ಸ್ವಾಮಿ ವಿವೇಕಾನಂದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ವಾಮಿ ವಿವೇಕಾನಂದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಫೆಬ್ರವರಿ 4, 2021

ಸ್ವಾಮಿ ವಿವೇಕಾನಂದರು ಕಂಡ ಶಿಕ್ಷಣದ ಕನಸು

ಜನವರಿ 2021ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಮಾನವನಲ್ಲಿರುವ ಅಭಿಜಾತ ಪರಿಪೂರ್ಣತೆಯ ಅಭಿವ್ಯಕ್ತಿಯೇ ಶಿಕ್ಷಣ – ಎಂಬುದು ಸ್ವಾಮಿ ವಿವೇಕಾನಂದರ ಬಹುಪ್ರಸಿದ್ಧ ವಾಣಿ.
ಶಿಕ್ಷಣದ ಉದ್ದೇಶ ಏನು, ನಮ್ಮ ದೇಶದ ಶಿಕ್ಷಣದಲ್ಲಿರುವ ಲೋಪದೋಷಗಳೇನು, ಅವುಗಳನ್ನು ಹೋಗಲಾಡಿಸಲು ನಾವು ಮಾಡಬೇಕಾದ್ದೇನು ಎಂಬುದನ್ನು ಶತಮಾನದ ಹಿಂದೆಯೇ ವಿಸ್ತøತ ಪರಿಶೀಲನೆಗೆ ಒಳಪಡಿಸಿದವರು ಅವರು. ಇಷ್ಟು ವರ್ಷಗಳ ನಂತರ ಅವರ ಮಾತುಗಳನ್ನು ನೆನಪಿಗೆ ತಂದುಕೊಂಡರೆ ಎರಡು ಅಂಶಗಳು ಸ್ಪಷ್ಟವಾಗುತ್ತವೆ: ಒಂದು, ದಾರ್ಶನಿಕರ ಮಾತು ಸಾರ್ವಕಾಲಿಕ ಸತ್ಯ, ಅವು ದೇಶಕಾಲಗಳನ್ನು ಮೀರಿನಿಲ್ಲುವಂಥವು; ಎರಡು: ನೂರು ವರ್ಷ ಕಳೆದರೂ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಮುಖ ದೋಷಗಳು ಹಾಗೆಯೇ ಉಳಿದುಕೊಂಡಿವೆ – ಎಂಬುದು. ಮೊದಲನೆಯದ್ದು ಹೆಮ್ಮೆಯ ವಿಚಾರವಾದರೆ, ಎರಡನೆಯದ್ದು ಆತ್ಮಾವಲೋಕನವನ್ನು ಅಪೇಕ್ಷಿಸುವ ಅಂಶ.

ಆರಂಭದಲ್ಲೇ ಹೇಳಿರುವ Education is the manifestation of perfection already in man – ಶಿಕ್ಷಣವೆಂದರೆ ವ್ಯಕ್ತಿಯಲ್ಲಿರುವ ಅಭಿಜಾತ ಪರಿಪೂರ್ಣತೆಯನ್ನು ಮತ್ತೆ ಅಭಿವ್ಯಕ್ತಿಸುವುದು ಎಂಬ ಮಾತು ವಿವೇಕಾನಂದರಿಗೆ ಶಿಕ್ಷಣದ ಬಗೆಗಿದ್ದ ಒಟ್ಟಾರೆ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಒಬ್ಬೊಬ್ಬ ಜೀವಿಯೂ ಪರಾಶಕ್ತಿಯ ಸೃಷ್ಟಿ; ಪ್ರತಿಯೊಬ್ಬನ ಒಳಗಿರುವುದೂ ಅತ್ಯಂತ ಶ್ರೇಷ್ಠ ಆತ್ಮ; ಶಿಕ್ಷಣವೆಂದರೆ ವ್ಯಕ್ತಿಗೆ ಹೊಸದೇನನ್ನೂ ಹೇಳಿಕೊಡುವುದಲ್ಲ; ಆತನಲ್ಲಿ ಎಲ್ಲವೂ ಹುಟ್ಟಿನಿಂದಲೇ, ಸ್ವಾಭಾವಿಕವಾಗಿಯೇ ಇರುತ್ತದೆ; ಅದು ಸಮಗ್ರವಾಗಿ ಅಭಿವ್ಯಕ್ತಗೊಳ್ಳುವಂತೆ ಮಾಡಿದರಷ್ಟೇ ಸಾಕು- ಎಂಬ ಅವರ ಚಿಂತನೆ ವಿಸ್ಮಯಕಾರಿಯಾದದ್ದು. ಮುಂದೆ ಬಂದ ಗಾಂಧೀ, ಕುವೆಂಪು ಮುಂತಾದ ಮಹನೀಯರೆಲ್ಲ ಶಿಕ್ಷಣದ ಕುರಿತಾಗಿ ವ್ಯಕ್ತಪಡಿಸಿದ್ದೂ ಇದೇ ಚಿಂತನೆಯನ್ನು.

ನಿಷೇಧಮಯ ಶಿಕ್ಷಣ

ವಿವೇಕಾನಂದರಿಗೆ ಇದ್ದ ಆತಂಕವೆಂದರೆ ಹುಟ್ಟಿನಿಂದಲೇ ಶ್ರೇಷ್ಠವಾಗಿರುವ ಜೀವರುಗಳನ್ನು ಶಿಕ್ಷಣವೆಂಬ ಹೆಸರಿನಲ್ಲಿ ಹಾಳುಗೆಡಹುತ್ತಿದ್ದೇವಲ್ಲ ಎಂಬುದು. ನಮ್ಮ ಶಿಕ್ಷಣವೆಲ್ಲ ನಿಷೇಧಾತ್ಮಕವಾಗಿದೆ; ವ್ಯಕ್ತಿಯನ್ನು ಬೆಳೆಸುವ ಬದಲು ಅದು ಆತನನ್ನು ಇನ್ನಷ್ಟು ನಿಸ್ಸತ್ವಗೊಳಿಸುತ್ತದೆ ಎಂಬುದು ಅವರಿಗಿದ್ದ ಬೇಸರ. “ಇದು ಪುರುಷಸಿಂಹರನ್ನು ಮಾಡುವ ವಿದ್ಯಾಭ್ಯಾಸವಲ್ಲ. ಇದು ಕೇವಲ ನಿಷೇಧಮಯವಾದುದು. ನಿಷೇಧಮಯ ಶಿಕ್ಷಣ ಮೃತ್ಯುವಿಗಿಂತ ಘೋರವಾದುದು” ಎಂದು ಎಚ್ಚರಿಸುತ್ತಾರೆ ಅವರು. ನಮ್ಮ ಶಿಕ್ಷಣ ಅದನ್ನು ಮಾಡಬೇಡ, ಇದನ್ನು ಮಾಡಬೇಡ ಎಂದು ಬೋಧಿಸುತ್ತದೆಯೇ ಹೊರತು, ಇದನ್ನು ಮಾಡು ಎಂದು ವಿದ್ಯಾರ್ಥಿಗೆ ಸ್ಪಷ್ಟ ನಿರ್ದೇಶನವನ್ನು ನೀಡುವಲ್ಲಿ ಸೋತಿದೆ ಎಂಬುದೇ ಅವರ ಭಾವನೆ.

ಆತ್ಮವಿಶ್ವಾಸ, ಧನಾತ್ಮಕ ಚಿಂತನೆಯನ್ನು ಮೂಡಿಸಬೇಕಾದ ಶಿಕ್ಷಣ ವ್ಯಕ್ತಿಗಳಲ್ಲಿ ಕೇವಲ ನೇತ್ಯಾತ್ಮಕ ಚಿಂತನೆಗಳನ್ನು ಬೆಳೆಸುತ್ತಾ ಹೋದರೆ ಅದು ಅವರನ್ನು ಕೊಂದಂತೆಯೇ ಅಲ್ಲವೇ ಎಂಬುದು ವಿವೇಕಾನಂದರ ಪ್ರಶ್ನೆ. “ಮಗು ಶಾಲೆಯಲ್ಲಿ ಕಲಿಯುವ ಮೊದಲನೇ ಪಾಠವೇ ತನ್ನ ತಂದೆ ಮೂರ್ಖ ಎಂದು ತಿಳಿಯುವುದು. ಎರಡನೆಯದೇ ತನ್ನ ಅಜ್ಜ ಹುಚ್ಚ ಎಂದು ತಿಳಿಯುವುದು. ಮೂರನೆಯದೇ ಗುರುಗಳೆಲ್ಲ ಮಿಥ್ಯಾಚಾರಿಗಳು ಎಂಬುದು. ನಾಲ್ಕನೆಯದೇ ನಮ್ಮ ಶಾಸ್ತ್ರಗಳೆಲ್ಲ ಸುಳ್ಳಿನ ಕಂತೆ ಎಂಬುದು. ಮಗುವಿಗೆ ಹದಿನಾರು ವರ್ಷಗಳು ಆಗುವ ಹೊತ್ತಿಗೆ ಅವನೇ ಒಂದು ಕೆಲಸಕ್ಕೆ ಬಾರದ ಕಂತೆ ಆಗುವನು. ನಿರ್ಜೀವವಾಗಿ ನಿತ್ರಾಣವಾಗುವನು” ಎನ್ನುತ್ತಾರೆ ಸ್ವಾಮೀಜಿ.

ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು, ಶ್ರೇಷ್ಠತೆಯನ್ನು ಅವರಿಗೆ ಮನದಟ್ಟು ಮಾಡುವಲ್ಲಿ ಶಿಕ್ಷಣ ಸೋತಿದೆ ಎಂಬುದು ಅವರ ಅಭಿಮತ. “ಹುಡುಗರಾದಾಗಿನಿಂದಲೂ ನಮಗೆ ನಿಷೇಧಮಯ ವಿದ್ಯಾಭ್ಯಾಸವೇ ಆಗಿದೆ. ನಾವು ಯಾವ ಕೆಲಸಕ್ಕೂ ಬಾರದವರೆಂಬುದನ್ನು ಮಾತ್ರ ತಿಳಿದುಕೊಂಡಿದ್ದೇವೆ. ನಮ್ಮ ದೇಶದಲ್ಲಿ ಮಹಾಪುರುಷರು ಜನಿಸಿದ್ದರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ನಾವೇ ಸ್ವತಂತ್ರವಾಗಿ ಕೆಲಸಮಾಡುವುದನ್ನು ಕಲಿತಿಲ್ಲ. ನಾವು ಬರೀ ದೌರ್ಬಲ್ಯಗಳನ್ನು ಕಲಿತಿರುವೆವು” ಎನ್ನುತ್ತಾರೆ ಅವರು.

ಯಾವುದರ ಪರಿಣಾಮವಾಗಿ ಹಲವು ತಲೆಮಾರಿನಿಂದ ಇಚ್ಛಾಶಕ್ತಿಯ ವಿಕಾಸಕ್ಕೆ ಅಡಚಣೆಯುಂಟಾಗಿದೆಯೋ, ಇಲ್ಲ ಅದು ಸಂಪೂರ್ಣ ನಿರ್ನಾಮವಾಗಿದೆಯೋ ಅದನ್ನು ಶಿಕ್ಷಣವೆಂದು ಹೇಳಬಹುದೇ? ಮನುಷ್ಯನನ್ನು ಒಂದು ಯಂತ್ರಸದೃಶವನ್ನಾಗಿ ಮಾಡುವುದು ವಿದ್ಯಾಭ್ಯಾಸವೇ? ಎಂದು ಪ್ರಶ್ನಿಸುತ್ತಾರೆ ವಿವೇಕಾನಂದರು. “ನನ್ನ ದೃಷ್ಟಿಯಲ್ಲಿ ಒಬ್ಬ ಇಚ್ಛಾನುಸಾರ ಸ್ವಂತ ಬುದ್ಧಿವಂತಿಕೆಯಿಂದ ತಪ್ಪು ಮಾಡುವುದು ಕೂಡ ಯಂತ್ರದಂತೆ ಒಳ್ಳೆಯದಾಗಿರುವುದಕ್ಕಿಂತ ಮೇಲು” – ಎಷ್ಟೊಂದು ಅದ್ಭುತವಾಗಿ ಹೇಳಿದ್ದಾರೆ!

ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಾಗಿವೆ, ಅಲ್ಲಿ ಗುಮಾಸ್ತರಷ್ಟೇ ತಯಾರಾಗುತ್ತಿದ್ದಾರೆ ಎಂದು ಮೊದಲು ಆತಂಕಪಟ್ಟವರು ವಿವೇಕಾನಂದರು. “ಈಗಿನ ಶಿಕ್ಷಣ ಕೇವಲ ಗುಮಾಸ್ತರನ್ನು ತಯಾರುಮಾಡುವ ಕಾರ್ಖಾನೆಯಂತಿದೆ... ಒಬ್ಬ ವ್ಯಕ್ತಿ ಕೆಲವು ಪರೀಕ್ಷೆಗಳನ್ನು ಪಾಸು ಮಾಡಿ ಚೆನ್ನಾಗಿ ಮಾತಾಡಿಬಿಟ್ಟರೆ ಆತ ವಿದ್ಯಾವಂತನೆಂದು ಭಾವಿಸುತ್ತೀರಿ. ಯಾವ ವಿದ್ಯಾಭ್ಯಾಸ ಜನಸಾಧಾರಣರಿಗೆ ಜೀವನೋಪಾಯಕ್ಕೆ ಸಹಾಯ ಮಾಡಲಾರದೋ, ಚಾರಿತ್ರ್ಯಶುದ್ಧಿಗೆ ಸಹಾಯ ಮಾಡಲಾರದೋ, ಜೀವಿಯ ಹೃದಯದಲ್ಲಿ ಪರೋಪಕಾರದ ಭಾವನೆಯನ್ನು ಮತ್ತು ಸಿಂಹಸದೃಶ ಧೈರ್ಯವನ್ನು ತುಂಬಲಾರದೋ, ಅದರಿಂದ ಏನು ಪ್ರಯೋಜನ?” ಎಂಬ ವಿವೇಕಾನಂದರ ಪ್ರಶ್ನೆಯನ್ನು ಇಂದಿನ ಶಿಕ್ಷಣವ್ಯವಸ್ಥೆಯ ಒಳಗಿರುವ ಪ್ರತಿಯೊಬ್ಬರೂ ಎದೆಮುಟ್ಟಿ ಕೇಳಿಕೊಳ್ಳಬೇಕಾಗಿದೆ.

ನಮ್ಮ ಸಮಾಜದಲ್ಲಿ ಇನ್ನೂ ಉಳಿದಿರುವ ಮೇಲುಕೀಳು ಭಾವನೆಗಳು, ಅತಿಯಾದ ಜಾತೀಯತೆ, ಅಸಹಿಷ್ಣುತೆ, ಸಹಬಾಳ್ವೆ-ಸಮನ್ವಯತೆಯ ಕೊರತೆ, ಸಂಪತ್ತಿನ ಬಗ್ಗೆ ಅತಿ ಆಸೆ, ಭ್ರಷ್ಟಾಚಾರ ಎಲ್ಲವುಗಳಿಗೂ ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಭೂತ ದೋಷಗಳೇ ಕಾರಣ ಎಂಬುದುನ್ನು ಅರ್ಥಮಾಡಿಕೊಳ್ಳಬೇಕು. ವ್ಯಕ್ತಿಗಳನ್ನು ನಮ್ಮ ಶಿಕ್ಷಣ ಆದರ್ಶಮಯ ವ್ಯಕ್ತಿತ್ವಗಳ್ನಾಗಿ ಬೆಳೆಸಲು ಸಾಧ್ಯವಾಗಿದ್ದರೆ ವಾಸ್ತವವಾಗಿ ಇಂತಹ ಸಮಸ್ಯೆಗಳು ಸಮಾಜದಲ್ಲಿ ಉಳಿದುಕೊಂಡಿರಲು ಸಾಧ್ಯವೇ ಇಲ್ಲ. ವಿಪರ್ಯಾಸವೆಂದರೆ ಹೆಚ್ಚುಹೆಚ್ಚು ಡಿಗ್ರಿಗಳನ್ನು ಪೇರಿಸಿಕೊಂಡಿರುವವರೇ ಹೆಚ್ಚು ಸಂಕುಚಿತರಾಗುತ್ತಾ ಹೋಗುವುದು, ಹೆಚ್ಚುಹೆಚ್ಚು ಜಾತೀಯತೆ, ಮತೀಯತೆಗಳನ್ನು ಬೆಳೆಸಿಕೊಳ್ಳುವುದು, ಇನ್ನೊಬ್ಬರ ಏಳಿಗೆಯನ್ನು ದ್ವೇಷಿಸುವುದು. ಇಂತಹ ಯೋಚನೆಗಳು ಕಡಿಮೆ ವಿದ್ಯಾಭ್ಯಾಸ ಪಡೆದಿರುವ ಜನಸಾಮಾನ್ಯರಲ್ಲಿ ಇಲ್ಲ. ಅಂದರೆ ವ್ಯಕ್ತಿ ಮೂಲತಃ ಉತ್ತಮನಾಗಿಯೇ ಇರುತ್ತಾನೆ, ನಮ್ಮ ಶಿಕ್ಷಣ ಆತನನ್ನು ಪತನಗೊಳಿಸಿದೆ ಎಂಬ ವಿವೇಕಾನಂದರ ಮಾತು ನೂರಕ್ಕೆ ನೂರು ನಿಜ ಎಂದಾಯಿತು.

ಚಾರಿತ್ರ್ಯನಿರ್ಮಾಣವೇ ಗುರಿ

ಚಾರಿತ್ರ್ಯನಿರ್ಮಾಣ ಮತ್ತು ರಾಷ್ಟ್ರನಿರ್ಮಾಣ ಶಿಕ್ಷಣದ ಗುರಿಯಾಗಬೇಕು ಎಂಬುದು ವಿವೇಕಾನಂದರು ತಮ್ಮ ಬದುಕಿನುದ್ದಕ್ಕೂ ಸಾರಿದ ವಿಚಾರ. ವ್ಯಕ್ತಿಯ ಚಾರಿತ್ರ್ಯ ಬೆಳೆಯದೆ ಆತ ಸಮಾಜಕ್ಕೊಂದು ಸಂಪನ್ಮೂಲವಾಗಲಾರ ಎಂಬ ಅವರ ಚಿಂತನೆ ಅದ್ಭುತವಾಗಿದೆ. ಶೀಲ-ಚಾರಿತ್ರ್ಯ-ಸಂಸ್ಕಾರಗಳು ಅಭಿವೃದ್ಧಿಯಾಗದಿರುವುದೇ ಆತನ ತಿಳಿದುಕೊಂಡಿರುವುದಕ್ಕೆ ಮೌಲ್ಯ ಬರದಿರಲು ಕಾರಣ. ತಿನಿಸೊಂದು ಎಷ್ಟೇ ವಿಶಿಷ್ಟವಾಗಿ ತಯಾರಾಗಿದ್ದರೂ ಅದು ಕೊಳಚೆಯ ಮೇಲೆ ಬಿದ್ದಿದ್ದರೆ ಅದು ಸೇವನೆಗೆ ಯೋಗ್ಯವಲ್ಲ. ಹಾಗೆಯೇ, ತಲೆಗೆ ತುಂಬಿಕೊಂಡ ವಿಚಾರಗಳಿಗೆ ಚಾರಿತ್ರ್ಯದ ತಳಹದಿಯಿಲ್ಲದೇ ಹೋದರೆ ಅವೂ ಕೊಳಚೆಯಲ್ಲಿ ಮುಳುಗಿರುವ ತಿನಿಸಿಗೆ ಸಮ. ಅವು ಆತನಿಗಾಗಲೀ ಇನ್ನೊಬ್ಬನಿಗಾಗಲೀ ಪ್ರಯೋಜನಕ್ಕೆ ಬರುವುದಿಲ್ಲ.

“ವಿದ್ಯಾಭ್ಯಾಸ ಎಂದರೆ ಅದು ನಿಮ್ಮ ತಲೆಗೆ ತುರುಕಿದ ಸರಕಲ್ಲ. ಅದು ಅಲ್ಲಿ ಜೀವಾವಧಿ ಅಜೀರ್ಣವಾಗಿ ಚೆಲ್ಲಾಪಿಲ್ಲಿಯಾಗಿ ಇರುವುದಲ್ಲ. ನಿಜವಾದ ವಿದ್ಯಾಭ್ಯಾಸ ನಮ್ಮ ಜೀವನವನ್ನು ರೂಪಿಸಬೇಕು; ಪುರುಷಸಿಂಹರನ್ನು ಮಾಡಬೇಕು; ಶುದ್ಧಚಾರಿತ್ರ್ಯದವರನ್ನಾಗಿ ಮಾಡಬೇಕು. ಭಾವನೆಗಳನ್ನು ರಕ್ತಗತಮಾಡಿಕೊಳ್ಳವಂತೆ ಮಾಡಬೇಕು. ನೀವು ಐದು ಭಾವನೆಗಳನ್ನು ಚೆನ್ನಾಗಿ ತಿಳಿದುಕೊಂಡು ನಿಮ್ಮ ಜೀವನದಲ್ಲಿ ಅವನ್ನು ವ್ಯಕ್ತಪಡಿಸಿದರೆ ಆಗ ಒಂದು ಪುಸ್ತಕ ಭಂಡಾರವನ್ನೇ ಕಂಠಪಾಠ ಮಾಡಿಕೊಂಡಿರುವವನಿಗಿಂತ ಹೆಚ್ಚು ವಿದ್ಯಾವಂತರು ನೀವು” ಎಂಬುದು ವಿವೇಕಾನಂದರ ನುಡಿ.

“ವಿಷಯ ಸಂಗ್ರಹವೇ ಶಿಕ್ಷಣವಾದರೆ ಪ್ರಪಂಚದಲ್ಲಿ ಪುಸ್ತಕಾಲಯಗಳೇ ಮಹಾಮುನಿಗಳಾಗಿರುತ್ತಿದ್ದವು. ವಿಶ್ವಕೋಶಗಳೇ ಮಹಾಋಷಿಗಳಾಗುತ್ತಿದ್ದವು!” ಎಂಬ ಅವರ ಮಾತಂತೂ ಬರಿಯ ಮಾಹಿತಿ ಎಷ್ಟೊಂದು ನಿಷ್ಪ್ರಯೋಜಕ ಎಂಬುದನ್ನು ಎತ್ತಿತೋರಿಸುತ್ತದೆ. ಬರೀ ಪುಸ್ತಕ ಪಾಂಡಿತ್ಯದಿಂದ ಏನೂ ಪ್ರಯೋಜನವಿಲ್ಲ. ಯಾವ ವಿದ್ಯಾಭ್ಯಾಸದಿಂದ ನಮ್ಮಲ್ಲಿ ಶುದ್ಧಚಾರಿತ್ರ್ಯ ಮೂಡುವುದೋ, ನಮ್ಮ ಮಾನಸಿಕ ಶಕ್ತಿ ವೃದ್ಧಿಯಾಗುವುದೋ, ಬುದ್ಧಿವಿಕಾಸವಾಗುವುದೋ, ವ್ಯಕ್ತಿ ಸ್ವತಂತ್ರನಾಗಿ ಬಾಳತಕ್ಕ ಸ್ಥಿತಿಗೆ ಬರಬಲ್ಲನೋ, ಅಂತಹ ತರಬೇತು ನಮಗೆ ಬೇಕು ಎನ್ನುತ್ತಾರೆ ಸ್ವಾಮೀಜಿ.

ವಿದ್ಯಾರ್ಥಿಯ ಕರ್ತವ್ಯ

ಶಿಕ್ಷಣ ವ್ಯವಸ್ಥೆಯ ಹುಳುಕು, ಅದರ ಸುಧಾರಣೆಯ ಬಗ್ಗೆ ಮಾತಾಡಿದಷ್ಟೇ, ಶಿಕ್ಷಣದ ವಿಚಾರದಲ್ಲಿ ಗುರುಶಿಷ್ಯರ ಕರ್ತವ್ಯಗಳೇನು ಎಂಬ ಬಗೆಗೂ ವಿವೇಕಾನಂದರು ವಿಸ್ತಾರವಾಗಿ ಮಾತಾಡಿದ್ದಾರೆ. “ನನಗೆ ನಚಿಕೇತನ ಶ್ರದ್ಧೆ ಇರುವವರು ಬೇಕು. ನಮ್ಮೆಲ್ಲರಿಗೂ ಅಗತ್ಯವಿರುವುದು ಅಂತಹ ಆತ್ಮಶ್ರದ್ಧೆಯೇ. ಅದನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳುವ ಮಹಾಕಾರ್ಯ ಆಗಬೇಕಿದೆ... ಸಮರ್ಥರಾಗಿ, ಶ್ರದ್ಧಾವಂತರಾಗಿ. ಮಿಕ್ಕೆಲ್ಲವೂ ತಾನಾಗಿಯೇ ಬರುತ್ತದೆ” ಎಂಬುದು ಅವರ ಮೊದಲ ನಿರ್ದೇಶನ.

ಅಧ್ಯಯನದಲ್ಲಿ ಏಕಾಗ್ರತೆ ಮತ್ತು ಉಳಿದೆಲ್ಲ ವಿಷಯಗಳಲ್ಲಿ ಅನಾಸಕ್ತಿ, ಕಠಿಣ ಬ್ರಹ್ಮಚರ್ಯ, ಶ್ರದ್ಧೆ, ಶೀಲ ಹಾಗೂ ಗುರುಕುಲ ವಿದ್ಯಾಭ್ಯಾಸ ವಿದ್ಯಾರ್ಥಿಯ ಪ್ರಮುಖ ಕರ್ತವ್ಯಗಳೆಂದು ಸ್ವಾಮೀಜಿ ಗುರುತಿಸಿದ್ದಾರೆ. ಮನುಷ್ಯನ ಶಕ್ತಿಗೆ ಒಂದು ಮೇರೆ ಇಲ್ಲ. ನಾವು ಅದನ್ನು ಏಕಾಗ್ರ ಮಾಡಿದಷ್ಟು ಪ್ರಬಲವಾಗುತ್ತದೆ ಎನ್ನುವ ವಿವೇಕಾನಂದರು ವಿದ್ಯಾರ್ಥಿ ತನ್ನ ಶಕ್ತಿಯನ್ನು ಏಕಾಗ್ರಗೊಳಿಸುವ ಅವಶ್ಯಕತೆಯೇನೆಂಬುದನ್ನು ಒತ್ತಿಹೇಳಿದ್ದಾರೆ. 

ವಿದ್ಯಾರ್ಥಿ ಕಠಿಣ ಬ್ರಹ್ಮಚರ್ಯವನ್ನು ಪಾಲಿಸುವುದರಿಂದಾಗುವ ಲಾಭವನ್ನೂ ಅವರು ತಿಳಿಸಿದ್ದಾರೆ. “ಕಾಯಾ ವಾಚಾ ಮನಸಾ ಎಲ್ಲ ಸ್ಥಿತಿಗಳಲ್ಲಿಯೂ ಪರಿಶುದ್ಧವಾಗಿರುವುದೇ ಬ್ರಹ್ಮಚರ್ಯೆ... ಬ್ರಹ್ಮಚರ್ಯದ ನಿಷ್ಠೆಯಿಂದ ಅತ್ಯಲ್ಪ ಕಾಲದಲ್ಲಿ ನಾವು ವಿಷಯಗಳನ್ನು ಸಂಗ್ರಹಿಸಬಹುದು. ಒಂದು ಸಲ ನೋಡಿದರೆ ಸಾಕು; ಅದನ್ನು ಮರೆಯದಂತೆ ಜ್ಞಾಪಕದಲ್ಲಿಟ್ಟುಕೊಳ್ಳಬಹುದು. ಬ್ರಹ್ಮಚರ್ಯದೀಕ್ಷಿತನಾದವನಿಗೆ ಅದ್ಭುತವಾದ ಇಚ್ಛಾಶಕ್ತಿ, ಕ್ರಿಯಾಶಕ್ತಿಗಳು ಬರುವುವು” ಎನ್ನುವ ವಿವೇಕಾನಂದರು “ಲೈಂಗಿಕ ಶಕ್ತಿಯನ್ನು ಆಧ್ಯಾತ್ಮಿಕ ಶಕ್ತಿಯನ್ನಾಗಿ ಪರಿವರ್ತಿಸಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದುಂಟು.

ಯಾವುದು ಒಬ್ಬನನ್ನು ಮಹಾಪುರುಷನನ್ನಾಗಿ ಮಾಡುವುದೋ ಅದೇ ಶ್ರದ್ಧೆ ಎನ್ನುತ್ತಾರೆ ಸ್ವಾಮೀಜಿ. “ನಾವು ಅನಂತಾತ್ಮನ ಪಾವಿತ್ರ್ಯದ ಕಿಡಿಗಳು. ನಾವು ಹೇಗೆ ನಿಷ್ಪ್ರಯೋಜಕರಾಗಬಲ್ಲೆವು? ನಾವೇ ಸರ್ವಸ್ವವೂ. ನಾವು ಏನನ್ನು ಬೇಕಾದರೂ ಮಾಡಲು ಸಿದ್ಧರಾಗಿರುವೆವು. ನಾವೆಲ್ಲವನ್ನೂ ಸಾಧಿಸುವೆವು. ನಮ್ಮ ಪೂರ್ವಿಕರಲ್ಲಿ ಇಂತಹ ಆತ್ಮಶ್ರದ್ಧೆ ಇತ್ತು” ಎಂದು ಜ್ಞಾಪಿಸುವ ಅವರು, ಇಂತಹ ಆತ್ಮಶ್ರದ್ಧೆಯಿಂದಲೇ ಶಿಕ್ಷಣದ ಸಾಕ್ಷಾತ್ಕಾರವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸೂಚಿಸುತ್ತಾರೆ. “ಲಕ್ಷಲಕ್ಷ ಗುರುಗಳು ದೊರಕುವರು. ಆದರೆ ನಿಜವಾದ ಶಿಷ್ಯ ದೊರಕುವುದು ಕಷ್ಟ” ಎಂದು 1900ರಸ್ಯಾನ್‍ಫ್ರಾನ್ಸಿಸ್ಕೋದ ತಮ್ಮ ಭಾಷಣವೊಂದರಲ್ಲಿ ವಿವೇಕಾನಂದರು ಹೇಳಿದ್ದಿದೆ.

ಶ್ರದ್ಧೆಯೊಂದಿಗೆ ಶೀಲ-ಚಾರಿತ್ರ್ಯಗಳು ಸೇರಿದಾಗ ಅದ್ಭುತಗಳನ್ನು ಸಾಧಿಸಬಹುದೆಂಬುದು ಅವರ ಅಭಿಮತ. “ನಿಮಗೆ ಇಂದು ಬೇಕಾಗಿರುವುದು ನಿಮ್ಮ ಇಚ್ಛಾಶಕ್ತಿಯನ್ನು ವೃದ್ಧಿಮಾಡಬಲ್ಲಂತಹ ಚಾರಿತ್ರ್ಯ. ನೀವು ನಿಮ್ಮ ಇಚ್ಛಾಶಕ್ತಿಯನ್ನು ರೂಢಿಸಿಕೊಂಡಂತೆ ಅದು ನಿಮ್ಮನ್ನು ಮೇಲಮೇಲಕ್ಕೆ ಒಯ್ಯುವುದು. ವಜ್ರದಂತಹ ಕಷ್ಟದ ಕೋಟೆಗಳನ್ನು ಕೂಡ ಸೀಳಿಕೊಂಡು ಹೋಗುವುದು ಚಾರಿತ್ರ್ಯ” ಎನ್ನುವ ವಿವೇಕಾನಂದರು ವಿದ್ಯಾರ್ಥಿಗಳ ಯಶಸ್ಸಿನ ರಹಸ್ಯ ಚಾರಿತ್ರ್ಯ ಹಾಗೂ ಶ್ರದ್ಧೆಗಳೆಂಬ ಎರಡು ಪದಗಳಲ್ಲಿರುವುದನ್ನು ಮತ್ತೆಮತ್ತೆ ಹೇಳಿದ್ದಾರೆ.

ಗುರುಕುಲವಾಸ ಶಿಕ್ಷಣದ ಪ್ರಮುಖ ಅವಶ್ಯಕತೆಯೆಂಬುದನ್ನು ಸ್ವಾಮೀಜಿ ಅಲ್ಲಲ್ಲಿ ವ್ಯಕ್ತಪಡಿಸಿದ್ದುಂಟು. ಭಾರತದ ಪ್ರಾಚೀನ ಶಿಕ್ಷಣಪದ್ಧತಿಯಾದ ಗುರುಕುಲ ವ್ಯವಸ್ಥೆ ಎಲ್ಲ ಕಾಲಕ್ಕೂ ಪ್ರಸ್ತುತ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಇಲ್ಲಿ ಬೊಟ್ಟು ಮಾಡುವ ಅಂಶ ಗುರು-ಶಿಷ್ಯರ ಪರಸ್ಪರ ಸಾಮೀಪ್ಯತೆಯ ಅವಶ್ಯಕತೆ. ಗುರುವಿನ ಜೀವನದ ನಿಕಟ ಪರಿಚಯವಿಲ್ಲದೆ ಯಾವ ವಿದ್ಯಾಭ್ಯಾಸವೂ ಸಾಧ್ಯವಿಲ್ಲ. ಪರಿಶುದ್ಧವಾದ ಜೀವನ ಯಾರಲ್ಲಿ ನಂದಾದೀವಿಗೆಯಂತೆ ಬೆಳಗುತ್ತಿದೆಯೋ ಅಂತಹ ಗುರುವಿನ ಸಮೀಪದಲ್ಲಿಯೇ ವ್ಯಕ್ತಿಯೊಬ್ಬ ಬೆಳೆಯಬೇಕು ಎಂದಿರುವ ವಿವೇಕಾನಂದರು, ಇಲ್ಲಿ ಗುರುವಿನ ಪಾತ್ರವೂ ಎಷ್ಟು ಮಹತ್ವದ್ದೆಂಬುದನ್ನು ಸಾರಿಹೇಳಿದ್ದಾರೆ.

ಗುರುವಿನ ಪಾತ್ರ

ವಿವೇಕಾನಂದರ ಪ್ರಕಾರ, ನಿಜವಾದ ಗುರು ಶಿಷ್ಯನ ಮಟ್ಟವನ್ನು ಅರಿತು ಪಾಠಮಾಡಬಲ್ಲವನು. “ನಿಜವಾದ ಗುರು ಶಿಷ್ಯನಿರುವ ಮೆಟ್ಟಿಲಿಗೆ ತಕ್ಷಣವೇ ಇಳಿದುಬರುವನು. ಶಿಷ್ಯನ ಹೃದಯದಲ್ಲಿರುವುದನ್ನು ತಿಳಿದುಕೊಳ್ಳುವನು. ಇಂತಹ ಗುರು ಮಾತ್ರ ನಿಜವಾಗಿ ಬೋಧಿಸಬಲ್ಲ” ಎನ್ನುತ್ತಾರೆ ಅವರು. ಗುರುವಿನ ಮನಸ್ಸಿನ ಅಲೆಗಳು ವಿದ್ಯಾರ್ಥಿಯ ಮನಸ್ಸಿಗೆ ಹೋಗಿ ಮುಟ್ಟಬೇಕಾದಲ್ಲಿ ಗುರುವಿನಲ್ಲಿ ಆ ಶಕ್ತಿ ಇರಬೇಕು. ಅದು ಶಕ್ತಿಕ್ಷೇಪಣೆಯ ಪ್ರಶ್ನೆ. ಕೇವಲ ನಮ್ಮ ಬೌದ್ಧಿಕ ಶಕ್ತಿಗಳಿಗೆ ಚಾಲನೆ ಕೊಡುವುದಷ್ಟೇ ಅಲ್ಲ. ವಾಸ್ತವಿಕವಾದ ಮತ್ತು ಅನುಭವಕ್ಕೆ ಬರುವಂತಹ ಒಂದು ಶಕ್ತಿ ಗುರುವಿನಿಂದ ಶಿಷ್ಯನಿಗೆ ಪ್ರಾಪ್ತವಾಗುತ್ತದೆ. ಮತ್ತು ಶಿಷ್ಯನ ಹೃದಯದಲ್ಲಿ ಅದು ವೃದ್ಧಿಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಗುರುವಿನ ಅಂತರಂಗ ಅತ್ಯಂತ ಶುದ್ಧವಾಗಿಯೂ ಇರಬೇಕಾದುದು ಅತ್ಯಾವಶ್ಯಕ ಎನ್ನುವ ಮೂಲಕ ವಿವೇಕಾನಂದರು ಶಿಕ್ಷಕನ ಜವಾಬ್ದಾರಿ ಎಷ್ಟು ‘ಗುರುತರ’ವಾದದ್ದು ಎಂಬುದನ್ನೂ ಸಾರಿದ್ದಾರೆ. ವಿದ್ಯಾರ್ಥಿಗಳು ಅಧ್ಯಾಪಕರು ಹೇಳಿದ್ದನ್ನು ಕಲಿಯುವುದಕ್ಕಿಂತಲೂ ಅವರನ್ನು ನೋಡಿ ಕಲಿಯುವುದೇ ಹೆಚ್ಚು. ಹೀಗಿರುವಾಗ ಅಧ್ಯಾಪಕನಾದವನು ಸ್ವತಃ ಉನ್ನತ ವ್ಯಕ್ತಿತ್ವವನ್ನು ಹೊಂದಿರುವುದು ಶಿಕ್ಷಣದ ಪ್ರಾಥಮಿಕ ಅವಶ್ಯಕತೆ ಎಂಬ ಸೂಚನೆ ವಿವೇಕಾನಂದರ ಮಾತಿನಲ್ಲಿ ಇರುವುದನ್ನು ಗಮನಿಸಬೇಕು.

“ನನ್ನ ಜೀವನದ ಅತಿನಿಕಟ ಪ್ರೀತಿಗೆ ಪಾತ್ರನಾದ ಬಂಧುವೆಂದರೆ ಗುರು. ಅನಂತರ ನನ್ನ ತಾಯಿ, ಅನಂತರ ತಂದೆ. ಗುರುವಿಗೆ ನನ್ನ ಪ್ರಥಮ ಗೌರವ. ನನ್ನ ತಂದೆ ಮಾಡು ಎಂದದ್ದನ್ನು, ಗುರು ಮಾಡಬೇಡ ಎಂದರೆ, ನಾನು ಅದನ್ನು ಮಾಡುವುದಿಲ್ಲ. ತಂದೆ ತಾಯಿಗಳು ನನಗೆ ದೇಹವನ್ನು ಕೊಡುವರು. ಆದರೆ ಗುರು ನನಗೆ ಪುನರ್ಜನ್ಮವನ್ನು ಕೊಡುವನು” ಎಂಬ ವಿವೇಕಾನಂದರ ಮಾತಿನಲ್ಲಿ ಗುರುವಿನ ಸ್ಥಾನಮಾನ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ.

ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕನ ಪಾತ್ರ ಕೇಂದ್ರಸ್ಥಾನದಲ್ಲಿರುವಂಥದ್ದು ಎಂಬುದನ್ನು ಎಲ್ಲ ಶಿಕ್ಷಣತಜ್ಞರೂ ಹೇಳುತ್ತಲೇ ಬಂದಿದ್ದಾರೆ. ವಿವೇಕಾನಂದರ ಒಟ್ಟು ಮಾತು ಅದನ್ನೇ ಪ್ರತಿಫಲಿಸುತ್ತದೆ. ಎಲ್ಲ ಉದ್ಯೋಗಗಳಂತೆಯೇ ಅಧ್ಯಾಪನವೂ ಒಂದು ಜೀವನೋಪಾಯ ಎಂದು ಭಾವಿಸುವ ಶಿಕ್ಷಕರಿದ್ದರೆ ಅಂಥವರಿಂದ ಶಿಕ್ಷಣ ಕ್ಷೇತ್ರದ ಉದ್ಧಾರ ಕನಸಿನ ಮಾತು. ಬೇರೆಲ್ಲೂ ಉದ್ಯೋಗ ಸಿಗಲಿಲ್ಲ, ಆದ್ದರಿಂದ ಕೊನೆಗೆ ಎಲ್ಲಾದರೂ ಪಾಠ ಮಾಡಿಕೊಂಡಿರೋಣ ಎಂಬ ನಿರ್ಧಾರಕ್ಕೆ ಬಂದೆ ಎಂದು ಹೇಳುವ ಅಧ್ಯಾಪಕರಿರುವವರೆಗೆ ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಿಸುವುದಿಲ್ಲ.

ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕಾಲಘಟ್ಟದಲ್ಲಿದ್ದೇವೆ. ಶಿಕ್ಷಣದ ಬಗೆಗಿನ ಪರಿಕಲ್ಪನೆಯಲ್ಲೇ ಆಮೂಲಾಗ್ರ ಬದಲಾವಣೆಯನ್ನು ಅಪೇಕ್ಷಿಸುತ್ತದೆ ಹೊಸ ಶಿಕ್ಷಣ ನೀತಿ. ಅದರ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಆದರೆ ವಿವೇಕಾನಂದರು ಶಿಕ್ಷಣದ ಬಗ್ಗೆ ಇಟ್ಟುಕೊಂಡಿದ್ದ ಕಲ್ಪನೆಗಳು ಸಮಗ್ರವಾಗಿ ಅನುಷ್ಠಾನಕ್ಕೆ ಬಾರದೆ ಇಂತಹ ಹತ್ತು ನೀತಿಗಳು ಬಂದರೂ ನಮ್ಮ ಶಿಕ್ಷಣ ವ್ಯವಸ್ಥೆ ವಾಸ್ತವವಾಗಿ ಸುಧಾರಿಸದು.

- ಸಿಬಂತಿ ಪದ್ಮನಾಭ ಕೆ. ವಿ.

ಗುರುವಾರ, ಜನವರಿ 11, 2018

ಇದು ಯುವೋತ್ಕರ್ಷದ ಕಾಲ

ದಿನಾಂಕ: 07-01-2018ರ 'ವಿಜಯ ಕರ್ನಾಟಕ' - 'ಸಾಪ್ತಾಹಿಕ ಲವಲVK'ಯಲ್ಲಿ ಪ್ರಕಟವಾದ ಲೇಖನ

(UNEDITED)

ಯೌವ್ವನವೆಂದರೆ ಏನು ಸೊಗಸು! ಎಂಥಾ ಪ್ರಕಾಶ!
ಎಷ್ಟೊಂದು ಭ್ರಮೆಗಳು, ಆಕಾಂಕ್ಷೆಗಳು, ಕನಸುಗಳು!
ಅದು ಕೊನೆಯೇ ಇಲ್ಲದ ಕಥೆಯ ಆರಂಭವೆಂಬ ಪುಸ್ತಕ
ಅಲ್ಲಿ ಪ್ರತೀ ಹುಡುಗಿಯೂ ನಾಯಕಿ, ಪ್ರತೀ ಪುರುಷನೂ ಸ್ನೇಹಿತ!
ಹೀಗೆ ಸಾಗುತ್ತದೆ ಕವಿ ಹೆನ್ರಿ ಲಾಂಗ್‌ಫೆಲೋ ಕವಿತೆ. ಯೌವ್ವನವೆಂದರೆ ಹಾಗೆಯೇ ಅಲ್ಲವೇ? ಅದು ಎಲ್ಲವನ್ನೂ ಮೀರಿ ನಿಂತ ಹಿಮಾಲಯ ಪರ್ವತ. ಕನಸುಗಳ ಬಿಳಲುಗಳನ್ನು ಸುತ್ತಲೂ ಹರಡಿ ಇನ್ನೆಂದೂ ಬೀಳದಂತೆ ನೆಲಕಚ್ಚಿ ನಿಂತ ಬೃಹತ್ ಆಲದ ಮರ. ಎಂತಹ ಬಂಡೆಗಲ್ಲುಗಳನ್ನೂ ಲೆಕ್ಕಿಸದೆ ಕೊಳೆಕಳೆಗಳನ್ನು ತೊಳೆಯುತ್ತಾ ರಭಸದಿಂದ ಹರಿಯುವ ಮಹಾಪ್ರವಾಹ. ಎಂತಹ ಕಠಿಣ ಗುರಿಗಳನ್ನೂ ಬೇಧಿಸಿ ಮುನ್ನುಗ್ಗುವ ಛಾತಿಯುಳ್ಳ ಬೆಂಕಿಚೆಂಡು. ಆತ್ಮವಿಶ್ವಾಸವೇ ಯೌವ್ವನದ ಸ್ಥಾಯೀಭಾವ.

ಯುವಜನತೆಯ ಈ ಆತ್ಮವಿಶ್ವಾಸದ ಔನ್ನತ್ಯವನ್ನೇ ಎಷ್ಟೊಂದು ಸುಂದರವಾದ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಯುವಕರ ಸಾರ್ವಕಾಲಿಕ ರೋಲ್ ಮಾಡೆಲ್ ಸ್ವಾಮಿ ವಿವೇಕಾನಂದರು: ಪ್ರತೀ ಮಗುವೂ ಒಬ್ಬ ಹುಟ್ಟು ಆಶಾವಾದಿ, ಅವನು ಬಂಗಾರದ ಕನಸುಗಳನ್ನು ಕಾಣುತ್ತಾನೆ. ಯೌವ್ವನದಲ್ಲಿ ಆತ ಇನ್ನಷ್ಟು ಆಶಾವಾದಿಯಾಗುತ್ತಾನೆ. ಸಾವೆಂಬುದೊಂದಿದೆ, ಸೋಲೆಂಬುದೊಂದಿದೆ ಎಂಬುದನ್ನು ನಂಬುವುದೂ ಅವನಿಗೆ ಕಷ್ಟ! ರಾಷ್ಟ್ರನಿರ್ಮಾಣದ ಕಾರ್ಯ ಇಂತಹ ಯುವಕರಿಂದಲೇ ಸಾಧ್ಯ ಹೊರತು ಕಷ್ಟಗಳಿಗೆ, ಸವಾಲುಗಳಿಗೆ ಹೆದರುವ ಪುಕ್ಕಲರಿಂದಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು.

ಸಾಧನೆಯ ಹಾದಿಯಲ್ಲಿ
ಆಧುನಿಕ ಬದುಕಿನ ಬಗ್ಗೆ ಒಂದು ಕ್ಷಣ ಕಣ್ಮುಚ್ಚಿ ಕುಳಿತು ಯೋಚಿಸಿದರೆ ಅದು ಒಡ್ಡಿರುವ ಒತ್ತಡಗಳು, ಸವಾಲುಗಳು ವಿಸ್ಮಯ ತರಿಸುತ್ತವೆ. ಬದುಕು ಎಷ್ಟೊಂದು ಬದಲಾಗಿ ಹೋಗಿದೆ! ಹುಟ್ಟಿದ್ದೇವೆ, ಒಂದಷ್ಟು ಶಿಕ್ಷಣ ಪಡೆದಿದ್ದೇವೆ, ಇನ್ನು ಏನಾದರೂ ಉದ್ಯೋಗ ಮಾಡಿಕೊಂಡು ಸಂಸಾರ ಮುನ್ನಡೆಸಿಕೊಂಡು ಬದುಕಬೇಕು ಎಂಬ ನಿರ್ಲಿಪ್ತ ಮನಸ್ಥಿತಿ ಈಗಿನದ್ದಲ್ಲ. ಎಲ್ಲರೂ ಒಂದಲ್ಲ ಒಂದು ದಿನ ಜೀವನ ಮುಗಿಸಲೇಬೇಕು, ಆದರೆ ಅದಕ್ಕೂ ಮೊದಲು ಏನಾದರೊಂದು ಸಾಧಿಸಬೇಕು; ಇತರರಿಗಿಂತ ಭಿನ್ನವಾಗಿ ನಿಲ್ಲಬೇಕು; ಹೊಸದನ್ನು ಮಾಡಿತೋರಿಸಬೇಕು- ಇದು ಇಂದಿನ ಯುವಕರ ಮನಸ್ಥಿತಿ.

ಈ ಮಂದಿಯೇಕೆ ಕುಟುಂಬಕ್ಕೂ ಸಮಯ ಕೊಡದಂತೆ ಹೀಗೊಂದು ರಣೋತ್ಸಾಹದಿಂದ ಓಡಾಟ ಒದ್ದಾಟಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಒಮ್ಮೊಮ್ಮೆ ಅನಿಸಿದರೂ ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಬಾರದೆಂಬ ಅವರ ತುಡಿತ, ಏನಾದರೂ ಸಾಧಿಸಬೇಕೆಂಬ ಅವರ ಹುಮ್ಮಸ್ಸು, ಎಲ್ಲವನ್ನೂ ನಾಜೂಕಾಗಿ ನಿಭಾಯಿಸಿಕೊಂಡು ಹೋಗುವ ಅವರ ಕೌಶಲಕ್ಕೆ ಮನಸ್ಸು ಶಹಭಾಸ್ ಎನ್ನುತ್ತದೆ. ಅದಕ್ಕೇ ಇರಬೇಕು ಹೆಲನ್ ಕೆಲ್ಲರ್ ಹೇಳಿದ್ದು: ಜಗತ್ತಿನಲ್ಲಿ ಯುವಕರು ಇರುವವರೆಗೆ ನಾಗರಿಕತೆ ಹಿಮ್ಮುಖವಾಗಿ ಚಲಿಸುವುದು ಸಾಧ್ಯವೇ ಇಲ್ಲ!

ವಿವೇಕಾನಂದರ ಇನ್ನೊಂದು ಮಾತು ಇಲ್ಲಿ ಉಲ್ಲೇಖನೀಯ: ನನಗೆ ನನ್ನ ದೇಶದ ಮೇಲೆ, ವಿಶೇಷವಾಗಿ ದೇಶದ ಯುವಕರ ಮೇಲೆ ವಿಶ್ವಾಸವಿದೆ... ಯಾವುದಕ್ಕೂ ಹೆದರಬೇಡಿ, ನೀವು ಅದ್ಭುತವಾದದ್ದನ್ನು ಸಾಧಿಸಬಹುದು. ನೀವು ಭಯಗೊಂಡ ಕ್ಷಣಕ್ಕೆ ನೀವು ಯಾರೂ ಅಲ್ಲ. ಜಗತ್ತಿನ ದುಃಖಕ್ಕೆ ಭಯವೇ ಅತಿದೊಡ್ಡ ಕಾರಣ. ಅದೇ ಪ್ರಪಂಚದ ಅತಿದೊಡ್ಡ ಮೂಢನಂಬಿಕೆ ಕೂಡಾ. ನಿರ್ಭಯತೆಯಿಂದ ಒಂದೇ ಕ್ಷಣದಲ್ಲಿ ಸ್ವರ್ಗವನ್ನೂ ಧರೆಗಿಳಿಸಬಹುದು. ಈ ಕೆಚ್ಚಿನ ನುಡಿಗಳಿಗಾಗಿಯೇ ವಿವೇಕಾನಂದರು ಇಂದಿಗೂ ಎಂದೆಂದಿಗೂ ನಮ್ಮ ಅಭಿಮಾನ ಗೌರವಗಳಿಗೆ ಪಾತ್ರರಾಗುತ್ತಾರೆ. ಎಚ್ಚರಿಕೆ ಹೇಳುವ ನೆಪದಲ್ಲಿ ಕುಗ್ಗಿಸುವವರು ನಮ್ಮ ಸುತ್ತಮುತ್ತ ಬೇಕಾದಷ್ಟು ಮಂದಿ ಸಿಗುತ್ತಾರೆ; ಮುಂದಕ್ಕೆ ಹೋಗು ನಾವಿದ್ದೇವೆ ನಿನ್ನ ಜತೆ ಎನ್ನುವವರ ಸಂಖ್ಯೆ ಕಡಿಮೆಯೇ. ಅಂತಹ ಸಂದರ್ಭ ಬಂದಾಗಲೆಲ್ಲ ವಿವೇಕವಾಣಿ ಯುವಕರ ಕಿವಿಗಳಲ್ಲಿ ಮಾರ್ದನಿಸಬೇಕು.

ಭಗತ್‌ಸಿಂಗ್, ಸಾವರ್ಕರ್, ರಾಜಗುರು, ಸುಖದೇವ್, ಗಾಂಧೀ, ಪಟೇಲ್, ಖುದಿರಾಮ್, ಮಂಗಲ್‌ಪಾಂಡೆ, ಆಜಾದ್, ತಿಲಕ್ ಮುಂತಾದವರೆಲ್ಲ ತಮ್ಮ ಏರು ಜವ್ವನದ ದಿನಗಳನ್ನು ದೇಶಕ್ಕಾಗಿ ಮುಡಿಪಾಗಿಡದೇ ಹೋಗಿರುತ್ತಿದ್ದರೆ ಇಂದು ನಾವು ಏನಾಗಿರುತ್ತಿದ್ದೆವು? ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೊಮ್ಮೆ ಕಣ್ತೆರೆದು ನೋಡಿಕೊಂಡರೆ ಸಾಕು, ನಮ್ಮ ಯುವಕರಿಗೆ ಸಾಲುಸಾಲು ಮಾದರಿಗಳ ದರ್ಶನವಾಗುತ್ತದೆ. ಯೌವ್ವನದಲ್ಲಿ ದೃಢತೆಯನ್ನು ಹೊಂದುವ ವ್ಯಕ್ತಿಗಳು ಬಹಳ ಸಂತುಷ್ಟರು; ಆ ಉತ್ಸಾಹವನ್ನು ಜೀವನದುದ್ದಕ್ಕೂ ಕಾಯ್ದುಕೊಂಡವರು ಅವರಿಗಿಂತಲೂ ಮೂರು ಪಟ್ಟು ಸಂತುಷ್ಟರು ಎಂಬ ಮಾತಿದೆ. ಮೇಲೆ ಹೇಳಿರುವ ಹೆಸರುಗಳು ಅವರ ಬದುಕಿನ ನಂತರವೂ ಶತಮಾನಗಳ ಕಾಲ ಚಿರಮಾದರಿಗಳಾಗಿ ಯುವಜನಾಂಗದ ಎದುರು ಕಾಣಿಸಿಕೊಳ್ಳುತ್ತವೆ ಎಂದರೆ ಆ ಚೇತನಗಳಿಗೆ ಸಾವಿಲ್ಲ ಎಂದೇ ಅರ್ಥ.

ಹೊಳೆವ ತಾರೆಗಳು ಹಲವು
ಭಾರತದ ಮೊತ್ತಮೊದಲ ಫಾರ್ಮುಲಾ ವನ್ ರೇಸಿಂಗ್ ಡ್ರೈವರ್ ನಾರಾಯಣ್ ಕಾರ್ತಿಕೇಯನ್‌ಗೆ ಈಗಿನ್ನೂ ಮೂವತ್ತು ವರ್ಷ. ಜಗತ್ತಿನ ಮೊತ್ತಮೊದಲ ಅತಿಕಿರಿಯ ಮಹಿಳಾ ಚೆಸ್ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಆ ಹೆಗ್ಗಳಿಕೆಗೆ ಪಾತ್ರರಾದಾಗ ಆಕೆಯ ವಯಸ್ಸು ಕೇವಲ ಹದಿನೈದು. ಕ್ರಿಕೆಟ್ ಪ್ರಿಯರ ಕಣ್ಮಣಿ ವಿರಾಟ್ ಕೊಹ್ಲಿ, ಕೋಟ್ಯಂತರ ಅಭಿಮಾನಿಗಳನ್ನು ಪಡೆದಿರುವ ದೀಪಿಕಾ ಪಡುಕೋಣೆ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್‌ನ ಭರವಸೆ ಸೈನಾ ನೆಹ್ವಾಲ್, ಗ್ರಾಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಅನುಷ್ಕಾ ಶಂಕರ್, ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್‌ನ ಸಿಇಒ ಸತ್ಯಾ ನಾದೆಲ್ಲ, ಜಗತ್ಪ್ರಸಿದ್ಧ ಗೂಗಲ್ ಕಂಪೆನಿಯ ಸಿಇಒ ಸುಂದರ್ ಪಿಚೈ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟ ಮೊದಲ ಮಹಿಳೆ ಪಿ. ವಿ. ಸಿಂಧು... ತಮ್ಮ ಯೌವ್ವನದ ದಿನಗಳಲ್ಲೇ ಕೀರ್ತಿ ಶಿಖರ ಏರಿರುವ ಇಂತಹ ಸಾಧಕರ ಪಟ್ಟಿ ಮಾಡುತ್ತಾ ಹೋದರೆ ಪುಟಗಳು ಸಾಲವು. ಹೊರಗೆಲ್ಲೂ ಕಾಣಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ತೆರೆಯ ಹಿಂದೆಯೇ ಇರುತ್ತಾ ಶ್ರೇಷ್ಠ ಕೆಲಸಗಳನ್ನು ಸಾಧಿಸುತ್ತಿರುವ ಮುತ್ತುರತ್ನಗಳು ಇನ್ನೆಷ್ಟು ಇವೆಯೋ!

ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು ಇರುವ ವ್ಯಕ್ತಿಗಳು. ಅವರು ದುರ್ದಮವಾದ ಪ್ರಪಂಚದ ರಹಸ್ಯವನ್ನೆಲ್ಲ ಭೇದಿಸಿ ತಮ್ಮ ಇಚ್ಛೆಯನ್ನು ನೆರವೇರಿಸಿಕೊಳ್ಳಬಲ್ಲವರಾಗಿರಬೇಕು. ಸಮುದ್ರದ ಆಳಕ್ಕೆ ಬೇಕಾದರೂ ಹೋಗಿ ಮೃತ್ಯುವನ್ನಾದರೂ ಎದುರಿಸಲು ಅವರು ಸಿದ್ಧರಾಗಿರಬೇಕು- ಹೀಗೆಂದು ವಿವೇಕಾನಂದರು ನುಡಿದು ಶತಮಾನವೇ ಉರುಳಿದೆ. ಆದರೆ ಇಂದಿಗೂ ಆ ಮಾತೇ ನಮಗೆ ಮಾದರಿ, ಅದೇ ಯುವಜನಾಂಗದ ಎದುರಿರುವ ಘೋಷವಾಕ್ಯ.

ಶ್ರೀಕಾಂತ್ ಬೊಲ್ಲ ಅವರ ಹೆಸರು ನೀವು ಕೇಳಿರಬಹುದು. ಆಂಧ್ರಪ್ರದೇಶ ಮೂಲದ ಹುಟ್ಟು ಅಂಧ. ವ್ಯವಸಾಯವನ್ನೇ ನಂಬಿದ್ದ ಕುಟುಂಬದಲ್ಲಿ ಕುರುಡು ಮಗುವೊಂದು ಜನಿಸಿದಾಗ ಅದು ಹುಟ್ಟಿಯೇ ಇಲ್ಲ ಎಂದು ಭಾವಿಸಿ ಉಸಿರುಗಟ್ಟಿಸಿ ಎಲ್ಲಾದರೂ ಎಸೆದುಬಿಡಿ ಎಂದು ಸಲಹೆ ಕೊಟ್ಟವರೂ ಇದ್ದರಂತೆ. ಆದರೆ ಅಪ್ಪ ಅಮ್ಮ ಅಷ್ಟೊಂದು ನಿರ್ದಯಿಗಳಾಗಿರಲಿಲ್ಲ. ನಿರ್ಲಕ್ಷ್ಯ ಅಪಮಾನಗಳ ನಡುವೆಯೇ ಶ್ರೀಕಾಂತ್ ಬೆಳೆದ, ಶಿಕ್ಷಣ ಪಡೆದ. ಹತ್ತನೇ ತರಗತಿ ಬಳಿಕ ವಿಜ್ಞಾನ ಓದುವುದಕ್ಕೆ ಅವನಿಗೆ ಅವಕಾಶ ನಿರಾಕರಿಸಲಾಯಿತು. ಛಲ ಬಿಡದ ಶ್ರೀಕಾಂತ್ ಆ ಅವಕಾಶ ಪಡೆದುಕೊಂಡು ಶೇ. ೯೮ ಅಂಕ ಗಳಿಸಿದ್ದಲ್ಲದೆ, ಉನ್ನತ ವ್ಯಾಸಂಗಕ್ಕೆ ಅಮೇರಿಕದ ಪ್ರತಿಷ್ಠಿತ ಎಂಐಟಿ ವಿಶ್ವವಿದ್ಯಾನಿಲಯದಲ್ಲಿ ಸೀಟು ಪಡೆದುಕೊಂಡ. ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪ್ರಡೆದ ಮೊತ್ತಮೊದಲ ಅಂತಾರಾಷ್ಟ್ರೀಯ ಅಂಧ ವಿದ್ಯಾರ್ಥಿ ಶ್ರೀಕಾಂತ್ ಬೊಲ್ಲ ಇಂದು ರೂ. ೫೦ ಕೋಟಿ ವ್ಯವಹಾರವುಳ್ಳ ಬೊಲ್ಲಾಂಟ್ ಇಂಡಸ್ಟ್ರೀಸ್‌ನ ಹೆಮ್ಮೆಯ ಮಾಲೀಕ. ಆತನಿಗಿನ್ನೂ ೨೫ ವರ್ಷ ವಯಸ್ಸು ಎಂದರೆ ಅವನಿಗೆ ಅವಕಾಶಗಳನ್ನು ನಿರಾಕರಿಸಿದ ಸಮಾಜವೇ ನಂಬುತ್ತಿಲ್ಲ!

ಯುವಕರ ಶಕ್ತಿಯ ಬಗ್ಗೆ ನಾವಿನ್ನೂ ಅನುಮಾನಗಳನ್ನು ಇಟ್ಟುಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಯುವಜನತೆಯಿಂದ ಜಗತ್ತಿನಲ್ಲಿ ನೂರಾರು ತಪ್ಪುಗಳು ಘಟಿಸುತ್ತಿರಬಹುದು. ಅವುಗಳನ್ನು ನಿವಾರಿಸಲು ಪ್ರಯತ್ನಿಸೋಣ; ಆದರೆ ಅದೇ ಯುವಜನತೆ ಮಾಡುತ್ತಿರುವ ಸಾವಿರಾರು ಸಾಹಸಗಳು ನಮ್ಮೆದೆಯ ನೆಮ್ಮದಿಯನ್ನು ಹೆಚ್ಚಿಸಲಿ, ಮನಸ್ಸುಗಳನ್ನು ತಂಪಾಗಿರಿಸಲಿ!