ಮಂಗಳವಾರ, ಜೂನ್ 13, 2023

ಬದುಕಿನ ಪಯಣಕ್ಕೆ ದಿಕ್ಸೂಚಿ ಯಾವುದು?

10-16 ಜೂನ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ನಲ್ವತ್ತರ ಈ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡುವುದು ನಿಮಗೆ ಹೇಗೆ ಸಾಧ್ಯವಾಯಿತು?’ ಜಗತ್ತಿನ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟನ್ನು ಮೊದಲ ಬಾರಿ ತನ್ನ ಗೆಳೆಯ ಎಡ್ಮಂಡ್ ಹಿಲರಿ ಜತೆಗೆ ಏರಿ ವಿಶ್ವದಾಖಲೆ ನಿರ್ಮಿಸಿದ ತೇನ್‌ಸಿಂಗ್ ನಾರ್ಗೆಯನ್ನು ಪತ್ರಕರ್ತರು ಹೀಗೆ ಪ್ರಶ್ನಿಸಿದರಂತೆ. ‘ಅಯ್ಯೋ ಇದು ನಲ್ವತ್ತನೇ ವಯಸ್ಸಲ್ಲಿ ಸಾಧಿಸಿದ್ದಲ್ಲ, ಹತ್ತುವರ್ಷ ವಯಸ್ಸಿನವನಿರುವಾಗಲೇ ಶುರುಮಾಡಿದ್ದೆ. ಮೊನ್ನೆ ಪೂರೈಸಿದೆ ಅಷ್ಟೇ’ ಎಂದು ಉತ್ತರಿಸಿದನಂತೆ ತೇನ್‌ಸಿಂಗ್.

‘ಹತ್ತು ವರ್ಷದವನಿದ್ದಾಗ ಹಿಮಾಲಯದ ತಪ್ಪಲಲ್ಲಿ ನಾನು ಕುರಿ ಮೇಯಿಸ್ತಾ ಇದ್ದೆ. ಎವರೆಸ್ಟನ್ನು ತೋರಿಸಿ ನನ್ನಮ್ಮ- ನೋಡು ಈ ಶಿಖರವನ್ನು ಈವರೆಗೆ ಯಾರೂ ಹತ್ತಿಲ್ಲ, ನೀನು ಹತ್ತುತ್ತೀಯಾ – ಅಂತ ಕೇಳಿದರು. ಎವರೆಸ್ಟ್ ಹತ್ತುವ ಕನಸು ಅಲ್ಲಿಂದಲೇ ಆರಂಭವಾಯಿತು. ಪ್ರತಿದಿನ ಕುರಿಕಾಯುತ್ತಾ ನಾನು ಮನಸ್ಸಿನಲ್ಲೇ ಎವರೆಸ್ಟ್ ಏರುತ್ತಿದ್ದೆ’ ಎಂದು ತೇನ್‌ಸಿಂಗ್ ವಿವರಿಸಿದನಂತೆ. 

ತೇನ್‌ಸಿಂಗ್ ಕಂಡ ಕನಸು ಮತ್ತು ಅದನ್ನು ಸಾಧಿಸುವ ಛಲ - ಇವೆರಡೇ ಆತನ ಬದುಕಿನ ಪಯಣದ ದಿಕ್ಸೂಚಿಗಳು. ಸಾಧನೆಯ ಹಿಂದಿನ ಪ್ರಬಲ ಪ್ರೇರಣೆ ಒಂದು ದೊಡ್ಡ ಕನಸು. ಸಾಧಕ ತನ್ನ ಅಂತಿಮ ಯಶಸ್ಸನ್ನು ಮನಸ್ಸಿನಲ್ಲಿ ಸದಾ ದೃಶ್ಶೀಕರಿಸಿಕೊಳ್ಳುತ್ತಾ, ಧ್ಯಾನಿಸುತ್ತಾ ಇದ್ದಾಗ ಅದು ಆತ ತನ್ನ ದಾರಿಯಲ್ಲಿ ಹಿಂದೆ ಬೀಳದಂತೆ, ನಿರುತ್ಸಾಹಗೊಳ್ಳದಂತೆ ನಡೆಯುವುದಕ್ಕೆ ಪ್ರೇರಣೆಯಾಗುತ್ತದೆ. ಆದರೆ ಕನಸು ಕಂಡರಷ್ಟೇ ಸಾಲದು, ಸಾಗುವ ದಾರಿಯೂ ಮುಖ್ಯ. ದೊಡ್ಡ ಕನಸಿನ ಸಾಧನೆಗೆ ದೊಡ್ಡ ಪರಿಶ್ರಮವೇ ಬೇಕಾಗುತ್ತದೆ. ಕನಸಿನ ಗುಂಗಿನಲ್ಲೇ ಕಾಲ ಕಳೆಯುತ್ತಾ ಅದಕ್ಕಾಗಿ ವಾಸ್ತವದಲ್ಲಿ ಏನನ್ನಾದರೂ ಮಾಡದೆ ಹೋದರೆ ಕೊನೆಗೆ ಟೊಳ್ಳು ಭ್ರಮೆಯಷ್ಟೇ ಉಳಿದುಕೊಳ್ಳುತ್ತದೆ.

ಜೀವಗತಿಗೊಂದು ರೇಖಾಲೇಖವಿರಬೇಕು
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ?
ಆವುದೀ ಜಗಕಾದಿ - ಮಂಕುತಿಮ್ಮ

ಎಂದು ಕೇಳುತ್ತಾರೆ ಡಿ.ವಿ.ಜಿ. ನಾವಿಕನಿಗೆ ದಿಕ್ಸೂಚಿ ಇರುವಂತೆ  ಜೀವನದ ಪಯಣಕ್ಕೂ ಒಂದು ಮಾರ್ಗದರ್ಶನದ ರೇಖೆ ಇರಲೇಬೇಕು; ಯಶಸ್ಸಿನ ತುದಿ-ಮೊದಲಿನ ಸ್ಪಷ್ಟ ಕಲ್ಪನೆ ಇಲ್ಲದೆ ಹೋದರೆ ಅದನ್ನು ಸಾಧಿಸುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆ. 

ಎಲ್ಲರಿಗೂ ಸಲ್ಲುವಂಥ ಏಕರೂಪದ ದಿಕ್ಸೂಚಿಯೊಂದು ಇರುವುದು ಅಸಾಧ್ಯ. ಒಬ್ಬೊಬ್ಬರನ್ನು ನಡೆಸುವ ಶಕ್ತಿ ಒಂದೊಂದು ಇರಬಹುದು. ಕೆಲವರು ಅದನ್ನು ಕನಸು ಕಾಣುವ ಶಕ್ತಿ ಎನ್ನಬಹುದು, ಇನ್ನು ಕೆಲವರು ಛಲ ಎನ್ನಬಹುದು, ಮತ್ತೆ ಕೆಲವರು ಆತ್ಮವಿಶ್ವಾಸ ಎನ್ನಬಹುದು. ತಮ್ಮ ಕಣ್ಣೆದುರಿನ ಆದರ್ಶವೇ ತಮ್ಮ ದಿಕ್ಸೂಚಿ ಎಂದು ಹಲವರು ಭಾವಿಸಬಹುದು. ಆದರೆ ಎಲ್ಲವೂ ಮೂಲತಃ ನಮ್ಮೊಳಗಿನಿಂದಲೇ ಮೂಡಿಬರಬೇಕು ಎಂಬುದು ಮಾತ್ರ ಸತ್ಯ. ಅದನ್ನು ‘ಅಂತರಂಗದ ಧ್ವನಿ’ ಎಂದೋ, ‘ಆತ್ಮಸಾಕ್ಷಿ’ ಎಂದೋ ಕರೆದರೆ ಚೆನ್ನ.

ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನೂರು ಮಂದಿ ಸಾವಿರ ರೀತಿ ಹೇಳಬಹುದು. ಆದರೆ ಸರಿ-ತಪ್ಪುಗಳನ್ನು ಅಂತಿಮವಾಗಿ ನಿರ್ಧರಿಸಬೇಕಾದವರು ನಾವೇ. ಇಂಥ ಸಂದರ್ಭದಲ್ಲಿ ಅಂತರಂಗದ ಧ್ವನಿ ಮಾತ್ರ ನಮ್ಮ ನೆರವಿಗೆ ಬರುತ್ತದೆ. ಐಎಎಸ್ ತೇರ್ಗಡೆಯಾಗುವ ದೊಡ್ಡ ಕನಸು ಇಟ್ಟುಕೊಂಡ ವ್ಯಕ್ತಿ ಯಾವುದೋ ಕಾರಕೂನಿಕೆಯ ಕೆಲಸ ಸಿಕ್ಕಿತೆಂದು ಅದರಲ್ಲೇ ತೃಪ್ತಿಪಟ್ಟುಕೊಂಡರೆ ಐಎಎಸ್ ಕನಸಿನ ಕತೆಯೇನು? ‘ಬದುಕಿನಲ್ಲಿ ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾದರೆ ಸಣ್ಣಪುಟ್ಟ ತ್ಯಾಗಗಳನ್ನು ಮಾಡಬೇಕಾಗುತ್ತದೆ’ ಎನ್ನುತ್ತಾರೆ ಬಿ.ಜಿ.ಎಲ್. ಸ್ವಾಮಿ. ಸಾಧನೆಯ ಹಾದಿಯ ಇಕ್ಕೆಲಗಳಲ್ಲಿ ಸಾಕಷ್ಟು ಸಣ್ಣಪುಟ್ಟ ಆಕರ್ಷಣೆಗಳು ಇದ್ದೇ ಇರುತ್ತವೆ. ಅವುಗಳೇ ಸಾಕೆಂದು ಮುಂದೆ ಸಾಗುವ ಯೋಚನೆಯನ್ನು ಕೈಬಿಟ್ಟರೆ ಮುಂದೊಂದು ದಿನ ಕೊರಗಬೇಕಾಗುತ್ತದೆ. ಆಗ ಹಾಗೆ ಮಾಡಬಾರದಿತ್ತು ಅಂದುಕೊಳ್ಳುತ್ತೇವೆ. ಆದರೆ ಅಷ್ಟು ಹೊತ್ತಿಗೆ ಬಹಳ ತಡವಾಗಿರುತ್ತದೆ. ಕೆಲವು ತ್ಯಾಗಗಳು ಅನಿವಾರ್ಯ. ಆದರೆ ಅಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಹೊತ್ತು ಸಾಕಷ್ಟು ಸಲ ನೆರವಿಗೆ ಬರುವುದು ನಮ್ಮ ಅಂತರಂಗದ ಧ್ವನಿ ಮಾತ್ರ.

ಇದರರ್ಥ ಹಿರಿಯರ, ಗೆಳೆಯರ ಮಾತುಗಳಿಗೆ ಕಿವಿಗೊಡಬಾರದು ಎಂದೇ? ಖಂಡಿತ ನಾಲ್ಕು ಮಂದಿಯ ಅಭಿಪ್ರಾಯವನ್ನು ಪರಿಗಣಿಸಬೇಕು. ಅನೇಕ ಸಂದರ್ಭ ಗೊಂದಲಗಳು ಏರ್ಪಡುತ್ತೇವೆ. ಮುಂದೇನು ಎಂಬ ಅಯೋಮಯ ಸನ್ನಿವೇಶ ಎದುರಾಗುತ್ತದೆ. ಅಂತಹ ಸಂದರ್ಭ ಹಿರಿಯರ ಇಲ್ಲವೇ ಸ್ನೇಹಿತರ ಸಲಹೆಯನ್ನು ಕೇಳುವುದರಲ್ಲಿ ತಪ್ಪೇನೂ ಇಲ್ಲ. ‘ಅಪ್ಪ ನೆಟ್ಟ ಆಲದ ಮರಕ್ಕೆ ಯಾಕೆ ಜೋತು ಬೀಳಬೇಕು?’ ಎಂಬ ಉಡಾಫೆ ಸಾಕಷ್ಟು ಮಂದಿಯಲ್ಲಿ ಇರುತ್ತದೆ. ಅಪ್ಪ ನೆಟ್ಟ ಆಲದ ಮರವೂ ಮಹತ್ವದ್ದೇ. ಹಳೆಯದು, ಹಳಬರು ಎಂಬ ಕಾರಣಕ್ಕೆ ಎಲ್ಲವೂ ವರ್ಜ್ಯವಲ್ಲ. ನಮ್ಮ ಬೇರುಗಳನ್ನಂತೂ ಮರೆಯಬಾರದು. ಎಷ್ಟೇ ಉನ್ನತ ಹಂತಕ್ಕೆ ತಲುಪಿದರೂ ನಮ್ಮ ಮೂಲದ ನೆನಪು ಇರಲೇಬೇಕು. ಆದರೆ ನಾಲ್ಕು ಮಂದಿಯ ಬಳಿ ಅಭಿಪ್ರಾಯ ಕೇಳಿದ ಮೇಲೂ ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ನಾವೇ ಆಗಿರಬೇಕು.

ಅನೇಕ ಸಂದರ್ಭಗಳಲ್ಲಿ ನಮ್ಮನ್ನು ದಾರಿ ತಪ್ಪಿಸುವವರು, ನಿರುತ್ತೇಜಿಸುವವರು ಬಹಳ ಮಂದಿ ಇರುತ್ತಾರೆ. ಅವರಲ್ಲಿ ನಾವು ‘ಆತ್ಮೀಯರು’ ಎಂದು ನಂಬಿದವರೂ ಇರುತ್ತಾರೆ. ಯಾವುದೋ ಒಂದು ಮಹತ್ವಾಕಾಂಕ್ಷೆಯನ್ನೇ ನೆಚ್ಚಿ ವಿಶ್ವಾಸದಿಂದ ಮುಂದೆ ಸಾಗುತ್ತಿರುವಾಗ ನಮ್ಮನ್ನು ಹಿಂದಕ್ಕೆ ಎಳೆಯುವವರು, ಆಮಿಷ ಒಡ್ಡುವವರು, ಉತ್ಸಾಹವನ್ನು ಕುಗ್ಗಿಸುವವರು, ಟೀಕಿಸುವವರು ಇದ್ದೇ ಇರುತ್ತಾರೆ. ಅವರ ತಂತ್ರಗಳಿಗೆ ಬಲಿಯಾದರೆ ಅಲ್ಲಿಗೆ ಕತೆ ಮುಗಿದಂತೆ. ವಾಸ್ತವವಾಗಿ ಇವೇ ನಮ್ಮ ಅಗ್ನಿಪರೀಕ್ಷೆಯ ಕ್ಷಣಗಳು. ಟೀಕೆಗಳನ್ನು ನಿರುಮ್ಮಳವಾಗಿ ಕೇಳಿಸಿಕೊಳ್ಳಬೇಕು. ಅವು ಪೊಳ್ಳು ಎಂದು ಅನಿಸಿದರೆ ನಿರ್ಲಕ್ಷಿಸಿ ಮುಂದೆ ಸಾಗಬೇಕು. ಅವುಗಳಲ್ಲೂ ಸತ್ವವಿದೆ ಅನಿಸಿದರೆ ಅವುಗಳನ್ನು ಆತ್ಮವಿಮರ್ಶೆಯ ಪರಿಕರಗಳನ್ನಾಗಿ ಬಳಸಬೇಕು. ಆ ಹಂತವನ್ನು ದೃಢಚಿತ್ತದಿಂದ ದಾಟಿ ಮುಂದೆ ಹೋದರೆ ನಮ್ಮ ಯಶಸ್ಸನ್ನು ಕಸಿದುಕೊಳ್ಳುವವರು ಯಾರೂ ಇಲ್ಲ.

ಈ ದೃಢಚಿತ್ತ ಹುಟ್ಟಿಕೊಳ್ಳುವುದು ಸ್ವಂತಿಕೆಯಲ್ಲಿ. ಅದು ಒಳಗಿನಿಂದ ಹೊಮ್ಮುವ ಬೆಳಕು. ಎರವಲು ಪಡೆದದ್ದು ತಾತ್ಕಾಲಿಕ; ಸ್ವತಂತ್ರವಾಗಿ ಆರ್ಜಿಸಿಕೊಂಡದ್ದಷ್ಟೇ ಬದುಕಿನ ಶಾಶ್ವತ ದಿಕ್ಸೂಚಿ. ಆದ್ದರಿಂದ ನಮ್ಮೆದುರಿನದ್ದು ಎಷ್ಟೇ ಚೆನ್ನಾಗಿದ್ದರೂ ಅದನ್ನು ನಕಲು ಮಾಡುವುದು ಬೇಡ. ಅದರಿಂದ ಪ್ರೇರಣೆಯನ್ನಷ್ಟೇ ಪಡೆಯೋಣ.

ಬದುಕಿನ ಪಯಣಕ್ಕೆ ಬೇಕಾದದ್ದು ನಕಾಶೆಯೋ ದಿಕ್ಸೂಚಿಯೋ ಎಂಬ ಮೂಲಪ್ರಶ್ನೆಯಿದೆ. ನಕಾಶೆ ಎಂದರೆ ಈಗಾಗಲೇ ಯಾರೋ ತಯಾರಿಸಿಟ್ಟಿರುವ ಚಿತ್ರ. ನಾವು ಎಲ್ಲಿ, ಹೇಗೆ ಸಾಗಬೇಕು ಎಂದು ಅದು ಮಾರ್ಗದರ್ಶನ ಮಾಡುತ್ತದೆ. ನಾವು ಅದರ ಪ್ರಕಾರ ಹೋದರೆ ನಿರ್ದಿಷ್ಟ ಸ್ಥಳವನ್ನು ತಲುಪಬಹುದು. ಹೊಸ ಸಾಧ್ಯತೆಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಆದರೆ ದಿಕ್ಸೂಚಿ ದಿಕ್ಕನ್ನು ಮಾತ್ರ ತೋರಿಸುತ್ತದೆ. ನಮ್ಮ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕು. ಈ ಪಯಣದಲ್ಲಿ ಒಂದು ಬಗೆಯ ಹೊಸತನ ಮತ್ತು ಇದನ್ನು ನಾವೇ ಸಾಧಿಸಿದೆವೆಂಬ ಹೆಚ್ಚುವರಿ ತೃಪ್ತಿಯೂ ಇರುತ್ತದೆ. ಇದು ಅರ್ಥವಾದರೆ ಬದುಕಿನ ಪಯಣ ರೋಚಕ ಮತ್ತು ಸಾರ್ಥಕ.

- ಸಿಬಂತಿ ಪದ್ಮನಾಭ ಕೆ. ವಿ.