ಶನಿವಾರ, ಮಾರ್ಚ್ 19, 2022

ಅನಿರೀಕ್ಷಿತ ತಿರುವುಗಳ ಆಚೆಗಿದೆ ನೆಮ್ಮದಿಯ ಹೆದ್ದಾರಿ

12-18 ಮಾರ್ಚ್ 2022 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬದುಕೊಂದು ಅಚ್ಚರಿಗಳ ಮೂಟೆ. ದಿನಾ ಓಡಾಡುವ ಹಾದಿಗಳಲ್ಲೇ ಅಂದುಕೊಂಡಂತೆ ಹೋಗಿ ವಾಪಸ್ ಬರುತ್ತೇವೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಇನ್ನು ಕ್ಷಣಕ್ಷಣ ಬದಲಾಗುವ ಬದುಕಿನಲ್ಲಿ ನಾವಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂದು ಹೇಳುವುದು ಹೇಗೆ? 

ಒಳ್ಳೆಯ ಬಿಸಿಲೆಂದು ಬಕೆಟುಗಟ್ಟಲೆ ಬಟ್ಟೆ ಒಗೆದು ಹರವಿ ಎಲ್ಲೋ ಹೊರಗೆ ಹೋಗಿರುತ್ತೇವೆ; ಎಂದೂ ಇಲ್ಲದ ಮಳೆ ಅಂದೇ ಬರುತ್ತದೆ. ಅಪರೂಪಕ್ಕೊಮ್ಮೆ ಪೂರ್ತಿ ದಿನ ಬಿಡುವು ದೊರೆತಿದೆ, ಒಳ್ಳೆಯ ಅಡುಗೆ ಮಾಡಿಕೊಂಡು ಉಣ್ಣಬೇಕು ಎಂದು ಕನಸು ಕಾಣುತ್ತೇವೆ; ಇಡೀ ದಿನ ಕರೆಂಟೇ ಇರುವುದಿಲ್ಲ. ಕುಟುಂಬ ಸಮೇತ ಪ್ರವಾಸ ಹೋಗಬೇಕೆಂದು ದಿನಗಟ್ಟಲೆ ಸಿದ್ಧತೆ ಮಾಡಿಕೊಂಡು ಕುಳಿತಿರುತ್ತೇವೆ; ಹೊರಡುವ ಮುನ್ನಾದಿನ ಅದ್ಯಾವುದೋ ಅನಾರೋಗ್ಯ ಅಮರಿಕೊಳ್ಳುತ್ತವೆ. ಸಂಜೆಯತನಕವೂ ಹತ್ತಿರದ ಬಂಧುವಿನೊಂದಿಗೋ ಸ್ನೇಹಿತನೊಂದಿಗೋ ಸಂತೋಷವಾಗಿ ಮಾತಾಡಿಕೊಂಡು ಕಾಲ ಕಳೆದಿರುತ್ತೇವೆ; ಬೆಳಗ್ಗೆ ಏಳುವಾಗ ಆತ ಬದುಕಿಲ್ಲ ಎಂಬ ಸುದ್ದಿ ಬರುತ್ತದೆ.

ದಿನನಿತ್ಯದ ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಘಟನೆಗಳಿಂದ ತೊಡಗಿ ಮನಸ್ಸು ವಿಹ್ವಲಗೊಳ್ಳುವ ಆಘಾತಗಳವರೆಗೆ ಇಂಥವು ನಡೆಯುತ್ತಲೇ ಇರುತ್ತವೆ. ಆಗೆಲ್ಲ ‘ಬದುಕೆಂದರೆ ಇಷ್ಟೇ ಏನು?’ ಎಂಬ ಪ್ರಶ್ನೆ ಮತ್ತೆಮತ್ತೆ ಕಾಡುತ್ತದೆ. ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ ಎಂದ ಮೇಲೆ ಹಾಗಾಗಬೇಕು ಹೀಗಾಗಬೇಕು ಎಂದು ಹಂಬಲ ಕಟ್ಟಿಕೊಳ್ಳುವ, ಏನೇನೋ ಕನಸು ಕಾಣುವ ಅಗತ್ಯವಾದರೂ ಏನು ಎಂದೆನಿಸುತ್ತದೆ. ಅಂತಹ ಸಂದರ್ಭಗಳಲ್ಲೆಲ್ಲ ಗಾಢ ನೈರಾಶ್ಯ ಆವರಿಸಿಕೊಳ್ಳುತ್ತದೆ. ಮನಸ್ಸು ಕೈಕಾಲುಗಳನ್ನು ಒಳಸರಿಸಿಕೊಂಡು ಮುದುಡಿ ಕೂರುತ್ತದೆ.

ಎಲ್ಲರೂ ಇಂತಹದೊಂದು ಮನಸ್ಥಿತಿಗೆ ಬಂದರೆ ಜಗತ್ತು ವರ್ಣಮಯವಾಗುವುದು ಹೇಗೆ? ಜೀವನದಲ್ಲಿ ಉಲ್ಲಾಸ ನಲಿದಾಡುವುದು ಹೇಗೆ? ಬದುಕನ್ನು ಮತ್ತೆ ಉತ್ಸಾಹದ ಹಳಿಗಳ ಮೇಲೆ ಎಳೆದುತರುವುದು ಹೇಗೆ?

ಹೌದು, ಬಹುತೇಕ ನಿರಾಶೆಗಳೆಲ್ಲ ಕ್ಷಣಿಕ. ಕೆಲವು ಒಂದೆರಡು ಗಂಟೆಗಳಲ್ಲಿ, ಮತ್ತೆ ಕೆಲವು ಒಂದೆರಡು ದಿನಗಳಲ್ಲಿ ಹೊರಟುಹೋಗಬಹುದು. ಇನ್ನು ಕೆಲವು ವಾರಗಟ್ಟಲೆ, ತಿಂಗಳುಗಟ್ಟಲೆ ಉಳಿಯಬಹುದು. ಕೆಲವೇ ಕೆಲವು ಬದುಕಿಡೀ ಕಾಡಬಹುದು. ಅಂಥವುಗಳ ಪ್ರಮಾಣ ತೀರಾ ಕಮ್ಮಿ. ಅವುಗಳಿಗೆ ಕಾಲವೇ ಪರಿಹಾರ ಎಂದುಕೊಳ್ಳಬೇಕಷ್ಟೆ. ಆದರೆ ಎಲ್ಲದಕ್ಕೂ ಹಾಗೆಂದು ಭಾವಿಸಿದರೆ ನಮ್ಮ ಪ್ರಯತ್ನ ಏನೂ ಇಲ್ಲ ಎಂಬಂತಾಗುತ್ತದೆ.

ಅನಿರೀಕ್ಷಿತ ಘಟನೆಗಳು ತೀರಾ ಸಾಮಾನ್ಯವಾದ್ದೇ ಇರಲಿ, ಗಂಭೀರವಾದ್ದೇ ಇರಲಿ, ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ಆಗಬಹುದಾದ ನಿರಾಸೆಯನ್ನು ಒಂದಿಷ್ಟಾದರೂ ಕಡಿಮೆ ಮಾಡಿಕೊಳ್ಳಬಹುದು. ಇಂಥದ್ದೊಂದು ನಡೆದುಹೋಗಿದೆ, ಅದನ್ನು ಮತ್ತೆ ಹಿಮ್ಮುಖವಾಗಿಸಲಾಗದು ಎಂಬುದನ್ನು ನಮಗೆ ನಾವೇ ಅರ್ಥಮಾಡಿಸಿಕೊಳ್ಳುವುದು ಮುಖ್ಯ. ಅಪಘಾತ, ಸಾವುಗಳಂತಹ ದೊಡ್ಡ ಪ್ರಮಾಣದ ಆಘಾತಗಳು ಸಂಭವಿಸಿದಾಗ ಇಂತಹ ಮಾತುಗಳನ್ನು ಹೇಳುವುದು ತಕ್ಷಣಕ್ಕೆ ಅರ್ಥಹೀನ ಅನ್ನಿಸಬಹುದು, ಆದರೆ ಅದು ನಿಜ.

ಮನಸ್ಸು ಉತ್ಸಾಹದಿಂದ ಕೂಡಿದ್ದಾಗ ನಡೆಯುವ ಕೆಲವು ಅನಿರೀಕ್ಷಿತಗಳು ದೊಡ್ಡಮಟ್ಟದ್ದಾಗಿದ್ದರೂ ಅವುಗಳನ್ನು ಎದುರಿಸಲು ನಾವು ಹೇಗೋ ಸಿದ್ಧರಾಗುತ್ತೇವೆ. ಮನಸ್ಸು ದುರ್ಬಲವಾಗಿರುವ ಹೊತ್ತು ಸಣ್ಣಪುಟ್ಟ ಏಟು ಸಿಕ್ಕರೂ ನಿರಾಶೆಯ ಸಮುದ್ರದಲ್ಲಿ ಬೀಳುತ್ತೇವೆ. ಸಾಧ್ಯವಾದಷ್ಟು ಮನಸ್ಸು ಉಲ್ಲಾಸದಿಂದ ಕೂಡಿರುವಂತೆ ನೋಡಿಕೊಳ್ಳುವುದೇ ಇದನ್ನು ನಿಭಾಯಿಸುವ ಸುಲಭದ ದಾರಿ. ಒಳ್ಳೆಯ ಪುಸ್ತಕಗಳ ನಿರಂತರ ಓದು, ಉತ್ತಮ ಗೆಳೆಯರ ಒಡನಾಟ, ಧನಾತ್ಮಕ ಚಿಂತನೆಯಿಂದ ಇದು ಸಾಧ್ಯವಾದೀತು. 

ಧನಾತ್ಮಕವಾಗಿ ಯೋಚಿಸುವುದರಿಂದ ಪರ್ವತವನ್ನು ಜರುಗಿಸಲಾದೀತೋ ಗೊತ್ತಿಲ್ಲ, ಪರ್ವತದಂತಹ ಸವಾಲುಗಳನ್ನಂತೂ ಅಲುಗಾಡಿಸಬಹುದು. ಅನೇಕ ಸಲ ಬದುಕಿನಲ್ಲಿ ಸಂಭವಿಸುವ ಋಣಾತ್ಮಕವೆನ್ನಿಸುವ ಘಟನೆಗಳು ಪರೋಕ್ಷವಾಗಿ ವರದಾನವೂ ಆಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಸಕಾರಾತ್ಮಕ ಯೋಚನೆ ಯಾವುದೇ ಘಟನೆಯ ಇನ್ನೊಂದು ಮಗ್ಗುಲನ್ನೂ ನಾವು ಅವಲೋಕಿಸುವಂತೆ ಮಾಡಬಹುದು. ಎಲ್ಲೋ ಅಡಗಿದ್ದ ಛಲವೊಂದು ಛಂಗನೆ ಪುಟಿದೇಳುವಂತೆಯೂ ಆಗಬಹುದು.

ಯಾವುದೋ ಒಂದು ಗುರಿಯನ್ನು ಸಾಧಿಸಲೇಬೇಕೆಂದು ಹೊರಟಿರುತ್ತೇವೆ; ಅನಿರೀಕ್ಷಿತವಾಗಿ ಅದು ಕೈತಪ್ಪಿಹೋದಾಗ ಒಂದು ಕ್ಷಣ ಮನಸ್ಸು ಕುಗ್ಗಬಹುದು. ಆದರೆ ಇನ್ನೊಂದು ರೀತಿಯಲ್ಲಿ ಅದರಿಂದಾಗಿ ನಮಗೆ ಅನುಕೂಲವೂ ಆಗಿರಬಹುದು. ಅದನ್ನು ಅರ್ಥ ಮಾಡಿಕೊಂಡರೆ ಅರ್ಧ ನಿರಾಶೆ ಅಲ್ಲೇ ಕರಗಿಹೋಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ಜೀವನದಲ್ಲಿ ಯಾವುದೇ ಉಪಕ್ರಮಕ್ಕೆ ಹೊರಟಾಗಲೂ ನಮ್ಮಲ್ಲೊಂದು ಪರ್ಯಾಯ ವ್ಯವಸ್ಥೆ ಇರಲೇಬೇಕು. ಪ್ಲಾನ್-ಎ ಯಶಸ್ವಿಯಾಗದಿದ್ದರೆ ತಕ್ಷಣಕ್ಕೆ ಏನು ಮಾಡಬೇಕೆನ್ನುವ ಪ್ಲಾನ್-ಬಿ ಕೂಡ ನಮ್ಮಲ್ಲಿರಬೇಕು. ಸೋಲು ಗೆಲುವು ಎರಡಕ್ಕೂ ಸಿದ್ಧವಾದ ಮನಸ್ಥಿತಿಯೊಂದಿಗೆ ಯೋಜನೆಯನ್ನು ಕೈಗೆತ್ತಿಕೊಂಡಾಗ, ಅಕಸ್ಮಾತ್ ಗೆಲುವು ದೊರೆಯದೆ ಹೋದರೆ ಕುಸಿದುಬೀಳುವಂತಹ ದುರಂತವೇನೂ ಸಂಭವಿಸದು. ಮೆಡಿಕಲ್ ಓದಲೇಬೇಕೆಂದು ಹಗಲು ರಾತ್ರಿ ಪ್ರಯತ್ನಪಡುವ ವಿದ್ಯಾರ್ಥಿಯೂ ಪ್ಲಾನ್-ಬಿ ಒಂದನ್ನು ಇಟ್ಟುಕೊಂಡಿರಲೇಬೇಕು. ಆಗ ಬಯಸಿದ ಯಶಸ್ಸು ಸಿಗದೇ ಹೋದರೂ ತಾನು ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ, ಮನಸ್ಸಿನ ದೃಢತೆ ಇದ್ದೇ ಇರುತ್ತದೆ.

ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಘಟನೆ ದುಃಖ ತರುವುದೇ ಆಗಬೇಕಿಲ್ಲ. ಸಂತೋಷದಾಯಕವೂ ಆಗಿರಬಹುದು. ಆದರೆ ಅದನ್ನು ಸ್ವೀಕರಿಸುವುದಕ್ಕೂ ಒಂದು ಹದಗೊಂಡ ಮನಸ್ಸು ಬೇಕು. ಅತಿಯಾದ ಆಘಾತ, ಅತಿಯಾದ ಸಂತೋಷ ಎರಡರ ಪರಿಣಾಮವೂ ಅಂತಿಮವಾಗಿ ಒಂದೇ ಆಗಿರಬಹುದು. ಜೀವನದ ಸುದೀರ್ಘ ಪಯಣದ ನಂತರ ಯಾರೋ ಗುರುತಿಸಿ ತನಗೊಂದು ಯೋಗ್ಯ ಪ್ರಶಸ್ತಿ ಘೋಷಿಸಿದರು ಎಂಬ ಸಂತೋಷದ ಪರಾಕಾಷ್ಠೆಯಲ್ಲಿ ಕಲಾವಿದರೊಬ್ಬರು ಇತ್ತೀಚೆಗೆ ಇಹಲೋಕ ತ್ಯಜಿಸಿಬಿಟ್ಟರಂತೆ. ದುಃಖವನ್ನು ಸಂಭಾಳಿಸಿಕೊಂಡಂತೆ ಸಂತೋಷದ ಪ್ರವಾಹವನ್ನು ನಿಭಾಯಿಸಿಕೊಳ್ಳುವುದು ಕೂಡ ಮುಖ್ಯ. ಎಷ್ಟಾದರೂ ಪ್ರವಾಹ ಪ್ರವಾಹವೇ ಅಲ್ಲವೇ? ಕೊಚ್ಚಿಕೊಂಡು ಹೋಗುವುದು ಅದರ ಗುಣ.

ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ|

ವೀತರಾಗಭಯಕೋಧಃ ಸ್ಥಿತಧೀರ್ಮುನಿರುಚ್ಯತೇ||

“ದುಃಖದಾಯಕ ಪ್ರಸಂಗದಲ್ಲಿ ಯಾರ ಮನಸ್ಸು ಉದ್ವಿಗ್ನಗೊಳ್ಳುವುದಿಲ್ಲವೋ, ಸುಖಗಳ ಪ್ರಾಪ್ತಿಯಲ್ಲಿ ಯಾರಿಗೆ ಸರ್ವಥಾ ಇಚ್ಛೆಯಿಲ್ಲವೋ, ಹಾಗೆಯೇ ಯಾರಿಗೆ ಪ್ರೀತಿ, ಭಯ, ಕ್ರೋಧ ಇವು ಇಲ್ಲವಾಗಿವೆಯೋ, ಇಂತಹ ಮುನಿಯೇ ಸ್ಥಿರಬುದ್ಧಿಯವನು” ಎನ್ನುತ್ತಾನೆ ಗೀತಾಚಾರ್ಯ. “ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ” ಎಂದು ಅರ್ಜುನನಿಗೆ ಆತ ಹೇಳಿದ್ದೂ ಇದೇ ಅರ್ಥದಲ್ಲಿ. ಸ್ಥಿತಪ್ರಜ್ಞನೆಂದರೆ ಯಾರು ಎಂಬ ಕೌತುಕ ಪಾರ್ಥನದ್ದು.

ಸ್ಥಿತಪ್ರಜ್ಞನ ಅತಿದೊಡ್ಡ ಲಕ್ಷಣ ತಾಳ್ಮೆ. ಎಂತಹ ಆಘಾತ ಎದುರಾದರೂ ಎರಡು ಕ್ಷಣ ತಾಳ್ಮೆ ತೆಗೆದುಕೊಂಡರೆ ಪರಿಹಾರದ ಸಣ್ಣ ಎಳೆಯೊಂದು ಕಂಡೇ ಕಾಣುತ್ತದೆ. ಈ ಎರಡು ಕ್ಷಣಗಳ ತಾಳ್ಮೆ ನೂರಾರು ಕದನಗಳನ್ನು, ಸಾವಿರಾರು ಸಾವುಗಳನ್ನು ತಪ್ಪಿಸಬಲ್ಲುದು. ಯುದ್ಧವೇ ಆರಂಭವಾಗದಿದ್ದರೆ ಕದನವಿರಾಮ ಘೋಷಿಸುವ ಅಗತ್ಯವೂ ಬಾರದು ಅಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಮಾರ್ಚ್ 13, 2022

ಹೀಗುಂಟು ಸಾಹಿತ್ಯ-ಮಾಧ್ಯಮಗಳ ನಂಟು

ಮಾರ್ಚ್ 2022ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾಗಿರುವ ಲೇಖನ

‘ಪತ್ರಿಕೋದ್ಯಮವು ಒಂದು ಅವಸರದ ಸಾಹಿತ್ಯ’ ಎಂಬ ಮಾತಿದೆ. ಪತ್ರಿಕಾ ಬರೆಹಗಳು ಅವಸರದಲ್ಲಿ ತಯಾರಾಗುವ ಪಾಕ ಎಂಬ ಧ್ವನಿ ಇಲ್ಲಿರುವಂತೆಯೇ, ಅವು ಸಾಹಿತ್ಯದ ಒಂದು ಭಾಗ ಎಂಬ ಸೂಚನೆಯೂ ಇದೆ. ಸಾಹಿತ್ಯಕ್ಕೂ ಪತ್ರಿಕಾವೃತ್ತಿಗೂ ಮೊದಲಿನಿಂದಲೂ ಒಂದು ಅವಿಭಾಜ್ಯ ಸಂಬಂಧ. ಒಂದೆಡೆ, ಪತ್ರಿಕಾವೃತ್ತಿ ಬೆಳೆಯುವಲ್ಲಿ ಸಾಹಿತ್ಯದ ಕೊಡುಗೆ ಗಣನೀಯವಾಗಿದ್ದರೆ, ಇನ್ನೊಂದೆಡೆ ಭಾಷೆ ಹಾಗೂ ಸಾಹಿತ್ಯದ ವಿಕಾಸದಲ್ಲಿ ಪತ್ರಿಕೋದ್ಯಮದ ಕೊಡುಗೆ ವಿಶಿಷ್ಟವಾಗಿದೆ. ಜನರಿಗೆ ಸುದ್ದಿಸಮಾಚಾರಗಳ ಕುರಿತಾದ ಕುತೂಹಲ ತುಸು ಹೆಚ್ಚೇ. ಆದರೆ ಅಷ್ಟಕ್ಕೇ ಅವರ ಆಸಕ್ತಿ ಮುಗಿಯವುದಿಲ್ಲ. ಕೇವಲ ಸುದ್ದಿಯಷ್ಟೇ ಅವರಿಗೆ ಸಾಕಾಗುವುದಿಲ್ಲ. ಸುದ್ದಿಸಮಾಚಾರಗಳೊಂದಿಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನೂ ಆಸ್ವಾದಿಸುವ ಅವಕಾಶ ಸಿಕ್ಕಾಗಲಷ್ಟೇ ಅವರಿಗೆ ಪತ್ರಿಕೆ ಇತ್ಯಾದಿ ಮಾಧ್ಯಮಗಳು ಹೆಚ್ಚು ಕುತೂಹಲಕರ ಹಾಗೂ ಪ್ರಯೋಜನಕರ ಎನಿಸುತ್ತವೆ.

ಆದರೆ ಸಾಹಿತ್ಯ ಮತ್ತು ಮಾಧ್ಯಮಗಳ ಸಂಬಂಧವನ್ನು ಗಮನಿಸಿದಾಗ, ಅದು ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾದದ್ದಲ್ಲ ಎಂಬುದು ಅರಿವಾಗುತ್ತದೆ. ಪತ್ರಿಕೆಗಳಿಂದ ತೊಡಗಿ ಆನ್ಲೈನ್ ವೇದಿಕೆಗಳವರೆಗೆ ವಿವಿಧ ಸಮೂಹ ಮಾಧ್ಯಮಗಳು ತಮ್ಮದೇ ನೆಲೆಯಲ್ಲಿ ಸಾಹಿತ್ಯದ ಪೋಷಣೆಯಲ್ಲಿ ತೊಡಗಿಸಿಕೊಂಡಿವೆ. ಕಾಲದಿಂದ ಕಾಲಕ್ಕೆ ಬದಲಾಗುವ ಜನರ ಆಸಕ್ತಿ-ಅಭಿರುಚಿಗಳನ್ನು ಮಾಧ್ಯಮಗಳು ಗಮನಿಸಿಕೊಂಡು ತಮ್ಮನ್ನು ತಾವು ಮರುರೂಪಿಸಿಕೊಳ್ಳಬೇಕಾಗುತ್ತದೆ.

ಪತ್ರಿಕಾ ಮಾಧ್ಯಮ:

ಮುದ್ರಣ ಮಾಧ್ಯಮದ ಸಾಹಿತ್ಯ ಪರಿಚಾರಿಕೆ ಎರಡು ಬಗೆಯದ್ದು. ಕಲೆ-ಸಾಹಿತ್ಯಕ್ಕೆಂದೇ ಮೀಸಲಾದ ಪತ್ರಿಕೆಗಳ ಕಾರ್ಯವೈಖರಿ ಒಂದು ತೆರನಾದರೆ, ಮುಖ್ಯ ವಾಹಿನಿಯ ಪತ್ರಿಕೆಗಳು ಸಾಹಿತ್ಯಕ್ಕೆ ಕೊಡುವ ಮಹತ್ವ ಇನ್ನೊಂದು ವಿಧವಾದದ್ದು. ಎರಡೂ ಬಗೆಯ ಪತ್ರಿಕೆಗಳು ತಮ್ಮದೇ ಆದ ರೀತಿಯಲ್ಲಿ ಸಾರಸ್ವತಲೋಕದ ಬೆಳವಣಿಗೆಯಲ್ಲಿ ಪಾತ್ರ ವಹಿಸಿವೆ. ಸಾಹಿತ್ಯ ಕ್ಷೇತ್ರದ ಹಲವು ದಿಗ್ಗಜರು ಸ್ವತಃ ಪತ್ರಕರ್ತರಾಗಿದ್ದರು ಎಂಬುದು ಗಮನಾರ್ಹ ಸಂಗತಿ. ಆಂಗ್ಲಸಾಹಿತ್ಯದ ಶ್ರೇಷ್ಠ ಪ್ರಬಂಧಕಾರರೆನಿಸಿದ ರಿಚರ್ಡ್ ಸ್ಟೀಲ್, ಡೇನಿಯಲ್ ಡೆಫೋ ಮೊದಲಾದವರೆಲ್ಲ ಉತ್ತಮ ಪತ್ರಿಕಾ ಬರೆಹಗಾರರೂ ಆಗಿದ್ದರು. ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಮಾಸ್ತಿ, ಡಿವಿಜಿ, ತಿ. ತಾ. ಶರ್ಮ, ನಿರಂಜನ, ನಂಜನಗೂಡು ತಿರುಮಲಾಂಬಾ, ಸಿದ್ಧವನಹಳ್ಳಿ ಕೃಷ್ಣಶರ್ಮ, ಅ.ನ.ಕೃ. ಮುಂತಾದವರು ಸಾಹಿತ್ಯವನ್ನೂ ಪತ್ರಿಕೋದ್ಯಮವನ್ನೂ ಜತೆಜತೆಗೇ ಬೆಳೆಸಿಕೊಂಡು ಬಂದರು.

19ನೇ ಶತಮಾನ ಹೊಸಗನ್ನಡ ಸಾಹಿತ್ಯದ ಉದಯಕಾಲ. ಕನ್ನಡ ಪತ್ರಿಕೋದ್ಯಮವೂ ಅದೇ ಅವಧಿಯಲ್ಲೇ ಬೆಳೆಯಿತು. ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳ ವಿಕಾಸದ ಪಾತಳಿ ಒಂದೇ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಮುದ್ರಣಕಲೆ ಬೆಳೆದುದಕ್ಕೂ, ಸಾಹಿತ್ಯ ಕೃತಿಗಳು ದೊಡ್ಡ ಸಂಖ್ಯೆಯಲ್ಲಿ ಮುದ್ರಣಗೊಂಡು ವಿಸ್ತಾರ ಓದುಗವರ್ಗವನ್ನು ತಲುಪಿದ್ದಕ್ಕೂ ಸಂಬಂಧವಿರುವುದನ್ನು ಕೂಡ ನಾವಿಲ್ಲಿ ಗಮನಿಸಬಹುದು. ಪತ್ರಿಕೋದ್ಯಮವು ಮುದ್ರಣತಂತ್ರಜ್ಞಾನದ ಇನ್ನೊಂದು ಕೂಸು.

ಪತ್ರಿಕಾವೃತ್ತಿ ಬೆಳೆದುಬರುತ್ತಾ, ರಂಗಭೂಮಿ, ಸಂಗೀತ, ಜಾನಪದ, ಯಕ್ಷಗಾನ, ಕಾವ್ಯ, ಹಾಸ್ಯ, ಕತೆ - ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಿಗೆ ಸಂಬಂಧಿಸಿದ ವಿಶೇಷ ಪತ್ರಿಕೆಗಳು ಹುಟ್ಟಿಕೊಂಡವು. ಬೆನೆಗಲ್ ರಾಮರಾಯರ ‘ಸುವಾಸಿನಿ’, ರಾಶಿಯವರ ‘ಕೊರವಂಜಿ’, ಅನಕೃ ಅವರ ‘ಕಥಾಂಜಲಿ’, ಮಾಸ್ತಿಯವರ ‘ಜೀವನ’, ಅಡಿಗರ ‘ಸಾಕ್ಷಿ’, ಕಾರಂತರ ‘ವಸಂತ’, ಮೈಸೂರು ವಿವಿ ಪ್ರಕಟಿಸುತ್ತಿದ್ದ ‘ಪ್ರಬುದ್ಧ ಕರ್ನಾಟಕ’- ಹೀಗೆ ಹತ್ತಾರು ಉಪಕ್ರಮಗಳನ್ನು ಗುರುತಿಸಬಹುದು ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ನಿರಂಜನ ವಾನಳ್ಳಿಯವರು ತಮ್ಮ ‘ಕನ್ನಡದಲ್ಲಿ ಕಲೆ-ಸಾಹಿತ್ಯ ಪತ್ರಿಕೆಗಳು’ ಎಂಬ ಪಿಎಚ್.ಡಿ. ಪ್ರಬಂಧದಲ್ಲಿ ಈ ಐತಿಹಾಸಿಕ ಹೆಜ್ಜೆಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. 

ಕನ್ನಡ ಪತ್ರಿಕೆಗಳ ಸಾಹಿತ್ಯ ಸೇವೆಯನ್ನು ಅವರು ಈ ಕೆಳಕಂಡಂತೆ ಪಟ್ಟಿಮಾಡಿದ್ದಾರೆ:

1. ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಸಾಮಾನ್ಯ ಆಸಕ್ತಿಯ ಪತ್ರಿಕೆಗಳೇ ಆಗಿರುವ ಸಂದರ್ಭದಲ್ಲಿಯೂ ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಹಾಸ್ಯಬರಹಗಳು, ಮುಂತಾದವನ್ನು ತಪ್ಪದೇ ಪ್ರಕಟಿಸುತ್ತವೆ.

2. ಕಾದಂಬರಿಗಳು ಧಾರಾವಾಹಿಗಳಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ. ಹಿಂದೆ ನಿಯತಕಾಲಿಕಗಳಿಗಷ್ಟೇ ಧಾರಾವಾಹಿಗಳು ಸೀಮಿತವಾಗಿದ್ದವು. ಈಗ ದಿನಪತ್ರಿಕೆಗಳೂ ಧಾರಾವಾಹಿಗಳನ್ನು ಪ್ರಕಟಿಸುತ್ತವೆ.

3. ಸಾಹಿತಿಗಳ ಅಂಕಣಗಳನ್ನು ಪ್ರಕಟಿಸುವ ಮೂಲಕ ಅಂಕಣ ಸಾಹಿತ್ಯವೇ ಕನ್ನಡದಲ್ಲಿ ಪ್ರತ್ಯೇಕ ಸಮೃದ್ಧ ಸಾಹಿತ್ಯ ಪ್ರಕಾರವಾಗಿ ಬೆಳೆಯಲು ಕಾರಣವಾಗಿವೆ.

4. ಪತ್ರಿಕೆಗಳು ಏರ್ಪಡಿಸುವ ಸಾಹಿತ್ಯ ಸ್ಪರ್ಧೆಗಳು ಹೊಸತಲೆಮಾರಿನ ಬರಹರಾರರನ್ನು ಹೆಕ್ಕಿ ತೆಗೆಯಲು ನೆರವಾಗುತ್ತವೆ.

5. ದೀಪಾವಳಿ, ಯುಗಾದಿ, ಸಂಕ್ರಾಂತಿ, ಮುಂತಾದ ಹಬ್ಬದ ಸಂದರ್ಭಗಳಲ್ಲಿ ನಮ್ಮ ಪತ್ರಿಕೆಗಳು ಹೊರತರುವ ವಿಶೇಷಾಂಕಗಳು ಸಾಹಿತ್ಯ ಸಂಪುಟಗಳೇ ಎಂದು ಕರೆಯಬಹುದಾದಷ್ಟು ಸಮೃದ್ಧವಾಗಿರುತ್ತವೆ.

6. ಕಾಲಕಾಲಕ್ಕೆ ಪ್ರಶ್ನೆ ಮಾಲಿಕೆಗಳನ್ನು ಏರ್ಪಡಿಸಿ ಒಂದೇ ರೀತಿಯ ಪ್ರಶ್ನೆಗಳಿಗೆ ಸಾಹಿತಿಗಳಿಂದ ಉತ್ತರಗಳನ್ನು ಬರೆಯಿಸಿ ಸಾಹಿತ್ಯ ಪಡೆದುಕೊಳ್ಳುವ ತಿರುವುಗಳಿಗೆ ಸೈದ್ಧಾಂತಿಕ ರೂಪ ನೀಡುತ್ತವೆ.

7. ಪತ್ರಿಕೆಗಳೇ ಸಾಹಿತ್ಯ ಪ್ರಕಾಶನದ ಸಂಸ್ಥೆಗಳಾಗಿ ಕೆಲಸ ಮಾಡುವುದಿದೆ. ಅಂದರೆ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದು.

8. ನವ ಪ್ರಕಾಶನಗಳ ಪಟ್ಟಿಯನ್ನು ಪ್ರಕಟಿಸಿ ಓದುಗರಿಗೆ ಹೊಸ ಕೃತಿ ಹೊರಬಂದುದರ ಬಗ್ಗೆ ತಿಳಿಯಲು ಅನುವುಮಾಡಿಕೊಡುತ್ತವೆ.

9. ಪುಸ್ತಕಗಳ ಸಮೀಕ್ಷೆ, ವಿಮರ್ಶೆಗಳನ್ನು ತಜ್ಞರಿಂದ ಬರೆಸುತ್ತವೆ.

10. ಓದುಗರಿಗೆ ವಿಮರ್ಶಾ ಸ್ಪರ್ಧೆಗಳನ್ನು ಏರ್ಪಡಿಸುತ್ತವೆ.

11. ಚಿತ್ರಕವನ ಸ್ಪರ್ಧೆ ಹಾಗೂ ಅಪೂರ್ಣ ಕಥೆಗಳನ್ನು ಪೂರ್ಣಗೊಳಿಸುವಂಥ ಸ್ಪರ್ಧೆಗಳ ಮೂಲಕ ಓದುಗರ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ.

12. ಇವೆಲ್ಲ ಸಾಮಾನ್ಯ ಆಸಕ್ತಿಯ ಪತ್ರಿಕೆಗಳ ಮಾತಾದರೆ, ಸಾಹಿತ್ಯಕ್ಕೇ ಮೀಸಲಾಗಿ ನಿಯತಕಾಲಿಕಗಳನ್ನು ಹೊರಡಿಸುವುದೂ ಕನ್ನಡ ಪತ್ರಿಕೋದ್ಯಮ ಮಾಡುವ ಸಾಹಿತ್ಯ ಸೇವೆಯ ಮಾದರಿ.

ಸಾಹಿತ್ಯದ ಬೆನ್ನೆಲುಬೆನಿಸಿರುವ ಭಾಷೆಯ ಬೆಳವಣಿಗೆಯಲ್ಲೂ ಪತ್ರಿಕೆಗಳ ಕೊಡುಗೆ ಅದ್ವಿತೀಯ. ಕಾಲದಿಂದ ಕಾಲಕ್ಕೆ ಭಾಷೆ ವಿಕಾಸವಾಗುವಲ್ಲಿ, ಹೊಸ ಪದಗಳ ಸೃಷ್ಟಿಯಾಗುವಲ್ಲಿ, ಹೊಸ ಪದಪುಂಜಗಳ ಅನ್ವೇಷಣೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ತುಂಬ ದೊಡ್ಡದು. ಆಧುನೀಕರಣ ಮತ್ತು ಆ ಕಾರಣದಿಂದ ನಡೆದಿರುವ ಟಂಕೀಕರಣ, ಭಾಷಾಂತರೀಕರಣ, ಅನ್ಯ ಭಾಷಾ ಸ್ವೀಕರಣ, ನುಡಿಬೆರಕೆ ಮೊದಲಾದವುಗಳಿಂದ ಒಂದು ಭಾಷೆಗೆ ಹೊಸ ಪದಗಳು ಸೇರ್ಪಡೆಯಾಗುತ್ತಾ ಹೋಗುತ್ತವೆ; ಈ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಪಾತ್ರ ತುಂಬ ದೊಡ್ಡದು ಎಂದು ಭಾಷಾತಜ್ಞರು ಗುರುತಿಸಿದ್ದುಂಟು. ಉದಾಹರಣೆಗೆ: ಕಪ್ಪುಹಣ, ಪ್ರಣಾಳಿಕೆ, ಏಕಸ್ವಾಮ್ಯ, ಯಥಾಸ್ಥಿತಿ, ಭೂಗತಲೋಕ, ಸ್ವಜನಪಕ್ಷಪಾತ, ಮಾಹಿತಿ ತಂತ್ರಜ್ಞಾನ, ಶೀತಲ ಸಮರ, ವಿಕೇಂದ್ರೀಕರಣ, ಬೆರಳಚ್ಚು, ನುಡಿಚಿತ್ರ, ಗೃಹಬಂಧ, ಪ್ರಣಾಳಶಿಶು, ಹಕ್ಕೊತ್ತಾಯ, ಅಜೇಯ ಶತಕ- ಇವೆಲ್ಲ ಆಯಾ ಸಂದರ್ಭದ ಅನಿವಾರ್ಯಗಳಲ್ಲಿ ಹುಟ್ಟಿಕೊಂಡಿರುವ ಬಳಕೆಗಳು.

ಗಣನೀಯ ಇಳಿಮುಖ:

ಕಲೆ-ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಓದುಗರ ಸಾಹಿತ್ಯಾಸಕ್ತಿಯಲ್ಲಿ ಆಗಿರುವ ಬದಲಾವಣೆ, ಪತ್ರಿಕೆ ನಡೆಸುವವರ ಹಣಕಾಸಿನ ಸಂಕಷ್ಟ, ಮಾರಾಟ-ಪ್ರಸರಣೆಯಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಳ್ಳಲು ಆಗದೇ ಇರುವುದು, ಬಹುತೇಕ ಸಾಹಿತ್ಯ ಪತ್ರಿಕೆಗಳ ವಹಿವಾಟು ಏಕವ್ಯಕ್ತಿ ಹೋರಾಟ ಆಗಿರುವುದು- ಹೀಗೆ ಅನೇಕ ಕಾರಣಗಳನ್ನು ಈ ನಿಟ್ಟಿನಲ್ಲಿ ಊಹಿಸಬಹುದು.

ಮುಖ್ಯವಾಹಿನಿಯ ಪತ್ರಿಕೆಗಳನ್ನು ಗಮನಿಸಿದರಂತೂ ಬಹುತೇಕ ಪತ್ರಿಕೆಗಳು ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯವನ್ನು ದೂರ ಸರಿಸಿರುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೇಲೆ ಪಟ್ಟಿಮಾಡಿರುವ, ನಿರಂಜನ ವಾನಳ್ಳಿಯವರು ಗುರುತಿಸಿರುವ ಅಂಶಗಳನ್ನು ಗಮನಿಸಿದರೆ, ದಶಕಗಳ ಹಿಂದೆ ಪತ್ರಿಕೆಗಳು ಸಾಹಿತ್ಯಕ್ಕೆ ನೀಡುತ್ತಿದ್ದ ಆದ್ಯತೆಗೂ ಇಂದಿನ ವಾಸ್ತವಕ್ಕೂ ಸ್ಪಷ್ಟ ವ್ಯತ್ಯಾಸವಿರುವುದು ಸಾಮಾನ್ಯ ಓದುಗನಿಗೂ ಅರ್ಥವಾಗುತ್ತದೆ.

ಒಂದು ಕಾಲದಲ್ಲಿ ಪತ್ರಿಕೆಗಳ ಭಾನುವಾರದ ಪುರವಣಿ, ವಾರ್ಷಿಕ ವಿಶೇಷಾಂಕಗಳಲ್ಲಿ ಕಥೆ-ಕವಿತೆಗಳನ್ನು ಬರೆದು ಬಹುಮಾನ ಪಡೆದು ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ನೂರಾರು ಮಂದಿಯ ಉದಾಹರಣೆ ಇದ್ದರೆ, ಅಂತಹದೊಂದು ಕಾಲ ಇತ್ತೇ ಎಂದು ಅಚ್ಚರಿಪಡುವ ಸಂದರ್ಭ ಇಂದಿನದು. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಪತ್ರಿಕೆಗಳ ಸಾಹಿತ್ಯ ಪುರವಣಿಗಳು ಗುರುತೇ ಸಿಗದಷ್ಟು ಸೊರಗಿ ಹೋಗಿವೆ. ಕಥೆ, ಕಾವ್ಯ ವಿಭಾಗಗಳೆಲ್ಲ ಮಾಯವಾಗಿವೆ. ‘ಅವನ್ನೆಲ್ಲ ಓದುವವರು ಇಲ್ಲ’ ಎಂಬುದು ಎಲ್ಲರೂ ಕೊಡುವ ಸುಲಭ ಸಬೂಬು. ‘ಜಾಹೀರಾತುದಾರರಿಗೆ ಅಂತಹ ಪುಟಗಳ ಬಗ್ಗೆ ಆಸಕ್ತಿ ಇಲ್ಲ’ ಎಂಬುದು ಒಳಗಿನಿಂದ ಕೇಳುವ ಧ್ವನಿ. ವಾಸ್ತವ ಏನು ಎಂಬುದು ಯಕ್ಷಪ್ರಶ್ನೆ. ಕೊರೋನ ಅಂತೂ ಸಾಪ್ತಾಹಿಕ ಪುರವಣಿಗಳನ್ನೇ ನಿಲ್ಲಿಸಿಬಿಡುವುದಕ್ಕೆ ಒಳ್ಳೆಯ ನೆಪವಾಗಿದೆ. ಕೊರೋನದ ಆತಂಕಗಳು ಕಡಿಮೆಯಾಗಿ ಮಾಧ್ಯಮಗಳು ಆರ್ಥಿಕವಾಗಿ ಚೇತರಿಸಿಕೊಂಡರೂ, ಅವುಗಳ ಸಾಹಿತ್ಯಪ್ರೀತಿ ಚೇತರಿಸಿಕೊಂಡಂತೆ ಕಾಣುವುದಿಲ್ಲ. ಸಾಧ್ಯವಾದಷ್ಟು ಕಾಲ ಯಥಾಸ್ಥಿತಿ ಮುಂದುವರಿದರೆ ವ್ಯಾವಹಾರಿಕ ದೃಷ್ಟಿಯಿಂದ ಅನುಕೂಲವೇ ಹೆಚ್ಚು ಎಂದು ಅವು ಭಾವಿಸಿಕೊಂಡಂತಿದೆ.

ವಿದ್ಯುನ್ಮಾನ ಮಾಧ್ಯಮ:

ವಿದ್ಯುನ್ಮಾನ ಮಾಧ್ಯಮಗಳ ಪೈಕಿ, ದೂರದರ್ಶನ ಮೊದಲಿನಿಂದಲೂ ಕಲೆ-ಸಾಹಿತ್ಯಕ್ಕೆ ಸಾಕಷ್ಟು ಒತ್ತು ನೀಡುತ್ತಾ ಬಂದಿದೆ. ಸಾಹಿತ್ಯ, ಕಲಾ ಮೌಲ್ಯವುಳ್ಳ ಧಾರಾವಾಹಿಗಳು ವಿವಿಧ ಭಾಷೆಗಳಲ್ಲಿ ಬಂದಿವೆ. ಹಿಂದಿಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ ರಾಮಾಯಣ, ಮಹಾಭಾರತ ಧಾರಾವಾಹಿಗಳು, ಕನ್ನಡದಲ್ಲಿ ಬಂದ ಮಲೆಗಳಲ್ಲಿ ಮದುಮಗಳು, ಗೃಹಭಂಗ, ಕಾನೂರು ಹೆಗ್ಗಡತಿ; ‘ಕತೆಗಾರ’ನಂತಹ ಸರಣಿಗಳು, ಲೇಖಕರು-ಕಲಾವಿದರ ಕುರಿತ ಸಾಕ್ಷ್ಯಚಿತ್ರ, ಸಂದರ್ಶನಗಳು, ನಿಯಮಿತವಾಗಿ ಪ್ರಸಾರವಾಗುವ ನಾಟಕ, ಸಿನಿಮಾ, ಯಕ್ಷಗಾನ, ಹರಿಕಥೆ, ಸಂಗೀತ, ನೃತ್ಯ, ರೂಪಕಗಳು ಒಟ್ಟಾರೆ ಸಾಹಿತ್ಯ ಸಂವರ್ಧನೆಗೆ ಗಣನೀಯ ಕೊಡುಗೆ ನೀಡಿವೆ. 

ಆದರೆ ಖಾಸಗಿ ವಾಹಿನಿಗಳಲ್ಲಿ ಈ ಕುರಿತ ಆಸಕ್ತಿಯಾಗಲೀ ಕಾಳಜಿಯಾಗಲೀ ವ್ಯಕ್ತವಾಗುವುದು ಅಪರೂಪ. ಟಿಆರ್‍ಪಿಯನ್ನು ಹುಟ್ಟಿಸದಿರುವ ಯಾವ ವಿಷಯದಲ್ಲೂ ಅವುಗಳಿಗೆ ಆಸಕ್ತಿ ಇಲ್ಲ. ಟಿವಿ ವಾಹಿನಿಗಳು ಕಲೆ-ಸಾಹಿತ್ಯಕ್ಕೆ ಒತ್ತು ನೀಡುವ ಬಗ್ಗೆ ಮಾತಾಡುವುದು ವ್ಯಾವಹಾರಿಕ ಜಗತ್ತಿನ ಬಗ್ಗೆ ಏನೂ ಅರಿವಿಲ್ಲದವರ ಹಳಹಳಿಕೆ ಎಂಬಂತಾಗಿದೆ.

ನಾಡು-ನುಡಿ-ಸಂಸ್ಕೃತಿಯ ಪ್ರಸರಣೆಯಲ್ಲಿ ಆಕಾಶವಾಣಿಯೂ ಹಿಂದೆ ಬಿದ್ದಿಲ್ಲ. ಕಲೆ-ಸಾಹಿತ್ಯಗಳನ್ನು ಜನಸಾಮಾನ್ಯರ ಬಳಿಗೆ ಒಯ್ಯುವಲ್ಲಿ ಬಾನುಲಿಯ ಪಾತ್ರವನ್ನು ಯಾರೂ ಅಲ್ಲಗಳೆಯಲಾಗದು. ಶಾಸ್ತ್ರೀಯ ಸಂಗೀತ, ಜಾನಪದ ಹಾಡುಗಳು, ಚಲನಚಿತ್ರ ಗೀತೆಗಳು, ಭಾವಗೀತೆ, ಗಮಕ ವಾಚನ, ನಾಟಕ, ರೂಪಕ, ಭಾಷಣ, ಸಂವಾದ, ಹರಿಕಥೆ, ಯಕ್ಷಗಾನ, ಹೀಗೆ ವಿವಿಧ ಮಾದರಿಗಳಲ್ಲಿ ಅಭಿವ್ಯಕ್ತಗೊಳ್ಳುವ ಆಕಾಶವಾಣಿಯ ಸಾಹಿತ್ಯಪ್ರೀತಿಯಿಂದಾಗಿ ಅದು ಸಾಮಾನ್ಯ ಕೇಳುಗರ ಹೃದಯದಲ್ಲಿ ಸುಭದ್ರ ಸ್ಥಾನ ಪಡೆದುಕೊಂಡಿದೆ. ಆದರೆ ಆಕಾಶವಾಣಿಯ ಪ್ರಾದೇಶಿಕ ಪ್ರಸಾರಕ್ಕೆ ದೊರೆಯುತ್ತಿದ್ದ ಪ್ರಾಮುಖ್ಯತೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಆಕಾಶವಾಣಿಯ ಅಸ್ತಿತ್ವ ಇರುವುದೇ ಅದರ ಪ್ರಾದೇಶಿಕ ಪ್ರಸಾರದಲ್ಲಿ ಮತ್ತು ಅದು ಒಳಗೊಂಡಿರುವ ಕಲೆ-ಸಾಹಿತ್ಯ-ಸಂಸ್ಕೃತಿಯ ಸತ್ವದಲ್ಲಿ. ಅದೇ ಕಳೆದುಹೋದರೆ ಬಾನುಲಿ ಇನ್ನೊಂದು ಯಾಂತ್ರಿಕ ಮಾಧ್ಯಮವಾಗುವುದರಲ್ಲಿ ಸಂಶಯವಿಲ್ಲ.

ನವಮಾಧ್ಯಮ:

ನಾವು ಗಮನಿಸಬೇಕಾಗಿರುವ ಮಾಧ್ಯಮಗಳ ಇನ್ನೊಂದು ಮುಖ ಆನ್ಲೈನ್ ಮಾಧ್ಯಮ ಅಥವಾ ನವ ಮಾಧ್ಯಮ. ಇಂಟರ್ನೆಟ್ ಇಂದು ಬಹುಜನರನ್ನು, ಅದರಲ್ಲೂ ಯುವತಲೆಮಾರನ್ನು ಬಹುವಾಗಿ ಆಕರ್ಷಿಸಿದೆ. ಅದನ್ನು ನಾವು ಅಲಕ್ಷಿಸುವಂತಿಲ್ಲ. ಯುವಕರು ಹೆಚ್ಚುಹೆಚ್ಚಾಗಿ ಅಂತರಜಾಲವನ್ನು, ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಎಂದರೆ ಅಲ್ಲಿ ಸಾಹಿತ್ಯದ ನೆಲೆ-ಬೆಲೆ ಏನು, ಎಷ್ಟು ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ಸಾಮಾನ್ಯ ಆಸಕ್ತಿಯ ಜಾಲತಾಣಗಳು, ಸಾಹಿತ್ಯಕ್ಕೇ ಮೀಸಲಾದ ವೆಬ್ ಮ್ಯಾಗಜಿನ್‍ಗಳು ಇಂದು ನೂರಾರು ಸಂಖ್ಯೆಯಲ್ಲಿ ಇವೆ. ಅವುಗಳನ್ನು ಗಮನಿಸುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲೇ ಇದೆ. ಫೇಸ್ಬುಕ್, ವಾಟ್ಸಾಪ್‍ನಂತಹ ಮಾಧ್ಯಮಗಳಲ್ಲೂ ಸಾಹಿತ್ಯದ ಗಂಭೀರ ಚರ್ಚೆಗಳಾಗುವುದಿದೆ. ಕೊರೋನ ಒಂದು ನೆಪವಾಗಿ ಮುಖ್ಯಭೂಮಿಕೆಗೆ ಬಂದ ಆನ್ಲೈನ್ ವೇದಿಕೆಗಳು, ಇತ್ತೀಚೆಗೆ ಜನಪ್ರಿಯವಾದ ಕ್ಲಬ್‍ಹೌಸ್ – ಇವನ್ನೆಲ್ಲ ನಾವು ಕಡೆಗಣಿಸುವಂತಿಲ್ಲ.

ಹಾಗೆ ನೋಡಿದರೆ, ಯುವಕರಲ್ಲಿ ಸಾಹಿತ್ಯಾಸಕ್ತಿ ಕುಸಿದಿದೆ ಎಂದು ಸಾರಾಸಗಟಾಗಿ ಹೇಳಿಬಿಡುವಂತಿಲ್ಲ. ಅವರು ಬಯಸುವ ಸಾಹಿತ್ಯ ಹಾಗೂ ಅದು ಅನಾವರಣಗೊಳ್ಳುವ ಮಾಧ್ಯಮದ ಸ್ವರೂಪ ಬದಲಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು.  ಪುಸ್ತಕ ಹಿಡಿದು ಓದುವವರಿಗಿಂತ ಮೊಬೈಲ್, ಕಂಪ್ಯೂಟರ್, ಟ್ಯಾಬ್ ಅಥವಾ ಕಿಂಡಲ್ ಮೂಲಕ ಓದುವವರ ಪ್ರಮಾಣ ಹೆಚ್ಚಾಗುತ್ತಿದೆ. ಈಗಿನ ಹೊಸ ತಲೆಮಾರಿಗೆ ಈ ಪರಿಕರಗಳು ಹೆಚ್ಚು ಆಕರ್ಷಕವೂ, ಅನುಕೂಲಕರವೂ ಆಗಿರಬಹುದು. ಅವರಿಗೆ ನಾವು ಪುಸ್ತಕಗಳ ಹಾರ್ಡ್ ಪ್ರತಿಯನ್ನೇ ಓದಿ ಎಂದು ಒತ್ತಾಯಿಸುವುದರಲ್ಲಿ ಅರ್ಥವಿಲ್ಲ. ಅವರು ಬಯಸುವ ಮಾದರಿಗೆ ಬದಲಾಯಿಸಿಕೊಡುವುದು ಹೆಚ್ಚು ಪ್ರಶಸ್ತ. ಕಾಲ ಬದಲಾದಂತೆ ಜನರ ಅವಶ್ಯಕತೆ, ಆದ್ಯತೆಗಳಲ್ಲಿ ಬದಲಾವಣೆ ಉಂಟಾಗುವುದು ವಿಚಿತ್ರವೇನೂ ಅಲ್ಲ. ಈ ಬದಲಾವಣೆಯನ್ನು ಗಮನಿಸದೆ, ಅದಕ್ಕೆ ಹೊಂದಿಕೊಳ್ಳದೆ ಹೋದರೆ ನಷ್ಟವೇ ಹೆಚ್ಚು.

‘ಸಾಹಿತ್ಯ ಮತ್ತು ಮಾಧ್ಯಮ’ ವಿಚಾರವನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡುತ್ತಾ ಹೋದರೆ ಈ ಬಗೆಯ ಆಯಾಮಗಳು ಗೊತ್ತಾಗುತ್ತಾ ಹೋಗುತ್ತವೆ. ಆದ್ದರಿಂದ ನಿರಾಶೆಗೊಳ್ಳದೆ, ಬದಲಾದ ಕಾಲದಲ್ಲಿ ಒಟ್ಟಾರೆ ಸಮಾಜ ಮಾಡಬಹುದಾದ್ದೇನು ಎಂದು ಯೋಚಿಸುವುದು, ಮತ್ತು ಇರುವ ಅವಕಾಶಗಳನ್ನು ಗರಿಷ್ಠ ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು.

- ಸಿಬಂತಿ ಪದ್ಮನಾಭ ಕೆ. ವಿ.

ಮಕ್ಕಳಿಗೇಕೆ ಪುರಾಣ ಕಥೆಗಳನ್ನು ಹೇಳಬೇಕು?

ಫೆಬ್ರವರಿ 2022ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಮೌಲ್ಯಗಳ ಕುಸಿತ ನಮ್ಮ ಕಾಲದ ಬಹುದೊಡ್ಡ ಆತಂಕಗಳಲ್ಲೊಂದು. ‘ಸಮಾಜದಲ್ಲಿ ಮೌಲ್ಯಗಳು ಅಧಃಪತನಗೊಂಡಿವೆ; ಯುವಕರಿಗೆ ಗೊತ್ತುಗುರಿಯಿಲ್ಲ; ಇದು ಹೀಗೆಯೇ ಮುಂದುವರಿದರೆ ಎಲ್ಲಿಗೆ ಹೋಗಿ ತಲುಪೀತು?’ ಎಂಬ ಪ್ರಶ್ನೆಯನ್ನು ಹಿರಿಯ ತಲೆಮಾರಿನ ಮಂದಿ ಆಗಾಗ ಕೇಳುವುದಿದೆ. ಅವರ ಪ್ರಶ್ನೆಯನ್ನು ಹಳಬರ ಹಳಹಳಿಕೆಯೆಂದು ಉಪೇಕ್ಷೆ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ನಾವು ನಿಜಕ್ಕೂ ಒಂದು ವಿಚಿತ್ರ ಗೊಂದಲಪುರದಲ್ಲಿ ಬದುಕುತ್ತಿದ್ದೇವೆ. 

ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರೆ ಇಂತಹ ಸಮಸ್ಯೆಯೇ ಬರುತ್ತಿರಲಿಲ್ಲ. ರಾಜಕಾರಣಿ, ಅಧಿಕಾರಿ, ಶಿಕ್ಷಕ, ಇಂಜಿನಿಯರ್, ವ್ಯಾಪಾರಿ, ನೌಕರ, ವೈದ್ಯ, ಪೊಲೀಸ್, ವಕೀಲ - ಇವರೆಲ್ಲ ವಾಸ್ತವವಾಗಿ ಏನು ಮಾಡಬೇಕಿತ್ತೋ ಅದನ್ನು ಮಾಡುತ್ತಿದ್ದಾರೆಯೇ? ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಬದ್ಧತೆ ಇದೆಯೇ? ಬರುವ ಉತ್ತರ ನಿರಾಸೆಯದ್ದೇ. ಯಾಕೆ ಹೀಗಾಯಿತು? ಯೋಚನೆ ಮಾಡಿದರೆ ಸಮಸ್ಯೆಯ ಮೂಲ ಅರಿವಾಗುತ್ತದೆ: ಜನರಿಗೆ ಅವರ ಬಾಲ್ಯ, ಕೌಮಾರ್ಯಗಳಲ್ಲಿ ದೊರೆಯದ ಮೌಲ್ಯಪೋಷಣೆ.

ಹೌದು, ಬಾಲ್ಯಕಾಲದಲ್ಲಿ ದೊರೆಯದ್ದು ಬೇರೆ ಯಾವಾಗ ದೊರೆತರೂ ನಿಷ್ಪ್ರಯೋಜಕವೇ. ಅದು ನಿಜವಾದ ವ್ಯಕ್ತಿತ್ವ ರೂಪುಗೊಳ್ಳುವ ಕಾಲ. ಏನನ್ನೇ ಕೊಟ್ಟರೂ ತಕ್ಷಣ ಸ್ವೀಕರಿಸುವ ಮನಸ್ಸು. ಮೆತ್ತಗಿನ ಹಸಿಮಣ್ಣಿನ ಮುದ್ದೆಯ ಹಾಗೆ. ಸದುದ್ದೇಶದಿಂದ ಹೊರಟರೆ ಅದಕ್ಕೊಂದು ಒಳ್ಳೆಯ ರೂಪ ಕೊಡಬಹುದು. ನಿಜವಾದ ಮೌಲ್ಯಪೋಷಣೆಗೆ ಅದು ಅತ್ಯಂತ ಪ್ರಶಸ್ತ ಸಮಯ. ಅದಕ್ಕಾಗಿ ಬೇರೇನೂ ಮಾಡಬೇಕಿಲ್ಲ. ನಮ್ಮ ಪುರಾಣಗಳಲ್ಲಿನ ಜೀವಪರ ಗುಣಗಳನ್ನು ಅವರಲ್ಲಿ ತುಂಬಿದರೆ ಸಾಕು. ಉಳಿದದ್ದು ತಾನಾಗಿಯೇ ನಡೆಯುತ್ತದೆ.

ಭಾರತೀಯ ಪುರಾಣಗಳು ಮೌಲ್ಯಗಳ ಮಹಾಸಾಗರಗಳು. ನಮ್ಮ ಸಂಸ್ಕೃತಿಯ ಬೇರು-ಬಿಳಲುಗಳು ಅವುಗಳಲ್ಲಿ ಹಾಸುಹೊಕ್ಕಾಗಿವೆ. ನೀತಿ-ಅನೀತಿ, ಒಳ್ಳೆಯದು-ಕೆಟ್ಟದ್ದು, ಧರ್ಮ-ಅಧರ್ಮ ಎಲ್ಲವುಗಳಿಗೂ ಉದಾಹರಣೆ ಅವುಗಳಲ್ಲಿವೆ. ಯಾವುದೇ ಕಥೆ ಮುಕ್ತಾಯವಾಗುವುದೇ ಕೆಟ್ಟ ವ್ಯಕ್ತಿ ಅಥವಾ ಕೆಟ್ಟ ಗುಣಕ್ಕೆ ಸೋಲಾಗುವಲ್ಲಿ. ಅಧರ್ಮದ ಸೋಲು, ಧರ್ಮದ ಗೆಲವು ಅವುಗಳ ಮೂಲ ತಿರುಳು. ಮಕ್ಕಳಿಗೆ ಎಳವೆಯಲ್ಲೇ ಅವುಗಳ ಪರಿಚಯ ಆಗುವುದರಿಂದ ಅಂತಹದೊಂದು ಭಾವನೆ ಅವರ ವ್ಯಕ್ತಿತ್ವದ ಭಾಗವೇ ಆಗುತ್ತದೆ.

ಪ್ರೀತಿ, ಸಹಾನುಭೂತಿ, ಸಹನೆ, ಗೌರವ, ದಯೆ, ಕರುಣೆ, ಅನುಕಂಪ, ತ್ಯಾಗ, ದಾನ, ಸ್ನೇಹ – ಮೊದಲಾದವು ಒಂದು ಉತ್ತಮ ಸಮಾಜ ಎಲ್ಲ ಕಾಲದಲ್ಲೂ ಬಯಸುವ ಮಾನವೀಯ ಗುಣಗಳು; ಅಂದಮೇಲೆ ಇಂಥವುಗಳ ಕೊರತೆಯೇ ಸಮಾಜದಲ್ಲಿ ನಾವಿಂದು ಕಾಣುವ ಅಸ್ಥಿರತೆ ಹಾಗೂ ಗೊಂದಲಗಳಿಗೆ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ನಮ್ಮ ಪುರಾಣಗಳಲ್ಲಿ ಇಂತಹ ಮೌಲ್ಯಗಳ ಪೋಷಣೆ ಧಾರಾಳವಾಗಿ ಕಾಣಸಿಗುತ್ತದೆ. ರಾಮಾಯಣ, ಮಹಾಭಾರತ, ಭಾಗವತಗಳಲ್ಲೆಲ್ಲ ದೊರೆಯುವುದು ಇಂತಹ ಆದರ್ಶಗಳ ಹುಲುಸಾದ ಫಸಲೇ. ಅವುಗಳ ಬೀಜಗಳು ನಮ್ಮ ಮಕ್ಕಳ ಮನಸ್ಸುಗಳಲ್ಲಿ ಬಿತ್ತನೆಯಾಗಬೇಕು. ಬಿತ್ತಿದಂತೆ ಬೆಳೆ ಅಲ್ಲವೇ?

ಮಕ್ಕಳಿಗೆ ಇನ್ನೇನು ಹೇಳದಿದ್ದರೂ ನಮ್ಮ ರಾಮಾಯಣ-ಮಹಾಭಾರತಗಳ ಕಥೆಗಳನ್ನು ದಾಟಿಸಲೇಬೇಕು. ಅವುಗಳನ್ನು ಹೇಳಿ ಮುಗಿಸುವ ಹೊತ್ತಿಗೆ ಎಂತೆಂತಹ ವ್ಯಕ್ತಿಗಳು, ಮೌಲ್ಯಗಳನ್ನು ಮಕ್ಕಳಿಗೆ ಪರಿಚಯ ಮಾಡಿಸಬಹುದು! ರಾಮನೆಂಬ ಒಂದು ವ್ಯಕ್ತಿತ್ವ ಸಾಕು ಮಕ್ಕಳಿಗೆ ಆದರ್ಶ ಜೀವನವೆಂದರೆ ಎಂತಹದೆಂಬುದನ್ನು ಮನದಟ್ಟು ಮಾಡಿಸಲು. ಆದರ್ಶ ಪುತ್ರ, ಆದರ್ಶ ತಂದೆ, ಆದರ್ಶ ಅಣ್ಣ, ಆದರ್ಶ ಚಕ್ರವರ್ತಿ, ಆದರ್ಶ ಪತಿ, ಆದರ್ಶ ಸ್ನೇಹಿತ- ಆತನ ವ್ಯಕ್ತಿತ್ವದ ಒಂದೊಂದು ಆಯಾಮವೂ ಆದರ್ಶಮಯ. ವಯಸ್ಸಾದ ತಂದೆ-ತಾಯಿಯರೊಂದಿಗೆ ಮಕ್ಕಳು ಹೇಗೆ ವ್ಯವಹರಿಸಬೇಕು, ಮಕ್ಕಳೊಂದಿಗೆ ಎಂತಹ ಸಂಬಂಧ ಹೊಂದಿರಬೇಕು, ಸಹೋದರರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಹೇಗೆ ನಡೆದುಕೊಳ್ಳಬೇಕು, ರಾಜನಾದವನು ಪ್ರಜೆಗಳನ್ನು ಹೇಗೆ ಪಾಲಿಸಬೇಕು ಎಲ್ಲವಕ್ಕೂ ಒಂದು ಮಾದರಿ ಹಾಕಿಕೊಟ್ಟವನು ಶ್ರೀರಾಮ. ಅದಕ್ಕೇ ಅವನು ಜ್ಞಾನಿಗಳಿಂದ ಪುರುಷೋತ್ತಮನೆಂದು ಕರೆಸಿಕೊಂಡದ್ದು.

ಮಕ್ಕಳು ಮೌಲ್ಯಗಳನ್ನು ಬಹುಬೇಗನೆ ಗುರುತಿಸಿಕೊಳ್ಳುತ್ತಾರೆ ಮತ್ತು ಅವುಗಳು ತಮಗೆ ಬೇಕಾದವೆಂದು ಆರಿಸಿಕೊಳ್ಳುತ್ತಾರೆ. ರಾಮ, ಭರತ, ಲಕ್ಷ್ಮಣ, ಸೀತೆ, ಆಂಜನೇಯ, ಅಂಗದ, ಜಟಾಯು, ಶಬರಿ, ಗುಹ, ವಿಭೀಷಣ, ಜಾಂಬವ, ಮಂಡೋದರಿ- ಇಂಥವರಿಂದ ಒಳ್ಳೆಯತನ ಎಂದರೆ ಏನೆಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹೇಗಿರಬಾರದು ಎಂಬುದನ್ನು ಕೈಕೇಯಿ, ಮಂಥರೆ, ವಾಲಿ, ಶೂರ್ಪನಖಿ, ರಾವಣ, ಕುಂಭಕರ್ಣ ಮುಂತಾದ ಪಾತ್ರಗಳಿಂದ ಅರ್ಥ ಮಾಡಿಕೊಳ್ಳುತ್ತಾರೆ. ಪುಟ್ಟ ಅಳಿಲಿನ ಕಥೆಯೂ ಅವರಲ್ಲೊಂದು ದೊಡ್ಡ ಕನಸನ್ನು ತುಂಬಬಲ್ಲುದು. ಭರತದ ಭ್ರಾತೃಪ್ರೇಮ, ಹನೂಮಂತನ ಭಕ್ತಿ, ವಿಭೀಷಣದ ಧಾರ್ಮಿಕತೆ, ಶಬರಿಯ ಶುದ್ಧಾಂತಃಕರಣ ಮಕ್ಕಳಲ್ಲೊಂದು ಹೊಸ ಲೋಕವನ್ನು ತೆರೆಯಬಹುದು.

ಮಹಾಭಾರತವೇ ಇನ್ನೊಂದು ಜಗತ್ತು. ಧರ್ಮರಾಯ, ಶ್ರೀಕೃಷ್ಣ, ಭೀಷ್ಮ, ಪಾಂಚಾಲಿ, ಭೀಮ, ಏಕಲವ್ಯ, ದ್ರೋಣ, ಕರ್ಣ, ವಿದುರ, ಸುಧಾಮ, ಅಭಿಮನ್ಯು ಮುಂತಾದ ಹತ್ತುಹಲವು ಪಾತ್ರಗಳು ಮಕ್ಕಳನ್ನು ಇನ್ನಿಲ್ಲದಂತೆ ಆಕರ್ಷಿಸಬಲ್ಲವು. ದುರ್ಯೋಧನ, ಶಕುನಿ, ಕೀಚಕ, ಶಿಶುಪಾಲ, ಜರಾಸಂಧ ಮುಂತಾದ ಪಾತ್ರಗಳನ್ನು ನೋಡಿ ಬದುಕಿನಲ್ಲಿ ಹೇಗೆ ಇರಬಾರದೆಂದು ಅವರು ಅರ್ಥಮಾಡಿಕೊಳ್ಳಬಲ್ಲರು. ಎಲ್ಲ ಪುರಾಣ ಕಥೆಗಳ ಅಂತಿಮ ಸಾರ ಒಂದೇ- ಒಳ್ಳೆಯದಕ್ಕೆ ಒಳ್ಳೆಯದಾಗುತ್ತದೆ, ಕೆಟ್ಟದ್ದರಿಂದ ಕೆಟ್ಟದ್ದಾಗುತ್ತದೆ. ಅಧರ್ಮಕ್ಕೆ ಸೋಲು, ಧರ್ಮಕ್ಕೆ ವಿಜಯ. 

ಪುರಾಣಗಳೆಂದರೆ ವರ್ತಮಾನಕ್ಕೆ ವಿರುದ್ಧವಾದವು, ಬದಲಾದ ಕಾಲಕ್ಕೆ ಅಗತ್ಯವಿರುವ ಮೌಲ್ಯಗಳಿಗೆ ವಿರುದ್ಧವಾದವು ಎಂಬೊಂದು ತಪ್ಪು ಕಲ್ಪನೆ ಇದೆ. ಆದರೆ ನಾವು ಅರ್ಥಮಾಡಿಕೊಳ್ಳಬೇಕಿರುವುದೆಂದರೆ ಪುರಾಣಗಳೆಂದರೆ ಹಳಸಲು ಕಥೆಗಳಲ್ಲ. ಪ್ರತಿಗಾಮಿ ಚಿಂತನೆಗಳಲ್ಲ. ಅವು ವರ್ತಮಾನದ ಪ್ರತಿಬಿಂಬಗಳೂ ಹೌದು. ಈ ಪುರಾಣಗಳು ಎಷ್ಟು ಹೊಸತಾಗಿವೆಯೆಂದರೆ ಆಧುನಿಕ ಕಾಲದೊಂದಿಗೂ ಯಶಸ್ವಿಯಾಗಿ ಸಂವಾದ ನಡೆಸಬಲ್ಲವು. ಪ್ರಜಾಪ್ರಭುತ್ವ. ಜಾತ್ಯತೀತತೆ, ಸಮಾನತೆ, ಹೆಣ್ತನ, ಸಾಮರಸ್ಯ, ಉದಾರಶೀಲತೆ, ಅಹಿಂಸೆ ಮೊದಲಾದ ‘ಆಧುನಿಕ’ ಮೌಲ್ಯಗಳು ಪುರಾಣಗಳಲ್ಲಿಯೂ ಧಾರಾಳವಾಗಿ ಸಿಗುತ್ತವೆ. ಜಾತಿ, ವರ್ಗಗಳಿಗಿಂತ ವಿದ್ಯೆ ಮತ್ತು ಗುಣ ಮುಖ್ಯ ಎಂಬ ಚಿಂತನೆಯನ್ನು ಪುರಾಣ ಕಥೆಯೊಂದರ ಮೂಲಕವೂ ಮಕ್ಕಳಿಗೆ ತಿಳಿಹೇಳಲು ಸಾಕಷ್ಟು ಅವಕಾಶ ಇದೆ.

ಪುರಾಣಲೋಕದಲ್ಲಿ ನಮಗೆದುರಾಗುವ ಬಾಲಕರಂತೂ ಮಕ್ಕಳಿಗೆ ಹೆಚ್ಚು ಆಪ್ತ ಪಾತ್ರಗಳೆನಿಸಬಲ್ಲವು. ಧ್ರುವ, ನಚಿಕೇತ, ಮಾರ್ಕಂಡೇಯ, ಪ್ರಹ್ಲಾದ, ಜಡಭರತ, ಅಭಿಮನ್ಯು, ಸುಧನ್ವ, ಬಭ್ರುವಾಹನ, ಅಷ್ಟಾವಕ್ರ, ಭಗೀರಥ, ಸುಧಾಮ, ಸತ್ಯಕಾಮ ಮೊದಲಾದ ಉದಾತ್ತ ಬಾಲಪಾತ್ರಗಳು ಮಕ್ಕಳಲ್ಲಿ ಅಚ್ಚಳಿಯದೆ ಉಳಿಯಬಲ್ಲವು. ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕೇಸಿಗುತ್ತದೆ ಎಂದು ಸಾರುವ ಭಗೀರಥ, ಧ್ರುವ ಮುಂತಾದವರ ಕಥೆ; ಎಲ್ಲರೂ ಸಮಾನರೆಂದು ಸಾರುವ ಜಡಭರತನ ಇತಿಹಾಸ; ಬುದ್ಧಿ, ಸಂಸ್ಕಾರ, ಶ್ರದ್ಧೆ ಇದ್ದರೆ ಆಯುಷ್ಯವೂ ಹೆಚ್ಚುತ್ತದೆ ಎಂಬ ಮಾರ್ಕಂಡೇಯನ ಚರಿತ್ರೆ, ಸಾತ್ವಿಕತೆಯದ್ದೇ ಎಂದಿಗೂ ಗೆಲುವು ಎಂಬ ಪ್ರಹ್ಲಾದನ ನಿದರ್ಶನ, ಅಂತರ್ಯದ ವಿದ್ಯೆಗೆ ಶಾಶ್ವತ ಮೌಲ್ಯ ಎಂಬ ಸಾರವುಳ್ಳ ಜಡಭರತನ ಕಥೆ; ವಿದ್ಯೆ ಕಲಿವ ಹಂಬಲವುಳ್ಳವನಿಗೆ ಯಾವ ಸಮಸ್ಯೆಯೂ ಅಡ್ಡಿಯಲ್ಲ ಎಂದು ಪ್ರತಿಪಾದಿಸುವ ಏಕಲವ್ಯನ ಉದಾಹರಣೆ... ಮಕ್ಕಳಿಗೆ ಎಲ್ಲವೂ ಅರ್ಥವಾಗುತ್ತದೆ. ಒಂದೊಂದು ಕಥೆಯನ್ನು ಕೇಳುತ್ತಿದ್ದ ಹಾಗೆ ಅದು ಅವರ ವ್ಯಕ್ತಿತ್ವದ ಭಾಗವಾಗುತ್ತಾ ಹೋಗುತ್ತದೆ. ಅವರಿಗೆ ಗೊತ್ತಿಲ್ಲದಂತೆ ಕಥೆಗಳು ಅವರೊಳಗೆ ಹೊಸ ಜಗತ್ತನ್ನು ತೆರೆಯುತ್ತಾ ಭವಿಷ್ಯದ ಸುಂದರ ಬದುಕಿಗೆ ಅವರನ್ನು ಸಿದ್ಧಗೊಳಿಸುತ್ತವೆ. 

ಸತ್ಯಹರಿಶ್ಚಂದ್ರನ ಕುರಿತಾದ ಕಥೆ, ಶ್ರವಣಕುಮಾರನ ಪಿತೃಭಕ್ತಿಯ ದೃಷ್ಟಾಂತ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿತೆಂಬುದನ್ನು ಮಹಾತ್ಮ ಗಾಂಧೀಜಿಯಂಥವರೇ ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ. ಪುರಾಣಗಳಿಂದಾಗಿ ತಮ್ಮ ಬದುಕು ಹದಗೆಟ್ಟಿತೆಂದು ಹೇಳಿದವರು ಯಾರೂ ಇಲ್ಲ. ಅವು ಜೀವನವನ್ನು ಪಕ್ವಗೊಳಿಸುವ ಪ್ರಕ್ರಿಯೆ ವಿಸ್ಮಯಕಾರಿ. ಹಾಗೆಂದು ಪುರಾಣಗಳಲ್ಲಿರುವುದನ್ನೆಲ್ಲ ಇದ್ದಹಾಗೇ ಸ್ವೀಕರಿಸಬೇಕೆಂದು ಸ್ವತಃ ನಮ್ಮ ಹಿರಿಯರೇ ಹೇಳಿಲ್ಲ. ಕಾಳಿದಾಸನ ‘ಮಾಲವಿಕಾಗ್ನಿಮಿತ್ರಮ್’ ನಾಟಕದಲ್ಲಿ ಬರುವ ಮಾತಿದು:

ಪುರಾಣಮಿತ್ಯೇವ ನ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತ್ಯವದ್ಯಂ |

ಸಂತಃ ಪರೀಕ್ಷ್ಯಾನ್ಯತರದ್ಭಜನ್ತೇ, ಮೂಢಃ ಪರಪ್ರತ್ಯಯನೇಯಬುದ್ಧಿಃ ||

ಅಂದರೆ, ಹಳೆಯದೆಂದ ಮಾತ್ರಕ್ಕೆ ಎಲ್ಲ ಕಾವ್ಯವೂ ಚೆನ್ನೆಂದು ಹೇಳಲಾಗದು; ಹೊಸತೆಲ್ಲವೂ ಕೆಟ್ಟವಾಗವು. ವಿವೇಕಿಗಳು ತಮ್ಮ ಬುದ್ಧಿಯಿಂದ ಪರೀಕ್ಷಿಸಿ, ಉತ್ತಮ ಕೃತಿಯನ್ನು ಪುರಸ್ಕರಿಸುತ್ತಾರೆ. ಮೂಢರು ಇನ್ನೊಬ್ಬರ ಹೇಳಿಕೆಯನ್ನು ಅನುಸರಿಸಿ ಅದರಂತೆ ನಡೆಯುತ್ತಾರೆ.

ಮಕ್ಕಳಲ್ಲಿ ಅಂತಹ ವಿವೇಚನಾಗುಣವನ್ನು ಬೆಳೆಸುವ ಕರ್ತವ್ಯವೂ ನಮ್ಮಲ್ಲಿದೆ. ಒಳ್ಳೆಯದು ಕೆಟ್ಟದನ್ನು ಗುರುತಿಸಿ ಸ್ವತಂತ್ರ ತೀರ್ಮಾನಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಅವರು ಕಾಲಕ್ರಮೇಣ ಪಡೆದುಕೊಳ್ಳುತ್ತಾರೆ. ಅದಕ್ಕೆ ಸೂಕ್ತ ಮೂಲಪೋಷಣೆಯನ್ನು ನೀಡುವ ಜವಾಬ್ದಾರಿ ಹಿರಿಯರದ್ದು. ಅದನ್ನು ಸಕಾಲದಲ್ಲಿ ಮಾಡದೆ, ಹೊಸ ತಲೆಮಾರನ್ನು ಹಳಿಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಾವು ನಿರಾಶಾವಾದಿಗಳಾಗಬಾರದು ನಿಜ, ಆದರೆ ಆಶಾವಾದಿಗಳಾಗಿರುವುದಕ್ಕೂ ಒಂದು ಯೋಗ್ಯತೆ ಬೇಕು.

- ಸಿಬಂತಿ ಪದ್ಮನಾಭ ಕೆ. ವಿ.