ಗುರುವಾರ, ಮೇ 5, 2011

ಮಾಧ್ಯಮಗಳಿಗೆ ಈ ಯುದ್ಧೋನ್ಮಾದದ ಭಾಷೆ ಅನಿವಾರ್ಯವೇ?

[ವಿಷಯ ಸ್ವಲ್ಪ ಹಳತಾಯಿತೇನೋ? ಪ್ರಜಾವಾಣಿಗೆ ಕಳಿಸಿದ್ದೆ. ಪ್ರಕಟವಾಗುತ್ತದೋ ಅಂತ ಕಾಯ್ತಿದ್ದೆ. ಏಪ್ರಿಲ್ ೧೧, ೨೦೧೧ರಂದು ಕಳಿಸಿದ್ದು ’ಸಂಗತ’ ಅಂಕಣಕ್ಕಾಗಿ. ಬಹುಶಃ ಇನ್ನು ಪ್ರಕಟವಾಗಲಾರದು ಅಂದುಕೊಂಡು, ಈಗ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.]

ಕ್ರಿಕೆಟ್‌ಗೆ ಮಾಧ್ಯಮಗಳು ಇಷ್ಟೊಂದು ಮಹತ್ವ ಕೊಡಬೇಕೇ ಎಂಬ ವಿಷಯ ಆಗಿಂದಾಗ್ಗೆ ಚರ್ಚೆಯಾಗುವುದಿದೆ. ಇತ್ತೀಚೆಗಷ್ಟೇ ಮುಗಿದ ವಿಶ್ವಕಪ್‌ನ ಸಂದರ್ಭದಲ್ಲೂ ಈ ಕುರಿತ ಅನೇಕ ಪ್ರಶ್ನೆಗಳು ಚರ್ಚೆಗೆ ಬಂದವು; ಸಾಕಷ್ಟು ಸಮರ್ಥನೆಗಳೂ ಮಂಡನೆಯಾದವು. ಈ ವಾದ-ಪ್ರತಿವಾದಗಳು ಹೊಸತೇನಲ್ಲ. ಆದರೆ, ಈ ಹಿಂದಿನ ಎಲ್ಲ ಸನ್ನಿವೇಶಗಳಿಗಿಂತಲೂ ಈ ಬಾರಿ ಹೆಚ್ಚು ಗಮನ ಸೆಳೆದ ಸಂಗತಿಯೆಂದರೆ ಕ್ರಿಕೆಟ್ ವರದಿಯ ಸಂದರ್ಭದಲ್ಲಿ ಮಾಧ್ಯಮಗಳು ಬಳಸಿದ ಭಾಷೆ.

ಭಾರತ-ಪಾಕಿಸ್ತಾನದ ನಡುವೆ ಪಂದ್ಯ ಇದ್ದಾಗಲೆಲ್ಲ ಎರಡೂ ರಾಷ್ಟ್ರಗಳನ್ನು ಪರಸ್ಪರ ’ಸಾಂಪ್ರದಾಯಿಕ ಎದುರಾಳಿಗಳು’ ಎಂಬ ಒಕ್ಕಣೆಯಿಂದ ವಿವರಿಸುವುದು ಪತ್ರಿಕೆಗಳಲ್ಲಿ ಸಾಮಾನ್ಯ. ’ಕ್ರೀಡೆಯಲ್ಲೂ ದ್ವೇಷದ ಛಾಯೆ ತರಬೇಕೆ? ಪಂದ್ಯ ಆಡುವವರು-ನೋಡುವವರೆಲ್ಲ ಆ ಭಾವನೆಯನೆಯೊಳಗೇ ಬೇಯಬೇಕೆ?’ ಎಂಬ ಪ್ರಶ್ನೆಯೂ ಅಷ್ಟೇ ಸಾಮಾನ್ಯ. ಆದರೆ ವರ್ಷಾನುಗಟ್ಟಲೆ ಬಳಸಿದರೂ ಆ ನುಡಿಗಟ್ಟು ಪತ್ರಿಕೆಗಳಿಗೋ, ಟಿವಿ ಚಾನೆಲ್‌ಗಳಿಗೋ ಸವಕಲು ಎನಿಸಿಲ್ಲ. ಮೊನ್ನೆಯ ವಿಶ್ವಕಪ್‌ನ ಸಂದರ್ಭದಲ್ಲಂತೂ ಮಾಧ್ಯಮಗಳು ಹೊಸಹೊಸ ಹೋಲಿಕೆಗಳ, ವರ್ಣನೆಗಳ, ಪದಗುಚ್ಛಗಳ ಬಳಕೆಗೆ ಶಕ್ತಿಮೀರಿ ಪ್ರಯತ್ನಿಸಿದ್ದನ್ನು ಕಾಣಬಹುದು.

ಬಗ್ಗುಬಡಿ, ಚಚ್ಚಿಹಾಕು ಇತ್ಯಾದಿ ಹತ್ತಾರು ಪದಗಳು ವಿಶ್ವಕಪ್‌ನುದ್ದಕ್ಕೂ ಮಾಧ್ಯಮಗಳಲ್ಲಿ ಮಿಂಚಿದವು. ಭಾರತ-ಪಾಕ್ ನಡುವಿನ ಸೆಮಿಫೈನಲ್ ಹಾಗೂ ಭಾರತ-ಶ್ರೀಲಂಕಾ ನಡುವಿನ ಫೈನಲ್ ಪಂದ್ಯಗಳಲ್ಲಂತೂ ಈ ಯುದ್ಧೋನ್ಮಾದವೇ ವರದಿ-ತಲೆಬರಹಗಳ ತುಂಬೆಲ್ಲ ಎದ್ದುಕುಣಿದಾಡುತ್ತಿತ್ತು. ಭಾರತ-ಪಾಕ್ ಪಂದ್ಯವನ್ನು ’ಮೊಹಾಲಿ ಮಹಾಯುದ್ಧ’, ’ಮಹಾಸಮರ’, ’ಪಾಕಿಸ್ತಾನವೆಂಬ ಪರಮವೈರಿ’ ಎಂಬಿತ್ಯಾದಿ ಪದಗಳಿಂದ ವರ್ಣಿಸಲಾಯಿತು. ಒಂದು ಪತ್ರಿಕೆಯಂತೂ ’ಮಾರ್ಚ್ ೩೦: ಇಂಡೋ-ಪಾಕ್ ಯುದ್ಧ’ ಎಂದೇ ತಲೆಬರಹ ನೀಡಿ ಓದುಗರನ್ನು ಬೆಚ್ಚಿಬೀಳಿಸಿತು.

ಪಂದ್ಯದ ನಂತರದ ಒಂದು ವರದಿಯಲ್ಲಿ ಭಾರತದ ಆಟಗಾರರು ’ಪಾಕಿಗಳ ಹುಟ್ಟಡಗಿಸಿದರು’ ಎಂದು ಬರೆದರೆ, ಇನ್ನೊಂದು ಪತ್ರಿಕೆ ’ಪಾಕ್ ಪೌರುಷ ನುಚ್ಚುನೂರು’ ಎಂದೂ, ಮತ್ತೊಂದು ಪತ್ರಿಕೆ ’ಪಾಕ್ ಗಡಿಪಾರು’ ಎಂದೂ ಬರೆಯಿತು. ’ದೋನಿ ದೈತ್ಯಸಂಹಾರಿಯಾಗಿ ಹೊರಹೊಮ್ಮಿದ್ದಾರೆ’ ಎಂಬ ಉಪಮೆಯೂ ಬಂತು. ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ಭಾರತದ ಆಟಗಾರರು ಕ್ರಿಕೆಟ್ ಕಾರ್ಗಿಲ್‌ನಲ್ಲಿ ಆಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು ಎಂಬ ಹೋಲಿಕೆ ಇನ್ನೊಂದು ಪತ್ರಿಕೆಯಲ್ಲಿತ್ತು. ಭಾರತ-ಪಾಕಿಸ್ತಾನದ ನಡುವೆ ಗಡಿವಿವಾದ, ರಾಜಕೀಯ ವೈಷಮ್ಯ ಎಲ್ಲ ಇದ್ದದ್ದೇ, ಆದರೆ ಕ್ರಿಕೆಟ್ ವರದಿಗೂ ಅದನ್ನೆಲ್ಲ ಅಂಟಿಸಿಕೊಳ್ಳಬೇಕೆ? ಇದೆಂತಹ ಕ್ರೀಡಾಸ್ಫೂರ್ತಿ?

ಭಾರತ-ಶ್ರೀಲಂಕಾ ನಡುವಿನ ಫೈನಲ್ ಪಂದ್ಯದ ಕುರಿತಾದ ವರದಿಗಳೂ ಈ ರಣೋತ್ಸಾಹದಿಂದ ಹೊರತಾಗಿರಲಿಲ್ಲ. ಅನೇಕ ಪತ್ರಿಕೆಗಳು, ಚಾನೆಲ್‌ಗಳು ಇದನ್ನೊಂದು ರಾಮಾಯಣದ ಯುದ್ಧವೆಂಬ ಹಾಗೆ ಚಿತ್ರಿಸಿದವು. ’ಮುಂಬೈಯಲ್ಲಿ ರಾಮಾಯಣ’ ಎಂಬುದು ಒಂದು ಪತ್ರಿಕೆಯ ಶೀರ್ಷಿಕೆಯಾದರೆ, ’ರಾಮ-ರಾವಣ ಕಾಳಗ’ ಎಂಬುದು ಇನ್ನೊಂದರ ತಲೆಬರಹ. ’ನಾಳೆ ಲಂಕಾದಹನ’, ’ಲಂಕಾದಹನಕ್ಕೆ ಭಾರತ ಸಜ್ಜು’ ಎಂಬ ಶೀರ್ಷಿಕೆಗಳೂ ವಿಜೃಂಭಿಸಿದವು. ಇದು ಸಾಲದು ಎಂಬಂತೆ ಶನಿವಾರ ರಾಮ ಮತ್ತು ರಾವಣರ ನಡುವೆ ಮ್ಯಾಚ್ ನಡೆಯಲಿದೆ... ಈ ಬಾರಿಯೂ ರಾಮನೇ ರಾವಣನನ್ನು ಸೋಲಿಸಿ ಸೀತೆಯನ್ನು ಕರೆತರುತ್ತಾನೆ ಎಂಬಿತ್ಯಾದಿ ಎಸ್‌ಎಂಎಸ್‌ಗಳು ಮೊಬೈಲ್‌ಗಳಲ್ಲಿ ಹರಿದಾಡಿದವು. ವಿಶ್ವಕಪ್ ಫೈನಲ್ ಎಂದರೆ ನಿಸ್ಸಂಶಯವಾಗಿ ಅದೊಂದು ಮಹತ್ವದ ಘಟನೆ, ಭಾರತದ ಮಟ್ಟಿಗಂತೂ ಉಸಿರು ಬಿಗಿಹಿಡಿದು ಕಾಯುವಂತಹ ಸನ್ನಿವೇಶ; ಎಲ್ಲ ನಿಜ, ಆದರೆ ಅದನ್ನೊಂದು ವೈಷಮ್ಯದ, ಉನ್ಮಾದದ ಮಟ್ಟಕ್ಕೆ ಕೊಂಡೊಯ್ಯಬೇಕೆ? ರಾಮ-ರಾವಣರ ನಡುವಿನ ಯುದ್ಧದ ಪೌರಾಣಿಕ ಕಥಾನಕವನ್ನೂ ಎರಡು ದೇಶಗಳ ನಡುವಣ ಕ್ರೀಡಾ ಪಂದ್ಯವೊಂದನ್ನೂ ಈ ರೀತಿಯೆಲ್ಲ ತೂಗಿನೋಡುವ ಅವಶ್ಯಕತೆ ಇದೆಯೇ?

ಇದು ಯುದ್ಧವಲ್ಲ. ಇದೊಂದು ದೊಡ್ಡ ಕ್ರಿಕೆಟ್ ಪಂದ್ಯ. ಕ್ರಿಕೆಟ್ ಮೇಲಷ್ಟೇ ಮಾಧ್ಯಮಗಳು ವರದಿಗಳನ್ನು ನೀಡಬೇಕು, ಎಂಬ ಪಾಕ್ ತಂಡದ ನಾಯಕನ ವಿನಂತಿ, ಅದೇ ಅರ್ಥ ಬರುವ ಭಾರತದ ಆಟಗಾರರ ಹೇಳಿಕೆಗಳನ್ನು ನಾವು ಗಮನಿಸಬೇಕು. ಅದರಲ್ಲೂ ಪಾಕಿಸ್ತಾನವು ಪಂದ್ಯವನ್ನು ಸೋತ ಬಳಿಕ ಆ ದೇಶದ ಪತ್ರಿಕೆಗಳು ಅಭಿವ್ಯಕ್ತಿಸಿದ ಸಹಿಷ್ಣುತೆಯನ್ನಾದರೂ ನಾವು ತೆರೆದ ಕಣ್ಣುಗಳಿಂದ ನೋಡಬೇಕು. ಕ್ರಿಕೆಟ್‌ಗಾಗಿ ಜನರು ಹೇಗೆ ಒಂದಾಗಿದ್ದರು... ನಮ್ಮ ತಂಡದವರು ಧೈರ್ಯದಿಂದ ಹೋರಾಡಿ ಗೌರವಯುತವಾಗಿ ಸೋತರು. ರಾಜಕಾರಣಿಗಳು ಇದರಿಂದಲಾದರೂ ಪಾಠ ಕಲಿತು ಸಂಬಂಧ ಸುಧಾರಣೆಗೆ ಪ್ರಯತ್ನಿಸಬೇಕು, ಎಂದು ಅಲ್ಲಿನ ಒಂದು ಪತ್ರಿಕೆ ಬರೆಯಿತು.

ಇದುವರೆಗಿನ ಕಹಿಯನ್ನು ಕ್ರಿಕೆಟ್ ದೂರ ಮಾಡಿದೆ. ಇನ್ನೇನಿದ್ದರೂ ರಾಜಕಾರಣಿಗಳು ಪ್ರಯತ್ನ ಮುಂದುವರಿಸಬೇಕು. ಸಂಬಂಧದ ಕೊಂಡಿಗಳನ್ನು ಅವರೇ ಭದ್ರಗೊಳಿಸಬೇಕು. ...ಇದೇ ಸ್ಫೂರ್ತಿ ಹಾಗೂ ಒಗ್ಗಟ್ಟಿನಿಂದ ಜನ ಮುನ್ನುಗ್ಗುವಂತಹ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು... ಎಂಬುದು ಅಲ್ಲಿನ ಮಾಧ್ಯಮಗಳ ಅಭಿಪ್ರಾಯ. ಒಂದು ಪತ್ರಿಕೆಯಂತೂ, ಎರಡು ದೇಶಗಳ ಮಾತುಕತೆ ಪುನರಾರಂಭಕ್ಕೆ ಇದು ಸಕಾಲ ಎಂಬಲ್ಲಿಯವರೆಗೆ ಯೋಚನೆ ಮಾಡಿತು. ಭಾರತ-ಪಾಕ್ ಸಮಸ್ಯೆಯನ್ನೂ ಕ್ರಿಕೆಟ್ ಪಂದ್ಯವನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾದೀತೇ? ಒಂದು ಕ್ರಿಕೆಟ್ ಪಂದ್ಯ ರಾಯಭಾರದ ವೇದಿಕೆಯಾದೀತೇ? ಹೇಳುವುದು ಕಷ್ಟ. ಆದರೆ ಅದನ್ನೊಂದು ಯುದ್ಧೋನ್ಮಾದದ ಕಣ್ಣಿನಿಂದ ನೋಡುವ ಬದಲು ಈ ರೀತಿ ಯೋಚಿಸುವುದು ಎಷ್ಟೋ ಮೇಲು ಎನಿಸುತ್ತದೆ.

’ಇಂಡೋ-ಪಾಕ್ ಯುದ್ಧ’ ’ಲಂಕಾದಹನ’ ’ಕ್ರಿಕೆಟ್ ಕಾರ್ಗಿಲ್’ ’ರಾಮ-ರಾವಣ ಕಾಳಗ’ ಇತ್ಯಾದಿ ಠೇಂಕಾರಗಳು ’ಸಂಬಂಧದ ಕೊಂಡಿಗಳನ್ನು ಭದ್ರಗೊಳಿಸಬೇಕು’ ಎಂಬಂತಹ ಸೂಚನೆಗಳ ಎದುರು ತೀರಾ ಕುಬ್ಜವಾಗಿ ತೋರುತ್ತವೆ. ಇಷ್ಟಕ್ಕೂ ಆ ಬಗೆಯ ಉಪಮೆಗಳನ್ನು ಮಾಧ್ಯಮಗಳು ಬಳಸಿದ ತಕ್ಷಣ ದೇಶಗಳೇನು ಕಾಳಗಕ್ಕೆ ಸಿದ್ಧವಾಗಿಬಿಡುತ್ತವೆಯೇ ಎಂದು ಕೇಳಬಹುದು. ಅದು ಬೇರೆ ಪ್ರಶ್ನೆ. ಆದರೆ ಮಾಧ್ಯಮಗಳ ಸಾಮರ್ಥ್ಯವನ್ನು, ಜನಾಭಿಪ್ರಾಯ ರೂಪಿಸುವ ಅವುಗಳ ತಾಕತ್ತನ್ನು ಇತಿಹಾಸ ನೋಡಿದೆ. ಭಾಷೆಯೇ ಪತ್ರಿಕೆಗಳ ಶಕ್ತಿ. ಅದು ಜಲಾಶಯದಲ್ಲಿರುವ ವಿದ್ಯುತ್ತಿನ ಹಾಗೆ, ಪ್ರಚ್ಛನ್ನ. ದುರಂತ ಸಂಭವಿಸಬೇಕಾದರೆ ಕಾಳ್ಗಿಚ್ಚೇ ಬೇಕಾಗಿಲ್ಲ, ಒಂದು ಕಿಡಿಯೂ ಸಾಕು, ಅಲ್ಲವೇ?

7 ಕಾಮೆಂಟ್‌ಗಳು:

ಮನೋರಮಾ.ಬಿ.ಎನ್ ಹೇಳಿದರು...

naavu ondashtu jana matra heenge arachikollekkashte anna...indina madhyamango mattu adrallippavakke flashing, breaking newsgintlu hecchagi cracking, spoiling, rashinng, burning issues beku. hangagi navu kaliyuva kalada adarsha jounalism mundendu sexpect madlikke sadya ille.upaya enta helire navu adashtu adarinda doora ippadu.. kocche mele kallu haki rattisikombadentake? samajika javabdari irekku heludu nijavadaru navu matra bobbe hoadadare namma gantalu haladdashte bantu. hangagi ninna bareha prakatavagaddaralli vishesha enta ille. adu mamooooolu..:-)

Sahana ಹೇಳಿದರು...

ಪ್ರಜಾವಾಣಿಲ್ಲಿಯ ಪ್ರಕಟವಾಗುತ್ತದೋ ...
KICHAYESUTIDDIRA

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

@manorama ಆಶಾವಾದಿಗಳಾಗೋಣ?

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

@sahana media ಕಿಚಾಯಿಸುತ್ತಿಲ್ಲ ಸಾರ್, ಪ್ರಾಮಾಣಿಕ ನಿರೀಕ್ಷೆ ಅಷ್ಟೆ...

Hariprasada. A ಹೇಳಿದರು...

chennagide padma.. Khanditavaagiyu maadyamagalu aa eradu match bagge atiyaage vartisiddu sullalla.Nam PM- Pak PM na match nodoke karedu souhaardate meredru. aadre prajaapabhutvada naalkane stambakke maate javaabdaari maretu hogirodu viparyaasa!

Nanda Kishor B ಹೇಳಿದರು...

:(:(:(

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

@yaani: Thank you Hari.
@Nanda: :-)