ಇವರು ಗಾಂಧೀತತ್ವಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವುದಿಲ್ಲ. ಗಾಂಧೀಜಿಯವರ ಮೌಲ್ಯಾದರ್ಶಗಳ ಮೇಲೆ ಬಂದಿರುವ ನೂರಾರು ಬೃಹತ್ ಗ್ರಂಥಗಳನ್ನೂ ಇವರು ಓದಿಲ್ಲ. ಗಾಂಧೀಜಿ ಹೇಳಿಕೊಟ್ಟ ಸತ್ಯಾಗ್ರಹದಂತಹ ಅಸ್ತ್ರಗಳನ್ನೂ ಇವರು ಬಳಸಿದ್ದಿಲ್ಲ. ಆದರೂ ಇವರೊಬ್ಬ ನಿಜವಾದ ಗಾಂಧೀವಾದಿ ಎಂದು ಇವರನ್ನು ಭೇಟಿಯಾದಂದಿನಿಂದ ನನಗೆ ಅನಿಸುತ್ತಲೇ ಇದೆ.
ಹೆಚ್ಚು ಸಮಯವೇನೂ ಆಗಿಲ್ಲ. ಒಂದೂವರೆ ತಿಂಗಳ ಹಿಂದಿನ ವಿಚಾರ. ಸ್ವಾತಂತ್ರ್ಯೋತ್ಸವದ ಸಂದರ್ಭ ಲೇಖನವೊಂದರ ತಯಾರಿಗೆ ತೊಡಗಿದ್ದೆ. ರಾಷ್ಟ್ರಧ್ವಜದ ಬಗ್ಗೆ ಬರೆಯಬೇಕೆಂಬುದು ನನ್ನ ಯೋಚನೆಯಾಗಿತ್ತು. ರಾಷ್ಟ್ರಧ್ವಜದ ಬಗೆಗೆಂದರೆ ಸುಮ್ಮನೆ ಅದರ ಬಣ್ಣ, ಅವು ಸೂಚಿಸುವ ಅರ್ಥ ಅಥವಾ ಅದರ ಹುಟ್ಟಿನ ಹಿನ್ನೆಲೆ...ಇತ್ಯಾದಿ ಚರ್ವಿತಚರ್ವಣ ಅಲ್ಲ; ಬದಲಿಗೆ, ಧ್ವಜ ಎಲ್ಲಿ ತಯಾರಾಗುತ್ತೆ, ಯಾರು ತಯಾರಿಸುತ್ತಾರೆ, ಅವರಿಗೆ ಇದೇ ಉದ್ಯೋಗವೇ, ನಮ್ಮೂರಿಗೆ ಧ್ವಜ ಎಲ್ಲಿಂದ ಬರುತ್ತೆ, ಅದನ್ನು ಯಾರು ಬೇಕಾದರೂ ತಯಾರಿಸಬಹುದೇ, ಯಾರು ಬೇಕಾದರೂ ಮಾರಾಟ ಮಾಡಬಹುದೇ, ಅದಕ್ಕೇನಾದರೂ ವಿಶೇಷ ನಿಯಮಗಳಿವೆಯೇ...ಇಂತಹದೆಲ್ಲ ವಿವರಗಳಿಂದ ಕೂಡಿದ ಒಂದು ಬರಹವಾಗಬೇಕೆಂದು ವಿವರ ಕಲೆಹಾಕುತ್ತಿದ್ದೆ.
ಒಂದಷ್ಟು ಮಂದಿ ಹಿರಿಯರನ್ನು ಸಂಪರ್ಕಿಸಿದ ಮೇಲೆ - ಅಧಿಕೃತ ರಾಷ್ಟ್ರಧ್ವಜಗಳು ಮಂಗಳೂರಿನಲ್ಲಿ ತಯಾರಾಗುವುದೇ ಇಲ್ಲ, ಅವು ಹುಬ್ಬಳ್ಳಿ ಅಥವಾ ಮುಂಬೈಗಳಿಂದ ಬರುತ್ತವೆ; ಇಲ್ಲಿ ರಸ್ತೆ ಬದಿಯಲ್ಲಿ ಕಾಣಸಿಗುವುದು "ಒರಿಜಿನಲ್" ತಿರಂಗಾ ಅಲ್ಲ; ಬಣ್ಣ, ಅಳತೆ, ವಸ್ತ್ರ ಮುಂತಾದವುಗಳನ್ನೆಲ್ಲ ಕಾನೂನು ಪ್ರಕಾರ ಬಳಸಿಕೊಂಡು ತಯಾರಾಗುವ ಧ್ವಜಗಳು ಮಂಗಳೂರಿನಲ್ಲಿ ಎರಡೇ ಕಡೆ ಸಿಗುವುದು; ಒಂದು ಕಾರ್ನಾಡು ಸದಾಶಿವ ರಾವ್ ಖಾದಿ ಭಂಡಾರ, ಇನ್ನೊಂದು ಖಾದಿ ಮತ್ತು ಗ್ರಾಮೋದ್ಯೋಗ ಭವನ - ಎಂದೆಲ್ಲ ಒಂದೊಂದೆ ತಿಳಿಯಿತು.
ಸರಿ, ಮತ್ತೆ ಇವೆರಡರ ತಲಾಶಿಗೆಂದು ಹೊರಟೆ. ಒಂದಿಬ್ಬರನ್ನು ಕೇಳಿದೆ, ಅವರೋ ನನ್ನನ್ನು ಹಳೆಶಿಲಾಯುಗದಿಂದ ಬಂದವನಂತೆ ವಿಚಿತ್ರವಾಗಿ ನೋಡಿ ತಮಗರಿಯದು ಎಂದರು. ಕೊನೆಗೂ ಒಬ್ಬರು ಖಾದಿ ಭಂಡಾರದ ಅಡ್ರೆಸ್ ಹೇಳಿದರು: "ಕೆ.ಎಸ್.ರಾವ್ ರೋಡಿನಲ್ಲಿ ಹೋಗುತ್ತಾ ಇರಿ, ಬಲಗಡೆಗೆ ನಡೆಯುತ್ತಾ ಇದ್ದರೆ ಒಂದು ದೊಡ್ಡ ವೈನ್ ಶಾಪ್ ಸಿಗುತ್ತೆ, ಅದರ ಹಿಂದಿರುವುದೇ ಖಾದಿ ಭಂಡಾರ..."! (ಖಾದಿ ಭಂಡಾರದ ಅಡ್ರೆಸ್ ಕೇಳಿದರೆ ವೈನ್ ಶಾಪಿನ ಕೇರಾಫ್ ಹಾಕಿ ಹೇಳುವ ಕಾಲ ಬಂತಲ್ಲಾ ಎಂದು ಆ ಕ್ಷಣ ನನಗಾದ ಸೋಜಿಗದ ಮೇಲೆ ಬರೆಯುತ್ತಾ ಹೋದರೆ ಅದೇ ಒಂದು ನೀಳ್ಗತೆಯಾದೀತು, ಇರಲಿ.)
ಹಾಗೆ ಖಾದಿ ಭಂಡಾರ ಹೊಕ್ಕ ನನಗೆ ಸಿಕ್ಕಿದ್ದು ಎಪ್ಪತ್ತೇಳು ವರ್ಷ ಪ್ರಾಯದ ಸದಾಶಿವ. "ಇವರು ಗಾಂಧೀತತ್ವಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವುದಿಲ್ಲ..." ಇತ್ಯಾದಿ ಆರಂಭದಲ್ಲಿ ಹೇಳಿದೆನಲ್ಲ, ಅದು ಇವರ ಬಗೆಗೇ. ನಾನು ಕೇಳಿದ ಅಷ್ಟೂ ವಿವರಗಳನ್ನು ತುಂಬ ಸಂಯಮ-ಪ್ರೀತಿಯಿಂದ ಹೇಳಿದರು ಹತ್ತಿಯಂತಹಾ ಬಿಳಿತಲೆ ಹೊಂದಿರುವ ಈ ಸದಾಶಿವಜ್ಜ. ಅವರ ಮಾತು ಕೇಳುತ್ತಿದ್ದಂತೆ ನಾನು ಬರೆಯಹೊರಟ ವಿಷಯಕ್ಕಿಂತಲೂ ಈ ವ್ಯಕ್ತಿಯೇ ಹೆಚ್ಚು ಕುತೂಹಲಕಾರಿಯಾಗಿದ್ದಾರಲ್ಲ ಅನಿಸಿತು. ಒಂದು ಹಂತದಲ್ಲಿ ನಾನು ಸಂಹ್ರಹಿಸಿದ ಅಷ್ಟೂ ವಿವರಗಳನ್ನು ಬದಿಗಿರಿಸಿ ಇವರ ಬಗೆಗೇ ಬರೆದರೇನು ಅಂದುಕೊಂಡೆ. ಆದರೆ ಹಾಗೆ ಮಾಡುವುದಕ್ಕಿಂತ, ಕೊಂಚ ಸಮಯ ಕಾದು ಗಾಂಧೀ ಜಯಂತಿಯಂದೇ ಬರೆದರೆ ಹೆಚ್ಚು ಸಮಂಜಸವೂ ಸ್ವಾರಸ್ಯಕರವೂ ಆಗಿರುತ್ತದೆ ಎಂದು ನಿರ್ಧರಿಸಿದೆ. ಆ ಸಂದರ್ಭಕ್ಕೆ ನಾನು ಪ್ಲಾನ್ ಮಾಡಿದ್ದನ್ನೇ ಬರೆದೆ.
ನಿನ್ನೆ ನೆನಪಿಟ್ಟು ಮತ್ತೆ ಸದಾಶಿವಜ್ಜನನ್ನು ಭೇಟಿಯಾದೆ. ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ದರಕಡಿತದಲ್ಲಿ ಖಾದಿ ಬಟ್ಟೆಬರೆ ಸಿಗುತ್ತಿದ್ದುದರಿಂದ ಅಜ್ಜ ಫುಲ್ ಬ್ಯುಸಿ ಆಗಿದ್ದರು. ಆದರೂ ಸುಮಾರು ಒಂದೂವರೆ ಗಂಟೆ ಅವರ ಬೆನ್ನ ಹಿಂದೆ ಬಿದ್ದು ಅವರ ಪೂರ್ತಿ ಕಥೆ ಕೇಳಿದೆ. "ನನ್ನದೇನಿದೆ ಬರೆಯುವಂತಹಾ ಕಥೆ!" ಅನ್ನುತ್ತಲೇ ಸದಾಶಿವ ತಮ್ಮದೇ ಶೈಲಿಯಲ್ಲಿ ತಮ್ಮ ಅಟೋಬಯೋಗ್ರಫಿಯನ್ನು ನನ್ನೆದುರು ತೆರೆದಿಟ್ಟರು.
(ಮುಂದುವರಿಯುವುದು...!)
2 ಕಾಮೆಂಟ್‌ಗಳು:
ನಾನು ಆ ಖಾದಿ ಭಂಡಾರಕ್ಕೆ ಆಗಾಗ ಹೋಗಿದ್ದೇನೆ...ತಲೆ ಅಲ್ಲಾಡಿಸುತ್ತಲೇ ನಮ್ಮೊಂದಿಗೆ ಮಾತನಾಡುವ ಆ ಅಜ್ಜನ ಬಗ್ಗೆ ತಿಳಿಯುವ ಕುತೂಹಲವಿದ್ದರೂ ಕೇಳಿರಲಿಲ್ಲ..ಈಗ ನೀವು ಅವರ ಬಗ್ಗೆ ಬರೆದಿದ್ದು ಒಳ್ಳೆಯದಾಯಿತು...ಮುಂದಿನ ಸಂಚಿಕೆಗೆ ಕಾಯುತ್ತಿದ್ದೇನೆ.
ವೇಣು, ನಿಮ್ಮ ಖಾದಿ ಪ್ರೀತಿಯನ್ನು ನಾನೂ ಗಮನಿಸಿದ್ದೇನೆ. ಅಜ್ಜನ ಬಗ್ಗೆ ಕುತೂಹಲ ತೋರಿಸಿದ್ದಕ್ಕೆ ಥ್ಯಾಂಕ್ಸ್. ಇಗೋ ಎರಡನೇ ಕಂತು ಬರೆದಿದ್ದೇನೆ. ಗಮನಿಸಿ.
ಕಾಮೆಂಟ್ ಪೋಸ್ಟ್ ಮಾಡಿ