ಸೋಮವಾರ, ಆಗಸ್ಟ್ 17, 2020

ಸರ್ಕಾರಿ ಸವಲತ್ತು: ಏನೀ ಮಸಲತ್ತು?

17 ಆಗಸ್ಟ್ 2020ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ. 

ಪ್ರಜಾವಾಣಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.

ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿತ್ತು. ಅಭ್ಯರ್ಥಿಯೊಬ್ಬ ತನ್ನ ತಂದೆಯೊಂದಿಗೆ ಬಂದಿದ್ದ. ಆತ ಒದಗಿಸಿದ್ದ ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯ ಹನ್ನೊಂದು ಸಾವಿರ ರೂಪಾಯಿ ಎಂದಿತ್ತು. ಸರ್ಕಾರಿ ನಿಯಮಗಳ ಪ್ರಕಾರ ಆತನಿಗೆ ಶುಲ್ಕದಲ್ಲಿ ವಿಶೇಷ ವಿನಾಯಿತಿ ಇತ್ತು. ಶುಲ್ಕವನ್ನು ಒಮ್ಮೆಲೇ ಕಟ್ಟಬಹುದು, ಕಷ್ಟವಾದರೆ ಎರಡು ಕಂತಿನಲ್ಲಿಯೂ ಕಟ್ಟಬಹುದು ಎಂಬ ಅವಕಾಶವನ್ನೂ ತಿಳಿಸಿದೆ. 

ನಾವು ಒಮ್ಮೆಲೇ ಪೂರ್ತಿ ಶುಲ್ಕ ಪಾವತಿಸುತ್ತೇವೆ ಎಂದ ತಂದೆ-ಮಗ ಪ್ರವೇಶ ಪ್ರಕ್ರಿಯೆಯನ್ನು ಪೂರೈಸಿ ಹೊರಡುವ ವೇಳೆಗೆ ಮತ್ತೆ ನನ್ನ ಬಳಿ ಬಂದರು. ಜೇಬಿನಿಂದ ಇನ್ನೂರು ರೂಪಾಯಿಯ ನೋಟೊಂದನ್ನು ತೆಗೆದ ಮಧ್ಯವಯಸ್ಕ ತಂದೆ 'ಊಟ-ಗೀಟ ಮಾಡ್ತಿರೇನೋ ಸಾರ್’ ಎಂದು ಸಣ್ಣಧ್ವನಿಯಲ್ಲಿ ಹೇಳಿದರು. ಅಂಥದ್ದೊಂದನ್ನು ನಿರೀಕ್ಷಿಸಿರದ ನಾನು ಬೇಸ್ತುಬಿದ್ದು 'ಅಯ್ಯೋ ಇಂಥದ್ದೆಲ್ಲ ಇಲ್ಲ. ನಾವೆಲ್ಲ ಮೇಸ್ಟ್ರುಗಳು. ಚೆನ್ನಾಗಿ ಸಂಬಳ ಬರುತ್ತೆ. ನೀವು ಹೀಗೆಲ್ಲ ಕೊಡೋದು ತಪ್ಪಾಗುತ್ತೆ. ಇಟ್ಕೊಳ್ಳಿ’ ಎಂದು ನಯವಾಗಿಯೇ ಹೇಳಿದೆ. ಅವರು ಎರಡೆರಡು ಸಲ ಒತ್ತಾಯಿಸಿ ಆಮೇಲೆ ನೋಟನ್ನು ಪುನಃ ಜೇಬಿನಲ್ಲಿರಿಸಿಕೊಂಡರು. ನಾನು ನೋಡುತ್ತಿದ್ದ ಹಾಗೆ ತಾವು ಬಂದಿದ್ದ ಕಾರು ಏರಿ ಹೊರಟುಹೋದರು. ವಿದ್ಯಾರ್ಥಿಯೇ ಕಾರು ಚಲಾಯಿಸುತ್ತಿದ್ದ. ಏನಿಲ್ಲವೆಂದರೂ ಆ ಕಾರು ಎಂಟು ಲಕ್ಷ ಬೆಲೆಬಾಳುವಂಥದ್ದು. ಈಗ ಇನ್ನಷ್ಟು ಬೇಸ್ತುಬೀಳುವ ಸರದಿ ನನ್ನದಾಗಿತ್ತು. ಒಂದು ಸಾವಿರಚಿಲ್ಲರೆ ಶುಲ್ಕವನ್ನು ಎರಡು ಕಂತಲ್ಲಿ ಕಟ್ಟಬಹುದೆಂದು ಇವರಿಗೆ ಹೇಳಿದೆನಾ ಎಂದು ಯೋಚನೆಗೆ ಬಿದ್ದೆ. 

ಈ ಘಟನೆ ಎರಡು ಪ್ರಮುಖ ವಿಚಾರಗಳಿಗೆ ಸಾಕ್ಷಿ ಒದಗಿಸಿತು: ಒಂದು, ಸರ್ಕಾರದ ಸವಲತ್ತುಗಳೆಲ್ಲ ಅರ್ಹರಿಗೆ ವಿನಿಯೋಗವಾಗುತ್ತಿಲ್ಲ. ಇನ್ನೊಂದು, ಸರ್ಕಾರಿ ಪದ್ಧತಿಯಲ್ಲಿ ಕೆಲಸವಾಗಬೇಕೆಂದರೆ ಏನಾದರೂ 'ಮಾಮೂಲು’ ಕೊಡಲೇಬೇಕು ಎಂಬ ಮನಸ್ಥಿತಿಯಿಂದ ನಮ್ಮ ಜನರು ಹೊರಬಂದಿಲ್ಲ. 

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಲೆಂದೇ ಸರ್ಕಾರ ಶುಲ್ಕ ವಿನಾಯಿತಿಯಂತಹ ಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿವೇತನ, ಹಾಸ್ಟೆಲ್ ಸೌಲಭ್ಯ, ಉಚಿತ ಬಸ್ ಪಾಸ್ ಇತ್ಯಾದಿ ಹಲವು ವ್ಯವಸ್ಥೆಗಳಿವೆ. ಇವೆಲ್ಲವೂ ನಿಜವಾಗಿಯೂ ಅರ್ಹರನ್ನು ತಲುಪುತ್ತಿವೆಯೇ ಎಂದರೆ ಮೇಲಿನ ಘಟನೆಯತ್ತ ನೋಡಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಾರಲ್ಲಿ ಓಡಾಡುವ ಮಂದಿ ಒದಗಿಸುವ ಆದಾಯ ಪ್ರಮಾಣಪತ್ರ ವಾರ್ಷಿಕ ಹನ್ನೊಂದು ಸಾವಿರ ರೂಪಾಯಿಯದ್ದು. ಈ ಹನ್ನೊಂದು ಸಾವಿರ ಆದಾಯ ಮಿತಿಯ ಕಾಲ ಹೋಗಿ ದಶಕಗಳೇ ಸಂದವು. ಸೌಲಭ್ಯಗಳನ್ನು ಪಡೆಯುವ ಆದಾಯಮಿತಿಯನ್ನು ಸರ್ಕಾರ ಹೆಚ್ಚಿಸಿದೆ. ಆದರೆ ಇಂದಿಗೂ ಶುಲ್ಕ ವಿನಾಯಿತಿ ಬಯಸುವ ಬಹುಪಾಲು ವಿದ್ಯಾರ್ಥಿಗಳು ಸಲ್ಲಿಸುವ ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ರೂ. ಹನ್ನೊಂದು ಸಾವಿರ ಎಂದೇ ತಹಶೀಲ್ದಾರರಿಂದ ಬರೆಸಿಕೊಂಡು ಬರುತ್ತಾರೆ. ಜನ ಮತ್ತು ವ್ಯವಸ್ಥೆ ಹಿಂದಿನ ಮನಸ್ಥಿತಿಯಿಂದ ಈಚೆ ಬಂದಿಲ್ಲ. ಹನ್ನೊಂದು ಸಾವಿರ ವಾರ್ಷಿಕ ಆದಾಯದಲ್ಲಿ ಯಾವುದಾದರೊಂದು ಕುಟುಂಬ ಜೀವನ ನಡೆಸುವುದು ವಾಸ್ತವದಲ್ಲಿ ಸಾಧ್ಯವೇ? ಜನರು ಇಷ್ಟೇ ಇರಲಿ ಎಂದು ಒತ್ತಾಯಪೂರ್ವಕ ನಮೂದಿಸಿಕೊಂಡು ಬರುತ್ತಾರೋ, ಅಧಿಕಾರಿಗಳ ಮನಸ್ಥಿತಿ ಬದಲಾಗುವುದಿಲ್ಲವೋ ಅರ್ಥವಾಗದು. 

ಇದಕ್ಕೂ ಎರಡು ಮೂರು ದಿನಗಳ ಹಿಂದೆ ನನ್ನ ಹಳೆ ವಿದ್ಯಾರ್ಥಿನಿಯೊಬ್ಬಳು ಫೋನ್ ಮಾಡಿ, ಹಿಂದುಳಿದ ವರ್ಗಕ್ಕೆ ಸೇರಿದ ತನ್ನ ನೆರೆಯ ಹುಡುಗಿಯೊಬ್ಬಳು ಪದವಿ ಓದಲು ಬಯಸಿದ್ದಾಳೆಂದೂ, ಆದರೆ ಆಕೆಗೆ ಶುಲ್ಕ ಪಾವತಿಸುವ ಶಕ್ತಿ ಇಲ್ಲವಾದ್ದರಿಂದ ಮನೆಯಲ್ಲಿ ಓದು ಬೇಡ ಎಂದು ನಿರ್ಧರಿಸಿದ್ದಾರೆಂದೂ ಹೇಳಿ, ಆ ಹುಡುಗಿಗೆ ಯಾವ ರೀತಿ ನಾವು ಸಹಾಯ ಮಾಡಬಹುದೆಂದು ವಿಚಾರ ಮಾಡಿದಳು. ಓದುವ ಆಸೆಯಿರುವ ಹುಡುಗಿ ಮನೆಯಲ್ಲಿ ಕೂರುವಂತೆ ಆಗುವುದು ಬೇಡ, ಏನಾದರೂ ಮಾಡೋಣ ಎಂದು ಕೆಲವು ಸಾಧ್ಯತೆಗಳ ಬಗ್ಗೆ ಸಲಹೆ ನೀಡಿದೆ. 

ಈ ಹುಡುಗಿಗೂ ಶುಲ್ಕ ವಿನಾಯಿತಿಯ ಅವಕಾಶ ಇತ್ತು. ಆದರೆ ವಿನಾಯಿತಿಗೊಳಪಡುವ ಭಾಗ ಮುಂದೆ ವಿದ್ಯಾರ್ಥಿವೇತನ ರೂಪದಲ್ಲಿ ಸರ್ಕಾರದಿಂದ ಬರುವುದಿತ್ತು. ಒಂದು ಸಲಕ್ಕಾದರೂ ಪೂರ್ತಿ ಶುಲ್ಕವನ್ನು ಪಾವತಿಸುವುದು ಅನಿವಾರ್ಯ. ಎರಡು ಕಂತಿನಲ್ಲಿ ಪಾವತಿಸುವ ಅವಕಾಶ ನೀಡಿದರೂ ಮೊದಲನೇ ಕಂತಿನಲ್ಲಿ ಐದು ಸಾವಿರ ರೂ. ಪಾವತಿಸಲೇಬೇಕು. ವಿದ್ಯಾರ್ಥಿವೇತನ ಬರುವುದು ವರ್ಷದ ಕೊನೆಗಾದರೂ ಆಯಿತು. 

ಸರ್ಕಾರದ ಸವಲತ್ತುಗಳ ಅವಶ್ಯಕತೆ ಇರುವವರು ನಮ್ಮ ನಡುವೆ ಬೇಕಾದಷ್ಟು ಮಂದಿ ಇದ್ದಾರೆ. ಇವೇ ಸವಲತ್ತುಗಳು ಅನೇಕ ಸಲ ಅನರ್ಹರನ್ನು ಕೂಡ ಧಾರಾಳವಾಗಿ ತಲುಪುತ್ತವೆ. ಬೇರೆಬೇರೆ ಹಂತಗಳಲ್ಲಿ ಇದನ್ನು ತಡೆಯುವ ವ್ಯವಸ್ಥೆಗಳನ್ನು ಸರ್ಕಾರ ಮಾಡಿದರೂ ಅವುಗಳಿಂದ ತಪ್ಪಿಸಿಕೊಳ್ಳುವ ಚಾಣಾಕ್ಷ ಜನರೂ, ಅವರಿಗೆ ನೆರವಾಗುವ ಅಧಿಕಾರಿಗಳೂ ಇದ್ದೇ ಇರುತ್ತಾರೆ. ಅನೇಕ ಮಂದಿಗೆ ತಾವು ಸರ್ಕಾರದ ಸವಲತ್ತನ್ನು ಹೇಗಾದರೂ ದಕ್ಕಿಸಿಕೊಂಡೆವು ಎನ್ನುವುದೇ ಹೆಮ್ಮೆಯ ವಿಷಯ. ವಿವಿಧ ಕಾರಣಗಳಿಗಾಗಿ ಇವೇ ಸೌಲಭ್ಯಗಳಿಂದ ವಂಚಿತರಾಗಿರುವ ಅರ್ಹ ಜನರೂ ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. 

ಸರ್ಕಾರಿ ವ್ಯವಸ್ಥೆಯಲ್ಲಿ ಯಾವ ಕೆಲಸ ಆಗಬೇಕೆಂದರೂ ದುಡ್ಡು ಕೊಡಬೇಕು ಎಂಬ ಮನಸ್ಥಿತಿಯಿಂದಲೂ ನಾವು ಹೊರಬರುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂಬುದು ಇನ್ನೊಂದು ವಿಷಯ. ಇದು ಮನಸ್ಥಿತಿಯ ವಿಷಯ ಎಂಬುದಕ್ಕಿಂತಲೂ ವಾಸ್ತವ ಎನ್ನಬೇಕೇನೋ? ಜನರು ಹೀಗೆ ಭಾವಿಸಲು ಬೇರೆಬೇರೆ ಸಂದರ್ಭಗಳಲ್ಲಿ ಅವರು ಎದುರಿಸುವ ಪರಿಸ್ಥಿತಿಯೇ ಕಾರಣವಿರಬೇಕು. ನೋಟು ತೋರಿಸದೆ ಕೆಲಸ ಆಗುವುದಿಲ್ಲ ಎಂಬುದಕ್ಕೆ ದಿನನಿತ್ಯ ನೂರೆಂಟು ಉದಾಹರಣೆಗಳನ್ನು ನೋಡುತ್ತೇವೆ. ಕೋಟ್ಯಂತರ ರೂಪಾಯಿ ಲಂಚರುಷುವತ್ತುಗಳ ಕಥೆಯನ್ನು ಪ್ರತಿದಿನ ಕೇಳುತ್ತೇವೆ. ಕಾಲೇಜು ಪ್ರವೇಶಕ್ಕೆ ಬಂದರೂ ಅಲ್ಲಿನವರು ಏನಾದರೂ ನಿರೀಕ್ಷಿಸುತ್ತಾರೇನೋ ಎಂದು ಯೋಚಿಸುವ ಮನಸ್ಥಿತಿ ಸರ್ಕಾರಿ ಕಚೇರಿಗಳಿಗೆ ಓಡಾಡುವ ಜನರಿಗೆ ತೀರಾ ಸಹಜವಾಗಿ ಬಂದುಬಿಟ್ಟಿದೆ. ಇದನ್ನು ನಮ್ಮ ಸಮಾಜದ ದುರಂತ ಎನ್ನದೆ ಬೇರೆ ವಿಧಿಯಿಲ್ಲ. 

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಆಗಸ್ಟ್ 10, 2020

ಸೃಜನಶೀಲರಿಗುಂಟು ಅವಕಾಶ ನೂರೆಂಟು

8 ಆಗಸ್ಟ್ 2020ರ 'ವಿಜಯವಾಣಿ' ಶಿಕ್ಷಣಪಥ ಪುರವಣಿಯಲ್ಲಿ ಪ್ರಕಟವಾದ ಲೇಖನ

ಹೊಸ ಅವಕಾಶಗಳು ತೆರೆದುಕೊಳ್ಳುವುದು ಸಜೀವ ಜಗತ್ತಿನ ಸಾಮಾನ್ಯ ಲಕ್ಷಣ. ಒಂದು ಕ್ಷೇತ್ರದಲ್ಲಿ ಅವಕಾಶಗಳು ಕಡಿಮೆಯಾಯಿತು ಅನ್ನಿಸುವಾಗೆಲ್ಲ ಒಂದೋ ಇನ್ನೊಂದು ಕ್ಷೇತ್ರ ಹುಟ್ಟಿಕೊಂಡಿರುತ್ತದೆ ಅಥವಾ ಅದೇ ಕ್ಷೇತ್ರ ಬೇರೊಂದು ರೂಪದಲ್ಲಿ ಪ್ರತ್ಯಕ್ಷವಾಗಿರುತ್ತದೆ. ವಾಸ್ತವವಾಗಿ ಅವಕಾಶಗಳ ಕೊರತೆ ಕಾಡುವುದು ಈ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದವರಿಗೆ ಮಾತ್ರ.

ವಿಜಯವಾಣಿ | ಸಿಬಂತಿ ಪದ್ಮನಾಭ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೃಜನಶೀಲರು ಜಡವಾಗಿ ಕುಳಿತಿರುವುದಕ್ಕೆ ಅವಕಾಶವೇ ಇಲ್ಲ. ಅವರು ಸುಮ್ಮನೆ ಕೂತರೂ ಪ್ರಪಂಚ ಎಳೆದುಕೊಂಡು ಹೋಗುತ್ತದೆ. ಹಾಗೆಂದು ಕೇವಲ ಔಪಚಾರಿಕ ಡಿಗ್ರಿಗಳಿಗೆ ಜೋತುಬಿದ್ದವರು ಈ ಕಾಲದಲ್ಲಿ ಬದುಕುವುದು ಕಷ್ಟ. ಇದು ಸವಾಲುಗಳ ಯುಗ. ಪ್ರತಿಭೆ ನವೋನ್ಮೇಷಶಾಲಿಯಾದುದು. ಸದಾ ಹೊಸತನಕ್ಕೆ ತುಡಿಯುವವರಿಗೆ, ಉತ್ತಮ ಸಂವಹನ ಕೌಶಲ, ವರ್ತಮಾನದ ತಿಳುವಳಿಕೆ ಇದ್ದವರಿಗೆ ನೂರೆಂಟು ದಾರಿಗಳು ಎಂದೆಂದೂ ಇವೆ.

ಜಾಹೀರಾತು ನಿರ್ಮಾಣ, ಕಂಟೆಂಟ್ ರೈಟಿಂಗ್, ಅನಿಮೇಶನ್ & ವಿಎಫ್‍ಎಕ್ಸ್ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಬಹುಬೇಡಿಕೆಯ ಕ್ಷೇತ್ರಗಳು. ಸವಾಲುಗಳನ್ನು ಇಷ್ಟಪಡುವ ಯುವಕರಿಗೆ ಸಾಕಷ್ಟು ಆದಾಯ ಮತ್ತು ತೃಪ್ತಿಯನ್ನು ಕೊಡಬಲ್ಲ ರಂಗಗಳು. ಇವುಗಳಲ್ಲಿರುವ ಉದ್ಯೋಗಾವಕಾಶಗಳೇನು, ಸೇರಲು ಅರ್ಹತೆಯೇನು, ಅದನ್ನು ಹೇಗೆ ಪಡೆದುಕೊಳ್ಳಬಹುದೆಂಬ ವಿವರಗಳು ಇಲ್ಲಿವೆ.

ಜಾಹೀರಾತು ಕ್ಷೇತ್ರ

ಆಧುನಿಕ ಕಾಲದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಜಾಹೀರಾತು ಕೂಡ ಒಂದು. ದಿನದಿಂದ ದಿನಕ್ಕೆ ಹಿಗ್ಗುತ್ತಿರುವ ಕಾರ್ಪೋರೇಟ್ ಜಗತ್ತು, ವೈವಿಧ್ಯಮಯ ಉತ್ಪನ್ನಗಳ ನಡುವಿನ ತುರುಸಿನ ಸ್ಪರ್ಧೆ, ಗ್ರಾಹಕರನ್ನು ತಮ್ಮತ್ತ ಸೆಳೆಯುವ ಕಂಪೆನಿಗಳ ಅನಿವಾರ್ಯತೆ ಇತ್ಯಾದಿಗಳಿಂದ ಜಾಹೀರಾತು ಕ್ಷೇತ್ರ ಕಳೆದೊಂದು ದಶಕದಲ್ಲಿ ಗಣನೀಯವಾಗಿ ಬೆಳೆದಿದೆ.

2020ರ ಅಂತ್ಯಕ್ಕೆ ಭಾರತದ ಜಾಹೀರಾತು ಉದ್ಯಮ ರೂ. 75,952 ಕೋಟಿ ವಹಿವಾಟು ಮಾಡಬಹುದೆಂದು ಸಮೀಕ್ಷೆಗಳು ಹೇಳಿವೆ. ಇದು 2025ರ ವೇಳೆಗೆ ರೂ. 1,33,921 ಕೋಟಿ ತಲುಪಬಹುದೆಂದು ಅಂದಾಜು ಮಾಡಲಾಗಿದೆ. ಇತ್ತೀಚಿನ ವರ್ಷಗಳವರೆಗೂ ಪತ್ರಿಕೆ, ಟಿವಿ, ರೇಡಿಯೋಗಳೇ ಜಾಹೀರಾತಿನ ಪ್ರಮುಖ ಮಾಧ್ಯಮಗಳಾಗಿದ್ದರೆ ಈಗ ಡಿಜಿಟಲ್ ಯುಗ ತೆರೆದುಕೊಂಡಿದೆ. ಉಳಿದವುಗಳನ್ನೆಲ್ಲ ಹಿಂದಿಕ್ಕಿ ಡಿಜಿಟಲ್ ಜಾಹೀರಾತು ದಾಪುಗಾಲು ಹಾಕಿದೆ. ಪ್ರಸ್ತುತ ಡಿಜಿಟಲ್ ಜಾಹೀರಾತು ಉದ್ಯಮದ ಪಾಲು ಅಂದಾಜು ರೂ. 17,300 ಕೋಟಿ ಇದೆ. ಇದು 2025ರ ವೇಳೆಗೆ ರೂ. 58,550 ಕೋಟಿ ಆಗಬಹುದೆಂದು ಮಾರುಕಟ್ಟೆ ತಜ್ಞರು ಊಹಿಸಿದ್ದಾರೆ. ಇದು ನಮ್ಮ ಯುವಕರ ಮುಂದಿರುವ ವಿಶಾಲ ಪ್ರಪಂಚ.

ಅವಕಾಶಗಳೇನು?

ಜಾಹೀರಾತು ನಿರ್ಮಾಣದ ಬಹುಪಾಲು ಕೆಲಸಗಳು ನಡೆಯುವುದು ಜಾಹೀರಾತು ಏಜೆನ್ಸಿಗಳಲ್ಲಿ. ಈ ಕ್ಷೇತ್ರಕ್ಕೆ ಎರಡು ಆಯಾಮಗಳಿವೆ: ಒಂದು ಸೃಜನಶೀಲವಾದದ್ದು. ಇನ್ನೊಂದು ವ್ಯವಹಾರಕ್ಕೆ ಸಂಬಂಧಿಸಿದ್ದು. ಜಾಹೀರಾತಿನ ಪಠ್ಯದ ರಚನೆ, ಆಕರ್ಷಕ ತಲೆಬರಹ, ಸ್ಲೋಗನ್‍ಗಳ ಸೃಷ್ಟಿ, ಇವಕ್ಕೆ ಆಕರ್ಷಕ ಚಿತ್ರ, ಬಣ್ಣ, ವಿನ್ಯಾಸ ಹೊಂದಿಸಿ ಕೊಡುವುದು ಸೃಜನಶೀಲ ವಿಭಾಗದ ಕೆಲಸ. ಜಾಹೀರಾತು ಅಗತ್ಯವುಳ್ಳ ಕಂಪೆನಿಗಳನ್ನು ತಮ್ಮತ್ತ ಸೆಳೆಯುವುದು, ಅವರಿಗೆ ಜಾಹೀರಾತಿನ ಸಾಧ್ಯತೆಗಳನ್ನು ಮನವರಿಕೆ ಮಾಡಿಕೊಡುವುದು, ಮಾಧ್ಯಮಗಳ ಆಯ್ಕೆಯಲ್ಲಿ ಸಹಾಯ ಮಾಡುವುದು, ಮಾಧ್ಯಮಗಳೊಂದಿಗೆ ವ್ಯವಹರಿಸುವುದು ಎರಡನೆಯ ವಿಭಾಗದ ಕೆಲಸ.

ಇವೆರಡು ವಿಭಾಗದಲ್ಲೂ ಉತ್ಸಾಹಿ ತರುಣರಿಗೆ ಹೇರಳ ಉದ್ಯೋಗಾವಕಾಶಗಳಿವೆ. ಕ್ರಿಯೇಟಿವ್ ಆಗಿ ಯೋಚನೆ ಮಾಡುವವರಿಗೆ ಮೊದಲನೆಯ ವಿಭಾಗವೂ ವ್ಯವಹಾರ ಕುಶಲಿಗರಿಗೆ ಎರಡನೆಯ ವಿಭಾಗವೂ ಸೂಕ್ತವಾದೀತು. ಸೃಜನಶೀಲ ವಿಭಾಗದಲ್ಲಿ ಕಾಪಿ ರೈಟರ್, ಛಾಯಾಗ್ರಾಹಕ, ವೀಡಿಯೋಗ್ರಾಫರ್,  ವಿಶುವಲ್ ಎಡಿಟರ್, ಆರ್ಟ್ ಡೈರೆಕ್ಟರ್, ಗ್ರಾಫಿಕ್ ಡಿಸೈನರ್, ಕ್ರಿಯೇಟಿವ್ ಡೈರೆಕ್ಟರ್ ಮುಂತಾದ ಹುದ್ದೆಗಳಿವೆ. ವ್ಯವಹಾರ ವಿಭಾಗದಲ್ಲಿ ಜಾಹೀರಾತು ಮ್ಯಾನೇಜರ್, ಸೇಲ್ಸ್ ಎಕ್ಸೆಕ್ಯುಟಿವ್, ಮಾರ್ಕೆಟಿಂಗ್ ಸ್ಪೆಷಲಿಸ್ಟ್, ರಿಸರ್ಚ್ ಅನಾಲಿಸ್ಟ್, ಅಕೌಂಟ್ಸ್ ಮ್ಯಾನೇಜರ್ ಮುಂತಾದ ಹುದ್ದೆಗಳಿವೆ.

ಅರ್ಹತೆಯೇನು?

ಶೈಕ್ಷಣಿಕವಾಗಿ ಯಾವುದಾದರೊಂದು ಪದವಿ ಅಥವಾ ಸ್ನಾತಕೋತ್ತರ ಪದವಿ ಈ ಕ್ಷೇತ್ರಕ್ಕೆ ಪ್ರವೇಶಿಸಲು ಬೇಕಾದ ಕನಿಷ್ಠ ಅರ್ಹತೆ. ಪತ್ರಿಕೋದ್ಯಮ, ಮಾಧ್ಯಮ ಅಧ್ಯಯನ, ಸಾಹಿತ್ಯದಲ್ಲಿ ಪದವಿ ಪಡೆದರೆ ಸೃಜನಶೀಲ ವಿಭಾಗಕ್ಕೆ ಪ್ರವೇಶ ಪಡೆಯಲು ಅನುಕೂಲ. ವ್ಯವಹಾರ ವಿಭಾಗದಲ್ಲಿ ಕೆಲಸ ಮಾಡಲು ವಾಣಿಜ್ಯ ವಿಭಾಗದ ಪದವಿ ಅಥವಾ ಎಂಬಿಎಯಂತಹ ಪದವಿಗಳು ಉತ್ತಮ. ಆದರೆ ಇವೆಲ್ಲ ಕೇವಲ ಅಂಕಪಟ್ಟಿ ಆಧಾರದಲ್ಲಿ ಸಿಗುವ ಕೆಲಸಗಳಲ್ಲ. ಕೌಶಲವೇ ಇಲ್ಲಿ ಪ್ರಧಾನ. ಪರಿಣಾಮಕಾರಿ ಸಂವಹನ ಕಲೆ, ಅತ್ಯುತ್ತಮ ಭಾಷಾ ಕೌಶಲ, ಸಮರ್ಥ ಮಂಡನಾ ಶೈಲಿ, ತಂಡವನ್ನು ಮುನ್ನಡೆಸುವ ನಾಯಕತ್ವ, ಗ್ರಾಹಕರನ್ನು ಮನವೊಲಿಸುವ ತಂತ್ರ, ಒತ್ತಡಗಳ ನಡುವೆ ಕೆಲಸ ಮಾಡುವ ಸಾಮಥ್ರ್ಯ, ಎಲ್ಲಕ್ಕಿಂತ ಮುಖ್ಯವಾದ ಆತ್ಮವಿಶ್ವಾಸ ಜಾಹೀರಾತು ಕ್ಷೇತ್ರ ಬಯಸುವ ಪ್ರಮುಖ ಗುಣಗಳು.

ಯಾವುದಾದರೊಂದು ಪದವಿ ಓದುತ್ತಲೇ ಇಂತಹ ಕೌಶಲಗಳನ್ನು ತಮ್ಮಲ್ಲಿ ರೂಢಿಸಿಕೊಳ್ಳುವುದಕ್ಕೆ ಯುವಕರು ಪ್ರಯತ್ನಪಡಬೇಕು. ಎಲ್ಲವೂ ತರಗತಿಕೊಠಡಿಯಲ್ಲಿ ಕರಗತವಾಗುವ ಅಂಶಗಳಲ್ಲ. ಅಹಮದಾಬಾದಿನ ಮುದ್ರಾ ಇನ್ಸ್‍ಟಿಟ್ಯೂಟ್ ಆಫ್ ಕಮ್ಯೂನಿಕೇಶನ್, ದೆಹಲಿಯ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್, ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಅಡ್ವರ್ಟೈಸಿಂಗ್, ಮುಂಬೈಯ ಕ್ಸೇವಿಯರ್ ಇನ್ಸ್‍ಟಿಟ್ಯೂಟ್ ಆಫ್ ಕಮ್ಯೂನಿಕೇಶನ್, ಪುಣೆಯ ಸಿಂಬಿಯಾಸಿಸ್ ಇನ್ಸ್‍ಟಿಟ್ಯೂಟ್ ಆಫ್ ಮೀಡಿಯಾ & ಕಮ್ಯೂನಿಕೇಶನ್ ಮೊದಲಾದ ಕಡೆ ಈ ಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷ ತರಬೇತಿ ಲಭ್ಯವಿದೆ. ಬೆಂಗಳೂರಿನಲ್ಲೂ ಸಾಕಷ್ಟು ತರಬೇತಿ ಸಂಸ್ಥೆಗಳಿವೆ.

ಕಂಟೆಂಟ್ ರೈಟಿಂಗ್

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೆಲವು ವರ್ಷಗಳ ಹಿಂದೆ ‘ಕಂಟೆಂಟ್ ಈಸ್ ದಿ ಕಿಂಗ್’ ಎಂದು ಘೋಷಿಸಿದಾಗ ಜಗತ್ತಿನಾದ್ಯಂತ ಒಂದು ಹೊಸ ಸಂಚಲನ ಸೃಷ್ಟಿಯಾಗಿತ್ತು. ಸ್ಪರ್ಧೆಯ ಲೋಕದಲ್ಲಿ ತಮ್ಮ ಆನ್‍ಲೈನ್ ಇರುವಿಕೆಯನ್ನು ತೋರಿಸಿಕೊಳ್ಳುವುದು ಪ್ರತೀ ಕಂಪೆನಿಗೂ ಅನಿವಾರ್ಯ. ತಮ್ಮದೇ ಸ್ವಂತ ವೆಬ್‍ಸೈಟ್ ಹೊಂದುವುದು, ಫೇಸ್ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂಗಳಂತಹ ಸಾಮಾಜಿಕ ತಾಣಗಳಲ್ಲಿ ತಮ್ಮ ಖಾತೆಯನ್ನು ಚಾಲ್ತಿಯಲ್ಲಿಡುವುದು ಉಳಿದ ವ್ಯವಹಾರಗಳಷ್ಟೇ ಮುಖ್ಯ. ಹೀಗಾಗಿ ಡಿಜಿಟಲ್ ಕಂಟೆಂಟಿಗೆ ಈಗ ರಾಜಮನ್ನಣೆ.

ಅವಕಾಶಗಳೇನು?

ಹೀಗಾಗಿ ಕಂಟೆಂಟ್ ರೈಟಿಂಗ್ ಎಂಬ ಹೊಸ ವೃತ್ತಿ ಹೆಚ್ಚು ಜನಪ್ರಿಯತೆ ಪಡೆದಿದೆ. ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಕಂಪೆನಿಗಳು, ಸಂಘಸಂಸ್ಥೆಗಳು- ಒಟ್ಟಿನಲ್ಲಿ ಕಾರ್ಪೋರೇಟ್ ವಲಯ ಡಿಜಿಟಲ್ ಲೋಕದಲ್ಲಿ ಕಾಣಿಸಿಕೊಳ್ಳಲು ಕಂಟೆಂಟ್ ಬರೆಹಗಾರರು ಬೇಕೇಬೇಕು. ತಮ್ಮಲ್ಲೇ ಅಂತಹ ಬರಹಗಾರರನ್ನು ನೇಮಿಸಿಕೊಳ್ಳುವುದು ಕಡಿಮೆ. ಕಾರ್ಪೋರೇಟ್ ಸಂಸ್ಥೆಗಳು ಇಂತಹ ಬಹುತೇಕ ಕೆಲಸಗಳನ್ನು ಹೊರಗುತ್ತಿಗೆ (ಔಟ್‍ಸೋರ್ಸಿಗ್) ಮೂಲಕವೇ ಪೂರೈಸಿಕೊಳ್ಳುತ್ತವೆ.

ಕಂಟೆಂಟ್ ರೈಟಿಂಗ್ ಮಾಡಿಕೊಡುವುದಕ್ಕಾಗಿಯೇ ಹತ್ತಾರು ಕಂಪೆನಿಗಳು ಹುಟ್ಟಿಕೊಂಡಿವೆ. ಹೊಸ ವೆಬ್‍ಸೈಟ್‍ಗಳ ರಚನೆಯಾಗುವಾಗ ಅದಕ್ಕೆ ಬೇಕಾದ ಮಾಹಿತಿ ಸಿದ್ಧಪಡಿಸಿಕೊಡುವುದು, ಆಗಿಂದಾಗ್ಗೆ ಅವುಗಳನ್ನು ಅಪ್‍ಡೇಟ್ ಮಾಡುವುದು ಇವರ ಕೆಲಸಗಳಲ್ಲಿ ಒಂದು. ಅಷ್ಟೇ ಅಲ್ಲದೆ ಮಾರ್ಕೆಟಿಂಗ್ ಕಂಟೆಂಟ್, ಸಾರ್ವಜನಿಕ ಸಂಪರ್ಕದ ಸಾಮಗ್ರಿಗಳು (ಸುದ್ದಿಪತ್ರ, ಪ್ರಚಾರ ಸಾಮಗ್ರಿ, ಪತ್ರಿಕಾ ಹೇಳಿಕೆ ಇತ್ಯಾದಿ), ಆರೋಗ್ಯ, ಜೀವನಶೈಲಿ, ಹಣಕಾಸು ಮುಂತಾದ ಕ್ಷೇತ್ರಗಳಿಗೆ ಸಂಬಂಧಪಟ್ಟ ತಾಂತ್ರಿಕ ಬರವಣಿಗೆಯನ್ನೂ ಮಾಡಿಕೊಡುತ್ತವೆ. ಇಂತಹ ಸಂಸ್ಥೆಗಳಲ್ಲಿ ವೆಬ್‍ಸೈಟ್ ಕಂಟೆಂಟ್ ಬರೆಹಗಾರರು, ಸರ್ಚ್ ಇಂಜಿನಿ ಆಪ್ಟಿಮೈಸೇಶನ್ (ಎಸ್‍ಇಒ) ರೈಟರ್ಸ್, ಜಾಹೀರಾತು ಪ್ರತಿ ಬರೆಹಗಾರರು, ಸೃಜನಶೀಲ ಮತ್ತು ತಾಂತ್ರಿಕ ಬರೆಹಗಾರರು, ಶೈಕ್ಷಣಿಕ ಬರೆಹಗಾರರು, ಛಾಯಾ ಬರೆಹಗಾರರು (ಘೋಸ್ಟ್ ರೈಟರ್ಸ್), ಚಿತ್ರಕಥೆ ಬರೆಹಗಾರರು ಮುಂತಾದ ಹತ್ತಾರು ಹುದ್ದೆಗಳಿವೆ. ಸ್ವತಂತ್ರವಾಗಿದ್ದು ಹವ್ಯಾಸಿ ಬರೆಹಗಾರರಾಗಿಯೂ ಈ ಕ್ಷೇತ್ರದಲ್ಲಿ ಉತ್ತಮ ಆದಾಯ ಗಳಿಸಬಹುದು.

ಅರ್ಹತೆಯೇನು?

ಈ ಕ್ಷೇತ್ರ ಪ್ರವೇಶಿಸಲು ಇಂತಹದೇ ವಿದ್ಯಾರ್ಹತೆ ಬೇಕೆಂಬ ನಿಯಮವೇನಿಲ್ಲ. ಯಾವುದಾದರೊಂದು ಪದವಿ ಹೊಂದಿದ್ದರೆ ಸಾಕು. ಪದವಿಗಿಂತಲೂ ಕೌಶಲ ಬಯಸುವ ಇನ್ನೊಂದು ಕ್ಷೇತ್ರ ಇದು. ತಪ್ಪಿಲ್ಲದೆ, ಇನ್ನೊಬ್ಬರಿಗೆ ಸುಲಭವಾಗಿ ಅರ್ಥವಾಗುವಂತೆ ಯಾವುದೇ ವಿಷಯವನ್ನು ಬರೆಯುವುದೇ ಇದು ಬಯಸುವ ಪ್ರಮುಖ ಕೌಶಲ. ಇದಕ್ಕೆ ಪೂರಕವಾಗಿ ಸಂಶೋಧನ ಮನೋಭಾವ, ಸ್ಪಷ್ಟ-ಸರಳ ಅಭಿವ್ಯಕ್ತಿ ಬೇಕೇಬೇಕು. ಸಾಹಿತ್ಯ ಅಥವಾ ಪತ್ರಿಕೋದ್ಯಮ ವಿಷಯಗಳಲ್ಲಿ ಪದವಿ ಪಡೆದವರಿಗೆ ಇಲ್ಲಿ ಆದ್ಯತೆಯಿದೆ.

ಐಐಎಂ ಸ್ಕಿಲ್ಸ್, ಯುಡೆಮಿ, ಹೆನ್ರಿ ಹಾರ್ವಿನ್ ಮೊದಲಾದ ಖಾಸಗಿ ಸಂಸ್ಥೆಗಳು ಕಂಟೆಂಟ್ ರೈಟಿಂಗ್‍ನಲ್ಲಿ ವಿಶೇಷ ಆನ್ಲೈನ್ ಕೋರ್ಸುಗಳನ್ನು ನೀಡುತ್ತಿವೆ. ಆಸಕ್ತರು ಇವುಗಳ ಕಡೆಗೂ ಗಮನ ಹರಿಸಬಹುದು. ಕಂಟೆಂಟ್ ರೈಟಿಂಗ್‍ನ ವಿಧಾನ, ಸ್ವರೂಪ, ತಾಂತ್ರಿಕತೆಗಳನ್ನು ಅರ್ಥಮಾಡಿಕೊಳ್ಳಲು ಇವು ಸಹಕಾರಿಯಾಗಬಹುದು.

ಆ್ಯನಿಮೇಷನ್ & ವಿಶುವಲ್ ಇಫೆಕ್ಟ್ಸ್

ಆ್ಯನಿಮೇಷನ್ & ವಿಎಫ್‍ಎಕ್ಸ್ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಹುಬಿಲಿಯನ್ ಉದ್ಯಮ. ಭಾರತದ ಇಂದಿನ ಅನಿಮೇಶನ್-ವಿಎಫ್‍ಎಕ್ಸ್ ರಂಗದ ಒಟ್ಟಾರೆ ವ್ಯವಹಾರ ರೂ. 9191 ಕೋಟಿ. ಇದು ಮುಂದಿನ ಐದು ವರ್ಷಗಳಲ್ಲಿ ರೂ. 19,428 ಕೋಟಿಗೆ ತಲುಪಬಹುದೆಂದು ಅಂದಾಜಿಸಲಾಗಿದೆ. ನಮ್ಮ ದೇಶದಲ್ಲಿ 300ಕ್ಕಿಂತಲೂ ಹೆಚ್ಚು ಅನಿಮೇಶನ್ ಸ್ಟಡಿಯೋಗಳಿವೆ. ಸಾಕಷ್ಟು ದೇಶಗಳು ಅನಿಮೇಶನ್ & ವಿಎಫ್‍ಎಕ್ಸ್ ಸೇವೆಗಳಿಗೆ ಭಾರತವನ್ನೇ ಅವಲಂಬಿಸಿವೆ.

ಅವಕಾಶಗಳೇನು?

ಅನಿಮೇಶನ್ & ವಿಎಫ್‍ಎಕ್ಸ್ ಉದ್ಯಮದ ಬಹುಪಾಲು ಜಾಗವನ್ನು ವೀಡಿಯೋ ಗೇಮಿಂಗ್, ಕಿರುತೆರೆ ಹಾಗೂ ಸಿನಿಮಾಗಳು ಆಕ್ರಮಿಸಿಕೊಂಡಿವೆ. ಮಕ್ಕಳಿಗೆ ಸಂಬಂಧಿಸಿದ ಮನೋರಂಜನಾ ಕ್ಷೇತ್ರದಲ್ಲಿ ಅನಿಮೇಶನಿಗೆ ಭಾರೀ ಬೇಡಿಕೆ. ಬಾಹುಬಲಿ, ಕುಂಗ್‍ಫೂ ಪಾಂಡ, ಐಸ್‍ಏಜ್, ಚೋಟಾ ಭೀಮ್, ಟಾಮ್ & ಜೆರಿ ನೋಡಿ ಆನಂದಿಸುವವರಿಗೆ ವಯಸ್ಸಿನ ಭೇದವೂ ಇಲ್ಲ.

2ಡಿ/3ಡಿ ಅನಿಮೇಟರ್, ಗ್ರಾಫಿಕ್ ಡಿಸೈನರ್, ಇಮೇಜ್ ಎಡಿಟರ್, ಮಾಡೆಲರ್, ಕ್ಯಾರೆಕ್ಟರ್ ಅನಿಮೇಟರ್, ಲೇಔಟ್ ಅನಾಲಿಸ್ಟ್, ವೆಬ್ ಡಿಸೈನರ್, ವಿಶುವಲೈಸರ್, ಕಂಟೆಂಟ್ ಡೆವಲಪರ್ ಹೀಗೆ ಈ ಕ್ಷೇತ್ರದಲ್ಲಿ ನೂರೆಂಟು ಉದ್ಯೋಗಗಳಿವೆ.

ಅರ್ಹತೆಯೇನು?

ಅನಿಮೇಶನ್ ಮತ್ತು ಗ್ರಾಫಿಕ್ಸ್ ವಿಶೇಷ ತರಬೇತಿಯನ್ನು ಬಯಸುವ ಕ್ಷೇತ್ರ. ಸೃಜನಶೀಲ ಮನಸ್ಸು, ಸೂಕ್ಷ್ಮ ಗ್ರಹಿಕೆ, ಕಲ್ಪನಾಶಕ್ತಿಗಳೆಲ್ಲ ಇದು ಬಯಸುವ ಗುಣಗಳಾಗಿದ್ದರೂ, ಇವುಗಳಿಗೆ ಪೂರಕವಾಗಿ ಉತ್ತಮ ತರಬೇತಿ ಪಡೆಯುವುದೂ ಮುಖ್ಯ. ಅನಿಮೇಶನ್‍ನಲ್ಲಿ ಈಗ ವಿಶೇಷ ಕೋರ್ಸುಗಳು ಇವೆ. ಕೊಂಚ ಹೆಚ್ಚಿನ ಶ್ರಮ ಮತ್ತು ಆರ್ಥಿಕ ಶಕ್ತಿಯನ್ನು ಬಯಸುವ ಕೋರ್ಸುಗಳು ಇವು.

ಅಹಮದಾಬಾದಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಡಿಸೈನ್, ಕೋಲ್ಕತದ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಫಿಲ್ಮ್ & ಫೈನ್ ಆಟ್ರ್ಸ್, ಮಾಯಾ ಇನ್ಸ್‍ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಸಿನಿಮಾಟಿಕ್ (ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿದೆ), ಅರೆನಾ ಅನಿಮೇಶನ್, ಮುಂಬೈಯ ಎಫ್‍ಎಕ್ಸ್ ಸ್ಕೂಲ್, ತಿರುವನಂತಪುರದ ಟೂನ್ಸ್ ಅಕಾಡೆಮಿ, ಬೆಂಗಳೂರಿನ ಪಿಕಾಸೋ ಅನಿಮೇಶನ್ ಕಾಲೇಜ್, ಜೀ ಇನ್ಸ್‍ಟಿಟ್ಯೂಟ್ ಕ್ರಿಯೇಟಿವ್ ಆಟ್ರ್ಸ್ ಕೆಲವು ಪ್ರಮುಖ ತರಬೇತಿ ಸಂಸ್ಥೆಗಳು. 

ಆರ್ಥಿಕ ಕುಸಿತ ಹಾಗೂ ಕೊರೋನಾದ ಸಂಕಷ್ಟದಿಂದಾಗಿ ಉದ್ಯೋಗ ಜಗತ್ತು ಕೊಂಚ ದುರ್ಬಲವಾಗಿದೆ. ಆದರೆ ಇಲ್ಲಿ ಹೇಳಿರುವ ಉದ್ಯೋಗ ಕ್ಷೇತ್ರಗಳಿಗೆ ಆಧುನಿಕ ಕಾಲದಲ್ಲಿ ಬೇಡಿಕೆ ಕುಸಿಯುವ ಸಾಧ್ಯತೆ ತುಂಬ ಕಡಿಮೆ.  ಉದ್ಯಮ ಜಗತ್ತು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆಯೇ ಇವೆಲ್ಲ ಮತ್ತೆ ಪುಟಿದೇಳುತ್ತವೆ. ತಾಳ್ಮೆ, ಆಸಕ್ತಿ ಮತ್ತು ಆತ್ಮವಿಶ್ವಾಸವುಳ್ಳವರಿಗೆ ಬದುಕುವುದಕ್ಕೆ ಸಾವಿರ ದಾರಿಗಳು.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಜುಲೈ 31, 2020

ಕನ್ನಡ ಶಾಲೆಯ ಮುನ್ನಡೆಯ ಕಥೆ

ಒಂದು ಶಾಲೆಯ ಬಗ್ಗೆ ಏನು ಬರೆಯಬಹುದು? ಎಷ್ಟು ಬರೆಯಬಹುದು? ಬೆಳಗ್ಗೆ, ಮಧ್ಯಾಹ್ನ, ಸಂಜೆ, ಅದರೊಳಗಿನ ಚಟುವಟಿಕೆ, ಪಾಠಪ್ರವಚನ, ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಯ ಪರಿಸರ. ಹೆಚ್ಚೆಂದರೆ ಎರಡು-ಮೂರು ಪುಟ. ಅದೊಂದು ಪುಸ್ತಕವೇ ಆಗಬಲ್ಲುದೇ?

ಡಾ. ಚಂದ್ರಶೇಖರ ದಾಮ್ಲೆಯವರ ‘ನಿಮ್ಮ ನಮ್ಮ ಸ್ನೇಹ ಕನ್ನಡ ಶಾಲೆ’ ಪುಸ್ತಕ ಓದಿದ ಮೇಲೆ ‘ಆಗಿಯೇ ಆಗಬಹುದು’ ಅನ್ನಿಸಿತು.

ದಾಮ್ಲೆಯವರ ಬಳಗದ ‘ಸ್ನೇಹ’ವೆಂಬ ಮಾನಸ ಕೂಸು ಈಗ ಇಪ್ಪತ್ತೈದರ ಜವ್ವನಿಗನಾಗಿ ಬೆಳೆದು ನಿಂತಿದೆ. ಅತ್ತ 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಮೋದನೆ ಪಡೆದಿದೆ. ಇದು ‘ನಿಮ್ಮ ನಮ್ಮ ಸ್ನೇಹ ಕನ್ನಡ ಶಾಲೆ’ಯ ಬಗ್ಗೆ ಮಾತನಾಡಲು ಸಕಾಲ.

ಐದು ವಿಭಾಗಗಳಲ್ಲಿ ಪುಸ್ತಕ ಹರಡಿಕೊಂಡಿದೆ. ‘ಒಂದು ಶಾಲೆಯ ಕನಸು’ ವಿಭಾಗದಲ್ಲಿ ‘ಸ್ನೇಹ’ ಶಾಲೆಯೆಂಬ ಕನಸು ಹುಟ್ಟಿದುದರ ಹಿಂದಿನ ಕಥೆ, ‘ಸ್ನೇಹ ಶಾಲೆ ನೋಡಲು ಬನ್ನಿ’ ವಿಭಾಗದಲ್ಲಿ ಶಾಲೆಯ ಭೌತಿಕ ಸ್ವರೂಪದ ವಿವರಗಳು, ‘ಶಿಕ್ಷಣದ ಪ್ರಕ್ರಿಯೆ’ ಎಂಬ ಮೂರನೇ ವಿಭಾಗದಲ್ಲಿ ಸ್ನೇಹ ಶಾಲೆಯ ಒಟ್ಟಾರೆ ಸಿದ್ಧಾಂತ ಮತ್ತದರ ಜಾರಿಯ ವಿಚಾರ, ನಾಲ್ಕನೇ ವಿಭಾಗದಲ್ಲಿ ಶಾಲೆ ಎದುರಿಸುತ್ತಿರುವ ಸವಾಲುಗಳು ಹಾಗೂ ಕೊನೆಯ ವಿಭಾಗದಲ್ಲಿ ಶಾಲೆಗೆ ದೊರಕಿರುವ ಪ್ರತಿಕ್ರಿಯೆಯ ವಿವರಗಳಿವೆ. ಮಧ್ಯೆ ಶಾಲೆಯ ಇತಿಹಾಸ ಹಾಗೂ ವರ್ತಮಾನ ಹೇಳುವ 20 ಪುಟಗಳಷ್ಟು ವರ್ಣರಂಜಿತ ಚಿತ್ರಗಳಿವೆ.

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನಡೆಯಬೇಕೆಂದು ಹೇಳುವವರು ಬೇಕಾದಷ್ಟು ಮಂದಿ ಇದ್ದಾರೆ. ಶಿಕ್ಷಣದ ಇತಿಹಾಸದುದ್ದಕ್ಕೂ ಈ ಚರ್ಚೆ ಜೋರಾಗಿಯೇ ನಡೆದಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೂ ಅದನ್ನೇ ಹೇಳಿದೆ. ಯತಾರ್ಥದಲ್ಲಿ ಅದನ್ನು ಜಾರಿಗೆ ತರುವ ಕೆಲಸ ತುಂಬ ಸವಾಲಿನದು. ಆದರೆ ದಾಮ್ಲೆ ಮತ್ತವರ ಸಂಗಡಿಗರು ಈ ಸವಾಲನ್ನು ದಿಟ್ಟವಾಗಿಯೇ ಎದುರಿಸಿ ಒಂದು ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಇದು ಇಡೀ ದೇಶಕ್ಕೇ ಕೊಟ್ಟ ಮಾದರಿ. ಒಂದು ಕಡೆ ಖಾಸಗಿ ಸಂಸ್ಥೆಗಳ ಮೇಲಾಟದಲ್ಲಿ ಶಿಕ್ಷಣ ಮಾರಾಟದ ಸರಕಾಗಿ ಬದಲಾಗಿದ್ದರೆ, ‘ಸ್ನೇಹ’ ಸರ್ಕಾರದ ಅನುದಾನವಿಲ್ಲದ ಖಾಸಗಿ ಸಂಸ್ಥೆಯಾಗಿದ್ದುಕೊಂಡೇ ಶಿಕ್ಷಣ ಮಾರಾಟದ ಸರಕಲ್ಲ ಎಂಬುದನ್ನು ಗಟ್ಟಿ ದನಿಯಲ್ಲಿ ಹೇಳಿದೆ; ಪ್ರಾಯೋಗಿಕವಾಗಿ ಸಿದ್ಧಪಡಿಸಿದೆ.

ಪುಸ್ತಕದ ಮೊದಲನೆಯ ಪ್ಯಾರಾ ಇಡೀ ಶಾಲೆಯ ಆತ್ಮದರ್ಶನವಾಗುತ್ತದೆ:

“ಶಾಲೆ ಎಂದರೆ ಅದು ತನ್ನದೇ ಮನೆ ಎಂಬ ಭಾವ ಮಕ್ಕಳಲ್ಲಿ ಬೆಳೆಯಬೇಕು. ಅಂತಹ ಒಂದು ಶಾಲೆಯನ್ನು ನಿರ್ಮಿಸುವುದಾದರೆ ಅಲ್ಲಿ ಏನೇನೆಲ್ಲ ಇರಬೇಕು? ಮುಖ್ಯವಾಗಿ ಮಕ್ಕಳು ಸಂತೋಷದಿಂದ ಅಲ್ಲಿಗೆ ಬರಬೇಕು. ಅದಕ್ಕಾಗಿ ವಿಶಾಲವಾದ ಜಾಗೆ ಇರಬೇಕು, ಅಲ್ಲಿ ಸಮೃದ್ಧವಾಗಿ ಮರ-ಗಿಡ-ಬಳ್ಳಿ ಹೂಗಳು ಕಾಣಸಿಗುತ್ತಿರಬೇಕು. ಓಡಾಡಲು ಏರುತಗ್ಗುಗಳುಳ್ಳ ದಿಣ್ಣೆ ಬಯಲುಗಳಿರಬೇಕು. ಕಟ್ಟಡಗಳು ಸುಭದ್ರವಾಗಿದ್ದು ಸಾಕಷ್ಟು ಗಾಳಿ ಬೆಳಕು ಇರಬೇಕು. ಕೊರತೆಯೆನಿಸದಷ್ಟು ಪಾಠೋಪಕರಣ ಮತ್ತು ಪೀಠೋಪಕರಣಗಳು ಇರಬೇಕು. ಪ್ರೀತಿಯಿಂದ ಮಾತಾಡಿಸುವ ಶಿಕ್ಷಕಿಯರು ಇರಬೇಕು. ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸುವ ಗುಣ ಅವರಲ್ಲಿರಬೇಕು. ಮಕ್ಕಳಲ್ಲಿ ಕಲಿಯುವ ಕುತೂಹಲವನ್ನು ಮೂಡಿಸುವವರಾಗಿರಬೇಕು. ಮಗುವಿನ ಸಹಜ ಸಾಮರ್ಥ್ಯವನ್ನು ಅರಿತುಕೊಂಡು ಕಲಿಕೆಯ ಸ್ಫುರಣೆ ನೀಡುವವರಾಗಿರಬೇಕು………. ಶಾಲೆಗೆ ಬರುವ ಪ್ರತಿ ಮಗುವಿಗೂ ಇವರು ತನಗೆ ಬೇಕಾದವರು ಎನ್ನಿಸುವಂತಹ ವರ್ಚಸ್ಸನ್ನು ಹೊಂದಿರಬೇಕು.”

ಇದೆಲ್ಲ ಆದರ್ಶದ ಮಾತಾದೀತು ಎಂದು ಓದಿದ ತಕ್ಷಣ ಸಾಕಷ್ಟು ಮಂದಿ ಹೇಳಬಹುದು. ಸ್ನೇಹವನ್ನು ನೋಡಿದರಷ್ಟೇ ಇದು ಬರೀ ಆದರ್ಶವಲ್ಲ ಎಂದು ಅರ್ಥವಾದೀತು. ಕಳೆದ ಕಾಲು ಶತಮಾನದಲ್ಲಿ ಇಂತಹದೊಂದು ಆದರ್ಶ ಕಾರ್ಯರೂಪಕ್ಕೆ ಬಂದ ರೀತಿ ಮಾತ್ರ ಅನನ್ಯ.

ನಿತ್ಯಹರಿದ್ವರ್ಣ ಕಾಡು ತುಂಬಿದ ಪಶ್ಚಿಮಘಟ್ಟದ ತಪ್ಪಲಿನ ಸುಳ್ಯ ಪೇಟೆಯ ಹೊರವಲಯದ ಗುಡ್ಡದ ಮೇಲೆ ಇದೆ ಈ ಸ್ನೇಹ ಕನ್ನಡ ಶಾಲೆ. ಎತ್ತರದಲ್ಲಿ ಇದ್ದರೆ ಮಕ್ಕಳಿಗೆ ಕಷ್ಟವಲ್ಲವೇ ಎಂದರೆ ಈ ಗುಡ್ಡ ಹತ್ತಿಕೊಂಡು ಹೋಗುವುದೇ ಅವರಿಗೊಂದು ಖುಷಿ. ಮುಖ್ಯದ್ವಾರದಿಂದಲೇ ಸಿಗುವ ಆವರಣ ಗೋಡೆಯ ಉದ್ದಕ್ಕೂ ನಿಂತಿರುವ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಮಕ್ಕಳಿಗೆ ಪ್ರತಿದಿನ ಎದುರಾಗುತ್ತಾರೆ.

ಕಟ್ಟಡಗಳ ಆಕರ್ಷಕ ವಿನ್ಯಾಸ ಸ್ನೇಹ ಶಾಲೆಯ ಪ್ರಮುಖ ಲಕ್ಷಣ. ಪ್ರಾಥಮಿಕ ಶಾಲಾ ತರಗತಿಗಳು ಬಹುತೇಕ ನಡೆಯುವುದು ವೃತ್ತಾಕಾರದ ಕೊಠಡಿಗಳಲ್ಲಿ. ಸಾಕಷ್ಟು ಗಾಳಿಬೆಳಕು, ಮಕ್ಕಳು ಎದುರು ಬದುರಾಗಿ ಕುಳಿತುಕೊಳ್ಳುವ ಅವಕಾಶ, ಪ್ರತಿ ವಿದ್ಯಾರ್ಥಿಗೂ ಶಿಕ್ಷಕರ ಸಮಾನ ಸಾಮೀಪ್ಯ… ವೃತ್ತಾಕಾರದ ಈ ಕೊಠಡಿಗಳ ಅನುಕೂಲ ಅರ್ಥವಾಗಬೇಕಾದರೆ ಪ್ರತ್ಯಕ್ಷ ನೋಡಬೇಕು.

ಗುಡ್ಡ ಮತ್ತು ಅದರಲ್ಲಿರುವ ನೂರಾರು ಮರಗಳನ್ನು ಬಹುತೇಕ ಹಾಗೆಯೇ ಉಳಿಸಿಕೊಂಡು ಶಾಲೆಗೆ ಬೇಕಾದ ಸೌಕರ್ಯಗಳನ್ನು ನಿರ್ಮಿಸಿರುವುದು ಇಲ್ಲಿನ ವಿಶಿಷ್ಟತೆ. ಎರಡು ಹಲಸಿನ ಮರಗಳ ನಡುವೆ ಆಕರ್ಷಕವಾದ ಬಯಲು ರಂಗ ಮಂದಿರ, ಅದರ ಎದುರು 600ರಷ್ಟು ಮಂದಿ ಕುಳಿತುಕೊಳ್ಳಬಲ್ಲ ಅರ್ಧಚಂದ್ರಾಕೃತಿಯ ಮೆಟ್ಟಿಲುಗಳು, ವಿವಿಧ ಚಟುವಟಿಕೆಗಳಿಗೆ ಅವಕಾಶ ಕೊಡುವ ‘ಸ್ನೇಹ ಸದನ’, ಚಿಣ್ಣರನ್ನೇಕೆ ದೊಡ್ಡವರನ್ನೇ ಮರುಳು ಮಾಡುವ ಮರಳು ತುಂಬಿರುವ ‘ಬರಹದ ಮನೆ’, ಕಲಾಶಾಲೆ,  ಆಟದ ಬಯಲು, ಬಹುಮಾಧ್ಯಮ ಕೇಂದ್ರ, ವಿಜ್ಞಾನ ಉದ್ಯಾನ, ಸುತ್ತಲಿನ ಸಹಜ ಅರಣ್ಯ, ಸಾಲು ಸಾಲು ಔಷಧೀಯ ಗಿಡಗಳು, ಅವುಗಳ ನಡುವೆಯೇ ಕುಳಿತು ಪಾಠ ಕೇಳುವ, ಅಭ್ಯಾಸ ನಡೆಸುವ ಅವಕಾಶ… ಇವುಗಳ ಬಗ್ಗೆ ಪುಸ್ತಕ ಓದಿದರೂ ಸಾಲದು, ಕಣ್ಣಾರೆ ನೋಡಬೇಕು.

ಇವೆಲ್ಲವುಗಳ ನಡುವೆ ಇರುವ ‘ಸೂರ್ಯಾಲಯ’ ಒಂದು ಪ್ರಮುಖ ಆಕರ್ಷಣೆ. ವಿದ್ಯಾಲಯವೇ ದೇವಾಲಯ, ಇನ್ನು ಅದರಲ್ಲೊಂದು ದೇವಸ್ಥಾನವೇ ಎನ್ನಬೇಡಿ. ಇಲ್ಲಿರುವುದು ಸಕಲ ಜೀವರಾಶಿಗಳ ಚೈತನ್ಯದ ಮೂಲ ಸೂರ್ಯ. ಇಲ್ಲಿ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ. ಸೂರ್ಯನನ್ನು ಹೋಲುವ ದೊಡ್ಡದಾದ ಕಲ್ಲಿನ ಗುಂಡು ಬಲಿಷ್ಠ ಸ್ತಂಭವೊಂದರ ಮೇಲೆ ಸ್ಥಾಪಿತವಾಗಿದೆ. ಸುತ್ತಲೂ ನವಗ್ರಹಗಳನ್ನು ಸೂಚಿಸುವ ಪ್ರತಿಮೆಗಳು, ಮೆಟ್ಟಿಲುಗಳು, ಸಾಕಷ್ಟು ಮಂದಿ ಕುಳಿತು ಯೋಗವನ್ನೋ ಧ್ಯಾನವನ್ನೋ ಅಭ್ಯಾಸ ಮಾಡಲು ಅನುಕೂಲವಿರುವ ಕಲ್ಲುಹಾಸುಗಳು. ಈ ದೇವರನ್ನು ಯಾರು ಬೇಕಾದರೂ ಮುಟ್ಟಬಹುದು, ಮಾತಾಡಿಸಬಹುದು. 

“ಆಕಾರಕ್ಕಿಂತಲೂ ಮಿಗಿಲಾದ ನಿರಾಕಾರ ಶಕ್ತಿಯೊಂದು ನಮ್ಮ ಸುತ್ತ ಇದೆ. ಅದನ್ನು ತಿಳಿದಾದರೂ ಮನುಷ್ಯ ತನ್ನ ಅಹಂಕಾರವನ್ನು ನಿಯಂತ್ರಿಸಿಕೊಳ್ಳಬೇಕು. ಇದರ ಸೂಚನೆಯಾದರೂ ಮಕ್ಕಳಿಗೆ ಸಿಗಲಿ” ಎಂಬ ಉದ್ದೇಶದಿಂದ ಇಂತಹದೊಂದು ದೇವಾಲಯ ಬೇಕು ಎಂದು ಯೋಚಿಸಿದವರು ದಾಮ್ಲೆಯವರು (ಪು. 25).

ಕನ್ನಡ ಮಾಧ್ಯಮವೆಂಬ ಕಾರಣಕ್ಕೆ ಇಲ್ಲಿನ ಮಕ್ಕಳು ಯಾವ ಕ್ಷೇತ್ರದಲ್ಲೂ ಹಿಂದಿಲ್ಲ. ಒಂದನೇ ತರಗತಿಯಿಂದ ಇಂಗ್ಲಿಷನ್ನೂ ಒಂದು ಭಾಷೆಯನ್ನಾಗಿ ಕಲಿಸುವುದರಿಂದ ಮಕ್ಕಳಿಗೆ ಇಂಗ್ಲೀಷೂ ಸಲೀಸು. “ಮಗುವಿನ ನಗು ಮಾಸದಂತಹ ಶಿಕ್ಷಣ ಸಾಧ್ಯವೇ?’ (ಪು.35) ಎಂದು ಒಂದೆಡೆ ಕೇಳುತ್ತಾರೆ ದಾಮ್ಲೆಯವರು. ಅಂತಹದೊಂದು ಶಿಕ್ಷಣ ಕೊಡಿಸುವ ಪ್ರಕ್ರಿಯೆ ಅಲ್ಲಿ ಜೀವಂತವಾಗಿದೆ. ವ್ಯಕ್ತಿತ್ವ ವಿಕಸನವೇ ಅಲ್ಲಿನ ಎಲ್ಲ ಚಟುವಟಿಕೆಗಳ ಮೂಲ ಉದ್ದೇಶ. ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ, ನಾಟಕ, ಭಾಷಣ, ರಸಪ್ರಶ್ನೆ, ಸುದ್ದಿಪತ್ರ- ಅಲ್ಲಿ ಎಲ್ಲವೂ ಕಲಿಕೆಯ ಭಾಗ. ಇಲ್ಲಿ ಕಲಿತ ಮಕ್ಕಳೆಲ್ಲ ಉತ್ತಮ ಉದ್ಯೋಗಗಳನ್ನು ಪಡೆದು ಸಂತೃಪ್ತಿಯ ಬದುಕು ಕಟ್ಟಿಕೊಂಡಿದ್ದಾರೆ.

ಶಾಲಾ ವಾರ್ಷಿಕೋತ್ಸವದಲ್ಲಿ ಎಲ್ಲರೂ ವೇದಿಕೆಗೆ ಬಂದು ಬಹುಮಾನ ಸ್ವೀಕರಿಸುವಂತಾಗಬೇಕು ಎಂಬುದು ಶಾಲೆಯ ಆಶಯ. ಒಮ್ಮೆ ಇಬ್ಬರು ಹುಡುಗರಿಗೆ ಯಾವ ಸ್ಪರ್ಧೆಯಲ್ಲೂ ಬಹುಮಾನ ಸಿಗಲಿಲ್ಲವಂತೆ. ತಕ್ಷಣ ಆಯೋಜನೆಯಾದದ್ದು ಮರ ಹತ್ತುವ ಸ್ಪರ್ಧೆ! ಪ್ರಥಮ, ದ್ವಿತೀಯ ಬಹುಮಾನ ಅವರಿಗಲ್ಲದೆ ಬೇರೆ ಯಾರಿಗೂ ಬರಲಿಲ್ಲ ಎಂದು ಬೇರೆ ಹೇಳಬೇಕಿಲ್ಲವಷ್ಟೆ?

ಇಂತಹ ಪರಿಸರದ ನಡುವೆ ಇದ್ದ ಮೇಲೆ ನೆಲ-ಜಲ ಸಂರಕ್ಷಣೆಯ ಪ್ರತ್ಯೇಕ ಪಾಠವೇನೂ ಮಕ್ಕಳಿಗೆ ಬೇಕಾಗದು. ಆದರೆ ಸ್ನೇಹ ಶಾಲೆ ಅದನ್ನೂ ಮಾಡಿದೆ. ತನ್ನ ವಿಶಾಲ ನೈಸರ್ಗಿಕ ಕ್ಯಾಂಪಸಿನಲ್ಲಿ ಹತ್ತಾರು ಇಂಗುಗುಂಡಿಗಳನ್ನು ನಿರ್ಮಿಸಿ ತನಗೆ ನೀರಿನ ಕೊರತೆಯಾಗದಂತೆ ನೋಡಿಕೊಂಡಿದೆ. ಶಾಲೆಯ ಪ್ರತಿಯೊಂದು ಮಗುವೂ ತನ್ನ ಮನೆಯಲ್ಲೂ ಇಂಗುಗುಂಡಿ ನಿರ್ಮಿಸುವ ದೊಡ್ಡದೊಂದು ಆಂದೋಲನವೂ ಇಲ್ಲಿ ನಡೆದಿದೆ. ಅದರ ಬಗ್ಗೆ ಕೆಲಸಮಯದ ಹಿಂದೆ ನಾನು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯಲ್ಲಿ ಬರೆದದ್ದುಂಟು. ಇಲ್ಲಿ ಕ್ಲಿಕ್ ಮಾಡಿ ಓದಬಹುದು.

Lessons of water conservation

ಭಾರತರತ್ನ ಡಾ. ಸಿ. ಎನ್. ಆರ್. ರಾವ್, ವಿಜ್ಞಾನಿ ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ, ಈಗ ಶಿಕ್ಷಣ ಸಚಿವರಾಗಿರುವ ಶ್ರೀ ಸುರೇಶ್ ಕುಮಾರ್ ಅವರಿಂದ ತೊಡಗಿ ಅನೇಕಾನೇಕ ಗಣ್ಯರು ಈ ಶಾಲೆಗೆ ಬಂದು ಸಂತೋಷಪಟ್ಟು ಹೋಗಿದ್ದಾರೆ. ಸಾಕಷ್ಟು ಮಂದಿ ವಿದೇಶೀಯರು ಇಲ್ಲೇ ಇದ್ದು ಅಧ್ಯಯನ ನಡೆಸಿದ್ದಾರೆ. ಇಲ್ಲಿನ ಕಲಿಕಾಪ್ರಕ್ರಿಯೆಯನ್ನು ಮನಸಾರೆ ಪ್ರಶಂಸಿಸಿದ್ದಾರೆ.

ಇಷ್ಟೆಲ್ಲ ಆದ ಮೇಲೂ ಶಿಕ್ಷಣ ಇಲಾಖೆ ಸ್ನೇಹ ಶಾಲೆಯ ಬಗ್ಗೆ ಕನಿಷ್ಟ ಆಸಕ್ತಿಯನ್ನೂ ತೋರಿಲ್ಲ ಎಂಬ ಬೇಸರ ಡಾ. ದಾಮ್ಲೆಯವರದ್ದು. “ಹೆಚ್ಚುತ್ತಿರುವ ಇಂಗ್ಲಿಷ್ ಮಾಧ್ಯಮದ ಶಾಲೆಗಳ ವ್ಯಾಪಕತೆಯಿಂದಾಗಿ ಪ್ರವಾಹದ ವಿರುದ್ಧ ಈಜುವುದು ಎಷ್ಟು ಕಾಲ ಮತ್ತು ಯಾಕಾಗಿ” ಎಂಬ ಪ್ರಶ್ನೆಯನ್ನು ಅವರೇ ಕೇಳಿರುವುದು ತುಸು ಆತಂಕದ ವಿಷಯವೇ. ಆದರೆ ಇಷ್ಟು ವರ್ಷ ಒಂದು ಕನ್ನಡ ಮಾಧ್ಯಮ ಖಾಸಗಿ ಶಾಲೆ ನಡೆದುಬಂದುದರ ಹಿಂದೆ ಸ್ನೇಹ ಬಳಗದ ಕರ್ತೃತ್ವಶಕ್ತಿ ತುಂಬ ದೊಡ್ಡದು. ಶಾಲೆಯ ಮುಖ್ಯೋಫಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮೀ ದಾಮ್ಲೆ, ಉಪಾಧ್ಯಕ್ಷ ಶ್ರೀ ಎಸ್. ಕೆ. ಆನಂದ ಕುಮಾರ್, ಕಾರ್ಯದರ್ಶಿ ಡಾ. ವಿದ್ಯಾಶಾಂಭವ ಪಾರೆ, ನಿರ್ದೇಶಕರಾದ ಶ್ರೀಮತಿ ರೇಖಾ ಆನಂದ್, ಶ್ರೀ ಗಿರೀಶ್ ಭಾರದ್ವಾಜ್, ಶ್ರೀ ಶ್ರೀಕರ ದಾಮ್ಲೆ- ಇವರೆಲ್ಲ ಆ ಬಳಗದಲ್ಲಿ ಇದ್ದಾರೆ.

ಪುಸ್ತಕದ ಬಗ್ಗೆ ಬರೆಯಬೇಕೆಂದು ಹೊರಟು ಶಾಲೆಯ ಬಗೆಗೇ ಬರೆದುಬಿಟ್ಟೆ. ಪುಸ್ತಕ ಶಾಲೆಯ ಕುರಿತೇ ಆದ್ದರಿಂದ ಹೀಗಾಯ್ತು. ನಾನೂ ಒಂದು ದಿನವನ್ನು ಅಲ್ಲಿ ಕಳೆದದ್ದರಿಂದ ಆ ಪರಿಸರ ನನ್ನ ಹೃದಯಕ್ಕೆ ಹತ್ತಿರವಾಗಿರುವುದೂ ಇದಕ್ಕೆ ಇನ್ನೊಂದು ಕಾರಣ.

ನಿಮ್ಮಲ್ಲಿ ಸಾಕಷ್ಟು ಮಂದಿ ಸ್ನೇಹ ಶಾಲೆಗೆ ಭೇಟಿ ನೀಡಿರಬಹುದು. ಇಲ್ಲವಾದರೆ ಈ ಕೊರೋನಾ ಕಾಟ ಮುಗಿದ ಮೇಲಾದರೂ ಒಮ್ಮೆ ಹೋಗಿ ಬನ್ನಿ. ಕನ್ನಡ ಶಾಲೆಗಳು ಮುಚ್ಚುತ್ತಿರುವ ಇಂದಿನ ಕಾಲದಲ್ಲಿ ಅವುಗಳನ್ನು ಉಳಿಸಲು ಏನು ಮಾಡಬೇಕು ಎಂಬ ಯಕ್ಷಪ್ರಶ್ನೆಗಾದರೂ ಒಂದು ಪ್ರಾಯೋಗಿಕ ಪರಿಹಾರ ನಿಮ್ಮ ಮನಸ್ಸಿಗೆ ಹೊಳೆದೀತು. ಇಲ್ಲದಿದ್ದರೆ ಇಂತಹ ಇನ್ನು ಹತ್ತು ಶಿಕ್ಷಣ ನೀತಿ ಬಂದೂ ಪ್ರಯೋಜನ ಇಲ್ಲ.

-ಸಿಬಂತಿ ಪದ್ಮನಾಭ

ಶನಿವಾರ, ಜುಲೈ 25, 2020

ಆಧುನಿಕ ಬದುಕಿನೊಂದಿಗೆ ಮುಖಾಮುಖಿಯಾಗಿಸುವ ಕಲ್ಚಾರರ 'ಆ ಲೋಚನ'


ಆರಂಭದಲ್ಲೇ ಹೇಳಿಬಿಡಬೇಕು: ಇದು ವಿಮರ್ಶೆ ಅಲ್ಲ. ಹೊಗಳುವ ಉದ್ದೇಶವೂ ಇಲ್ಲ. ಹೆಚ್ಚೆಂದರೆ ಪುಸ್ತಕ ಪರಿಚಯ ಎನ್ನಬಹುದು. ಶ್ರೀ ರಾಧಾಕೃಷ್ಣ ಕಲ್ಚಾರರ ಮೊನ್ನೆಯಷ್ಟೇ ಬಿಡುಗಡೆಯಾಗಿರುವ ‘ಆ-ಲೋಚನ’ವನ್ನು ಓದಿದ ಮೇಲೆ ಮನಸ್ಸಿನಲ್ಲಿ ಉಳಿದದ್ದನ್ನು ಹೇಳುವ ಪ್ರಯತ್ನ ಅಷ್ಟೇ.

ಒಟ್ಟು 216 ಪುಟಗಳಿರುವ ‘ಆ-ಲೋಚನ’ದಲ್ಲಿ 54 ಲೇಖನಗಳಿವೆ. ಸಂಜೆ ಆರು ಗಂಟೆಗೆ ಪುಸ್ತಕ ಹಿಡಿದವನು ರಾತ್ರಿ ಹನ್ನೆರಡಕ್ಕೆ ಓದಿ ಮುಗಿಸಿದೆ. ಇಷ್ಟು ಹೇಳಿದ ಮೇಲೆ ಸುಲಲಿತವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಅಂಕಣರೂಪದಲ್ಲಿ ಈಗಾಗಲೇ ಪ್ರಕಟವಾಗಿರುವುದರಿಂದ ನಾನೂ ಸೇರಿದಂತೆ ಹಲವಾರು ಓದುಗರು ಮೆಚ್ಚಿಕೊಂಡ ಬರೆಹಗಳೇ.  ಆದರೂ ಎಲ್ಲ ಲೇಖನಗಳನ್ನೂ ಪುಸ್ತಕದ ಚೌಕಟ್ಟಿನಲ್ಲಿ ಒಟ್ಟಿಗೆ ಓದುವ ಅನುಭವ ಬೇರೆ.

ಲೇಖಕನ ವ್ಯಕ್ತಿತ್ವದಲ್ಲಿ ವೈವಿಧ್ಯತೆಯಿದ್ದರೆ ಬರೆಹದಲ್ಲೂ ಅದು ಕಾಣುತ್ತದೆ – ಪುಸ್ತಕ ಓದಿ ಮುಗಿಸಿದ ಮೇಲೆ ತಕ್ಷಣಕ್ಕೆ ಅನಿಸಿದ್ದು ಇಷ್ಟು. ಶ್ರೀ ಕಲ್ಚಾರರು ಮೂಲತಃ ಸಾಹಿತ್ಯದ ವಿದ್ಯಾರ್ಥಿ. ಪತ್ರಕರ್ತರಾಗಿ, ಉಪನ್ಯಾಸಕರಾಗಿ ಅನುಭವ ಪಡೆದವರು. ಯಕ್ಷಗಾನ ತಾಳಮದ್ದಳೆಯ ಪ್ರಮುಖ ಅರ್ಥಧಾರಿ. ಪತ್ರಿಕಾ ಬರೆಹ, ಪುಸ್ತಕಗಳಿಂದ ಮನ್ನಣೆಯನ್ನೂ ಪಡೆದವರು. ಅವರ ಬರೆವಣಿಗೆ ಹಿತ ಕೊಡುವುದರ ಹಿಂದೆ ಈ ಎಲ್ಲ ಕಾರಣಗಳಿವೆ ಅನಿಸುತ್ತದೆ.

ಯಾವುದೇ ವ್ಯಕ್ತಿಯ ವಿದ್ವತ್ತು ಒಂದು ತೂಕವಾದರೆ, ಅದನ್ನು ಪ್ರಸ್ತುತಪಡಿಸುವ ಸಾಮರ್ಥ್ಯದ್ದು ಇನ್ನೊಂದು ತೂಕ. ಎರಡೂ ಹದವಾಗಿ ಬೆರೆತಿದ್ದರೆ ಓದುಗ ಪುಣ್ಯವಂತ. ಜ್ಞಾನ, ಅನುಭವದ ಜೊತೆಗೆ ಅವುಗಳನ್ನು ಸರಳ ಮತ್ತು ಆಕರ್ಷಕವಾಗಿ ಅಭಿವ್ಯಕ್ತಗೊಳಿಸುವ ಕಲೆ ಕಲ್ಚಾರರಿಗೆ ಕರಗತವಾಗಿರುವುದರಿಂದ ಈ ಪುಸ್ತಕ ಓದುವುದೂ ಒಂದು ಹಿತಾನುಭವವೇ. ಈ ಕೌಶಲದ ಹಿಂದೆ ಮೇಲೆ ಹೇಳಿದ ಅವರ ಬಹುಮುಖೀ ವ್ಯಕ್ತಿತ್ವದ ಪಾತ್ರ ದೊಡ್ಡದು. "ಕಿರಿದರೊಳ್ ಪಿರಿದರ್ಥ"ವನ್ನು ತುಂಬಿ ಕೊಡುವ ಕಲೆ ಅವರಿಗೆ ಸಿದ್ಧಿಸಿದೆ ಎಂದು ನನ್ನಂತಹ ಕಿರಿಯ ಹೇಳುವುದು ಅಧಿಕಪ್ರಸಂಗ ಆದೀತು. ಹಾಗಾಗಿ ಹೇಳುವುದಿಲ್ಲ.

ಅಂಕಣ ಬರೆಹಗಳಿಗೆ ಮೂಲತಃ ಪದ ಮತ್ತು ವಸ್ತುಗಳ ಇತಿಮಿತಿಗಳಿದ್ದರೂ ಇಲ್ಲಿ ಲೇಖಕರಿಗೆ ಹೆಚ್ಚೆಂದರೆ ಪದದ ಮಿತಿ ಕಾಡಿರಬಹುದು ಅಷ್ಟೇ. ವಸ್ತುಗಳ ಮಿತಿ ಅಡ್ಡಿಪಡಿಸದಂತೆ ಒಂದು ವಿಸ್ತಾರವಾದ ಚೌಕಟ್ಟು ‘ಆ ಲೋಚನ’ಕ್ಕೆ ಇತ್ತು. ಅದಕ್ಕೇ ಅದು ಎಲ್ಲೂ ಬೋರ್ ಅನಿಸುವುದಿಲ್ಲ. 10-12ನೇ ಶತಮಾನದ ಪಂಪ, ರನ್ನ, ಜನ್ನ, ರಾಘವಾಂಕ, ವಚನಕಾರರು ಎಲ್ಲರನ್ನೂ ಅವರು ಕರೆದು ತಂದಿದ್ದಾರೆ. ಹಾಗೆಂದು ವರ್ತಮಾನದ ವಿಷಯಗಳನ್ನೂ ಮಾತಾಡಿದ್ದಾರೆ. ವಿಶೇಷವೆಂದರೆ ಈ ಎರಡೂ ತುದಿಗಳನ್ನು ಸುಂದರವಾಗಿ ಬೆಸೆದಿರುವುದು.

ಇಡೀ ಪುಸ್ತಕದಲ್ಲಿ ಎದ್ದು ಕಾಣುವ ಅಂಶ ಅವರು ಆಧುನಿಕ ಬದುಕಿಗೆ ಮುಖಾಮುಖಿಯಾಗುವ ರೀತಿ. ಹಾಗೆಂದು ಯಾವುದೋ ಘನಗಂಭೀರ ಥಿಯರಿಗಳನ್ನು ತಂದು ಸಾಮಾನ್ಯ ಓದುಗರ ಕೈಗೆಟುಕದ ಹಣ್ಣಿನಂತೆ ಇಟ್ಟಿಲ್ಲ. ದಿನನಿತ್ಯ ಕಣ್ಣೆದುರು ನಡೆಯುವ ಘಟನೆಗಳನ್ನೇ, ಸುತ್ತಮುತ್ತಲಿನ ವ್ಯಕ್ತಿಗಳನ್ನೇ ಉದಾಹರಣೆಯಾಗಿಟ್ಟುಕೊಂಡು ಬದುಕಿನ ವಿಶ್ಲೇಷಣೆ ಮಾಡಿದ್ದಾರೆ. ಆಧುನಿಕ ಸಮಾಜದಲ್ಲಿ ಆಗಿರುವ ಮೌಲ್ಯಗಳ ಕುಸಿತ, ಜನರ ಸ್ವಾರ್ಥಪರತೆ, ಸಂಕುಚಿತ ಮನೋಭಾವ ಇವೆಲ್ಲವುಗಳ ಕುರಿತಾದ ಲೇಖಕರ ವಿಷಾದ ಪ್ರತಿಯೊಂದು ಲೇಖನದಲ್ಲೂ ಒಂದಲ್ಲ ಒಂದು ರೀತಿ ಕಾಣಿಸಿಕೊಂಡಿದೆ. ಹಾಗೆಂದು ಅವರು ನಿರಾಶಾವಾದಿಯಲ್ಲ ಎಂಬಷ್ಟರ ಮಟ್ಟಿಗೆ ಭರವಸೆಯ ಮಾತನಾಡುವ ಲೇಖನಗಳೂ ಸಾಕಷ್ಟು ಇವೆ. ಬಹುಶಃ ಅದೇ ಕಾರಣಕ್ಕೆ ಅವರ ಸಾಕಷ್ಟು ಓದುಗರು ಗುರುತಿಸಿರುವ ಹಾಗೆ ಅವರ ಲೇಖನಗಳಲ್ಲಿ ಒಂದು ಬಗೆಯ ಆಪ್ತಸಮಾಲೋಚನೆಯ ಗುಣವಿದೆ.

ಇಡೀ ಪುಸ್ತಕದಲ್ಲಿ ನನಗೆ ಹೆಚ್ಚು ನೆನಪುಳಿದಿರುವುದು ಹಳೆಯ ಮತ್ತು ಹೊಸ ತಲೆಮಾರಿನ ಕುರಿತ ಲೇಖಕರ ಕಾಳಜಿ. ಅದರಲ್ಲೂ ಹಿರಿಯ ಜೀವಗಳ ಬಗ್ಗೆ ಅವರು ತುಸು ಹೆಚ್ಚೇ ಆತಂಕಿತರಾಗಿರುವುದು ಎದ್ದು ಕಾಣುತ್ತದೆ. ಏನಿಲ್ಲವೆಂದರೂ ಐದಾರು ಲೇಖನಗಳು ಪೂರ್ತಿಯಾಗಿ ಇದೇ ವಿಷಯವನ್ನು ಮಾತಾಡುತ್ತವೆ. ಪುಸ್ತಕ ಆರಂಭವಾಗುವುದೇ ಎಂಬತ್ತು ದಾಟಿದ ಹಿರಿಯ ಕಲಾವಿದರೊಬ್ಬರ ಒಂಟಿತನದ ಸಂಕಟದ ಜೊತೆಗೆ (‘ನಿರ್ಮಿತ್ರನಿರಲು ಕಲಿ’). ‘ನಿವೃತ್ತಿಯ ಅನಂತರ’, ‘ಕನಸುಗಳಿಲ್ಲದ ದಾರಿಯಲ್ಲಿ’, ‘ಐವತ್ತರಾಚೆಯ ಆತಂಕಗಳು’, ‘ನೋ ಕಂಟ್ರಿ ಫಾರ್ ಓಲ್ಡ್ ಮೆನ್’ ಮುಂತಾದ ಲೇಖನಗಳೆಲ್ಲ ಆಧುನಿಕ ಸಮಾಜದ ಅಂಚಿನಲ್ಲಿರುವ ವಯೋವೃದ್ಧರ ತೊಳಲಾಟಗಳ ಬಗೆಗೆ ಚರ್ಚಿಸುತ್ತವೆ.

“ಬೀದಿನಾಯಿಗಳ ಬಗ್ಗೆ ನಮಗಿರುವ ಅನುಕಂಪದ ಒಂದಂಶವಾದರೂ ನಮ್ಮ ಮನೆಗಳ ವೃದ್ಧಜೀವಗಳ ಕುರಿತು ಬೇಡವೇ?” (ಪು. 195) ಎಂದು ಒಂದೆಡೆ ಅವರು ಬರೆದದ್ದು ನಮ್ಮ ಸಮಾಜದ ಆತ್ಮಸಾಕ್ಷಿಗೆ ಕೇಳಿದ ಪ್ರಶ್ನೆಯೇನೋ ಎಂಬ ಹಾಗಿದೆ. “ಉಪಯೋಗವಿಲ್ಲದ ಜೀವಕ್ಕೆ ಬದುಕುವ ಹಕ್ಕಿಲ್ಲ ಎಂಬ ಸಿದ್ಧಾಂತಕ್ಕೆ ಒಲಿಯುತ್ತಿದ್ದೇವೆ”, “ಗಲ್ಲುಶಿಕ್ಷೆಯನ್ನು ನಿರೀಕ್ಷಿಸುವ ಕೈದಿಗಳಂತೆ ಕಾಣುತ್ತಾರೆ” (ಪು. 29) ಎಂಬ ಮಾತುಗಳೂ ಅಷ್ಟೇ ಬೆಚ್ಚಿಬೀಳಿಸುವಂಥದ್ದು. 

ಮಕ್ಕಳು ಹಿಡಿದಿರುವ ಹಾದಿ, ಅವರ ಭವಿಷ್ಯ ಲೇಖಕರಿಗೆ ಪ್ರಮುಖವಾಗಿ ಕಾಡಿರುವ ಇನ್ನೊಂದು ವಿಷಯ. ಜತೆಯಲ್ಲಿ ಉಣ್ಣುವ ಸೊಗಸು, ಮಂಗಳದ ಬೆಳೆಗಿಂಗಳಿನ ಮಳೆ, ಹೆತ್ತೊಡಲ ತಲ್ಲಣಗಳು, ಕಮರುವ ಕುಡಿಗಳು ಮುಂತಾದ ಲೇಖನಗಳಲ್ಲಿ ಮಕ್ಕಳ ಕುರಿತಾದ ಆತಂಕ, ಭರವಸೆ ಎರಡರ ಕುರಿತೂ ಮಾತನಾಡಿದ್ದಾರೆ. ಟಿವಿ, ಮೊಬೈಲ್, ಸಾಮಾಜಿಕ ಮಾಧ್ಯಮಗಳ ನಡುವೆ ಕುಸಿಯುತ್ತಿರುವ ಕುಟುಂಬ ವ್ಯವಸ್ಥೆ, ದಾರಿತಪ್ಪುತ್ತಿರುವ ಮಕ್ಕಳು, ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಬಗೆ ಹೇಗೆ ಎಂಬ ಹೆತ್ತವರ ಆತಂಕ ಅನೇಕ ಲೇಖನಗಳಲ್ಲಿ ಚರ್ಚೆಗೆ ಬಂದಿದೆ. “ಮುಂದಿನ ಜನಾಂಗ ವ್ಯಾಧನಾಗುತ್ತದೋ? ವಾಲ್ಮೀಕಿಯಾಗುತ್ತದೋ?” (ಪು. 184) ಎಂದು ಒಂದೆಡೆ ಕೇಳಿರುವುದು ಮಾರ್ಮಿಕವಾಗಿದೆ.

ನೈತಿಕತೆಯ ತಳಹದಿಯಿಲ್ಲದ ರಾಜಕಾರಣ, ಅಹಮಿಕೆಯ ಆಡಳಿತಾರೂಢರು, ಸಂಪತ್ತನ್ನೇ ಗೌರವ ಎಂದುಕೊಂಡ ಶ್ರೀಮಂತವರ್ಗ,  ಸಾಮಾಜಿಕ ಜಾಲತಾಣಗಳ ನಡುವೆ ಹಿಡಿತ ತಪ್ಪುತ್ತಿರುವ ಭಾಷೆ - ಎಲ್ಲದರ ಕುರಿತೂ ಅಲ್ಲಲ್ಲಿ ಸಾಕಷ್ಟು ಪ್ರಸ್ತಾಪವಾಗಿದೆ. ಇಂತಹ ವಿಷಯಗಳ ಬಗ್ಗೆ ಮಾತಾಡುವಾಗೆಲ್ಲ ಲೇಖಕರು ಮಹಾಭಾರತ, ರಾಮಾಯಣ ಮತ್ತಿತರ ಮಹಾಕಾವ್ಯಗಳಿಂದ ಸಾಕಷ್ಟು ನಿದರ್ಶನಗಳನ್ನು ಕೊಡುತ್ತಾರೆ (ಮಹಾಭಾರತ ಅವರನ್ನು ಹೆಚ್ಚು ಕಾಡಿದಂತೆ ಕಾಣುತ್ತದೆ). ಪಂಪನಿಂದ ತೊಡಗಿ ಡಿವಿಜಿಯವರವರೆಗಿನ ಹಲವು ಸಾಹಿತ್ಯರತ್ನಗಳನ್ನು ಅವರು ಪ್ರಸ್ತುತವಾಗಿಸುವ ರೀತಿಯೂ ಚಂದ. ಸಾವಿರ ವರ್ಷಗಳ ಹಿಂದೆ ಬರೆದದ್ದೆಲ್ಲ ವರ್ತಮಾನದ ರಾಜಕಾರಣಕ್ಕೆ ಇಷ್ಟೊಂದು ಪ್ರಸ್ತುತವೇ ಎಂಬ ಸೋಜಿಗ ಓದುಗರನ್ನು ಕಾಡದಿರದು. ಲೇಖಕನೊಬ್ಬನಿಗೆ ಸಾಹಿತ್ಯದ ವಿಸ್ತಾರವಾದ ಓದು ಎಷ್ಟೊಂದು ಮುಖ್ಯ ಎಂಬುದು ಅಲ್ಲಲ್ಲೇ ಮನದಟ್ಟಾಗುತ್ತದೆ.

ಓದುತ್ತಾ ಥಟ್ಟನೆ ಸೆಳೆದ ಕೆಲವು ಮಾತುಗಳನ್ನು ಟಿಪ್ಪಣಿ ಮಾಡಿಕೊಂಡಿದ್ದೆ. ಗಮನಿಸಿ.
  • ಯೌವ್ವನದ ಹುಮ್ಮಸ್ಸಿನಲ್ಲಿದ್ದ ಎಲ್ಲದರ ನಿರ್ಣಾಯಕ ನಾನು ಅನ್ನುವ ಅಹಂಕಾರ ಅಳಿದು ಬದುಕಿನ ಬಂಡಿಯನ್ನೆಳೆದು ಬಳಲಿಕೆಯಾದ ನಡುವಯಸ್ಸಿನಲ್ಲಿ ತುಸು ಹೊತ್ತು ವಿಶ್ರಾಂತಿಗೆ ನಿಂತಾಗ ಮತ್ತದೇ ಪ್ರಶ್ನೆ. ಆ ದಾರಿಯಲ್ಲಿ ಹೋಗುತ್ತಿದ್ದರೆ? (ಪು. 24)
  • ಓದುತ್ತಿರುವಷ್ಟು ಕಾಲ ಬೇರಾವುದರ ಅರಿವೂ ಇಲ್ಲದ ತನ್ಮಯತೆ,ವರ್ತಮಾನವನ್ನು ಮರೆಯುವ ಧ್ಯಾನಸ್ಥ ಸ್ಥಿತಿ ಕೊಡುವ ವಿಶಿಷ್ಟ ಅನುಭವ ಎಂದಿಗೂ ಹೊಳಪು ಕಳಕೊಳ್ಳದ ಹೊನ್ನು (ಪು.  27).
  • ದಾಂಪತ್ಯದಲ್ಲಿ ಪ್ರೇಮ, ಹೊಂದಾಣಿಕೆಗಳಿಗಿಂತ ಸ್ಪರ್ಧೆ, ಸಮಾನತೆ ಮುಖ್ಯವಾದಾಗ ಸಂಬಂಧ ಕತ್ತರಿಸಿ ಹೋಗುವುದು ಅನಿವಾರ್ಯ (ಪು. 34).
  • ನಾವು ಸತ್ಯವನ್ನು ಹೇಳುವಾಗ ನಮ್ಮ ಭಾಷೆ ಕಟುವಾಗಬೇಕಿಲ್ಲ. ಸೌಮ್ಯವಾಗಿ ಹೇಳುವುದು ದೌರ್ಬಲ್ಯವೂ ಅಲ್ಲ. ಭಾಷೆ ಕಟುವಾಗುವುದು ಮತ್ತು ಮಾತು ಆರ್ಭಟವಾಗುವುದು ತನ್ನ ನಿಲುವಿನ ಕುರಿತು ತನೇ ಸಂದೇಹವಿದ್ದಾಗ ಅಥವಾ ಸುಳಳು ಹೇಳುವಾಗ (ಪು.39).
  • ನಿಜವಾದ ಯೋಗ್ಯತೆ ಇಲ್ಲದೆ ಬಂದ ಕೀರ್ತಿಯ ಆಯಸ್ಸು ಎಷ್ಟು? (ಪು. 50).
  • ಕೈಬೆರಳು ಬಳಸಿಕೊಂಡು ಉಣ್ಣಲಾಗದ, ಹಿತವಾದ ಉಡುಪು ಧರಿಸಲಾಗದ, ದುಃಖವಾದರೆ ಮನಸ್ಸು ತೆರೆದು ಅಳಲಾಗದ, ಸಂತೋಷವಾದರೆ ಮನಃಪೂರ್ವಕ ನಗಲಾರದ ಈ ಕೃತಕತೆ ನಮಗೆ ಬೇಕೆ? (ಪು. 72)
  • ಒಬ್ಬ ಮೋಸಗಾರನಿಂದಾಗಿ ಜಗತ್ತಿನಲ್ಲಿ ಉದಾರಿಗಳೇ ಇಲ್ಲ ಎಂದು ನಿರ್ಣಯಿಸಲಾಗದು (ಪು. 74)
  • ಮೂರ್ಖರ ಊರಿನಲ್ಲಿ ಬುದ್ಧಿವಂತನಾಗಿರುವುದೇ ಅಪಾಯ ಅಲ್ಲವೇ? (ಪು. 84)
  • ಪ್ರಸಿದ್ಧಿಗಿಂತ ಸಿದ್ಧಿಯೇ ಕಲಾಕಾರನ ಆತ್ಮಶಕ್ತಿಯನ್ನು ವರ್ಧಿಸುವುದು (ಪು. 94).
  • ವೃದ್ಧರನ್ನು ಅವರಿರುವಷ್ಟು ಕಾಲ ಪ್ರೀತಿಯಿಂದ ನೋಡಿಕೊಳ್ಳುವವನಿಗಿಂತ ಅವರ ಉತ್ತರಕ್ರಿಯೆಯನ್ನು ವಿಜೃಂಭಣೆಯಿಂದ ಮಾಡುವವನನ್ನು ಲೋಕ ಹೊಗಳುತ್ತದೆ (ಪು. 103).
  • ಹೊರಗಿನ ಒತ್ತಡದಿಂದ ಯಾವ ಕಲೆಯೂ ಒಲಿಯಲಾರದು (ಪು. 140)
  • ಕ್ಷಮಿಸಿದವನ ಔದಾರ್ಯ ಅರ್ಥವಾಗದಿದ್ದಾಗ ಕ್ಷಮೆಯಿಂದ ಪ್ರಯೋಜನವೇನು? (ಪು. 150).
  • ಒಂದು ಸಮೂಹವನ್ನು ಪ್ರಭಾವಿಸುವ ಸಾಮರ್ಥ್ಯವುಳ್ಳವರ ಜೀವನ ಭ್ರಷ್ಟವೆಂದು ಬಹಿರಂಗವಾದಾಗ ಅವರ ಜಸ (ಕೀರ್ತಿ) ಮಾತ್ರವಲ್ಲ ದೇಶಚರಿತೆಯೂ ಕಳಂಕವಾಗುವುದಷ್ಟೆ? (ಪು. 164).
  • ಅಭಿಮಾನಿಗಳ ಉಘೇ ಎಂಬ ಉದ್ಗಾರ ಕಲಾವಿದನನ್ನು ಸಿದ್ಧಗೊಳಿಸಲಾರದು, ಬೆಂಬಲಿಗರ ಜಯಘೋಷ ನಾಯಕನನ್ನು ರೂಪಿಸಲಾರದು (ಪು. 204).
ಪ್ರತೀಪುಟದಲ್ಲೂ ಕಂಡುಬರುವ ಇಂತಹ ಸತ್ವಯುತ ಮಾತುಗಳು ಮನಸ್ಸನ್ನು ಚಿಂತನೆಗೆ ಹಚ್ಚುತ್ತವೆ. ಎಲ್ಲಾ ಬರೆದುಬಿಟ್ಟರೆ ಇನ್ನು ಪುಸ್ತಕ ಓದುವುದು ಯಾಕೆ ಎಂದು ನೀವು ಕೇಳಿಬಿಟ್ಟರೆ ಕಷ್ಟ. ಆ ಖುಷಿ ಇಡೀ ಪುಸ್ತಕದ ಓದಿನಿಂದಲೇ ಸಿಗಬೇಕು. ಹಾಗಾಗಿ ಇಲ್ಲಿ ನಿಲ್ಲಿಸುತ್ತೇನೆ.

ಬಂಟ್ವಾಳದ ಸೇವಂತಿ ಪ್ರಕಾಶನ ‘ಆ ಲೋಚನ’ವನ್ನು ಪ್ರಕಟಿಸಿದೆ. ಹೊಸದಿಂಗತ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರೆಹಗಳಿವು. ಡಾ. ನಾಗವೇಣಿ ಮಂಚಿಯವರು ಚಂದದ ಬೆನ್ನುಡಿ ಬರೆದಿದ್ದಾರೆ. ಕಲ್ಚಾರರ ಮಗ ಅಭಿರಾಮನೇ ಅರ್ಥಪೂರ್ಣ ರಕ್ಷಾಪುಟ ವಿನ್ಯಾಸ ಮಾಡಿ ಹೊಸಹುಡುಗರ ತಾಕತ್ತೇನು ಅಂತ ತೋರಿಸಿದ್ದಾನೆ. ಪುಸ್ತಕದ ಕ್ರಯ ರೂ. 170.

‘ಕಟ್ಟಿಯುಮೇನೋ ಮಾಲೆಗಾರನ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ’ ಎಂಬ ಜನ್ನನ ಮಾತನ್ನು ಒಂದೆಡೆ ಉದ್ಧರಿಸಿದ್ದಾರೆ ಲೇಖಕರು. ಮಾಲೆಗಾರ ಎಷ್ಟೇ ಚೆನ್ನಾಗಿ ಹೂಗಳನ್ನು ಪೋಣಿಸಿಟ್ಟರೂ ಮುಡಿಯುವ ರಸಿಕರಿಲ್ಲದೆ ಹೋದರೆ ಅದು ಬಾಡಿಹೋಗುವುದಿಲ್ಲವೇ ಎಂದು ಅರ್ಥ. “ಮಾಲೆಗಾರನ ಮಾಲೆಗಳನ್ನು ಯೋಗ್ಯ ರಸಿಕರು ಮುಡಿಯಲಿ. ಕೋಮಲ ಮಾಲೆಗಳು ಬಾಡದಿರಲಿ” (ಪು. 20) ಎಂದು ಆ ಲೇಖನ ಮುಗಿದಿದೆ. 

ಮಾಲೆ ಸಿದ್ಧವಿದೆ. ತಾವೂ ಮುಡಿದುಕೊಳ್ಳಿರಿ. ಮಾಲೆಗಾರನ ಶ್ರಮ ಸಾರ್ಥಕವಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಜೂನ್ 26, 2020

ಸಹಕಾರಿ ಕಾನೂನು: ಒಂದು ಸಿಂಹಾವಲೋಕನ

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸ್ಮರಣ ಸಂಚಿಕೆ-2019 'ಶತಮಂದಾರ'ದಲ್ಲಿ ಪ್ರಕಟವಾದ ಲೇಖನ

ಸಹಕಾರ ಚಳುವಳಿಗೂ ಪ್ರಜಾಪ್ರಭುತ್ವಕ್ಕೂ ಅವಿನಾಭಾವ ಸಂಬಂಧ. ಏಕೆಂದರೆ ಎರಡೂ ಪರಿಕಲ್ಪನೆಗಳ ಅಂತರ್ಯದಲ್ಲಿ ಹುದುಗಿರುವುದು ಒಂದೇ - ಜನರಿಂದ ಮತ್ತು ಜನರಿಗಾಗಿ ಎಂಬ ತತ್ತ್ವ. 'ಎಲ್ಲರಿಗಾಗಿ ನಾನು ಮತ್ತು ನನಗಾಗಿ ಎಲ್ಲರೂ’ ಎಂಬ ಸಹಕಾರೀ ಚಳುವಳಿಯ ಘೋಷಣೆ ಪ್ರಜಾಪ್ರಭುತ್ವದ ಮಂತ್ರವೂ ಹೌದು. ಆದ್ದರಿಂದ ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಭಾವವನ್ನು ಭದ್ರಗೊಳಿಸುವಲ್ಲಿ ಸಹಕಾರಿ ರಂಗದ ಪಾತ್ರ ತುಂಬ ದೊಡ್ಡದು. ಸಹಕಾರ ಚಳುವಳಿಯ ಗುಣಾವಗುಣಗಳ ಚರ್ಚೆ ಬೇರೆಯದ್ದೇ, ಆದರೆ ಸಮಾಜದ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ಚಳುವಳಿ ವಹಿಸಿದ ಪಾತ್ರ ಗಣನೀಯವಾದದ್ದೆಂಬುದನ್ನು ಅಲ್ಲಗಳೆಯಲಾಗದು.

ಸಹಕಾರ ಚಳುವಳಿಗೆ ಸ್ಪಷ್ಟ ರೂಪರೇಖೆಗಳನ್ನು ಹಾಕಿಕೊಡುವಲ್ಲಿ ಕಾನೂನಿನ ಪಾತ್ರ ಮಹತ್ವದ್ದು. ಯಾವುದೇ ಚಿತ್ರವಾದರೂ ಚೆನ್ನಾಗಿ ಕಾಣಿಸಬೇಕೆಂದರೆ ಅದಕ್ಕೊಂದು ಚೌಕಟ್ಟು ಬೇಕು. ಸಹಕಾರಿ ಕಾನೂನು ಅಂತಹದೊಂದು ಚೌಕಟ್ಟು. ಕಳೆದ ವರ್ಷದ ಅಂತ್ಯಕ್ಕೆ ನಮ್ಮ ದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಒಟ್ಟು ಸಹಕಾರ ಸಂಘಗಳ ಸಂಖ್ಯೆ 42,543. ಒಟ್ಟು ಸದಸ್ಯರ ಸಂಖ್ಯೆ 2,28,85,000 ಸಂಘಗಳಲ್ಲಿರುವ ಒಟ್ಟು ಪಾಲು ಬಂಡವಾಳ ರೂ. 4,519.79 ಕೋಟಿ. ಸಹಕಾರ ರಂಗವನ್ನು ಒಂದು ಶಿಸ್ತಿನಲ್ಲಿ ಮುನ್ನಡೆಸಿ ಈ ಹಂತಕ್ಕೆ ತಂದು ನಿಲ್ಲಿಸುವಲ್ಲಿ ಕಾನೂನಿನ ಕೊಡುಗೆ ಗಮನಾರ್ಹವಾದದ್ದು. ಸಹಕಾರ ರಂಗದ ಕಾನೂನು-ಕಾಯ್ದೆಗಳ ಸಂಕ್ಷಿಪ್ತ ಅವಲೋಕನ ನಡೆಸುವುದೇ ಈ ಲೇಖನದ ಉದ್ದೇಶ.

ಕಾನೂನಿನ ಮಾರ್ಗ:
ಇಡೀ ದೇಶದ ಸಹಕಾರಿ ಚಳುವಳಿಗೆ ಮೂರ್ತರೂಪ ದೊರಕಿದ್ದು ಕರ್ನಾಟಕದಲ್ಲೇ ಎಂಬುದು ಹೆಮ್ಮೆಯ ಸಂಗತಿ. 1904ರ ಸಹಕಾರಿ ಸಂಘಗಳ ಕಾಯ್ದೆಯೇ ಭಾರತದ ಮೊತ್ತಮೊದಲ ಸಹಕಾರಿ ಕಾನೂನು. ಇದರ ಆಧಾರದಲ್ಲಿ ಗದಗ ಜಿಲ್ಲೆಯ ಕಣಗಿನಹಳ್ಳಿ ಗ್ರಾಮದ ಸಮಾನಮನಸ್ಕ ಜನತೆ ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ್ ಎಂಬವರ ನೇತೃತ್ವದಲ್ಲಿ ರೂ. 2,000 ಪಾಲುಬಂಡವಾಳದೊಂದಿಗೆ ಸಹಕಾರಿ ಸಂಘವೊಂದನ್ನು ಜುಲೈ 8, 1905ರಂದು ಆರಂಭಿಸಿದರು. ಇದೇ ದೇಶದ ಮೊತ್ತಮೊದಲ ಕೃಷಿ ಪತ್ತಿನ ಸಹಕಾರ ಸಂಘ.

ಬೇರೆ ಬಗೆಯ ಸಹಕಾರಿ ಸಂಘಗಳನ್ನು ಕೂಡ ಆರಂಭಿಸಲು ಅನುಕೂಲವಾಗುವಂತೆ ಅಂದಿನ ಬ್ರಿಟಿಷ್ ಸರ್ಕಾರ 1912ರ ಸಹಕಾರಿ ಸಂಘಗಳ ಕಾಯ್ದೆಯನ್ನು ಜಾರಿಗೆ ತಂದಿತು. 1919ರಲ್ಲಿ ಮಾಂಟೆಗೊ-ಚೆಮ್ಸ್‌ಫೋರ್ಡ್ ಸುಧಾರಣೆಗಳ ಫಲವಾಗಿ ಸಹಕಾರವು ರಾಜ್ಯಪಟ್ಟಿಗೆ ಸೇರ್ಪಡೆಯಾದಾಗ ತಮ್ಮದೇ ಆದ ಕಾಯ್ದೆಗಳನ್ನು ರೂಪಿಸಿಕೊಳ್ಳಲು ಎಲ್ಲ ಪ್ರಾಂತ್ಯಗಳಿಗೆ 1912ರ ಕಾಯ್ದೆ ಮಾದರಿಯಾಗಿತ್ತು. ಸ್ವಾತಂತ್ರ್ಯಾನಂತರ ಅನೇಕ ರಾಜ್ಯಗಳು ತಮ್ಮದೇ ಆದ ಕಾನೂನುಗಳನ್ನು ಜಾರಿಗೆ ತಂದವು. ರಾಷ್ಟ್ರಮಟ್ಟದಲ್ಲಿ ಬಹುರಾಜ್ಯಗಳ ಸಹಕಾರಿ ಸಂಘಗಳ ಕಾಯ್ದೆಯೊಂದು ಜಾರಿಗೆ ಬಂತು. ನಮ್ಮ ರಾಜ್ಯದಲ್ಲಿ 'ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959’ ಅನ್ನು ಅನುಷ್ಠಾನಗೊಳಿಸಲಾಯಿತು.

ಸಹಕಾರಿ ಚಳುಚಳಿಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಮತ್ತು ಅದನ್ನು ಸುಭದ್ರಗೊಳಿಸುವುದಕ್ಕಾಗಿ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ವಿನಿಯೋಗವಾದಾಗ್ಯೂ ಅದು ನಿರೀಕ್ಷೆಯ ಫಲಿತಾಂಶಗಳನ್ನು ಸಾಧಿಸಲು ವಿಫಲವಾಗಿದೆ ಎಂಬುದನ್ನು ಮನಗಂಡ ಕೇಂದ್ರ ಯೋಜನಾ ಆಯೋಗವು ಅರ್ಧನಾರೀಶ್ವರನ್ ಸಮಿತಿಯನ್ನು ನೇಮಿಸಿತು. 1982ರಲ್ಲಿ ತನ್ನ ವರದಿ ಸಲ್ಲಿಸಿದ ಸಮಿತಿಯು ಸಹಕಾರಿ ಚಳುವಳಿ ದುರ್ಬಲವಾಗುವುದಕ್ಕೆ ಸರ್ಕಾರದ ಅತಿಯಾದ ಹಸ್ತಕ್ಷೇಪವೇ ಕಾರಣ ಎಂದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಚೌಧರಿ ಬ್ರಹ್ಮಪ್ರಕಾಶ್ ಅವರ ನೇತೃತ್ವದಲ್ಲಿ ಇನ್ನೊಂದು ಆಯೋಗವನ್ನು ನೇಮಿಸಿತು. ಬ್ರಹ್ಮಪ್ರಕಾಶ್ ಆಯೋಗವು 1991ರಲ್ಲಿ ಒಂದು ಮಾದರಿ ಸಹಕಾರಿ ಸಂಘಗಳ ಕಾಯ್ದೆಯನ್ನು ರೂಪಿಸಿತು. ಸಹಕಾರಿ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆಗೊಳಿಸಿ ಸದಸ್ಯರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಈ ಕಾಯ್ದೆಯ ಅಂಶಗಳನ್ನು ತಮ್ಮ ಕಾನೂನುಗಳಲ್ಲಿ ಅಡಕಗೊಳಿಸುವಂತೆ ಕೋರಿ ಇನ್ನು ಎಲ್ಲ ರಾಜ್ಯಗಳಿಗೆ ಕಳಿಸಿಕೊಡಲಾಯಿತು.

ಪರಿಣಾಮವಾಗಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ರೂಪುಗೊಂಡಿತು. ಈ ಕಾನೂನು 2001 ಜನವರಿ 1ರಿಂದ ಜಾರಿಗೆ ಬಂತು. 2012ರಲ್ಲಿ ಈ ಕಾನೂನಿಗೆ ತಿದ್ದುಪಡಿಯನ್ನು ಕೂಡ ತರಲಾಯಿತು. 1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ವಿವಿಧ ಉದ್ದೇಶಗಳಿಗಾಗಿ 20ಕ್ಕೂ ಹೆಚ್ಚು ಬಾರಿ ತಿದ್ದುಪಡಿಗೆ ಒಳಗಾಗಿದೆ. ಕರ್ನಾಟಕದ ಒಟ್ಟಾರೆ ಸಹಕಾರ ಚಳವಳಿಗೆ ಈ ಎರಡು ಕಾಯ್ದೆಗಳೇ ಮೂಲ ಆಧಾರ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959:
1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯು ೧೫ ಅಧ್ಯಾಯಗಳನ್ನೂ, 132 ವಿಧಿಗಳನ್ನೂ ಹೊಂದಿದೆ. ಮೊದಲನೇ ಅಧ್ಯಾಯವು ಪೀಠಿಕಾ ಭಾಗವಾಗಿದ್ದು ಕಾಯ್ದೆಯಲ್ಲಿ ಬಳಸಲಾದ ವಿವಿಧ ಪಾರಿಭಾಷಿಕ ಪದಗಳ ವ್ಯಾಖ್ಯಾನವನ್ನು ನೀಡುತ್ತದೆ. ಅಲ್ಲದೆ, ಸಹಕಾರ ಸಂಘಗಳ ರಿಜಿಸ್ಟ್ರಾರ್, ಹೆಚ್ಚುವರಿ ರಿಜಿಸ್ಟ್ರಾರ್, ಸಹ ರಿಜಿಸ್ಟ್ರಾರ್, ಉಪ ರಿಜಿಸ್ಟ್ರಾರ್, ಸಹಾಯಕ ರಿಜಿಸ್ಟ್ರಾರ್ ಮತ್ತಿತರ ಅಧಿಕಾರಿಗಳ ನೇಮಕಾತಿ ಕುರಿತು ತಿಳಿಸುತ್ತದೆ.

ಸಹಕಾರ ಸಂಘಗಳ ನೋಂದಣಿಯ ನಿಯಮಗಳನ್ನು ವಿವರಿಸುವ ಎರಡನೇ ಅಧ್ಯಾಯವು ಸಹಕಾರ ತತ್ತ್ವಗಳಿಗನುಸಾರವಾಗಿ ತನ್ನ ಸದಸ್ಯರ ಅಥವಾ ಸಾರ್ವಜನಿಕರ ಆರ್ಥಿಕ ಹಿತಗಳು ಅಥವಾ ಸಾಮಾನ್ಯ ಕಲ್ಯಾಣ ಅಭಿವೃದ್ಧಿಯನ್ನು ತನ್ನ ಉದ್ದೇಶವಾಗಿಟ್ಟುಕೊಂಡು ಸಹಕಾರ ಸಂಘವನ್ನು ನೋಂದಾಯಿಸಬಹುದು ಎನ್ನುತ್ತದೆ. ಸಾರ್ವಜನಿಕರ ಆರ್ಥಿಕ ಹಿತವೇ ಸಹಕಾರ ಸಂಘಗಳ ಮೂಲ ಉದ್ದೇಶವಾಗಿರಬೇಕು ಎಂಬ ಚಳುವಳಿಯ ಆಶಯ ಇಲ್ಲಿ ಸ್ಪಷ್ಟವಾಗುತ್ತದೆ. ಮೂರನೇ ಅಧ್ಯಾಯವು ಸಹಕಾರ ಸಂಘದ ಸದಸ್ಯರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವಿವರಿಸುತ್ತದೆ.

ನಾಲ್ಕನೇ ಅಧ್ಯಾಯವು ಸಹಕಾರ ಸಂಘಗಳ ವ್ಯವಸ್ಥಾಪನೆಯ ನಿಯಮಗಳನ್ನು ತಿಳಿಸುತ್ತದೆ. 26ನೇ ವಿಧಿಯಲ್ಲಿ ಬರುವ ಸಹಕಾರ ಸಂಘಗಳ ಅಂತಿಮ ಅಧಿಕಾರವು ಸರ್ವಸದಸ್ಯರಲ್ಲಿ ನಿಹಿತವಾಗಿರತಕ್ಕುದು ಎಂಬ ಉಲ್ಲೇಖ ವಾಸ್ತವವಾಗಿ ಒಟ್ಟಾರೆ ಸಹಕಾರ ಚಳುವಳಿಯ ಉದ್ದೇಶವನ್ನು ಎತ್ತಿಹಿಡಿಯುತ್ತದೆ. ಕೈಗಾರಿಕಾ ಬಂಡವಾಳ ಹೂಡಿಕೆ, ಹಣಕಾಸು ನೆರವು ಅಥವಾ ಮಾರಾಟ ಮತ್ತು ಆಡಳಿತ ನಿರ್ವಹಣೆಯಲ್ಲಿ ಪ್ರಾವೀಣ್ಯತೆ ಸೇರಿದಂತೆ ಸರ್ಕಾರದ ಯಾವುದೇ ಉದ್ಯಮದೊಡನೆ ಸಹಕಾರ ಸಂಘಗಳು ಸಹೋದ್ಯಮ ನಡೆಸಬಹುದು ಎಂಬ ಸೂಚನೆಯೂ ಇಲ್ಲಿದೆ.

ಐದನೇ ಅಧ್ಯಾಯದಲ್ಲಿ ಸಹಕಾರ ಸಂಘಗಳ ವಿಶೇಷಾಧಿಕಾರಗಳ ಉಲ್ಲೇಖವಿದ್ದರೆ, ಆರನೇ ಅಧ್ಯಾಯವು ಸಂಘಗಳ ಸಮಿತಿಗಳ ಸದಸ್ಯರ ಚುನಾವಣೆ ನಡೆಸುವ ವಿಧಾನವನ್ನು ತಿಳಿಸುತ್ತದೆ. ಸಹಕಾರ ಸಂಘಗಳನ್ನು ಪ್ರವರ್ಧಿಸುವುದು ರಾಜ್ಯ ಸರ್ಕಾರದ ಒಂದು ಕರ್ತವ್ಯ ಎಂದು ಆರನೇ ಅಧ್ಯಾಯ ಸೂಚಿಸುತ್ತದೆ. ರಾಜ್ಯದಲ್ಲಿ ಸಹಕಾರಿ ಕೃಷಿಗೆ ಉತ್ತೇಜನವೂ ಸೇರಿ ಸಹಕಾರ ಚಳುವಳಿಯನ್ನು ಉತ್ತೇಜಿಸುವುದು ಮತ್ತು ಈ ದಿಸೆಯಲ್ಲಿ ಅವಶ್ಯವಾಗಿರಬಹುದಾದಂಥ ಕ್ರಮಗಳನ್ನು ಕೈಗೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿರತಕ್ಕುದು ಎನ್ನುತ್ತದೆ ಕಾನೂನಿನ 40ನೇ ವಿಧಿ.

ಏಳನೇ ಅಧ್ಯಾಯವು ಸಹಕಾರ ಸಂಘದ ಸ್ವತ್ತುಗಳು ಮತ್ತು ನಿಧಿಗಳ ಬಗ್ಗೆ, ಎಂಟನೇ ಅಧ್ಯಾಯವು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ, ವಿಚಾರಣೆ, ಪರಿಶೀಲನೆ ಮತ್ತು ಅಧಿಭಾರಗಳ ಬಗ್ಗೆ, ಒಂಭತ್ತನೇ ಅಧ್ಯಾಯವು ವಿವಾದಗಳ ಇತ್ಯರ್ಥದ ಬಗ್ಗೆ, ಹತ್ತನೇ ಅಧ್ಯಾಯವು ಸಹಕಾರ ಸಂಘಗಳ ಸಮಾಪನ ಮತ್ತು ವಿಸರ್ಜನೆ ವಿಧಾನಗಳ ಬಗ್ಗೆ, ಹನ್ನೊಂದನೇ ಅಧ್ಯಾಯವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಕಾರ್ಯವಿಧಾನದ ಬಗ್ಗೆ, ಹನ್ನೆರಡನೇ ಅಧ್ಯಾಯವು ಐತೀರ್ಪುಗಳು, ಡಿಕ್ರಿಗಳು, ಆದೇಶಗಳು ಮತ್ತು ತೀರ್ಮಾನಗಳ ಅನುಷ್ಠಾನದ ಬಗ್ಗೆ ಬೆಳಕು ಚೆಲ್ಲುತ್ತದೆ.

ಅಪೀಲುಗಳು, ಪುನರೀಕ್ಷಣೆ ಹಾಗೂ ಪುನರ್ವಿಲೋಕನದ ಬಗ್ಗೆ ಹೇಳುವ ಹದಿಮೂರನೇ ಅಧ್ಯಾಯವು ರಿಸರ್ವ್ ಬ್ಯಾಂಕಿನ ಪೂರ್ವಾನುಮತಿ ಪಡೆದು ಸಹಕಾರ ಬ್ಯಾಂಕನ್ನು ಸಮಾಪನಗೊಳಿಸಲು ಆದೇಶಿಸಿದ್ದರೆ ಅಥವಾ ಸಹಕಾರ ಬ್ಯಾಂಕಿನ ಸಮ್ಮಿಲನ ಅಥವಾ ಪುನರ್ ಸಂಘಟನೆಯ ಯೋಜನೆಯನ್ನು ಜಾರಿಗೆ ತಂದಿದ್ದರೆ; ಅಥವಾ ಸಹಕಾರ ಸಂಘದ ಸಮಿತಿಯನ್ನು ತೆಗೆದುಹಾಕುವ ಮತ್ತು ಆಡಳಿತಗಾರನನ್ನು ಮತ್ತು ವಿಶೇಷಾಧಿಕಾರಿಯನ್ನು ನೇಮಿಸುವ ಆದೇಶ ಮಾಡಿದ್ದರೆ ಯಾವುದೇ ಪುನರೀಕ್ಷಣೆಗೆ ಅವಕಾಶವಿಲ್ಲ. ರಿಸರ್ವ್ ಬ್ಯಾಂಕಿನ ಮಂಜೂರಾತಿ ಅಥವಾ ಕೋರಿಕೆಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ ಎಂದು ಸ್ಪಷ್ಪಪಡಿಸುತ್ತದೆ.

ಸಹಕಾರ ಸಂಘಗಳ ವ್ಯವಹಾರದಲ್ಲಿ ಸಂಭವಿಸಬಹುದಾದ ತಪ್ಪುಗಳಿಗೆ ದಂಡನೆಯನ್ನು ಕಾಯ್ದೆಯ 14ನೇ ಅಧ್ಯಾಯ ವಿವರಿಸುತ್ತದೆ. ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಸಂಸ್ಥೆ ’ಸಹಕಾರ’ ಎಂಬ ಪದವನ್ನು ಬಳಸುವುದು ಕೂಡ ದಂಡನಾರ್ಹ ಅಪರಾಧ ಎಂದೇ ಕಾಯ್ದೆ ಹೇಳುತ್ತದೆ. ಸಹಕಾರ ಸಂಘವಲ್ಲದ ಇತರ ಯಾವನೇ ವ್ಯಕ್ತಿಯು ಸಹಕಾರ ಎಂಬ ಪದವು ಅಥವಾ ಭಾರತದ ಯಾವುದೇ ಭಾಷೆಯಲ್ಲಿ ಅದಕ್ಕೆ ಸಮಾನವಾದ ಪದವು ಯಾವ ಹೆಸರಿನ ಅಥವಾ ಶೀರ್ಷಿಕೆಯ ಭಾಗವಾಗಿರುವುದೋ ಆ ಯಾವುದೇ ಹೆಸರಿನ ಅಥವಾ ಶೀರ್ಷಿಕೆಯ ಅಡಿಯಲ್ಲಿ ವ್ಯಾಪಾರ ಮಾಡತಕ್ಕುದಲ್ಲ ಎಂದು ಎಚ್ಚರಿಸುತ್ತದೆ.

ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997:
2001ರಲ್ಲಿ ಜಾರಿಗೆ ಬಂದ 1997ರ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯು ಸದಸ್ಯರಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಡುವ ಉದ್ದೇಶವನ್ನು ಹೊಂದಿದೆ. ಇದರ ಮೊದಲ ಐದು ಅಧ್ಯಾಯಗಳು ವ್ಯಾಖ್ಯಾನ, ಸಂಘಗಳ ನೋಂದಣಿ ನಿಯಮ, ನಿಧಿ ಸಂಗ್ರಹ ಮತ್ತು ಹೂಡಿಕೆ, ಲೆಕ್ಕಪತ್ರಗಳ ನಿರ್ವಹಣೆ ಇತ್ಯಾದಿಗಳ ಬಗ್ಗೆ ವಿವರಿಸಿದರೆ ಆರನೇ ಅಧ್ಯಾಯವು ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಂಘಗಳನ್ನು ಫೆಡರಲ್ ಕೋಆಪರೇಟಿವ್ಸ್ ಸೂಪರ್‌ಸೀಡ್ ಮಾಡುವ ಅವಕಾಶಗಳ ಬಗ್ಗೆ ಹಾಗೂ ಅಗತ್ಯ ಕಂಡುಬಂದಾಗ ವಿಶೇಷಾಧಿಕಾರಿಯನ್ನು ನೇಮಿಸುವ ಬಗ್ಗೆ ತಿಳಿಸುತ್ತದೆ.

ಏಳನೇ ಅಧ್ಯಾಯವು ವಿವಾದಗಳ ಇತ್ಯರ್ಥಗಳ ಬಗ್ಗೆ ಮತ್ತು ಎಂಟನೇ ಅಧ್ಯಾಯವು ಸಂಘಗಳ ಸಮಾಪನದ ನಿಯಮಗಳನ್ನು ವಿವರಿಸುತ್ತದೆ. ಒಂಭತ್ತನೇ ಅಧ್ಯಾಯವು ಸೌಹಾರ್ದ ಸಹಕಾರಿ ಸಂಘಗಳ ಒಟ್ಟಾರೆ ಅಭಿವೃದ್ಧಿಗಾಗಿ ರಾಜ್ಯಮಟ್ಟದಲ್ಲಿ 'ಫೆಡರಲ್ ಕೋಆಪರೇಟಿವ್’ ಒಂದನ್ನು ಸ್ಥಾಪಿಸುವ ಬಗ್ಗೆ ಹೇಳುತ್ತಾ ಸಹಕಾರಿ ರಂಗದ ಏಳ್ಗೆಗಾಗಿ ಅದು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡುತ್ತದೆ. ಸಹಕಾರಿ ಚಳುವಳಿಯ ಯಶಸ್ಸಿಗೆ ಪೂರಕವಾದ ಸಹಕಾರಿ ತತ್ತ್ವಗಳನ್ನು ಸೂಚಿಸುವ ಹತ್ತನೇ ಅಧ್ಯಾಯವು ಈ ಕಾಯ್ದೆಯ ಒಂದು ವಿಶೇಷ ಭಾಗ. ಅದರ ಪ್ರಮುಖ ಅಂಶಗಳೆಂದರೆ:

  • ಸಹಕಾರಿ ಸಂಘಗಳು ಲಿಂಗ, ಸಾಮಾಜಿಕ, ಜನಾಂಗೀಯ, ರಾಜಕೀಯ ಹಾಗೂ ಧಾರ್ಮಿಕ ಬೇಧಭಾವಗಳಿಲ್ಲದೆ ಎಲ್ಲರಿಗೂ ಮುಕ್ತವಾಗಿರುವ ಸ್ವಯಂಸೇವಾ ಸಂಸ್ಥೆಗಳು.
  • ಸಹಕಾರಿ ಸಂಘಗಳು ತಮ್ಮದೇ ಸದಸ್ಯರಿಂದ ನಿಯಂತ್ರಿಸಲ್ಪಡುವ ಪ್ರಜಾಪ್ರಭುತ್ವ ಮಾದರಿಯ ಸಂಸ್ಥೆಗಳು. ಪ್ರತಿಯೊಬ್ಬ ಸದಸ್ಯನಿಗೂ ಸಮಾನ ಮತದಾನದ ಹಕ್ಕು ಇರತಕ್ಕುದು.
  • ಸಹಕಾರಿ ಸಂಘದ ಬಂಡವಾಳಕ್ಕೆ ಪ್ರತಿ ಸದಸ್ಯನೂ ಸಮಾನ ಕೊಡುಗೆ ನೀಡಬೇಕು ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲಿ ನಿಯಂತ್ರಿಸಬೇಕು.
  • ಸಹಕಾರಿ ಸಂಘಗಳು ಸದಸ್ಯರಿಂದ ನಿಯಂತ್ರಿಸಲ್ಪಡುವ ಸ್ವಾಯತ್ತ, ಸ್ವಸಹಾಯ ಸಂಸ್ಥೆಗಳಾಗಿವೆ. ನಿಧಿ ಸಂಗ್ರಹಕ್ಕಾಗಿ ಸರ್ಕಾರವೂ ಸೇರಿದಂತೆ ಇತರ ಸಂಸ್ಥೆಗಳೊಂದಿಗೆ ಅವರು ಒಪ್ಪಂದ ಮಾಡಿಕೊಂಡರೂ ಸಂಘದ ಸ್ವಾಯತ್ತತೆಯೂ ಸದಸ್ಯರಲ್ಲೇ ಉಳಿಯಬೇಕು.
  • ಸಹಕಾರಿ ಸಂಘಗಳು ತಮ್ಮ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ವ್ಯವಸ್ಥಾಪಕರು ಹಾಗೂ ಉದ್ಯೋಗಿಗಳಿಗೆ ತರಬೇತಿ ನೀಡಬೇಕು. ಸಹಕಾರದ ಸ್ವರೂಪ ಹಾಗೂ ಲಾಭಗಳ ಬಗ್ಗೆ ಸಾರ್ವಜನಿಕರಿಗೆ, ಮುಖ್ಯವಾಗಿ ಯುವಕರಿಗೆ ತಿಳುವಳಿಕೆ ನೀಡಬೇಕು.

ಸಹಕಾರಿ ಬ್ಯಾಂಕುಗಳಿಗೆ ವಿಮಾ ಸುರಕ್ಷೆಯನ್ನು ಒದಗಿಸುವುದು ಈ ಕಾಯ್ದೆಯ ಇನ್ನೊಂದು ಪ್ರಮುಖ ಲಕ್ಷಣ. ಸಹಕಾರಿ ಬ್ಯಾಂಕುಗಳು ಸಮಾಪನಗೊಳ್ಳುವ ಅನಿವಾರ್ಯತೆ ಬಂದರೆ ಸೂಕ್ತ ವಿಮಾ ಸೌಲಭ್ಯವನ್ನು ಪಡೆಯುವ ಬಗ್ಗೆ 10ಎ ಅಧ್ಯಾಯವು ವಿವರಿಸುತ್ತದೆ. ಕೊನೆಯ ಅಧ್ಯಾಯವು ಅಪರಾಧಗಳು ಮತ್ತು ದಂಡನೆಗಳ ಬಗ್ಗೆ ತಿಳಿಸುತ್ತದೆ.

ಇತರೆ ಶಾಸನಾತ್ಮಕ ಪ್ರಕಾರ್ಯಗಳು:
ಮೇಲೆ ವಿವರಿಸಿದ ಕಾಯ್ದೆಗಳಲ್ಲದೆ ಕರ್ನಾಟಕದಲ್ಲಿ ಸಹಕಾರ ಚಳುವಳಿಯನ್ನು ಇನ್ನೂ ಅನೇಕ ಶಾಸನಾತ್ಮಕ ಮತ್ತು ಅರೆನ್ಯಾಯಾಂಗದ ಪ್ರಕಾರ್ಯಗಳು ನಿರ್ದೇಶಿಸುತ್ತವೆ. ಅವುಗಳಲ್ಲಿ ಪ್ರಮುಖವಾದವೆಂದರೆ:

  • ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು 1960
  • ಕರ್ನಾಟಕ ಲೇವಾದೇವಿಗಾರರ ಕಾಯ್ದೆ 1961 ಮತ್ತು ಕರ್ನಾಟಕ ಲೇವಾದೇವಿಗಾರರ ನಿಯಮಗಳು 1965.
  • ಕರ್ನಾಟಕ ಗಿರವಿದಾರರ ಕಾಯ್ದೆ 1961 ಮತ್ತು ನಿಯಮಗಳು 1966.
  • 1982ರ ಚೀಟಿ ನಿಧಿಗಳ ಕಾಯ್ದೆ ಮತ್ತು ಚೀಟಿನಿಧಿಗಳ (ಕರ್ನಾಟಕ) ನಿಯಮಾವಳಿ 1983.
  • ಕರ್ನಾಟಕ ಋಣ ಪರಿಹಾರ ಕಾಯ್ದೆ 1980.
  • ಕರ್ನಾಟಕ ಪಬ್ಲಿಕ್ ಮನಿ (ರಿಕವರಿ ಆಫ್ ಡ್ಯೂಸ್) ಕಾಯ್ದೆ 1980.
  • ಕರ್ನಾಟಕ ಅಗ್ರಿಕಲ್ಚರಲ್ ಕ್ರೆಡಿಟ್ ಆಪರೇಶನ್ಸ್ & ಮಿಸಲೇನಿಯಸ್ ಪ್ರಾವಿಶನ್ಸ್ ಕಾಯ್ದೆ 1974.
  • ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ 2004.

ಅನುಷ್ಠಾನ ಮತ್ತು ಯಶಸ್ಸು:
ನಮ್ಮ ದೇಶದ ವಿವಿಧ ಕ್ಷೇತ್ರಗಳ ಒಟ್ಟಾರೆ ಕಾರ್ಯನಿರ್ವಹಣೆಗೆ ಸಹಕಾರ ಕ್ಷೇತ್ರವೇ ಆಧಾರ ಎಂಬುದು ಆಯಾ ಕ್ಷೇತ್ರಗಳನ್ನು ನೋಡಿದಾಗ ಸಿದ್ಧವಾಗುತ್ತದೆ. ದೇಶದ ಕೃಷಿಸಾಲದ ಶೇ. 46 ಭಾಗ, ರಸಗೊಬ್ಬರ ವಿತರಣೆಯ ಶೇ. 36 ಪಾಲು, ರಸಗೊಬ್ಬರ ಉತ್ಪಾದನೆಯ ಶೇ. 27, ಸಕ್ಕರೆ ಉತ್ಪಾದನೆಯ ಶೇ. 59, ಗೋಧಿ ಸಂಗ್ರಹದ ಶೇ. 31, ಪಶು ಆಹಾರ ಉತ್ಪಾದನೆಯ ಶೇ 50, ಐಸ್‌ಕ್ರೀಂ ಉತ್ಪಾದನೆಯ ಶೇ. 50, ಖಾದ್ಯ ತೈಲ ಉತ್ಪಾದನೆಯ ಶೇ. 50, ಕೈಮಗ್ಗದ ಬಟ್ಟೆಗಳ ಉತ್ಪಾದನೆಯ ಶೇ 55, ರಬ್ಬರ್ ಸಂಸ್ಕರಣೆಯ ಶೇ. 95 ಭಾಗ ಸಹಕಾರಿ ರಂಗದ ಕೊಡುಗೆಯೇ ಆಗಿದೆ.

ಆರ್ಥಿಕವಾಗಿ ಹಿಂದುಳಿದು ಬಿಡಿಬಿಡಿಯಾಗಿರುವ ದುರ್ಬಲ ಜನರನ್ನು ಒಟ್ಟಾಗಿ ಸೇರಿಸಿ ಸಬಲರನ್ನಾಗಿಸುವುದೇ ಸಹಕಾರ ಚಳುವಳಿಯ ಮೂಲ ಉದ್ದೇಶವಾಗಿತ್ತು. ಭಾರತದ ಕೋಟ್ಯಂತರ ಜನರ ಅದರಲ್ಲೂ ಸಣ್ಣ ಮತ್ತು ಅರಿಸಣ್ಣ ರೈತರು ಮತ್ತು ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗಗಳು ಅಂದರೆ ಕೈಮಗ್ಗ ನೇಕಾರರು, ಮೀನುಗಾರರು, ಕುಶಲಕರ್ಮಿಗಳು ಮುಂತಾದವರ ಏಳಿಗೆ ಅದರ ಮುಖ್ಯ ಗುರಿಯಾಗಿತ್ತು. ಸಹಕಾರ ಚಳುವಳಿಯ ಯಶಸ್ಸಿನ ಬಗ್ಗೆ ಅದರ ಕನಸು ಕಂಡವರ ಕಲ್ಪನೆಗಳು ಇನ್ನೂ ವಿಶಿಷ್ಟವಾಗಿದ್ದರೂ ಭಾರತದ ಜನಜೀವನದ ಮೇಲೆ ಈ ಚಳುವಳಿ ಬೀರಿದ ಪರಿಣಾಮ ತುಂಬ ದೊಡ್ಡದೇ. ಕಳೆದ ಶತಮಾನದಲ್ಲಿ ಸ್ವಾತಂತ್ರ್ಯ ಚಳುವಳಿ ಬಿಟ್ಟರೆ ಭಾರತದ ಜನಸಾಮಾನ್ಯರ ಬದುಕಿನ ಮೇಲೆ ಅತಿಹೆಚ್ಚಿನ ಪರಿಣಾಮ ಬೀರಿದ ಹೆಗ್ಗಳಿಕೆ ಸಹಕಾರ ಚಳುವಳಿಗೆ ಸಲ್ಲುತ್ತದೆ.

ಒಂದು ವ್ಯವಸ್ಥೆಯ ಯಶಸ್ಸು ಅಥವಾ ವೈಫಲ್ಯ ನಿಂತಿರುವುದು ಅದರ ಅನುಷ್ಠಾನದಲ್ಲೇ ಹೊರತು ಆದರ್ಶಗಳಲ್ಲಿ ಅಲ್ಲ. ಆದ್ದರಿಂದ ಸಹಕಾರಿ ರಂಗ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂಬ ಅಭಿಪ್ರಾಯವಿದ್ದರೆ ಅದಕ್ಕೆ ಕಾರಣ ಕಾನೂನು ಹಾಗೂ ತತ್ತ್ವಗಳ ಅಸಮರ್ಪಕ ಅನುಷ್ಠಾನ ಮತ್ತು ಅದರ ಹಿಂದಿನ ಪಟ್ಟಭದ್ರ ಹಿತಾಸಕ್ತಿಗಳೇ ಹೊರತು ಅದು ಮೂಲತಃ ಕಾನೂನಿನ ಅಥವಾ ತತ್ತ್ವಗಳ ಸಮಸ್ಯೆ ಅಲ್ಲ. ನಮ್ಮ ಮುಂದಿನ ಗಮನವಿರಬೇಕಾದ್ದು ನಿಯಮಾವಳಿಗಳ ಪರಿಣಾಮಕಾರಿ ಜಾರಿಯ ಬಗ್ಗೆ. ಕಾನೂನಿಗಿಂತಲೂ ಸಮಾಜದ ಮನೋಭಾವವೇ ಹೆಚ್ಚು ಮುಖ್ಯವಾದದ್ದು ಎಂಬುದನ್ನು ಮರೆಯಲಾಗದು.
- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಮೇ 16, 2020

ನಾಳೆಗಾಗಿ ಕಾಯಬೇಡಿ, ಇಂದೇ ಮಾಡಿಬಿಡಿ | ಸರಿ ಎನಿಸಿದ್ದನ್ನು ಮಾಡಲು ಹಿಂಜರಿಕೆ ಬೇಡ

 ಮೇ 16-22, 2020ರ ‘ಬೋಧಿವೃಕ್ಷ’ದಲ್ಲಿ ಪ್ರಕಟವಾದ ಬರೆಹ

ಸಮುದ್ರಸ್ನಾನಕ್ಕೆಂದು ಹೋದವನೊಬ್ಬ ತೆರೆ ಮುಗಿಯಲಿ ಎಂದು ಜೀವಮಾನವಿಡೀ ಕಾದನಂತೆ. ಅತ್ತ ಸ್ನಾನವೂ ಆಗಲಿಲ್ಲ, ಇತ್ತ ಜೀವನದಲ್ಲಿ ಬೇರೇನನ್ನೂ ಮಾಡಲಿಲ್ಲ. ಇದು ಸ್ನಾನಕ್ಕೆ ಹೋದ ಪುಣ್ಯಾತ್ಮನೊಬ್ಬನ ಕಥೆ ಮಾತ್ರ ಅಲ್ಲ. ಹಲವು ಬಾರಿ ನಮ್ಮೆಲ್ಲರದೂ.

ಏನೋ ಒಂದು ಕೆಲಸ ಮಾಡಬೇಕೆಂದುಕೊಂಡಿರುತ್ತೇವೆ. ತಕ್ಷಣಕ್ಕೆ ಆರಂಭಿಸುವುದಿಲ್ಲ. ಬಹುತೇಕ ಬಾರಿ ಮನಸ್ಸಿಗೆ ಬರುವ ಮೊದಲ ಯೋಚನೆಯೇ ‘ನಾಳೆಯೇ ಈ ಕೆಲಸ ಆರಂಭಿಸಬೇಕು’ ಎಂಬುದು. ವಾಸ್ತವವಾಗಿ ಸಮಸ್ಯೆ ಇರುವುದೇ ‘ನಾಳೆ ಆರಂಭಿಸಬೇಕು’ ಎಂಬಲ್ಲೇ. ಈಗಲೇ ಶುರು ಮಾಡಿಬಿಡೋಣ ಎಂದುಕೊಂಡು ಕೆಲಸ ಆರಂಭಿಸುವವ ಅಲ್ಲೇ ಅರ್ಧ ತೇರ್ಗಡೆಯಾಗಿರುತ್ತಾನೆ.
 ಬೋಧಿವೃಕ್ಷ | ಮೇ 16-22, 2020

ಕೆಲವರು ‘ನ್ಯೂ ಇಯರ್ ರೆಸಲ್ಯೂಶನ್’ ಅಥವಾ ‘ಬರ್ತ್‍ಡೇ ರೆಸೊಲ್ಯುಶನ್’ ಮಾಡಿಕೊಳ್ಳುವ ಕ್ರಮ ಇದೆ. ಬೆಳಗ್ಗೆ ಬೇಗನೆ ಏಳುವುದು, ವಾಕ್ ಮಾಡುವುದು, ಯೋಗಾಭ್ಯಾಸ ಆರಂಭಿಸುವುದು, ಕಡಿಮೆ ಊಟ ಮಾಡುವುದು, ತೂಕ ಇಳಿಸಿಕೊಳ್ಳುವುದು, ತಿಂಗಳಿಗೊಂದಾದರೂ ಹೊಸ ಪುಸ್ತಕ ಓದುವುದು, ಸಮಯಕ್ಕೆ ಸರಿಯಾಗಿ ಕಚೇರಿ ತಲುಪುವುದು, ಇತ್ಯಾದಿ ಇತ್ಯಾದಿ. ಸಮಸ್ಯೆ ಯಾವುದೆಂದರೆ ಈ ಎಲ್ಲಾ ಹೇಳಿಕೆಗಳ ಪೂರ್ವದಲ್ಲಿ ‘ಇವತ್ತಿನಿಂದಲೇ’ ಎಂಬ ಪದ ಸೇರಿಸಿಕೊಳ್ಳದಿರುವುದು. ಅವರೇನಿದ್ದರೂ ‘ನಾಳೆಯಿಂದ’ ಆರಂಭಿಸುವವರು. ನಾಳೆ ಗಣಪತಿಗೆ ಮದುವೆ ಎಂಬ ಗಾದೆ ಕೇಳಿದ್ದೀರಲ್ಲ!

ಬದುಕಿನಲ್ಲಿ ಬದಲಾಗಬೇಕು ಎಂಬ ಆಸೆ ಅನೇಕ ಮಂದಿಗೆ ಇರುತ್ತದೆ. ಈ ರೆಸಲ್ಯೂಶನ್‍ಗಳ ಹಿಂದಿನ ಕಾರಣ ಬದಲಾಗಬೇಕು ಎಂಬ ಆಸೆಯೇ. ಬದಲಾವಣೆ ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ವಾಸ್ತವವಾಗಿ ಅದು ಆರಂಭವೇ ಆಗಿರುವುದಿಲ್ಲ. ಆಮೇಲೆ ಮಾಡೋಣ, ನಾಳೆ ಮಾಡೋಣ, ಇನ್ನೊಮ್ಮೆ ಮಾಡೋಣ, ಈಗ ಮೂಡ್ ಇಲ್ಲ, ಮನಸ್ಸು ಫ್ರೆಶ್ ಇಲ್ಲ, ಇನ್ನೂ ಸಾಕಷ್ಟು ದಿನ ಇದೆ, ಇತ್ಯಾದಿ ನಾವೇ ಸೃಷ್ಟಿಸಿಕೊಳ್ಳುವ ನೂರೆಂಟು ಕಾರಣಗಳಿಂದ ಈ ಬದಲಾಗುವ ಯೋಜನೆ ಅನುಷ್ಠಾನಕ್ಕೇ ಬರುವುದಿಲ್ಲ. ಇಂಗ್ಲಿಷಿನಲ್ಲಿ ಈ ವಿಳಂಬ ಪ್ರವೃತ್ತಿಗೆ ‘ಪ್ರೊಕ್ರಾಸ್ಟಿನೇಶನ್’ ಎಂಬ ಚಂದದ ಪದ ಇದೆ.

ಅನೇಕ ಮಂದಿಗೆ ತಾವು ಇಂಥದ್ದನ್ನೆಲ್ಲ ಮಾಡುವವರಿದ್ದೇವೆ ಎಂದು ಮೊದಲೇ ಘೋಷಿಸಿಕೊಳ್ಳುವ ಚಟ ಇರುತ್ತದೆ. ನಾನೊಂದು ಲೇಖನ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ, ನಾನೊಂದು ಬಿಸಿನೆಸ್ ಆರಂಭಿಸಬೇಕು ಅಂದುಕೊಂಡಿದ್ದೇನೆ,  ನಾನು ದೊಡ್ಡ ಸಾಧನೆ ಮಾಡಿ ಎಲ್ಲರಿಂದ ಭೇಷ್ ಅನಿಸಿಕೊಳ್ಳುತ್ತೇನೆ- ಎಂದು ಹೇಳುವವರು ಅಲ್ಲಲ್ಲಿ ಸಿಗುತ್ತಾರೆ. ಅವರು ವಾಸ್ತವವಾಗಿ ಯಾವುದನ್ನೂ ಮಾಡುವುದಿಲ್ಲ. ಜಗತ್ತು ಅರ್ಧ ಹಾಳಾಗಿರುವುದೇ ಹೀಗೆ ‘ಅಂದುಕೊಳ್ಳುವವ’ರಿಂದ. ಕುಣಿಯಬೇಕು ಅಂದುಕೊಂಡಾಗೆಲ್ಲ ನೆಲ ಡೊಂಕಾಗಿ ಕಂಡರೆ ಇನ್ನೇನು ಮಾಡಲು ಸಾಧ್ಯ?

‘ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಲೋಕದಲಿ ಆಡಿಯೂ ಮಾಡದವ ಅಧಮ’ ಎಂದು ಸರ್ವಜ್ಞ ಇವರನ್ನೆಲ್ಲ ನೋಡಿಯೇ ಹೇಳಿರುವುದು. ನಿಜವಾದ ಸಾಧಕರು ಮಾತಾಡುವುದು ಕಡಿಮೆ. ಉಳಿದವರಿಗೆ ಮಾತಾಡುವುದೇ ಸಾಧನೆ. ಬಡಾಯಿ ಕಡಿಮೆ ಮಾಡಿದರೆ ಕೆಲಸ ಮಾಡುವುದಕ್ಕೆ ಸಮಯವಾದರೂ ಸಿಗುತ್ತದೆ. ‘ಮನಸಾ ಚಿಂತಿತಂ ಕಾರ್ಯಂ, ವಾಚ್ಯಂ ನೈವ ಪ್ರಕಾಶಯೇತ್’ ಎಂದು ಹಳಬರು ಸುಮ್ಮನೇ ಹೇಳಿದ್ದಾರೆಯೇ?

ಮಾಡಬೇಕು ಅಂದುಕೊಂಡಿದ್ದನ್ನು ಮಾಡಿಯೇ ತೀರಬೇಕು. ಅದು ಆತ್ಮಸಾಕ್ಷಿಗೆ ಒಪ್ಪಿದರೆ, ನಾಲ್ವರು ಹಿರಿಯರಿಗೆ ಸರಿ ಎನ್ನಿಸಿದರೆ, ಮಾಡುವುದಕ್ಕೆ ಏನಡ್ಡಿ? ನಮ್ಮ ಸುತ್ತ ಇರುವ ಎಲ್ಲರಿಗೂ ನಮ್ಮ ನಿರ್ಧಾರಗಳು ಸರಿ ಎನಿಸಬೇಕಾಗಿಲ್ಲ. ಕೊಂಕು ನುಡಿಯುವವರು ಎಲ್ಲ ಕಡೆ, ಎಲ್ಲ ಕಾಲದಲ್ಲೂ ಇರುತ್ತಾರೆ. ನಾವು ನಮ್ಮ ಸಂತೃಪ್ತಿಗಾಗಿ ಮಾಡುವುದೇ ಆಗಿದ್ದರೆ ಬೇರೆಯವರ ಗೊಡವೆ ಏಕೆ? ಕಾರ್ಯವೊಂದನ್ನು ಮಾಡಿ ಪಶ್ಚಾತ್ತಾಪ ಪಡುವವರಿಗಿಂತ ಮಾಡದೆಯೇ ಪಶ್ಚಾತ್ತಾಪಪಡುವವರು ಲೋಕದಲ್ಲಿ ಹೆಚ್ಚಿಗೆ ಇದ್ದಾರಂತೆ.

ಮಾಡಬೇಕು ಅಂದುಕೊಂಡಿರುವ ಕೆಲಸಗಳನ್ನು ಮುಂದೂಡಲು ಪ್ರಮುಖ ಕಾರಣ ಆ ಕೆಲಸದ ಬಗೆಗಿರುವ ಸಣ್ಣ ಆತಂಕ. ಉದಾಹರಣೆಗೆ, ಪರೀಕ್ಷೆಗೆ ಓದಬೇಕು ಅಂದುಕೊಂಡಿರುವ ವಿದ್ಯಾರ್ಥಿ ಓದಲು ಆರಂಭಿಸದೆ ಇರಲು ಪ್ರಮುಖ ಕಾರಣ ತಾನು ಓದಬೇಕೆಂದುಕೊಂಡಿರುವ ವಿಷಯ ಕಠಿಣವಾಗಿದೆ ಮತ್ತು ಆ ಕಾರಣಕ್ಕೆ ಅರ್ಥವಾಗದು ಎಂಬ ಭಾವನೆ. ಲೇಖನ ಬರೆಯಬೇಕು ಅಂದುಕೊಂಡಿರುವ ವ್ಯಕ್ತಿ ಅದನ್ನು ಬರೆಯದೆ ಇರಲು ಕಾರಣ ತಾನು ಚೆನ್ನಾಗಿ ಬರೆಯಲಾರೆ, ಅದು ಓದಿದವರಿಗೆ ಇಷ್ಟವಾಗದಿದ್ದರೆ ಏನು ಗತಿ ಎಂಬ ಅಂತರಂಗದ ಆತಂಕ. ಅನೇಕ ‘ಪರ್ಪೆಕ್ಷನಿಸ್ಟ್’ಗಳಿಗೂ ಈ ಸಮಸ್ಯೆ ಇರುವುದುಂಟು. ಈ ಆತಂಕ ಮೂಡಿದಾಗಲೆಲ್ಲ ‘ಆಮೇಲೆ ಮಾಡಿದರಾಯ್ತು’, ‘ನಾಳೆ ಮಾಡೋಣ’ ಎಂದು ತಮಗೆ ತಾವೇ ಸಬೂಬು ಹೇಳಿಕೊಳ್ಳುವ ಪ್ರಸಂಗ ಬರುತ್ತದೆ. ಅವರಿಗೆ ಫೇಸ್‍ಬುಕ್, ವಾಟ್ಸಾಪುಗಳು ತಾತ್ಕಾಲಿಕ ನೆಮ್ಮದಿ ನೀಡುತ್ತವೆ.

ಬದ್ಧತೆಯೇ ಇಂತಹ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರ. ಮಾಡಬೇಕಿರುವ ಕೆಲಸಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳುವುದು ಮುಖ್ಯ ಅಲ್ಲ, ಮಾಡಬೇಕು ಎಂಬ ಅಂತರ್ಯದ ಗಟ್ಟಿತನ ಮುಖ್ಯ. ಇಂಥದ್ದನ್ನೆಲ್ಲ ಮಾಡಿಬಿಡುತ್ತೇನೆ ಎಂದು ಊರಿಗೆ ಡಂಗುರ ಸಾರಲು ನಾವೆಲ್ಲರೂ ರಾಜಕಾರಣಿಗಳಲ್ಲವಲ್ಲ? ಕೆಲವೊಮ್ಮೆ ನಮ್ಮ ನಿರ್ಧಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ಯಾರ ಬಳಿಯಲ್ಲಾದರೂ ಹೇಳಿಕೊಳ್ಳಬೇಕಾಗುತ್ತದೆ. ಆಗ ಅಂತರಂಗದ ಮಾತುಗಳಿಗೆ ಕಿವಿಕೊಡಬಲ್ಲ ಒಂದಿಬ್ಬರು ಆಪ್ತರು ಸಿಕ್ಕರೆ ಸಾಕು. ಮನಸ್ಸಿನ ಮಾತುಗಳಿಗೆ ಧ್ವನಿವರ್ಧಕ ಯಾಕೆ?

ಹಾಗೆಂದು ಅಂದುಕೊಂಡ ತಕ್ಷಣ ಕೆಲಸವೊಂದಕ್ಕೆ ಧುಮುಕಿಬಿಡುವುದೂ ಕೆಲವೊಮ್ಮೆ ಆತುರದ ನಿರ್ಧಾರವಾಗುತ್ತದೆ. ಅನುಷ್ಠಾನದ ಹಿಂದೆ ಸಾಕಷ್ಟು ಚಿಂತನೆ ಇರಬೇಕು. ಚಿಂತನೆಗೂ ಮುಂದೂಡುವ ಪ್ರವೃತ್ತಿಗೂ ವ್ಯತ್ಯಾಸ ಇದೆ. ಚಿಂತನೆಯಿಲ್ಲದೆ ಆರಂಭಿಸುವ ಕೆಲಸ ಅನೇಕ ಬಾರಿ ಆರಂಭಶೂರತನವಷ್ಟೇ ಆಗುತ್ತದೆ. ಯಾವುದೋ ಒಂದು ಯೋಚನೆ ಬಂದ ತಕ್ಷಣ ದಬದಬನೆ ಅದನ್ನು ಆರಂಭಿಸಿಬಿಡುವವರು ಇದ್ದಾರೆ. ಅವರು ಎರಡೇ ದಿನದಲ್ಲಿ ನಿವೃತ್ತಿ ಘೋಷಿಸುತ್ತಾರೆ. ಅಂಥವರು ಯಾವುದನ್ನೂ ಪೂರ್ತಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧವೇ.

ಡೆಡ್‍ಲೈನಿನಲ್ಲಿ ಕೆಲಸ ಮಾಡಬಲ್ಲವರು ಬೆರಳೆಣಿಕೆಯ ವೃತ್ತಿಪರರು ಮಾತ್ರ. ಆದ್ದರಿಂದ ಇನ್ನೂ ಸಮಯವಿದೆ ಎಂಬ ಭಾವನೆಯಿಂದ ಮೊದಲು ಹೊರಬರಬೇಕು. ಸಾಧ್ಯವಾದಷ್ಟೂ ಸದ್ದುಗದ್ದಲವಿಲ್ಲದೆ ಅಂದುಕೊಂಡದ್ದನ್ನು ಮಾಡಿಮುಗಿಸಬೇಕು. ಈ ಕೆಲಸವನ್ನು ಈಗಲೇ ಮಾಡುವುದರಿಂದ ದೊರೆಯಬಹುದಾದ ಯಶಸ್ಸಿನ ಕಲ್ಪನೆಯಿಂದ ಮನಸ್ಸಿಗೆ ಉತ್ಸಾಹವನ್ನು ತಂದುಕೊಳ್ಳಬೇಕು. ನಮ್ಮ ಸ್ನಾನಕ್ಕಾಗಿ ಸಮುದ್ರದ ತೆರೆಗಳು ಕಾಯುವುದಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಮೇ 9, 2020

ಅಮ್ಮನಿದ್ದಲ್ಲಿ ಬಡತನವಿಲ್ಲ

ಮೇ 10, 2020ರ 'ವಿಜಯವಾಣಿ'ಯಲ್ಲಿ ಪ್ರಕಟವಾದ ಬರೆಹ

ಅಮ್ಮ ಇಲ್ಲದೆ ಒಂದು ವರ್ಷವೇ ಕಳೆದುಹೋಯಿತು. ಅಮ್ಮ ಇಲ್ಲದ ದಿನಗಳು ಹೇಗಿದ್ದವು? ಹಾಗೆ ಕೇಳಿಕೊಂಡರೆ ಏನೂ ಹೊಳೆಯುವುದಿಲ್ಲ. ಬರೀ ಕತ್ತಲೆಯಷ್ಟೇ ಕಾಣುತ್ತದೆ. ಹೌದು, ಆ ಪ್ರಶ್ನೆಗೆ ಅದಲ್ಲದೆ ಬೇರೆ ಉತ್ತರ ಇರುವುದು ಹೇಗೆ ಸಾಧ್ಯ? ಅಮ್ಮನೆಂಬ ಬೆಳಕು ಆರಿದ ಮೇಲೆ ಉಳಿಯುವುದು ಕತ್ತಲೆಯೇ ಅಲ್ಲವೇ?

'ನಿಮ್ಮ ಮನೆಯವರು ಇದ್ದಕ್ಕಿದ್ದಂತೆ ಆರೆಂಟು ವರ್ಷ ಹೆಚ್ಚಿಗೆ ವಯಸ್ಸಾದವರಂತೆ ಕಾಣುತ್ತಿದ್ದಾರೆ. ಏನಾಗಿದೆ? ಅಂತ ಕೊಲೀಗ್ ಒಬ್ಬರು ಕೇಳಿದರು’ ಅಂತ ಮನೆಯಾಕೆ ಹೇಳಿದಳು. ಆಗಿನ್ನೂ ಅಮ್ಮ ಹೋಗಿ ಒಂದು ತಿಂಗಳಾಗಿದ್ದಿರಬಹುದು ಅಷ್ಟೇ. ನಾನು ನಕ್ಕು ಸುಮ್ಮನಾದೆ. ತಲೆ ಬೋಳು ಮಾಡಿ, ಕ್ಲೀನ್ ಶೇವ್ ಮಾಡಿದ್ದರಿಂದ ಇರಬಹುದು ಅಂತ ಸೇರಿಸಿದೆ. ತಲೆಯ ಜೊತೆಗೆ ಮನಸ್ಸೂ ಬೋಳಾಗಿದ್ದನ್ನು ಬಿಡಿಸಿ ಹೇಳುವುದು ಹೇಗೆ? ಹೇಳದಿದ್ದರೂ ತಿಳಿದುಕೊಳ್ಳುವವಳು ಅವಳು.

ಅಮ್ಮ ತನ್ನೊಂದಿಗೆ ನನ್ನೊಳಗಿನ ಒಂದು ಹಿಡಿ ಪ್ರಕಾಶವನ್ನೂ ಜತೆಗೆ ಒಯ್ದಳೇನೋ ಎಂದು ಆಗಾಗ ಅನಿಸುವುದಿದೆ. ಆದರೆ ಅದು ಭ್ರಮೆಯೆಂದು ಮರುಕ್ಷಣ ಹೇಳುತ್ತದೆ ಒಳಮನಸ್ಸು. ಅಮ್ಮ ತನಗಾಗಿ ಏನನ್ನೂ ಇಟ್ಟುಕೊಂಡವಳಲ್ಲ. ಇನ್ನು ಆಕೆ ಅದಮ್ಯವಾಗಿ ಪ್ರೀತಿಸಿದ್ದ ಜೀವದಿಂದ ಏನನ್ನು ತಾನೇ ತೆಗೆದುಕೊಂಡು ಹೋದಾಳು? ಆದರೂ ಒಂದಿದೆ; ಹೇಗೆಂದ ಹಾಗೆ ಜಾರಿಬಿದ್ದು ಬರಿಗೈಯಲ್ಲಿ ಹೊರಟುಹೋಗಲು ಅದೇನು ಪದ್ಮಪತ್ರದ ಮೇಲಿನ ಜಲಬಿಂದುವಲ್ಲವಲ್ಲ! ಅವಳು ಅಮ್ಮ.

'ಒಬ್ಬನೇ ಬೇಕಾಬಿಟ್ಟಿ ಓಡುತ್ತೀ ಏರುತಗ್ಗು ರಸ್ತೆಯಲ್ಲಿ. ಬಿದ್ದು ಏಟು ಮಾಡಿಕೊಳ್ಳುತ್ತೀಯಾ. ಕೈ ಹಿಡಿದುಕೋ’ ಎಂದು ಎಳೆಯ ವಯಸ್ಸಿನಲ್ಲಿ ಅಮ್ಮ ಗದರಿದರೆ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಅದೇ ಅಮ್ಮ ಉಪಾಯವಾಗಿ 'ಒಬ್ಬಳೇ ನಡೆಯುವುದಕ್ಕೆ ನಂಗೆ ಭಯವಾಗುತ್ತೆ. ನನ್ನನ್ನೂ ಕೈ ಹಿಡಕೊಂಡು ಕರಕೊಂಡು ಹೋಗು’ ಅಂತ ಹೇಳಿದರೆ ಕೈ ಹಿಡಿದು ಜತೆಗೆ ಸಾಗುತ್ತಿದ್ದೆ. ಅಮ್ಮನಿಗೆ ನಾನು ಜತೆಗಿದ್ದರೆ ಧೈರ್ಯ ಎಂಬ ಮರ್ಜಿ ಬೇರೆ. ಮೊನ್ನೆಮೊನ್ನೆ ಕೊನೆಯಬಾರಿ ಅಮ್ಮನ ಕೈಹಿಡಿದಾಗ ಅವಳ ನಾಡಿ ಮಿಡಿತ ನಿಂತೇಹೋಗಿತ್ತು. ಆದರೆ ಆ ಕೈಯ್ಯಲ್ಲಿ ಇನ್ನೂ ಒಂದಷ್ಟು ಬಿಸುಪು ಉಳಿದಿರುವ ಭಾವ. ಅದು ಕೆಲವೇ ಕೆಲವು ಕ್ಷಣ ಮಾತ್ರ. ’'ಅಮ್ಮ ಇಲ್ಲ’ ಎಂದು ಕಣ್ಣುಕತ್ತಲು ಬಂದು ಅದೇ ಎದೆಯ ಮೇಲೆ ಒಂದು ನಿಮಿಷ ಮುಖವಿಟ್ಟು ಸುಧಾರಿಸಿಕೊಂಡು ಎದ್ದು ಮುಖ ನೋಡಿದರೆ ಆ ಕ್ಷಣವನ್ನು ನಂಬುವುದು ಸಾಧ್ಯವಿರಲಿಲ್ಲ. ಆಕೆಯ ಮುಖದಲ್ಲಿ ಪ್ರಾಣ ಮಿನುಗುತ್ತಿತ್ತು. ಒಂದೆರಡು ಗಂಟೆಯೇ ಕಳೆದಮೇಲೂ ಮುಖ ಕಪ್ಪಿಟ್ಟದ್ದೋ ಊದಿಕೊಂಡದ್ದೋ ಆಗಿರಲಿಲ್ಲ. ಈಗಷ್ಟೇ ಮುಖತೊಳೆದು ಹಣೆಯಲ್ಲಿ ಕಾಸಿನಗಲ ಕುಂಕುಮ ಇಟ್ಟುಕೊಂಡ ತೇಜ ಹಾಗೆಯೇ ಉಳಿದಿತ್ತು.

ಅಮ್ಮನ ಮುಖದಲ್ಲಿ ಹಾಗೊಂದು ಗತ್ತು ಮೊದಲಿನಿಂದಲೂ ಇತ್ತು. 'ನೀನು ಹಿಂದಿನ ಜನ್ಮದಲ್ಲಿ ಯಾವುದೋ ದೊಡ್ಡ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದೆ. ಅದಕ್ಕೂ ಹಿಂದೆ ಯಾವುದಾದರೂ ರಾಜ್ಯದ ಮಹಾರಾಣಿ ಆಗಿದ್ದಿರಬಹುದು’ ಎಂದು ನಾನು ಅವಳ ಕಾಲೆಳೆಯುತ್ತಿದ್ದುದಕ್ಕೆ ಲೆಕ್ಕವೇ ಇಲ್ಲ. ತೀರಾ ನಡೆಯುವುದಕ್ಕಾಗದೆ ಅಮ್ಮ ಕುಳಿತಲ್ಲೇ ಆದ ಮೇಲೂ ದಿನಕ್ಕೊಮ್ಮೆಯಾದರೂ 'ಏನು ಪ್ರಿನ್ಸಿಪಾಲರೇ’ ಎಂದು ಅವಳನ್ನು ತಮಾಷೆಮಾಡದ ದಿನಗಳಿರಲಿಲ್ಲ.

ತವರಿನಲ್ಲೂ ಅಮ್ಮನೇ ಎಲ್ಲ ಮಕ್ಕಳಿಗಿಂತ ಹಿರಿಯವಳಾಗಿದ್ದರಿಂದ ಆಕೆಗೆ ಅಂಥದೊಂದು ಗತ್ತು ಸಹಜವಾಗಿಯೇ ಬೆಳೆದುಬಂದಿರಬೇಕು. ಆ ಗತ್ತಿನಲ್ಲಿ ಅಹಂಕಾರ ಇರಲಿಲ್ಲ. ಅಪಾರ ಸ್ವಾಭಿಮಾನ ಇತ್ತು. ಮೂವತ್ತರ ಆಸುಪಾಸಿನಲ್ಲಿ ಮದುವೆಯಾಗುವವರೆಗೂ ಮನೆಯ ಹಿರಿಮಗಳಾಗಿ ಹಗಲೂ ಇರುಳೂ ತುಂಬಿದ ಮನೆಯ ಕೂಳಿನ ಒನಕೆಗೆ ತೋಳಾಗಿದ್ದ ಅಮ್ಮ ಎಲ್ಲರಿಗೂ ಪ್ರೀತಿಪಾತ್ರ ಜೀವವಾಗಿದ್ದಳೆಂಬುದನ್ನು ಕೇಳಿಬಲ್ಲೆ. ಅಜ್ಜ-ಅಜ್ಜಿಗೂ ಅಮ್ಮನೆಂದರೆ ಒಂದು ಹಿಡಿ ಪ್ರೀತಿ ಜಾಸ್ತಿ ಎಂಬುದನ್ನು ಎಳವೆಯಲ್ಲೂ ನೋಡಿ ಗ್ರಹಿಸಿದ್ದುಂಟು.

ವಿಜಯವಾಣಿ | 10-05-2020 | ಸಿಬಂತಿ ಪದ್ಮನಾಭ
ಮದುವೆಯಾಗಿ ಬಂದ ಮೇಲೂ ಅಮ್ಮನಿಗೇನೂ ಸುಖದ ಸುಪ್ಪತ್ತಿಗೆ ಕಾದಿರಲಿಲ್ಲ. ಕೆಲಸ ಮಾಡಿದರಷ್ಟೇ ಉಂಟು ಆ ದಿನದ ಊಟ. ಚಿಕ್ಕವಯಸ್ಸಿನಿಂದಲೂ ದುಡಿಮೆ ಸಜಹವಾದ್ದರಿಂದ ಅವಳಿಗೆ ಅದೇನು ಅನಿರೀಕ್ಷಿತವೂ ಆತಂಕಕಾರಿಯೂ ಆಗಿರಲಿಲ್ಲ. ಕಷ್ಟಗಳು ಬದುಕಿನ ಭಾಗವಾಗಿದ್ದಾಗ ಹೊಸ ಕಷ್ಟಗಳು ಸವಾಲುಗಳಾಗಿ ಮಾತ್ರ ಕಾಣುತ್ತವಷ್ಟೆ! ಸವಾಲುಗಳನ್ನೇ ಎದುರಿಸಿ ಮುಂದಕ್ಕೆ ನಡೆದವರ ಮುಖ ಮತ್ತು ನಡೆನುಡಿಯಲ್ಲಿ ಉಳಿದವರಿಗಿಂತ ಒಂದಷ್ಟು ಹೆಚ್ಚೇ ಸ್ವಾಭಿಮಾನವೇನೋ? 'ಎಂಟು ತಿಂಗಳ ಬಸುರಿ ನಾನು. ಹಸಿವು ಸ್ವಲ್ಪ ಹೆಚ್ಚೇ. ಹಸಿವಾಗುತ್ತದೆ, ಮೊದಲು ಊಟ ಮಾಡೋಣ ಎಂದರೂ ಕೇಳದೆ ಸುಡುಬಿಸಿಲಿನಲ್ಲಿ ಗೇರುಬೀಜದ ಸಸಿ ನೆಡಿಸಿದ್ದರು ನಿನ್ನ ಅಪ್ಪ’ ಎಂದು ವರ್ಷಕ್ಕೆರಡುಬಾರಿಯಾದರೂ ಅಮ್ಮ ನೆನಪಿಸಿಕೊಳ್ಳದೆ ಇರಲಿಲ್ಲ. ಹಾಗೆ ನೆನಪಿಸಿಕೊಳ್ಳುವಾಗ ಗಿಡಗಳೆಲ್ಲ ಮರಗಳಾಗಿ ಫಸಲಿನಿಂದ ತೊನೆಯುತ್ತಿದ್ದವು. ಪರಿಶ್ರಮ ಫಸಲಾಗಿ ಬೆಳೆದುನಿಂತಾಗ, ಮಕ್ಕಳು ದೊಡ್ಡವರಾಗಿ ಕಷ್ಟದ ದಿನಗಳು ಒಂದಷ್ಟು ಹಗುರವಾದಾಗ ಮನಸ್ಸಿನಲ್ಲಿ ಮೂಡುವ ನೆಮ್ಮದಿಯನ್ನು ಸ್ವಾಭಿಮಾನವೆಂದಲ್ಲದೆ ಬೇರೇ ಯಾವ ಹೆಸರಿನಿಂದಲೂ ಕರೆಯಲಾಗದು.

ದಿನಕ್ಕೆ ಹದಿನೆಂಟು ಬಾರಿ ಜಗಳವಾಡಿಕೊಂಡರೂ ಅಪ್ಪನಿಗೂ ಅಮ್ಮನ ಮೇಲೆ ವಿಶೇಷವಾದ ಗೌರವವಿತ್ತು. ಪ್ರೀತಿಗಿಂತಲೂ ಮಿಗಿಲಾದ ಅಭಿಮಾನ ಅದು. ಕಾಡಿನ ನಡುವಿನ ಬೋಳುಗುಡ್ಡದಲ್ಲಿ ಅಪ್ಪನ ಬೇಸಾಯದ ಗಾಥೆ ಪಲ್ಲವಿಸಿದರೂ ಅದರ ಶ್ರೇಯದ ಅರೆಪಾಲನ್ನು ಅಮ್ಮನಿಗೆ ನೀಡುವುದರಲ್ಲಿ ಅಪ್ಪ ಎಂದೂ ಜಿಪುಣತನ ತೋರಿದ್ದಿಲ್ಲ. ತಾನು ಬಹಳ ಕಷ್ಟಪಟ್ಟೆ ಎಂದು ಅವರೆಂದೂ ಹೇಳಿದ್ದಿಲ್ಲ. 'ನಿಮ್ಮ ಅಮ್ಮ ಪಟ್ಟ ಕಷ್ಟ ದೊಡ್ಡದು’ ಅದೇ ಅವರು ದೊಡ್ಡವರಾದ ಮೇಲೂ ನಮಗೆಲ್ಲ ಕೊಟ್ಟ ಚಿತ್ರ. ಒಂದು ತರಕಾರಿ ಬೀಜವನ್ನೂ ಅಪ್ಪ ಕೈಯ್ಯಾರೆ ಹಾಕುತ್ತಿರಲಿಲ್ಲ. 'ಅಮ್ಮನನ್ನು ಬರಹೇಳು. ನಾನು ಹಾಕಿದರೆ ಬರ್ಕತ್ ಆಗದು. ಅವಳು ಹಾಕಿದರೆ ಒಳ್ಳೆ ತರಕಾರಿ ಆಗುವುದು ಗ್ಯಾರಂಟಿ’ ಎಂದು ಅವರು ಎಷ್ಟೋ ಸಲ ಹೇಳುವುದನ್ನು ಕೇಳಿದ್ದೇನೆ. ಅದು ಅಮ್ಮನ ಮೇಲೆ ಅಪ್ಪ ಇಟ್ಟ ವಿಶ್ವಾಸ.

ವ್ಯವಹಾರಗಳೆಲ್ಲ ಅಪ್ಪನದ್ದೇ ಆದರೂ ಪೇಟೆಗೆ ಹೊರಡುವಾಗ 'ಒಂದು ಹತ್ತು ರುಪಾಯಿ ಉಂಟಾ?’ ಎಂದು ಮತ್ತೆ ಅವರು ಕೇಳುತ್ತಿದ್ದುದು ಅಮ್ಮನನ್ನೇ. ಅಮ್ಮನಲ್ಲಿ ಯಾವುದೋ ಉಳಿಕೆಯ ಒಂದಿಷ್ಟು ಹಣವಾದರೂ ಇದ್ದೀತು ಎಂಬುದವರ ಗಟ್ಟಿ ನಂಬಿಕೆ. ತೋಟದ ಕೆಲಸಕ್ಕೆ ಬರುತ್ತಿದ್ದ ಆಳುಗಳೂ ಸಂಬಳವನ್ನು ಅಮ್ಮನೇ ಕೊಡಬೇಕೆಂದು ಕಾದುಕೂರುತ್ತಿದ್ದುದುಂಟು. 'ಅಕ್ಕ ಎರಡು ರುಪಾಯಿಯಾದರೂ ಕೊಟ್ಟರೆ ಗೆಲುವು ಪಕ್ಕಾ’ ಎಂದು ಆಗಾಗ್ಗೆ ಕೋಳಿ ಅಂಕಕ್ಕೆ ಹೋಗುತ್ತಿದ್ದ ಈಸರಜ್ಜ ಅಮ್ಮನಲ್ಲಿ ಕಾಡಿಬೇಡಿ ಚಿಲ್ಲರೆ ಕಾಸು ತೆಗೆದುಕೊಂಡು ಹೋಗುತ್ತಿದ್ದುದು ಸಾಮಾನ್ಯ.

ಆಗ ನಾನು ಐದನೇ ಕ್ಲಾಸಿನಲ್ಲಿ ಇದ್ದಿರಬೇಕು. ಶಾಲೆಯಲ್ಲಿ ಮೇಷ್ಟ್ರೇ ಒಂದು ಸ್ಟೇಶನರಿ ಅಂಗಡಿ ಇಟ್ಟಿದ್ದರು. ಆಗಷ್ಟೇ ಹೊಸದಾಗಿ ಟಕ್‌ಟಿಕ್ ಪೆನ್ನು ಬಂದಿತ್ತು. ಐದು ರೂಪಾಯಿ ಅದಕ್ಕೆ. ಯಾಕೋ ಅದರ ಸೊಗಸಿಗೆ ಆ ಪೆನ್ನು ನನಗೆ ಬೇಕೇಬೇಕು ಅನಿಸಿತ್ತು. ಐದು ರೂಪಾಯಿ ಎಲ್ಲಿಂದ ತರುವುದು? ಅಮ್ಮನ ದುಂಬಾಲು ಬಿದ್ದಾಯ್ತು. ಅವಳಾದರೂ ಪೆನ್ನಿಗಾಗಿ ಅಷ್ಟೊಂದು ದುಡ್ಡು ಎಲ್ಲಿಂದ ತಂದಾಳು? ಬೇಕೇಬೇಕು ಅಂತ ಅನ್ನಾಹಾರ ತ್ಯಜಿಸಿ ಸತ್ಯಾಗ್ರಹ ಆರಂಭಿಸಿದ್ದೆ. ಅತ್ತು ಕರೆದು ಗಲಾಟೆ ಮಾಡಿದೆ. ಕೊನೆಗೊಂದು ದಿನ ನನ್ನ ಕಾಟ ತಡೆಯಲಾಗದೆ ಅಮ್ಮ ಒಳಗಿಂದ ಒಂದು ಡಬ್ಬಿ ತಂದು ಹೊರಗಿನ ಜಗಲಿಯಲ್ಲಿ ಸುರುವಿ ಅದರಿಂದ ಐದು, ಹತ್ತು ಪೈಸೆಯ ನಾಣ್ಯಗಳನ್ನೆಲ್ಲ ಒಟ್ಟು ಮಾಡಿ 'ತಗೋ’ ಅಂತ ಕೊಟ್ಟಿದ್ದಳು.

ಕುಣಿದಾಡಿಕೊಂಡೇ ಹೋಗಿ ಶಾಲೆಯಿಂದ ಪೆನ್ನು ತೆಗೆದುಕೊಂಡಿದ್ದೆ. ಖರೀದಿಸಿದ ದಿನವೇ ಸಂಜೆಯಾಗುವುದರ ಒಳಗೆ ಆ ಪೆನ್ನನ್ನು ಯಾರೋ ಕ್ಲಾಸಿನಲ್ಲಿ ಕದ್ದುಬಿಟ್ಟಿದ್ದರು. ಆಗ ನನಗೆ ಭಯವಾಯಿತಾ, ಆಘಾತವಾಯಿತಾ, ಬೇಜಾರಾಯಿತಾ, ಮನೆಯಲ್ಲಿ ಯಾವ ರೀತಿ ಅದನ್ನು ತಿಳಿಸಿದೆ - ಈಗ ನೆನಪಿಲ್ಲ. ಆದರೆ 'ದೊಡ್ಡವನಾದ ಮೇಲೆ ನೀನು ಒಂದು ಲೋಡು ಪೆನ್ನು ತಗೋ’ ಎಂದು ಆಕೆ ಸಮಾಧಾನಪಡಿಸಿದ್ದು ಸರಿಯಾಗಿ ನೆನಪಿದೆ. ನಾನು ನಾಲ್ಕಕ್ಷರ ಗೀಚಲು ಕಲಿತದ್ದರ ಹಿಂದೆ ಅಮ್ಮನ ಒಂದು ಲೋಡು ಹರಕೆ ಇತ್ತೇನೋ? ಆದರೆ ಅವಳ ಐದು ರೂಪಾಯಿಯ ಹಿಂದೆ ಇದ್ದಿರಬಹುದಾದ ಸಂಕಟ ಮುಂದೆ ಬಹಳ ವರ್ಷಗಳವರೆಗೆ ನನ್ನನ್ನು ಕಾಡುತ್ತಲೇ ಇತ್ತು. ಇಂದಿಗೂ ಆ ಘಟನೆ ನೆನಪಾದರೆ ಒಳಗೊಳಗೆಯೇ ಬೆಂದು ಹೋಗುತ್ತೇನೆ. ತಿಂಗಳಿಗೆ ಲಕ್ಷ ದುಡಿದರೂ ಅಮ್ಮ ಇಟ್ಟಿದ್ದ ಐದು ರೂಪಾಯಿಯನ್ನು ಮತ್ತೆ ಸಂಪಾದಿಸಲಾರೆ.

ಎಂಎ ಓದುತ್ತಿರುವಂತೆಯೇ ಪಿಟಿಐ ವರದಿಗಾರನ ಹುದ್ದೆಗೆ ಅರ್ಜಿ ಹಾಕಿದ್ದೆ. ಲಿಖಿತ ಪರೀಕ್ಷೆ ಮುಗಿದು ಸಂದರ್ಶನಕ್ಕೆ ದೆಹಲಿಯಿಂದ ಬುಲಾವ್ ಬಂತು. ಹೋಗುವುದು ಸರಿ, ದುಡ್ಡು? ಮತ್ತೆ ಅಮ್ಮನೆಂಬ ಬ್ಯಾಂಕಿನ ಮೇಲೆ ನಂಬಿಕೆ. ದೆಹಲಿಗೆ ಕಳಿಸುವಷ್ಟು ದುಡ್ಡು ಅವಳಿಗಾದರೂ ಎಲ್ಲಿಂದ ಬರಬೇಕು? ಕೊರಳಲ್ಲಿದ್ದ ಕೂದಲೆಳೆಯಂತಹ ಚಿನ್ನದ ಚೈನನ್ನು ತೆಗೆದು ಕೈಯ್ಯಲ್ಲಿಟ್ಟಳು- ನನ್ನಲ್ಲಿರುವುದು ಇಷ್ಟೇ, ನಿನ್ನ ಅಜ್ಜ ಕೊಟ್ಟದ್ದು; ಯಾವುದಾದರೂ ಬ್ಯಾಂಕಿನಲ್ಲಿಟ್ಟು ದುಡ್ಡು ತೆಗೆದುಕೋ ಅಂತ. ನಾನು ಹಾಗೆಯೇ ಮಾಡಿದೆ. ನಾಳೆ ದೆಹಲಿಗೆ ಹೊರಡಬೇಕು ಅನ್ನುವ ಹುಮ್ಮಸ್ಸಿನಲ್ಲಿ ನಾನಿದ್ದರೆ ರಾತ್ರಿ ಅಕ್ಕಿ ಅರೆಯುತ್ತಿದ್ದ ಅಮ್ಮ ಕೇಳಿದಳು: 'ಆ ಕೆಲಸ ಬಿಟ್ಟರಾಗದೇ?’ ಅಂತ. ನನಗೆ ಎದೆ ಧಸಕ್ಕಂತು. ’ಛೇ! ಹೀಗೆ ಕೇಳೋದೇನಮ್ಮ ನೀನು?’ ಅಂತ ನಾನು ಬೇಸರಪಟ್ಟೆ ಆ ಕ್ಷಣ.

ಆ ಕೆಲಸ ಸಿಕ್ಕರೆ ನಮ್ಮ ಕಷ್ಟಗಳೆಲ್ಲ ಕರಗಿಹೋಗುತ್ತವೆ ಎಂಬ ಸಂಭ್ರಮದಲ್ಲಿ ಅಮ್ಮನೂ ಇರಬಹುದೆಂದು ನಾನಂದುಕೊಂಡಿದ್ದರೆ ಅವಳ ಚಿಂತೆ ಬೇರೆಯದೇ ಆಗಿತ್ತು. ಅದನ್ನು ಅರ್ಥ ಮಾಡಿಕೊಂಡಿದ್ದರೆ ಅವಳ ಏಕೈಕ ಬಂಗಾರವನ್ನು ಅಡವಿಡಬೇಕಾಗಿ ಬರುತ್ತಿರಲಿಲ್ಲ ಎಂದು ಆಮೇಲೆ ಎಷ್ಟೋ ಸಲ ಅಂದುಕೊಂಡದ್ದಿದೆ. ಕೊನೆಗೂ ನಾನು ಆ ಉದ್ಯೋಗಕ್ಕೆ ಆಯ್ಕೆಯಾಗಲಿಲ್ಲ. ಅಮ್ಮನ ಅಂತರಂಗಕ್ಕೆ ವಿರುದ್ಧ ಯಶಸ್ಸಾದರೂ ಹೇಗೆ ಒಲಿದೀತು?

ಇಂತಿಪ್ಪ ಸಿರಿವಂತೆ ಅಮ್ಮ ಕೊನೆಯ ಹತ್ತು ವರ್ಷ ನಡೆಯಲೂ ಆಗದೆ ಮಲಗಿದಳು. ಹೊಗೆ ಒಲೆಗೆ ಗಾಳಿ ಊದುತ್ತಲೇ ಬದುಕಿಡೀ ಸವೆಸಿದ್ದ ಅಮ್ಮನಿಗೆ ದೊಡ್ಡ ಮನೆ ಕಟ್ಟಿ ತೋರಿಸಿ ಹೆಮ್ಮೆಪಡುವಂತೆ ಮಾಡಬೇಕೆಂದು ಆಸೆಪಟ್ಟಿದ್ದೆ. ಮನೆ ಕಟ್ಟಿದಾಗ ಅದರೊಳಗೆ ನಾಲ್ಕು ಹೆಜ್ಜೆಯಾದರೂ ನಡೆಯುವ ಶಕ್ತಿಯೇ ಅವಳಿಗೆ ಇರಲಿಲ್ಲ. ತಾನೂ ಎಲ್ಲರ ಹಾಗೆ ಸಂಭ್ರಮದಿಂದ ಹೊಸ ಮನೆ ತುಂಬ ಓಡಾಡಬೇಕು ಎಂಬ ತುಡಿತ ಒಂದೆಡೆ, ಹಾಗೆ ಮಾಡಲು ಸಾಧ್ಯವಾಗದ ಅಸಹಾಯಕತೆ ನಡುವೆ, ಅಮ್ಮನ ಒಟ್ಟು ಮನಸ್ಸೇ ಕೆಲಸ ಮಾಡುವುದು ನಿಲ್ಲಿಸಿತ್ತು. ಎಷ್ಟೇ ಕಾಳಜಿ ಮಾಡಿದರೂ ಕೊನೆಕೊನೆಗೆ ಮಲಗಿದಲ್ಲೇ ಮಲಗಿ ಬೆನ್ನೆಲ್ಲ ಹುಣ್ಣಾಗಿ ಮಾತೂ ಬಾರದೆ ದೀರ್ಘಮೌನಕ್ಕೆ ಜಾರಿಬಿಟ್ಟಳು ಎಲ್ಲರನ್ನೂ ಬಡವರನ್ನಾಗಿಸಿ.

'ದೇವರು ಎಲ್ಲರೊಂದಿಗೂ ಖುದ್ದು ಇರಲಾರ. ಅದಕ್ಕೇ ಅಮ್ಮನನ್ನು ಸೃಷ್ಟಿಸಿದ’ ಎಂಬ ಯಹೂದಿ ಗಾದೆಯೊಂದಿದೆ. ಅಮ್ಮ ವಾತ್ಸಲ್ಯದ ಪ್ರತಿಮೂರ್ತಿ, ತ್ಯಾಗಮಯಿ, ಅಕ್ಕರೆಗೆ ಇನ್ನೊಂದು ಹೆಸರು- ಎಲ್ಲವೂ ನಿಜ. ಆದರೆ ಅದಕ್ಕಿಂತಲೂ ಹೆಚ್ಚು ಅವಳು ಎಲ್ಲರ ಬದುಕಿನ ಬಲುದೊಡ್ಡ ಪಾಠಶಾಲೆ. ಮಾನವಸಹಜ ದೌರ್ಬಲ್ಯಗಳೆಲ್ಲವೂ ಒಬ್ಬ ವ್ಯಕ್ತಿಯಾಗಿ ಅಮ್ಮನಲ್ಲಿರಬಹುದು. ಆದರೆ ಅವಳ ನಿರ್ಧಾರಗಳಲ್ಲಿ ಸ್ವಾರ್ಥವಿಲ್ಲ; ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಆಸೆ ಮಾತ್ರ. ಆದ್ದರಿಂದಲೇ ಶಂಕರಾಚಾರ್ಯರ ಮಾತು ಎಂದಿಗೂ ಒಪ್ಪುವಂಥದ್ದೇ: 'ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’.

- ಸಿಬಂತಿ ಪದ್ಮನಾಭ ಕೆ. ವಿ.