The woods are lovely, dark & deep, But I have promises to keep, Miles to go before I sleep... ROBERT FROST
ಶನಿವಾರ, ಆಗಸ್ಟ್ 15, 2009
ಫಲ್ಗುಣಿಯಲ್ಲಿ ಸಮಾಧಿಯಾದ ಮುದ್ದು ಮಕ್ಕಳ ನೆನೆದು...
ಅವು ನಿರ್ಜೀವ ದೇಹಗಳೆಂದರೆ ಒಪ್ಪಲು ಮನಸ್ಸು ಸಿದ್ಧವಿರಲಿಲ್ಲ. ಹೆಸರು ಹಿಡಿದು ಕೂಗಿದರೆ ಮರುಕ್ಷಣ ಛಕ್ಕನೆ ಎದ್ದು ಕೂರುತ್ತಾರೇನೋ ಎಂಬಂತಿತ್ತು ಆ ಪುಟ್ಟ ಮಕ್ಕಳ ಮುಖಭಾವ. ಕಟವಾಯಿಯಲ್ಲಿ ಕೊಂಚ ಬಿಳಿನೊರೆ, ತೊಟ್ಟ ಯೂನಿಫಾರ್ಮೆಲ್ಲ ಒದ್ದೆಒದ್ದೆ ಎಂಬುದು ಬಿಟ್ಟರೆ ಅವರ ದೇಹದ ಇಂಚಿಂಚಿನಲ್ಲೂ ಜೀವಭಾವ ಹರಿದಾಡುತ್ತಿದೆಯೇನೋ ಎಂಬ ಹಾಗೆ ಭಾಸವಾಗುತ್ತಿತ್ತು. ಆದರೆ ಅವರೆಲ್ಲ ಶವಾಗಾರದಲ್ಲಿ ಮಲಗಿದ್ದರಲ್ಲ, ಛೇ.
ಹೌದು, ಉಳಾಯಿಬೆಟ್ಟು ದುರಂತ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. ಇಡೀ ದೇಶ ಅರವತ್ತೆರಡನೆ ಸ್ವಾತಂತ್ರ್ಯೋತ್ಸವದ ತಯಾರಿಯಲ್ಲಿ ತೊಡಗಿದ್ದರೆ, ದಕ್ಷಿಣ ಕನ್ನಡ ಮಾತ್ರ ಸಾವಿನ ಸೂತಕದಲ್ಲಿ ಮಿಂದೇಳುತ್ತಿತ್ತು. ಅವೊತ್ತು ಆಗಸ್ಟ್ ೧೪, ೨೦೦೮. ಬೆಳಗ್ಗಿನ ಉಪಹಾರಕ್ಕೆ ತೊಡಗಿದವರೆಲ್ಲ ಇನ್ನೂ ಕೈ ತೊಳೆಯುವ ಮುನ್ನವೇ ಬಡಿದಿತ್ತು ಸಿಡಿಲಿನಂತಹ ವಾರ್ತೆ: ಉಳಾಯಿಬೆಟ್ಟಿನಲ್ಲಿ ಶಾಲಾ ವಾಹನವೊಂದು ಫಲ್ಗುಣಿ ನದಿಗೆ ಉರುಳಿದೆಯಂತೆ, ಪೂರ್ತಿ ಮಕ್ಕಳಿದ್ದರಂತೆ, ನದಿಯೂ ಉಕ್ಕಿ ಹರಿಯುತ್ತಿತ್ತಂತೆ...
"ನಾನು ಉಳಾಯಿಬೆಟ್ಟಿಗೆ ಹೋಗ್ತಿದ್ದೇನೆ, ನೀವು ವೆನ್ ಲಾಕಿಗೆ (ಜಿಲ್ಲಾ ಸರ್ಕಾರಿ ಆಸ್ಪತ್ರೆ) ಹೋಗಿರಿ. ಭಕ್ತಿ ಆ ಶಾಲೆಗೆ ಹೋಗ್ತಾಳೆ" ಅಂತ ನೈನಾ ಗಡಿಬಿಡಿಯಲ್ಲಿ ಹೇಳಿ ಮುಗಿಸುತ್ತಿದ್ದಂತೆ ನಾನು ರೈನ್ ಕೋಟ್ ಸಿಗಿಸಿಕೊಂಡು ಸ್ಕೂಟರ್ ಏರಿದ್ದೆ.
ಮಳೆ ಸುರಿಯುತ್ತಿತ್ತು ಧಾರಾಕಾರ. ಎರಡು ಮೂರು ದಿನಗಳಿಂದ ಅದೇ ಹಾಡು ಅದೇ ರಾಗ. ಇಲ್ಲಿ ಅದೇನೂ ಹೊಸತಲ್ಲ ಬಿಡಿ. ಆದರೆ ಈ ಬಾರಿಯಂತೂ ಅದೇ ಮಳೆ ಮ್ರ್ ತ್ಯು ಸ್ವರೂಪದಲ್ಲಿ ಗುಡುಗುಡಿಸುತ್ತಿತ್ತು. "ಜಿಲ್ಲೆಯ ಎಲ್ಲ ನದಿಗಳೂ ಉಕ್ಕಿ ಹರಿಯುತ್ತಲೇ ಇವೆ, ಅಂದರೆ ಫಲ್ಗುಣಿಯ ಕಥೆಯೂ ಭಿನ್ನವಿರಲಿಕ್ಕಿಲ್ಲ. ಮಕ್ಕಳೇ ತುಂಬಿತುಳುಕುತ್ತಿದ್ದ ಬಸ್ಸು ಆ ನದಿಗೆ ಬಿದ್ದಿತೆಂದರೆ..." ಇತ್ಯಾದಿ ನೂರೆಂಟು ಯೋಚನೆಗಳು ತಲೆತುಂಬೆಲ್ಲ ಓಡಾಡುತ್ತಿದ್ದಂತೆ ನಾನು ವೆನ್ಲಾಕಿನ ಮುಂದಿದ್ದೆ.
ಆಸ್ಪತ್ರೆಯ ಮುಂಭಾಗ ಆಗಲೇ ಗಿಜಿಗುಡುತ್ತಿತ್ತು. ಜನ ಜನ ಜನ. ಜತೆಗೆ ಅಳು, ಆತಂಕ, ವಿಷಾದ. ಯಾರೊಬ್ಬರಿಗೂ ಪರಿಸ್ಥಿಯ ಪೂರ್ತಿ ಅರಿವಿರಲಿಲ್ಲ. ಅವರಲ್ಲಿ ಬಹುತೇಕರು ಆ ಬಸ್ಸಿನಲ್ಲಿದ್ದ ಮಕ್ಕಳ ಅಪ್ಪ ಅಮ್ಮಂದಿರು ಅಥವಾ ಸಂಬಂಧಿಕರು. ’ಬಸ್ಸಿನಲ್ಲಿ ಮಕ್ಕಳಷ್ಟೇ ಅಲ್ಲದೆ ಕೆಲ ಸಾರ್ವಜನಿಕರೂ ಇದ್ದರಂತೆ. ನದಿಗುರುಳಿದ ಬಸ್ಸಿನಲ್ಲಿದ್ದ ಒಂದಷ್ಟು ಮಂದಿಯನ್ನು ಜೀವಂತ ಹೊರತರಲಾಗಿದೆ, ಅವರಲ್ಲಿ ಮಕ್ಕಳೆಷ್ಟು ದೊಡ್ಡವರೆಷ್ಟು? ಜೀವ ಕಳಕೊಂಡವರಲ್ಲಿ ಮಕ್ಕಳೆಷ್ಟು ದೊಡ್ಡವರೆಷ್ಟು? ಅವರು ಯಾರು, ಎಲ್ಲಿಯವರು? ಯಾರ ಮಕ್ಕಳು? ನಮ್ಮ ಮಗು ಆಸ್ಪತ್ರೆಗೆ ತಲುಪಿದೆಯೇ? ಯಾವ ಸ್ಥಿತಿಯಲ್ಲಿ?’ ಅವರ ಮನಸ್ಸಿನ ತುಂಬ ಪ್ರಶ್ನೆಗಳ ಮಹಾಪೂರ. ಸರಿಯಾಗಿ ಉತ್ತರಿಸುವವರು ಯಾರೂ ಇಲ್ಲ. ಹೊರಗೆ ಮತ್ತೆ ಮಳೆಯ ಅಬ್ಬರ. ತಮ್ಮ ಮಗು ನದಿ ಪಾಲಾಗಿದೆ, ಜೀವಂತವಾಗಿದೆಯೋ ಇಲ್ಲವೋ ಎಂದು ಮಾಹಿತಿ ಇಲ್ಲ ಎಂಬ ಸನ್ನಿವೇಶದಲ್ಲಿ ಆ ಮಂದಿಯ ಮನೋಸ್ಥಿತಿಯನ್ನು ಕಲ್ಪಿಸಿಕೊಳ್ಳಿ.
ಸಮಯ ಉರುಳುತ್ತಲೇ ಇತ್ತು. ನದಿಯಿಂದ ಹೊರತೆಗೆಯಲಾದವರನ್ನು ಹೊತ್ತ ಅಂಬ್ಯುಲೆನ್ಸ್ ಗಳು ಒಂದರಹಿಂದೊಂದರಂತೆ ಬರುತ್ತಲೇ ಇದ್ದವು. ಪ್ರತೀ ವಾಹನ ಬಂದಾಗಲೂ ಹಾಹಾಕಾರ. ಅದರಿಂದ ಹೊರತರಲಾಗುವ ಮಕ್ಕಳ/ಮಂದಿಯ ಮುಖ ನೋಡಲು ನೂಕುನುಗ್ಗಲು. ಅವರು ಜೀವಂತವಿದ್ದಾರೋ ಎಂದು ತಿಳಿಯುವ ಆತಂಕಭರಿತ ಕುತೂಹಲ. ಇಷ್ಟೆಲ್ಲ ನೋಡುತ್ತಾ ನಾನು ಹಾಗೆಯೇ ನಿಂತು ಬಿಡುವಂತಿರಲಿಲ್ಲ. ನಾನು ಬಂದದ್ದು ಇವನ್ನೆಲ್ಲ ವರದಿ ಮಾಡುವುದಕ್ಕೆ...
ಅಲ್ಲಿಂದ ಮೆಲ್ಲನೆ ಕಾಲ್ತೆಗೆದು ಇನ್ನೊಂದು ಹಾದಿಯಿಂದ ಶವಾಗಾರದತ್ತ ನಡೆದೆ. ಅಲ್ಲಿನ ಪರಿಸ್ಥಿತಿ ಆಸ್ಪತ್ರೆಯ ಮುಂಭಾಗಕ್ಕಿಂತ ಹತ್ತು ಪಾಲು ಭಯಾನಕವಾಗಿತ್ತು. ಸುತ್ತಮುತ್ತೆಲ್ಲ ಬರೀ ಆಕ್ರಂದನ. ಒಳಹೊಕ್ಕರೆ ಸಾಲುಸಾಲಾಗಿ ಮಲಗಿಸಿದ ಹನ್ನೊಂದು ದೇಹಗಳು. ಅವುಗಳಲ್ಲಿ ಏಳು ಪ್ರೈಮರಿ ಶಾಲೆಯ ಕಂದಮ್ಮಗಳದ್ದು. ಅವನ್ನು ನೋಡಲು, ಗುರುತಿಸಲು ಅಪ್ಪ ಅಮ್ಮಂದಿರ ನೂಕುನುಗ್ಗಲು, ಎದೆ ಹಿಂಡುವ ರೋದನ. ಶವಾಗಾರದ ಮುಂದೆ ಮೈಲುದ್ದಕ್ಕೆ ಇಂಥವರದೇ ಸಾಲು. ಅವರ ನಡುವೆ ಘಟನೆಯ ವಿವರ ಬರಕೊಳ್ಳುವ ನಾವು. ಮಕ್ಕಳ ಹೆಸರೇನು, ವಯಸ್ಸೆಷ್ಟು, ಎಲ್ಲಿಯವರು, ಅಪ್ಪ-ಅಮ್ಮ ಯಾರು... ಘಟನೆಯ ಬಗ್ಗೆ ಅವರ ಪ್ರತಿಕ್ರಿಯೆ ಏನು? ಅಲ್ಲ, ಮಕ್ಕಳನ್ನು ಕಳಕೊಂಡವರನ್ನು ಏನೆಂದು ಕೇಳೋಣ ಸ್ವಾಮಿ? ಕೇಳಿದರೂ ಅವರಾದರೂ ಏನು ಹೇಳಿಯಾರು? ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ಹಾಗಂತ ನಮ್ಮ ಕೆಲಸ ಮಾಡಲೇಬೇಕಿತ್ತಲ್ಲ!
ಇದೆಲ್ಲ ನಡೆದು ಒಂದು ವರ್ಷವೇ ಉರುಳಿದೆ. ಆದರೆ ಉಳಾಯಿಬೆಟ್ಟಿನಲ್ಲಿ ವಿಶೇಷ ಬದಲಾವಣೆಯೇನೂ ಆದಂತಿಲ್ಲ. ನಿಜ ಹೇಳಬೇಕೆಂದರೆ ಬಸ್ ನದಿಗುರುಳಲು ಕಾರಣವಾದ ತಡೆಗೋಡೆಯಿಲ್ಲದ ಕಿರಿದಾದ ಮಾರ್ಗದ ಸ್ಥಿತಿ ಹೆಚ್ಚುಕಮ್ಮಿ ಹಾಗೆಯೇ ಇದೆ. ಅದಕ್ಕೆ ಹೊಸ ಡಾಮಾರು ಬಂದಿದೆ; ನದಿಗೆ ವಾಹನಗಳು ಉರುಳದಂತೆ ಇಲಾಖೆ ಇನ್ನೆರಡು ತಿಂಗಳಲ್ಲಿ ಶಿಥಿಲವಾಗಬಹುದಾದಂತಹ ಬಿದಿರಿನ ಬೇಲಿ ಕಟ್ಟಿದೆ! ಅನತಿ ದೂರದಲ್ಲಿ 'ರಸ್ತೆಯು ನದಿ ದಂಡೆಯಲ್ಲಿ ಹಾದು ಹೋಗುತ್ತಿದ್ದು ರಸ್ತೆಯ ಮೇಲೆ ಪ್ರವಾಹ ಬಂದಾಗ ವಾಹನ ಸಂಚಾರ ನಿಷೇಧಿಸಲಾಗಿದೆ’ ಎಂಬ ಎಚ್ಚರಿಕೆಯ ಬೋರ್ಡು ಎದ್ದಿದೆ. ಇಷ್ಟೇ.
ಹಾಗೆ ನೋಡಿದರೆ ಉಳಾಯಿಬೆಟ್ಟಿನಲ್ಲಿ ದುರಂತವೇ ನಡೆಯುತ್ತಿರಲಿಲ್ಲ, ಬೇಲಿ ಹಾಕುವ ಪ್ರಮೇಯವೂ ಇರುತ್ತಿರಲಿಲ್ಲ. ಫಲ್ಗುಣಿ ಉಕ್ಕಿ ಹರಿದು ರಸ್ತೆಯ ಮೇಲೆ ಬಂದಾಗ ರಸ್ತೆಯ ಅಂಚನ್ನು ತೋರಿಸಲೋ ಎಂಬಂತೆ ಹತ್ತಾರು ಬ್ರ್ ಹತ್ ಮರಗಳು ಅಲ್ಲಿ ಸಾಲಾಗಿ ಬೆಳೆದಿದ್ದವು. ಒಂದು ವೇಳೆ ಆಯ ತಪ್ಪಿ ವಾಹನವೊಂದು ಉರುಳಿದರೂ ಅದು ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ಅವು ತಡೆಯುತ್ತಿದ್ದವು. ವಿನಾಕಾರಣ ಹನ್ನೊಂದು ಮಂದಿ ಜಲಸಮಾಧಿಯಾಗುವುದೂ ತಪ್ಪುತ್ತಿತ್ತು.
ಆದರೆ ಆ ಹೊತ್ತು ಅಲ್ಲಿ ಒಂದು ಮರವೂ ಇರಲಿಲ್ಲ. ಕೆಲವೇ ತಿಂಗಳುಗಳ ಹಿಂದೆ ಮರಳು ಸಾಗಾಟದ ದಂಧೆಯವರು ತಮ್ಮ ಲಾರಿಗಳನ್ನು ಇಳಿಸುವುದಕ್ಕೆ ಅಷ್ಟೂ ಮರಗಳನ್ನು ಕಡಿದು ಕೆಡವಿದ್ದರು.
(ಮೊದಲನೇ ಫೋಟೋ: ದುರಂತ ಸಂಭವಿಸಿದ ಫಲ್ಗುಣಿಯ ಮಗ್ಗುಲು. ದುರಾಸೆಗೆ ಬಲಿಯಾದ ಮರಗಳ ಬೊಡ್ಡೆಗಳನ್ನೂ ಕಾಣಬಹುದು. ಎರಡನೇ ಫೋಟೋ: ಅದೇ ಸ್ಥಳದ ಈಗಿನ ನೋಟ. ಬಿದಿರ ಬೇಲಿ.)
ಲೇಬಲ್ಗಳು:
ದುರಂತ,
ಫಲ್ಗುಣಿ ನದಿ,
ಮಕ್ಕಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 ಕಾಮೆಂಟ್‌ಗಳು:
chennagide sir...
laptop nimma manege bandiddu nim blog ge matte jeeva needide... :)
ಸರ್... ಮನ ಕಲಕುವ ದಶ್ಯವನ್ನು ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದೀರಿ. ಜೊತೆಗೆ ದುಃಖದ ಸನ್ನಿವೇಶದಲ್ಲಿ ಪತ್ರಕರ್ತನ ಪಾಡೇನು ಎಂಬ ಬಗ್ಗೆಯೂ ವಿಸ್ತೃತವಾಗಿ ತಿಳಿಸಿದ್ದೀರಿ. ಆದರೆ ಫಲ್ಗುಣಿ ಮತ್ತು ಉಳಾಯಿಬೆಟ್ಟುವಿನ....
ಕಾಮೆಂಟ್ ಪೋಸ್ಟ್ ಮಾಡಿ