ಮಂಗಳವಾರ, ಅಕ್ಟೋಬರ್ 10, 2023

ಲೇಖಕರಾಗಲು ಹತ್ತು ಸೂತ್ರಗಳು

ʻಉದಯವಾಣಿʼ UV Fusion 100ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನ | 08 ಅಕ್ಟೋಬರ್‌ 2023

ಒಂದು ವಿಷಯದ ಕುರಿತು ಗಂಟೆಗಟ್ಟಲೆ, ದಿನಗಟ್ಟಲೆ ಅಧ್ಯಯನ ಮಾಡಿ, ಟಿಪ್ಪಣಿ ಮಾಡಿಕೊಂಡು, ಕೊನೆಗೊಮ್ಮೆ ಆ ಟಿಪ್ಪಣಿಗೆಳನ್ನೆಲ್ಲ ಮುಚ್ಚಿ ಬದಿಗಿಟ್ಟು ಕುಳಿತಲ್ಲಿಂದ ಏಳದೆ ಸರಸರನೆ ನಿಮ್ಮಷ್ಟಕ್ಕೆ ಒಂದು ಲೇಖನವನ್ನು ಬರೆಯಬಲ್ಲಿರಾ? ಅದು ನಿಮ್ಮ ಅತ್ಯುತ್ತಮ ಬರೆಹ ಎನಿಸೀತು.

ಅನೇಕ ಮಂದಿ ಒಳ್ಳೆಯ ಲೇಖಕರಾಗಬೇಕೆಂದು, ನಾಲ್ಕು ಮಂದಿಯಿಂದ ಸೈ ಅನಿಸಿಕೊಳ್ಳಬೇಕೆಂದು ಕನಸು ಕಾಣುತ್ತಾರೆ. ಅದು ನನಸಾಗದೆ ಭ್ರಮನಿರಸನಗೊಳ್ಳುತ್ತಾರೆ. ಇದಕ್ಕೆ ಮುಖ್ಯವಾಗಿ ಕಾರಣಗಳು ಎರಡು: ಬರೆವಣಿಗೆಗೆ ಪೂರಕ ಅಧ್ಯಯನವಿಲ್ಲದಿರುವುದು ಮತ್ತು ನಿರಂತರವಾಗಿ ಬರೆಯದಿರುವುದು.

ಬರೆವಣಿಗೆಯೆಂಬುದು ಕನಸು ಕಂಡಷ್ಟು ಸುಲಭವಲ್ಲ. ಅದೊಂದು ತಪಸ್ಸಿನ ಹಾಗೆ. ತಪಸ್ಸಿಗೆ ಕುಳಿತವರಿಗೆ ಎಂದೂ ಕರಗದ ಛಲ, ಕಠಿಣ ಪರಿಶ್ರಮ, ಏಕಾಗ್ರತೆ ಇರಬೇಕಾಗುತ್ತದೆ. ಅದು ಎವರೆಸ್ಟ್‌ ಶಿಖರವನ್ನು ಏರುವ ಸಾಹಸ. ಅರ್ಧದಲ್ಲಿ ಪ್ರಯತ್ನ ಕೈಬಿಟ್ಟರೆ ಎವರೆಸ್ಟ್‌ ಹತ್ತಿದಂತೆ ಆಗುವುದಿಲ್ಲ.

ಹಾಗಾದರೆ ಒಳ್ಳೆಯ ಬರೆಹಗಾರರೆನಿಸಿಕೊಳ್ಳಲು ಏನು ಮಾಡಬೇಕು? ಅದಕ್ಕಾಗಿ ಹತ್ತು ಸೂತ್ರಗಳು ಇಲ್ಲಿವೆ ನೋಡಿ:

  1. ಬರೆಯುವುದಕ್ಕಿಂತಲೂ ಓದು ಹೆಚ್ಚು ಮುಖ್ಯ. ಹತ್ತು ಓದಿದ ಬಳಿಕ ಒಂದು ಬರೆ ಎಂಬುದು ಹಿರಿಯರ ಸಲಹೆ. ಕಥೆ, ಕಾದಂಬರಿ, ಕಾವ್ಯ, ಲಲಿತಪ್ರಬಂಧ, ಜೀವನಚರಿತ್ರೆ ಇತ್ಯಾದಿಗಳನ್ನು ನಿರಂತರವಾಗಿ ಓದುತ್ತಿರಬೇಕು. ತಿಂಗಳಿಗೊಂದಾದರೂ ಹೊಸ ಪುಸ್ತಕ ಓದಬೇಕು.
  2. ಪತ್ರಿಕೆ ಹಾಗೂ ನಿಯತಕಾಲಿಕಗಳು ನಮ್ಮ ದೈನಂದಿನ ಓದಿನ ಭಾಗವಾಗಿರಬೇಕು. ಹೀಗೆ ಓದುವಾಗಲೆಲ್ಲ ಒಂದು ಪುಟ್ಟ ಟಿಪ್ಪಣಿ ಪುಸ್ತಕ ಜತೆಗಿರಬೇಕು. ಮುಖ್ಯವೆನಿಸುವ ಘಟನೆಗಳು, ಅಂಕಿಅಂಶಗಳು, ಉಕ್ತಿಗಳನ್ನು ಆಗಿಂದಾಗಲೇ ಬರೆದಿಟ್ಟುಕೊಳ್ಳಬೇಕು.
  3. ಭಾಷೆಯೇ ಬರೆಹಗಾರನ ಬಂಡವಾಳ. ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳಬಲ್ಲವರು ಮಾತ್ರ ಉತ್ತಮ ಲೇಖಕರಾಗಬಲ್ಲರು. ಶ್ರೇಷ್ಠ ಗದ್ಯಕೃತಿಗಳ ನಿರಂತರ ಓದಿನಿಂದ ಮಾತ್ರ ಉತ್ತಮ ಶಬ್ದಭಂಡಾರ, ಸುಲಲಿತ ಭಾಷೆ ಬೆಳೆಯಬಹುದು.
  4. ಬರೆವಣಿಗೆಯಲ್ಲಿ ನಿರಂತರತೆ ಇದ್ದಾಗ ಮಾತ್ರ ಅದರಲ್ಲೊಂದು ಲಯಸಿದ್ಧಿ ಸಾಧ್ಯ. ʻಹಾಡಿ ಹಾಡಿ ರಾಗʼ ಎಂಬಂತೆ ಬರೆದು ಬರೆದೇ ಬರೆವಣಿಗೆಯ ನಾಡಿಮಿಡಿತ ಹಿಡಿಯಲಾದೀತು. ಪದದಿಂದ ಪದಕ್ಕೆ, ವಾಕ್ಯದಿಂದ ವಾಕ್ಯಕ್ಕೆ ಅರ್ಥಪೂರ್ಣ ಜೋಡಣೆ, ಸುಸಂಬದ್ಧತೆ, ಲಯಬದ್ಧತೆ ಇರಬೇಕು.
  5. ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವ್ಯಾಯಾಮ ಹೇಗೆ ನಿರಂತರವಾಗಿರಬೇಕೋ, ಬರೆವಣಿಗೆಯ ಸೌಂದರ್ಯ ಉಳಿಸಿಕೊಳ್ಳುವುದಕ್ಕೂ ಅದೇ ಬಗೆಯ ಪ್ರಯತ್ನ ಬೇಕು. ನಡುವೆ ನಿಲ್ಲಿಸಿದರೆ ಬೊಜ್ಜು ಬೇಡವೆಂದರೂ ಬಂದು ತುಂಬಿಕೊಂಡೀತು.
  6. ದಿನಚರಿ ಬರೆಯುವುದನ್ನು ರೂಢಿಸಿಕೊಳ್ಳುವುದು ಬರೆವಣಿಗೆಯಲ್ಲಿ ನಿರಂತರತೆ ಸಾಧಿಸುವುದಕ್ಕೆ ಸುಲಭ ಮಾರ್ಗ. ಆಯಾ ದಿನದ ಪ್ರಮುಖ ಅನುಭವಗಳನ್ನು ಬರೆದಿಡುತ್ತಾ ಹೋಗಿ. ಪ್ರತಿದಿನ ಮಲಗುವುದಕ್ಕೆ ಮುಂಚೆ ಹತ್ತು ನಿಮಿಷ ಇದಕ್ಕಾಗಿ ಮೀಸಲಿಡಿ. ನಿಮ್ಮ ಅಭಿವ್ಯಕ್ತಿ ವಿಧಾನದಲ್ಲಿ ಆಗುವ ಬದಲಾವಣೆಯನ್ನು ನೀವೇ ಗಮನಿಸುವಿರಿ.
  7. ಆರಂಭದಲ್ಲೇ ದೊಡ್ಡ ದೊಡ್ಡ ಲೇಖನಗಳನ್ನು ಬರೆಯುವುದಕ್ಕೆ ತೊಡಗಬೇಡಿ. ಪುಟ್ಟಪುಟ್ಟ ಬರೆಹಗಳಿಂದ ಆರಂಭಿಸಿ. ಉದಾಹರಣೆಗೆ, ಪತ್ರಿಕೆಗಳಲ್ಲಿನ ʼಸಂಪಾದಕರಿಗೆ ಪತ್ರʼ ಅಂಕಣವನ್ನು ಯತೇಚ್ಛ ಬಳಸಿಕೊಳ್ಳಿ. ಸಮಕಾಲೀನ ವಿದ್ಯಮಾನಗಳು, ಸಮಸ್ಯೆಗಳ ಕುರಿತು ಬರೆಯಿರಿ; ಪ್ರಕಟಿತ ಲೇಖನ, ಅಂಕಣ, ಸಂಪಾದಕೀಯ, ನುಡಿಚಿತ್ರಗಳಿಗೆ ಪ್ರತಿಕ್ರಿಯೆ ಬರೆಯಿರಿ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
  8. ಏನೇ ಬರೆದರೂ ಅದನ್ನು ನೀವೇ ಮತ್ತೆಮತ್ತೆ ಓದಿಕೊಂಡು ಪದಗಳು, ವಾಕ್ಯಗಳು ಸುಲಲಿತವಾಗಿ ಸಾಗಿವೆಯೇ ಎಂದು ಪರಿಶೀಲಿಸಿಕೊಳ್ಳಿ. ಕಾಗುಣಿತ ತಪ್ಪುಗಳಿದ್ದರೆ ತಿದ್ದಿಕೊಳ್ಳಿ. ಸ್ನೇಹಿತರಿಗೋ ಅಧ್ಯಾಪಕರಿಗೋ ತೋರಿಸಿ ಅವರ ಅಭಿಪ್ರಾಯ ಪಡೆಯಿರಿ.
  9. ಯಾವುದೇ ವಿಷಯ ಬರೆಯುವ ಮುಂಚೆ ಅದನ್ನು ಎಲ್ಲ ಆಯಾಮಗಳಿಂದಲೂ ಯೋಚಿಸಿ. ದೊರೆಯುವ ಸಂಪನ್ಮೂಲಗಳನ್ನೆಲ್ಲ ಅಧ್ಯಯನ ಮಾಡಿ. ಆದರೆ ಅವುಗಳನ್ನೇ ಲೇಖನಕ್ಕೆ ಭಟ್ಟಿಯಿಳಿಸಲು ಹೋಗಬೇಡಿ. ಸ್ವಂತಿಕೆಯೇ ನಿಮ್ಮ ಆದ್ಯತೆಯಾಗಿರಲಿ.
  10. ಬರೆದದ್ದೆಲ್ಲ ಪ್ರಕಟವಾಗಬೇಕು ಎಂಬ ಆಸೆ ಬೇಡ.  ನಾವು ಬರೆದದ್ದು ಇನ್ನೊಬ್ಬರಿಗೆ ಇಷ್ಟವಾಗಲೇಬೇಕು ಎಂದಿಲ್ಲ. ಅದು ಸಂದರ್ಭಕ್ಕೆ ಸರಿಹೊಂದದೆಯೂ ಇರಬಹುದು. ಎರಡು ಲೇಖನ ಪ್ರಕಟವಾಗದಿದ್ದ ಕೂಡಲೇ ಶಸ್ತ್ರಸನ್ಯಾಸ ಮಾಡಬೇಡಿ. ʻತಾಳ್ಮೆಗಿಂತ ಅನ್ಯ ತಪವು ಇಲ್ಲʼ.

 - ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: