ಬುಧವಾರ, ಡಿಸೆಂಬರ್ 16, 2020

ಕೊರೋನಾ ಕಂಟಕದ ನಡುವೆ ಯಕ್ಷಗಾನಕ್ಕೆ ಚೈತನ್ಯ ತುಂಬಿದ ಸಿರಿಬಾಗಿಲು ಪ್ರತಿಷ್ಠಾನ

ನವೆಂಬರ್ 2020ರ 'ಯಕ್ಷಪ್ರಭಾ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಕೊರೋನಾ ಕಂಟಕ ಯಕ್ಷಗಾನವನ್ನೂ ಬಿಡಲಿಲ್ಲ. ಎಷ್ಟೋ ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಕೊರೋನಾ ಕಾರಣಕ್ಕೆ ಏಕಾಏಕಿ ನಿಂತುಹೋದವು. ವೃತ್ತಿಪರರು, ಹವ್ಯಾಸಿಗಳು ಎಂಬ ಭೇದವಿಲ್ಲದೆ ಪ್ರತಿಯೊಬ್ಬ ಕಲಾವಿದರೂ ಅಸಹಾಯಕರಾದರು. ಯಕ್ಷಗಾನ ನೂರಾರು ಮಂದಿಗೆ ಜೀವನೋಪಾಯವೂ ಆಗಿತ್ತು. ಈ ಆಕಸ್ಮಿಕ ಬೆಳವಣಿಗೆಯಿಂದ ಕಲಾಭಿಮಾನಿಗಳೂ ಕಂಗೆಟ್ಟರು.

ಎಲ್ಲ ಸಂಕಷ್ಟಗಳ ನಡುವೆ ಕಲಾವಿದರಿಗೆ ಧೈರ್ಯ ತುಂಬುವ, ಸಮಾಜದಲ್ಲಿ ಚೈತನ್ಯ ಮೂಡಿಸುವ ಅನೇಕ ಪ್ರಯತ್ನಗಳು ಯಕ್ಷಗಾನ ವಲಯದಲ್ಲೇ ನಡೆದವು. ಅವುಗಳಲ್ಲಿ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಹಲವು ಪ್ರಯತ್ನಗಳು ಗಮನಾರ್ಹವೆನಿಸಿ ಪ್ರಶಂಸೆ ಹಾಗೂ ಮನ್ನಣೆಗಳಿಗೆ ಪಾತ್ರವಾದವು. ಆ ಉಪಕ್ರಮಗಳು ವಿಶಿಷ್ಟ ಹಾಗೂ ಮೌಲಿಕವಾಗಿದ್ದುದೇ ಇದಕ್ಕೆ ಕಾರಣ.

ಕೊರೋನಾ ವೇಗವಾಗಿ ಹರುಡುತ್ತಿದ್ದ ಸಂದರ್ಭ ಸರ್ಕಾರವೂ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೆ, ಅಂತಹದೊಂದು ಕೆಲಸವನ್ನು ಯಕ್ಷಗಾನದ ಮೂಲಕವೂ ಯಾಕೆ ಮಾಡಬಾರದು ಎಂಬ ಯೋಚನೆ ಸಿರಿಬಾಗಿಲು ಪ್ರತಿಷ್ಠಾನದ ಮುಖ್ಯಸ್ಥರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮತ್ತವರ ಬಳಗಕ್ಕೆ ಬಂತು. ಯೋಚನೆ ಅನುಷ್ಠಾನವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಒಂದೆರಡು ದಿನಗಳಲ್ಲಿ ‘ಕೊರೋನಾ ಜಾಗೃತಿ ಯಕ್ಷಗಾನ’ ರೂಪುಗೊಂಡು ಪ್ರದರ್ಶನಕ್ಕೂ ಸಿದ್ಧವಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ. ಎ. ಹೆಗಡೆ ಹಾಗೂ ಹಿರಿಯ ವಿದ್ವಾಂಸರಾದ ಶ್ರೀ ಡಿ. ಎಸ್. ಶ್ರೀಧರ ಅವರು ಪದ್ಯಗಳನ್ನು ಹೊಸೆದಿದ್ದರು. ಯಕ್ಷಗಾನದ ಮೂಲಕ ಜನರ ಸಾಮಾಜಿಕ ಅರಿವನ್ನು ಹೆಚ್ಚಿಸುವ ಪ್ರಯತ್ನಗಳು ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ನಡೆದಿರುವುದರಿಂದ ಇಂತಹದೊಂದು ಪ್ರಯೋಗವು ಅಸಹಜ ಎನಿಸಲಿಲ್ಲ.

ಆದರೆ ಕೊರೋನಾ ಕಾರಣದಿಂದ ಜನಜೀವನವೇ ಸ್ತಬ್ಧವಾಗಿದ್ದುದರಿಂದ ಈ ಯಕ್ಷಗಾನವನ್ನು ಜನರು ನೋಡುವಂತೆ ಮಾಡುವುದೇ ಸವಾಲಾಗಿತ್ತು. ಆಗ ಸಹಾಯಕ್ಕೆ ಬಂದುದು ತಂತ್ರಜ್ಞಾನ. ಪ್ರತಿಷ್ಠಾನವು ಯಕ್ಷಗಾನ ಪ್ರದರ್ಶನವನ್ನು ವೀಡಿಯೋ ಚಿತ್ರೀಕರಣಗೊಳಿಸಿ ಮಾರ್ಚ್ 21, 2000ದಂದು ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಹರಿಯಬಿಟ್ಟಿತು. ಈ ಕ್ಷಿಪ್ರ ಸಾಹಸವನ್ನು ಜನರು ಅಚ್ಚರಿ ಹಾಗೂ ಸಂತೋಷದಿಂದಲೇ ಸ್ವಾಗತಿಸಿದರು. ಒಂದೆರಡು ದಿನಗಳಲ್ಲಿ ಪ್ರಪಂಚದಾದ್ಯಂತ ಸಾವಿರಾರು ಜನರು ‘ಕೊರೋನಾ ಜಾಗೃತಿ ಯಕ್ಷಗಾನ’ವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದರ ಬೆನ್ನಿಗೇ ‘ಕೊರೋನಾ ದಿಗ್ಬಂಧನ - ನಾನು ಕಲಿತ ಪಾಠಗಳು’ ಎಂಬ ಶೀರ್ಷಿಕೆಯಲ್ಲಿ ಪ್ರತಿಷ್ಠಾನವು ಯಕ್ಷಗಾನ ಕಲಾವಿದರಿಗೆ ಲೇಖನ ಸ್ಪರ್ಧೆಯನ್ನೂ ಏರ್ಪಡಿಸಿತು. ವೃತ್ತಿಕಲಾವಿದರು, ಹವ್ಯಾಸಿಗಳು ಹಾಗೂ ತಾಳಮದ್ದಳೆ ಅರ್ಥಧಾರಿಗಳಿಗಾಗಿ ಪ್ರತ್ಯೇಕ ವಿಭಾಗಗಳಿದ್ದುದರಿಂದ ಎಲ್ಲ ಕಲಾವಿದರಿಗೂ ಭಾಗವಹಿಸಲು ಅವಕಾಶ ಸಿಕ್ಕಿತು. ಕೊರೋನಾ ಜಂಜಡಲ್ಲಿ ಒತ್ತಡಕ್ಕೆ ಒಳಗಾಗಿದ್ದ ಕಲಾವಿದರ ಮನಸ್ಸುಗಳಿಗೆ ಈ ವೇದಿಕೆಯಿಂದ ಒಂದಿಷ್ಟು ನಿರಾಳತೆ ಪ್ರಾಪ್ತವಾಯಿತು. ಜೂನ್ ತಿಂಗಳಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂರು ದಿನಗಳ ಆನ್ಲೈನ್ ಯಕ್ಷಗಾನವನ್ನು ಏರ್ಪಡಿಸಿ ಸಿರಿಬಾಗಿಲು ತಂಡವು ಕಲಾವಿದರಿಗೆ ಇನ್ನಷ್ಟು ಬೆಂಬಲ ನೀಡಿತು. ಗಡಿನಾಡಿನ ಸುಮಾರು 40 ಮಂದಿ ಕಲಾವಿದರು ಕಂಸವಧೆ, ಸೀತಾಕಲ್ಯಾಣ, ಇಂದ್ರಜಿತು ಕಾಳಗ ಪ್ರಸಂಗಗಳಲ್ಲಿ ಅಭಿನಯಿಸಿದರು.

ಕೊರೋನಾ ಜಾಗೃತಿ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ ಪ್ರತಿಷ್ಠಾನವು ಬೊಂಬೆಯಾಟವನ್ನು ಸಂಯೋಜಿಸಿತು. ಶ್ರೀ ಕೆ. ವಿ. ರಮೇಶ್ ಅವರ ನೇತೃತ್ವದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತಂಡವು ಇಂತಹದೊಂದು ಪ್ರಯೋಗಕ್ಕೆ ನೆರವಾಯಿತು. ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಮತ್ತು ಗ್ರಂಥಾಲಯದ ಸಹಯೋಗವೂ ಇದಕ್ಕಿತ್ತು. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಪ್ರತ್ಯೇಕವಾಗಿ ಸಿದ್ಧಗೊಂಡ ತಲಾ 30 ನಿಮಿಷಗಳ ಬೊಂಬೆಯಾಟವು ಮತ್ತೆ ಯೂಟ್ಯೂಬ್ ಮೂಲಕ ವಿಶ್ವದೆಲ್ಲೆಡೆ ಪಸರಿಸಿತು. ಬೊಂಬೆಯಾಟಕ್ಕೆ ಭಾಷೆಗಿಂತಲೂ ಆಚೆಗಿನ ಒಂದು ಜಾಗತಿಕ ಭಾಷೆಯ ಆಯಾಮವಿರುವುದರಿಂದ ಅದು ಬೇಗನೆ ಜನರನ್ನು ತಲುಪುತ್ತದೆ.

ಕನ್ನಡ ಯಕ್ಷಗಾನ ಬೊಂಬೆಯಾಟಕ್ಕೆ ಶ್ರೀ ಡಿ. ಎಸ್. ಶ್ರೀಧರ ಅವರ ಪದ್ಯಗಳಿದ್ದರೆ, ಹಿಂದಿಯಲ್ಲಿ ಪದ್ಯ ಹಾಗೂ ಸಂಭಾಷಣೆಯನ್ನು ಶ್ರೀ ಸರ್ಪಂಗಳ ಈಶ್ವರ ಭಟ್, ಹಾಗೂ ಇಂಗ್ಲಿಷ್ ಸಂಭಾಷಣೆಗಳನ್ನು ಪ್ರಸನ್ನ ಕುಮಾರಿ ಎ. ಮತ್ತು ದಿನೇಶ್ ಕೆ. ಎಸ್. ರಚಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ಏರ್ಪಡಿಸಿದ್ದ ವೆಬಿನಾರ್ ಸರಣಿಯೊಂದರಲ್ಲಿ ಈ ಪ್ರಯತ್ನವನ್ನು ಪ್ರಸ್ತಾಪಿಸಿ ಪ್ರಶಂಸಿಸುವ ಮೂಲಕ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಪ್ರೊ. ಡೇಲ್ ಫಿಶರ್ ಅಂತಾರಾಷ್ಟ್ರೀಯ ಗಮನವನ್ನೂ ಸೆಳೆದರು.

‘ಪಲಾಂಡು ಚರಿತ್ರೆ’, ‘ಕರ್ಮಣ್ಯೇವಾಧಿಕಾರಸ್ತೇ’, ‘ರಾಮಧಾನ್ಯ ಚರಿತ್ರೆ’ ಹಾಗೂ ‘ಜಡಭರತ’ ಯಕ್ಷಗಾನಗಳು ಪ್ರೇಕ್ಷಕರ ಹಾಗೂ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದ ಸಿರಿಬಾಗಿಲು ಪ್ರತಿಷ್ಠಾನದ ಹಿರಿಮೆಯನ್ನು ಹೆಚ್ಚಿಸಿದ ವಿಶಿಷ್ಟ ಪಯತ್ನಗಳು. ವಿವಿಧ ಕಾರಣಗಳಿಗಾಗಿ ಈ ಯಕ್ಷಗಾನಗಳು ಮೌಲಿಕ ಎನಿಸಿದವಲ್ಲದೆ ಪ್ರೇಕ್ಷಕರು ಹಾಗೂ ವಿದ್ವಾಂಸರ ಪ್ರಶಂಸೆಗೆ ಪಾತ್ರವಾದವು. ಪಲಾಂಡು ಚರಿತ್ರೆ ಹಾಗೂ ರಾಮಧಾನ್ಯ ಚರಿತ್ರೆ ಪ್ರಸಂಗಗಳು ತಮ್ಮೊಳಗೆ ಇಟ್ಟುಕೊಂಡಿದ್ದ ಸಾರ್ವಕಾಲಿಕ ಮೌಲ್ಯಗಳಿಗಾಗಿ ಗಮನಾರ್ಹವೆನಿಸಿದರೆ, ಕರ್ಮಣ್ಯೇವಾಧಿಕಾಸ್ತೇ ಹಾಗೂ ಜಡಭರತ ಯಕ್ಷಗಾನಗಳು ತಮ್ಮ ತಾತ್ವಿಕ ವಿಚಾರಗಳಿಂದ ಸಹೃದಯರಿಗೆ ಹತ್ತಿರವೆನಿಸಿದವು. 

ಕೆರೋಡಿ ಸುಬ್ಬರಾಯರ ಪಲಾಂಡು ಚರಿತ್ರೆ 1896ರಷ್ಟು ಹಿಂದಿನದು. ಮೇಲ್ನೋಟಕ್ಕೆ ನೆಲದಡಿಯಲ್ಲಿ ಬೆಳೆಯುವ ಕಂದಮೂಲಗಳು ಹಾಗೂ ನೆಲದ ಮೇಲೆ ಬೆಳಯುವ ಹಣ್ಣು-ತರಕಾರಿಗಳ ನಡುವಿನ ಜಗಳದ ಪ್ರಸಂಗವಾಗಿ ಕಂಡರೂ, ಅದರ ಹಿಂದೆ ವರ್ಗಸಂಘರ್ಷದ ಚರ್ಚೆಯಿದೆ. ಪಲಾಂಡು ಹಾಗೂ ಚೂತರಾಜನ ನಡುವಿನ ವಾಗ್ವಾದವನ್ನು ವಿಷ್ಣು ಪರಿಹರಿಸುವ ವಿದ್ಯಮಾನದಲ್ಲಿ ತಮ್ಮ ಸ್ಥಾನದ ಕಾರಣಕ್ಕೆ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬ ಸಾರ್ವಕಾಲಿಕ ಸಂದೇಶವನ್ನು ಪ್ರತಿಪಾದಿಸುವ ಉದ್ದೇಶವಿದೆ. ಪ್ರೊ. ಎಂ. ಎ. ಹೆಗಡೆಯವರ ‘ರಾಮಧಾನ್ಯ ಚರಿತ್ರೆ’ಯೂ ಇದನ್ನೇ ಧ್ವನಿಸುತ್ತದೆ. ಕನಕದಾಸರ 12ನೇ ಶತಮಾನದ ರಾಮಧಾನ್ಯ ಚರಿತ್ರೆಯೇ ಇದಕ್ಕೆ ಆಧಾರ. ಭತ್ತ ಮತ್ತು ರಾಗಿಯ ನಡುವೆ ಹುಟ್ಟಿಕೊಳ್ಳುವ ಯಾರು ಶ್ರೇಷ್ಠರು ಎಂಬ ವಾಗ್ವಾದದ ಅಂತ್ಯದಲ್ಲಿ ಕೀಳೆನಿಸಲ್ಪಟ್ಟ ರಾಗಿಯೇ ಮೇಲೆಂದು ತೀರ್ಮಾನವಾಗುವುದು ಪ್ರಸಂಗದ ಕಥಾನಕ. 

ದೇವಿದಾಸ ಕವಿಯ ಕೃಷ್ಣಸಂಧಾನ-ಭೀಷ್ಮಪರ್ವದ ಆಧಾರದಲ್ಲಿ ಪ್ರದರ್ಶನಗೊಂಡ ‘ಕರ್ಮಣ್ಯೇವಾಧಿಕಾರಸ್ತೇ’ ಕರ್ಮಸಿದ್ಧಾಂತದ ಮೇಲ್ಮೆಯನ್ನು ಸಾರುವ ಪ್ರಸಂಗ. ಪೂರ್ವಾರ್ಧದಲ್ಲಿ ಕೌರವನು ಭೀಷ್ಮರನ್ನು ಸೇನಾಧಿಪತ್ಯಕ್ಕೆ ಒಪ್ಪಿಸುವ ಹಾಗೂ ಧರ್ಮರಾಯನು ಭೀಷ್ಮ-ದ್ರೋಣರ ಅಭಯವನ್ನು ಪಡೆಯುವ ಸನ್ನಿವೇಶಗಳಿದ್ದರೆ, ಉತ್ತರಾರ್ಧದಲ್ಲಿ ಗೀತಾಚಾರ್ಯನು ಅರ್ಜುನನ ಗೊಂದಲಗಳನ್ನು ಪರಿಹರಿಸಿ ಜ್ಞಾನದ ಬೆಳಕು ಹರಿಸುವ ಸಂದರ್ಭವಿದೆ. ಶ್ರೀ ಡಿ. ಎಸ್. ಶ್ರೀಧರ ಅವರ ‘ಜಡಭರತ’ ಪ್ರಸಂಗದಲ್ಲಿ ಕರ್ಮಬಂಧ ಹಾಗೂ ಅದ್ವೈತಗಳ ಚರ್ಚೆಯನ್ನು ಸಾಮಾನ್ಯ ಪ್ರೇಕ್ಷಕರಿಗೆ ಸರಳ ಭಾಷೆಯಲ್ಲಿ ತಲುಪಿಸುವ ಪ್ರಯತ್ನವಿದೆ. ಹಾಗೆಯೇ, ತನ್ನ ದೈಹಿಕ ಮತ್ತು ಮಾನಸಿಕ ವ್ಯತ್ಯಾಸಗಳ ಕಾರಣಕ್ಕೆ ಯಾವ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಯಿಂದ  ಹೊರಗುಳಿಯಬಾರದು ಎಂಬ ಈ ಪ್ರಸಂಗದ ಸಂದೇಶ ಎಲ್ಲ ಕಾಲಕ್ಕೂ ಸಲ್ಲುವಂಥದ್ದು.

ಇಂತಹ ಪ್ರಯತ್ನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಹಿಮ್ಮೇಳ-ಮುಮ್ಮೇಳ ಕಲಾವಿದರ ಪಾತ್ರ ತುಂಬ ದೊಡ್ಡದು. ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀ ರಾಧಾಕೃಷ್ಣ ನಾವಡ ಮಧೂರು, ಶ್ರೀ ವಾಸುದೇವ ರಂಗಾ ಭಟ್, ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಶ್ರೀ ರವಿರಾಜ ಪನೆಯಾಲ ಮೊದಲಾದ ಕಲಾವಿದರು ಪ್ರಸಂಗಗಳ ಆಶಯವನ್ನು ಪ್ರತಿಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಭಿನಂದನಾರ್ಹ. ಇಂತಹ ಪ್ರಯತ್ನಗಳಿಗೆ ಬೆಂಬಲವಾದ ಹೈದರಾಬಾದಿನ ಕನ್ನಡ ನಾಟ್ಯರಂಗ, ಬೆಂಗಳೂರಿನ ಅಮರ ಸೌಂದರ್ಯ ಫೌಂಡೇಶನ್ ಕಾರ್ಯ ಪ್ರಶಂಸನೀಯ.

ಯಕ್ಷಗಾನವೂ ಸೇರಿದಂತೆ ಕಲೆ ಸಂಸ್ಕೃತಿಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಸಕಲಕಲಾವಲ್ಲಭ ಕೂಡ್ಲು ಸುಬ್ರಾಯ ಶ್ಯಾನೋಭೋಗರ (1876-1925) ಕುರಿತು ಸಾಕ್ಷ್ಯಚಿತ್ರವನ್ನೂ ಪ್ರತಿಷ್ಠಾನವು ಇತ್ತೀಚೆಗೆ ಹೊರತಂದಿದೆ. ಒಟ್ಟಿನಲ್ಲಿ ಕೊರೋನಾ ಒಂದು ನೆಪವಾಗಿ ಸಿರಿಬಾಗಿಲು ಪ್ರತಿಷ್ಠಾನದಂತಹ ಸಂಸ್ಥೆಗಳು ಅನೇಕ ಹೊಸ ಸಾಧ್ಯತೆಗಳನ್ನು ಅನ್ವೇಷಿಸಿರುವುದು, ಮತ್ತು ಆ ಮೂಲಕ ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು, ಇದರ ಹಿಂದೆ ಯಕ್ಷಗಾನವೆಂಬ ದೊಡ್ಡ ಶಕ್ತಿಯಿರುವುದು ತುಂಬ ಹೆಮ್ಮೆಯ ವಿಚಾರ. 

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: