ಸೋಮವಾರ, ಆಗಸ್ಟ್ 26, 2019

ಅಮೇರಿಕದಲ್ಲಿ ನಾಣ್ಯ ಬಿದ್ದರೆ ಭಾರತದಲ್ಲೂ ಸದ್ದು!

26 ಆಗಸ್ಟ್ 2019ರ ವಿಜಯವಾಣಿ (ವಿತ್ತವಾಣಿ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಭಾರತ ಮತ್ತೊಂದು ಆರ್ಥಿಕ ಹಿಂಜರಿತದ ಹೊಸ್ತಿಲಲ್ಲಿ ನಿಂತಿದೆಯೇ ಎಂಬ ಬಗ್ಗೆ ಬಿಸಿಬಿಸಿ ಚರ್ಚೆಗಳು ಆರಂಭವಾಗಿವೆ. ದೊಡ್ಡದೊಡ್ಡ ಕಂಪೆನಿಗಳು ಉತ್ಪಾದನೆಯನ್ನು ಕಡಿತಗೊಳಿಸಿರುವ, ನಷ್ಟವನ್ನು ಅನುಭವಿಸುತ್ತಿರುವ, ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿರುವ ಕುರಿತ ವಿವಿಧ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 2008ರಲ್ಲಿ ತಲೆದೋರಿದ ಆರ್ಥಿಕ ಕುಸಿತದೊಂದಿಗೆ ನಾವು ಮತ್ತೊಮ್ಮೆ ಸೆಣಸಬೇಕಾಗಿದೆಯೇ ಎಂಬ ಆತಂಕ ಅನೇಕ ಮಂದಿಯಲ್ಲಿ ಮನೆ ಮಾಡಿದೆ.

“70 ವರ್ಷಗಳಲ್ಲೇ ದೇಶ ಅತ್ಯಂತ ವಿಚಿತ್ರವಾದ ಸಂದಿಗ್ಧದ ಪರಿಸ್ಥಿತಿಯೊಂದನ್ನು ಎದುರಿಸುತ್ತಿದೆ. ಖಾಸಗಿ ರಂಗದವರು ಯಾರು ಯಾರನ್ನೂ ನಂಬದ ಪರಿಸ್ಥಿತಿಯಲ್ಲಿ ಇದ್ದಾರೆ. ಕೇಂದ್ರ ಸರ್ಕಾರ ಈಗ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗಿದೆ. ಖಾಸಗಿಯವರ ಮನಸ್ಸಿನಲ್ಲಿ ಕಾಡುತ್ತಿರುವ ಸಂಶಯಗಳನ್ನು ನಿವಾರಿಸಿ, ಅವರು ಮತ್ತೆ ಧೈರ್ಯವಾಗಿ ಹೂಡಿಕೆಯಲ್ಲಿ ತೊಡಗುವಂತೆ ಮಾಡುವುದು ಸರ್ಕಾರದ ಕರ್ತವ್ಯ” ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿರುವ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೊಂದು ಜಾಗತಿಕ ವಿದ್ಯಮಾನ, ಯಾರೂ ಧೈರ್ಯ ಕಳೆದುಕೊಳ್ಳಬೇಕಿಲ್ಲ ಎಂದು ಸಮಾಧಾನದ ಮಾತುಗಳನ್ನಾಡಿದ್ದಾರೆ.

ಆರ್ಥಿಕ ಹಿಂಜರಿತದ ಆತಂಕ ಇಡೀ ವಿಶ್ವವನ್ನೇ ಕಾಡುತ್ತಿರುವುದು ಸುಳ್ಳಲ್ಲ. ಚೀನಾ, ಲ್ಯಾಟಿನ್ ಅಮೇರಿಕ, ಯುರೋಪಿಯನ್ ದೇಶಗಳಲ್ಲಿ ಜನರ ಕೊಳ್ಳುವ ಶಕ್ತಿಯು ಕುಸಿಯುತ್ತಿರುವುದು, ಉದ್ಯಮ ದಿಗ್ಗಜಗಳು ಉತ್ಪಾದನೆ, ಮಾರಾಟ ನಿಲ್ಲಿಸುತ್ತಿರುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಚೀನಾ-ಅಮೇರಿಕದ ದರಸಮರದ ಬಿಸಿ ಪ್ರಪಂಚದ ಉಳಿದ ದೇಶಗಳಿಗೂ ತಟ್ಟಿರುವುದನ್ನು ವಿತ್ತ ಕ್ಷೇತ್ರ ಗಂಭೀರವಾಗಿ ಪರಿಗಣಿಸಿದೆ. 

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ 2008ರಲ್ಲಿ ತಲೆದೋರಿದ ಪರಿಸ್ಥಿತಿ ಮತ್ತೆ ಉದ್ಭವಿಸಿರುವುದು ಜೂನ್ ತಿಂಗಳ ನಿರಾಶಾದಾಯಕ ಅಂಕಿಅಂಶಗಳಿಂದ ದೃಢಪಡುತ್ತದೆ. ಆರ್ಥಿಕ ಬಿಕ್ಕಟ್ಟು ಜಾಗತಿಕ ವಿದ್ಯಮಾನ ಆಗಿರುವುದರಿಂದಲೇ ಭಾರತವೂ ಅದರ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿರುವುದು. ಏಕೆಂದರೆ ಈ ಜಗತ್ತಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧವುಳ್ಳವೇ. ಅಮೇರಿಕದಲ್ಲಿ ಬಿದ್ದ ನಾಣ್ಯ ಬೆಂಗಳೂರಿನಲ್ಲಿಯೂ ಸದ್ದು ಮಾಡಬಹುದು.

ಶೇ. 7ರ ಮಟ್ಟದಲ್ಲಿ ಸಾಗುತ್ತಿದ್ದ ಭಾರತದ ತ್ರೈಮಾಸಿಕ ಜಿಡಿಪಿ ಶೇ. 5.8ಕ್ಕೆ ಇಳಿದಿರುವುದು ಆತಂಕದ ಪ್ರಮುಖ ಕಾರಣಗಳಲ್ಲೊಂದು. ಡಾಲರ್ ಎದುರು ರೂಪಾಯಿಯ ಮೌಲ್ಯ 69.06ಕ್ಕೆ ಇಳಿದಿದೆ. ದೇಶದ ಒಟ್ಟಾರೆ ವಿತ್ತೀಯ ಕೊರತೆ ರೂ. 4.32 ಲಕ್ಷ ಕೋಟಿಗಳಿಗೆ ಏರಿದೆ. ಕೇಂದ್ರ ಬಜೆಟ್ ಮಂಡನೆಯ ಬಳಿಕ ಒಂದೇ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಸುಮಾರು ರೂ. 21,000 ಕೋಟಿಯಷ್ಟು ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಮೂಲಸೌಕರ್ಯದ ಪ್ರಮುಖ ರಂಗಗಳೆನಿಸಿರುವ ಕಲ್ಲಿದ್ದಲು, ರಸಗೊಬ್ಬರ, ನೈಸರ್ಗಿಕ ಅನಿಲ, ಕಚ್ಚಾತೈಲ, ಉಕ್ಕು, ಸಿಮೆಂಟ್, ವಿದ್ಯುತ್, ಸಂಸ್ಕರಣೆ ಮುಂತಾದವುಗಳ ಪ್ರಗತಿ ಕಳೆದ 50 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂಬ ವರದಿಗಳು ಪ್ರಕಟವಾಗಿರುವುದು ಜನಸಾಮಾನ್ಯರ ಆತಂಕಕ್ಕೂ ಕಾರಣವಾಗಿದೆ. ಮುಂಬೈ ಷೇರು ಮಾರುಕಟ್ಟೆ ಕಳೆದ ಐದು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಅಂಕಿಅಂಶಗಳಲ್ಲಿ ನಿಚ್ಚಳವಾಗುತ್ತದೆ.

ಅಟೋಮೊಬೈಲ್ ರಂಗ ಅತ್ಯಂತ ಹೆಚ್ಚು ಹೊಡೆತಕ್ಕೆ ಒಳಗಾಗಿರುವ ಕ್ಷೇತ್ರಗಳಲ್ಲಿ ಒಂದೆಂದು ವಿಶ್ಲೇಷಿಸಲಾಗುತ್ತಿದೆ. 2018ರ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ 2019ರ ಈ ಅವಧಿಯ ಕಾರು ಮಾರಾಟ ಶೇ. 23.3ರಷ್ಟು ಕುಸಿದಿರುವುದು ಸ್ಪಷ್ಟವಾಗಿದೆ. ಅಟೋಮೊಬೈಲ್ ರಂಗ ಹೊಡೆತ ತಿಂದರೆ ಅದರ ಪರಿಣಾಮ ಇನ್ನೂ ಅನೇಕ ರಂಗಗಳ ಮೇಲೆ ಆಗುತ್ತದೆ. ಸ್ಟೀಲಿನಿಂದ ತೊಡಗಿ ಟಯರಿನವರೆಗೆ ವಿವಿಧ ಉದ್ದಿಮೆಗಳು ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ವಾಹನ ಸಾಲದ ಪ್ರಮಾಣವೂ ಶೇ. 5.1ರಷ್ಟು ಕುಸಿದಿದೆ. ಮಾರುತಿ ಸುಜುಕಿ ಕಂಪೆನಿಯು ಕಳೆದ ಐದು ತಿಂಗಳಿನಿಂದ ತನ್ನ ಉತ್ಪಾದನೆ ಪ್ರಮಾಣವನ್ನು ಸತತವಾಗಿ ಕಡಿಮೆ ಮಾಡುತ್ತಾ ಬಂದಿದೆ.

2008ರಲ್ಲಿ ದ್ವಿಚಕ್ರವಾಹನ ಮಾರಾಟ ಪ್ರಮಾಣವು ಶೇ. 14.8ರಷ್ಟು ಕುಸಿತ ಕಂಡಿತ್ತು. ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿದರೆ ಇದೇ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಶೇ. 11.7ರಷ್ಟು ಕುಸಿತ ಕಂಡಿದೆ. 2008ರ ಬಳಿಕ ಇದೇ ಅತಿದೊಡ್ಡ ಕುಸಿತವಾಗಿದ್ದು, ನಾವು ಅಂದಿನ ಪರಿಸ್ಥಿತಿಯಿಂದ ಹೆಚ್ಚೇನೂ ದೂರದಲ್ಲಿ ಇಲ್ಲ ಎಂಬ ಅಂಶವನ್ನು ಅರ್ಥಮಾಡಿಕೊಳ್ಳಬೇಕು. 

ದೇಶದ ಬಹಭಾಗ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಗೆ ಸಿಲುಕಿದ್ದು ಈಗಷ್ಟೇ ಚೇತರಿಕೆ ಕಾಣುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿರಂಗವೂ ಅಂತಹ ಆಶಾದಾಯಕ ಸ್ಥಿತಿಯಲ್ಲಿ ಇಲ್ಲವೆಂಬುದು ಸಹಜ ವಿವೇಚನೆಯ ಸಂಗತಿ. ಕಳೆದ ತ್ರೈಮಾಸಿಕದಲ್ಲಿ ಟ್ರಾಕ್ಟರುಗಳ ಮಾರಾಟ ಪ್ರಮಾಣ ಶೇ. 14.1ರಷ್ಟು ಕುಸಿದಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಹೆಚ್ಚಿನದ್ದು ಎಂಬ ಅಂಶ ನಮ್ಮನ್ನು ಯೋಚನೆಗೀಡುಮಾಡುತ್ತದೆ.

ಇದ್ದಕ್ಕಿದ್ದಂತೆ ಮಾರುಕಟ್ಟೆಯಲ್ಲಿ ಪ್ಯಾಕೇಜ್ಡ್ ವಸ್ತುಗಳ ಬೇಡಿಕೆಯ ಪ್ರಮಾಣ ತಗ್ಗಿದೆ. ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕು (ಎಫ್‍ಎಂಸಿಜಿ) ಕಂಪೆನಿಗಳ ಉತ್ಪನ್ನಗಳು ಕಳೆದೊಂದು ವರ್ಷದಿಂದ ನಿರಂತರವಾಗಿ ಕುಸಿತ ಕಾಣುತ್ತಿರುವುದನ್ನು ಮಾರುಕಟ್ಟೆ ಅಂಕಿಅಂಶಗಳು ವಿವರಿಸುತ್ತವೆ. ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯ ಏಪ್ರಿಲ್-ಜೂನ್ ತ್ರೈಮಾಸಿಕದ ಪ್ರಗತಿ ಪ್ರಮಾಣ ಶೇ. 5ರಷ್ಟು ಇದೆ; ಇದು 2018ರ ಇದೇ ಅವಧಿಯಲ್ಲಿ ಶೇ. 12ರಷ್ಟು ಇತ್ತು ಎಂಬುದನ್ನು ಗಮನಿಸಬೇಕು. ಡಾಬರ್ ಇಂಡಿಯಾ ಕಂಪೆನಿಯ ಪ್ರಗತಿ ಕಳೆದ ವರ್ಷ ಶೇ. 21 ಇದ್ದರೆ ಈ ವರ್ಷ ಶೇ. 6ಕ್ಕೆ ಇಳಿದಿದೆ. ಹಾಗೆಯೇ, ಬ್ರಿಟಾನಿಯಾ ಪ್ರಗತಿ ಪ್ರಮಾಣ ಶೇ. 13ರಿಂದ ಶೇ. 6ಕ್ಕೆ ಕುಸಿದಿದೆ.

ತೈಲ, ಚಿನ್ನ, ಬೆಳ್ಳಿ ಹೊರತಾದ ಉತ್ಪನ್ನಗಳ ಆಮದು ಕಳೆದ ಮೂರು ವರ್ಷಗಳಲ್ಲೇ ಅತಿಹೆಚ್ಚು ಕುಸಿತವನ್ನು ಕಂಡಿದೆ. ಕಳೆದ ವರ್ಷ ಶೇ. 6.3 ಇದ್ದದ್ದು ಈ ವರ್ಷ ಶೇ. 5.3ಕ್ಕೆ ಕುಸಿದಿದೆ. ಏರ್‍ಟೆಲ್‍ನಂತಹ ಉದ್ಯಮ ದಿಗ್ಗಜ ಕಳೆದ ತ್ರೈಮಾಸಿಕ ಒಂದರಲ್ಲೇ ರೂ. 2866 ಕೋಟಿ ನಷ್ಟ ಅನುಭವಿಸಿದೆ.

ಆರ್ಥಿಕ ಪರಿಸ್ಥಿತಿ ವಿಷಮಗೊಳ್ಳುತ್ತಿರುವ ಭೀತಿ ರಿಯಲ್ ಎಸ್ಟೇಟನ್ನೂ ಬಿಟ್ಟಿಲ್ಲ. 2019 ಮಾರ್ಚ್ ತಿಂಗಳ ಅಂಕಿಅಂಶದಂತೆ, ದೇಶದ ಟಾಪ್-30 ನಗರಗಳಲ್ಲಿ ಸುಮಾರು 1.28 ಮಿಲಿಯನ್‍ನಷ್ಟು ಮನೆಗಳು ನಿರ್ಮಾಣಗೊಂಡು ಇನ್ನೂ ಮಾರಾಟವಾಗದೇ ಉಳಿದುಕೊಂಡಿವೆ. ವಾಹನದಂತೆ ರಿಯಲ್ ಎಸ್ಟೇಟ್ ಉದ್ಯಮವೂ ಇನ್ನೂ ಅನೇಕ ಉದ್ಯಮಗಳೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿರುವ ಕ್ಷೇತ್ರ. ರಿಯಲ್ ಎಸ್ಟೇಟ್ ಕುಸಿದರೆ ಅದರ ಸಹವರ್ತಿಗಳಾದ ಸ್ಟೀಲ್, ಸಿಮೆಂಟ್, ಪೀಠೋಪಕರಣ, ಪೈಂಟ್ ಮೊದಲಾದ ರಂಗಗಳೂ ಋಣಾತ್ಮಕ ಪರಿಣಾಮ ಎದುರಿಸುತ್ತವೆ ಎಂದು ಪ್ರತ್ಯೇಕ ಹೇಳಬೇಕಿಲ್ಲ.

ಯಾವುದೇ ಮಹತ್ತರ ಬದಲಾವಣೆಯೊಂದಕ್ಕೂ ಮುನ್ನ ಸಣ್ಣದೊಂದು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬ ಆರ್ಥಿಕ ರಂಗದ ನಾಣ್ಣುಡಿಯಷ್ಟೇ ಸದ್ಯಕ್ಕೆ ಕೊಂಚ ಭರವಸೆಯನ್ನು ತುಂಬುವ ಮಾತು. ಉತ್ತಮ ಭವಿಷ್ಯಕ್ಕಾಗಿ ಜನತೆ ಸಣ್ಣಮಟ್ಟಿನ ಅನನುಕೂಲತೆಯನ್ನು ಸಹಿಸಿಕೊಳ್ಳಲು ಸಿದ್ಧವಾಗಬೇಕು ಎಂದು ಹಣಕಾಸು ಸಚಿವರು ಬಜೆಟ್ ಮಂಡನೆಯ ವೇಳೆ ಹೇಳಿದ್ದನ್ನು ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಿಕೊಂಡರೆ ಭವಿಷ್ಯ ತೀರಾ ಕರಾಳವಾಗಿರಲಾರದು ಎಂಬ ಸಮಾಧಾನ ಜೊತೆಯಾಗುತ್ತದೆ.

ಕೆಲವು ಹೆಜ್ಜೆಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು, ಆದರೆ ಅವುಗಳಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಪ್ರಾಯೋಗಿಕ ಉಪಕ್ರಮಗಳಿಂದ ಮಾತ್ರ ಜನಸಾಮಾನ್ಯರ ಪರಿಸ್ಥಿತಿಯು ಸುಧಾರಿಸುತ್ತದೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬ ಆರ್ಥಿಕ ಪರಿಣತರ ಮಾತು ಸದ್ಯದ ಮಾರ್ಗದರ್ಶಕ ಸೂತ್ರವಾಗಬೇಕು. ಈ ನಿಟ್ಟಿನಲ್ಲಿ, ಕುಸಿದುಹೋಗುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮೇಲೆತ್ತುವುದು, ಖಾಸಗಿ ಹೂಡಿಕೆದಾರರಲ್ಲಿ ವಿಶ್ವಾಸ ತುಂಬುವುದು, ಹೂಡಿಕೆ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳುವುದು, ಮತ್ತು ಆ ಮೂಲಕ ಹೊಸ ಉದ್ಯೋಗ ಸೃಷ್ಟಿ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಕಡೆಯಿಂದ ತುರ್ತಾಗಿ ಆಗಬೇಕಿರುವ ಕೆಲಸ.
- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: