ಶನಿವಾರ, ಮೇ 20, 2017

ಇಲ್ಲಿ ಮತಾಂತರದ ಪ್ರಶ್ನೆ ಬರುವುದೇ ಇಲ್ಲ!

ಮೇ 20, 2017ರ 'ವಿಶ್ವವಾಣಿ'ಯಲ್ಲಿ ಪ್ರಕಟವಾದ ಲೇಖನ

2017ರ ಮರುಮುದ್ರಣ
ಶ್ರೀ ಮುಳಿಯ ಕೇಶವಯ್ಯನವರ ‘ಮಹಾಚೇತನ’ ಅಥವಾ ‘ಕ್ರಿಸ್ತ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗದ ಮರುಮುದ್ರಣ ಹಾಗೂ ಪ್ರದರ್ಶನಗಳ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ವಾದ ಪ್ರತಿವಾದಗಳಲ್ಲಿ ಭಾಗಿಗಳಾಗಿರುವ ಅನೇಕ ಮಂದಿಗೆ ಇದು 40 ವರ್ಷಗಳಷ್ಟು ಹಿಂದೆಯೇ ರಚನೆಯಾದ ಒಂದು ಕೃತಿಯೆಂದೂ ಈಗ ಆಗಿರುವುದು ಆ ಕೃತಿಯ ಮರುಮುದ್ರಣವೆಂದೂ ಗೊತ್ತಿಲ್ಲ. ತಮಾಷೆಯೆಂದರೆ ಹುಟ್ಟಿದ ಮೇಲೆ ಒಂದು ಯಕ್ಷಗಾನ ಪ್ರದರ್ಶನವನ್ನಾದರೂ ಪೂರ್ತಿಯಾಗಿ ನೋಡಿರದ ಮಂದಿಯೂ ‘ಈ ಯಕ್ಷಗಾನದವರಿಗೆ ಯಾರಾದರೂ ಬುದ್ಧಿ ಹೇಳೀಪ್ಪಾ’ ಎಂದು ಹಲುಬುತ್ತಿದ್ದಾರೆ. ಯಕ್ಷಗಾನವನ್ನು ಅಪಾರವಾಗಿ ಪ್ರೀತಿಸುವ ಒಬ್ಬ ಜನಸಾಮಾನ್ಯ ಹಾಗೂ ಅಧ್ಯಯನಾರ್ಥಿಯಾಗಿ ನನ್ನ ಒಂದೆರಡು ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆನಿಸುತ್ತದೆ.

1976ರ ಮೊದಲ ಮುದ್ರಣ
‘ಮಹಾಚೇತನ’ ಅಥವಾ ‘ಕ್ರಿಸ್ತ ಮಹಾತ್ಮೆ’ 1976ರಲ್ಲಿ ರಚನೆಯಾದ ಪ್ರಸಂಗ. ಆ ವರ್ಷ ಆಗಸ್ಟ್ ತಿಂಗಳಲ್ಲಿ  'ಜನತಾ ಯಕ್ಷಗಾನ ಮಂಡಳಿ'ಯವರು ಮಂಗಳೂರು ಪುರಭವನದಲ್ಲಿ ಮೊದಲ ಬಾರಿಗೆ ಈ ಪ್ರಸಂಗವನ್ನು ಪ್ರದರ್ಶಿಸಿದ್ದರು. ಮುಂದೆ ತೆಂಕು-ಬಡಗು ಎರಡೂ ತಿಟ್ಟುಗಳಲ್ಲಿ ಈ ಪ್ರಸಂಗ ಹತ್ತಾರು ಬಾರಿ ಪ್ರದರ್ಶನಗೊಂಡು ಸಾಕಷ್ಟು ಜನರ ಕುತೂಹಲ ಹಾಗೂ ಪ್ರಶಂಸೆಗಳಿಗೆ ಕಾರಣವಾಗಿತ್ತು.  ಆಯಾ ತಿಟ್ಟುಗಳ ಪ್ರಸಿದ್ಧ ಕಲಾವಿದರುಗಳೇ ಪ್ರದರ್ಶನದಲ್ಲಿ ಭಾಗವಹಿಸಿ ಪಾತ್ರ ನಿರ್ವಹಿಸಿದ್ದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆಗ ಇದರ ಬಗ್ಗೆ ಏನಾದರೂ ಚರ್ಚೆಗಳಾದವೋ ಗೊತ್ತಿಲ್ಲ. ಚರ್ಚೆ ನಡೆದಿದ್ದರೆ ಅದು ಯಾವ ರೂಪದ್ದು ಎಂದೂ ಗೊತ್ತಿಲ್ಲ. ಸದ್ಯಕ್ಕಂತೂ ಈ ವಿಚಾರದಲ್ಲಿ ಭಾರೀ ಚರ್ಚೆಯೇ ಆರಂಭವಾಗಿದೆ. ಮುಖ್ಯವಾಗಿ ಎರಡು ಚರ್ಚೆಗಳನ್ನು ಗಮನಿಸಿದ್ದೇನೆ.

ಒಂದು: ಇದರ ಹಿಂದೆ ಕ್ರೈಸ್ತರ ಹುನ್ನಾರ ಇದೆ. ಇದು ಮತಾಂತರ ಪ್ರಯತ್ನದ ಒಂದು ಭಾಗ. ಇದರಿಂದ ಸನಾತನ ಧರ್ಮದ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ. ಎರಡು: ಈ ತರಹದ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸುವುದರಿಂದ ಅದರ ಮೂಲ ಸೊಗಡಿದೆ ಭಂಗ ಬರುತ್ತದೆ; ಇದು ಯಕ್ಷಗಾನದಂತಹ ಶ್ರೇಷ್ಠ ಕಲೆ ಮತ್ತು ಅದನ್ನು ಬೆಳೆಸಿದ ಹಿರಿಯ ಚೇನತಗಳಿಗೆ ಮಾಡುತ್ತಿರುವ ಅವಮಾನ.

ಮೊದಲನೆಯ ವಾದಕ್ಕೆ ಸಂಬಂಧಿಸಿದಂತೆ ಅಂತಹ ಆತಂಕಪಡುವ ವಿಷಯವೇನೂ ಇಲ್ಲವೆಂದು ನನಗನ್ನಿಸುತ್ತದೆ. ಈ ಪ್ರಸಂಗ ಬಳಸಿಕೊಂಡು ಹಿಂದೆ ಮತಾಂತರ ಮಾಡಲಾಗಿದೆಯೋ ನನಗೆ ತಿಳಿದಿಲ್ಲ, ಈಗ ಅಂತೂ ಅದು ಸಾಧ್ಯ ಇಲ್ಲ. ಯಕ್ಷಗಾನದಿಂದ ಪ್ರಭಾವಿತರಾಗಿ ಜನರು ಕ್ರೈಸ್ತಮತಾನುಯಾಯಿಗಳಾಗಿ ಬದಲಾಗಬಹುದು ಎಂದೇನೂ ನನಗನ್ನಿಸುತ್ತಿಲ್ಲ. ಮತಾಂತರದ ಚರ್ಚೆಯೇ ಬೇರೆ, ಅದಕ್ಕೂ ಯಕ್ಷಗಾನಕ್ಕೂ ತಳಕು ಹಾಕುವ ಅಗತ್ಯ ಇಲ್ಲವೆನಿಸುತ್ತದೆ. “ಪುಣ್ಯಪುರುಷನೂ ಮಹಾತ್ಮನೂ ಆದ ಏಸುವಿನ ಕಥೆಯನ್ನು ಯಕ್ಷಗಾನಕ್ಕೆ ಅಳವಡಿಸಿದರೆ ನಮ್ಮವರೇ ಆದ ಕ್ರೈಸ್ತ ಸೋದರ ಸೋದರರಿಗೆ ಯಕ್ಷಗಾನದ ಮೇಲೆ ಪ್ರೀತಿಯನ್ನೂ, ಉಳಿದವರಿಗೆ ಕ್ರೈಸ್ತಮತದ ಸಾರಾಂಶವನ್ನೂ, ಏಸುವಿನ ಋಜುಜೀವನದ ಮೇಲೆ ಆಸಕ್ತಿಯನ್ನೂ ಉಂಟುಮಾಡುವುದರಲ್ಲಿ ಸಂಶಯವಿಲ್ಲ…” ಹೀಗೆಂದು ತಮ್ಮ ಪ್ರಸಂಗದ ಮುನ್ನುಡಿಯಲ್ಲಿ ಕೇಶವಯ್ಯನವರೇ ಹೇಳಿಕೊಂಡಿದ್ದಾರೆ. ಕೃತಿ ರಚನೆಯ ಹಿಂದಿನ ಅವರ ಉದ್ದೇಶ ಏನೆಂಬುದು ಅದರಲ್ಲಿ ಸ್ಪಷ್ಟವಾಗುತ್ತದೆ.

ಯಕ್ಷಗಾನ ಹಿಂದೂ ಧರ್ಮದ ಒಂದು ಆರಾಧನಾ ಕಲೆಯಾಗಿ ಹುಟ್ಟಿ ಬೆಳೆದುದೇನೋ ನಿಜ. ಆದರೆ ಅದೊಂದು ಕಲೆಯಾಗಿ ಯಾರನ್ನೂ ಹತ್ತಿರ ಸೇರಿಸಿಕೊಳ್ಳದೆ ಇರಲಿಲ್ಲ. ಸಮಾಜದ ಬೇರೆ ಬೇರೆ ವರ್ಗಗಳಿಗೆ ಸೇರಿದವರು, ವಿವಿಧ ಮತ-ಪಂಥಗಳನ್ನು ಅನುಸರಿಸುವವರು ಯಕ್ಷಗಾನದ ಅಭಿಮಾನಿಗಳೂ ಕಲಾವಿದರೂ ಆಗಿದ್ದಾರೆ. ಕ್ರೈಸ್ತ-ಮುಸಲ್ಮಾನರಲ್ಲಿಯೂ ಯಕ್ಷಗಾನ ಕಲಾವಿದರಿದ್ದಾರೆ, ಬಯಲಾಟಗಳನ್ನು ಆಡಿಸುವವರೂ ಪ್ರೇಕ್ಷಕರೂ ಇದ್ದಾರೆ. ವಿವಿಧ ಮತ ಪ್ರವಾದಿಗಳ ಜೀವನಚರಿತ್ರೆಗಳೂ ಯಕ್ಷಗಾನಗಳಾಗಿ ಪ್ರದರ್ಶನಗೊಂಡಿವೆ. ಯಕ್ಷಗಾನದ ಆಕರ್ಷಣೆಯೇ ಅಂತಹದು. ಅಂತಹ ಕಮನೀಯ ಪ್ರಭಾವೀ ಕಲೆಯೊಂದು ಹಿಂದೂಧರ್ಮಕ್ಕೆ ಸೀಮಿತವಾಗದೆ ಇರುವುದರಲ್ಲಿ ಅಚ್ಚರಿಯೇನೂ ಇಲ್ಲ.

ಎರಡನೆಯ ವಾದದ ಹಿನ್ನೆಲೆಯಲ್ಲಿ, ಅಂದರೆ ಒಂದು ಕಲೆಯಾಗಿ ಯಕ್ಷಗಾನವು ತನ್ನ ಮೂಲಕ ಚೌಕಟ್ಟಿನಿಂದ ಹೊರಬಂದಾಗ ಉಂಟಾಗಬಹುದಾದ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗಳು ನಡೆದರೆ ಅದು ಖಂಡಿತ ಸ್ವಾಗತಾರ್ಹ. ಯಕ್ಷಗಾನ ತನ್ನ 5೦೦ ಅಥವಾ ಅದಕ್ಕಿಂತಲೂ ದೀರ್ಘವಾದ ಇತಿಹಾಸದಲ್ಲಿ ಅನೇಕ ಪ್ರಯೋಗಗಳನ್ನು ಕಂಡಿದೆ. ಯಕ್ಷಗಾನದಷ್ಟು ನಮನೀಯ, ಚಲನಶೀಲ ಹಾಗೂ ಅಪಾರ ಪ್ರಮಾಣದ ಪ್ರಯೋಗಗಳಿಗೆ ಒಡ್ಡಿಕೊಂಡ ಇನ್ನೊಂದು ಕಲೆ ಜಗತ್ತಿನಲ್ಲೇ ಇಲ್ಲವೇನೋ? ನೂರಾರು ವರ್ಷಗಳ ಇತಿಹಾಸದಲ್ಲಿ ಬದುಕಿ ಬೆಳೆದು ಬಂದ ಯಕ್ಷಗಾನ ಇಂದಿಗೂ ಜನರ ಹೃದಯಕ್ಕೆ ಹತ್ತಿರವಾಗಿ ಉಳಿದಿದೆಯೆಂದರೆ ಅದಕ್ಕೆ ಆ ಕಲೆಯ ಪ್ರಯೋಗಶೀಲತೆಯೇ ಕಾರಣ.

ಯಕ್ಷಗಾನದ ವಸ್ತು, ವಿನ್ಯಾಸ, ರಂಗಕ್ರಿಯೆಗಳಿಂದ ತೊಡಗಿ ಅದರ ಒಟ್ಟಾರೆ ಪ್ರದರ್ಶನದವರೆಗೆ ಅನೇಕ ಅಂಶಗಳು ಕಾಲಾನುಕ್ರಮದಲ್ಲಿ ಪರಿಷ್ಕರಣೆಗೆ ಒಳಗಾಗುತ್ತ ಬಂದಿವೆ. ಈ ಪರಿಷ್ಕರಣೆಗಳೆಲ್ಲ ನಿರಾಯಾಸವಾಗಿ ಸಂಭವಿಸದವು ಎಂದೇನೂ ಹೇಳಲಾಗದು. ಧಾರ್ಮಿಕ ತಳಹದಿಯಲ್ಲಿ ಬೆಳೆದುಬಂದ ಸಂಪ್ರದಾಯನಿಷ್ಠ ಕಲೆಯೊಂದು ಬದಲಾವಣೆಗಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದು ಸಾಧ್ಯವೂ ಇರಲಿಲ್ಲ.

ಪುರಾಣ ಮೂಲದ ವಿಷಯಗಳ ಹೊರತಾಗಿ ಯಕ್ಷಗಾನದಲ್ಲಿ ಜಾನಪದ, ಐತಿಹಾಸಿಕ, ಸಾಮಾಜಿಕ ಅಥವಾ ಕಾಲ್ಪನಿಕ ಕಥೆಗಳು ಬಂದಾಗಲೂ ಸಾಕಷ್ಟು ಚರ್ಚೆಗಳು ನಡೆದವು, ಈಗಲೂ ನಡೆಯುತ್ತಿವೆ. ಯಕ್ಷಗಾನದ ಎಲ್ಲ ಆಯಾಮಗಳ ಮೇಲೆಯೂ ಚಲನಚಿತ್ರದ ದೊಡ್ಡ ಪ್ರಭಾವವೇ ಆಗಿದೆ. ಕಥೆಯಿಂದ ತೊಡಗಿ ವೇಷಭೂಷಣ, ಪ್ರಸ್ತುತಿ ಎಲ್ಲ ವಿಷಯಗಳಲ್ಲೂ ಯಕ್ಷಗಾನದವರು ಸಿನಿಮಾದವರನ್ನು ನಕಲು ಮಾಡಲು ಹೋಗಿ ಯಕ್ಷಗಾನಪ್ರಿಯರ ವಿರೋಧಕ್ಕೆ ತುತ್ತಾಗಿದ್ದಾರೆ. ರಕ್ತಕಣ್ಣೀರು, ಮುಂಗಾರುಮಳೆ, ಆಪ್ತಮಿತ್ರದಂತಹ ಸಿನಿಮಾಗಳು ಕೂಡ ಯಕ್ಷಗಾನಗಳಾಗಿ ರಂಗಕ್ಕೆ ಬಂದಾಗ ಟೀಕೆಗಳು ಸಹಜವಾಗಿ ಬಂದಿವೆ. ಯಕ್ಷಗಾನಕ್ಕೆ ಇಂತಹ ದುರ್ಗತಿ ಬಂತಲ್ಲ, ಇದು ಎಲ್ಲಿಗೆ ಹೋಗಿ ನಿಂತೀತು ಎಂದು ಪ್ರಾಮಾಣಿಕ ಕಳಕಳಿ ವ್ಯಕ್ತಪಡಿಸುವ ಸಹೃದಯರು ತುಂಬ ಮಂದಿ ಇದ್ದಾರೆ.

“ಪುಂಖಾನುಪುಂಖವಾಗಿ ರಚಿತವಾಗಿ ಪ್ರಯೋಗಗೊಂಡ ಅನೇಕ ನೂತನ ಪ್ರಸಂಗಗಳಲ್ಲಿ ಮನರಂಜನೆಯೇ ಪ್ರಧಾನವಾಗಿ, ಆಳವಾದ ಚಿಂತನ, ವಿಶಾಲವಾದ ಜೀವನದರ್ಶನ, ಮೌಲ್ಯಾನುಸಂಧಾನ ಇತ್ಯಾದಿಗಳು ತೀರಾ ಗೌಣವೆನಿಸಿದವು. ಸಿನಿಮೀಯ ದೃಶ್ಯಾನುಕರಣೆ ಮುಂದುವರಿದ ಹೆಜ್ಜೆಯಾಗಿ ಕೆಲವು ಜನಪ್ರಿಯ ಚಲನಚಿತ್ರ ಕಥಾನಕಗಳನ್ನು ಯಕ್ಷಗಾನಕ್ಕೆ ಅಳವಡಿಸಿದ್ದು ಮಾತ್ರವಲ್ಲ ಜನಪ್ರಿಯ ಹಾಡುಗಳನ್ನು ಅದೇ ಧಾಟಿಯಲ್ಲಿ ಹಾಡುವವಷ್ಟರಮಟ್ಟಿಗೆ ಈ ಚೇಷ್ಟೆ ಮುಂದುವರಿಯಿತು” ಎಂದು ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಬರೆದದ್ದಿದೆ.

ಆಧುನಿಕ ವಿಚಾರಗಳನ್ನು ಯಕ್ಷಗಾನದ ಮೂಲಕ ಸಾರುವ ಪ್ರಯತ್ನಗಳು ೬೦-೭೦ ವರ್ಷಗಳಿಂದಲೂ ನಡೆದಿವೆ. ಕಾಶ್ಮೀರ ಸಂಧಾನ, ಸ್ವಾತಂತ್ರ್ಯ ವಿಜಯ, ಬಾಂಗ್ಲಾ ವಿಜಯ, ನಸ್ಸೇರ್ ಪ್ರತಾಪ, ಎರಡನೇ ಮಹಾಯುದ್ಧ, ಸಿರಿಮಾವೋ ಸಂಧಿ ಇತ್ಯಾದಿ ಯಕ್ಷಗಾನ ಕೃತಿಗಳು ಬಂದಿವೆ. ೧೯೬೬ರಲ್ಲಿ ವಳಕ್ಕುಂಜ ನರಸಿಂಹ ಭಟ್ಟರು ಭಾರತ-ಪಾಕ್ ಯುದ್ಧವನ್ನು ಆಧರಿಸಿ ‘ಕಾಶ್ಮೀರ ಕಾಳಗ’ ಎಂಬ ಪ್ರಸಂಗ ರಚಿಸಿದ್ದರು.

ಇಂದಿರಾ ಗಾಂಧಿಯವರ ೨೦-ಅಂಶಗಳ ಯೋಜನೆ ಬಗ್ಗೆ 'ಅಂಶ ವಿಂಶತಿ' ಎಂಬ ಪ್ರಸಂಗ ಬಂದಿದೆ. ಈಚೆಗೆ ಮೋದಿಯವರ ಬೇಟಿ ಬಚಾವೋ-ಬೇಟಿ ಪಡಾವೋ, ಜನಧನ ಯೋಜನೆ, ಸ್ವಚ್ಛಭಾರತ ಆಂದೋಲನದ ಬಗೆಗೂ ಯಕ್ಷಗಾನ ಮಾಡಿದ್ದಾರೆ. ಸಾಕ್ಷರತೆ, ಪೌಷ್ಟಿಕ ಆಹಾರ, ಪರಿಸರ ಸಂರಕ್ಷಣೆ, ಸಣ್ಣ ಉಳಿತಾಯ,  ಗ್ರಾಮೀಣ ಅಭಿವೃದ್ಧಿ, ಏಡ್ಸ್ ಜಾಗೃತಿ - ಇತ್ಯಾದಿಗಳ ಬಗೆಗೂ ನೂರೆಂಟು ಪ್ರಸಂಗಗಳು ಬಂದಿವೆ (ನಿಸರ್ಗ ಸಂಧಾನ, ಅಕ್ಷರ ವಿಜಯ, ಇಳೆಯಣ್ಣನ ಕಥೆ, ಘೋರಮಾರಕ ಇತ್ಯಾದಿ).

ಪ್ರಯೋಗದ ದೃಷ್ಟಿಯಿಂದ ಇವನ್ನು ಅಧ್ಯಯನ ಯೋಗ್ಯ ಪ್ರಯತ್ನಗಳೆಂದುಹೇಳುವವರೂ ಇದ್ದಾರೆ, ಸರ್ಕಾರದ ಯೋಜನೆಗಳ ಹೆಸರಲ್ಲಿ ದುಡ್ಡು ಹೊಡೆಯಲು ಮಾಡುವ ಪ್ರಯತ್ನಗಳೆಂದು ಟೀಕಿಸುವವರೂ ಇದ್ದಾರೆ. ಅದು ಬೇರೆಯೇ ಚರ್ಚೆಯ ವಿಷಯ. ಯಕ್ಷಗಾನಕ್ಕೆ ಪ್ರಯೋಗಗಳು ಹೊಸತಲ್ಲ ಎಂಬುದನ್ನು ಹೇಳುವುದಷ್ಟೇ ನನ್ನ ಉದ್ದೇಶ.

 “ಕಲಾನಿರ್ಮಿತಿ ಸ್ವೇಚ್ಛಾವಿಹಾರವಲ್ಲ. ಒಂದು ನಿರ್ದಿಷ್ಟ ಮಟ್ಟಕ್ಕೆ ಮುಟ್ಟಿದ ಕಲೆಯ ರಂಗದಲ್ಲಿ ನಡೆಯತಕ್ಕ ಪ್ರಯೋಗಗಳಲ್ಲಿ ಸಾಕಷ್ಟು ಎಚ್ಚರವೂ ಔಚಿತ್ಯವೂ ವಿವೇಕವೂ ಬೇಕಾಗುತ್ತದೆ” ಎನ್ನುತ್ತಾರೆ ಪ್ರೊ. ಸೋಮೇಶ್ವರ. ‘ಆಯ್ದುಕೊಂಡ ಕಥಾವಸ್ತು ಯಕ್ಷಗಾನದ ಗಾನ, ನೃತ್ಯ, ವೇಷ, ರಂಗವಿಧಾನಗಳಿಗೆ ಅನುಕೂಲವಾಗಿರಬೇಕು. ಹಾಗಾಗಿ ಪೌರಾಣಿಕತೆ ಎಂಬುದಕ್ಕಿಂತಲೂ ಯಕ್ಷಗಾನಾರ್ಹತೆ ಎನ್ನುವುದು ಸೂಕ್ತ ಎನ್ನುತ್ತಾರೆ’ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ. ಕ್ರಿಸ್ತಮಹಾತ್ಮೆಯಂತಹ ಪ್ರಸಂಗಗಳು ಯಕ್ಷಗಾನಕ್ಕೆ ಎಷ್ಟರಮಟ್ಟಿಗೆ ಒಪ್ಪುತ್ತವೆ, ಅದರಿಂಹ ಯಕ್ಷಗಾನೀಯತೆಗೆ ಆಗುವ ಧಕ್ಕೆಯೇನು ಎಂಬ ಚರ್ಚೆ ನಮಗೆ ಮುಖ್ಯವಾಗಬೇಕೇ ಹೊರತು ಅದರಿಂದ ಕ್ರೈಸ್ತಮತದ ಪ್ರಚಾರ ಅಥವಾ ಮತಾಂತರ ನಡೆದೀತು ಎಂಬ ಆತಂಕ ಅಲ್ಲ ಎನಿಸುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.