ಗುರುವಾರ, ಆಗಸ್ಟ್ 15, 2019

ಸಿಗ್ನಲಿನಲ್ಲಿ ಸ್ವಾತಂತ್ರ್ಯದ ಬಾವುಟ ಹಾರಿಸುವ ಮಕ್ಕಳು ನಾಪತ್ತೆಯಾಗಿದ್ದಾರೆ!

15 ಆಗಸ್ಟ್ 2019ರ 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಬರೆಹ

ತರಹೇವಾರಿ ಧ್ವಜಗಳನ್ನು ಹಿಡಿದ ಐದರ ಬಾಲೆ ಸಿಗ್ನಲ್‌ನಲ್ಲಿ ಎದುರಾಗುತ್ತಾಳೆ. ’ಬೆಳಗ್ಗಿನಿಂದ ಏನೂ ತಿಂದಿಲ್ಲ ಅಣ್ಣಾ, ನೀನೊಂದು ಫ್ಲಾಗ್ ತಗೊಂಡ್ರೆ ನಂಗೆ ಒಂದು ರುಪಾಯಿ ಸಿಗುತ್ತೆ’ ಅಂತ ಗೋಗರೆಯುತ್ತಾಳೆ. ಸ್ವಾತಂತ್ರ್ಯದ ಹೆಗ್ಗುರುತಿನಂತಿರುವ ಹತ್ತೆಂಟು ಧ್ವಜಗಳನ್ನು ಅವಚಿ ಹಿಡಿದಿರುವ ಅವಳಿನ್ನೂ ಒಂದು ಹೊತ್ತಿನ ಕೂಳಿಗಾಗಿ ಸಿಗ್ನಲ್‌ಗಳಲ್ಲೇ ಬೆಳಗು ರಾತ್ರಿ ಮಾಡುತ್ತಿದ್ದಾಳೆ.

ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅಭಿವೃದ್ಧಿಯ ಬಗ್ಗೆ ನಾವು ಮಾತಾಡಿದಷ್ಟು ಪ್ರಪಂಚದಲ್ಲಿ ಬೇರೆ ಯಾರೂ ಮಾತನಾಡಿರಲಿಕ್ಕಿಲ್ಲವೇನೋ? ಕೇಳಿದರೆ ನಮ್ಮಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಲಕ್ಷಾಂತರ ಪುಟಗಳ ದಾಖಲೆಗಳಿವೆ. ಥಾನುಗಟ್ಟಲೆ ಅಂಕಿಅಂಶಗಳಿವೆ. ದುರದೃಷ್ಟವಶಾತ್ ಇಷ್ಟೊಂದು ಅಂಕಿಅಂಶಗಳ ನಡುವೆ ಸಿಗ್ನಲಿನಲ್ಲಿ ಸ್ವಾತಂತ್ರ್ಯದ ಬಾವುಟ ಹಾರಿಸುವ ಮಕ್ಕಳು ನಾಪತ್ತೆಯಾಗಿದ್ದಾರೆ.

ಗಣಿಗಳಲ್ಲಿ ಚಿನ್ನವೆತ್ತುವವರ ನಡುವೆ ಬಡ ಕೂಲಿಕಾರರಿಗೆ ಬದುಕು ಸಿಕ್ಕಿಲ್ಲ. ಹೋಟೆಲು-ಫ್ಯಾಕ್ಟರಿಗಳಲ್ಲಿ ಹಣ ಎಣಿಸುವವರ ನಡುವೆ ಬಾಲ ಕಾರ್ಮಿಕರಿಗೆ ಬೆಳಕು ಕಂಡಿಲ್ಲ. ಸಾವಿರಾರು ಲೋಕಾಯುಕ್ತ ದಾಳಿಗಳು ನಡೆದ ಮೇಲೂ ರೇಶನ್ ಕಾರ್ಡು, ಇನ್‌ಕಂ ಸರ್ಟಿಫಿಕೇಟಿಗೆ ನೂರಾರು ರುಪಾಯಿ ಲಂಚ ಕೊಡುವುದರಿಂದ ಮುಕ್ತಿ ದೊರಕಿಲ್ಲ. ಎಲ್ಲರೂ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುವವರೇ ಆದರೂ ಸ್ವಾರ್ಥ ರಾಜಕಾರಣಿಗಳ ಅಧಿಕಾರರ ಲಾಲಸೆಯಿಂದ ಜನ ಬಿಡುಗಡೆ ಕಂಡಿಲ್ಲ.

ದೇಶಕ್ಕೆ, ಅದರೊಳಗಿರುವ ಜನರಿಗೆ ಏನಾದರೂ ಒಳ್ಳೆಯದಾಗಬೇಕೆಂದು ಮನಸಾ ಬಯಸುವ ರಾಜಕಾರಣಿಗಳು ಈ ಸ್ವತಂತ್ರ ದೇಶದ ವ್ಯಾಪ್ತಿಯೊಳಗಿಲ್ಲ. ನೂರಕ್ಕೆ ತೊಂಬತ್ತೊಂಬತ್ತು ಮಂದಿಯಲ್ಲೂ ತುಂಬಿ ತುಳುಕುತ್ತಿರುವುದು ಹಣ ಮತ್ತು ಅಧಿಕಾರದ ದಾಹ. ಇದು ವರ್ಷ ಕಳೆದಂತೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣವೂ ಇಲ್ಲ.

ನನಗಿಷ್ಟವಾದ ಯೋಚನೆ ಇದು, ನನಗಿಷ್ಟವಾದ ದಾರಿ ಇದು ಎಂದು ಮುನ್ನಡೆಯುವ ಸ್ವಾತಂತ್ರ್ಯವಂತೂ ಯಾರಿಗೂ ಇಲ್ಲ. ಇದೇ ಸರಿಯಾದ ಚಿಂತನೆ, ಇದೇ ಸರಿಯಾದ ಹಾದಿ, ಇದನ್ನೇ ಅನುಸರಿಸತಕ್ಕದ್ದು ಎಂಬ ಕಟ್ಟುಕಟ್ಟಳೆಗಳ ನಡುವೆ ವಾಸ್ತವದ ಸ್ವಾತಂತ್ರ್ಯ ಕಳೆದೇ ಹೋಗಿದೆ. ಎಡ-ಬಲಗಳೆಂಬ ಅತಿರೇಕಗಳ ನಡುವೆ ಸಮಾಜ ಚಿಂದಿಯಾಗಿದೆ. ನಮ್ಮ ಸಿದ್ಧಾಂತ ಇದು, ಇದೇ ಸರಿ, ಇದನ್ನೇ ಎಲ್ಲರೂ ಒಪ್ಪತಕ್ಕದ್ದು ಎಂಬ ಬಲವಂತದ ಭಾರದಲ್ಲಿ ನಿಜವಾಗಿ ದೊರೆಯಬೇಕಿದ್ದ ಬೌದ್ಧಿಕ ಸ್ವಾತಂತ್ರ್ಯವೇ ಕಾಲುಮುರಿದುಕೊಂಡು ಬಿದ್ದಿದೆ.

-ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: