ಶುಕ್ರವಾರ, ಜೂನ್ 26, 2020

ಸಹಕಾರಿ ಕಾನೂನು: ಒಂದು ಸಿಂಹಾವಲೋಕನ

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸ್ಮರಣ ಸಂಚಿಕೆ-2019 'ಶತಮಂದಾರ'ದಲ್ಲಿ ಪ್ರಕಟವಾದ ಲೇಖನ

ಸಹಕಾರ ಚಳುವಳಿಗೂ ಪ್ರಜಾಪ್ರಭುತ್ವಕ್ಕೂ ಅವಿನಾಭಾವ ಸಂಬಂಧ. ಏಕೆಂದರೆ ಎರಡೂ ಪರಿಕಲ್ಪನೆಗಳ ಅಂತರ್ಯದಲ್ಲಿ ಹುದುಗಿರುವುದು ಒಂದೇ - ಜನರಿಂದ ಮತ್ತು ಜನರಿಗಾಗಿ ಎಂಬ ತತ್ತ್ವ. 'ಎಲ್ಲರಿಗಾಗಿ ನಾನು ಮತ್ತು ನನಗಾಗಿ ಎಲ್ಲರೂ’ ಎಂಬ ಸಹಕಾರೀ ಚಳುವಳಿಯ ಘೋಷಣೆ ಪ್ರಜಾಪ್ರಭುತ್ವದ ಮಂತ್ರವೂ ಹೌದು. ಆದ್ದರಿಂದ ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಭಾವವನ್ನು ಭದ್ರಗೊಳಿಸುವಲ್ಲಿ ಸಹಕಾರಿ ರಂಗದ ಪಾತ್ರ ತುಂಬ ದೊಡ್ಡದು. ಸಹಕಾರ ಚಳುವಳಿಯ ಗುಣಾವಗುಣಗಳ ಚರ್ಚೆ ಬೇರೆಯದ್ದೇ, ಆದರೆ ಸಮಾಜದ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ಚಳುವಳಿ ವಹಿಸಿದ ಪಾತ್ರ ಗಣನೀಯವಾದದ್ದೆಂಬುದನ್ನು ಅಲ್ಲಗಳೆಯಲಾಗದು.

ಸಹಕಾರ ಚಳುವಳಿಗೆ ಸ್ಪಷ್ಟ ರೂಪರೇಖೆಗಳನ್ನು ಹಾಕಿಕೊಡುವಲ್ಲಿ ಕಾನೂನಿನ ಪಾತ್ರ ಮಹತ್ವದ್ದು. ಯಾವುದೇ ಚಿತ್ರವಾದರೂ ಚೆನ್ನಾಗಿ ಕಾಣಿಸಬೇಕೆಂದರೆ ಅದಕ್ಕೊಂದು ಚೌಕಟ್ಟು ಬೇಕು. ಸಹಕಾರಿ ಕಾನೂನು ಅಂತಹದೊಂದು ಚೌಕಟ್ಟು. ಕಳೆದ ವರ್ಷದ ಅಂತ್ಯಕ್ಕೆ ನಮ್ಮ ದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಒಟ್ಟು ಸಹಕಾರ ಸಂಘಗಳ ಸಂಖ್ಯೆ 42,543. ಒಟ್ಟು ಸದಸ್ಯರ ಸಂಖ್ಯೆ 2,28,85,000 ಸಂಘಗಳಲ್ಲಿರುವ ಒಟ್ಟು ಪಾಲು ಬಂಡವಾಳ ರೂ. 4,519.79 ಕೋಟಿ. ಸಹಕಾರ ರಂಗವನ್ನು ಒಂದು ಶಿಸ್ತಿನಲ್ಲಿ ಮುನ್ನಡೆಸಿ ಈ ಹಂತಕ್ಕೆ ತಂದು ನಿಲ್ಲಿಸುವಲ್ಲಿ ಕಾನೂನಿನ ಕೊಡುಗೆ ಗಮನಾರ್ಹವಾದದ್ದು. ಸಹಕಾರ ರಂಗದ ಕಾನೂನು-ಕಾಯ್ದೆಗಳ ಸಂಕ್ಷಿಪ್ತ ಅವಲೋಕನ ನಡೆಸುವುದೇ ಈ ಲೇಖನದ ಉದ್ದೇಶ.

ಕಾನೂನಿನ ಮಾರ್ಗ:
ಇಡೀ ದೇಶದ ಸಹಕಾರಿ ಚಳುವಳಿಗೆ ಮೂರ್ತರೂಪ ದೊರಕಿದ್ದು ಕರ್ನಾಟಕದಲ್ಲೇ ಎಂಬುದು ಹೆಮ್ಮೆಯ ಸಂಗತಿ. 1904ರ ಸಹಕಾರಿ ಸಂಘಗಳ ಕಾಯ್ದೆಯೇ ಭಾರತದ ಮೊತ್ತಮೊದಲ ಸಹಕಾರಿ ಕಾನೂನು. ಇದರ ಆಧಾರದಲ್ಲಿ ಗದಗ ಜಿಲ್ಲೆಯ ಕಣಗಿನಹಳ್ಳಿ ಗ್ರಾಮದ ಸಮಾನಮನಸ್ಕ ಜನತೆ ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ್ ಎಂಬವರ ನೇತೃತ್ವದಲ್ಲಿ ರೂ. 2,000 ಪಾಲುಬಂಡವಾಳದೊಂದಿಗೆ ಸಹಕಾರಿ ಸಂಘವೊಂದನ್ನು ಜುಲೈ 8, 1905ರಂದು ಆರಂಭಿಸಿದರು. ಇದೇ ದೇಶದ ಮೊತ್ತಮೊದಲ ಕೃಷಿ ಪತ್ತಿನ ಸಹಕಾರ ಸಂಘ.

ಬೇರೆ ಬಗೆಯ ಸಹಕಾರಿ ಸಂಘಗಳನ್ನು ಕೂಡ ಆರಂಭಿಸಲು ಅನುಕೂಲವಾಗುವಂತೆ ಅಂದಿನ ಬ್ರಿಟಿಷ್ ಸರ್ಕಾರ 1912ರ ಸಹಕಾರಿ ಸಂಘಗಳ ಕಾಯ್ದೆಯನ್ನು ಜಾರಿಗೆ ತಂದಿತು. 1919ರಲ್ಲಿ ಮಾಂಟೆಗೊ-ಚೆಮ್ಸ್‌ಫೋರ್ಡ್ ಸುಧಾರಣೆಗಳ ಫಲವಾಗಿ ಸಹಕಾರವು ರಾಜ್ಯಪಟ್ಟಿಗೆ ಸೇರ್ಪಡೆಯಾದಾಗ ತಮ್ಮದೇ ಆದ ಕಾಯ್ದೆಗಳನ್ನು ರೂಪಿಸಿಕೊಳ್ಳಲು ಎಲ್ಲ ಪ್ರಾಂತ್ಯಗಳಿಗೆ 1912ರ ಕಾಯ್ದೆ ಮಾದರಿಯಾಗಿತ್ತು. ಸ್ವಾತಂತ್ರ್ಯಾನಂತರ ಅನೇಕ ರಾಜ್ಯಗಳು ತಮ್ಮದೇ ಆದ ಕಾನೂನುಗಳನ್ನು ಜಾರಿಗೆ ತಂದವು. ರಾಷ್ಟ್ರಮಟ್ಟದಲ್ಲಿ ಬಹುರಾಜ್ಯಗಳ ಸಹಕಾರಿ ಸಂಘಗಳ ಕಾಯ್ದೆಯೊಂದು ಜಾರಿಗೆ ಬಂತು. ನಮ್ಮ ರಾಜ್ಯದಲ್ಲಿ 'ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959’ ಅನ್ನು ಅನುಷ್ಠಾನಗೊಳಿಸಲಾಯಿತು.

ಸಹಕಾರಿ ಚಳುಚಳಿಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಮತ್ತು ಅದನ್ನು ಸುಭದ್ರಗೊಳಿಸುವುದಕ್ಕಾಗಿ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ವಿನಿಯೋಗವಾದಾಗ್ಯೂ ಅದು ನಿರೀಕ್ಷೆಯ ಫಲಿತಾಂಶಗಳನ್ನು ಸಾಧಿಸಲು ವಿಫಲವಾಗಿದೆ ಎಂಬುದನ್ನು ಮನಗಂಡ ಕೇಂದ್ರ ಯೋಜನಾ ಆಯೋಗವು ಅರ್ಧನಾರೀಶ್ವರನ್ ಸಮಿತಿಯನ್ನು ನೇಮಿಸಿತು. 1982ರಲ್ಲಿ ತನ್ನ ವರದಿ ಸಲ್ಲಿಸಿದ ಸಮಿತಿಯು ಸಹಕಾರಿ ಚಳುವಳಿ ದುರ್ಬಲವಾಗುವುದಕ್ಕೆ ಸರ್ಕಾರದ ಅತಿಯಾದ ಹಸ್ತಕ್ಷೇಪವೇ ಕಾರಣ ಎಂದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಚೌಧರಿ ಬ್ರಹ್ಮಪ್ರಕಾಶ್ ಅವರ ನೇತೃತ್ವದಲ್ಲಿ ಇನ್ನೊಂದು ಆಯೋಗವನ್ನು ನೇಮಿಸಿತು. ಬ್ರಹ್ಮಪ್ರಕಾಶ್ ಆಯೋಗವು 1991ರಲ್ಲಿ ಒಂದು ಮಾದರಿ ಸಹಕಾರಿ ಸಂಘಗಳ ಕಾಯ್ದೆಯನ್ನು ರೂಪಿಸಿತು. ಸಹಕಾರಿ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆಗೊಳಿಸಿ ಸದಸ್ಯರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಈ ಕಾಯ್ದೆಯ ಅಂಶಗಳನ್ನು ತಮ್ಮ ಕಾನೂನುಗಳಲ್ಲಿ ಅಡಕಗೊಳಿಸುವಂತೆ ಕೋರಿ ಇನ್ನು ಎಲ್ಲ ರಾಜ್ಯಗಳಿಗೆ ಕಳಿಸಿಕೊಡಲಾಯಿತು.

ಪರಿಣಾಮವಾಗಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ರೂಪುಗೊಂಡಿತು. ಈ ಕಾನೂನು 2001 ಜನವರಿ 1ರಿಂದ ಜಾರಿಗೆ ಬಂತು. 2012ರಲ್ಲಿ ಈ ಕಾನೂನಿಗೆ ತಿದ್ದುಪಡಿಯನ್ನು ಕೂಡ ತರಲಾಯಿತು. 1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ವಿವಿಧ ಉದ್ದೇಶಗಳಿಗಾಗಿ 20ಕ್ಕೂ ಹೆಚ್ಚು ಬಾರಿ ತಿದ್ದುಪಡಿಗೆ ಒಳಗಾಗಿದೆ. ಕರ್ನಾಟಕದ ಒಟ್ಟಾರೆ ಸಹಕಾರ ಚಳವಳಿಗೆ ಈ ಎರಡು ಕಾಯ್ದೆಗಳೇ ಮೂಲ ಆಧಾರ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959:
1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯು ೧೫ ಅಧ್ಯಾಯಗಳನ್ನೂ, 132 ವಿಧಿಗಳನ್ನೂ ಹೊಂದಿದೆ. ಮೊದಲನೇ ಅಧ್ಯಾಯವು ಪೀಠಿಕಾ ಭಾಗವಾಗಿದ್ದು ಕಾಯ್ದೆಯಲ್ಲಿ ಬಳಸಲಾದ ವಿವಿಧ ಪಾರಿಭಾಷಿಕ ಪದಗಳ ವ್ಯಾಖ್ಯಾನವನ್ನು ನೀಡುತ್ತದೆ. ಅಲ್ಲದೆ, ಸಹಕಾರ ಸಂಘಗಳ ರಿಜಿಸ್ಟ್ರಾರ್, ಹೆಚ್ಚುವರಿ ರಿಜಿಸ್ಟ್ರಾರ್, ಸಹ ರಿಜಿಸ್ಟ್ರಾರ್, ಉಪ ರಿಜಿಸ್ಟ್ರಾರ್, ಸಹಾಯಕ ರಿಜಿಸ್ಟ್ರಾರ್ ಮತ್ತಿತರ ಅಧಿಕಾರಿಗಳ ನೇಮಕಾತಿ ಕುರಿತು ತಿಳಿಸುತ್ತದೆ.

ಸಹಕಾರ ಸಂಘಗಳ ನೋಂದಣಿಯ ನಿಯಮಗಳನ್ನು ವಿವರಿಸುವ ಎರಡನೇ ಅಧ್ಯಾಯವು ಸಹಕಾರ ತತ್ತ್ವಗಳಿಗನುಸಾರವಾಗಿ ತನ್ನ ಸದಸ್ಯರ ಅಥವಾ ಸಾರ್ವಜನಿಕರ ಆರ್ಥಿಕ ಹಿತಗಳು ಅಥವಾ ಸಾಮಾನ್ಯ ಕಲ್ಯಾಣ ಅಭಿವೃದ್ಧಿಯನ್ನು ತನ್ನ ಉದ್ದೇಶವಾಗಿಟ್ಟುಕೊಂಡು ಸಹಕಾರ ಸಂಘವನ್ನು ನೋಂದಾಯಿಸಬಹುದು ಎನ್ನುತ್ತದೆ. ಸಾರ್ವಜನಿಕರ ಆರ್ಥಿಕ ಹಿತವೇ ಸಹಕಾರ ಸಂಘಗಳ ಮೂಲ ಉದ್ದೇಶವಾಗಿರಬೇಕು ಎಂಬ ಚಳುವಳಿಯ ಆಶಯ ಇಲ್ಲಿ ಸ್ಪಷ್ಟವಾಗುತ್ತದೆ. ಮೂರನೇ ಅಧ್ಯಾಯವು ಸಹಕಾರ ಸಂಘದ ಸದಸ್ಯರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವಿವರಿಸುತ್ತದೆ.

ನಾಲ್ಕನೇ ಅಧ್ಯಾಯವು ಸಹಕಾರ ಸಂಘಗಳ ವ್ಯವಸ್ಥಾಪನೆಯ ನಿಯಮಗಳನ್ನು ತಿಳಿಸುತ್ತದೆ. 26ನೇ ವಿಧಿಯಲ್ಲಿ ಬರುವ ಸಹಕಾರ ಸಂಘಗಳ ಅಂತಿಮ ಅಧಿಕಾರವು ಸರ್ವಸದಸ್ಯರಲ್ಲಿ ನಿಹಿತವಾಗಿರತಕ್ಕುದು ಎಂಬ ಉಲ್ಲೇಖ ವಾಸ್ತವವಾಗಿ ಒಟ್ಟಾರೆ ಸಹಕಾರ ಚಳುವಳಿಯ ಉದ್ದೇಶವನ್ನು ಎತ್ತಿಹಿಡಿಯುತ್ತದೆ. ಕೈಗಾರಿಕಾ ಬಂಡವಾಳ ಹೂಡಿಕೆ, ಹಣಕಾಸು ನೆರವು ಅಥವಾ ಮಾರಾಟ ಮತ್ತು ಆಡಳಿತ ನಿರ್ವಹಣೆಯಲ್ಲಿ ಪ್ರಾವೀಣ್ಯತೆ ಸೇರಿದಂತೆ ಸರ್ಕಾರದ ಯಾವುದೇ ಉದ್ಯಮದೊಡನೆ ಸಹಕಾರ ಸಂಘಗಳು ಸಹೋದ್ಯಮ ನಡೆಸಬಹುದು ಎಂಬ ಸೂಚನೆಯೂ ಇಲ್ಲಿದೆ.

ಐದನೇ ಅಧ್ಯಾಯದಲ್ಲಿ ಸಹಕಾರ ಸಂಘಗಳ ವಿಶೇಷಾಧಿಕಾರಗಳ ಉಲ್ಲೇಖವಿದ್ದರೆ, ಆರನೇ ಅಧ್ಯಾಯವು ಸಂಘಗಳ ಸಮಿತಿಗಳ ಸದಸ್ಯರ ಚುನಾವಣೆ ನಡೆಸುವ ವಿಧಾನವನ್ನು ತಿಳಿಸುತ್ತದೆ. ಸಹಕಾರ ಸಂಘಗಳನ್ನು ಪ್ರವರ್ಧಿಸುವುದು ರಾಜ್ಯ ಸರ್ಕಾರದ ಒಂದು ಕರ್ತವ್ಯ ಎಂದು ಆರನೇ ಅಧ್ಯಾಯ ಸೂಚಿಸುತ್ತದೆ. ರಾಜ್ಯದಲ್ಲಿ ಸಹಕಾರಿ ಕೃಷಿಗೆ ಉತ್ತೇಜನವೂ ಸೇರಿ ಸಹಕಾರ ಚಳುವಳಿಯನ್ನು ಉತ್ತೇಜಿಸುವುದು ಮತ್ತು ಈ ದಿಸೆಯಲ್ಲಿ ಅವಶ್ಯವಾಗಿರಬಹುದಾದಂಥ ಕ್ರಮಗಳನ್ನು ಕೈಗೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿರತಕ್ಕುದು ಎನ್ನುತ್ತದೆ ಕಾನೂನಿನ 40ನೇ ವಿಧಿ.

ಏಳನೇ ಅಧ್ಯಾಯವು ಸಹಕಾರ ಸಂಘದ ಸ್ವತ್ತುಗಳು ಮತ್ತು ನಿಧಿಗಳ ಬಗ್ಗೆ, ಎಂಟನೇ ಅಧ್ಯಾಯವು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ, ವಿಚಾರಣೆ, ಪರಿಶೀಲನೆ ಮತ್ತು ಅಧಿಭಾರಗಳ ಬಗ್ಗೆ, ಒಂಭತ್ತನೇ ಅಧ್ಯಾಯವು ವಿವಾದಗಳ ಇತ್ಯರ್ಥದ ಬಗ್ಗೆ, ಹತ್ತನೇ ಅಧ್ಯಾಯವು ಸಹಕಾರ ಸಂಘಗಳ ಸಮಾಪನ ಮತ್ತು ವಿಸರ್ಜನೆ ವಿಧಾನಗಳ ಬಗ್ಗೆ, ಹನ್ನೊಂದನೇ ಅಧ್ಯಾಯವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಕಾರ್ಯವಿಧಾನದ ಬಗ್ಗೆ, ಹನ್ನೆರಡನೇ ಅಧ್ಯಾಯವು ಐತೀರ್ಪುಗಳು, ಡಿಕ್ರಿಗಳು, ಆದೇಶಗಳು ಮತ್ತು ತೀರ್ಮಾನಗಳ ಅನುಷ್ಠಾನದ ಬಗ್ಗೆ ಬೆಳಕು ಚೆಲ್ಲುತ್ತದೆ.

ಅಪೀಲುಗಳು, ಪುನರೀಕ್ಷಣೆ ಹಾಗೂ ಪುನರ್ವಿಲೋಕನದ ಬಗ್ಗೆ ಹೇಳುವ ಹದಿಮೂರನೇ ಅಧ್ಯಾಯವು ರಿಸರ್ವ್ ಬ್ಯಾಂಕಿನ ಪೂರ್ವಾನುಮತಿ ಪಡೆದು ಸಹಕಾರ ಬ್ಯಾಂಕನ್ನು ಸಮಾಪನಗೊಳಿಸಲು ಆದೇಶಿಸಿದ್ದರೆ ಅಥವಾ ಸಹಕಾರ ಬ್ಯಾಂಕಿನ ಸಮ್ಮಿಲನ ಅಥವಾ ಪುನರ್ ಸಂಘಟನೆಯ ಯೋಜನೆಯನ್ನು ಜಾರಿಗೆ ತಂದಿದ್ದರೆ; ಅಥವಾ ಸಹಕಾರ ಸಂಘದ ಸಮಿತಿಯನ್ನು ತೆಗೆದುಹಾಕುವ ಮತ್ತು ಆಡಳಿತಗಾರನನ್ನು ಮತ್ತು ವಿಶೇಷಾಧಿಕಾರಿಯನ್ನು ನೇಮಿಸುವ ಆದೇಶ ಮಾಡಿದ್ದರೆ ಯಾವುದೇ ಪುನರೀಕ್ಷಣೆಗೆ ಅವಕಾಶವಿಲ್ಲ. ರಿಸರ್ವ್ ಬ್ಯಾಂಕಿನ ಮಂಜೂರಾತಿ ಅಥವಾ ಕೋರಿಕೆಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ ಎಂದು ಸ್ಪಷ್ಪಪಡಿಸುತ್ತದೆ.

ಸಹಕಾರ ಸಂಘಗಳ ವ್ಯವಹಾರದಲ್ಲಿ ಸಂಭವಿಸಬಹುದಾದ ತಪ್ಪುಗಳಿಗೆ ದಂಡನೆಯನ್ನು ಕಾಯ್ದೆಯ 14ನೇ ಅಧ್ಯಾಯ ವಿವರಿಸುತ್ತದೆ. ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಸಂಸ್ಥೆ ’ಸಹಕಾರ’ ಎಂಬ ಪದವನ್ನು ಬಳಸುವುದು ಕೂಡ ದಂಡನಾರ್ಹ ಅಪರಾಧ ಎಂದೇ ಕಾಯ್ದೆ ಹೇಳುತ್ತದೆ. ಸಹಕಾರ ಸಂಘವಲ್ಲದ ಇತರ ಯಾವನೇ ವ್ಯಕ್ತಿಯು ಸಹಕಾರ ಎಂಬ ಪದವು ಅಥವಾ ಭಾರತದ ಯಾವುದೇ ಭಾಷೆಯಲ್ಲಿ ಅದಕ್ಕೆ ಸಮಾನವಾದ ಪದವು ಯಾವ ಹೆಸರಿನ ಅಥವಾ ಶೀರ್ಷಿಕೆಯ ಭಾಗವಾಗಿರುವುದೋ ಆ ಯಾವುದೇ ಹೆಸರಿನ ಅಥವಾ ಶೀರ್ಷಿಕೆಯ ಅಡಿಯಲ್ಲಿ ವ್ಯಾಪಾರ ಮಾಡತಕ್ಕುದಲ್ಲ ಎಂದು ಎಚ್ಚರಿಸುತ್ತದೆ.

ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997:
2001ರಲ್ಲಿ ಜಾರಿಗೆ ಬಂದ 1997ರ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯು ಸದಸ್ಯರಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಡುವ ಉದ್ದೇಶವನ್ನು ಹೊಂದಿದೆ. ಇದರ ಮೊದಲ ಐದು ಅಧ್ಯಾಯಗಳು ವ್ಯಾಖ್ಯಾನ, ಸಂಘಗಳ ನೋಂದಣಿ ನಿಯಮ, ನಿಧಿ ಸಂಗ್ರಹ ಮತ್ತು ಹೂಡಿಕೆ, ಲೆಕ್ಕಪತ್ರಗಳ ನಿರ್ವಹಣೆ ಇತ್ಯಾದಿಗಳ ಬಗ್ಗೆ ವಿವರಿಸಿದರೆ ಆರನೇ ಅಧ್ಯಾಯವು ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಂಘಗಳನ್ನು ಫೆಡರಲ್ ಕೋಆಪರೇಟಿವ್ಸ್ ಸೂಪರ್‌ಸೀಡ್ ಮಾಡುವ ಅವಕಾಶಗಳ ಬಗ್ಗೆ ಹಾಗೂ ಅಗತ್ಯ ಕಂಡುಬಂದಾಗ ವಿಶೇಷಾಧಿಕಾರಿಯನ್ನು ನೇಮಿಸುವ ಬಗ್ಗೆ ತಿಳಿಸುತ್ತದೆ.

ಏಳನೇ ಅಧ್ಯಾಯವು ವಿವಾದಗಳ ಇತ್ಯರ್ಥಗಳ ಬಗ್ಗೆ ಮತ್ತು ಎಂಟನೇ ಅಧ್ಯಾಯವು ಸಂಘಗಳ ಸಮಾಪನದ ನಿಯಮಗಳನ್ನು ವಿವರಿಸುತ್ತದೆ. ಒಂಭತ್ತನೇ ಅಧ್ಯಾಯವು ಸೌಹಾರ್ದ ಸಹಕಾರಿ ಸಂಘಗಳ ಒಟ್ಟಾರೆ ಅಭಿವೃದ್ಧಿಗಾಗಿ ರಾಜ್ಯಮಟ್ಟದಲ್ಲಿ 'ಫೆಡರಲ್ ಕೋಆಪರೇಟಿವ್’ ಒಂದನ್ನು ಸ್ಥಾಪಿಸುವ ಬಗ್ಗೆ ಹೇಳುತ್ತಾ ಸಹಕಾರಿ ರಂಗದ ಏಳ್ಗೆಗಾಗಿ ಅದು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡುತ್ತದೆ. ಸಹಕಾರಿ ಚಳುವಳಿಯ ಯಶಸ್ಸಿಗೆ ಪೂರಕವಾದ ಸಹಕಾರಿ ತತ್ತ್ವಗಳನ್ನು ಸೂಚಿಸುವ ಹತ್ತನೇ ಅಧ್ಯಾಯವು ಈ ಕಾಯ್ದೆಯ ಒಂದು ವಿಶೇಷ ಭಾಗ. ಅದರ ಪ್ರಮುಖ ಅಂಶಗಳೆಂದರೆ:

  • ಸಹಕಾರಿ ಸಂಘಗಳು ಲಿಂಗ, ಸಾಮಾಜಿಕ, ಜನಾಂಗೀಯ, ರಾಜಕೀಯ ಹಾಗೂ ಧಾರ್ಮಿಕ ಬೇಧಭಾವಗಳಿಲ್ಲದೆ ಎಲ್ಲರಿಗೂ ಮುಕ್ತವಾಗಿರುವ ಸ್ವಯಂಸೇವಾ ಸಂಸ್ಥೆಗಳು.
  • ಸಹಕಾರಿ ಸಂಘಗಳು ತಮ್ಮದೇ ಸದಸ್ಯರಿಂದ ನಿಯಂತ್ರಿಸಲ್ಪಡುವ ಪ್ರಜಾಪ್ರಭುತ್ವ ಮಾದರಿಯ ಸಂಸ್ಥೆಗಳು. ಪ್ರತಿಯೊಬ್ಬ ಸದಸ್ಯನಿಗೂ ಸಮಾನ ಮತದಾನದ ಹಕ್ಕು ಇರತಕ್ಕುದು.
  • ಸಹಕಾರಿ ಸಂಘದ ಬಂಡವಾಳಕ್ಕೆ ಪ್ರತಿ ಸದಸ್ಯನೂ ಸಮಾನ ಕೊಡುಗೆ ನೀಡಬೇಕು ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲಿ ನಿಯಂತ್ರಿಸಬೇಕು.
  • ಸಹಕಾರಿ ಸಂಘಗಳು ಸದಸ್ಯರಿಂದ ನಿಯಂತ್ರಿಸಲ್ಪಡುವ ಸ್ವಾಯತ್ತ, ಸ್ವಸಹಾಯ ಸಂಸ್ಥೆಗಳಾಗಿವೆ. ನಿಧಿ ಸಂಗ್ರಹಕ್ಕಾಗಿ ಸರ್ಕಾರವೂ ಸೇರಿದಂತೆ ಇತರ ಸಂಸ್ಥೆಗಳೊಂದಿಗೆ ಅವರು ಒಪ್ಪಂದ ಮಾಡಿಕೊಂಡರೂ ಸಂಘದ ಸ್ವಾಯತ್ತತೆಯೂ ಸದಸ್ಯರಲ್ಲೇ ಉಳಿಯಬೇಕು.
  • ಸಹಕಾರಿ ಸಂಘಗಳು ತಮ್ಮ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ವ್ಯವಸ್ಥಾಪಕರು ಹಾಗೂ ಉದ್ಯೋಗಿಗಳಿಗೆ ತರಬೇತಿ ನೀಡಬೇಕು. ಸಹಕಾರದ ಸ್ವರೂಪ ಹಾಗೂ ಲಾಭಗಳ ಬಗ್ಗೆ ಸಾರ್ವಜನಿಕರಿಗೆ, ಮುಖ್ಯವಾಗಿ ಯುವಕರಿಗೆ ತಿಳುವಳಿಕೆ ನೀಡಬೇಕು.

ಸಹಕಾರಿ ಬ್ಯಾಂಕುಗಳಿಗೆ ವಿಮಾ ಸುರಕ್ಷೆಯನ್ನು ಒದಗಿಸುವುದು ಈ ಕಾಯ್ದೆಯ ಇನ್ನೊಂದು ಪ್ರಮುಖ ಲಕ್ಷಣ. ಸಹಕಾರಿ ಬ್ಯಾಂಕುಗಳು ಸಮಾಪನಗೊಳ್ಳುವ ಅನಿವಾರ್ಯತೆ ಬಂದರೆ ಸೂಕ್ತ ವಿಮಾ ಸೌಲಭ್ಯವನ್ನು ಪಡೆಯುವ ಬಗ್ಗೆ 10ಎ ಅಧ್ಯಾಯವು ವಿವರಿಸುತ್ತದೆ. ಕೊನೆಯ ಅಧ್ಯಾಯವು ಅಪರಾಧಗಳು ಮತ್ತು ದಂಡನೆಗಳ ಬಗ್ಗೆ ತಿಳಿಸುತ್ತದೆ.

ಇತರೆ ಶಾಸನಾತ್ಮಕ ಪ್ರಕಾರ್ಯಗಳು:
ಮೇಲೆ ವಿವರಿಸಿದ ಕಾಯ್ದೆಗಳಲ್ಲದೆ ಕರ್ನಾಟಕದಲ್ಲಿ ಸಹಕಾರ ಚಳುವಳಿಯನ್ನು ಇನ್ನೂ ಅನೇಕ ಶಾಸನಾತ್ಮಕ ಮತ್ತು ಅರೆನ್ಯಾಯಾಂಗದ ಪ್ರಕಾರ್ಯಗಳು ನಿರ್ದೇಶಿಸುತ್ತವೆ. ಅವುಗಳಲ್ಲಿ ಪ್ರಮುಖವಾದವೆಂದರೆ:

  • ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು 1960
  • ಕರ್ನಾಟಕ ಲೇವಾದೇವಿಗಾರರ ಕಾಯ್ದೆ 1961 ಮತ್ತು ಕರ್ನಾಟಕ ಲೇವಾದೇವಿಗಾರರ ನಿಯಮಗಳು 1965.
  • ಕರ್ನಾಟಕ ಗಿರವಿದಾರರ ಕಾಯ್ದೆ 1961 ಮತ್ತು ನಿಯಮಗಳು 1966.
  • 1982ರ ಚೀಟಿ ನಿಧಿಗಳ ಕಾಯ್ದೆ ಮತ್ತು ಚೀಟಿನಿಧಿಗಳ (ಕರ್ನಾಟಕ) ನಿಯಮಾವಳಿ 1983.
  • ಕರ್ನಾಟಕ ಋಣ ಪರಿಹಾರ ಕಾಯ್ದೆ 1980.
  • ಕರ್ನಾಟಕ ಪಬ್ಲಿಕ್ ಮನಿ (ರಿಕವರಿ ಆಫ್ ಡ್ಯೂಸ್) ಕಾಯ್ದೆ 1980.
  • ಕರ್ನಾಟಕ ಅಗ್ರಿಕಲ್ಚರಲ್ ಕ್ರೆಡಿಟ್ ಆಪರೇಶನ್ಸ್ & ಮಿಸಲೇನಿಯಸ್ ಪ್ರಾವಿಶನ್ಸ್ ಕಾಯ್ದೆ 1974.
  • ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ 2004.

ಅನುಷ್ಠಾನ ಮತ್ತು ಯಶಸ್ಸು:
ನಮ್ಮ ದೇಶದ ವಿವಿಧ ಕ್ಷೇತ್ರಗಳ ಒಟ್ಟಾರೆ ಕಾರ್ಯನಿರ್ವಹಣೆಗೆ ಸಹಕಾರ ಕ್ಷೇತ್ರವೇ ಆಧಾರ ಎಂಬುದು ಆಯಾ ಕ್ಷೇತ್ರಗಳನ್ನು ನೋಡಿದಾಗ ಸಿದ್ಧವಾಗುತ್ತದೆ. ದೇಶದ ಕೃಷಿಸಾಲದ ಶೇ. 46 ಭಾಗ, ರಸಗೊಬ್ಬರ ವಿತರಣೆಯ ಶೇ. 36 ಪಾಲು, ರಸಗೊಬ್ಬರ ಉತ್ಪಾದನೆಯ ಶೇ. 27, ಸಕ್ಕರೆ ಉತ್ಪಾದನೆಯ ಶೇ. 59, ಗೋಧಿ ಸಂಗ್ರಹದ ಶೇ. 31, ಪಶು ಆಹಾರ ಉತ್ಪಾದನೆಯ ಶೇ 50, ಐಸ್‌ಕ್ರೀಂ ಉತ್ಪಾದನೆಯ ಶೇ. 50, ಖಾದ್ಯ ತೈಲ ಉತ್ಪಾದನೆಯ ಶೇ. 50, ಕೈಮಗ್ಗದ ಬಟ್ಟೆಗಳ ಉತ್ಪಾದನೆಯ ಶೇ 55, ರಬ್ಬರ್ ಸಂಸ್ಕರಣೆಯ ಶೇ. 95 ಭಾಗ ಸಹಕಾರಿ ರಂಗದ ಕೊಡುಗೆಯೇ ಆಗಿದೆ.

ಆರ್ಥಿಕವಾಗಿ ಹಿಂದುಳಿದು ಬಿಡಿಬಿಡಿಯಾಗಿರುವ ದುರ್ಬಲ ಜನರನ್ನು ಒಟ್ಟಾಗಿ ಸೇರಿಸಿ ಸಬಲರನ್ನಾಗಿಸುವುದೇ ಸಹಕಾರ ಚಳುವಳಿಯ ಮೂಲ ಉದ್ದೇಶವಾಗಿತ್ತು. ಭಾರತದ ಕೋಟ್ಯಂತರ ಜನರ ಅದರಲ್ಲೂ ಸಣ್ಣ ಮತ್ತು ಅರಿಸಣ್ಣ ರೈತರು ಮತ್ತು ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗಗಳು ಅಂದರೆ ಕೈಮಗ್ಗ ನೇಕಾರರು, ಮೀನುಗಾರರು, ಕುಶಲಕರ್ಮಿಗಳು ಮುಂತಾದವರ ಏಳಿಗೆ ಅದರ ಮುಖ್ಯ ಗುರಿಯಾಗಿತ್ತು. ಸಹಕಾರ ಚಳುವಳಿಯ ಯಶಸ್ಸಿನ ಬಗ್ಗೆ ಅದರ ಕನಸು ಕಂಡವರ ಕಲ್ಪನೆಗಳು ಇನ್ನೂ ವಿಶಿಷ್ಟವಾಗಿದ್ದರೂ ಭಾರತದ ಜನಜೀವನದ ಮೇಲೆ ಈ ಚಳುವಳಿ ಬೀರಿದ ಪರಿಣಾಮ ತುಂಬ ದೊಡ್ಡದೇ. ಕಳೆದ ಶತಮಾನದಲ್ಲಿ ಸ್ವಾತಂತ್ರ್ಯ ಚಳುವಳಿ ಬಿಟ್ಟರೆ ಭಾರತದ ಜನಸಾಮಾನ್ಯರ ಬದುಕಿನ ಮೇಲೆ ಅತಿಹೆಚ್ಚಿನ ಪರಿಣಾಮ ಬೀರಿದ ಹೆಗ್ಗಳಿಕೆ ಸಹಕಾರ ಚಳುವಳಿಗೆ ಸಲ್ಲುತ್ತದೆ.

ಒಂದು ವ್ಯವಸ್ಥೆಯ ಯಶಸ್ಸು ಅಥವಾ ವೈಫಲ್ಯ ನಿಂತಿರುವುದು ಅದರ ಅನುಷ್ಠಾನದಲ್ಲೇ ಹೊರತು ಆದರ್ಶಗಳಲ್ಲಿ ಅಲ್ಲ. ಆದ್ದರಿಂದ ಸಹಕಾರಿ ರಂಗ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂಬ ಅಭಿಪ್ರಾಯವಿದ್ದರೆ ಅದಕ್ಕೆ ಕಾರಣ ಕಾನೂನು ಹಾಗೂ ತತ್ತ್ವಗಳ ಅಸಮರ್ಪಕ ಅನುಷ್ಠಾನ ಮತ್ತು ಅದರ ಹಿಂದಿನ ಪಟ್ಟಭದ್ರ ಹಿತಾಸಕ್ತಿಗಳೇ ಹೊರತು ಅದು ಮೂಲತಃ ಕಾನೂನಿನ ಅಥವಾ ತತ್ತ್ವಗಳ ಸಮಸ್ಯೆ ಅಲ್ಲ. ನಮ್ಮ ಮುಂದಿನ ಗಮನವಿರಬೇಕಾದ್ದು ನಿಯಮಾವಳಿಗಳ ಪರಿಣಾಮಕಾರಿ ಜಾರಿಯ ಬಗ್ಗೆ. ಕಾನೂನಿಗಿಂತಲೂ ಸಮಾಜದ ಮನೋಭಾವವೇ ಹೆಚ್ಚು ಮುಖ್ಯವಾದದ್ದು ಎಂಬುದನ್ನು ಮರೆಯಲಾಗದು.
- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಮೇ 16, 2020

ನಾಳೆಗಾಗಿ ಕಾಯಬೇಡಿ, ಇಂದೇ ಮಾಡಿಬಿಡಿ | ಸರಿ ಎನಿಸಿದ್ದನ್ನು ಮಾಡಲು ಹಿಂಜರಿಕೆ ಬೇಡ

 ಮೇ 16-22, 2020ರ ‘ಬೋಧಿವೃಕ್ಷ’ದಲ್ಲಿ ಪ್ರಕಟವಾದ ಬರೆಹ

ಸಮುದ್ರಸ್ನಾನಕ್ಕೆಂದು ಹೋದವನೊಬ್ಬ ತೆರೆ ಮುಗಿಯಲಿ ಎಂದು ಜೀವಮಾನವಿಡೀ ಕಾದನಂತೆ. ಅತ್ತ ಸ್ನಾನವೂ ಆಗಲಿಲ್ಲ, ಇತ್ತ ಜೀವನದಲ್ಲಿ ಬೇರೇನನ್ನೂ ಮಾಡಲಿಲ್ಲ. ಇದು ಸ್ನಾನಕ್ಕೆ ಹೋದ ಪುಣ್ಯಾತ್ಮನೊಬ್ಬನ ಕಥೆ ಮಾತ್ರ ಅಲ್ಲ. ಹಲವು ಬಾರಿ ನಮ್ಮೆಲ್ಲರದೂ.

ಏನೋ ಒಂದು ಕೆಲಸ ಮಾಡಬೇಕೆಂದುಕೊಂಡಿರುತ್ತೇವೆ. ತಕ್ಷಣಕ್ಕೆ ಆರಂಭಿಸುವುದಿಲ್ಲ. ಬಹುತೇಕ ಬಾರಿ ಮನಸ್ಸಿಗೆ ಬರುವ ಮೊದಲ ಯೋಚನೆಯೇ ‘ನಾಳೆಯೇ ಈ ಕೆಲಸ ಆರಂಭಿಸಬೇಕು’ ಎಂಬುದು. ವಾಸ್ತವವಾಗಿ ಸಮಸ್ಯೆ ಇರುವುದೇ ‘ನಾಳೆ ಆರಂಭಿಸಬೇಕು’ ಎಂಬಲ್ಲೇ. ಈಗಲೇ ಶುರು ಮಾಡಿಬಿಡೋಣ ಎಂದುಕೊಂಡು ಕೆಲಸ ಆರಂಭಿಸುವವ ಅಲ್ಲೇ ಅರ್ಧ ತೇರ್ಗಡೆಯಾಗಿರುತ್ತಾನೆ.
 ಬೋಧಿವೃಕ್ಷ | ಮೇ 16-22, 2020

ಕೆಲವರು ‘ನ್ಯೂ ಇಯರ್ ರೆಸಲ್ಯೂಶನ್’ ಅಥವಾ ‘ಬರ್ತ್‍ಡೇ ರೆಸೊಲ್ಯುಶನ್’ ಮಾಡಿಕೊಳ್ಳುವ ಕ್ರಮ ಇದೆ. ಬೆಳಗ್ಗೆ ಬೇಗನೆ ಏಳುವುದು, ವಾಕ್ ಮಾಡುವುದು, ಯೋಗಾಭ್ಯಾಸ ಆರಂಭಿಸುವುದು, ಕಡಿಮೆ ಊಟ ಮಾಡುವುದು, ತೂಕ ಇಳಿಸಿಕೊಳ್ಳುವುದು, ತಿಂಗಳಿಗೊಂದಾದರೂ ಹೊಸ ಪುಸ್ತಕ ಓದುವುದು, ಸಮಯಕ್ಕೆ ಸರಿಯಾಗಿ ಕಚೇರಿ ತಲುಪುವುದು, ಇತ್ಯಾದಿ ಇತ್ಯಾದಿ. ಸಮಸ್ಯೆ ಯಾವುದೆಂದರೆ ಈ ಎಲ್ಲಾ ಹೇಳಿಕೆಗಳ ಪೂರ್ವದಲ್ಲಿ ‘ಇವತ್ತಿನಿಂದಲೇ’ ಎಂಬ ಪದ ಸೇರಿಸಿಕೊಳ್ಳದಿರುವುದು. ಅವರೇನಿದ್ದರೂ ‘ನಾಳೆಯಿಂದ’ ಆರಂಭಿಸುವವರು. ನಾಳೆ ಗಣಪತಿಗೆ ಮದುವೆ ಎಂಬ ಗಾದೆ ಕೇಳಿದ್ದೀರಲ್ಲ!

ಬದುಕಿನಲ್ಲಿ ಬದಲಾಗಬೇಕು ಎಂಬ ಆಸೆ ಅನೇಕ ಮಂದಿಗೆ ಇರುತ್ತದೆ. ಈ ರೆಸಲ್ಯೂಶನ್‍ಗಳ ಹಿಂದಿನ ಕಾರಣ ಬದಲಾಗಬೇಕು ಎಂಬ ಆಸೆಯೇ. ಬದಲಾವಣೆ ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ವಾಸ್ತವವಾಗಿ ಅದು ಆರಂಭವೇ ಆಗಿರುವುದಿಲ್ಲ. ಆಮೇಲೆ ಮಾಡೋಣ, ನಾಳೆ ಮಾಡೋಣ, ಇನ್ನೊಮ್ಮೆ ಮಾಡೋಣ, ಈಗ ಮೂಡ್ ಇಲ್ಲ, ಮನಸ್ಸು ಫ್ರೆಶ್ ಇಲ್ಲ, ಇನ್ನೂ ಸಾಕಷ್ಟು ದಿನ ಇದೆ, ಇತ್ಯಾದಿ ನಾವೇ ಸೃಷ್ಟಿಸಿಕೊಳ್ಳುವ ನೂರೆಂಟು ಕಾರಣಗಳಿಂದ ಈ ಬದಲಾಗುವ ಯೋಜನೆ ಅನುಷ್ಠಾನಕ್ಕೇ ಬರುವುದಿಲ್ಲ. ಇಂಗ್ಲಿಷಿನಲ್ಲಿ ಈ ವಿಳಂಬ ಪ್ರವೃತ್ತಿಗೆ ‘ಪ್ರೊಕ್ರಾಸ್ಟಿನೇಶನ್’ ಎಂಬ ಚಂದದ ಪದ ಇದೆ.

ಅನೇಕ ಮಂದಿಗೆ ತಾವು ಇಂಥದ್ದನ್ನೆಲ್ಲ ಮಾಡುವವರಿದ್ದೇವೆ ಎಂದು ಮೊದಲೇ ಘೋಷಿಸಿಕೊಳ್ಳುವ ಚಟ ಇರುತ್ತದೆ. ನಾನೊಂದು ಲೇಖನ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ, ನಾನೊಂದು ಬಿಸಿನೆಸ್ ಆರಂಭಿಸಬೇಕು ಅಂದುಕೊಂಡಿದ್ದೇನೆ,  ನಾನು ದೊಡ್ಡ ಸಾಧನೆ ಮಾಡಿ ಎಲ್ಲರಿಂದ ಭೇಷ್ ಅನಿಸಿಕೊಳ್ಳುತ್ತೇನೆ- ಎಂದು ಹೇಳುವವರು ಅಲ್ಲಲ್ಲಿ ಸಿಗುತ್ತಾರೆ. ಅವರು ವಾಸ್ತವವಾಗಿ ಯಾವುದನ್ನೂ ಮಾಡುವುದಿಲ್ಲ. ಜಗತ್ತು ಅರ್ಧ ಹಾಳಾಗಿರುವುದೇ ಹೀಗೆ ‘ಅಂದುಕೊಳ್ಳುವವ’ರಿಂದ. ಕುಣಿಯಬೇಕು ಅಂದುಕೊಂಡಾಗೆಲ್ಲ ನೆಲ ಡೊಂಕಾಗಿ ಕಂಡರೆ ಇನ್ನೇನು ಮಾಡಲು ಸಾಧ್ಯ?

‘ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಲೋಕದಲಿ ಆಡಿಯೂ ಮಾಡದವ ಅಧಮ’ ಎಂದು ಸರ್ವಜ್ಞ ಇವರನ್ನೆಲ್ಲ ನೋಡಿಯೇ ಹೇಳಿರುವುದು. ನಿಜವಾದ ಸಾಧಕರು ಮಾತಾಡುವುದು ಕಡಿಮೆ. ಉಳಿದವರಿಗೆ ಮಾತಾಡುವುದೇ ಸಾಧನೆ. ಬಡಾಯಿ ಕಡಿಮೆ ಮಾಡಿದರೆ ಕೆಲಸ ಮಾಡುವುದಕ್ಕೆ ಸಮಯವಾದರೂ ಸಿಗುತ್ತದೆ. ‘ಮನಸಾ ಚಿಂತಿತಂ ಕಾರ್ಯಂ, ವಾಚ್ಯಂ ನೈವ ಪ್ರಕಾಶಯೇತ್’ ಎಂದು ಹಳಬರು ಸುಮ್ಮನೇ ಹೇಳಿದ್ದಾರೆಯೇ?

ಮಾಡಬೇಕು ಅಂದುಕೊಂಡಿದ್ದನ್ನು ಮಾಡಿಯೇ ತೀರಬೇಕು. ಅದು ಆತ್ಮಸಾಕ್ಷಿಗೆ ಒಪ್ಪಿದರೆ, ನಾಲ್ವರು ಹಿರಿಯರಿಗೆ ಸರಿ ಎನ್ನಿಸಿದರೆ, ಮಾಡುವುದಕ್ಕೆ ಏನಡ್ಡಿ? ನಮ್ಮ ಸುತ್ತ ಇರುವ ಎಲ್ಲರಿಗೂ ನಮ್ಮ ನಿರ್ಧಾರಗಳು ಸರಿ ಎನಿಸಬೇಕಾಗಿಲ್ಲ. ಕೊಂಕು ನುಡಿಯುವವರು ಎಲ್ಲ ಕಡೆ, ಎಲ್ಲ ಕಾಲದಲ್ಲೂ ಇರುತ್ತಾರೆ. ನಾವು ನಮ್ಮ ಸಂತೃಪ್ತಿಗಾಗಿ ಮಾಡುವುದೇ ಆಗಿದ್ದರೆ ಬೇರೆಯವರ ಗೊಡವೆ ಏಕೆ? ಕಾರ್ಯವೊಂದನ್ನು ಮಾಡಿ ಪಶ್ಚಾತ್ತಾಪ ಪಡುವವರಿಗಿಂತ ಮಾಡದೆಯೇ ಪಶ್ಚಾತ್ತಾಪಪಡುವವರು ಲೋಕದಲ್ಲಿ ಹೆಚ್ಚಿಗೆ ಇದ್ದಾರಂತೆ.

ಮಾಡಬೇಕು ಅಂದುಕೊಂಡಿರುವ ಕೆಲಸಗಳನ್ನು ಮುಂದೂಡಲು ಪ್ರಮುಖ ಕಾರಣ ಆ ಕೆಲಸದ ಬಗೆಗಿರುವ ಸಣ್ಣ ಆತಂಕ. ಉದಾಹರಣೆಗೆ, ಪರೀಕ್ಷೆಗೆ ಓದಬೇಕು ಅಂದುಕೊಂಡಿರುವ ವಿದ್ಯಾರ್ಥಿ ಓದಲು ಆರಂಭಿಸದೆ ಇರಲು ಪ್ರಮುಖ ಕಾರಣ ತಾನು ಓದಬೇಕೆಂದುಕೊಂಡಿರುವ ವಿಷಯ ಕಠಿಣವಾಗಿದೆ ಮತ್ತು ಆ ಕಾರಣಕ್ಕೆ ಅರ್ಥವಾಗದು ಎಂಬ ಭಾವನೆ. ಲೇಖನ ಬರೆಯಬೇಕು ಅಂದುಕೊಂಡಿರುವ ವ್ಯಕ್ತಿ ಅದನ್ನು ಬರೆಯದೆ ಇರಲು ಕಾರಣ ತಾನು ಚೆನ್ನಾಗಿ ಬರೆಯಲಾರೆ, ಅದು ಓದಿದವರಿಗೆ ಇಷ್ಟವಾಗದಿದ್ದರೆ ಏನು ಗತಿ ಎಂಬ ಅಂತರಂಗದ ಆತಂಕ. ಅನೇಕ ‘ಪರ್ಪೆಕ್ಷನಿಸ್ಟ್’ಗಳಿಗೂ ಈ ಸಮಸ್ಯೆ ಇರುವುದುಂಟು. ಈ ಆತಂಕ ಮೂಡಿದಾಗಲೆಲ್ಲ ‘ಆಮೇಲೆ ಮಾಡಿದರಾಯ್ತು’, ‘ನಾಳೆ ಮಾಡೋಣ’ ಎಂದು ತಮಗೆ ತಾವೇ ಸಬೂಬು ಹೇಳಿಕೊಳ್ಳುವ ಪ್ರಸಂಗ ಬರುತ್ತದೆ. ಅವರಿಗೆ ಫೇಸ್‍ಬುಕ್, ವಾಟ್ಸಾಪುಗಳು ತಾತ್ಕಾಲಿಕ ನೆಮ್ಮದಿ ನೀಡುತ್ತವೆ.

ಬದ್ಧತೆಯೇ ಇಂತಹ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರ. ಮಾಡಬೇಕಿರುವ ಕೆಲಸಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳುವುದು ಮುಖ್ಯ ಅಲ್ಲ, ಮಾಡಬೇಕು ಎಂಬ ಅಂತರ್ಯದ ಗಟ್ಟಿತನ ಮುಖ್ಯ. ಇಂಥದ್ದನ್ನೆಲ್ಲ ಮಾಡಿಬಿಡುತ್ತೇನೆ ಎಂದು ಊರಿಗೆ ಡಂಗುರ ಸಾರಲು ನಾವೆಲ್ಲರೂ ರಾಜಕಾರಣಿಗಳಲ್ಲವಲ್ಲ? ಕೆಲವೊಮ್ಮೆ ನಮ್ಮ ನಿರ್ಧಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ಯಾರ ಬಳಿಯಲ್ಲಾದರೂ ಹೇಳಿಕೊಳ್ಳಬೇಕಾಗುತ್ತದೆ. ಆಗ ಅಂತರಂಗದ ಮಾತುಗಳಿಗೆ ಕಿವಿಕೊಡಬಲ್ಲ ಒಂದಿಬ್ಬರು ಆಪ್ತರು ಸಿಕ್ಕರೆ ಸಾಕು. ಮನಸ್ಸಿನ ಮಾತುಗಳಿಗೆ ಧ್ವನಿವರ್ಧಕ ಯಾಕೆ?

ಹಾಗೆಂದು ಅಂದುಕೊಂಡ ತಕ್ಷಣ ಕೆಲಸವೊಂದಕ್ಕೆ ಧುಮುಕಿಬಿಡುವುದೂ ಕೆಲವೊಮ್ಮೆ ಆತುರದ ನಿರ್ಧಾರವಾಗುತ್ತದೆ. ಅನುಷ್ಠಾನದ ಹಿಂದೆ ಸಾಕಷ್ಟು ಚಿಂತನೆ ಇರಬೇಕು. ಚಿಂತನೆಗೂ ಮುಂದೂಡುವ ಪ್ರವೃತ್ತಿಗೂ ವ್ಯತ್ಯಾಸ ಇದೆ. ಚಿಂತನೆಯಿಲ್ಲದೆ ಆರಂಭಿಸುವ ಕೆಲಸ ಅನೇಕ ಬಾರಿ ಆರಂಭಶೂರತನವಷ್ಟೇ ಆಗುತ್ತದೆ. ಯಾವುದೋ ಒಂದು ಯೋಚನೆ ಬಂದ ತಕ್ಷಣ ದಬದಬನೆ ಅದನ್ನು ಆರಂಭಿಸಿಬಿಡುವವರು ಇದ್ದಾರೆ. ಅವರು ಎರಡೇ ದಿನದಲ್ಲಿ ನಿವೃತ್ತಿ ಘೋಷಿಸುತ್ತಾರೆ. ಅಂಥವರು ಯಾವುದನ್ನೂ ಪೂರ್ತಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧವೇ.

ಡೆಡ್‍ಲೈನಿನಲ್ಲಿ ಕೆಲಸ ಮಾಡಬಲ್ಲವರು ಬೆರಳೆಣಿಕೆಯ ವೃತ್ತಿಪರರು ಮಾತ್ರ. ಆದ್ದರಿಂದ ಇನ್ನೂ ಸಮಯವಿದೆ ಎಂಬ ಭಾವನೆಯಿಂದ ಮೊದಲು ಹೊರಬರಬೇಕು. ಸಾಧ್ಯವಾದಷ್ಟೂ ಸದ್ದುಗದ್ದಲವಿಲ್ಲದೆ ಅಂದುಕೊಂಡದ್ದನ್ನು ಮಾಡಿಮುಗಿಸಬೇಕು. ಈ ಕೆಲಸವನ್ನು ಈಗಲೇ ಮಾಡುವುದರಿಂದ ದೊರೆಯಬಹುದಾದ ಯಶಸ್ಸಿನ ಕಲ್ಪನೆಯಿಂದ ಮನಸ್ಸಿಗೆ ಉತ್ಸಾಹವನ್ನು ತಂದುಕೊಳ್ಳಬೇಕು. ನಮ್ಮ ಸ್ನಾನಕ್ಕಾಗಿ ಸಮುದ್ರದ ತೆರೆಗಳು ಕಾಯುವುದಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಮೇ 9, 2020

ಅಮ್ಮನಿದ್ದಲ್ಲಿ ಬಡತನವಿಲ್ಲ

ಮೇ 10, 2020ರ 'ವಿಜಯವಾಣಿ'ಯಲ್ಲಿ ಪ್ರಕಟವಾದ ಬರೆಹ

ಅಮ್ಮ ಇಲ್ಲದೆ ಒಂದು ವರ್ಷವೇ ಕಳೆದುಹೋಯಿತು. ಅಮ್ಮ ಇಲ್ಲದ ದಿನಗಳು ಹೇಗಿದ್ದವು? ಹಾಗೆ ಕೇಳಿಕೊಂಡರೆ ಏನೂ ಹೊಳೆಯುವುದಿಲ್ಲ. ಬರೀ ಕತ್ತಲೆಯಷ್ಟೇ ಕಾಣುತ್ತದೆ. ಹೌದು, ಆ ಪ್ರಶ್ನೆಗೆ ಅದಲ್ಲದೆ ಬೇರೆ ಉತ್ತರ ಇರುವುದು ಹೇಗೆ ಸಾಧ್ಯ? ಅಮ್ಮನೆಂಬ ಬೆಳಕು ಆರಿದ ಮೇಲೆ ಉಳಿಯುವುದು ಕತ್ತಲೆಯೇ ಅಲ್ಲವೇ?

'ನಿಮ್ಮ ಮನೆಯವರು ಇದ್ದಕ್ಕಿದ್ದಂತೆ ಆರೆಂಟು ವರ್ಷ ಹೆಚ್ಚಿಗೆ ವಯಸ್ಸಾದವರಂತೆ ಕಾಣುತ್ತಿದ್ದಾರೆ. ಏನಾಗಿದೆ? ಅಂತ ಕೊಲೀಗ್ ಒಬ್ಬರು ಕೇಳಿದರು’ ಅಂತ ಮನೆಯಾಕೆ ಹೇಳಿದಳು. ಆಗಿನ್ನೂ ಅಮ್ಮ ಹೋಗಿ ಒಂದು ತಿಂಗಳಾಗಿದ್ದಿರಬಹುದು ಅಷ್ಟೇ. ನಾನು ನಕ್ಕು ಸುಮ್ಮನಾದೆ. ತಲೆ ಬೋಳು ಮಾಡಿ, ಕ್ಲೀನ್ ಶೇವ್ ಮಾಡಿದ್ದರಿಂದ ಇರಬಹುದು ಅಂತ ಸೇರಿಸಿದೆ. ತಲೆಯ ಜೊತೆಗೆ ಮನಸ್ಸೂ ಬೋಳಾಗಿದ್ದನ್ನು ಬಿಡಿಸಿ ಹೇಳುವುದು ಹೇಗೆ? ಹೇಳದಿದ್ದರೂ ತಿಳಿದುಕೊಳ್ಳುವವಳು ಅವಳು.

ಅಮ್ಮ ತನ್ನೊಂದಿಗೆ ನನ್ನೊಳಗಿನ ಒಂದು ಹಿಡಿ ಪ್ರಕಾಶವನ್ನೂ ಜತೆಗೆ ಒಯ್ದಳೇನೋ ಎಂದು ಆಗಾಗ ಅನಿಸುವುದಿದೆ. ಆದರೆ ಅದು ಭ್ರಮೆಯೆಂದು ಮರುಕ್ಷಣ ಹೇಳುತ್ತದೆ ಒಳಮನಸ್ಸು. ಅಮ್ಮ ತನಗಾಗಿ ಏನನ್ನೂ ಇಟ್ಟುಕೊಂಡವಳಲ್ಲ. ಇನ್ನು ಆಕೆ ಅದಮ್ಯವಾಗಿ ಪ್ರೀತಿಸಿದ್ದ ಜೀವದಿಂದ ಏನನ್ನು ತಾನೇ ತೆಗೆದುಕೊಂಡು ಹೋದಾಳು? ಆದರೂ ಒಂದಿದೆ; ಹೇಗೆಂದ ಹಾಗೆ ಜಾರಿಬಿದ್ದು ಬರಿಗೈಯಲ್ಲಿ ಹೊರಟುಹೋಗಲು ಅದೇನು ಪದ್ಮಪತ್ರದ ಮೇಲಿನ ಜಲಬಿಂದುವಲ್ಲವಲ್ಲ! ಅವಳು ಅಮ್ಮ.

'ಒಬ್ಬನೇ ಬೇಕಾಬಿಟ್ಟಿ ಓಡುತ್ತೀ ಏರುತಗ್ಗು ರಸ್ತೆಯಲ್ಲಿ. ಬಿದ್ದು ಏಟು ಮಾಡಿಕೊಳ್ಳುತ್ತೀಯಾ. ಕೈ ಹಿಡಿದುಕೋ’ ಎಂದು ಎಳೆಯ ವಯಸ್ಸಿನಲ್ಲಿ ಅಮ್ಮ ಗದರಿದರೆ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಅದೇ ಅಮ್ಮ ಉಪಾಯವಾಗಿ 'ಒಬ್ಬಳೇ ನಡೆಯುವುದಕ್ಕೆ ನಂಗೆ ಭಯವಾಗುತ್ತೆ. ನನ್ನನ್ನೂ ಕೈ ಹಿಡಕೊಂಡು ಕರಕೊಂಡು ಹೋಗು’ ಅಂತ ಹೇಳಿದರೆ ಕೈ ಹಿಡಿದು ಜತೆಗೆ ಸಾಗುತ್ತಿದ್ದೆ. ಅಮ್ಮನಿಗೆ ನಾನು ಜತೆಗಿದ್ದರೆ ಧೈರ್ಯ ಎಂಬ ಮರ್ಜಿ ಬೇರೆ. ಮೊನ್ನೆಮೊನ್ನೆ ಕೊನೆಯಬಾರಿ ಅಮ್ಮನ ಕೈಹಿಡಿದಾಗ ಅವಳ ನಾಡಿ ಮಿಡಿತ ನಿಂತೇಹೋಗಿತ್ತು. ಆದರೆ ಆ ಕೈಯ್ಯಲ್ಲಿ ಇನ್ನೂ ಒಂದಷ್ಟು ಬಿಸುಪು ಉಳಿದಿರುವ ಭಾವ. ಅದು ಕೆಲವೇ ಕೆಲವು ಕ್ಷಣ ಮಾತ್ರ. ’'ಅಮ್ಮ ಇಲ್ಲ’ ಎಂದು ಕಣ್ಣುಕತ್ತಲು ಬಂದು ಅದೇ ಎದೆಯ ಮೇಲೆ ಒಂದು ನಿಮಿಷ ಮುಖವಿಟ್ಟು ಸುಧಾರಿಸಿಕೊಂಡು ಎದ್ದು ಮುಖ ನೋಡಿದರೆ ಆ ಕ್ಷಣವನ್ನು ನಂಬುವುದು ಸಾಧ್ಯವಿರಲಿಲ್ಲ. ಆಕೆಯ ಮುಖದಲ್ಲಿ ಪ್ರಾಣ ಮಿನುಗುತ್ತಿತ್ತು. ಒಂದೆರಡು ಗಂಟೆಯೇ ಕಳೆದಮೇಲೂ ಮುಖ ಕಪ್ಪಿಟ್ಟದ್ದೋ ಊದಿಕೊಂಡದ್ದೋ ಆಗಿರಲಿಲ್ಲ. ಈಗಷ್ಟೇ ಮುಖತೊಳೆದು ಹಣೆಯಲ್ಲಿ ಕಾಸಿನಗಲ ಕುಂಕುಮ ಇಟ್ಟುಕೊಂಡ ತೇಜ ಹಾಗೆಯೇ ಉಳಿದಿತ್ತು.

ಅಮ್ಮನ ಮುಖದಲ್ಲಿ ಹಾಗೊಂದು ಗತ್ತು ಮೊದಲಿನಿಂದಲೂ ಇತ್ತು. 'ನೀನು ಹಿಂದಿನ ಜನ್ಮದಲ್ಲಿ ಯಾವುದೋ ದೊಡ್ಡ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದೆ. ಅದಕ್ಕೂ ಹಿಂದೆ ಯಾವುದಾದರೂ ರಾಜ್ಯದ ಮಹಾರಾಣಿ ಆಗಿದ್ದಿರಬಹುದು’ ಎಂದು ನಾನು ಅವಳ ಕಾಲೆಳೆಯುತ್ತಿದ್ದುದಕ್ಕೆ ಲೆಕ್ಕವೇ ಇಲ್ಲ. ತೀರಾ ನಡೆಯುವುದಕ್ಕಾಗದೆ ಅಮ್ಮ ಕುಳಿತಲ್ಲೇ ಆದ ಮೇಲೂ ದಿನಕ್ಕೊಮ್ಮೆಯಾದರೂ 'ಏನು ಪ್ರಿನ್ಸಿಪಾಲರೇ’ ಎಂದು ಅವಳನ್ನು ತಮಾಷೆಮಾಡದ ದಿನಗಳಿರಲಿಲ್ಲ.

ತವರಿನಲ್ಲೂ ಅಮ್ಮನೇ ಎಲ್ಲ ಮಕ್ಕಳಿಗಿಂತ ಹಿರಿಯವಳಾಗಿದ್ದರಿಂದ ಆಕೆಗೆ ಅಂಥದೊಂದು ಗತ್ತು ಸಹಜವಾಗಿಯೇ ಬೆಳೆದುಬಂದಿರಬೇಕು. ಆ ಗತ್ತಿನಲ್ಲಿ ಅಹಂಕಾರ ಇರಲಿಲ್ಲ. ಅಪಾರ ಸ್ವಾಭಿಮಾನ ಇತ್ತು. ಮೂವತ್ತರ ಆಸುಪಾಸಿನಲ್ಲಿ ಮದುವೆಯಾಗುವವರೆಗೂ ಮನೆಯ ಹಿರಿಮಗಳಾಗಿ ಹಗಲೂ ಇರುಳೂ ತುಂಬಿದ ಮನೆಯ ಕೂಳಿನ ಒನಕೆಗೆ ತೋಳಾಗಿದ್ದ ಅಮ್ಮ ಎಲ್ಲರಿಗೂ ಪ್ರೀತಿಪಾತ್ರ ಜೀವವಾಗಿದ್ದಳೆಂಬುದನ್ನು ಕೇಳಿಬಲ್ಲೆ. ಅಜ್ಜ-ಅಜ್ಜಿಗೂ ಅಮ್ಮನೆಂದರೆ ಒಂದು ಹಿಡಿ ಪ್ರೀತಿ ಜಾಸ್ತಿ ಎಂಬುದನ್ನು ಎಳವೆಯಲ್ಲೂ ನೋಡಿ ಗ್ರಹಿಸಿದ್ದುಂಟು.

ವಿಜಯವಾಣಿ | 10-05-2020 | ಸಿಬಂತಿ ಪದ್ಮನಾಭ
ಮದುವೆಯಾಗಿ ಬಂದ ಮೇಲೂ ಅಮ್ಮನಿಗೇನೂ ಸುಖದ ಸುಪ್ಪತ್ತಿಗೆ ಕಾದಿರಲಿಲ್ಲ. ಕೆಲಸ ಮಾಡಿದರಷ್ಟೇ ಉಂಟು ಆ ದಿನದ ಊಟ. ಚಿಕ್ಕವಯಸ್ಸಿನಿಂದಲೂ ದುಡಿಮೆ ಸಜಹವಾದ್ದರಿಂದ ಅವಳಿಗೆ ಅದೇನು ಅನಿರೀಕ್ಷಿತವೂ ಆತಂಕಕಾರಿಯೂ ಆಗಿರಲಿಲ್ಲ. ಕಷ್ಟಗಳು ಬದುಕಿನ ಭಾಗವಾಗಿದ್ದಾಗ ಹೊಸ ಕಷ್ಟಗಳು ಸವಾಲುಗಳಾಗಿ ಮಾತ್ರ ಕಾಣುತ್ತವಷ್ಟೆ! ಸವಾಲುಗಳನ್ನೇ ಎದುರಿಸಿ ಮುಂದಕ್ಕೆ ನಡೆದವರ ಮುಖ ಮತ್ತು ನಡೆನುಡಿಯಲ್ಲಿ ಉಳಿದವರಿಗಿಂತ ಒಂದಷ್ಟು ಹೆಚ್ಚೇ ಸ್ವಾಭಿಮಾನವೇನೋ? 'ಎಂಟು ತಿಂಗಳ ಬಸುರಿ ನಾನು. ಹಸಿವು ಸ್ವಲ್ಪ ಹೆಚ್ಚೇ. ಹಸಿವಾಗುತ್ತದೆ, ಮೊದಲು ಊಟ ಮಾಡೋಣ ಎಂದರೂ ಕೇಳದೆ ಸುಡುಬಿಸಿಲಿನಲ್ಲಿ ಗೇರುಬೀಜದ ಸಸಿ ನೆಡಿಸಿದ್ದರು ನಿನ್ನ ಅಪ್ಪ’ ಎಂದು ವರ್ಷಕ್ಕೆರಡುಬಾರಿಯಾದರೂ ಅಮ್ಮ ನೆನಪಿಸಿಕೊಳ್ಳದೆ ಇರಲಿಲ್ಲ. ಹಾಗೆ ನೆನಪಿಸಿಕೊಳ್ಳುವಾಗ ಗಿಡಗಳೆಲ್ಲ ಮರಗಳಾಗಿ ಫಸಲಿನಿಂದ ತೊನೆಯುತ್ತಿದ್ದವು. ಪರಿಶ್ರಮ ಫಸಲಾಗಿ ಬೆಳೆದುನಿಂತಾಗ, ಮಕ್ಕಳು ದೊಡ್ಡವರಾಗಿ ಕಷ್ಟದ ದಿನಗಳು ಒಂದಷ್ಟು ಹಗುರವಾದಾಗ ಮನಸ್ಸಿನಲ್ಲಿ ಮೂಡುವ ನೆಮ್ಮದಿಯನ್ನು ಸ್ವಾಭಿಮಾನವೆಂದಲ್ಲದೆ ಬೇರೇ ಯಾವ ಹೆಸರಿನಿಂದಲೂ ಕರೆಯಲಾಗದು.

ದಿನಕ್ಕೆ ಹದಿನೆಂಟು ಬಾರಿ ಜಗಳವಾಡಿಕೊಂಡರೂ ಅಪ್ಪನಿಗೂ ಅಮ್ಮನ ಮೇಲೆ ವಿಶೇಷವಾದ ಗೌರವವಿತ್ತು. ಪ್ರೀತಿಗಿಂತಲೂ ಮಿಗಿಲಾದ ಅಭಿಮಾನ ಅದು. ಕಾಡಿನ ನಡುವಿನ ಬೋಳುಗುಡ್ಡದಲ್ಲಿ ಅಪ್ಪನ ಬೇಸಾಯದ ಗಾಥೆ ಪಲ್ಲವಿಸಿದರೂ ಅದರ ಶ್ರೇಯದ ಅರೆಪಾಲನ್ನು ಅಮ್ಮನಿಗೆ ನೀಡುವುದರಲ್ಲಿ ಅಪ್ಪ ಎಂದೂ ಜಿಪುಣತನ ತೋರಿದ್ದಿಲ್ಲ. ತಾನು ಬಹಳ ಕಷ್ಟಪಟ್ಟೆ ಎಂದು ಅವರೆಂದೂ ಹೇಳಿದ್ದಿಲ್ಲ. 'ನಿಮ್ಮ ಅಮ್ಮ ಪಟ್ಟ ಕಷ್ಟ ದೊಡ್ಡದು’ ಅದೇ ಅವರು ದೊಡ್ಡವರಾದ ಮೇಲೂ ನಮಗೆಲ್ಲ ಕೊಟ್ಟ ಚಿತ್ರ. ಒಂದು ತರಕಾರಿ ಬೀಜವನ್ನೂ ಅಪ್ಪ ಕೈಯ್ಯಾರೆ ಹಾಕುತ್ತಿರಲಿಲ್ಲ. 'ಅಮ್ಮನನ್ನು ಬರಹೇಳು. ನಾನು ಹಾಕಿದರೆ ಬರ್ಕತ್ ಆಗದು. ಅವಳು ಹಾಕಿದರೆ ಒಳ್ಳೆ ತರಕಾರಿ ಆಗುವುದು ಗ್ಯಾರಂಟಿ’ ಎಂದು ಅವರು ಎಷ್ಟೋ ಸಲ ಹೇಳುವುದನ್ನು ಕೇಳಿದ್ದೇನೆ. ಅದು ಅಮ್ಮನ ಮೇಲೆ ಅಪ್ಪ ಇಟ್ಟ ವಿಶ್ವಾಸ.

ವ್ಯವಹಾರಗಳೆಲ್ಲ ಅಪ್ಪನದ್ದೇ ಆದರೂ ಪೇಟೆಗೆ ಹೊರಡುವಾಗ 'ಒಂದು ಹತ್ತು ರುಪಾಯಿ ಉಂಟಾ?’ ಎಂದು ಮತ್ತೆ ಅವರು ಕೇಳುತ್ತಿದ್ದುದು ಅಮ್ಮನನ್ನೇ. ಅಮ್ಮನಲ್ಲಿ ಯಾವುದೋ ಉಳಿಕೆಯ ಒಂದಿಷ್ಟು ಹಣವಾದರೂ ಇದ್ದೀತು ಎಂಬುದವರ ಗಟ್ಟಿ ನಂಬಿಕೆ. ತೋಟದ ಕೆಲಸಕ್ಕೆ ಬರುತ್ತಿದ್ದ ಆಳುಗಳೂ ಸಂಬಳವನ್ನು ಅಮ್ಮನೇ ಕೊಡಬೇಕೆಂದು ಕಾದುಕೂರುತ್ತಿದ್ದುದುಂಟು. 'ಅಕ್ಕ ಎರಡು ರುಪಾಯಿಯಾದರೂ ಕೊಟ್ಟರೆ ಗೆಲುವು ಪಕ್ಕಾ’ ಎಂದು ಆಗಾಗ್ಗೆ ಕೋಳಿ ಅಂಕಕ್ಕೆ ಹೋಗುತ್ತಿದ್ದ ಈಸರಜ್ಜ ಅಮ್ಮನಲ್ಲಿ ಕಾಡಿಬೇಡಿ ಚಿಲ್ಲರೆ ಕಾಸು ತೆಗೆದುಕೊಂಡು ಹೋಗುತ್ತಿದ್ದುದು ಸಾಮಾನ್ಯ.

ಆಗ ನಾನು ಐದನೇ ಕ್ಲಾಸಿನಲ್ಲಿ ಇದ್ದಿರಬೇಕು. ಶಾಲೆಯಲ್ಲಿ ಮೇಷ್ಟ್ರೇ ಒಂದು ಸ್ಟೇಶನರಿ ಅಂಗಡಿ ಇಟ್ಟಿದ್ದರು. ಆಗಷ್ಟೇ ಹೊಸದಾಗಿ ಟಕ್‌ಟಿಕ್ ಪೆನ್ನು ಬಂದಿತ್ತು. ಐದು ರೂಪಾಯಿ ಅದಕ್ಕೆ. ಯಾಕೋ ಅದರ ಸೊಗಸಿಗೆ ಆ ಪೆನ್ನು ನನಗೆ ಬೇಕೇಬೇಕು ಅನಿಸಿತ್ತು. ಐದು ರೂಪಾಯಿ ಎಲ್ಲಿಂದ ತರುವುದು? ಅಮ್ಮನ ದುಂಬಾಲು ಬಿದ್ದಾಯ್ತು. ಅವಳಾದರೂ ಪೆನ್ನಿಗಾಗಿ ಅಷ್ಟೊಂದು ದುಡ್ಡು ಎಲ್ಲಿಂದ ತಂದಾಳು? ಬೇಕೇಬೇಕು ಅಂತ ಅನ್ನಾಹಾರ ತ್ಯಜಿಸಿ ಸತ್ಯಾಗ್ರಹ ಆರಂಭಿಸಿದ್ದೆ. ಅತ್ತು ಕರೆದು ಗಲಾಟೆ ಮಾಡಿದೆ. ಕೊನೆಗೊಂದು ದಿನ ನನ್ನ ಕಾಟ ತಡೆಯಲಾಗದೆ ಅಮ್ಮ ಒಳಗಿಂದ ಒಂದು ಡಬ್ಬಿ ತಂದು ಹೊರಗಿನ ಜಗಲಿಯಲ್ಲಿ ಸುರುವಿ ಅದರಿಂದ ಐದು, ಹತ್ತು ಪೈಸೆಯ ನಾಣ್ಯಗಳನ್ನೆಲ್ಲ ಒಟ್ಟು ಮಾಡಿ 'ತಗೋ’ ಅಂತ ಕೊಟ್ಟಿದ್ದಳು.

ಕುಣಿದಾಡಿಕೊಂಡೇ ಹೋಗಿ ಶಾಲೆಯಿಂದ ಪೆನ್ನು ತೆಗೆದುಕೊಂಡಿದ್ದೆ. ಖರೀದಿಸಿದ ದಿನವೇ ಸಂಜೆಯಾಗುವುದರ ಒಳಗೆ ಆ ಪೆನ್ನನ್ನು ಯಾರೋ ಕ್ಲಾಸಿನಲ್ಲಿ ಕದ್ದುಬಿಟ್ಟಿದ್ದರು. ಆಗ ನನಗೆ ಭಯವಾಯಿತಾ, ಆಘಾತವಾಯಿತಾ, ಬೇಜಾರಾಯಿತಾ, ಮನೆಯಲ್ಲಿ ಯಾವ ರೀತಿ ಅದನ್ನು ತಿಳಿಸಿದೆ - ಈಗ ನೆನಪಿಲ್ಲ. ಆದರೆ 'ದೊಡ್ಡವನಾದ ಮೇಲೆ ನೀನು ಒಂದು ಲೋಡು ಪೆನ್ನು ತಗೋ’ ಎಂದು ಆಕೆ ಸಮಾಧಾನಪಡಿಸಿದ್ದು ಸರಿಯಾಗಿ ನೆನಪಿದೆ. ನಾನು ನಾಲ್ಕಕ್ಷರ ಗೀಚಲು ಕಲಿತದ್ದರ ಹಿಂದೆ ಅಮ್ಮನ ಒಂದು ಲೋಡು ಹರಕೆ ಇತ್ತೇನೋ? ಆದರೆ ಅವಳ ಐದು ರೂಪಾಯಿಯ ಹಿಂದೆ ಇದ್ದಿರಬಹುದಾದ ಸಂಕಟ ಮುಂದೆ ಬಹಳ ವರ್ಷಗಳವರೆಗೆ ನನ್ನನ್ನು ಕಾಡುತ್ತಲೇ ಇತ್ತು. ಇಂದಿಗೂ ಆ ಘಟನೆ ನೆನಪಾದರೆ ಒಳಗೊಳಗೆಯೇ ಬೆಂದು ಹೋಗುತ್ತೇನೆ. ತಿಂಗಳಿಗೆ ಲಕ್ಷ ದುಡಿದರೂ ಅಮ್ಮ ಇಟ್ಟಿದ್ದ ಐದು ರೂಪಾಯಿಯನ್ನು ಮತ್ತೆ ಸಂಪಾದಿಸಲಾರೆ.

ಎಂಎ ಓದುತ್ತಿರುವಂತೆಯೇ ಪಿಟಿಐ ವರದಿಗಾರನ ಹುದ್ದೆಗೆ ಅರ್ಜಿ ಹಾಕಿದ್ದೆ. ಲಿಖಿತ ಪರೀಕ್ಷೆ ಮುಗಿದು ಸಂದರ್ಶನಕ್ಕೆ ದೆಹಲಿಯಿಂದ ಬುಲಾವ್ ಬಂತು. ಹೋಗುವುದು ಸರಿ, ದುಡ್ಡು? ಮತ್ತೆ ಅಮ್ಮನೆಂಬ ಬ್ಯಾಂಕಿನ ಮೇಲೆ ನಂಬಿಕೆ. ದೆಹಲಿಗೆ ಕಳಿಸುವಷ್ಟು ದುಡ್ಡು ಅವಳಿಗಾದರೂ ಎಲ್ಲಿಂದ ಬರಬೇಕು? ಕೊರಳಲ್ಲಿದ್ದ ಕೂದಲೆಳೆಯಂತಹ ಚಿನ್ನದ ಚೈನನ್ನು ತೆಗೆದು ಕೈಯ್ಯಲ್ಲಿಟ್ಟಳು- ನನ್ನಲ್ಲಿರುವುದು ಇಷ್ಟೇ, ನಿನ್ನ ಅಜ್ಜ ಕೊಟ್ಟದ್ದು; ಯಾವುದಾದರೂ ಬ್ಯಾಂಕಿನಲ್ಲಿಟ್ಟು ದುಡ್ಡು ತೆಗೆದುಕೋ ಅಂತ. ನಾನು ಹಾಗೆಯೇ ಮಾಡಿದೆ. ನಾಳೆ ದೆಹಲಿಗೆ ಹೊರಡಬೇಕು ಅನ್ನುವ ಹುಮ್ಮಸ್ಸಿನಲ್ಲಿ ನಾನಿದ್ದರೆ ರಾತ್ರಿ ಅಕ್ಕಿ ಅರೆಯುತ್ತಿದ್ದ ಅಮ್ಮ ಕೇಳಿದಳು: 'ಆ ಕೆಲಸ ಬಿಟ್ಟರಾಗದೇ?’ ಅಂತ. ನನಗೆ ಎದೆ ಧಸಕ್ಕಂತು. ’ಛೇ! ಹೀಗೆ ಕೇಳೋದೇನಮ್ಮ ನೀನು?’ ಅಂತ ನಾನು ಬೇಸರಪಟ್ಟೆ ಆ ಕ್ಷಣ.

ಆ ಕೆಲಸ ಸಿಕ್ಕರೆ ನಮ್ಮ ಕಷ್ಟಗಳೆಲ್ಲ ಕರಗಿಹೋಗುತ್ತವೆ ಎಂಬ ಸಂಭ್ರಮದಲ್ಲಿ ಅಮ್ಮನೂ ಇರಬಹುದೆಂದು ನಾನಂದುಕೊಂಡಿದ್ದರೆ ಅವಳ ಚಿಂತೆ ಬೇರೆಯದೇ ಆಗಿತ್ತು. ಅದನ್ನು ಅರ್ಥ ಮಾಡಿಕೊಂಡಿದ್ದರೆ ಅವಳ ಏಕೈಕ ಬಂಗಾರವನ್ನು ಅಡವಿಡಬೇಕಾಗಿ ಬರುತ್ತಿರಲಿಲ್ಲ ಎಂದು ಆಮೇಲೆ ಎಷ್ಟೋ ಸಲ ಅಂದುಕೊಂಡದ್ದಿದೆ. ಕೊನೆಗೂ ನಾನು ಆ ಉದ್ಯೋಗಕ್ಕೆ ಆಯ್ಕೆಯಾಗಲಿಲ್ಲ. ಅಮ್ಮನ ಅಂತರಂಗಕ್ಕೆ ವಿರುದ್ಧ ಯಶಸ್ಸಾದರೂ ಹೇಗೆ ಒಲಿದೀತು?

ಇಂತಿಪ್ಪ ಸಿರಿವಂತೆ ಅಮ್ಮ ಕೊನೆಯ ಹತ್ತು ವರ್ಷ ನಡೆಯಲೂ ಆಗದೆ ಮಲಗಿದಳು. ಹೊಗೆ ಒಲೆಗೆ ಗಾಳಿ ಊದುತ್ತಲೇ ಬದುಕಿಡೀ ಸವೆಸಿದ್ದ ಅಮ್ಮನಿಗೆ ದೊಡ್ಡ ಮನೆ ಕಟ್ಟಿ ತೋರಿಸಿ ಹೆಮ್ಮೆಪಡುವಂತೆ ಮಾಡಬೇಕೆಂದು ಆಸೆಪಟ್ಟಿದ್ದೆ. ಮನೆ ಕಟ್ಟಿದಾಗ ಅದರೊಳಗೆ ನಾಲ್ಕು ಹೆಜ್ಜೆಯಾದರೂ ನಡೆಯುವ ಶಕ್ತಿಯೇ ಅವಳಿಗೆ ಇರಲಿಲ್ಲ. ತಾನೂ ಎಲ್ಲರ ಹಾಗೆ ಸಂಭ್ರಮದಿಂದ ಹೊಸ ಮನೆ ತುಂಬ ಓಡಾಡಬೇಕು ಎಂಬ ತುಡಿತ ಒಂದೆಡೆ, ಹಾಗೆ ಮಾಡಲು ಸಾಧ್ಯವಾಗದ ಅಸಹಾಯಕತೆ ನಡುವೆ, ಅಮ್ಮನ ಒಟ್ಟು ಮನಸ್ಸೇ ಕೆಲಸ ಮಾಡುವುದು ನಿಲ್ಲಿಸಿತ್ತು. ಎಷ್ಟೇ ಕಾಳಜಿ ಮಾಡಿದರೂ ಕೊನೆಕೊನೆಗೆ ಮಲಗಿದಲ್ಲೇ ಮಲಗಿ ಬೆನ್ನೆಲ್ಲ ಹುಣ್ಣಾಗಿ ಮಾತೂ ಬಾರದೆ ದೀರ್ಘಮೌನಕ್ಕೆ ಜಾರಿಬಿಟ್ಟಳು ಎಲ್ಲರನ್ನೂ ಬಡವರನ್ನಾಗಿಸಿ.

'ದೇವರು ಎಲ್ಲರೊಂದಿಗೂ ಖುದ್ದು ಇರಲಾರ. ಅದಕ್ಕೇ ಅಮ್ಮನನ್ನು ಸೃಷ್ಟಿಸಿದ’ ಎಂಬ ಯಹೂದಿ ಗಾದೆಯೊಂದಿದೆ. ಅಮ್ಮ ವಾತ್ಸಲ್ಯದ ಪ್ರತಿಮೂರ್ತಿ, ತ್ಯಾಗಮಯಿ, ಅಕ್ಕರೆಗೆ ಇನ್ನೊಂದು ಹೆಸರು- ಎಲ್ಲವೂ ನಿಜ. ಆದರೆ ಅದಕ್ಕಿಂತಲೂ ಹೆಚ್ಚು ಅವಳು ಎಲ್ಲರ ಬದುಕಿನ ಬಲುದೊಡ್ಡ ಪಾಠಶಾಲೆ. ಮಾನವಸಹಜ ದೌರ್ಬಲ್ಯಗಳೆಲ್ಲವೂ ಒಬ್ಬ ವ್ಯಕ್ತಿಯಾಗಿ ಅಮ್ಮನಲ್ಲಿರಬಹುದು. ಆದರೆ ಅವಳ ನಿರ್ಧಾರಗಳಲ್ಲಿ ಸ್ವಾರ್ಥವಿಲ್ಲ; ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಆಸೆ ಮಾತ್ರ. ಆದ್ದರಿಂದಲೇ ಶಂಕರಾಚಾರ್ಯರ ಮಾತು ಎಂದಿಗೂ ಒಪ್ಪುವಂಥದ್ದೇ: 'ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’.

- ಸಿಬಂತಿ ಪದ್ಮನಾಭ ಕೆ. ವಿ. 

ಶುಕ್ರವಾರ, ಏಪ್ರಿಲ್ 17, 2020

ಆನ್‌ಲೈನ್ ಶಿಕ್ಷಣ ಮತ್ತು ಡಿಜಿಟಲ್ ಕಂದಕ

ದಿನಾಂಕ: 18-04-2020ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ.

ಕೊರೋನಾ ಸೃಷ್ಟಿಸಿದ ಪಲ್ಲಟ ಉಳಿದೆಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ಹೊಸ ರೀತಿಯಲ್ಲಿ ಯೋಚಿಸುವಂತೆ ಮಾಡಿದೆ. ಐದೋ ಹತ್ತೋ ವರ್ಷಕ್ಕೆ ಅನಿವಾರ್ಯವಾಗಬಹುದಾಗಿದ್ದ ಆನ್‌ಲೈನ್ ಬೋಧನೆ-ಕಲಿಕೆ ಈಗಲೇ ಅನಿವಾರ್ಯವಾಗಿಬಿಟ್ಟಿದೆ. ಕೊರೋನಾ ಬಿಕ್ಕಟ್ಟಿನಿಂದಾಗಿ ಅನೇಕ ರಂಗಗಳು ಹಲವು ವರ್ಷ ಹಿಂದಕ್ಕೆ ಚಲಿಸುವಂತಾಗಿದ್ದರೆ, ಶಿಕ್ಷಣ ರಂಗ ತಂತ್ರಜ್ಞಾನದ ಬಳಕೆಯ ದೃಷ್ಟಿಯಿಂದಲಾದರೂ ಒಂದಷ್ಟು ವರ್ಷ ಮುಂದಕ್ಕೆ ಸಾಗುವಂತಾಗಿದೆ.

'ವರ್ಚುವಲ್ ಕ್ಲಾಸ್‌ರೂಂ’ ಎಂದಾಕ್ಷಣ ದೊಡ್ಡ ನಗರಗಳ ಶ್ರೀಮಂತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನೋ, ಪಶ್ಚಿಮದ ದೇಶಗಳನ್ನೋ ಮನಸ್ಸಿಗೆ ತಂದುಕೊಳ್ಳುವುದು ಸಾಮಾನ್ಯವಾಗಿತ್ತು. ಅದು ನಮಗಿರುವುದಲ್ಲ ಅಥವಾ ನಮ್ಮಂಥವರಿಗಲ್ಲ ಎಂಬುದೇ ಬಹುಪಾಲು ಭಾರತೀಯರ ಮನಸ್ಥಿತಿಯಾಗಿತ್ತು- ಇಲ್ಲಿಯವರೆಗೆ. ಕೇವಲ ಒಂದೆರಡು ತಿಂಗಳಲ್ಲೇ ಒಟ್ಟಾರೆ ಜಗತ್ತಿನ ಮನಸ್ಥಿತಿಯೇ ಬದಲಾಗಿದೆ, ಜತೆಗೆ ನಮ್ಮದೂ. ವರ್ಚುವಲ್ ಕ್ಲಾಸ್‌ರೂಂಗಳ ಅನಿವಾರ್ಯತೆ ನಮ್ಮ ಮನೆ ಬಾಗಿಲಿಗೇ ಈಗ ಬಂದು ನಿಂತಿದೆ. ಎಷ್ಟಾದರೂ ಅನಿವಾರ್ಯತೆ ಅನ್ವೇಷಣೆಯ ತಾಯಿ.

ಪ್ರಜಾವಾಣಿ | 18-04-2020
ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣದವರೆಗಿನದ್ದು ಒಂದು ಕತೆಯಾದರೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳದ್ದು ಇನ್ನೊಂದು ಕತೆ. ಪದವಿ ತರಗತಿಗಳು ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದರೆ, ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವರ್ಷದ ಎರಡನೆಯ ಭಾಗ ಅರ್ಧದಲ್ಲೇ ಇದೆ. ಪಾಠಪ್ರವಚನಗಳನ್ನು ಮುಂದುವರಿಸುವುದಕ್ಕೆ ಲಾಕ್‌ಡೌನ್ ಅಡ್ಡಿ, ಆದರೆ ಮುಂದುವರಿಸದೆ ವಿಧಿಯಿಲ್ಲ. ಒಟ್ಟಿನಲ್ಲಿ, ಕಾಲೇಜು-ವಿಶ್ವವಿದ್ಯಾನಿಲಯಗಳಿಗೆ ಆನ್‌ಲೈನ್ ಕಲಿಕೆಯ ಹೊರತು ಬೇರೆ ದಾರಿಯಿಲ್ಲ ಎಂಬಂತಾಗಿದೆ.

ಬಹುತೇಕ ವಿಶ್ವವಿದ್ಯಾನಿಲಯಗಳು, ಒಂದಷ್ಟು ಕಾಲೇಜುಗಳು ಈ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುತ್ತಿವೆ. ವಿದೇಶಗಳ ಪರಿಸ್ಥಿತಿಗೆ ಹೋಲಿಸಿದರೆ ನಾವು ಕನಿಷ್ಠ ಹತ್ತು ವರ್ಷ ಹಿಂದೆ ಇದ್ದರೂ ಈಗಲಾದರೂ ಈ ಹಂತದಿಂದ ಆರಂಭಿಸುವುದು ಅನಿವಾರ್ಯವಾಗಿದೆ. ಕೆಲವರು ಜೂಮ್‌ನಂತಹ ಆಪ್‌ಗಳ ಸಹಾಯದಿಂದ ತರಗತಿಗಳನ್ನು ನಡೆಸಲು ಪ್ರಯತ್ನಿಸುತ್ತಿದ್ದರೆ, ಇನ್ನು ಕೆಲವರು ಯೂಟ್ಯೂಬ್‌ನಲ್ಲಿ ವೀಡಿಯೋ ಉಪನ್ಯಾಸಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದಾರೆ. ವಾಟ್ಸ್‌ಆಪ್‌ನಲ್ಲಿ ಆಡಿಯೋ ಪಾಠ, ಅಧ್ಯಯನ ಸಾಮಗ್ರಿಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸ್ಕೈಪ್, ವಿಮಿಯೋ, ಗೂಗಲ್ ಮೀಟ್, ಗೋಟುಮೀಟಿಂಗ್, ಗೋಟುವೆಬಿನಾರ್, ವೆಬಿನಾರ್ ಜಾಮ್, ಲೈವ್‌ಸ್ಟ್ರೀಂ - ಹೀಗೆ ಲಭ್ಯವಿರುವ ಹತ್ತು ಹಲವು ಸಾಧ್ಯತೆಗಳನ್ನು ಹುಡುಕಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ.

ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಇದೊಂದು ಹೊಸ ಅನುಭವ. ಒಂದೆಡೆ ತರಗತಿಗಳಲ್ಲಿ ಮಾತ್ರ ಸಿಗುತ್ತಿದ್ದ ಅಧ್ಯಾಪಕರು ಆನ್‌ಲೈನ್ ಮೂಲಕ ತಮ್ಮನ್ನು ತಲುಪುತಿದ್ದಾರೆ ಎಂಬ ಸಂಭ್ರಮ ವಿದ್ಯಾರ್ಥಿಗಳದ್ದಾರೆ, ಹೀಗೆಲ್ಲ ಮಾಡಬಹುದೇ ಎಂಬ ಸೋಜಿಗ ಅನೇಕ ಅಧ್ಯಾಪಕರದ್ದು. ಕಂಪ್ಯೂಟರ್, ಪ್ರೊಜೆಕ್ಟರ್ ಎಂದರೆ ಮೂಗುಮುರಿಯುತ್ತಾ ಇನ್ನೂ ಕರಿಹಲಗೆ-ಪಠ್ಯಪುಸ್ತಕಗಳಿಗೆ ಅಂಟಿಕೊಂಡಿದ್ದ ಅವರು ತಾವು ಸದಾ ಬಳಸುವ ಮೊಬೈಲಿನಲ್ಲೇ ಇಷ್ಟೊಂದು ಸಾಧ್ಯತೆಗಳಿವೆಯೇ ಎಂದು ನಿಧಾನಕ್ಕೆ ಅರ್ಥಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಯಾಪನೆ ಮಾಡುವುದಲ್ಲದೆ ಮೊಬೈಲಿನಿಂದ ಇನ್ನೂ ಅನೇಕ ಉಪಯೋಗಗಳಿವೆ ಎಂದು ಮನದಟ್ಟಾಗುತ್ತಿದೆ.

ಇಂತಹ ಅನಿವಾರ್ಯ ಇಷ್ಟೊಂದು ಬೇಗನೆ ಮತ್ತು ಅಚಾನಕ್ಕಾಗಿ ಎದುರಾದೀತು ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಹೀಗಾಗಿ ಇಂಥದ್ದೊಂದು ಪರಿಸ್ಥಿತಿ ಎದುರಾದಾಗ ಅದನ್ನು ಹೇಗೆ ನಿಭಾಯಿಸಬೇಕೆಂಬ ಚಿಂತನೆಯನ್ನೂ ಮಾಡಿದವರು ಕಡಿಮೆಯೇ. ಆನ್‌ಲೈನ್ ಕೋರ್ಸುಗಳು ಕೆಲವು ವರ್ಷಗಳಿಂದ ನಮ್ಮಲ್ಲಿ ಲಭ್ಯವಿದ್ದರೂ ಅವು ಐಚ್ಛಿಕ. ಬಹುತೇಕ ಖಾಸಗಿ ವಲಯದಲ್ಲೇ ಇವೆ. ಈಗಾಗಲೇ ಉದ್ಯೋಗದಲ್ಲಿರುವವರು, ಹೆಚ್ಚುವರಿ ಶೈಕ್ಷಣಿಕ ಅರ್ಹತೆ ಬಯಸುವವರು, ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುವವರು ಇಂಥವುಗಳನ್ನು ಆಯ್ದುಕೊಳ್ಳುತ್ತಿದ್ದುದು ಇದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 'ಸ್ವಯಂ’ ಎಂಬ ಆನ್‌ಲೈನ್ ಕಲಿಕಾ ವೇದಿಕೆಯನ್ನು 2017ರಲ್ಲಿ ಆರಂಭಿಸಿ ನೂರಾರು ಮುಕ್ತ ಕೋರ್ಸುಗಳನ್ನು ಪರಿಚಯಿಸಿದ್ದರೂ, ಅವೆಲ್ಲವೂ ಐಚ್ಛಿಕ. ಅವನ್ನು ಔಪಚಾರಿಕ ಕೋರ್ಸುಗಳ ಭಾಗವನ್ನಾಗಿಸುವ ಅಥವಾ ಕಡ್ಡಾಯಗೊಳಿಸುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.

ಹೌದು, ಆನ್‌ಲೈನ್ ತರಗತಿಗಳಿಂದ ಅನೇಕ ಲಾಭಗಳಿದ್ದರೂ ಅವುಗಳ ಇತಿಮಿತಿಗಳೂ ಅಷ್ಟೇ ಇವೆ. ನಮಗೆ ಬೇಕಾದ ಸಮಯವನ್ನು ಹೊಂದಿಸಿಕೊಂಡು ಪಾಠ ಮಾಡಬಹುದು ಅಥವಾ ಕೇಳಬಹುದು, ವಿದ್ಯಾರ್ಥಿಗಳು ಅಂತರಜಾಲವನ್ನು ಬಳಸಿಕೊಂಡು ಯಥೇಚ್ಛ ಅಧ್ಯಯನ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು. ಆದರೆ ಈ ತಂತ್ರಜ್ಞಾನದ ಲಾಭ ಪಡೆಯುವ ಮಂದಿಯ ಪ್ರಮಾಣ ಎಷ್ಟು ಎಂಬುದೂ ಮುಖ್ಯವಾದ ಪ್ರಶ್ನೆ.

ವಿದೇಶಗಳಲ್ಲಿ ಆನ್‌ಲೈನ್ ಬೋಧನೆ-ಕಲಿಕೆ ಯಶಸ್ವಿಯಾಗಿದ್ದರೆ ಅದರ ಹಿಂದೆ ಅಲ್ಲಿನ ಮೂಲಭೂತ ಸೌಕರ್ಯ, ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ನೀಡಲಾಗಿರುವ ಹೆಚ್ಚುವರಿ ತರಬೇತಿಯ ಪಾತ್ರ ಇದೆ. ಅಲ್ಲಿ ಪ್ರತಿಕ್ರಿಯಾತ್ಮಕ ಅಧ್ಯಯನ ಸಾಮಗ್ರಿಗಳು, ಆನ್‌ಲೈನ್ ಪರೀಕ್ಷಾ ವ್ಯವಸ್ಥೆ, ತೆರೆದ ಪುಸ್ತಕದ ಪರೀಕ್ಷೆ- ಎಲ್ಲವೂ ಸಾಕಷ್ಟು ಮೊದಲಿನಿಂದಲೂ ಜಾರಿಯಲ್ಲಿದೆ. ನಮಗೆ ಎದುರಾಗಿರುವ ಪರಿಸ್ಥಿತಿ ತೀರಾ ಅನಿರೀಕ್ಷಿತವಾದದ್ದು.

ಭಾರತದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ. 32.5ರಷ್ಟು ಮಂದಿ ನಗರಗಳಲ್ಲಿದ್ದಾರೆ, ಶೇ. 67.5ರಷ್ಟು ಹಳ್ಳಿಗಳಲ್ಲಿದ್ದಾರೆ. ನಮ್ಮ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಸುಮಾರು 60 ಕೋಟಿ. ಅಂದರೆ ಅರ್ಧಕ್ಕಿಂತಲೂ ಕಡಿಮೆ. ಅವರಲ್ಲಿಯೂ ಮೊಬೈಲ್ ಇಂಟರ್ನೆಟ್ ಬಳಕೆದಾರರೇ ಹೆಚ್ಚು. ಟ್ರಾಯ್ ವರದಿ ಪ್ರಕಾರ, ಹಳ್ಳಿಗಳಲ್ಲೇ ಮುಕ್ಕಾಲು ಪಾಲು ಜನರಿದ್ದರೂ ಅಲ್ಲಿನ ಇಂಟರ್ನೆಟ್ ಸಾಂಧ್ರತೆ ಶೇ. 25. ಉಳಿದಿರುವ ಜನರಷ್ಟೇ ನಗರಗಳಲ್ಲಿದ್ದರೂ ಅಲ್ಲಿನ ಇಂಟರ್ನೆಟ್ ಸಾಂಧ್ರತೆ ಶೇ. 97. ಇದು ನಮ್ಮ ದೇಶದ ಡಿಜಿಟಲ್ ಕಂದಕದ ಆಳ-ಅಗಲ. ಹೀಗಾಗಿ ನಮ್ಮಲ್ಲಿ ಆನ್‌ಲೈನ್ ಕಲಿಕೆಯ ಪರಿಣಾಮಕಾರಿ ಅನುಷ್ಠಾನ ಅಷ್ಟು ಸುಲಭದ ಕೆಲಸವೇನೂ ಅಲ್ಲ.

ನಮ್ಮ ಬಹುತೇಕ ವಿದ್ಯಾರ್ಥಿಗಳು ಹಳ್ಳಿಗಳಲ್ಲಿದ್ದಾರೆ. ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳಿದ್ದರೂ ಮೊಬೈಲ್ ಇಲ್ಲದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಅನೇಕ ಕಡೆ ಆನ್‌ಲೈನ್ ಕಲಿಕಾ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಬಲ್ಲ ೪ಜಿ ನೆಟ್‌ವರ್ಕ್ ಇಲ್ಲ. ಆನ್‌ಲೈನ್ ಪಾಠಗಳನ್ನು ಶೇ. 60ರಷ್ಟು ವಿದ್ಯಾರ್ಥಿಗಳು ಬಳಸುತ್ತಿದ್ದಾರೆ ಎಂದರೂ ಉಳಿದ ಶೇ. 40 ವಿದ್ಯಾರ್ಥಿಗಳ ಕಥೆಯೇನು? ಅವರನ್ನು ಬಿಟ್ಟು ನಾವು ಮುಂದಕ್ಕೆ ಹೋಗುವುದಾದರೂ ಹೇಗೆ? ಡಿಜಿಟಲ್ ಕಂದಕದ ನಡುವೆ ನಮ್ಮ ವಿದ್ಯಾರ್ಥಿಗಳು ಸಿಲುಕಿಕೊಳ್ಳದಂತೆ ನೋಡಿಕೊಳ್ಳುವುದು ಶಿಕ್ಷಣ ವಲಯದ ದೊಡ್ಡ ಜವಾಬ್ದಾರಿ. ಜತೆಗೆ ಅಧ್ಯಾಪಕರಿಗೂ ಶಿಕ್ಷಕರಿಗೂ ವಿಶೇಷ ತರಬೇತಿಯ ಅಗತ್ಯವೂ ಇದೆ. ತರಗತಿ ಪಾಠಪ್ರವಚನಗಳಿಗೆ ಆನ್‌ಲೈನ್ ಶಿಕ್ಷಣ ಸಂಪೂರ್ಣವಾಗಿ ಪರ್ಯಾಯವೂ ಆಗಲಾರದು ಎಂಬದೂ ಗಮನಾರ್ಹ.

ಸಾಗಬೇಕಿರುವ ದಾರಿ ಬಲುದೂರ ಇದೆ. ಆದರೆ ಕೊರೋನಾ ಆ ದಾರಿಯ ಅನಿವಾರ್ಯ, ಇತಿಮಿತಿ ಹಾಗೂ ಅಗತ್ಯ ತಯಾರಿಗಳ ಕುರಿತು ನಾವು ಯೋಚಿಸುವಂತೆ ಮಾಡಿದೆ.

-ಸಿಬಂತಿ ಪದ್ಮನಾಭ ಕೆ. ವಿ. 

ಭಾನುವಾರ, ಏಪ್ರಿಲ್ 5, 2020

ಆಂಜನೇಯನೆಂಬ ಸ್ಫೂರ್ತಿಯ ಚಿಲುಮೆ

ಏಪ್ರಿಲ್ 4-10, 2020ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತ|
ಅಜಾಡ್ಯಂ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್ ಭವೇತ್||
ಇದು ಜಗತ್ತಿನ ಕೋಟ್ಯಂತರ ಆಸ್ತಿಕರ ದಿನನಿತ್ಯದ ಪ್ರಾರ್ಥನೆ. ಆಂಜನೇಯನ ಸ್ಮರಣೆಯಿಂದ ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತ್ವ, ಆರೋಗ್ಯ, ವಾಕ್‌ಪ್ರತಿಭೆ ಇವೆಲ್ಲವೂ ತಾವಾಗಿಯೇ ಒಲಿದುಬರುತ್ತವೆ ಎಂಬುದು ಅವರೆಲ್ಲರ ಗಾಢ ನಂಬಿಕೆ. ಹನೂಮಂತ ವಜ್ರಕಾಯ, ಜಿತೇಂದ್ರಿಯ, ಶತ್ರುಭಯಂಕರ, ಮಹಾನ್ ಶಕ್ತಿಶಾಲಿ; ಹೀಗಾಗಿ ಆತ ನಂಬಿದವರ ರಕ್ಷಕ, ಉತ್ಸಾಹದ ಚಿಲುಮೆ, ಎಂತಹ ಜುಗುಪ್ಸೆಯಿಂದ ಬೆಂದ ಮನಸ್ಸಿಗೂ ನೆಮ್ಮದಿ, ಧೈರ್ಯ, ಸ್ಫೂರ್ತಿಯನ್ನು ತುಂಬಬಲ್ಲ ಐಂದ್ರಜಾಲಿಕ ಎಂಬ ಭಾವನೆಗೆ ಸಾವಿರಾರು ವರ್ಷಗಳ ಇತಿಹಾಸ.

ಸಿಬಂತಿ ಪದ್ಮನಾಭ | ಬೋಧಿವೃಕ್ಷ |  ಏಪ್ರಿಲ್ 4-10, 2020
ಆಂಜನೇಯ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವುದು ನೂರೆಂಟು ಚಿತ್ರ. ಬಲಗಡೆ ಲಕ್ಷ್ಮಣ, ಎಡಗಡೆ ಸೀತೆಯನ್ನು ಒಡಗೂಡಿ ನಿಂತಿರುವ ಕೋದಂಡರಾಮನ ಎದುರು ಮಂಡಿಯೂರಿ ಕುಳಿತಿರುವ ಮಾರುತಿ, ರಾಮ-ಲಕ್ಷ್ಮಣರನ್ನು ಎರಡೂ ಭುಜಗಳಲ್ಲಿ ಹೊತ್ತು ಸಾಗುತ್ತಿರುವ ಹನೂಮಂತ, ಕೈಗಳನ್ನು ಮುಂದಕ್ಕೆ ಚಾಚಿ ಸಾಗರಲ್ಲೋಂಘನ ಮಾಡುತ್ತಿರುವ ಪವನಸುತ, ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಬರುತ್ತಿರುವ ವಾತಾತ್ಮಜ, ತನ್ನೆದೆಯನ್ನೇ ಸೀಳಿ ರಾಮ ಇಲ್ಲಿದ್ದಾನೆ ಎಂದು ತೋರಿಸುವ ರಾಮದೂತ... ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಚಿತ್ರ.

ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬೇಕಾದವನು ಈ ಆಂಜನೇಯ. ಮಕ್ಕಳಿಗಂತೂ ಹನೂಮಂತ ಒಬ್ಬ ಆಪ್ತ ಗೆಳೆಯ. ತಾವು ಇಷ್ಟಪಡುವ ಮಹಿಮಾವಿಶೇಷಗಳನ್ನು ಕ್ಷಣಮಾತ್ರದಲ್ಲಿ ಮಾಡಿತೋರಿಸಬಲ್ಲ ಪವಾಡಪುರುಷ. ತಮ್ಮೊಂದಿಗೆ ಓರಗೆಯವನಾಗಿ ಆಟವಾಡಬಲ್ಲ ಬಾಲಮಾರುತಿ. ಹನೂಮಂತ ನಾಯಕನಾಗಿರುವ ಕಾರ್ಟೂನು ಇಲ್ಲದಿದ್ದರೆ ಅದು ಮಕ್ಕಳಿಗೆ ಟಿವಿ ಚಾನೆಲೇ ಅಲ್ಲ. ಯುವಕರಿಗೆ ಈ ಬ್ರಹ್ಮಚಾರಿ ಮನೋಬಲದ ಪ್ರತೀಕವಾದರೆ, ವೃದ್ಧರಿಗೆ ಮೋಕ್ಷಮಾರ್ಗದ ದಿಕ್ಸೂಚಿ. ಶರೀರಬಲ, ಬುದ್ಧಿಬಲ, ಆತ್ಮಬಲಗಳ ತ್ರಿವೇಣಿ ಸಂಗಮ. ಆದರ್ಶದಲ್ಲಿ, ಚಾರಿತ್ರ್ಯದಲ್ಲಿ, ಸದಾಚಾರದಲ್ಲಿ, ಕಾರ್ಯಕ್ಷಮತೆಯಲ್ಲಿ ಅವನಿಗೆ ಸರಿಮಿಗಿಲಾದವರು ಇನ್ನೊಬ್ಬರಿಲ್ಲ. 'ನ ಸಮಃ ಸ್ಯಾತ್ ಹನೂಮತಃ’ - ಹನೂಮಂತನಿಗೆ ಸಮ ಬೇರಾರೂ ಇಲ್ಲ ಎಂದು ಸ್ವತಃ ರಾಮಚಂದ್ರನಿಂದಲೇ ಪ್ರಶಂಸೆಗೆ ಪಾತ್ರನಾದವನು ಅವನು.

ಋಷ್ಯಮೂಕದ ಪಾದದಲ್ಲಿದ್ದ ಪಂಪಾಸರೋವರದ ತಟದಲ್ಲಿ ಆರಂಭವಾದ ರಾಮ-ಹನುಮರ ಸಖ್ಯ ಅಖಂಡ, ಚಿರಸ್ಥಾಯಿ. 'ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾ ಕ್ಲಿಷ್ಟಕರ್ಮಣಃ’ - ಉತ್ತಮ ಕರ್ಮಗಳನ್ನೇ ಎಸಗುವ ರಾಮಚಂದ್ರನಿಗೆ ನಾನು ಎಂದೆಂದಿಗೂ ದಾಸಾನುದಾಸ ಹೀಗೆ ಘೋಷಿಸಿಕೊಂಡ ಆಂಜನೇಯ ಅದನ್ನೇ ಯುಗಯುಗಗಳ ಪರ್ಯಂತ ಸಾಧಿಸಿಕೊಂಡು ಬಂದ. ಅವನು ಬಯಸಿದ್ದರೆ ರಾಮನು ವಾಲಿಯನ್ನು ವಧಿಸಿದ ಮೇಲೆ ಕಿಷ್ಕಿಂಧೆಯ ರಾಜನಾಗಬಹುದಿತ್ತು. ಆದರೆ ಅವನಿಗೆ ಬೇಕಿದ್ದದ್ದು ರಾಮನ ಸಾಹಚರ್ಯವೇ ಹೊರತು ರಾಜಕಾರಣವಾಗಲೀ, ಅಧಿಕಾರವಾಗಲೀ ಆಗಿರಲಿಲ್ಲ. ರಾಮಾವತಾರದ ಕೊನೆಯಲ್ಲಿ ’ಮುಂದೇನು’ ಎಂದು ಆಂಜನೇಯನನ್ನು ರಾಮ ಕೇಳಿದಾಗ ಅವನು ಹೇಳಿದ್ದು ಅದನ್ನೇ: ಭೂಮಿಯ ಮೇಲೆ ರಾಮಕಥೆ ಇರುವವರೆಗೆ ನನಗೆ ಅದೇ ನಾಮಸ್ಮರಣೆಯಲ್ಲಿ ಉಳಿಯುವ ಆಸೆ.

ಆಗ ರಾಮ ಹೇಳಿದನಂತೆ: ಹನುಮಾ, ನಿನ್ನ ಉಪಕಾರಗಳನ್ನು ನಾನು ಹೇಗೆ ತೀರಿಸಲಿ? ನೀನು ಮಾಡಿರುವ ಒಂದೊಂದು ಉಪಕಾರಕ್ಕೂ ನನ್ನ ಒಂದೊಂದು ಪ್ರಾಣವನ್ನು ನೀಡಬೇಕೆಂದರೂ ನನಗಿರುವುದು ಐದೇ ಪ್ರಾಣಗಳು. ಹೆಚ್ಚೆಂದರೆ ನಿನ್ನ ಐದು ಉಪಕಾರಗಳಿಗೆ ಮಾತ್ರ ಅವನ್ನು ನೀಡಬಹುದು. ಉಳಿದುದಕ್ಕೆ ಏನೂ ಕೊಡಲಾರೆ. ನಾನು ಎಂದೆಂದಿಗೂ ನಿನಗೆ ಋಣಿಯೇ.... ರಾಮ-ಹನುಮರದ್ದು ದೇವರು ಭಕ್ತರ ಸಂಬಂಧವೋ, ಸೇವ್ಯ-ಸೇವಕರ ಸಂಬಂಧವೋ, ಓರಗೆಯ ಸ್ನೇಹಿತರ ನಡುವಿನ ಸಂಬಂಧವೋ ಅವರಿಗೆ ಮಾತ್ರ ಗೊತ್ತು. ಆದರೆ ಅಂತಹದೊಂದು ಗಾಢ ಸಂಬಂಧವನ್ನು ಜಗತ್ತಿನಲ್ಲಿ ಬೇರೆಲ್ಲೂ ಕಾಣೆವು.

ಹನುಮ ಸಾಮಾನ್ಯ ಕಪಿಯಲ್ಲ. ಚತುರ್ವೇದ ಪರಿಣತ. ವ್ಯಾಕರಣ ಪಂಡಿತ. ತರ್ಕ ಮೀಮಾಂಸೆಗಳಲ್ಲಿ ಪಾರಂಗತ. ರಸಪ್ರಜ್ಞೆ, ಸಮಯಪ್ರಜ್ಞೆ, ಸೌಂದರ್ಯಪ್ರಜ್ಞೆ, ವಾಕ್ಚಾತುರ್ಯ ಹೊಂದಿದ್ದ ಅಸೀಮ ರಾಮಭಕ್ತ. ಇಂದ್ರಾದಿ ದೇವತೆಗಳಿಂದ ಅನೇಕ ವಿದ್ಯೆಗಳನ್ನು ವರರೂಪವಾಗಿ ಪಡೆದವನು. ಇನ್ನೂ ಬಾಲಕನಿದ್ದಾಗಲೇ ಸೂರ್ಯನೆಂದು ಹಣ್ಣೆಂದು ಭ್ರಮಿಸಿ ನುಂಗಹೋದವನು. ಸೀತಾನ್ವೇಷಣೆಗಾಗಿ ಸಹಸ್ರ ಯೋಜನ ವಿಸ್ತಾರದ ಸಮುದ್ರವನ್ನು ಒಂದೇ ನೆಗೆತಕ್ಕೆ ಹಾರಿದವನು. ನಡುವೆ ಎದುರಾದ ಸುರಸೆ, ಸಿಂಹಿಣಿ, ಲಂಕಿಣಿಯರನ್ನು ನಿವಾರಿಸಿ ಅಶೋಕವನದಲ್ಲಿ ಸೀತೆಯನ್ನು ಪತ್ತೆಹಚ್ಚಿ ಆಕೆಗೆ ಶುಭಸಮಾಚಾರವನ್ನು ತಲುಪಿಸಿದವನು. ಜಂಬೂಮಾಲಿ, ಅಕ್ಷಯಕುಮಾರರನ್ನೆಲ್ಲ ಸದೆಬಡಿದು ಸ್ವರ್ಣಲಂಕೆಯನ್ನು ದಹಿಸಿ ರಾಮನಿಗೆ ವರ್ತಮಾನ ಮುಟ್ಟಿಸಿದವನು. ಮಹಾಪರಾಕ್ರಮಿ. 'ನ ರಾವಣ ಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್’ - ಸಾವಿರ ರಾವಣರು ಎದುರಾದರೂ ನನಗೆ ಸರಿಸಮ ಎದುರಾಳಿ ಆಗಲಾರರು ಎಂದು ಘರ್ಜಿಸಿದವನು. ಅದಕ್ಕೇ ಜನಸಾಮಾನ್ಯರಿಗೆ ಅವನೊಂದು ಮಹಾಪ್ರೇರಣೆ.

ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ||
ಅದು ಜಗತ್ತಿನ ಕೋಟಿಕೋಟಿ ಜನ ರಾಮದೂತನಿಗೆ ಪ್ರತಿದಿನ ವಂದಿಸುವ ಬಗೆ. ನಿರಾಶೆ, ಕತ್ತಲು ಮನಸ್ಸುಗಳನ್ನು, ಜಗತ್ತನ್ನು ತುಂಬಿರುವಾಗ ಚಿರಂಜೀವಿ ಆಂಜನೇಯನ ಚಿತ್ರ ಆಶಾವಾದ, ಧೈರ್ಯವನ್ನು ಕೊಡಬಲ್ಲುದಾದರೆ ಆ ಚಿತ್ರ ಸರ್ವವ್ಯಾಪಿಯಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಮಾರ್ಚ್ 31, 2020

ಕಾಡಿನ ನಡುವೆ ಕಲಿಕೆಯ ಕನಸು: ಮುಂಡೂರುಪಳಿಕೆ ಶಾಲೆ ಎಂಬ ಊರ ಸಮಸ್ತರ ಕೂಸು

ಸುಮಾರು 11 ವರ್ಷಗಳ ಹಿಂದೆ, ಅಂದರೆ 2009ರಲ್ಲಿ, ಅಪ್ಪನ ನೆನಪುಗಳನ್ನು ಕೆದಕಿ ನಿರೂಪಿಸಿದ ಬರೆಹ  ಇದು. ನಮ್ಮ ಮುಂಡೂರುಪಳಿಕೆ ಶಾಲೆ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾಗ ಬೆಳ್ತಂಗಡಿಯ 'ಸುದ್ದಿ ಬಿಡುಗಡೆ'ಗಾಗಿ ಬರೆದದ್ದು. ಆಗ ಅದು ಪ್ರಕಟವಾಗಲಿಲ್ಲ. ಯಾಕೆ ಎಂದು ನನಗೆ ನೆನಪಿಲ್ಲ. ಈಗ ಯಾಕೋ ಪ್ರಕಟಿಸಬೇಕೆನಿಸಿತು.


ಗೊಂಡಾರಣ್ಯ. ಮೈಲುದೂರಕ್ಕೊಂದು ಮನೆ. ಜನರ ಮುಖ ಕಾಣಸಿಗುವುದೇ ಅಪರೂಪ.  ರಸ್ತೆ, ವಾಹನಗಳಂತೂ ಕನಸಿಗೂ ಮೀರಿದ ವಿಷಯಗಳು. ಇಂತಿಪ್ಪ ಮುಂಡೂರುಪಳಿಕೆಯೆಂಬೋ ಕಾಡೂರಿನಲ್ಲಿ ಒಂದು ಶಾಲೆ ಬೇಕೆಂಬ ಬಯಕೆ ನಮ್ಮಲ್ಲಿ ಯಾವ ಕ್ಷಣ ಮೊಳಕೆಯೊಡೆಯಿತೋ ಗೊತ್ತಿಲ್ಲ. ಆದರೆ ನಮ್ಮ ಮಕ್ಕಳಾದರೂ ಒಳ್ಳೆ ವಿದ್ಯಾವಂತರಾಗಿ ಈ ಊರಿಗೆ ಅಂಟಿರುವ ಪ್ರಗತಿಯ ತೊಡಕುಗಳನ್ನು, ಇಲ್ಲಿನ ಬಡತನವನ್ನು ನಿವಾರಿಸುವಂತಾಗಬೇಕು ಎಂಬುದು ನಮ್ಮೆಲ್ಲರ ಮಹದಂಬಲವಾಗಿದ್ದಂತೂ ನೂರಕ್ಕೆ ನೂರು ನಿಜ.

ನಾನು 1975ರ ಜೂನಿನಲ್ಲಿ ಮುಂಡೂರುಪಳಿಕೆಗಿಂತ ಇನ್ನೂ ಎರಡು ಮೈಲು ಆಚೆಗಿರುವ ಸಿಬಂತಿಯಲ್ಲಿ ಬಂದು ನೆಲೆಯೂರಿದ್ದೆ. ನಾನಿದ್ದ ಗುಡಿಸಲು ಬಿಟ್ಟರೆ ಅಲ್ಲೆಲ್ಲೋ ದೂರದ ಸಂಕುವೈಲು, ಅದರಾಚೆಯ ಬಾಳ್ತಿಮಾರು, ಕಕ್ಕುದೋಳಿಗಳಲ್ಲಿ ಎರಡು ಮೂರು ಕುಟುಂಬಗಳು. ಮೈಲುಗಳಷ್ಟು ದೂರ ದಟ್ಟ ಕಾಡಿನಲ್ಲಿ ನಡೆಯಲು ಸಾಧ್ಯವಾದರೆ ನೇತ್ರಾವತಿ ದಂಡೆಯಲ್ಲಿರುವ ಬೀಬಿಮಜಲು, ಸುದೆಪೊರ್ದು, ಚೆಂಬುಕೇರಿ, ಮೈಪಾಳ. ಇನ್ನೊಂದು ದಿಕ್ಕಿನಲ್ಲಿ ಹೋದರೆ  ಮಿತ್ತಡ್ಕ, ಪೊನ್ನಿತ್ತಿಮಾರು, ಕುರ್ಲೆ, ತೆಂಕುಬೈಲು, ಬದಿಜಾಲು. ನೀವು ನಂಬಲೇಬೇಕು- ಇಷ್ಟು ವಿಸ್ತಾರವಾದ ವ್ಯಾಪ್ತಿಯಲ್ಲಿ ಹುಟ್ಟಿದ ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಿಯೇ ಉಳಿಯಬೇಕಿತ್ತು. ಶಾಲೆ ಬೇಕೆಂದರೆ ಎಂಟೋ ಹತ್ತೋ ಕಿಲೋಮೀಟರ್ ನಡೆಯಬೇಕು. ಐದು ವರ್ಷದ ಒಂದು ಮಗು ಅಷ್ಟು ದೂರ ನಡೆದುಹೋಗಿ ಒಂದನೇ ಕ್ಲಾಸಾದರೂ ಮುಗಿಸುವುದುಂಟೇ?

ಮೊದಲೇ ಹೇಳಿದಂತೆ ನಮ್ಮದು ಅಂತಹ ಜನದಟ್ಟಣೆಯ ಊರಂತೂ ಆಗಿರಲಿಲ್ಲ. ಹಾಗೆಂದು ಇರುವ ಮಕ್ಕಳಿಗಾದರೂ ಶಿಕ್ಷಣದ ಬೆಳಕು ಕಾಣಿಸಲೇಬೇಕಿತ್ತು. ನಾನು ಪ್ರಾಥಮಿಕ ಶಿಕ್ಷಣವನ್ನೇ ಪೂರ್ತಿಯಾಗಿ ಮುಗಿಸಿರಲಿಲ್ಲವಾದರೂ ಜೀವನಾನುಭವದ ಪಾಠ ನನಗಿತ್ತು. ಒಂದು ಶಾಲೆ ಕೇವಲ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಸೀಮಿತವಲ್ಲ, ಅದಕ್ಕೆ ಇಡೀ ಊರಿನ ಚಿತ್ರಣ ಬದಲಾಯಿಸುವ ಸಾಮರ್ಥ್ಯವಿದೆ ಎಂಬುದು ನನಗೆ ತಿಳಿದಿತ್ತು. ಆ ಪ್ರದೇಶದ ಕೆಲವು ಹಿರಿಕಿರಿಯ ತಲೆಗಳೂ ನನ್ನ ಯೋಚನೆಯನ್ನು ಬೆಂಬಲಿಸಿದವು. ಹಾಗೆ ಹುಟ್ಟಿಕೊಂಡಿತು ಒಂದು ಶಾಲೆಯ ಕನಸು.

ಆದರೆ ಸ್ವಂತ ಹಣ ಹಾಕಿ ಒಂದು ಖಾಸಗಿ ಶಾಲೆ ಆರಂಭಿಸುವ ಸಾಮರ್ಥ್ಯದವರು ನಾವ್ಯಾರೂ ಆಗಿರಲಿಲ್ಲ. ಮೂರು ಹೊತ್ತು ಗಂಜಿ ಊಟಕ್ಕೆ ಪರದಾಡುವವರೇ ಎಲ್ಲರೂ. ಹೆಚ್ಚಿನವರೂ ಕೂಲಿನಾಲಿ ಮಾಡಿ ಬದುಕುವವರು. ನಮಗೆ ಒಂದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯೇ ಬೇಕಾಗಿತ್ತು.

ಅವು 1980ರ ದಶಕದ ಆರಂಭಿಕ ವರ್ಷಗಳು. ಕೊಕ್ಕಡ ಪಟ್ರಮೆ ಗ್ರಾಮಗಳಿಗೆ ಮಂಗನ ಕಾಯಿಲೆ (KFD)ಯ ಬರಸಿಡಿಲು ಬಡಿದಿತ್ತು. ಸಾವಿನ ಸಂಖ್ಯೆ ದಿನೇದಿನೇ ಬೆಳೆಯುತ್ತಲೇ ಇತ್ತು. ಊರಿನ ಅಭಿವೃದ್ಧಿಯ ಕನಸು ಹೊತ್ತಿದ್ದ ನಾವು ಅದಾಗಲೇ ಅಡ್ಡೈ-ಮುಂಡೂರುಪಳಿಕೆ-ಮೈಪಾಳ ರಸ್ತೆ ನಿರ್ಮಿಸಿಯಾಗಿತ್ತು. ವಿಪರ್ಯಾಸವೆಂದರೆ ಅದೇ ಹೊಸ ರಸ್ತೆಯಲ್ಲಿ ಬಂದ ಮೊದಲ ವಾಹನ ಮಂಗನಕಾಯಿಲೆಗೆ ಬಲಿಯಾದ ಇಬ್ಬರ ಶವವನ್ನು ಹೊತ್ತು ತಂದುದಾಗಿತ್ತು... ಇದೇ ಕೊನೆ, ಇನ್ನು ಈ ಊರಿನಲ್ಲಿ ಈ ರೀತಿ ಮೃತ್ಯುವಿನ ಪ್ರವೇಶವಾಗಬಾರದು ಎಂದು ನಿರ್ಧರಿಸಿದ ನಾವು ಊರಿನ ಹತ್ತು ಸಮಸ್ತರು ಒಂದಾಗಿ ಹೋಗಿ ಕೊಕ್ಕಡ ಮತ್ತು ಸೌತೆಡ್ಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನಸಾರೆ ಪ್ರಾರ್ಥಿಸಿದೆವು. ಹೌದು, ಅದೇ ದಿನ ನಾವು ದೇವರ ಎದುರು ನಿಂತು ನಮ್ಮೂರಿಗೊಂದು ಶಾಲೆ ತರುವ ಸಂಕಲ್ಪವನ್ನೂ ಮಾಡಿದೆವು.

ನಾನೂ ಮುಂಡೂರು ಲಕ್ಷ್ಮೀನಾರಾಯಣ ಶಬರಾಯರೂ ಒಂದೆಡೆ ಕುಳಿತು ಶಾಲೆ ಆರಂಭವಾದರೆ ಎಷ್ಟು ಮಕ್ಕಳು ಒಂದನೇ ಕ್ಲಾಸಿಗೆ ಸೇರಬಹುದೆಂದು ಒಂದು ಪಟ್ಟಿ ತಯಾರಿಸಿದೆವು. ಮೂವತ್ತು ಮಕ್ಕಳ ಪಟ್ಟಿ ಸಿದ್ಧವಾಯಿತು. ನಿಜ ಹೇಳಬೇಕೆಂದರೆ ಆ ಊರಿನಲ್ಲಿ ಏಕಾಏಕಿ ಆ ಕಾಲದಲ್ಲಿ 30 ಮಕ್ಕಳನ್ನು ಶಾಲೆಗೆ ಕರೆತರುವುದು ಸಾಧ್ಯವೇ ಇರಲಿಲ್ಲ. ಹಾಗೆಂದು ಒಂದು ಉತ್ಸಾಹದಾಯಕ ಸಂಖ್ಯೆಯನ್ನು ಸರ್ಕಾರಕ್ಕೆ ನಾವು ತೋರಿಸಲೇಬೇಕಿತ್ತು. ಆ ಪಟ್ಟಿ ಹಿಡಿದುಕೊಂಡು ನಾನೂ ಶಬರಾಯರೂ ಬೆಳ್ತಂಗಡಿಯಲ್ಲಿದ್ದ ಎಇಒ ಕಚೇರಿಗೆ ಹೋದೆವು. ನಮ್ಮ ಬೇಡಿಕೆ ಆಲಿಸಿದ ಆಗಿನ ಎಇಒ ರಾಮಚಂದ್ರರಾಯರು ನಮಗೇ ಆಶ್ಚರ್ಯವಾಗುವ ಹಾಗೆ, ಇಷ್ಟು ದಿನ ಯಾಕೆ ಬರಲಿಲ್ಲ? ಈಗ ಮೈಲಿಗೊಂದು ಶಾಲೆ ಎಂಬ ಸರ್ಕಾರದ ಕಾನೂನೇ ಇದೆಯಲ್ಲ? ಎಂದು ಕೇಳಿ ನಮ್ಮ ಉತ್ಸಾಹವನ್ನು ಇಮ್ಮಡಿಸಿದರು. ನಾಡಿದ್ದು ಮಂಗಳೂರಲ್ಲಿ ಡಿಡಿಪಿಐ ಅವರ ಮೀಟಿಂಗಿದೆ. ಎಲ್ಲ ವಿವರಗಳನ್ನು ನಾಳೆ ಸಂಜೆಯೊಳಗೆ ತಂದುಕೊಡಿ. ತಡ ಮಾಡಿದರೆ ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತೆ, ಎಂದು ಪ್ರತ್ಯೇಕವಾಗಿ ನೆನಪಿಸಿದರು.
ಅಪ್ಪ
ಸರಿ, ತಿರುಗಿ ಬಂದವರೇ ನಾಳೆ ಮಾಡಬೇಕಾದ ಕೆಲಸಗಳ ತಯಾರಿಗೆ ತೊಡಗಿದೆವು. ಎಇಒ ಗ್ರಾಮನಕ್ಷೆ ಕೇಳಿದ್ದರು. ಅದು ಬೋಳೋಡಿ ವೆಂಕಟ್ರಮಣ ಭಟ್ರ ಕೈಲಿತ್ತು. ರಾತೋರಾತ್ರಿ ಅಲ್ಲಿಂದ ಅದನ್ನು ತಂದಾಯಿತು. ಮರುದಿನವೇ ನಮ್ಮ ಅರ್ಜಿ ಮತ್ತಿತರ ವಿವರಗಳನ್ನು ಎಇಒ ಅವರಿಗೆ ತಲುಪಿಸಿಯೂ ಆಯಿತು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸೌತೆಡ್ಕದಲ್ಲಿ ನಾವೆಲ್ಲ ಸೇರಿ ಪ್ರಾರ್ಥನೆ ಸಲ್ಲಿಸಿದ 14ನೇ ದಿನಕ್ಕೆ ಮುಂಡೂರುಪಳಿಕೆಗೆ ಶಾಲೆ ಮಂಜೂರಾಯಿತು. ಬಹುಶಃ ಈಗಿನ ಕಾಲದಲ್ಲೂ ಸರ್ಕಾರಿ ಸೌಲಭ್ಯವೊಂದು ಇಷ್ಟೊಂದು ಶೀಘ್ರವಾಗಿ ಮಂಜೂರಾಗದೇನೋ?

ಅಲ್ಲಿಗೆ ದೊಡ್ಡದೊಂದು ಕೆಲಸ ಮುಗಿಯಿತು. ಆಗಿನ ಕೊಕ್ಕಡದ ಗ್ರಾಮಲೆಕ್ಕಿಗರಾಗಿದ್ದ ಭಂಡಾರಿ ಎಂಬವರೊಬ್ಬರು ಶಾಲೆಗೆಂದು ಒಂದೂವರೆ ಎಕ್ರೆಯಷ್ಟು ಜಾಗ ಅಳೆದು ಕೊಟ್ಟರು. ಆದರೆ ಕೂಡಲೇ ತರಗತಿ ಆರಂಭಿಸಬೇಕಿದ್ದರಿಂದ ನಮಗೆ ಮತ್ತೆ ಸಂಕಷ್ಟಕ್ಕಿಟ್ಟುಕೊಂಡಿತು. ಅಷ್ಟು ಬೇಗ ಕಟ್ಟಡ ಎಲ್ಲಿಂದ ಬರಬೇಕು? ಆ ಹೊತ್ತಿಗೆ ಮತ್ತೆ ಆಪದ್ಬಾಂಧವರಾದವರು ಮುಂಡೂರು ಶಬರಾಯರು. ತಮ್ಮ ಮನೆಯ ಒತ್ತಿಗಿದ್ದ ಕೊಟ್ಟಿಗೆಯಲ್ಲೇ ತತ್ಕಾಲಕ್ಕೆ ಶಾಲೆ ಆರಂಭಿಸಬಹುದೆಂದರು. ಜೂನ್ 27, 1984ರ ಶುಭಮುಹೂರ್ತದಲ್ಲಿ ಎಲಿಕಳ ಸೂರ್ಯನಾರಾಯಣ ಶರ್ಮರ ಅಧ್ಯಕ್ಷತೆಯಲ್ಲಿ ದ.ಕ.ಜಿ.ಪ. ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆಯಾಯಿತು. ಹಾಗೂಹೀಗೂ 13 ವಿದ್ಯಾರ್ಥಿಗಳು ಸೇರ್ಪಡೆಗೊಂಡರು. ಶಬರಾಯರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು. ಆಗ ಜೋಡುಮಾರ್ಗ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ದಿ. ಲಿಗೋರಿ ಮಿನೆಜಸ್ ಡೆಪ್ಯುಟೇಶನ್ ಮೇಲೆ ಮೊದಲ ಅಧ್ಯಾಪಕರಾಗಿ ನಮ್ಮಲ್ಲಿಗೆ ಬಂದರು. ಆ ನಂತರ ಸ್ವಲ್ಪ ಸಮಯ ಅಶೋಕ ಮಾಸ್ಟ್ರು ಎಂಬವರು ಇದ್ದರು; ಅವರು ಪರವೂರಿನವರಾದ್ದರಿಂದ ನಮ್ಮ ಜೋಪಡಿಯಲ್ಲೇ ಉಳಿದುಕೊಂಡಿದ್ದರು.

ಅಲ್ಲಿಗೆ ನಮ್ಮ ಬಹುದಿನಗಳ ಕನಸೊಂದು ನನಸಾಯಿತಾದರೂ ಜವಾಬ್ದಾರಿ ಮುಗಿದಿರಲಿಲ್ಲ. ಶಾಲೆಗೊಂದು ಸ್ವಂತ ಕಟ್ಟಡ ಬೇಕಿತ್ತು. ಅದರ ಕೆಲಸವೂ ಆರಂಭವಾಯಿತು. ನಿಜ ಹೇಳಬೇಕೆಂದರೆ, ನಮ್ಮ ಶಾಲಾ ಕಟ್ಟಡಕ್ಕೆ ಯಾವ ಎಂಜಿನಿಯರೂ ಇರಲಿಲ್ಲ, ಯಾವ ಬಜೆಟ್ಟೂ ಇರಲಿಲ್ಲ. ಊರಿನ ಹಿರಿತಲೆಗಳೇ ಎಂಜಿನಿಯರುಗಳು, ನಮ್ಮ ಶ್ರಮದಾನವೇ ಬಜೆಟ್ಟು! ಅದೊಂದು ಏಕಕೊಠಡಿಯ ಮುಳಿಹುಲ್ಲು ಛಾವಣಿಯ ಮಣ್ಣಿನ ಗೋಡೆಯ ಸಣ್ಣ ಶಾಲಾ ಕಟ್ಟಡ. ಬದಿಜಾಲು ರಾಮಣ್ಣ ಗೌಡರು ಗೋಡೆ ಇಟ್ಟರು; ಕುರ್ಲೆಯ ಕಿಟ್ಟಣ್ಣ ಅದಕ್ಕೆ ಪೊಳಿಮ್ಮಣೆ ಹಾಕಿದರು; ಮುಂಡೂರಿನ ಶಬರಾಯ ಸಹೋದರರು ಎರಡು ಕಿಟಕಿ ಕೊಟ್ಟರು; ತೆಂಕುಬೈಲು ಶ್ಯಾಮ ಭಟ್ರು ಬಾಗಿಲು ಮಾಡಿಸಿಕೊಟ್ಟರು; ಸಿಬಂತಿಯ ಚಣ್ಣ ಗೌಡರು, ಸುದೆಪೊರ್ದು ಈಶ್ವರಗೌಡರು, ಕೊರಗಪ್ಪ ಗೌಡರು, ಚೆಂಬುಕೇರಿಯ ಬೋರ ಗೌಡರು ಹಗಲಿರುಳು ದುಡಿದರು. ಊರಿನ ಮಂದಿಯೆಲ್ಲ ಎಷ್ಟು ಉತ್ಸುಕರಾಗಿದ್ದರೆಂದರೆ ಪ್ರತೀ ಮನೆಯಿಂದ ಕನಿಷ್ಟ ಒಬ್ಬರಾದರೂ ಖುದ್ದು ಬಂದು ಶ್ರಮದಾನದಲ್ಲಿ ಪಾಲ್ಗೊಂಡರು. ಮೂರು ಪ್ರತ್ಯೇಕ ತಂಡಗಳಲ್ಲಿ ಜನ ದುಡಿದರು. ಒಟ್ಟು ೪೦ ಆಳಿನ ಕೆಲಸದಲ್ಲಿ ನಮ್ಮ ಶಾಲಾ ಕಟ್ಟಡ ಎದ್ದು ನಿಂತಿತು.
ನಮ್ಮೂರ ಮುಂಡೂರುಪಳಿಕೆ ಶಾಲೆ
ಇದೆಲ್ಲ ನಡೆದು ಈಗ 25 ವರ್ಷಗಳೇ ಉರುಳಿಹೋಗಿವೆ [ಈಗ 36 ವರ್ಷ ಆಯಿತು]. ನನಗೆ 78 ವರ್ಷ ದಾಟಿದೆ [ಈಗ 90]. ಅರೆ, ಇಷ್ಟು ಬೇಗ ನಮ್ಮ ಶಾಲೆಗೆ ರಜತ ಸಂಭ್ರಮ ಬಂತೇ ಎಂದು ಆಶ್ಚರ್ಯವಾಗುತ್ತದೆ. ಶಾಲೆಯಲ್ಲಿ, ಊರಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಶಾಲೆಗೆ ಸಿಮೆಂಟಿನ ಗೋಡೆ, ಹೆಂಚಿನ ಮಾಡು, ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಬಂದಿದೆ. ನೂರಾರು ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಹತ್ತಾರು ಅಧ್ಯಾಪಕರು ಬಂದು ಹೋಗಿದ್ದಾರೆ. ಊರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಜನ ಮೊದಲಿನಷ್ಟು ಬಡವರಾಗಿಲ್ಲ. ಅವರು ಬೇರೆಬೇರೆ ವಿಚಾರದಲ್ಲಿ ಜಾಗೃತಿ ಹೊಂದಿದ್ದಾರೆ. ಆದಾಗ್ಯೂ ಜನರ ಹತ್ತು ಹಲವು ಬೇಡಿಕೆಗಳು ಹಾಗೆಯೇ ಇವೆ. ಈಗ ಶಾಲೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ [ಈಗ 36] ಮುಖ್ಯೋಪಾಧ್ಯಾಯರಾಗಿರುವ ಜೋಸೆಫ್ ಪಿರೇರಾ ಅವರು ಈ ಊರಿಗೆ ಏನಾದರೂ ಶಾಶ್ವತವಾದ ಕೊಡುಗೆ ನೀಡಬೇಕೆಂಬ ವಿಶಿಷ್ಟ ಯೋಜನೆ ಹಾಕಿಕೊಂಡಿದ್ದಾರೆ. ಊರಿನ ಮಂದಿಯನ್ನೆಲ್ಲ ಒಟ್ಟು ಸೇರಿಸಿ ಇಲ್ಲಿನ ಸಮಸ್ಯೆ ಸವಾಲುಗಳಿಗೆ ಅವರ ಮೂಲಕವೇ ಪರಿಹಾರ ಹುಡುಕಿಸುವ ಹೊಸ ಪ್ರಯತ್ನಕ್ಕೆ ಧುಮುಕಿದ್ದಾರೆ. ಜನರೆಲ್ಲ ಅವರೊಂದಿಗೆ ಕೈಗೂಡಿಸಿ ಒಗ್ಗಟ್ಟಾಗಿ ದುಡಿದರೆ ಇದೊಂದು ಮಾದರಿ ಊರಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಿಗೆ ಕಾಡಿನ ನಡುವೆ ಹುಟ್ಟಿದ ಈ ಕಲಿಕೆಯ ಕನಸಿಗೆ ನಿಜವಾದ ಅರ್ಥ ಬರುತ್ತದೆ.
- ಸಿಬಂತಿ ವೆಂಕಟ್ರಮಣ ಭಟ್

ಗುರುವಾರ, ಜನವರಿ 16, 2020

ಈಗ ನಿಮ್ಮ ಟೈಮ್ ಶುರು

14 ಜನವರಿ 2020ರ 'ಉದಯವಾಣಿ'ಯ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

Winners don't do different things, but they do the things differently- ಅಂತಾರೆ ಮ್ಯಾನೇಜ್ಮೆಂಟ್ ಗುರು ಶಿವ ಖೇರಾ. ಗೆಲ್ಲುವವರು ಆ ವಿಧಾನ ಈ ವಿಧಾನ ಅಂತ ಸಮಯಹರಣ ಮಾಡುವುದಿಲ್ಲವಂತೆ, ಅವರು ಮಾಡುವುದನ್ನೇ ಉಳಿದವರಿಗಿಂತ ವಿಭಿನ್ನವಾಗಿ ಮಾಡುತ್ತಾರಂತೆ. ಪರೀಕ್ಷೆಗೆ ಸಿದ್ಧವಾಗುವವರೂ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗೆ ಓದಿದರೆ ಸರಿಯೋ, ಹಾಗೆ ಓದಿದರೆ ಸರಿಯೋ ಎಂದು ಅಳೆದು ಸುರಿಯುವುದರಲ್ಲೇ ಸಮಯ ಕಳೆಯುವುದು ಜಾಣತನವಲ್ಲ. ಪರೀಕ್ಷಾ ತಯಾರಿಯಲ್ಲಿ ತೊಡಗಿರುವವರಿಗೆ ಸಮಯ ಬಹಳ ಮುಖ್ಯ; ಪರೀಕ್ಷೆ ಸಮೀಪಿಸಿದಾಗಲಂತೂ ಒಂದೊಂದು ನಿಮಿಷವೂ ಅಮೂಲ್ಯ.

ಉದಯವಾಣಿ- ಜೋಶ್ 14-01-2020
ಹೀಗಾಗಿ ಯಾವ ಸಬ್ಜೆಕ್ಟನ್ನು ಎಷ್ಟೆಷ್ಟು ಹೊತ್ತು ಓದಬೇಕು, ಹೇಗೆ ಪ್ಲಾನ್ ಮಾಡಿಕೊಳ್ಳಬೇಕು ಎಂದು ಅರ್ಥ ಮಾಡಿಕೊಳ್ಳದೇ ಹೋದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲರಿಗೂ ಎಲ್ಲ ಸಬ್ಜೆಕ್ಟೂ ಒಂದೇ ಥರ ಇರುವುದಿಲ್ಲ. ಕೆಲವರಿಗೆ ವಿಜ್ಞಾನ ಕಷ್ಟ, ಇನ್ನು ಕೆಲವರಿಗೆ ಗಣಿತ ಕಷ್ಟ. ಹೀಗಾಗಿ ಎಲ್ಲರಿಗೂ ಸರಿ ಬರುವಂತಹ ಒಂದು ಕಾಮನ್ ವೇಳಾಪಟ್ಟಿ ಹಾಕಿಕೊಳ್ಳಲಾಗದು. ಒಬ್ಬೊಬ್ಬರೂ ತಮ್ಮ ಪರಿಸ್ಥಿತಿಯನ್ನು ಗಮನಿಸಿಕೊಂಡು ಅದಕ್ಕೆ ತಕ್ಕುದಾದ ವೇಳಾಪಟ್ಟಿ ಮಾಡಿಕೊಳ್ಳಬೇಕು. ಅಂತೂ ಟೈಮ್‍ಟೇಬಲ್ ಹಾಕಿಕೊಳ್ಳದೆ ಓದುವುದೆಂದರೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆಯೇ ಸರಿ.

ಎರಡು ರೀತಿಯ ವೇಳಾಪಟ್ಟಿ ಮಾಡಿಕೊಳ್ಳಬಹುದು. ಒಂದು ತರಗತಿಗಳು ನಡೆಯುತ್ತಿರುವಾಗ ಓದಿಕೊಳ್ಳುವುದಕ್ಕೆ; ಇನ್ನೊಂದು ಪರೀಕ್ಷೆಗಾಗಿಯೇ ಕೊಡುವ ರೀಡಿಂಗ್ ಹಾಲಿಡೇಸ್‍ನಲ್ಲಿ ಅಥವಾ ವಾರಾಂತ್ಯದಲ್ಲಿ ಓದಿಕೊಳ್ಳುವುದಕ್ಕೆ. ತರಗತಿಗಳಿನ್ನೂ ನಡೆಯುತ್ತಿರುವಾಗ ಓದುವುದಕ್ಕೆ ತಮ್ಮತಮ್ಮ ಶಾಲಾ/ಕಾಲೇಜು ಅವಧಿಯನ್ನು ಗಮನಿಸಿಕೊಂಡು ಟೈಮ್ ಟೇಬಲ್ ಸಿದ್ಧಪಡಿಸಿಕೊಳ್ಳಬೇಕು. ಉದಾಹರಣೆಗೆ, ಬೆಳಗ್ಗೆ 5ರಿಂದ 8ಗಂಟೆಯವರೆಗೆ, ಸಂಜೆ 8ರಿಂದ 11 ಗಂಟೆಯವರೆಗೆ ಓದುವ ಸಮಯ ಅಂತ ಮೀಸಲಿಡಬಹುದಾದರೆ, ಒಟ್ಟು ಐದು ಗಂಟೆ ಸಿಕ್ಕಹಾಗಾಯ್ತು.

ಒಂದೇ ದಿನ ಎಲ್ಲ ಸಬ್ಜೆಕ್ಟ್‍ಗಳನ್ನೂ ಒಂದಿಷ್ಟಿಷ್ಟು ಓದಿಕೊಳ್ತೀನಿ ಅಂತ ಹೊರಡುವುದಕ್ಕಿಂತ ಎರಡು ದಿನಗಳಲ್ಲಿ ಎಲ್ಲವನ್ನೂ ಕವರ್ ಮಾಡಿಕೊಳ್ಳುವುದು ಉತ್ತಮ. ಮೊದಲ ದಿನ ಬೆಳಗ್ಗೆ ದೊರೆಯುವ ಮೂರು ಗಂಟೆಗಳನ್ನು ನಿಮಗೆ ಅತ್ಯಂತ ಕಷ್ಟವೆನಿಸುವ ವಿಷಯಕ್ಕೆ ಮೀಸಲಿಡಿ. ಉದಾ: ಗಣಿತ ಅಥವಾ ವಿಜ್ಞಾನ. ಸಂಜೆಯ ವೇಳೆ, 7ರಿಂದ 8 ಗಂಟೆಯ ನಡುವೆ ಆಯಾ ದಿನ ಮಾಡಬೇಕಾದ ಹೋಂವರ್ಕ್ ಇತ್ಯಾದಿಗಳನ್ನು ಪೂರೈಸಿಕೊಳ್ಳಿ. ಆಮೇಲೆ ಒಂದರ್ಧ ಗಂಟೆ ಊಟದ ಬ್ರೇಕ್ ತೆಗೆದುಕೊಂಡರೆ 8-30ರಿಂದ 11 ಗಂಟೆಯವರೆಗೆ ಇನ್ನೊಂದು ಸಬ್ಜೆಕ್ಟನ್ನು ಓದಿಕೊಳ್ಳಬಹುದು.

ಎರಡನೆಯ ದಿನ ಇದೇ ಸಮಯದ ಮಿತಿಯಲ್ಲಿ ಉಳಿದ ನಾಲ್ಕು ಸಬ್ಜೆಕ್ಟ್‍ಗಳನ್ನು ಓದುವ ಪ್ಲಾನ್ ಮಾಡಿಕೊಳ್ಳಬೇಕು. ಅವರವರ ಆದ್ಯತೆಗನುಗುಣವಾಗಿ ಸಮಯವನ್ನು ಒಂದರಿಂದ ಒಂದೂವರೆಗಂಟೆವರೆಗೆ ಒಂದೊಂದು ವಿಷಯಕ್ಕೆ ಹಂಚಿಕೊಳ್ಳಬಹುದು. ಮರುದಿನದಿಂದ ಮತ್ತೆ ಇದೇ ಯೋಜನೆ ಪುನರಾವರ್ತನೆ ಆಗಬೇಕು.

ಇನ್ನು ರೀಡಿಂಗ್ ಹಾಲಿಡೇಸ್‍ನಲ್ಲಿ ಇಡೀ ದಿನಕ್ಕೆ ವೇಳಾಪಟ್ಟಿ ಹಾಕಿಕೊಳ್ಳುವುದು ತುಂಬ ಮುಖ್ಯ. ಇಲ್ಲವಾದರೆ ನಮಗೆ ಗೊತ್ತಿಲ್ಲದಂತೆಯೇ ಅಮೂಲ್ಯ ಸಮಯ ಎಲ್ಲೋ ಕಳೆದುಹೋಗಿಬಿಡಬಹುದು. ಸರಿಯಾಗಿ ಪ್ಲಾನ್ ಮಾಡಿಕೊಂಡರೆ ರಜಾದಿನದಲ್ಲಿ ಏನಿಲ್ಲವೆಂದರೂ 10-12 ಗಂಟೆ ಓದಿಗಾಗಿಯೇ ಬಳಸಿಕೊಳ್ಳಬಹುದು. ಉದಾಹರಣೆಗೆ, ಬೆಳಗ್ಗೆ 5ರಿಂದ 8ರವರೆಗೆ ನಿಮ್ಮ ಆಯ್ಕೆಯ ಪ್ರಮುಖ ವಿಷಯವನ್ನು ಅಭ್ಯಾಸ ಮಾಡುವುದು; 8ರಿಂದ 9ರವರೆಗೆ ಒಂದು ಬ್ರೇಕ್ ತೆಗೆದುಕೊಂಡು ಸ್ನಾನ, ತಿಂಡಿ ಪೂರೈಸಿಕೊಂಡರೆ 9ರಿಂದ 11ರವರೆಗೆ ಇನ್ನೊಂದು ಸಬ್ಜೆಕ್ಟ್ ತೆಗೆದುಕೊಳ್ಳಬಹುದು. ಆಮೇಲೆ ಒಂದರ್ಧ ಗಂಟೆ ಬ್ರೇಕ್ ತೆಗೆದುಕೊಂಡು ರಿಫ್ರೆಶ್ ಆದರೆ ಮತ್ತೆ ಮಧ್ಯಾಹ್ನ 1-30ರವರೆಗೂ ಓದಬಹುದು. ಅರ್ಧ ಗಂಟೆ ಲಂಚ್ ಬ್ರೇಕ್ ಎಂದುಕೊಂಡರೆ, ಇನ್ನೊಂದರ್ಧ ಗಂಟೆ ಸಣ್ಣ ನಿದ್ದೆ ಮಾಡಿ ರಿಫ್ರೆಶ್ ಆಗುವುದೂ ತಪ್ಪಲ್ಲ.

ಬಳಿಕ 2-30ರಿಂದ 4-30ರವರೆಗೆ ಒಂದು ಸ್ಲಾಟ್, 5ರಿಂದ 8ರವರೆಗೆ ಇನ್ನೊಂದು ಸ್ಲಾಟ್, 8-30ರಿಂದ 10-30ರವರೆಗೆ ಅಂದಿನ ಕೊನೆಯ ಸ್ಲಾಟ್. ಅಂತೂ ಪ್ರತೀ ಸ್ಲಾಟಿನ ನಡುವೆಯೂ ಒಂದಿಷ್ಟು ಗ್ಯಾಪ್ ತೆಗೆದುಕೊಳ್ಳವುದು ತುಂಬ ಮುಖ್ಯ. ಇಲ್ಲಿ ಯಾವ ಯಾವ ಸಬ್ಜೆಕ್ಟ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬೇಕು. ಬೆಳಗ್ಗೆ 5ರಿಂದ 8 ಎಷ್ಟು ಪ್ರಮುಖವಾದ ಸಮಯವೋ, ಸಂಜೆ 5ರಿಂದ 8 ಕೂಡ ಅಷ್ಟೇ ಪ್ರಮುಖ ಸಮಯ. ಊಟದ ಬಳಿಕ ಕೆಲವರಿಗೆ ಒಂದಿಷ್ಟು ಬಳಲಿಕೆ ಕಾಡಬಹುದು, ಆದರೆ 5ರಿಂದ 8ರ ಅವಧಿ ಮನಸ್ಸು ತುಂಬ ಆಕ್ಟೀವ್ ಆಗಿರುವ ಅವಧಿ.

ಎಲ್ಲ ಸಬ್ಜೆಕ್ಟ್‍ಗಳಿಗೂ ಒಂದೇ ಅಪ್ರೋಚ್‍ನಿಂದ ಅನುಕೂಲವಾಗದು. ಆಯಾ ವಿಷಯಕ್ಕನುಗುಣವಾಗಿ ತಯಾರಿಯ ವಿಧಾನದಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಗಣಿತವನ್ನೇ ತೆಗೆದುಕೊಳ್ಳಿ. ಅದಕ್ಕೆ ಪ್ರಾಕ್ಟೀಸ್, ಪ್ರಾಕ್ಟೀಸ್, ಪ್ರಾಕ್ಟೀಸ್ ಎಂಬುದೇ ಮೂಲಮಂತ್ರ. ಓದಿ, ಕೇಳಿ ಕಲಿಯುವ ಸಬ್ಜೆಕ್ಟ್ ಅದಲ್ಲ, ಮಾಡಿ ಕರಗತ ಮಾಡಿಕೊಳ್ಳಬೇಕಾದ ಸಬ್ಜೆಕ್ಟ್ ಅದು. ಜಗತ್ತಿನಲ್ಲಿ ಜೀನಿಯಸ್ ಎನಿಸಿದ ಐನ್‍ಸ್ಟೀನ್ ಏನು ಹೇಳಿದ್ದಾನೆ ಗೊತ್ತಾ? ‘ನಾನೇನೂ ತುಂಬ ಬುದ್ಧಿವಂತ ಅಲ್ಲ. ಸಮಸ್ಯೆಗಳೊಂದಿಗೆ ಸ್ವಲ್ಪ ಹೆಚ್ಚು ಹೊತ್ತು ಕಳೆಯುತ್ತೇನೆ ಅಷ್ಟೇ’ ಅಂತ. ಎಷ್ಟೇ ಕಠಿಣ ವಿಷಯವಾದರೂ ನಮ್ಮ ಸಮಯ ಹಾಗೂ ಪ್ರಾಕ್ಟೀಸಿನ ಎದುರು ಸೋಲಲೇ ಬೇಕು. ಈ ಹಂತದಲ್ಲಿ ಮಾಡಬೇಕಾದ ಎರಡನೇ ಕೆಲಸ ಅಂದ್ರೆ ತಪ್ಪುಗಳನ್ನು ಅರ್ಥ ಮಾಡಿಕೊಳ್ಳುವುದು. ಗಣಿತದಲ್ಲಿ ಒಂದು ಸ್ಟೆಪ್‍ನಲ್ಲಿ ತಪ್ಪಾದರೆ ಉಳಿದದ್ದೆಲ್ಲ ತಪ್ಪಾದಂತೆಯೇ ಅಲ್ಲವೇ? ಹಾಗಾಗಿ ಯಾವ ಹಂತದಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ಗಮನಿಸಿಕೊಳ್ಳಬೇಕು.

ಇನ್ನೊಂದು ಪ್ರಮುಖ ಸಂಗತಿ ಎಂದರೆ ಬೇಸಿಕ್ಸ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು. ಗಣಿತದಲ್ಲಿ ಫಾರ್ಮುಲಾ ಬಿಟ್ಟು ಬೇರೆ ಏನನ್ನೂ ಬೈಹಾರ್ಟ್‍ಮಾಡುವುದು ತುಂಬ ಕೆಟ್ಟದು. ಅರ್ಥವಾಗದ ಪ್ರಾಥಮಿಕ ವಿಷಯಗಳನ್ನು ಅಧ್ಯಾಪಕರು ಅಥವಾ ಸ್ನೇಹಿತರ ಸಹಾಯದಿಂದ ಆರಂಭದಲ್ಲೇ ಬಗೆಹರಿಸಿಕೊಳ್ಳಬೇಕು. ಗಣಿತದ ಓದಿನಲ್ಲಿ ತಾಳ್ಮೆ ತುಂಬ ಮುಖ್ಯ. ನಿಮ್ಮ ಮನಸ್ಥಿತಿಗೆ ಹೊಂದಿಕೊಳ್ಳುವ ಒಬ್ಬ ಅಥವಾ ಇಬ್ಬರು ಗೆಳೆಯರಿದ್ದರೆ ಅವರೊಂದಿಗೆ ಅಭ್ಯಾಸ ಮಾಡುವುದರಿಂದ ಅನುಕೂಲವಾಗಬಹುದು. ಅನೇಕ ಸಲ ಗಣಿತ ನಮ್ಮ ನಿಜ ಬದುಕಿಗೆ ತುಂಬ ಹತ್ತಿರವಾಗಿರುತ್ತದೆ. ದಿನನಿತ್ಯದ ಉದಾಹರಣೆಗಳೊಂದಿಗೆ ಅದನ್ನು ಸಮೀಕರಿಸಿಕೊಂಡಾಗ ಬೇಗ ಅರ್ಥವಾಗುತ್ತದೆ ಮತ್ತು ಮರೆತು ಹೋಗುವುದಿಲ್ಲ.

ಇನ್ನು ವಿಜ್ಞಾನಕ್ಕೆ ಬಂದರೆ, ಗೆಳೆಯನೊಬ್ಬನಿಗೆ ಪಾಠ ಮಾಡುವ ವಿಧಾನ ತುಂಬ ಉಪಯುಕ್ತ. ಇದರಿಂದ ವಿಷಯಗಳು ಮನಸ್ಸಿನಲ್ಲಿ ತುಂಬ ಗಟ್ಟಿಯಾಗಿ ನೆಲೆಯಾಗುತ್ತವೆ. ಓದುತ್ತಲೇ ಪಾಯಿಂಟ್ಸ್ ಮಾಡಿಕೊಳ್ಳುವುದು, ಈಕ್ವೇಶನ್‍ಗಳನ್ನು ಪ್ರತ್ಯೇಕ ಕಾರ್ಡ್‍ಗಳಲ್ಲಿ ಬರೆದಿಟ್ಟುಕೊಳ್ಳುವುದು, ಬೇಸಿಕ್ಸ್ ಯಾವುದನ್ನೂ ಬಿಡದೆ ಅರ್ಥ ಮಾಡಿಕೊಳ್ಳುವುದು, ಓದಿದ್ದನ್ನು ಆಗಾಗ ನೆನಪು ಮಾಡಿಕೊಳ್ಳಲು ಪ್ರಯತ್ನಿಸುವುದು, ಮಾಕ್ ಟೆಸ್ಟ್‍ಗಳನ್ನು ಬರೆಯುವುದು ಬಹಳ ಅಗತ್ಯ. ಕೊನೇ ಕ್ಷಣದಲ್ಲಿ ಹೊಸ ಟಾಪಿಕ್ ಅನ್ನು ಓದಲು ಹೊರಡದಿರುವುದೇ ಒಳ್ಳೆಯದು.

ಸಿಬಂತಿ ಪದ್ಮನಾಭ ಕೆ. ವಿ.