ಭಾನುವಾರ, ನವೆಂಬರ್ 29, 2020

ಶಿಕ್ಷಣದಲ್ಲಿ ಕನ್ನಡ: ಸಾಧ್ಯತೆ, ಸವಾಲು

ನವೆಂಬರ್ 2020ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

(ಇದೇ ವಿಚಾರವನ್ನು 2019ರಲ್ಲಿ ನಡೆದ ಕಡಬ ತಾಲೂಕು ಮೊದಲನೇ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾಗಿತ್ತು).

ಕನ್ನಡವೆಂಬ ಭಾಷೆಯಿಂದಲೇ ಅಸ್ಮಿತೆಯನ್ನು ಪಡೆದುಕೊಂಡಿರುವ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ
ಆಂದೋಲನಗಳು ನಡೆಯಬೇಕಾಗಿ ಬಂದಿರುವುದು ಕಾಲದ ವಿಪರ್ಯಾಸವೇ ಇರಬೇಕು. ಕನ್ನಡದ ಅಳಿವು-ಉಳಿವಿನ ಪ್ರಶ್ನೆ ಬಂದಾಗಲೆಲ್ಲ ಶಿಕ್ಷಣದ ವಿಚಾರ ಮುನ್ನೆಲೆಗೆ ಬರುತ್ತದೆ. ಏಕೆಂದರೆ ಒಂದು ಭಾಷೆಯ ವರ್ತಮಾನ ಮತ್ತು ಭವಿಷ್ಯದ ಚರ್ಚೆಗಳಲ್ಲಿ ಶಿಕ್ಷಣದ ಪಾತ್ರ ತುಂಬ ದೊಡ್ಡದು. ಇಲ್ಲಿ ನಾವು ಶಿಕ್ಷಣದಲ್ಲಿ ಕನ್ನಡವನ್ನು ಬಳಸುವ ಸವಾಲು ಹಾಗೂ ಸಾಧ್ಯತೆಗಳನ್ನು ವಿಶ್ಲೇಷಿಸಬೇಕಾಗಿದೆ. ‘ಶಿಕ್ಷಣದಲ್ಲಿ ಕನ್ನಡ’ ಎಂಬ ವಿಚಾರವನ್ನು ಎರಡು ಆಯಾಮಗಳಿಂದ ನೋಡಬಹುದು. ಮೊದಲನೆಯದು, ಭಾಷೆಯಾಗಿ ಕನ್ನಡವನ್ನು ಕಲಿಯುವುದು; ಎರಡನೆಯದು, ಕನ್ನಡ ಮಾಧ್ಯಮದಲ್ಲಿ ಕಲಿಯುವುದು. 

ಕನ್ನಡ ಕಲಿಕೆಯ ಸ್ಥಿತಿಗತಿ:

ಸಮಾಜದ ಒಂದು ಭಾಗ ಕನ್ನಡದಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸುತ್ತಾ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ತನ್ನ ಕೊಡುಗೆಯನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಭಾಷೆಯ ಬಗ್ಗೆ ತೀವ್ರ ಅನಾದರ ಹಾಗೂ ಅನಾಸಕ್ತಿಯನ್ನು ಹೊಂದಿರುವ ಮಂದಿಯನ್ನು ಇಂದು ನಾವು ಕಾಣುತ್ತಿದ್ದೇವೆ. ವಿಶ್ವವಿದ್ಯಾನಿಲಯ ಹಂತದಲ್ಲಿ ಶಿಕ್ಷಣ ಪಡೆಯುತ್ತಿರುವವರಲ್ಲೂ ಸಾಕಷ್ಟು ಮಂದಿ ಸ್ವತಂತ್ರವಾದ, ಅರ್ಥಪೂರ್ಣ, ತಪ್ಪಿಲ್ಲದ ಒಂದು ಕನ್ನಡ ವಾಕ್ಯ ಬರೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ವಿಪರೀತವಾದ ಕಾಗುಣಿತ ತಪ್ಪುಗಳು, ವಾಕ್ಯರಚನೆಯ ದೋಷಗಳು ನಮ್ಮನ್ನು ಕಂಗೆಡಿಸುತ್ತವೆ. ಜ್ಞಾನಸಂಪಾದನೆಯ ವಿಷಯ ಹಾಗಿರಲಿ, ಕಡೇಪಕ್ಷ ತಪ್ಪಿಲ್ಲದೆ ತಮ್ಮ ಮಾತೃಭಾಷೆಯನ್ನು ಬಳಸುವ ಸಾಮರ್ಥ್ಯವನ್ನಾದರೂ ನಮ್ಮ ಯುವಕರು ಏಕೆ ಕರಗತ ಮಾಡಿಕೊಂಡಿಲ್ಲ ಎಂಬ ಆತಂಕ ಸಮಾಜದ ಪ್ರಜ್ಞಾವಂತರನ್ನು ಕಾಡದೆ ಇರದು.

ಇಂತಹ ಪರಿಸ್ಥಿತಿಗೆ ಏನು ಕಾರಣವೆಂದು ಪ್ರಶ್ನೆಮಾಡಿದರೆ, ವಿಶ್ವವಿದ್ಯಾನಿಲಯಗಳು ಕಾಲೇಜುಗಳತ್ತಲೂ, ಕಾಲೇಜುಗಳು ಪ್ರೌಢಶಾಲೆಗಳತ್ತಲೂ, ಪ್ರೌಢಶಾಲೆಗಳು ಪ್ರಾಥಮಿಕ ಶಾಲೆಗಳತ್ತಲೂ ಬೊಟ್ಟು ಮಾಡುವುದು ನಡೆದೇ ಇದೆ. ಅಂದರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಸ್ನಾತಕ ಮತ್ತು ಪದವಿಪೂರ್ವ ಉಪನ್ಯಾಸಕರು ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ಟೀಕಿಸುವುದು, ಕಾಲೇಜು ಉಪನ್ಯಾಸಕರು ಪ್ರೌಢಶಾಲೆಗಳಲ್ಲಿ ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ದೂರುವುದು, ಅವರು ಪ್ರಾಥಮಿಕ ಶಾಲೆಗಳ ಅಧ್ಯಾಪಕರು ಸರಿಯಾದ ರೀತಿಯಲ್ಲಿ ಪಾಠ ಮಾಡಿಲ್ಲ ಎಂದು ತೆಗಳುವುದು ಸರ್ವೇಸಾಮಾನ್ಯವಾಗಿದೆ. ಸಮಸ್ಯೆಗಳ ವಿಚಾರ ಬಂದಾಗ ಒಬ್ಬರು ಇನ್ನೊಬ್ಬರತ್ತ ಕೈತೋರಿಸುವುದು ಹೊಸದೇನಲ್ಲ. ಆದರೆ ಇದು ಅಷ್ಟಕ್ಕೇ ಬಿಟ್ಟುಬಿಡಬಹುದಾದ ವಿಚಾರ ಅಲ್ಲ. ಏಕೆಂದರೆ ಇದು ಶಿಕ್ಷಣಕ್ಕೆ ಹಾಗೂ ಸಮಾಜದ ಒಟ್ಟಾರೆ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆ.

ಕನ್ನಡದ ಕಲಿಕೆ ಈ ಬಗೆಯ ಕಳವಳಕಾರಿ ಪರಿಸ್ಥಿತಿಯನ್ನು ತಲುಪುವುದಕ್ಕೆ ಯಾರು ಕಾರಣ ಎಂಬ ಚರ್ಚೆಗಿಂತಲೂ, ವಿದ್ಯಾರ್ಥಿಗಳಿಗೆ ಕನ್ನಡವನ್ನು ಸಮರ್ಥವಾಗಿ ಕಲಿಸುವ ಜವಾಬ್ದಾರಿ ಶಿಕ್ಷಣದ ಎಲ್ಲ ಹಂತದಲ್ಲೂ ಇದೆ ಎಂಬುದನ್ನು ಒಪ್ಪಿಕೊಳ್ಳುವುದು ಮುಖ್ಯ. ಭಾಷೆಯನ್ನು ಕಲಿಸುವುದು ಪ್ರಾಥಮಿಕ ಶಾಲಾ ಶಿಕ್ಷಕರ ಜವಾಬ್ದಾರಿಯೆಂದು ಹೇಳಿ ಉಳಿದವರು ಕೈತೊಳೆದುಕೊಳ್ಳುವುದು ಸರಿಯಲ್ಲ. ಆದರೂ ಬುನಾದಿ ಸರಿ ಇರಬೇಕು ಎಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ಆರಂಭದಲ್ಲೇ ಸರಿಯಾದುದನ್ನು ಹೇಳಿಕೊಡದೇ ಹೋದರೆ ತಪ್ಪಾಗಿರುವುದೇ ಭದ್ರವಾಗುತ್ತದೆ ಮತ್ತು ಅದೇ ಮುಂದುವರಿಯುತ್ತದೆ. ಕಾಲೇಜು ಹಂತದಲ್ಲಿ ಬರೆವಣಿಗೆಯಲ್ಲಿ ಕಾಗುಣಿತ ತಪ್ಪು, ವಾಕ್ಯರಚನೆಯ ದೋಷಗಳನ್ನು ಮಾಡುವ ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ತಾವು ಬರೆಯುತ್ತಿರುವುದು ತಪ್ಪು ಎಂಬುದನ್ನು ಮನದಟ್ಟು ಮಾಡುವುದೇ ದೊಡ್ಡ ಸಾಹಸವೆನಿಸಿದೆ. ‘ನಮಗೆ ಕಲಿಸಿದ್ದೇ ಹೀಗೆ ಸಾರ್’ ಎಂದು ಎಷ್ಟೋ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿದ್ದೇನೆ. ಈ ಆರಂಭದ ಕಲಿಕೆಯ ದೋಷ ಎಷ್ಟು ತೀವ್ರವೆಂದರೆ ಈ ವಿದ್ಯಾರ್ಥಿಗಳಿಗೆ ಸರಿಯಾದ ಒಂದು ಪಠ್ಯವನ್ನು ನಕಲು ಮಾಡಲೂ ಬರುವುದಿಲ್ಲ. ಕಣ್ಣೆದುರೇ ಇರುವ ಪಠ್ಯವೊಂದನ್ನು ನೋಡಿ ಟಿಪ್ಪಣಿ ಮಾಡಲು ಹೇಳಿದರೂ ಅದರಲ್ಲಿ ಹತ್ತಾರು ತಪ್ಪುಗಳು ನುಸುಳಿರುತ್ತವೆ. ಇದು ಪ್ರಾಥಮಿಕ ಶಾಲೆಯಲ್ಲೇ ಆರಂಭವಾದ ಸಮಸ್ಯೆ ಎಂಬುದು ನಿಸ್ಸಂಶಯ. ಎಂದರೆ, ಪ್ರಾಥಮಿಕ ಶಾಲಾ ಹಂತದಲ್ಲೇ ಉತ್ತಮ ಕನ್ನಡವನ್ನು ಕಲಿಸುವ ಸಮರ್ಥ ಶಿಕ್ಷಕರ ಕೊರತೆ ನಮ್ಮಲ್ಲಿ ಇದೆ ಎಂದಂತಾಯಿತು. ಇದು ಕಡೆಗಣಿಸಲಾಗದ ಒಂದು ಗಂಭೀರ ಸವಾಲೇ ಹೌದು. 

ಇನ್ನೊಂದು ಸೂಕ್ಷ್ಮವಾದ ವಿಚಾರವೆಂದರೆ, ಪ್ರಾಥಮಿಕ ಶಾಲೆಯನ್ನೂ ಒಳಗೊಂಡಂತೆ ಶಿಕ್ಷಣದ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಸಮಸ್ಯೆ ಇದೆ. ಎಷ್ಟೋ ಮಕ್ಕಳು ನಿಯಮಿತವಾಗಿ ತರಗತಿಗಳಿಗೆ ಹೋಗುವುದೇ ಇಲ್ಲ. ಶಾಲೆಗೆ ದಾಖಲಾಗುವುದು, ಪರೀಕ್ಷೆ ಬರೆಯುವುದು, ಮುಂದಿನ ತರಗತಿಗೆ ಪ್ರವೇಶ ಪಡೆಯುವುದು- ಇಷ್ಟಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುವ ಸಾವಿರಾರು ಮಕ್ಕಳು (ಮತ್ತು ಅವರ ಪೋಷಕರು) ನಮ್ಮಲ್ಲಿದ್ದಾರೆ. ಇದಕ್ಕೆ ಬಡತನ, ಮಕ್ಕಳೂ ಹೆತ್ತವರೊಂದಿಗೆ ದುಡಿಮೆಯಲ್ಲಿ ಕೈಜೋಡಿಸುವ ಅನಿವಾರ್ಯತೆ ಇತ್ಯಾದಿ ಮಾನವೀಯ ಮುಖವೂ ಇದೆ. ಆದರೆ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಲ್ಲೇ ನಿಯಮಿತವಾಗಿ ತರಗತಿಗೆ ಹಾಜರಾಗದೆ ಇದ್ದಾಗ ಅವರಿಗೆ ಉತ್ತಮ ಭಾಷಾ ಕೌಶಲಗಳ ಪಾಠ ದೊರೆಯುವುದು ಕಷ್ಟವೇ. ಇದು ಮುಂದಿನ ಹಂತಗಳಲ್ಲಾದರೂ ಸರಿ ಹೋಗದೆ ಇದ್ದಾಗ ಅವರು ಮುಖ್ಯವಾಹಿನಿಯೊಂದಿಗೆ ಸೇರುವುದೇ ಇಲ್ಲ.

ಭಾಷಾ ಬಳಕೆಯಲ್ಲಿ ಪ್ರಾದೇಶಿಕ ವಿಭಿನ್ನತೆಯ ಇನ್ನೊಂದು ವಿಷಯವನ್ನೂ ಇಲ್ಲಿ ಪ್ರಸ್ತಾಪಿಸಬಹುದು. ಕರ್ನಾಟಕದಲ್ಲಿ ಹಲವು ಕನ್ನಡಗಳಿವೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಾಷಾ ಬಳಕೆ ವ್ಯತ್ಯಾಸವಾಗುತ್ತದೆ, ಆದರೆ ಪಠ್ಯಪುಸ್ತಕ ಒಂದೇ ಇರುತ್ತದೆ. ತಾವು ರೂಢಿಯಲ್ಲಿ ಆಡುವ ಮಾತಿಗೂ, ಪಠ್ಯಪುಸ್ತಕದ ಭಾಷೆಗೂ ವ್ಯತ್ಯಾಸವಿದೆ ಎಂಬುದನ್ನು ಅನೇಕ ವಿದ್ಯಾರ್ಥಿಗಳು ಗಮನಿಸುವುದಿಲ್ಲ. ಭಾಷಾ ವೈವಿಧ್ಯತೆಗಳನ್ನು ಗೌರವಿಸುವುದು, ಒಂದು ಪ್ರಮಾಣಿತ ಭಾಷೆಯನ್ನು ಅಭ್ಯಾಸ ಮಾಡುವುದು ಎರಡೂ ಪ್ರಮುಖ ಸಂಗತಿಗಳೇ. ಇವೆರಡನ್ನೂ ಸಮತೋಲನದಿಂದ ಒಯ್ಯುವುದು ಒಂದು ದೊಡ್ಡ ಸವಾಲೇ. ಪ್ರಾದೇಶಿಕ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವಷ್ಟೇ ಕುಮಾರವ್ಯಾಸ, ರಾಘವಾಂಕರನ್ನೂ ನಮ್ಮ ವಿದ್ಯಾರ್ಥಿಗಳು ಓದಿ ಆಸ್ವಾದಿಸುವುದು ತುಂಬ ಮುಖ್ಯ ಅಲ್ಲವೇ?

ಇಂಜಿನಿಯರಿಂಗ್‍ನಂತಹ ಕೋರ್ಸುಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಅಭ್ಯಾಸ ಮಾಡುವುದು ಕಡ್ಡಾಯವಾಗಿದ್ದರೂ, ಬಹುತೇಕ ಕಡೆ ಅದೊಂದು ಕಾಟಾಚಾರವಾಗಿ ಉಳಿದಿರುವುದು ಸುಳ್ಳಲ್ಲ. ಅಲ್ಲಿ ಕನ್ನಡ ಕಲಿಕೆಗೆ ಎಷ್ಟು ಪೂರಕವಾದ ವಾತಾವರಣ ಇದೆ, ಪ್ರಾಧಾನ್ಯತೆ ಇದೆ, ಪರೀಕ್ಷೆಗಳನ್ನು ಎಷ್ಟು ಆಸ್ಥೆಯಿಂದ ಮಾಡುತ್ತಾರೆ ಎಂಬುದೆಲ್ಲವೂ ವಿದ್ಯಾರ್ಥಿಗಳ ಮನಸ್ಥಿತಿಯನ್ನು ನಿರ್ಧರಿಸುತ್ತದೆ.

ಉಳಿದಂತೆ, ಅಂಕಗಳಿಕೆಯ ಓಟಕ್ಕಷ್ಟೇ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಖಾಸಗಿ ಕಾಲೇಜುಗಳೆಂಬ ಕಾರ್ಖಾನೆಗಳಲ್ಲಿ ಭಾಷೆಯ ಬಗ್ಗೆ ತೀವ್ರ ಅನಾದರ ಇದೆ. ಅಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಇತ್ಯಾದಿ ವಿಜ್ಞಾನದ ವಿಷಯಗಳಿಗಷ್ಟೇ ಮನ್ನಣೆ; ಭಾಷೆಯ ಬಗ್ಗೆ ಉಪೇಕ್ಷೆ. ಅವರಿಗೆ ಭಾಷಾ ಶಿಕ್ಷಕರು ‘ಬಿಟ್ಟ ಸ್ಥಳ ತುಂಬುವುದಕ್ಕಷ್ಟೇ’ ಬೇಕು. ಆಡಳಿತ ಮಂಡಳಿಗಳ ಈ ಮನಸ್ಥಿತಿ ಸಹಜವಾಗಿಯೇ ವಿದ್ಯಾರ್ಥಿಗಳ ಮನಸ್ಥಿತಿಯನ್ನೂ ನಿರ್ಧರಿಸುತ್ತದೆ. ತಮಗೆ ‘ಕೋರ್ ಸಬ್ಜೆಕ್ಟ್’ಗಳು ಮಾತ್ರ ಮುಖ್ಯ, ಭಾಷಾ ವಿಷಯಗಳಲ್ಲಿ ತೇರ್ಗಡೆಯಾದರೆ ಸಾಕು ಎಂಬ ಧೋರಣೆಯನ್ನು ಅವರೂ ಬೆಳೆಸಿಕೊಂಡರೆ ಭಾಷಾ ವಿಷಯಗಳ ಅಧ್ಯಾಪಕರ ಗತಿ ದೇವರಿಗೇ ಪ್ರೀತಿ.

ಮಾಧ್ಯಮವಾಗಿ ಕನ್ನಡ

ಕನ್ನಡ ಮಾಧ್ಯಮ ಶಿಕ್ಷಣದ ವಿಷಯವೂ ಮೇಲ್ನೋಟಕ್ಕೆ ಕಾಣುವಷ್ಟು ಸರಳ ಅಲ್ಲ. ಇದಕ್ಕೆ ಕಾನೂನು ಹಾಗೂ ಮನಸ್ಥಿತಿ ಎಂಬ ಎರಡು ಮುಖಗಳಿವೆ. ಕನ್ನಡ ಮಾಧ್ಯಮಕ್ಕೆ ಸಂಬಂಧಿಸಿದ ಕಾನೂನಿನ ಹೋರಾಟಕ್ಕೆ ದಶಕಗಳ ಇತಿಹಾಸ ಇದೆ. 1980ರ ದಶಕದ ಗೋಕಾಕ ವರದಿಯ ಬಳಿಕ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳು ನಡೆದಿವೆ. ಇವುಗಳ ಫಲವೆಂಬಂತೆ, 4ನೇ ತರಗತಿಯವರೆಗೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿ 1994ರಲ್ಲಿ ರಾಜ್ಯ ಸರ್ಕಾರ ಆದೇಶ ನೀಡಿತು. ಆದರೆ ಇದರ ವಿರುದ್ಧ ಖಾಸಗಿ ಶಾಲೆಗಳು ಸರ್ವೋಚ್ಛ ನ್ಯಾಯಾಲಯದ ಮರೆ ಹೊಕ್ಕವು. ಈ ನಡುವೆ 2006ರಲ್ಲಿ, ಎಲ್ಲ ಕನ್ನಡ ಮಾಧ್ಯಮ ಮತ್ತು ಭಾಷಾ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕೆಂದು ರಾಜ್ಯ ಸರ್ಕಾರ ಇನ್ನೊಂದು ಆದೇಶ ಹೊರಡಿಸಿತು. 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ‘ಭಾಷಾ ಮಾಧ್ಯಮದ ಆಯ್ಕೆ ಪೋಷಕರ ವಿವೇಚನೆಗೆ ಬಿಟ್ಟದ್ದು, ಸರ್ಕಾರ ಬಲವಂತ ಮಾಡುವಂತಿಲ್ಲ’ ಎನ್ನುವ ಮೂಲಕ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ ಎಂಬ ಒತ್ತಾಯಕ್ಕೆ ಬೆಂಬಲವಾಗಿ ನಿಂತಿತು.

ಅಲ್ಲಿಗೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನಾದರೂ ನೀಡಬೇಕೆಂಬ ಚಿಂತನೆಗೆ ಬಲವಾದ ಹಿನ್ನಡೆ ಉಂಟಾಯಿತು. ವಾಸ್ತವವಾಗಿ ಕನ್ನಡ ಮಾಧ್ಯಮದ ವಿಷಯ ಕೇವಲ ಕಾನೂನಿಗೆ ಸಂಬಂಧಿಸಿದ್ದಲ್ಲ. ಅದು ಮನಸ್ಥಿತಿಗೆ ಸಂಬಂಧಿಸಿದ್ದು. ಯಾವ ಮಾಧ್ಯಮವನ್ನೂ ಬಲವಂತವಾಗಿ ಹೇರುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿರುವಾಗ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ಅವಕಾಶವೂ ಹೆತ್ತವರಿಗಿದೆ ಎಂದಾಯಿತು. ಆ ಅವಕಾಶವನ್ನು ಉಪಯೋಗ ಮಾಡಿಕೊಳ್ಳುವ ಮನಸ್ಥಿತಿ ಎಷ್ಟು ಮಂದಿಗಿದೆ? 

ಯುನೇಸ್ಕೋ ಒಳಗೊಂಡಂತೆ ಎಲ್ಲ ಸ್ತರದ ಸಂಸ್ಥೆಗಳು, ಶಿಕ್ಷಣ ತಜ್ಞರು ಮಾತೃಭಾಷೆಯ ಶಿಕ್ಷಣವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. “ಮಾನಸಿಕ ಬೆಳವಣಿಗೆ ಹಾಗೂ ಚಿಂತನೆಗಳನ್ನು ಬಲಪಡಿಸುವುದಕ್ಕೆ ತಾಯ್ನುಡಿ ಸಹಕಾರಿ. ಇದು ಪರಿಕಲ್ಪನಾತ್ಮಕ ಯೋಚನೆಯನ್ನು ಬೆಳೆಸುತ್ತದೆ” ಎಂದು ಯುನೇಸ್ಕೋ ಹೇಳಿದೆ. ಪೋಷಕರಿಗೆ ಇರುವ ಮೂರು ಬಗೆಯ ತಪ್ಪು ಕಲ್ಪನೆಗಳ ಬಗ್ಗೆ ಅದು ಹೇಳುತ್ತದೆ:

1. ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಅತ್ಯುತ್ತಮ ರೀತಿ ಎಂದರೆ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸುವುದು.

2. ಇಂಗ್ಲಿಷ್ ಕಲಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರಂಭಿಸಬೇಕು.

3. ಇಂಗ್ಲಿಷ್ ಕಲಿಕೆಗೆ ಮಾತೃಭಾಷೆ ಅಡ್ಡಿಯಾಗುತ್ತದೆ.

ಈ ತಪ್ಪುಕಲ್ಪನೆಯೇ ನಮ್ಮ ಜನರನ್ನು ಇಂಗ್ಲಿಷ್ ಮಾಧ್ಯಮದ ಕುರಿತು ಅತಿಯಾದ ವ್ಯಾಮೋಹ ಹೊಂದುವಂತೆ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯ ಇಲ್ಲ, ಉತ್ತಮ ಉದ್ಯೋಗಾವಕಾಶಗಳು ದೊರೆಯುವುದಿಲ್ಲ ಎಂಬ ಯೋಚನೆ ಸಮಾಜದ ಬಹುಪಾಲು ಮಂದಿಯಲ್ಲಿ ಭದ್ರವಾಗಿ ಬೇರೂರಿದೆ. ಆದರೆ ಇದಕ್ಕೆ ಯಾವುದೇ ಆಧಾರ ಇಲ್ಲ ಎಂಬುದನ್ನು ಇನ್ಫೋಸಿಸ್ ಅನ್ನು ಹುಟ್ಟುಹಾಕಿದ ನಾರಾಯಣ ಮೂರ್ತಿ, ಭಾರತರತ್ನ ಸಿ. ಎನ್. ಆರ್. ರಾವ್, ಉದ್ಯಮಿ ಕ್ಯಾ| ಗೋಪಿನಾಥ್ ಮೊದಲಾದ ಗಣ್ಯಾತಿಗಣ್ಯರು ಸಾಬೀತುಪಡಿಸಿದ್ದಾರೆ. ಆದರೆ ಜನರು ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಇದರ ಬೀಜ ಭಾರತಕ್ಕೆ ಇಂಗ್ಲಿಷ್ ಶಿಕ್ಷಣವನ್ನು ತಂದ ಮೆಕಾಲೆಯ ಚಿಂತನೆಯಲ್ಲೇ ಇದೆ. ಇದನ್ನು ಅಳಿಸಿಹಾಕುವುದೋ ಪರಿವರ್ತನೆ ತರುವುದೋ ಅಷ್ಟು ಸುಲಭದ ಕೆಲಸ ಅಲ್ಲ.

ಇಂಗ್ಲಿಷ್ ಮಾತೃಭಾಷೆಯಲ್ಲದ ಯಾವ ದೇಶದಲ್ಲೂ ಶಿಕ್ಷಣದ ಮಾಧ್ಯಮ ಇಂಗ್ಲಿಷ್ ಅಲ್ಲ ಎಂಬುದನ್ನು ನಾವು ಗಮನಿಸಬೇಕು. ಅಲ್ಲಿ ಇಂಗ್ಲಿಷ್ ಶ್ರೇಷ್ಠ, ಅದರಿಂದಲೇ ಜನರ ಉದ್ಧಾರ ಎಂಬ ಮನಸ್ಥಿತಿಯೇ ಇಲ್ಲ. “ಇಂಗ್ಲಿಷ್ ಮಾಧ್ಯಮದ ಶಿಕ್ಷಣವು ಗ್ರಹಿಕೆಯ ಅಭಿವೃದ್ಧಿಯನ್ನು, ವಿಚಾರದ ಖಚಿತತೆಯನ್ನು, ಅಭಿಪ್ರಾಯಗಳ ಸ್ಪಷ್ಟತೆಯನ್ನು ಕುಂಠಿತಗೊಳಿಸುತ್ತದೆ. ವಿಚಾರಗಳ ಶ್ರೀಮಂತ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ, ತಮ್ಮನ್ನು ಪರಿಣಾಮಕಾರಿಯಾಗಿ, ಸ್ಪಷ್ಟವಾಗಿ ಮತ್ತು ಸರಳವಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ಮಾತೃಭಾಷೆಯೇ ಸಹಕಾರಿ” ಎಂದು ಮಹಾತ್ಮ ಗಾಂಧೀಜಿ ಬಹಳ ಹಿಂದೆಯೇ ಹೇಳಿದ್ದಾರೆ.

ಅನ್ನದ ಭಾಷೆಯಾಗಲಿ ಕನ್ನಡ

ಕನ್ನಡ ಮಾಧ್ಯಮದಲ್ಲಿ ಕಲಿತವರೂ ಒಳ್ಳೆಯ ಉದ್ಯೋಗ ಪಡೆದು, ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬಹುದು ಎಂಬುದು ಸಿದ್ಧವಾಗುವವರೆಗೆ ಇಂಗ್ಲಿಷ್ ಮೇಲಿನ ವ್ಯಾಮೋಹ ಕರಗದು, ಕನ್ನಡದ ಮೇಲಿನ ಅಭಿಮಾನ ಗಟ್ಟಿಯಾಗದು. ಕನ್ನಡ ಅನ್ನದ ಭಾಷೆಯಾಗುವುದು ಇಂದಿನ ಅನಿವಾರ್ಯತೆ. ಹಾಗೆಂದು ಇದು ಒಂದೆರಡು ದಿನಗಳಲ್ಲಿ ಆಗುವ ಕೆಲಸ ಅಲ್ಲ.

ಪ್ರಾಥಮಿಕ ಶಾಲೆಯಿಂದಲೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವ ಕೆಲಸ ಆಗಬೇಕು. ಅದನ್ನು ಅಧ್ಯಾಪಕರು, ಹೆತ್ತವರು ಮನಃಪೂರ್ವಕವಾಗಿ ಮಾಡಬೇಕು. ಮನೆಯಲ್ಲೂ, ಸಂಬಂಧಿಕರ ನಡುವೆಯೂ ಮಕ್ಕಳೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುವ, ಮಕ್ಕಳೂ ಹಾಗೆಯೇ ವರ್ತಿಸುವುದು ಪ್ರತಿಷ್ಠೆಯ ವಿಚಾರ ಎಂದು ತಿಳಿಯುವ ಪೋಷಕರಿರುವವರೆಗೆ ಈ ಬದಲಾವಣೆ ಆರಂಭವಾಗುವುದೇ ಕಷ್ಟ. ಕಲಿಕೆಯ ಪ್ರತೀ ಹಂತದಲ್ಲೂ ಕನ್ನಡ ಭಾಷೆಯನ್ನು ಉತ್ತಮಪಡಿಸುವ, ಅದರ ಕುರಿತು ಪ್ರೀತಿಯನ್ನು ಬೆಳೆಸುವ ಜವಾಬ್ದಾರಿಯನ್ನು ಎಲ್ಲ ಹಂತದ ಅಧ್ಯಾಪಕರೂ ವಹಿಸಿಕೊಳ್ಳಬೇಕು. ಕನ್ನಡದ ಬಗ್ಗೆ ಕಾಳಜಿ ಮಾಡಬೇಕಾದವರು, ಮಕ್ಕಳಿಗೆ ಕನ್ನಡ ಕಲಿಸಬೇಕಾದವರು ಕನ್ನಡ ಅಧ್ಯಾಪಕರು ಮಾತ್ರ ಎಂಬ ಧೋರಣೆಯೂ ತೊಲಗಬೇಕು. ಶಾಲಾ ಕಾಲೇಜುಗಳಲ್ಲಿ ಭಾಷಾ ಶಿಕ್ಷಕರಿಗೆ ಉಳಿದ ಶಿಕ್ಷಕರಷ್ಟೇ ಪ್ರಾಧಾನ್ಯತೆ ದೊರೆತಾಗ ವಿದ್ಯಾರ್ಥಿಗಳಲ್ಲೂ ಭಾಷೆ ಪ್ರಮುಖವಾದದ್ದು ಎಂಬ ಮನಸ್ಸು ದೃಢವಾಗುತ್ತದೆ.

ಕನ್ನಡವನ್ನು ಅನ್ನದ ಭಾಷೆಯಾಗಿಸುವಲ್ಲಿ ಸರೋಜಿನಿ ಮಹಿಷಿ ವರದಿಯ ಪರಿಣಾಮಕಾರಿ ಜಾರಿಗೆ ಪ್ರಮುಖ ಪಾತ್ರವಿದೆ. ಸರೋಜಿನಿ ಮಹಿಷಿ ವರದಿಯು ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ. ಉದಾಹರಣೆಗೆ, ‘ಎ’ ಗುಂಪಿನ ಉದ್ಯೋಗಗಳಲ್ಲಿ ಶೇ. 65ನ್ನೂ ‘ಬಿ’ ಗುಂಪಿನ ಹುದ್ದೆಗಳಲ್ಲಿ ಶೇ. 80ನ್ನೂ ಸ್ಥಳೀಯರಿಗೆ ಮೀಸಲಿಡಬೇಕು, ‘ಸಿ’ ಗುಂಪಿನ ಹುದ್ದೆಗಳಲ್ಲಿ ಶೇ. 100 ನ್ನೂ ಸ್ಥಳೀಯರಿಗೇ ನೀಡಬೇಕು ಎಂಬ ಶಿಫಾರಸು ಸಮರ್ಪಕವಾಗಿ ಜಾರಿಗೆ ಬಂದಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಉದ್ಯೋಗಾವಕಾಶ ಹೆಚ್ಚಾಗಬಹುದು. ಆದರೆ ನಾವು ಕೇವಲ ಉದ್ಯೋಗಾವಕಾಶಗಳಿಗಾಗಿ ಹಕ್ಕುಮಂಡಿಸಿದರೆ ಸಾಲದು, ಆಧುನಿಕ ಕಾಲ ಬಯಸುವ ಜ್ಞಾನವನ್ನೂ ಕೌಶಲವನ್ನೂ ರೂಢಿಸಿಕೊಳ್ಳುವುದು ಅನಿವಾರ್ಯ. ಕನ್ನಡ ಮಾಧ್ಯಮವನ್ನು ಪ್ರತಿಪಾದಿಸುತ್ತಾ ಹೆಚ್ಚು ಉದ್ಯೋಗಾವಕಾಶಗಳನ್ನು ಅಪೇಕ್ಷಿಸುತ್ತಾ ಆಧುನಿಕ ಕಾಲ ಬಯಸುವ ಜ್ಞಾನ-ಕೌಶಲಗಳನ್ನು ನಮ್ಮ ಮಕ್ಕಳು ರೂಢಿಸಿಕೊಳ್ಳದೇ ಹೋದರೆ ನಮ್ಮ ಪ್ರತಿಪಾದನೆಗಳಲ್ಲಿ ಯಾವ ತಿರುಳೂ ಉಳಿಯುವುದಿಲ್ಲ.

ಕನ್ನಡ ಭಾಷೆಯ ಅಳಿವು-ಉಳಿವು ಕೇವಲ ಕಾನೂನಿನ ಕೆಲಸವೂ ಅಲ್ಲ, ಸರ್ಕಾರದ ಕೆಲಸವೂ ಅಲ್ಲ. ಅದು ಎಲ್ಲರೂ ಸೇರಿ ಮಾಡಬೇಕಾದ ಕೆಲಸ. ಧೋರಣೆಯಲ್ಲಿ ಆಗಬೇಕಾದ ಬದಲಾವಣೆಯ ವಿಚಾರ. ಎಲ್ಲವನ್ನೂ ಸರ್ಕಾರ ಮತ್ತು ಕಾನೂನು ಮಾಡುತ್ತದೆಂದು ನಿರೀಕ್ಷಿಸುತ್ತಾ ಕೂರಲಾಗದು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಕಟಿಬದ್ಧವಾಗಿರುವ ಸುಳ್ಯದ ‘ಸ್ನೇಹ’ ಶಿಕ್ಷಣ ಸಂಸ್ಥೆಯಂತಹ ಪ್ರಯತ್ನಗಳು ನಮಗೆ ಸ್ಫೂರ್ತಿಯಾಗಬೇಕು.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ನವೆಂಬರ್ 1, 2020

ಮರೆಯಲಾಗದ ಮಹಾನುಭಾವ ಲಾಲ್ ಬಹಾದುರ್ ಶಾಸ್ತ್ರೀಜಿ

 'ಕೋಟೇಶ್ವರ ಮೈತ್ರಿ' ತ್ರೈಮಾಸಿಕದ ಜುಲೈ-ಸೆಪ್ಟೆಂಬರ್ 2020ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಭ್ರಷ್ಟಾಚಾರ, ಸ್ವಜಾತಿಪ್ರೇಮ, ವಶೀಲಿಬಾಜಿ, ಸ್ವಾರ್ಥಪರತೆಗಳಿಂದಲೇ ಕೂಡಿರುವ ಧರಣಿಮಂಡಲ ಮಧ್ಯದಲ್ಲಿ ನಿಂತು ಲಾಲ್ ಬಹಾದುರ್ ಶಾಸ್ತ್ರಿಯವರಂಥ ರಾಜಕಾರಣಿಗಳೂ ನಮ್ಮ ದೇಶದಲ್ಲಿ ಇದ್ದರೇ ಎಂದು ಪ್ರಶ್ನಿಸಿಕೊಂಡರೆ ವಿಸ್ಮಯವೆನಿಸುತ್ತದೆ. ಪಾರದರ್ಶಕ, ಸರಳ, ಪ್ರಾಮಾಣಿಕ ಬದುಕಿನ ಪ್ರತಿರೂಪವಾಗಿದ್ದ ಶಾಸ್ತ್ರಿಯವರು ನಮ್ಮ ದೇಶದ ಪ್ರಧಾನಿ ಆಗಿದ್ದರು ಎಂಬುದೇ ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ. 

ಪ್ರಧಾನಿಯಾದ ಬಳಿಕವೂ ಶಾಸ್ತ್ರಿಯವರ ಬಳಿ ಸ್ವಂತದ ಕಾರು ಇರಲಿಲ್ಲವಂತೆ. ತಮ್ಮ ಕುಟುಂಬದ ಒತ್ತಾಯದ ಮೇರೆಗೆ ರೂ. 12,000 ಬೆಲೆಯ ಫಿಯಟ್ ಕಾರೊಂದನ್ನು ಕೊಳ್ಳಲು ಅವರು ನಿರ್ಧರಿಸಿದರು. ಆದರೆ ಅವರ ಬಳಿ ರೂ. 5,000 ಕಡಿಮೆಯಿತ್ತು. ಅದಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದರು. ತಕ್ಷಣ ಸಾಲವೂ ಮಂಜೂರಾಯಿತು. ಶಾಸ್ತ್ರಿಯವರು ಅಷ್ಟಕ್ಕೆ ಮುಗಿಸದೆ ಬ್ಯಾಂಕ್ ಮ್ಯಾನೇಜರನ್ನು ಕರೆಸಿ 'ಜನಸಾಮಾನ್ಯರ ಸಾಲದ ಅರ್ಜಿಯನ್ನೂ ಇಷ್ಟು ಚುರುಕಾಗಿ ವಿಲೇವಾರಿ ಮಾಡುತ್ತೀರಾ?' ಎಂದು ವಿಚಾರಿಸಿಕೊಂಡರಂತೆ.

ಇನ್ನೊಂದು ಸಂದರ್ಭದಲ್ಲಿ, ಶಾಸ್ತ್ರಿಯವರ ಮಗನಿಗೆ ಉದ್ಯೋಗದಲ್ಲಿ ಭಡ್ತಿ ದೊರೆಯಿತು. ಅದು ಅರ್ಹವಾಗಿ ಬಂದದ್ದಲ್ಲ ಎಂದು ಅವರಿಗೆ ತೋಚಿತಂತೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಮಗನ ಭಡ್ತಿಯನ್ನು ವಾಪಸ್ ಪಡೆಸಿಕೊಂಡರಂತೆ.

ಇದಕ್ಕೂ ಹಿಂದೆ ಶಾಸ್ತ್ರಿಯವರು ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ ಜೈಲುವಾಸ ಅನುಭವಿಸುತ್ತಿದ್ದಾಗ, ಅವರ ಪತ್ನಿ ಅವರನ್ನೊಮ್ಮೆ ಭೇಟಿಯಾದರಂತೆ. ತಮಗೆ ಬರುತ್ತಿದ್ದ ರೂ. ೫೦ ಪಿಂಚಣಿಯಲ್ಲಿ ರೂ. 10ನ್ನು ಉಳಿಸುತ್ತಿರುವುದಾಗಿ ಪತ್ನಿ ತಿಳಿಸಿದರಂತೆ. ಓಹೋ, ಅವಶ್ಯಕತೆಗಿಂತ ಹೆಚ್ಚು ಆದಾಯ ಇದೆ ಎಂದ ಶಾಸ್ತ್ರಿಯವರು ಪಿಂಚಣಿ ಕೊಡುತ್ತಿದ್ದ ಲೋಕ ಸೇವಕ ಮಂಡಲದ ಕಾರ್ಯಕರ್ತರಿಗೆ ಮುಂದಿನ ತಿಂಗಳಿನಿಂದ ತಮಗೆ ರೂ. 40 ಮಾತ್ರ ಪಿಂಚಣಿ ಕೊಟ್ಟರೆ ಸಾಕೆಂದು ಕೇಳಿಕೊಂಡರಂತೆ.

ಜನಸಾಮಾನ್ಯರ ಕಷ್ಟಗಳ ಕಡೆಗೆ ಸಾಕಷ್ಟು ಉದಾರಿಗಳಾಗಿದ್ದ ಶಾಸ್ತ್ರೀಜಿ ತಮ್ಮ ಕುಟುಂಬದ ಬಗ್ಗೆ ನಿರ್ದಯಿಗಳೇ ಆಗಿದ್ದರು. ಅದು ಸಾಮಾಜಿಕ ಬದುಕಿನಲ್ಲಿ ಅವರಿಗಿದ್ದ ಎಚ್ಚರ. ಇದೇ ಕಾರಣಕ್ಕೆ ಅವರು ನಮಗೆ ದೊಡ್ಡ ವಿಸ್ಮಯವಾಗಿ ಕಾಣುವುದು. ಅವಕಾಶ ಸಿಕ್ಕಲ್ಲೆಲ್ಲ ತಮ್ಮ ಕುಟುಂಬದವರನ್ನು, ಬಂಧುಬಾಂಧವರನ್ನು, ಸ್ವಜಾತಿಯವರನ್ನು ಕೂರಿಸಿ ಲಾಭಪಡೆಯುವ ಇಂದಿನ ಅನೇಕ ಭ್ರಷ್ಟ ರಾಜಕಾರಣಿಗಳ ನಡುವೆ ಶಾಸ್ತ್ರೀಜಿಯಂತಹವರು ಇದ್ದರೇ ಎಂದು ಮತ್ತೆಮತ್ತೆ ಕೇಳಿಕೊಳ್ಳಬೇಕೆನಿಸುತ್ತದೆ.

ಆರಂಭಿಕ ಜೀವನ:

ಲಾಲ್ ಬಹಾದುರ್ ಶಾಸ್ತ್ರಿಯವರು ಹುಟ್ಟಿದ್ದು 1904 ಅಕ್ಟೋಬರ್ 2ರಂದು. ಇಂದಿನ ಉತ್ತರ ಪ್ರದೇಶದ ಮುಘಲ್‌ಸರಾಯ್ ಅವರ ಜನ್ಮಸ್ಥಳ. ತಂದೆ ಶಾರದಾಪ್ರಸಾದ್ ಶ್ರೀವಾಸ್ತವ, ತಾಯಿ ರಾಮ್‌ದುಲಾರಿ ದೇವಿ. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರು ತಮ್ಮ ಬಾಲ್ಯಜೀವನ ಹಾಗೂ ವಿದ್ಯಾಭ್ಯಾಸದ ಅವಧಿಯನ್ನು ತಾಯಿಯ ತವರಿನಲ್ಲಿ ಕಳೆಯಬೇಕಾಯಿತು. 

ಕಷ್ಟದ ಬಾಲ್ಯ ಅವರದ್ದಾಗಿತ್ತು. ಆದರೆ ಪರಮ ಸ್ವಾಭಿಮಾನಿಯೂ ಆಗಿದ್ದರು. ಎಳವೆಯಿಂದಲೇ ಎಲ್ಲ ಜಾತಿಪಂಥಗಳೂ ಸಮಾನ ಎಂಬ ದೃಷ್ಟಿಕೋನ ಅವರಿಗಿತ್ತು. ಅದಕ್ಕೇ ತಮ್ಮ ಹೆಸರಿನೊಂದಿಗಿದ್ದ ’ಶ್ರೀವಾಸ್ತವ’ ಎಂಬ ಪದವನ್ನು ತೆಗೆದುಹಾಕಿದರು. 

ವಾರಾಣಸಿಯ ಹರಿಶ್ಚಂದ್ರ ಹೈಸ್ಕೂಲಿನ ಶಿಕ್ಷಕ ನಿಷ್ಕಾಮೇಶ್ವರ ಪ್ರಸಾದ್ ಮಿಶ್ರಾ ಅವರು ಶಾಸ್ತ್ರಿಯವರ ವಿದ್ಯಾಭ್ಯಾಸದ ಕನಸನ್ನು ಪೋಷಿಸಿದವರು. ಅವರದ್ದೇ ಪ್ರೇರಣೆಯಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿಕೊಂಡರು. ಅದಕ್ಕೆ ಅವರ ಮೇಲಿದ್ದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಹಾಗೂ ಆನಿ ಬೆಸೆಂಟರ ಬರೆಹಗಳ ಪ್ರಭಾವವೂ ಕಾರಣ. ಇನ್ನೇನು 10ನೇ ತರಗತಿ ಪೂರೈಸುವುದಕ್ಕೆ ಮೂರು ತಿಂಗಳಿದ್ದಾಗಲೇ ಅದನ್ನು ಅರ್ಧಕ್ಕೆ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಬಿಟ್ಟರು.

ಹೋರಾಟದ ಹಾದಿ:

1921ರಲ್ಲಿ ಗಾಂಧೀಜಿ ಹಾಗೂ ಮದನಮೋಹನ ಮಾಳವೀಯರು ವಾರಾಣಸಿಯಲ್ಲಿ ನಡೆಸಿದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದೇ ಶಾಸ್ತ್ರಿಯವರ ಬದುಕಿಗೆ ತಿರುವು ನೀಡಿತು. ಆಗಿನ್ನೂ 16ರ ಹರೆಯದಲ್ಲಿದ್ದ ಅವರು ಅಸಹಕಾರ ಚಳುವಳಿಗೆ ಸೇರಿಕೊಂಡರು. ಬ್ರಿಟಿಷ್ ಪೊಲೀಸರು ಅವರನ್ನು ಬಂಧಿಸಿ, ಇನ್ನೂ ಪ್ರಾಯಪ್ರಬುದ್ಧರಾಗಿಲ್ಲವಾದ್ದರಿಂದ ಬಿಡುಗಡೆಗೊಳಿಸಿದರು. ಮುಂದೆ ಜೆ. ಬಿ. ಕೃಪಲಾನಿಯವರ ಪ್ರೇರಣೆಯಿಂದ ಕಾಶಿ ವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ 1925ರಲ್ಲಿ ತತ್ತ್ವಶಾಸ್ತ್ರದಲ್ಲಿ ಪದವಿ ಪಡೆದು 'ಶಾಸ್ತ್ರಿ' (ವಿದ್ವಾಂಸ) ಎನಿಸಿಕೊಂಡರು.

ಲಾಲಾ ಲಜಪತರಾಯರು ಸ್ಥಾಪಿಸಿದ್ದ ಲೋಕ ಸೇವಕ ಮಂಡಲದ ಸಕ್ರಿಯ ಸದಸ್ಯರಾಗಿ ಶಾಸ್ತ್ರಿಯವರು ಹರಿಜನರ ಉದ್ಧಾರಕ್ಕೆ ಅಪಾರವಾಗಿ ಶ್ರಮಿಸಿದರು. 1928ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಪೂರ್ಣಾವಧಿ ಕಾರ್ಯಕರ್ತರಾಗಿ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡರು. ಎರಡೂವರೆವರ್ಷ ಜೈಲುವಾಸ ಅನುಭವಿಸಿದರು. ಅನೇಕ ಆಯಕಟ್ಟಿನ ಜವಾಬ್ದಾರಿಗಳನ್ನು ನಿರ್ವಹಿಸಿದರು. ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ 1940ರಲ್ಲಿ ಮತ್ತೆ ಒಂದು ವರ್ಷದ ಜೈಲುವಾಸ ಅನುಭವಿಸಿದರು.

ರಾಜಕೀಯ ಬದುಕು:

ಸ್ವಾತಂತ್ರ್ಯಾನಂತರದ ಭಾರತಕ್ಕೆ ಶಾಸ್ತ್ರಿಯವರ ನಾಯಕತ್ವ ಹಾಗೂ ದೂರದೃಷ್ಟಿಯ ಅವಶ್ಯಕತೆ ಇತ್ತು. ಆಗಷ್ಟೇ ದೇಶ ಇಬ್ಭಾಗವಾಗಿತ್ತು. ಅಪಾರ ಸಂಖ್ಯೆಯ ವಲಸಿಗರನ್ನು ನಿಭಾಯಿಸಬೇಕಿತ್ತು. ಇನ್ನೊಂದು ಕಡೆ ಭೀಕರ ಕ್ಷಾಮ ದೇಶವನ್ನು ಅಲುಗಾಡಿಸಿತ್ತು. ಆಹಾರದ ಕೊರತೆಯಿಂದ ಭಾರತ ಕಂಗಾಲಾಗಿತ್ತು. ಇಂತಹ ಸಂಕ್ರಮಣ ಕಾಲದಲ್ಲಿ ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಶಾಸ್ತ್ರೀಜಿ ದೇಶದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಅಪಾರ. 

ನೆಹರೂ ಅವರ ಮಂತ್ರಿಮಂಡಲದಲ್ಲಿ ರೈಲ್ವೇ ಸಚಿವರಾಗಿ (1951-56), ಗೃಹಸಚಿವರಾಗಿ (1961-63), ವಿದೇಶಾಂಗ ವ್ಯವಹಾರಗಳ ಸಚಿವರಾಗಿ (1964) ಅವರು ಸಲ್ಲಿಸಿದ ಸೇವೆ ಚರಿತ್ರೆಯಲ್ಲಿ ದಾಖಲಾಗಿದೆ. ನೆಹರೂ ಅವರ ನಿಧನಾನಂತರ 1964-66ರ ನಡುವೆ ದೇಶದ ಎರಡನೇ ಪ್ರಧಾನಿಯಾಗಿ ಅವರು ತೆಗೆದುಕೊಂಡ ನಿರ್ಧಾರಗಳಂತೂ ಜನತೆ ಹೆಮ್ಮೆಪಡುವಂಥದ್ದು.

ದೇಶದ ಆರ್ಥಿಕತೆ ಎಂದೂ ಮರೆಯದ ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿಗಳ ಹಿಂದೆ ಶಾಸ್ತ್ರೀಜಿಯವರ ದೂರದರ್ಶಿತ್ವ ಇದೆ. ಗುಜರಾತಿನ ಆನಂದ್‌ನಲ್ಲಿ ವರ್ಗೀಸ್ ಕುರಿಯನ್ ಅವರಿಂದ ಸ್ಥಾಪಿತವಾಗಿದ್ದ ಅಮುಲ್ ಅನ್ನು ಅಪಾರವಾಗಿ ಬೆಂಬಲಿಸಿದರು. ಸಹಕಾರಿ ಮಾದರಿಯಲ್ಲಿ ನಡೆಯುತ್ತಿದ್ದ ಅಮುಲ್‌ನ ಯಶಸ್ಸಿನ ಗುಟ್ಟನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ 1964ರ ಅಕ್ಟೋಬರ್ 31ರಂದು ಆನಂದ್‌ನ ಹಳ್ಳಿಯೊಂದರಲ್ಲಿ ಇಡೀದಿನ ಗ್ರಾಮವಾಸ್ತವ್ಯ ಮಾಡಿ, ಅಮುಲ್‌ನ ಮಾದರಿಯನ್ನು ದೇಶದ ಇತರ ಭಾಗಗಳಲ್ಲೂ ಹೇಗೆ ಅನುಷ್ಠಾನಕ್ಕೆ ತರಬಹುದೆಂದು ವಿಚಾರ ವಿಮರ್ಶೆ ನಡೆಸಿದರು. ಅದರ ಪರಿಣಾಮವಾಗಿಯೇ 1965ರಲ್ಲಿ ಅದೇ ಆನಂದ್‌ನಲ್ಲಿ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದರು. ಗ್ರಾಮವಾಸ್ತವ್ಯದ ಪರಿಕಲ್ಪನೆಯನ್ನು ಅರ್ಧಶತಮಾನದ ಹಿಂದೆ ಯೋಚಿಸಿ ಜಾರಿಗೆ ತಂದವರು ಶಾಸ್ತ್ರೀಜಿ. ಇದಕ್ಕೂ ಮುನ್ನ ಅವರು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ಸ್ಥಾಪಿಸಿದ್ದರು.

ದೇಶದ ಆಹಾರದ ಕೊರತೆ ನೀಗಿಸಲು ಹಸಿರುಕ್ರಾಂತಿಯೊಂದೇ ಪರಿಹಾರ ಎಂದು ಚಿಂತಿಸಿದ ಶಾಸ್ತ್ರೀಯವರು ದೆಹಲಿಯ ತಮ್ಮ ಅಧಿಕೃತ ನಿವಾಸದ ಜಮೀನಿನಲ್ಲಿ ತಾವೇ ಉತ್ತು ರೈತರಲ್ಲಿ ಪ್ರೇರಣೆ ತುಂಬಿದರು. ಅಧಿಕ ಇಳುವರಿ ಕೊಡುವ ಗೋಧಿಯನ್ನು ಪರಿಚಯಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶಗಳಲ್ಲಿ ಅಧಿಕ ಆಹಾರೋತ್ಪಾದನೆಯ ಕನಸನ್ನು ನನಸಾಗಿಸಿದರು. ಅದೇ ಹಸಿರುಕ್ರಾಂತಿ ಎನಿಸಿಕೊಂಡಿತು. ದೇಶದ ಎಲ್ಲ ಜನರೂ ವಾರದ ಒಂದು ಹೊತ್ತು ಊಟ ಬಿಡುವಂತೆ ಕರೆನೀಡಿದ ಶಾಸ್ತ್ರೀಜಿ ಅದನ್ನು ತಾವೇ ಮೊದಲು ಆಚರಿಸಿ ತೋರಿಸಿದರು. ಇಂದಿಗೂ ಶಾಸ್ತ್ರಿಯವರ ಸೋಮವಾರ ರಾತ್ರಿಯ ಉಪವಾಸ 'ಶಾಸ್ತ್ರಿ ವ್ರತ' ಎಂದೇ ಜನಜನಿತವಾಗಿದೆ.

ಯುದ್ಧ ಮತ್ತು ರಾಜನೀತಿ:

ನೆಹರೂ ಅವರ ಅಲಿಪ್ತ ನೀತಿಯನ್ನೇ ಶಾಸ್ತ್ರಿಯವರು ಅನುಸರಿಸಿದರೂ ದೇಶಕ್ಕೆ ಕಂಟಕ ಒದಗಿದಾಗ ಎದೆಸೆಟೆಸಿ ನಿಂತರು. 1965ರಲ್ಲಿ ಪಾಕ್ ಅನ್ನು ಸಮರ್ಥವಾಗಿ ಎದುರಿಸಿ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿದರು. ಸೋವಿಯತ್ ಒಕ್ಕೂಟದೊಂದಿಗೆ ಉತ್ತಮ ಸಂಬಂಧ ಹೊಂದುವುದು ಭಾರತಕ್ಕೆ ಅವಶ್ಯಕ ಎಂಬುದನ್ನು ಮನಗಂಡಿದ್ದರು. ಅನೇಕ ದೇಶಗಳಿಗೆ ಭೇಟಿ ನೀಡಿ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದರು.

'ಜೈ ಜವಾನ್ ಜೈ ಕಿಸಾನ್' ಎಂಬ ಅವರ ಘೋಷಣೆ ಸೈನಿಕರಲ್ಲೂ ರೈತರಲ್ಲೂ ಅಪಾರ ಹುರುಪನ್ನು ತುಂಬಿತು. ಇಂದಿಗೂ ಅವರ ಘೋಷಣೆ ತುಂಬ ಜನಪ್ರಿಯ. ದೇಶದ ರಕ್ಷಣೆಗೂ, ಜನರ ಆಹಾರದ ಅವಶ್ಯಕತೆಗೂ ಅವರು ಎಷ್ಟು ಮಹತ್ವ ನೀಡಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ.

ನಿಗೂಢ ಸಾವು:

ತಮ್ಮ ಬದುಕನ್ನೆಲ್ಲ ಶುದ್ಧಚಾರಿತ್ರ್ಯದಿಂದ ಯಾವುದೇ ವಾದವಿವಾದಗಳಿಗೆ ಎಡೆಮಾಡಿಕೊಡದಂತೆ ಕಳೆದ ಶಾಸ್ತ್ರೀಜಿಯವರು ತಮ್ಮ ಸಾವಿನಲ್ಲಿ ಮಾತ್ರ ನಿಗೂಢತೆಯನ್ನು ಉಳಿಸಿಹೋದದ್ದು ಮಾತ್ರ ದೇಶ ಎಂದೂ ಮರೆಯದ ಒಂದು ಘಟನೆ.

ಪಾಕ್‌ನೊಂದಿಗಿನ ಯುದ್ಧವನ್ನು ಅಧಿಕೃತವಾಗಿ ನಿಲ್ಲಿಸುವ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಮಾಡಲು ಅವರು ತಾಷ್ಕೆಂಟ್‌ಗೆ ತೆರಳಿದ್ದರು. ರಷ್ಯಾದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಬಳಿಕ ಪಾಕಿಸ್ತಾನದ ಪ್ರಧಾನಿ ಅಯ್ಯೂಬ್ ಖಾನ್ ಅವರೊಂದಿಗೆ 'ತಾಷ್ಕೆಂಟ್ ಒಪ್ಪಂದ'ಕ್ಕೆ 1966ರ ಜನವರಿ 11ರಂದು ಸಹಿಯನ್ನೂ ಮಾಡಿದರು. ಆದರೆ ಅದಾದ ಕೆಲವೇ ಗಂಟೆಗಳಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದರೆಂಬ ವಾರ್ತೆ ಭಾರತಕ್ಕೆ ಅಪ್ಪಳಿಸಿತು.

ಈ ಘಟನೆ ಮಾತ್ರ ಇಂದಿಗೂ ವಿವಾದದಿಂದ ಹೊರತಾಗಿಲ್ಲ. ಅವರ ಸಾವಿನ ಸುದ್ದಿ ಬಂದ ಬೆನ್ನಲ್ಲೇ ಅವರಿಗೆ ವಿಷಪ್ರಾಶನವಾಗಿತ್ತು ಎಂಬ ಗುಮಾನಿಯೂ ದಟ್ಟವಾಗಿ ಹಬ್ಬಿಕೊಂಡಿತ್ತು. ಅವರಿಗೆ ಹೃದಯದ ಕಾಯಿಲೆ ಮೊದಲೇ ಇತ್ತು, ಅದಕ್ಕೂ ಮೊದಲು ಎರಡು ಬಾರಿ ಹೃದಯಾಘಾತವಾಗಿತ್ತು, ಅವರು ಹೃದಯಾಘಾತದಿಂದಲೇ ಸಾವನ್ನಪಿದರು ಎಂದು ಸಾಕಷ್ಟು ಮಂದಿ ಹೇಳಿದ್ದರೂ, ಸ್ವತಃ ಅವರ ಕುಟುಂಬದ ಮಂದಿಯೇ ಇಂದಿಗೂ ಈ ವಾದವನ್ನು ಒಪ್ಪಿಕೊಂಡಿಲ್ಲ.

ಪ್ರಧಾನಿಯೊಬ್ಬರ ಅನಿರೀಕ್ಷಿತ ಸಾವಿನ ಕುರಿತು ಸಮರ್ಪಕವಾದ ತನಿಖೆಯಾಗಿಲ್ಲ ಎಂಬ ಆರೋಪ ಇಂದಿಗೂ ಉಳಿದುಕೊಂಡಿದೆ. ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿ ಅವರ ಜೊತೆಗೆ ತಾಷ್ಕೆಂಟಿನಲ್ಲಿದ್ದ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಶಾಸ್ತ್ರಿಯವರ ಸಾವಿನ ಕುರಿತು ಅನುಮಾನ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರೂ, ಶಾಸ್ತ್ರಿಯವರ ಪತ್ನಿ ಲಲಿತಾಶಾಸ್ತ್ರಿಯವರ ಸಂದೇಹಕ್ಕೆ ಸೂಕ್ತ ಉತ್ತರ ದೊರೆತಿರಲಿಲ್ಲ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ. ಶಾಸ್ತ್ರಿಯವರ ದೇಹವನ್ನು ಭಾರತಕ್ಕೆ ತಂದಾಗ ಅದು ನೀಲಿಬಣ್ಣಕ್ಕೆ ತಿರುಗಿದ್ದೇಕೆ ಎಂಬ ಲಲಿತಾಶಾಸ್ತ್ರಿಯವರ ಪ್ರಶ್ನೆಗೆ ಯಾರೂ ಸರಿಯಾದ ಉತ್ತರ ನೀಡಿರಲಿಲ್ಲ.

ವಿಚಿತ್ರವೆಂದರೆ ಒಬ್ಬ ಪ್ರಧಾನಿ ನಿಧನರಾದರೂ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆದಿಲ್ಲ!  ತಾಷ್ಕೆಂಟಿನಲ್ಲಿ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ಭಾರತಕ್ಕೆ ತಂದ ಮೇಲಾದರೂ ನಡೆಯಿತೇ ಎಂಬ ಬಗ್ಗೆ ಈಗಲೂ ಯಾವುದೇ ಸ್ಪಷ್ಟತೆಯಿಲ್ಲ. ಶಾಸ್ತ್ರೀಜಿಯರ ಮರಣಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ತಮ್ಮಲ್ಲಿಲ್ಲ ಎಂದು ದೆಹಲಿ ಪೊಲೀಸರು ಕೆಲವೇ ವರ್ಷಗಳ ಹಿಂದೆ ಒಂದು ಆರ್‌ಟಿಐ ಅರ್ಜಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಇರುವ ಒಂದೇ ಒಂದು ಕಡತವನ್ನು 'ಅತಿ ರಹಸ್ಯ ಕಡತ’ಗಳ ಸಾಲಿಗೆ ಸೇರಿಸಿದ್ದು, ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೂ ಬರುವುದಿಲ್ಲ. ಅದನ್ನು ಬಹಿರಂಗಗೊಳಿಸುವುದರಿಂದ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆಯಾಗುತ್ತದೆ ಎಂದಿರುವ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅದನ್ನು ಸಾರ್ವಜನಿಕಗೊಳಿಸುವಂತಿಲ್ಲ ಎಂದಿದೆ. ಇದರ ಅರ್ಥ ಏನು? ಒಟ್ಟಾರೆ ಘಟನೆಯ ಬಗ್ಗೆ ಜನರು ಅನುಮಾನ ತಾಳುವುದು ಸಹಜವೇ ಅಲ್ಲವೇ?

ಮರೆತುಹೋದ ಮಹಾನುಭಾವ:

ಇಷ್ಟೆಲ್ಲ ಗೊಂದಲಗಳ ನಡುವೆಯೂ ಶಾಸ್ತ್ರಿಯವರಿಗೆ ಸಿಗಬೇಕಾದ ಗೌರವ ದೊರೆತಿದೆಯೇ ಎಂದು ನೋಡಿದರೆ ಅಲ್ಲಿಯೂ ನಿರಾಸೆಯೇ ಇದೆ. ಶಾಸ್ತ್ರಿಯವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಸಕ್ರಿಯ ಸದಸ್ಯರಾಗಿ ಮುಂದೆ ಸರ್ಕಾರದಲ್ಲಿ ಪ್ರಧಾನಿವರೆಗಿನ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದರೂ ಕಾಂಗ್ರೆಸಿಗೆ ಅವರು ಬೇಡವಾಗಿದ್ದಾರೆ. ಗಾಂಧೀ ಜಯಂತಿಯಂದೇ ಶಾಸ್ತ್ರಿಯವರ ಜನ್ಮದಿನವಾಗಿದ್ದರೂ ಅಂದು ಅವರನ್ನು ಸ್ಮರಿಸಿಕೊಳ್ಳುವ ವಿಷಯದಲ್ಲಿ ಅನೇಕ ಮಂದಿಗೆ ಜಾಣಮರೆವು. 

ಗಾಂಧಿ, ನೆಹರೂ ಅವರ ಸಮಾಧಿ ಇದ್ದ ಪ್ರದೇಶದಲ್ಲಿ ಶಾಸ್ತ್ರಿಯವರ ಸಮಾಧಿ ಮಾಡುವುದಕ್ಕೂ ಕಾಂಗ್ರೆಸಿನವರದ್ದೇ ವಿರೋಧ ಇತ್ತು. ಕೊನೆಗೆ ಲಲಿತಾಶಾಸ್ತ್ರಿಯವರು ತಾನು ಈ ವಿಷಯವನ್ನು ಸಾರ್ವಜನಿಕಗೊಳಿಸಬೇಕಾಗುತ್ತದೆ ಎಂದು ಪ್ರತಿಭಟಿಸಿದ ಮೇಲೆಯಷ್ಟೇ ಕಾಂಗ್ರೆಸ್ ಅದಕ್ಕೆ ಒಪ್ಪಿಗೆ ನೀಡಿತ್ತು. ಹೆಚ್ಚೇಕೆ, ಶಾಸ್ತ್ರಿಯವರಿಗೆ ಅತ್ಯಂತ ಪ್ರಿಯವಾಗಿದ್ದ 'ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನು ಅವರ ಸಮಾಧಿಯ ಮೇಲೆ ಕೆತ್ತಿಸುವುದನ್ನೂ ಅವರ ಪಕ್ಷದವರೇ ವಿರೋಧಿಸಿದ್ದರು. ಇಂದಿರಾಗಾಂಧಿಯವರಿಗಂತೂ ಕಾಂಗ್ರೆಸಿನ ಹಳಬರ ಬಗ್ಗೆ ನಿರ್ಲಕ್ಷ್ಯವೇ ಇತ್ತು ಎಂದು ನಯ್ಯರ್ ಬರೆದುಕೊಂಡಿದ್ದಾರೆ.

ಶಾಸ್ತ್ರಿಯವರ ನಿಧನಾನಂತರವಾದರೂ ಅವರಿಗೆ ಭಾರತರತ್ನ ಘೋಷಿಸಲಾಯಿತು (1966ರಲ್ಲಿ) ಎಂಬುದೊಂದೇ ನಾವು ಸಮಾಧಾನಪಡಬಹುದಾದ ಸಂಗತಿ. ದೇಶ ಎಂದೂ ಮರೆಯಲಾಗದ, ಮರೆಯಬಾರದ ವ್ಯಕ್ತಿತ್ವ ಅವರದ್ದು. ಅವರನ್ನು ಮರೆಯುವುದಾಗಲೀ ಅಲಕ್ಷಿಸುವುದಾಗಲೀ ದೇಶ ತನಗೆ ತಾನೇ ಮಾಡಿಕೊಳ್ಳುವ ಆತ್ಮವಂಚನೆ ಎನ್ನದೆ ಬೇರೆ ವಿಧಿಯಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.