ಶುಕ್ರವಾರ, ಸೆಪ್ಟೆಂಬರ್ 7, 2018

ಲಘುವಾಗಬಾರದು ಗುರು

ಪ್ರಜಾಪ್ರಗತಿ, ತುಮಕೂರು | ಸೆಪ್ಟೆಂಬರ್ 5, 2018

“ಆರೋಗ್ಯವಂತರಾದ ಮತ್ತು ತಿಳುವಳಿಕೆಯುಳ್ಳ ಒಂದು ಡಜನ್ ಶಿಶುಗಳನ್ನೂ, ಅವನ್ನು ಬೆಳೆಸುವುದಕ್ಕೆ ಬೇಕಾದ ನನ್ನದೇ ಕಲ್ಪನೆಯ ವಿಶೇಷ ಪ್ರಪಂಚವನ್ನೂ ಒದಗಿಸಿರಿ. ಆದ ನಾನು ಯಾವುದೇ ಪೂರ್ವ ನಿರ್ಧಾರವಿಲ್ಲದೆಯೇ, ಅವರಲ್ಲೊಬ್ಬನನ್ನು ಆಯ್ದು- ಅವನ ಪ್ರತಿಭೆ, ಒಲವು, ಪ್ರವೃತ್ತಿ, ಸಾಮಥ್ರ್ಯ, ವೃತ್ತಿ ಹಾಗೂ ವಂಶದ ಪರಂಪರೆಯು ಯಾವುದೇ ಇರಲಿ- ಆತನನ್ನು ತಜ್ಞ ವೈದ್ಯನೋ, ನ್ಯಾಯವಾದಿಯೋ, ಕಲಾವಿದನೋ, ವ್ಯಾಪಾರಿಯೋ, ನಾಯಕನೋ, ಅಷ್ಟೇ ಏಕೆ ಭಿಕ್ಷುಕನೋ ಅಥವಾ ಕಳ್ಳನೋ ಆಗುವಂತೆ ತರಬೇತಿ ನೀಡುವುದಾಗಿ ಭರವಸೆ ಕೊಡುತ್ತೇನೆ” – ಇದು ವರ್ತನಾವಾದಿ ಜೆ. ಬಿ. ವಾಟ್ಸನ್ ಅವರ ಮಾತು.

ಒಬ್ಬ ವ್ಯಕ್ತಿಯ ಬದುಕಿನಲ್ಲಿ ಶಿಕ್ಷಕನ ಪಾತ್ರವೇನು ಎಂಬುದನ್ನು ಬಹುಶಃ ಇದಕ್ಕಿಂತ ಸಮರ್ಥವಾಗಿ ಬಣ್ಣಿಸುವುದು ಕಷ್ಟವೇನೋ? ಶಿಕ್ಷಕ ಮನಸ್ಸು ಮಾಡಿದರೆ ಎಂತಹ ಅದ್ಭುತವನ್ನೂ ಸಾಧಿಸಬಲ್ಲ. ಆತ ಮೈಮರೆತರೆ ಎಂತಹ ಶಾಶ್ವತ ದುರಂತಗಳಿಗೂ ಕಾರಣವಾಗಬಲ್ಲ. ಅದನ್ನು ಚಿಂತಕನೊಬ್ಬ ತುಂಬ ಚೆನ್ನಾಗಿ ವಿವರಿಸುತ್ತಾನೆ: “ವೈದ್ಯರ ತಪ್ಪುಗಳು ಹೂಳಲ್ಪಡುತ್ತವೆ; ವಕೀಲರ ತಪ್ಪುಗಳು ನೇಣುಹಾಕಲ್ಪಡುತ್ತವೆ. ಆದರೆ ಶಿಕ್ಷಕರ ತಪ್ಪುಗಳು ಶತಮಾನದುದ್ದಕ್ಕೂ ಅನಾಥ ಪ್ರೇತಗಳಾಗಿ ವಿಹರಿಸುತ್ತವೆ.”

ಒಬ್ಬ ವ್ಯಕ್ತಿ ವಿದ್ಯಾಭ್ಯಾಸವನ್ನು ಪೂರೈಸಿ ಉದ್ಯೋಗ ಹಿಡಿಯುವವರೆಗಿನ ಅವಧಿಯಲ್ಲಿ ಬಹುಪಾಲು ಸಮಯವನ್ನು ತಂದೆ-ತಾಯಿಗಿಂತಲೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜತೆಯಲ್ಲೇ ಕಳೆದಿರುತ್ತಾನೆ. ಮನೆಯೆ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರುವಾದರೂ ವ್ಯಕ್ತಿಯ ಒಟ್ಟಾರೆ ವರ್ತನೆಯ ಮೇಲೆ ಅಪಾರ ಪ್ರಭಾವವನ್ನು ಬೀರುವವರು ಶಿಕ್ಷಕರೇ. ಪ್ರಾಥಮಿಕ ಶಾಲಾ ಹಂತದಲ್ಲಂತೂ ಶಿಕ್ಷಕರು ಹೇಳಿದ್ದೆಲ್ಲವನ್ನೂ ಒಂದಿಷ್ಟೂ ಅನುಮಾನಿಸದೆ ಸ್ವೀಕರಿಸುವ ಮುಗ್ಧ ಮನಸ್ಸು ಮಕ್ಕಳದು. ಶಿಕ್ಷಕರು ತಪ್ಪನ್ನೇ ಹೇಳಿಕೊಟ್ಟರೂ ಅದೇ ಸರಿ ನಂಬುವ ವಯಸ್ಸು ಅದು. ಅಮಾಯಕ ಮಕ್ಕಳು ತಮ್ಮ ಗುರುಗಳ ಮೇಲೆ ಇಡುವ ವಿಶ್ವಾಸ ಆ ಮಟ್ಟದ್ದು. ಅವರದ್ದು ಹೂವು-ಬಳ್ಳಿಯ ಸಂಬಂಧ. ನೀವು ಎಷ್ಟಾದರೂ ಪದವಿಗಳನ್ನು ಪಡೆದಿರಿ, ಕ್ಷಣಕಾಲ ಕಣ್ಮುಚ್ಚಿ ಕುಳಿತು ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತಿದೊಡ್ಡ ಪ್ರಭಾವ ಬೀರಿದವರು ಯಾರೆಂದು ಯೋಚಿಸಿದರೆ ಮನಸ್ಸು ಅನಾಯಾಸವಾಗಿ ಪ್ರಾಥಮಿಕ ಶಾಲಾ ದಿನಗಳ ಕಡೆಗೇ ಹೊರಳುತ್ತದೆ.

ಗುರು ಗೋವಿಂದ ದೋವೂ ಖಡೇ ಕಾಕೇ ಲಾಗೂ ಪಾಯ್|
ಬಲಿಹಾರಿ ಗುರು ಆಪ್‍ನೀ ಗೋವಿಂದ ದಿಯೋ ಬತಾಯ್||
ಎಂಬುದು ಸಂತ ಕಬೀರರ ಪ್ರಸಿದ್ಧ ದ್ವಿಪದಿ. ಗುರು ಹಾಗೂ ದೇವರು ಜತೆಗೇ ನಿಂತಿದ್ದರೆ ನೀನು ಮೊದಲು ಯಾರಿಗೆ ನಮಸ್ಕರಿಸುತ್ತೀ ಎಂದು ಕಬೀರರನ್ನು ಯಾರೋ ಕೇಳಿದರಂತೆ. ನಾನು ಮೊದಲು ಗುರುಗಳಿಗೇ ನಮಸ್ಕರಿಸುತ್ತೇನೆ, ಏಕೆಂದರೆ ದೇವರನ್ನು ತೋರಿಸಿಕೊಟ್ಟವರು ಗುರುಗಳು ಎಂದರಂತೆ ಕಬೀರರು.

ಗುರುವಿಗೆ ಸಮಾಜದಲ್ಲಿ ಇರುವ ಸ್ಥಾನವೇನೋ ದೊಡ್ಡದೇ. ಆದರೆ ಆ ಸ್ಥಾನವನ್ನು ಉಳಿಸಿಕೊಳ್ಳುವುದೂ ಅವನ ಜವಾಬ್ದಾರಿ. ಅಧ್ಯಾಪಕರ ಬಗ್ಗೆ ತೀರಾ ಕನಿಷ್ಟವೆನಿಸುವ ಮಾತುಗಳೂ ಸಮಾಜದಲ್ಲಿ ಆಗಾಗ ಕೇಳಿ ಬರುವುದಿದೆ. ಅದಕ್ಕೆ  ಗುರು ಎಂಬ ಸ್ಥಾನ ಶಿಕ್ಷಕ ಎಂಬ ವೃತ್ತಿಯಾಗಿ ಬದಲಾಗಿರುವುದೇ ಪ್ರಮುಖ ಕಾರಣ. ಜೀವನೋಪಾಯಕ್ಕೆ ಯಾವುದಾದರೂ ವೃತ್ತಿ ಅಗತ್ಯ. ಅಧ್ಯಾಪನವನ್ನು ಆರಿಸಿಕೊಂಡವರಿಗೂ ಸಂಬಳ ಬೇಕು. ಆದರೆ ಸಂಬಳವನ್ನು ಪಡೆಯುವುದಷ್ಟೇ ಶಿಕ್ಷಕನ ಪ್ರಮುಖ ಗುರಿ ಆದಾಗ ಅವನ ವೃತ್ತಿಯ ನಿಜವಾದ ಉದ್ದೇಶ ಹಿನ್ನೆಲೆಗೆ ಸರಿಯುತ್ತದೆ.

ಶಿಕ್ಷಕನಿಂದ ಲೈಂಗಿಕ ಕಿರುಕುಳ, ಶಿಕ್ಷಕನಿಂದಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಇತ್ಯಾದಿ ಸುದ್ದಿಗಳನ್ನು ದಿನನಿತ್ಯ ಎಂಬಂತೆ ಕೇಳುತ್ತೇವೆ. ಯಾಕೆ ಹೀಗಾಗುತ್ತಿದೆ? ಅತ್ಯುನ್ನತ ನೈತಿಕ ಮೌಲ್ಯಗಳನ್ನು ತಾನು ಹೊಂದುತ್ತಲೇ ತನ್ನನ್ನು ನಂಬಿರುವ ವಿದ್ಯಾರ್ಥಿಗಳಿಗೂ ಅವನ್ನು ದಾಟಿಸುವ ಮಹತ್ತರ ಹೊಣೆಗಾರಿಕೆ ಗುರುವಿನದ್ದು. ಅವನೇ ಅನೈತಿಕ ಕೆಲಸಗಳಿಗೆ ಜಾರಿದರೆ ವಿದ್ಯಾರ್ಥಿಗಳು ಯಾವ ಮಾದರಿಯನ್ನು ಅನುಸರಿಸಬೇಕು? ಬೇಲಿಯೇ ಎದ್ದು ಹೊಲವನ್ನು ಮೇಯುವುದಕ್ಕೆ ಇದರಿಂದ ದೊಡ್ಡ ನಿದರ್ಶನ ಇದೆಯೇ? ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ನಿಜವಾದ ಪಠ್ಯಪುಸ್ತಕ. ಕೈಯಲ್ಲಿರುವ ಪುಸ್ತಕಗಳಿಗಿಂತಲೂ ಎದುರಿಗಿರುವ ಗುರುವನ್ನೇ ಅವರು ಹೆಚ್ಚು ಓದುತ್ತಾರೆ ಮತ್ತು ಅನುಕರಿಸುತ್ತಾರೆ. ಪುಸ್ತಕ ತಪ್ಪಿದರೆ ಮಸ್ತಕದ ಗತಿಯೇನು?

ಏಕಲವ್ಯನ ಹಿಂದೆ ಒಬ್ಬ ದ್ರೋಣಾಚಾರ್ಯರಿದ್ದರು. ಶಿವಾಜಿಯ ಹಿಂದೆ ಒಬ್ಬ ಸಮರ್ಥ ರಾಮದಾಸರಿದ್ದರು. ಹಕ್ಕಬುಕ್ಕರ ಹಿಂದೆ ವಿದ್ಯಾರಣ್ಯರಿದ್ದರು. ವಿವೇಕಾನಂದರ ಹಿಂದೊಬ್ಬ ರಾಮಕೃಷ್ಣ ಪರಮಹಂಸರಿದ್ದರು. ಯಾವ ಮಹಾತ್ಮರ ಜೀವನ ಚರಿತ್ರೆಯನ್ನು ತೆರೆದರೂ ಗುರುಗಳು ಅವರ ಮೇಲೆ ಬೀರಿದ ಅದ್ಭುತ ಪ್ರಭಾವ ಕಣ್ಣಿಗೆ ಕಟ್ಟುತ್ತದೆ. ಭಾರತದ ಗುರುಪರಂಪರೆಯೇ ಅಂತಹದು. ಗುರು ಇಲ್ಲದ ಬದುಕು ಕತ್ತಲ ಹಾದಿಯ ಪಯಣವಷ್ಟೇ. ‘ವಿದ್ಯಾರ್ಥಿ ಕಲಿಯಲು ವಿಫಲನಾದರೆ, ಅಧ್ಯಾಪಕ ಕಲಿಸಲು ವಿಫಲನಾಗಿದ್ದಾನೆಂದು ಅರ್ಥ’ ಎಂಬ ಮಾತೂ ಮತ್ತೆ ಗುರುವಿನ ಜವಾಬ್ದಾರಿಯನ್ನೇ ಬೊಟ್ಟುಮಾಡುತ್ತದೆ.

ಗುರುವನ್ನು ಗೌರವಿಸಿ, ಅವರ ಸದಾಶಯದ ಶ್ರೀರಕ್ಷೆ ನಿಮ್ಮ ಮೇಲಿದ್ದರೆ ಜೀವನದಲ್ಲಿ ಎಷ್ಟು ಎತ್ತರಕ್ಕಾದರೂ ಏರಬಲ್ಲಿರಿ. ಹೀಗೆಂದು ಹೇಳುವುದರ ಜೊತೆಗೆ ಅಂತಹ ಎತ್ತರದ ವ್ಯಕ್ತಿತ್ವವನ್ನು ಗುರುವೂ ಉಳಿಸಿಕೊಳ್ಳಬೇಕು ಎಂಬುದನ್ನೂ ಹೇಳಬೇಕು. ಶಿಕ್ಷಕ ಸಮಾಜದ ಎದುರು ಸಣ್ಣವನಾಗಬಾರದು. ಎಲ್ಲ ಸಣ್ಣತನಗಳನ್ನು ಮೀರಲು ಅವನಿಗೆ ಸಾಧ್ಯವಾದಾಗಲಷ್ಟೇ ನಿಜವಾದ ಗುರುತ್ವ ಲಭಿಸುತ್ತದೆ. ಹೌದು, ಗುರು ಲಘುವಾಗಬಾರದು.

ಕಾಮೆಂಟ್‌ಗಳಿಲ್ಲ: