು ಯಾರು ಯಾರನ್ನೂ ಕೇಳಬೇಕಿಲ್ಲ. ಏಕೆಂದರೆ ಯಾರೂ ಮಾತನಾಡದಿದ್ದಾಗ ಕೇಳಿಸುವ ಮಾತು ಒಂದೇ- ಅದು ಅಂತರಂಗದ ಮಾತು. ಅದೇ ಮಾನವೀಯತೆ. ಅದು ಜೀವಂತವಾಗಿರುವುದರಿಂದಲೇ ಜಗತ್ತಿನಲ್ಲಿ ಇನ್ನೂ ಪ್ರಳಯವಾಗಿಲ್ಲ. ಅದನ್ನು ಬೊಟ್ಟು ಮಾಡಿಯೇ ಕವಿ ಕೇಳಿರುವುದು:
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದು. 'ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ! ನಂಬದನು! ಅದನುಳಿದು ಋಷಿಯು ಬೇರಿಲ್ಲ!’ ಎಂಬ ಸಾಲಿನಲ್ಲೂ ಮನಸ್ಸಿನ ಮಾತಿಗಿಂತ ದೊಡ್ಡ ಶಾಸ್ತ್ರಪ್ರಮಾಣ ಇನ್ನೊಂದಿಲ್ಲ ಎಂಬ ಮಹಾಭಾಷ್ಯವಿದೆ.

ದಿನಬೆಳಗಾದರೆ ನೂರೆಂಟು ಬಗೆಯ ಸಂಕಟದ ಸುದ್ದಿಗಳನ್ನು ಕೇಳುತ್ತೇವೆ, ಹತ್ತಾರು ಅಮಾನವೀಯ ಘಟನೆಗಳನ್ನು ನೋಡುತ್ತೇವೆ: ವರದಕ್ಷಿಣೆಗೆ ಪೀಡಿಸಿ ಹೆಣ್ಣಿನ ಹತ್ಯೆ, ಸಾಲ ತೀರಿಸಲಿಲ್ಲ ಎಂಬ ಕಾರಣಕ್ಕೆ ಜೀತ, ಕೆಳಜಾತಿಯವರೆಂಬ ಕಾರಣಕ್ಕೆ ದೇವಾಲಯ ಪ್ರವೇಶ ನಿಷೇಧ, ಸ್ತ್ರೀಭ್ರೂಣ ಹತ್ಯೆ, ಬಾಲಕಾರ್ಮಿಕ ಪಿಡುಗು, ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ... ನಾವು ಯಾವ ಯುಗದಲ್ಲಿ ಬದುಕುತ್ತಿದ್ದೇವೆ? ಅತ್ಯಾಚಾರ ಮಾಡಿದರೆ ನಾಳೆ ಗಲ್ಲುಶಿಕ್ಷೆ ಕಾದಿದೆ ಎಂಬ ಅರಿವಿಲ್ಲದೆ ಪ್ರತಿದಿನವೆಂಬಂತೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತವೆಯೇ? ಖಂಡಿತ ಇಲ್ಲ. ಅವರಿಗದು ಚೆನ್ನಾಗಿಯೇ ತಿಳಿದಿದೆ. ಮರೆತು ಹೋಗುವ ಮಾನವೀಯತೆ, ಅದರಿಂದಾಗಿ ಮನಸ್ಸಿಗೆ ಕವಿಯುವ ಮಬ್ಬು, ತನ್ನಂತೆ ಪರರ ಬಗೆವ ಕನಿಷ್ಠ ಮನಸ್ಥಿತಿ ಇಲ್ಲದಿರುವುದೇ ಎಲ್ಲ ಪೈಶಾಚಿಕತೆಗಳಿಗೂ ಕಾರಣ.

ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳಿ: ರಸ್ತೆ ಅಪಘಾತಕ್ಕೆ ತುತ್ತಾದ ವ್ಯಕ್ತಿಯೊಬ್ಬ ನೆರವಿಗೆ ಅಂಗಲಾಚುತ್ತ ರಕ್ತದ ಮಡುವಿನಲ್ಲಿ ಸುಮಾರು ಒಂದು ಗಂಟೆ ಹೊತ್ತು ಬಿದ್ದಿದ್ದು ಆಮೇಲೆ ಕೊನೆಯುಸಿರೆಳೆದ. ಹತ್ತಿರದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿತ್ತು. ಅದರ ಪ್ರಕಾರ ಒಬ್ಬ ವ್ಯಕ್ತಿ ಅಪಘಾತಕ್ಕೀಡಾದವನ ಮೊಬೈಲನ್ನೇ ಎತ್ತಿಕೊಂಡು ಹೋಗಿದ್ದ; ಹತ್ತಾರು ಮಂದಿ ವೀಡಿಯೋ ಮಾಡಿಕೊಂಡಿದ್ದರು; ಈ ಅವಧಿಯಲ್ಲಿ ಸುಮಾರು ನೂರೈವತ್ತು ಕಾರುಗಳು, ಎಂಬತ್ತು ರಿಕ್ಷಾಗಳು, ಇನ್ನೂರು ಬೈಕ್‌ಗಳು ಆ ದಾರಿಯಾಗಿ ಹಾದು ಹೋಗಿದ್ದವು, ಹಲವಾರು ಪಾದಚಾರಿಗಳು ನಡೆದುಹೋಗಿದ್ದರು. ಆದರೆ ಯಾರೊಬ್ಬರೂ ಅವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿರಲಿಲ್ಲ. ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿದ್ದರೆ ಅವನ ಪ್ರಾಣ ಉಳಿಯುತ್ತಿತ್ತು.

ಇಂತಹ ಅನೇಕ ಘಟನೆಗಳು ನಮ್ಮ ಜೀವನದಲ್ಲಿ ನಡೆಯುತ್ತಲೇ ಇರುತ್ತವೆ. ಅಪಘಾತ ನಡೆದು ಗಾಯಾಳುಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಅವರ ನೆರವಿಗೆ ಧಾವಿಸುವುದಕ್ಕೆ ಜನರಿಗೆ ಭಯ. ಎಲ್ಲಿ ಆಸ್ಪತ್ರೆಗೆ ಸೇರಿಸಿದವರನ್ನೇ ಪೊಲೀಸರು ಹಿಡಿದುಕೊಳ್ಳುತ್ತಾರೋ, ನಾಳೆ ಸಾಕ್ಷಿ ಹೇಳಲು ಕೋರ್ಟು ಕಚೇರಿಗಳಿಗೆ ಅಲೆದಾಡಬೇಕಾಗುತ್ತದೋ ಎಂಬ ಆತಂಕ. ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಲು ಹಿಂದೆಮುಂದೆ ನೋಡಬೇಡಿ ಎಂದು ಖುದ್ದು ಸರ್ವೋಚ್ಛ ನ್ಯಾಯಾಲಯವೇ ಹೇಳಿದ್ದರೂ ಜನ ತಮಗೇಕೆ ಇಲ್ಲದ ತಂಟೆಯೆಂದು ಪಲಾಯನ ಮಾಡುವುದಿದೆ.

ಹಾಗೆಂದು ಇಡೀ ಲೋಕವೇ ಕೆಟ್ಟು ಹೋಗಿದೆಯೆಂದು ನಿರಾಶೆ ತಾಳಬೇಕಿಲ್ಲ. ಎಂತಹ ವಿಷಮ ಪರಿಸ್ಥಿತಿಯಲ್ಲೂ ಪರರಿಗೆ ಉಪಕರಿಸುವ ಉನ್ನತ ಮನಸ್ಥಿತಿಯ ಸಾವಿರಾರು ಮಂದಿ ನಮ್ಮ ನಡುವೆ ಇದ್ದಾರೆ. ಗರ್ಭಿಣಿಯರು, ವಿಕಲಾಂಗರು, ವೃದ್ಧರು, ಅಶಕ್ತರು, ಮಕ್ಕಳು, ಅಸಹಾಯಕರಿಗೆ ನೆರವಾಗುವ ನೂರೆಂಟು ಮಾನವೀಯ ಹೃದಯಗಳೂ ನಮ್ಮ ನಡುವೆ ಇವೆ. ಇವರನ್ನು ಕಂಡಾಗಲೆಲ್ಲ ಗಾಂಧೀಜಿಯವರ ಭರವಸೆ ಕಣ್ಣೆದುರಿಗೆ ಬರುತ್ತದೆ: 'ಮಾನವತೆಯಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ಅದೊಂದು ಮಹಾಸಾಗರವಿದ್ದಂತೆ. ಸಾಗರದ ಕೆಲವು ಬಿಂದುಗಳು ಕೊಳಕಾಗಿವೆಯೆಂಬ ಕಾರಣಕ್ಕೆ ಇಡೀ ಸಾಗರವೇ ಕೊಳಕಾಗುವುದಿಲ್ಲ’. ಅಲ್ಲವೇ?

ಶನಿವಾರ, ಡಿಸೆಂಬರ್ 9, 2017

ಎಕ್ಸಾಂ ಎಂಬ ಗೊಂದಲಪುರ

28-11-2017ರ 'ಉದಯವಾಣಿ'ಯಲ್ಲಿ ಪ್ರಕಟವಾದ ಲೇಖನ

'ನಿದ್ದೆ ಹತ್ತಿರ ಸುಳಿಯುತ್ತಿಲ್ಲ; ಊಟ ತಿಂಡಿ ರುಚಿಸುತ್ತಿಲ್ಲ; ಮನದೊಳಗೆ ಅದೇನೋ ಆತಂಕ. ದೇವರೇ, ನಾನು ಪ್ರೀತಿಯಲ್ಲಿ ಬಿದ್ದಿದ್ದೀನಾ?'
'ಮಂಕೇ ಅದು ಪ್ರೀತಿಯಲ್ಲ, ಎಕ್ಸಾಂ ಫಿಯರು.'

ಹೌದು, ಜಗತ್ತಿನ ಸಕಲ ಚರಾಚರ ವಸ್ತುಗಳನ್ನೂ ವರ್ಷಕ್ಕೆರಡು ಬಾರಿ ಕಾಡುವ ಅತಿದೊಡ್ಡ ಭಯಕ್ಕೆ ಎಕ್ಸಾಂ ಫಿಯರೆಂದು ಹೆಸರು. ಇಡೀ ಸೆಮಿಸ್ಟರಿನಲ್ಲಿ ಆದ ಪಾಠಗಳನ್ನು ಒಂದೇ ರಾತ್ರಿಯಲ್ಲಿ ಓದುವುದಕ್ಕೆ ತೊಡಗಿ ಅದರ ತುದಿಮೊದಲು ಒಂದೂ ಆರ್ಥವಾಗದೆ ಇನ್ನು ಭೂಮಿಯ ಮೇಲಿನ ಯಾವ ದೇವರೂ ತನ್ನನ್ನು ಕಾಪಾಡನೆಂದು ಬ್ರಾಹ್ಮೀ ಮುಹೂರ್ತದಲ್ಲಿ ಅರ್ಥವಾದಾಗ ಈ ಭಯದ ಜೊತೆಗೆ ಚಳಿಜ್ವರವೂ ಕಾಡುವುದುಂಟು.

ಅತ್ತ ಎಚ್ಚರವೂ ಅಲ್ಲದ ಇತ್ತ ನಿದ್ದೆಯೂ ಅಲ್ಲದ ಬೆಳ್ಳಂಬೆಳಗ್ಗಿನ ಅರೆಪ್ರಜ್ಞಾವಸ್ಥೆಯ ನಡುವೆ ಸುತ್ತಲೂ ಭೋರೆಂದು ಮಹಾಮಳೆ ಸುರಿದಂತೆ, ಅಚಾನಕ್ ಪ್ರವಾಹಕ್ಕೆ ಪ್ರಶ್ನೆಪತ್ರಿಕೆಯ ಬಂಡಲ್‌ಗಳು ಕೊಚ್ಚಿಹೋದಂತೆ, ಪರೀಕ್ಷೆಗಳೆಲ್ಲ ಮೂರು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿವೆ ಎಂಬ ಸಿಹಿಸುದ್ದಿ ವಾಟ್ಸಾಪಿನಲ್ಲಿ ತೇಲಿಬಂದಂತೆ ಕನಸುಗಳು ಬೀಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದರೆ ನಿದ್ದೆಯ ಮಂಪರಿನೊಂದಿಗೆ ಕನಸೂ ಹಾರಿಹೋದಾಗ ಎಂತೆಂಥದೋ ಬ್ರೇಕಿಂಗ್ ನ್ಯೂಸ್ ಕೊಡುವ ಟಿವಿಗಳು ಕಡೇ ಪಕ್ಷ ಎಲ್ಲೋ ಪ್ರಶ್ನೆಪತ್ರಿಕೆ ಲೀಕ್ ಆಗಿದೆ, ಪರೀಕ್ಷೆಯನ್ನು ಮುಂದೂಡಲಾಗಿದೆ ಎಂಬ ಫ್ಲಾಶ್ ನ್ಯೂಸನ್ನಾದರೂ ಕೊಡಬಾರದೇ ಎಂದು ಅನ್ನಿಸುವುದುಂಟು.

ಛೇ! ತಿಂಗಳಿಗೊಮ್ಮೆಯಾದರೂ ಪುಸ್ತಕಗಳನ್ನು ತಿರುವಿ ಹಾಕಿರುತ್ತಿದ್ದರೆ ಈಗ ಇಷ್ಟೊಂದು ಟೆನ್ಷನ್ ತೆಗೆದುಕೊಳ್ಳೋ ಪರಿಸ್ಥಿತಿ ಬರುತ್ತಿರಲಿಲ್ಲ. ಹೋಗಲಿ ಹತ್ತು ದಿನದಿಂದ ರೀಡಿಂಗ್ ಹಾಲಿಡೇ ಇರುವಾಗಲಾದರೂ ಒಂದಿಷ್ಟು ಸೀರಿಯಸ್ ಆಗಿ ಓದಿರುತ್ತಿದ್ದರೆ ಕೊಂಚ ನಿರಾಳವಾಗುತ್ತಿತ್ತು. ಯೆಸ್, ಇದೇ ಕೊನೆ, ಇನ್ನು ಮುಂದೆ ಹೀಗಾಗಕೂಡದು. ಮುಂದಿನ ಸೆಮಿಸ್ಟರಿನಲ್ಲಿ ರ‍್ಯಾಂಕ್ ಸ್ಟೂಡೆಂಟ್ ರೀತಿಯಲ್ಲಿ ಓದಬೇಕು ಎಂದು ಇಂತಹ ಚಳಿಜ್ವರದ ನಡುವೆಯೂ ಪ್ರತಿಜ್ಞೆ ಮಾಡುವುದುಂಟು. ಇದೊಂಥರಾ ನ್ಯೂ ಇಯರ್ ರೆಸೊಲ್ಯೂಷನ್ ಇದ್ದ ಹಾಗೆ. ಈ ಪತ್ರಿಜ್ಞೆ ಮತ್ತೆ ನೆನಪಿಗೆ ಬರುವುದು ಮುಂದಿನ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾದ ಮೇಲೆಯೇ.

ಇಂತಿಪ್ಪ ಗಡಿಬಿಡಿಯ ನಡುವೆ ಪರೀಕ್ಷಾ ಕೇಂದ್ರದತ್ತ ಹೊರಟಾಗ ಎಂದೂ ತಪ್ಪದ ಬಸ್ ಅಂದು ತಪ್ಪಿಸಿಕೊಳ್ಳುವುದುಂಟು. ಬಸ್ ಮಿಸ್ಸಾಗಿದೆ ಎಂದರೆ ಹಾಲ್ ಟಿಕೇಟು, ಐಡಿ ಕಾರ್ಡು, ಕೊನೆಗೆ ಬರೆಯಬೇಕಾಗಿರುವ ಪೆನ್ನೂ ಮನೆಯಲ್ಲೇ ಉಳಿದುಬಿಟ್ಟಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಪರೀಕ್ಷೆ ಬರೆಯಬೇಕಾಗಿರುವವನು ತನ್ನನ್ನೇ ತಾನು ಮರೆತಿರುವಾಗ ಹಾಲ್ ಟಿಕೇಟಿನಂತಹ ಕ್ಷುಲ್ಲಕ ವಸ್ತುಗಳು ಮರೆತುಹೋಗುವುದು ವಿಶೇಷವಲ್ಲ.

ಅಂತೂ ಪರೀಕ್ಷಾ ಮುಖ್ಯಸ್ಥರ ಕೈಕಾಲು ಹಿಡಿದು ಪರೀಕ್ಷೆ ಬರೆಯುವುದಕ್ಕೆ ಅನುಮತಿ ಪಡೆದು ಎಕ್ಸಾಂ ಹಾಲ್ ಹುಡುಕಿ ಹೊರಟರೆ ಕಣ್ಣೆದುರೇ ಇರುವ ಹಾಲ್ ಕಾಣಿಸದೆ ಈ ಹಾಲಿನಿಂದ ಆ ಹಾಲಿಗೆ, ಆ ಹಾಲಿನಿಂದ ಈ ಹಾಲಿಗೆ ಅಲೆದಾಡುತ್ತಾ ಮತ್ತೆ ಹತ್ತು ನಿಮಿಷ ಕಳೆದುಹೋಗಿರುತ್ತದೆ. ಅಷ್ಟರಲ್ಲಿ ಪ್ರಶ್ನೆಪತ್ರಿಕೆಯೆಂಬ ಭಯಾನಕ ವಸ್ತು ಅದಾಗಲೇ ಎಲ್ಲರ ಕೈಯನ್ನೂ ಅಲಂಕರಿಸಿರುತ್ತದೆ. ಏದುಸಿರು ಬಿಡುತ್ತಾ ಅದನ್ನೂ ಪಡೆದುಕೊಂಡು ಸ್ವಸ್ಥಾನದಲ್ಲಿ ಕುಕ್ಕರಿಸಿ ಪ್ರಶ್ನೆಪತ್ರಿಕೆಯ ಮೇಲೆ ಕಣ್ಣಾಡಿಸಿದರೆ ಮುಂದಕ್ಕೆ ಏನೂ ಕಾಣಲೊಲ್ಲದು. ಸುತ್ತಲೂ ಕತ್ತಲು. ಅದ್ಯಾವ ಭೂಪ ಕ್ಷೆಶ್ಚನ್ ಪೇಪರ್ ತಯಾರಿಸಿದ್ದಾನೋ? ತಾನು ರಾತ್ರಿಯಿಡೀ ಓದಿದ್ದಕ್ಕೂ ಪ್ರಶ್ನೆಪತ್ರಿಕೆಯಲ್ಲಿರುವುದಕ್ಕೂ ಒಂದಿನಿತೂ ತಾಳಮೇಳ ಇಲ್ಲ. ಕುಳಿತಲ್ಲೇ ಭೂಕಂಪ ಸಂಭವಿಸಿ ಭೂಮಿ ಬಾಯ್ದೆರೆದು ತನ್ನನ್ನು ನುಂಗಿಬಿಡಬಾರದೇ ಎಂದು ಆ ಕ್ಷಣ ಅನ್ನಿಸುವುದೂ ಉಂಟು.

'ಯಾಕೋ ತಮ್ಮಾ, ನೀರು ಬೇಕೇನೋ?’ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕನಾಗಿ ನಿಂತಿರುವ ನಾನು ಅಲ್ಲಿಯವರೆಗಿನ ಸಮಸ್ತ ವಿದ್ಯಮಾನಗಳನ್ನೆಲ್ಲ ಊಹಿಸಿಕೊಂಡು ಆತನನ್ನು ಕೇಳುತ್ತೇನೆ. ಗಟಗಟನೆ ಒಂದು ಲೀಟರ್ ನೀರು ಕುಡಿದ ಅವನಿಗೆ ತಾನೆಲ್ಲಿದ್ದೇನೆ ಎಂದು ಅರ್ಥವಾದ ಬಳಿಕ 'ಸುಧಾರಿಸ್ಕೊಳೋ. ಟೆನ್ಷನ್ ಮಾಡ್ಕೋಬೇಡ. ನಿಧಾನವಾಗಿ ಯೋಚಿಸಿ ಬರೆಯೋದಕ್ಕೆ ಶುರುಮಾಡು’ ಎಂದು ಬೆನ್ನುತಟ್ಟುತ್ತೇನೆ.

ಎಕ್ಸಾಂ ಹಾಲ್‌ನಲ್ಲಿ ಪ್ರತಿದಿನ ಇಂತಹ ದೃಶ್ಯಗಳು ಸಾಮಾನ್ಯ. ಪ್ರತೀ ಹಾಲ್‌ನಲ್ಲೂ ಇಂತಹವರು ನಾಲ್ಕೈದು ಮಂದಿಯಾದರೂ ಸಿಗುತ್ತಾರೆ. ನನ್ನ ಮಟ್ಟಿಗಂತೂ ಎಕ್ಸಾಂ ಹಾಲ್ ಒಂದು ಕುತೂಹಲದ ಕೇಂದ್ರ. ನಲ್ವತ್ತು ಮಂದಿ ಪರೀಕ್ಷಾರ್ಥಿಗಳಿದ್ದರೆ ನಲ್ವತ್ತು ಅಧ್ಯಯನದ ವಸ್ತುಗಳಿವೆ ಎಂದೇ ಅರ್ಥ. ಒಬ್ಬೊಬ್ಬರದೂ ಒಂದೊಂದು ಭಾವ, ಒಂದೊಂದು ವರ್ತನೆ. ಅವರನ್ನೆಲ್ಲ ಗಮನಿಸುತ್ತಾ ಮೂರು ಗಂಟೆ ಕಳೆಯುವುದೇ ಒಂದು ಸೊಗಸಾದ ಅನುಭವ.

ಕಣ್ಣುಮುಚ್ಚಿ ಧ್ಯಾನಸ್ಥರಾಗಿರುವವರು ಒಂದಷ್ಟು ಮಂದಿಯಾದರೆ ಕೂದಲೇ ಕಿತ್ತುಹೋಗುವಂತೆ ತಲೆಕೆರೆದುಕೊಳ್ಳುವವರು ಇನ್ನೊಂದಷ್ಟು ಮಂದಿ. ಪ್ರಪಂಚದಲ್ಲಿ ಅತಿಹೆಚ್ಚು ಉಗುರು ತಿನ್ನುವ ಜೀವಿಗಳನ್ನು ನೋಡಬೇಕಾದರೂ ಎಕ್ಸಾಂ ಹಾಲ್‌ಗೇ ಭೇಟಿ ನೀಡಬೇಕು. ಪ್ರಶ್ನೆಪತ್ರಿಕೆ ವಿತರಣೆಯೆಂಬ ದುರ್ಘಟನೆ ನಡೆದ ಮೊದಲ ಅರ್ಧ ಗಂಟೆಯಲ್ಲಿ ಕನಿಷ್ಟ ಅರ್ಧ ಕೆ.ಜಿ. ಉಗುರಾದರೂ ಅಭ್ಯರ್ಥಿಗಳ ಹೊಟ್ಟೆಯಲ್ಲಿ ಕರಗಿ ಬೆವರಾಗಿ ಈಚೆ ಬರುವುದುಂಟು.

ತಲೆ ಮೇಲೆ ಕೈಹೊತ್ತು ಕುಳಿತವರು, ಡೆಸ್ಕ್ ಮೇಲೆ ಮೊಣಕೈಯೂರಿ ಹಣೆ ನೀವಿಕೊಳ್ಳುವವರು, ಪೆನ್ನಿನ ತುದಿ ಕಚ್ಚಿ ವಿರೂಪಗೊಳಿಸುವವರು, ಅಕ್ಕಪಕ್ಕದಲ್ಲಿ ಇರುವವರು ಏನು ಮಾಡುತ್ತಿದ್ದಾರೆ ಎಂದು ಗಮನಿಸುವುದರಲ್ಲೇ ಕಾಲಕಳೆಯುವವರು, ಎಷ್ಟು ಬರೆದರೂ ಪುಟವೇ ತುಂಬುತ್ತಿಲ್ಲವಲ್ಲ ಎಂದು ಶಪಿಸಿಕೊಳ್ಳುವವರು, ಪಕ್ಕದ ಬೆಂಚಿನಲ್ಲಿ ಕುಳಿತಿರುವ ರ‍್ಯಾಂಕ್ ಸ್ಟೂಡೆಂಟ್ ಮೇಲಿಂದ ಮೇಲೆ ಅಡಿಶನಲ್ ಪೇಪರ್ ತೆಗೆದುಕೊಳ್ಳುವುದನ್ನೇ ಜಗತ್ತಿನ ಒಂಬತ್ತನೇ ಅದ್ಭುತವೆಂಬಂತೆ ಬೆರಗಿನಿಂದ ನೋಡುವವರು, ಕಿಟಕಿಯಾಚೆ ಶೂನ್ಯದತ್ತ ದೃಷ್ಟಿ ನೆಟ್ಟು ಓದಿದ್ದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಾ ಮಣಮಣ ಮಂತ್ರ ಪಠಿಸುವ, ಕಣ್ಣುಕೊಂಕಿಸುವ ಹುಡುಗ ಹುಡುಗಿಯರು, ಪದೇಪದೇ ವಾಚ್ ನೋಡಿಕೊಳ್ಳುತ್ತಾ ಎದ್ದು ಹೋಗಲು ಇನ್ನೆಷ್ಟು ಹೊತ್ತು ಕಾಯಬೇಕು ಎಂದು ಸಂಕಟಪಡುವವರು, 120 ಕಿ.ಮೀ. ಸ್ಪೀಡಿನಲ್ಲಿ ಬರೆಯುತ್ತಿರುವ ಮುಂದಿನ ಬೆಂಚಿನ ಹುಡುಗಿಯ ತಲೆಯೊಳಗೆ ಏನಿರಬಹುದು ಎಂಬ ವಿಸ್ಮಯದಲ್ಲಿ ಕಣ್ಣರಳಿಸಿ ಕುಳಿತವರು... ಪರೀಕ್ಷಾ ಕೊಠಡಿಯಲ್ಲಿ ಹತ್ತೆಂಟು ಬಗೆಯ ಮಂದಿ.

ವಾರೆಗಣ್ಣಿನಲ್ಲಿ ಅಕ್ಕಪಕ್ಕದವರ ಉತ್ತರಪತ್ರಿಕೆಗಳನ್ನು ಗಮನಿಸುವ, ಅಮಾಯಕರಂತೆ ಪೋಸ್ ಕೊಡುತ್ತಾ ಎದುರು ಕುಳಿತವರ ಉತ್ತರಗಳನ್ನು ಹೇಗೆಂದಹಾಗೆ ನಕಲು ಮಾಡುವ, ಮೇಲ್ವಿಚಾರಕರು ಗಮನಿಸಿದರು ಎಂದು ಗೊತ್ತಾದ ಕೂಡಲೇ ಕುತ್ತಿಗೆ ನೆಟಿಗೆ ತೆಗೆಯಲು ಪಕ್ಕಕ್ಕೆ ಕತ್ತು ತಿರುಗಿಸಿದೆ ಎಂಬ ಹಾಗೆ ತಲೆಯಲ್ಲಾಡಿಸುವ ಕಲೆಯಲ್ಲಂತೂ ಅನೇಕ ಪರೀಕ್ಷಾರ್ಥಿಗಳಿಗೆ ನೂರರಲ್ಲಿ ನೂರು ಅಂಕ.

ಹತ್ತು ನಿಮಿಷ ತಡವಾಗಿ ಎಕ್ಸಾಂ ಹಾಲ್‌ಗೆ ಬಂದ ಆಸಾಮಿ ಹತ್ತು ನಿಮಿಷ ಮೊದಲೇ ಎದ್ದು ಹೊರಟಾಗ ಹತ್ತಿರ ಕರೆದು ಸಣ್ಣ ಧ್ವನಿಯಲ್ಲಿ 'ಹೆಂಗಾಯ್ತೋ ಎಕ್ಸಾಂ?’ ಎಂದು ಕೇಳುತ್ತೇನೆ. 'ಅವ್ರು ನಂಗೆ ಗೊತ್ತಿಲ್ಲದ ಪ್ರಶ್ನೆಗಳನ್ನೇ ಕೇಳಿದಾರೆ. ಹಂಗೇ ನಾನೂ ಅವರಿಗೆ ಗೊತ್ತಿಲ್ಲದ ಉತ್ತರಗಳನ್ನೇ ಬರೆದಿದೀನಿ ಸಾರ್’ ಎನ್ನುತ್ತಾ ಆತ ಕ್ಷಣಾರ್ಧದಲ್ಲಿ ಕಾರಿಡಾರ್ ತುದಿಯಲ್ಲಿ ಮಾಯವಾಗಿರುತ್ತಾನೆ.