ಗುರುವಾರ, ಜನವರಿ 16, 2020

ಈಗ ನಿಮ್ಮ ಟೈಮ್ ಶುರು

14 ಜನವರಿ 2020ರ 'ಉದಯವಾಣಿ'ಯ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

Winners don't do different things, but they do the things differently- ಅಂತಾರೆ ಮ್ಯಾನೇಜ್ಮೆಂಟ್ ಗುರು ಶಿವ ಖೇರಾ. ಗೆಲ್ಲುವವರು ಆ ವಿಧಾನ ಈ ವಿಧಾನ ಅಂತ ಸಮಯಹರಣ ಮಾಡುವುದಿಲ್ಲವಂತೆ, ಅವರು ಮಾಡುವುದನ್ನೇ ಉಳಿದವರಿಗಿಂತ ವಿಭಿನ್ನವಾಗಿ ಮಾಡುತ್ತಾರಂತೆ. ಪರೀಕ್ಷೆಗೆ ಸಿದ್ಧವಾಗುವವರೂ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗೆ ಓದಿದರೆ ಸರಿಯೋ, ಹಾಗೆ ಓದಿದರೆ ಸರಿಯೋ ಎಂದು ಅಳೆದು ಸುರಿಯುವುದರಲ್ಲೇ ಸಮಯ ಕಳೆಯುವುದು ಜಾಣತನವಲ್ಲ. ಪರೀಕ್ಷಾ ತಯಾರಿಯಲ್ಲಿ ತೊಡಗಿರುವವರಿಗೆ ಸಮಯ ಬಹಳ ಮುಖ್ಯ; ಪರೀಕ್ಷೆ ಸಮೀಪಿಸಿದಾಗಲಂತೂ ಒಂದೊಂದು ನಿಮಿಷವೂ ಅಮೂಲ್ಯ.

ಉದಯವಾಣಿ- ಜೋಶ್ 14-01-2020
ಹೀಗಾಗಿ ಯಾವ ಸಬ್ಜೆಕ್ಟನ್ನು ಎಷ್ಟೆಷ್ಟು ಹೊತ್ತು ಓದಬೇಕು, ಹೇಗೆ ಪ್ಲಾನ್ ಮಾಡಿಕೊಳ್ಳಬೇಕು ಎಂದು ಅರ್ಥ ಮಾಡಿಕೊಳ್ಳದೇ ಹೋದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲರಿಗೂ ಎಲ್ಲ ಸಬ್ಜೆಕ್ಟೂ ಒಂದೇ ಥರ ಇರುವುದಿಲ್ಲ. ಕೆಲವರಿಗೆ ವಿಜ್ಞಾನ ಕಷ್ಟ, ಇನ್ನು ಕೆಲವರಿಗೆ ಗಣಿತ ಕಷ್ಟ. ಹೀಗಾಗಿ ಎಲ್ಲರಿಗೂ ಸರಿ ಬರುವಂತಹ ಒಂದು ಕಾಮನ್ ವೇಳಾಪಟ್ಟಿ ಹಾಕಿಕೊಳ್ಳಲಾಗದು. ಒಬ್ಬೊಬ್ಬರೂ ತಮ್ಮ ಪರಿಸ್ಥಿತಿಯನ್ನು ಗಮನಿಸಿಕೊಂಡು ಅದಕ್ಕೆ ತಕ್ಕುದಾದ ವೇಳಾಪಟ್ಟಿ ಮಾಡಿಕೊಳ್ಳಬೇಕು. ಅಂತೂ ಟೈಮ್‍ಟೇಬಲ್ ಹಾಕಿಕೊಳ್ಳದೆ ಓದುವುದೆಂದರೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆಯೇ ಸರಿ.

ಎರಡು ರೀತಿಯ ವೇಳಾಪಟ್ಟಿ ಮಾಡಿಕೊಳ್ಳಬಹುದು. ಒಂದು ತರಗತಿಗಳು ನಡೆಯುತ್ತಿರುವಾಗ ಓದಿಕೊಳ್ಳುವುದಕ್ಕೆ; ಇನ್ನೊಂದು ಪರೀಕ್ಷೆಗಾಗಿಯೇ ಕೊಡುವ ರೀಡಿಂಗ್ ಹಾಲಿಡೇಸ್‍ನಲ್ಲಿ ಅಥವಾ ವಾರಾಂತ್ಯದಲ್ಲಿ ಓದಿಕೊಳ್ಳುವುದಕ್ಕೆ. ತರಗತಿಗಳಿನ್ನೂ ನಡೆಯುತ್ತಿರುವಾಗ ಓದುವುದಕ್ಕೆ ತಮ್ಮತಮ್ಮ ಶಾಲಾ/ಕಾಲೇಜು ಅವಧಿಯನ್ನು ಗಮನಿಸಿಕೊಂಡು ಟೈಮ್ ಟೇಬಲ್ ಸಿದ್ಧಪಡಿಸಿಕೊಳ್ಳಬೇಕು. ಉದಾಹರಣೆಗೆ, ಬೆಳಗ್ಗೆ 5ರಿಂದ 8ಗಂಟೆಯವರೆಗೆ, ಸಂಜೆ 8ರಿಂದ 11 ಗಂಟೆಯವರೆಗೆ ಓದುವ ಸಮಯ ಅಂತ ಮೀಸಲಿಡಬಹುದಾದರೆ, ಒಟ್ಟು ಐದು ಗಂಟೆ ಸಿಕ್ಕಹಾಗಾಯ್ತು.

ಒಂದೇ ದಿನ ಎಲ್ಲ ಸಬ್ಜೆಕ್ಟ್‍ಗಳನ್ನೂ ಒಂದಿಷ್ಟಿಷ್ಟು ಓದಿಕೊಳ್ತೀನಿ ಅಂತ ಹೊರಡುವುದಕ್ಕಿಂತ ಎರಡು ದಿನಗಳಲ್ಲಿ ಎಲ್ಲವನ್ನೂ ಕವರ್ ಮಾಡಿಕೊಳ್ಳುವುದು ಉತ್ತಮ. ಮೊದಲ ದಿನ ಬೆಳಗ್ಗೆ ದೊರೆಯುವ ಮೂರು ಗಂಟೆಗಳನ್ನು ನಿಮಗೆ ಅತ್ಯಂತ ಕಷ್ಟವೆನಿಸುವ ವಿಷಯಕ್ಕೆ ಮೀಸಲಿಡಿ. ಉದಾ: ಗಣಿತ ಅಥವಾ ವಿಜ್ಞಾನ. ಸಂಜೆಯ ವೇಳೆ, 7ರಿಂದ 8 ಗಂಟೆಯ ನಡುವೆ ಆಯಾ ದಿನ ಮಾಡಬೇಕಾದ ಹೋಂವರ್ಕ್ ಇತ್ಯಾದಿಗಳನ್ನು ಪೂರೈಸಿಕೊಳ್ಳಿ. ಆಮೇಲೆ ಒಂದರ್ಧ ಗಂಟೆ ಊಟದ ಬ್ರೇಕ್ ತೆಗೆದುಕೊಂಡರೆ 8-30ರಿಂದ 11 ಗಂಟೆಯವರೆಗೆ ಇನ್ನೊಂದು ಸಬ್ಜೆಕ್ಟನ್ನು ಓದಿಕೊಳ್ಳಬಹುದು.

ಎರಡನೆಯ ದಿನ ಇದೇ ಸಮಯದ ಮಿತಿಯಲ್ಲಿ ಉಳಿದ ನಾಲ್ಕು ಸಬ್ಜೆಕ್ಟ್‍ಗಳನ್ನು ಓದುವ ಪ್ಲಾನ್ ಮಾಡಿಕೊಳ್ಳಬೇಕು. ಅವರವರ ಆದ್ಯತೆಗನುಗುಣವಾಗಿ ಸಮಯವನ್ನು ಒಂದರಿಂದ ಒಂದೂವರೆಗಂಟೆವರೆಗೆ ಒಂದೊಂದು ವಿಷಯಕ್ಕೆ ಹಂಚಿಕೊಳ್ಳಬಹುದು. ಮರುದಿನದಿಂದ ಮತ್ತೆ ಇದೇ ಯೋಜನೆ ಪುನರಾವರ್ತನೆ ಆಗಬೇಕು.

ಇನ್ನು ರೀಡಿಂಗ್ ಹಾಲಿಡೇಸ್‍ನಲ್ಲಿ ಇಡೀ ದಿನಕ್ಕೆ ವೇಳಾಪಟ್ಟಿ ಹಾಕಿಕೊಳ್ಳುವುದು ತುಂಬ ಮುಖ್ಯ. ಇಲ್ಲವಾದರೆ ನಮಗೆ ಗೊತ್ತಿಲ್ಲದಂತೆಯೇ ಅಮೂಲ್ಯ ಸಮಯ ಎಲ್ಲೋ ಕಳೆದುಹೋಗಿಬಿಡಬಹುದು. ಸರಿಯಾಗಿ ಪ್ಲಾನ್ ಮಾಡಿಕೊಂಡರೆ ರಜಾದಿನದಲ್ಲಿ ಏನಿಲ್ಲವೆಂದರೂ 10-12 ಗಂಟೆ ಓದಿಗಾಗಿಯೇ ಬಳಸಿಕೊಳ್ಳಬಹುದು. ಉದಾಹರಣೆಗೆ, ಬೆಳಗ್ಗೆ 5ರಿಂದ 8ರವರೆಗೆ ನಿಮ್ಮ ಆಯ್ಕೆಯ ಪ್ರಮುಖ ವಿಷಯವನ್ನು ಅಭ್ಯಾಸ ಮಾಡುವುದು; 8ರಿಂದ 9ರವರೆಗೆ ಒಂದು ಬ್ರೇಕ್ ತೆಗೆದುಕೊಂಡು ಸ್ನಾನ, ತಿಂಡಿ ಪೂರೈಸಿಕೊಂಡರೆ 9ರಿಂದ 11ರವರೆಗೆ ಇನ್ನೊಂದು ಸಬ್ಜೆಕ್ಟ್ ತೆಗೆದುಕೊಳ್ಳಬಹುದು. ಆಮೇಲೆ ಒಂದರ್ಧ ಗಂಟೆ ಬ್ರೇಕ್ ತೆಗೆದುಕೊಂಡು ರಿಫ್ರೆಶ್ ಆದರೆ ಮತ್ತೆ ಮಧ್ಯಾಹ್ನ 1-30ರವರೆಗೂ ಓದಬಹುದು. ಅರ್ಧ ಗಂಟೆ ಲಂಚ್ ಬ್ರೇಕ್ ಎಂದುಕೊಂಡರೆ, ಇನ್ನೊಂದರ್ಧ ಗಂಟೆ ಸಣ್ಣ ನಿದ್ದೆ ಮಾಡಿ ರಿಫ್ರೆಶ್ ಆಗುವುದೂ ತಪ್ಪಲ್ಲ.

ಬಳಿಕ 2-30ರಿಂದ 4-30ರವರೆಗೆ ಒಂದು ಸ್ಲಾಟ್, 5ರಿಂದ 8ರವರೆಗೆ ಇನ್ನೊಂದು ಸ್ಲಾಟ್, 8-30ರಿಂದ 10-30ರವರೆಗೆ ಅಂದಿನ ಕೊನೆಯ ಸ್ಲಾಟ್. ಅಂತೂ ಪ್ರತೀ ಸ್ಲಾಟಿನ ನಡುವೆಯೂ ಒಂದಿಷ್ಟು ಗ್ಯಾಪ್ ತೆಗೆದುಕೊಳ್ಳವುದು ತುಂಬ ಮುಖ್ಯ. ಇಲ್ಲಿ ಯಾವ ಯಾವ ಸಬ್ಜೆಕ್ಟ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬೇಕು. ಬೆಳಗ್ಗೆ 5ರಿಂದ 8 ಎಷ್ಟು ಪ್ರಮುಖವಾದ ಸಮಯವೋ, ಸಂಜೆ 5ರಿಂದ 8 ಕೂಡ ಅಷ್ಟೇ ಪ್ರಮುಖ ಸಮಯ. ಊಟದ ಬಳಿಕ ಕೆಲವರಿಗೆ ಒಂದಿಷ್ಟು ಬಳಲಿಕೆ ಕಾಡಬಹುದು, ಆದರೆ 5ರಿಂದ 8ರ ಅವಧಿ ಮನಸ್ಸು ತುಂಬ ಆಕ್ಟೀವ್ ಆಗಿರುವ ಅವಧಿ.

ಎಲ್ಲ ಸಬ್ಜೆಕ್ಟ್‍ಗಳಿಗೂ ಒಂದೇ ಅಪ್ರೋಚ್‍ನಿಂದ ಅನುಕೂಲವಾಗದು. ಆಯಾ ವಿಷಯಕ್ಕನುಗುಣವಾಗಿ ತಯಾರಿಯ ವಿಧಾನದಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಗಣಿತವನ್ನೇ ತೆಗೆದುಕೊಳ್ಳಿ. ಅದಕ್ಕೆ ಪ್ರಾಕ್ಟೀಸ್, ಪ್ರಾಕ್ಟೀಸ್, ಪ್ರಾಕ್ಟೀಸ್ ಎಂಬುದೇ ಮೂಲಮಂತ್ರ. ಓದಿ, ಕೇಳಿ ಕಲಿಯುವ ಸಬ್ಜೆಕ್ಟ್ ಅದಲ್ಲ, ಮಾಡಿ ಕರಗತ ಮಾಡಿಕೊಳ್ಳಬೇಕಾದ ಸಬ್ಜೆಕ್ಟ್ ಅದು. ಜಗತ್ತಿನಲ್ಲಿ ಜೀನಿಯಸ್ ಎನಿಸಿದ ಐನ್‍ಸ್ಟೀನ್ ಏನು ಹೇಳಿದ್ದಾನೆ ಗೊತ್ತಾ? ‘ನಾನೇನೂ ತುಂಬ ಬುದ್ಧಿವಂತ ಅಲ್ಲ. ಸಮಸ್ಯೆಗಳೊಂದಿಗೆ ಸ್ವಲ್ಪ ಹೆಚ್ಚು ಹೊತ್ತು ಕಳೆಯುತ್ತೇನೆ ಅಷ್ಟೇ’ ಅಂತ. ಎಷ್ಟೇ ಕಠಿಣ ವಿಷಯವಾದರೂ ನಮ್ಮ ಸಮಯ ಹಾಗೂ ಪ್ರಾಕ್ಟೀಸಿನ ಎದುರು ಸೋಲಲೇ ಬೇಕು. ಈ ಹಂತದಲ್ಲಿ ಮಾಡಬೇಕಾದ ಎರಡನೇ ಕೆಲಸ ಅಂದ್ರೆ ತಪ್ಪುಗಳನ್ನು ಅರ್ಥ ಮಾಡಿಕೊಳ್ಳುವುದು. ಗಣಿತದಲ್ಲಿ ಒಂದು ಸ್ಟೆಪ್‍ನಲ್ಲಿ ತಪ್ಪಾದರೆ ಉಳಿದದ್ದೆಲ್ಲ ತಪ್ಪಾದಂತೆಯೇ ಅಲ್ಲವೇ? ಹಾಗಾಗಿ ಯಾವ ಹಂತದಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ಗಮನಿಸಿಕೊಳ್ಳಬೇಕು.

ಇನ್ನೊಂದು ಪ್ರಮುಖ ಸಂಗತಿ ಎಂದರೆ ಬೇಸಿಕ್ಸ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು. ಗಣಿತದಲ್ಲಿ ಫಾರ್ಮುಲಾ ಬಿಟ್ಟು ಬೇರೆ ಏನನ್ನೂ ಬೈಹಾರ್ಟ್‍ಮಾಡುವುದು ತುಂಬ ಕೆಟ್ಟದು. ಅರ್ಥವಾಗದ ಪ್ರಾಥಮಿಕ ವಿಷಯಗಳನ್ನು ಅಧ್ಯಾಪಕರು ಅಥವಾ ಸ್ನೇಹಿತರ ಸಹಾಯದಿಂದ ಆರಂಭದಲ್ಲೇ ಬಗೆಹರಿಸಿಕೊಳ್ಳಬೇಕು. ಗಣಿತದ ಓದಿನಲ್ಲಿ ತಾಳ್ಮೆ ತುಂಬ ಮುಖ್ಯ. ನಿಮ್ಮ ಮನಸ್ಥಿತಿಗೆ ಹೊಂದಿಕೊಳ್ಳುವ ಒಬ್ಬ ಅಥವಾ ಇಬ್ಬರು ಗೆಳೆಯರಿದ್ದರೆ ಅವರೊಂದಿಗೆ ಅಭ್ಯಾಸ ಮಾಡುವುದರಿಂದ ಅನುಕೂಲವಾಗಬಹುದು. ಅನೇಕ ಸಲ ಗಣಿತ ನಮ್ಮ ನಿಜ ಬದುಕಿಗೆ ತುಂಬ ಹತ್ತಿರವಾಗಿರುತ್ತದೆ. ದಿನನಿತ್ಯದ ಉದಾಹರಣೆಗಳೊಂದಿಗೆ ಅದನ್ನು ಸಮೀಕರಿಸಿಕೊಂಡಾಗ ಬೇಗ ಅರ್ಥವಾಗುತ್ತದೆ ಮತ್ತು ಮರೆತು ಹೋಗುವುದಿಲ್ಲ.

ಇನ್ನು ವಿಜ್ಞಾನಕ್ಕೆ ಬಂದರೆ, ಗೆಳೆಯನೊಬ್ಬನಿಗೆ ಪಾಠ ಮಾಡುವ ವಿಧಾನ ತುಂಬ ಉಪಯುಕ್ತ. ಇದರಿಂದ ವಿಷಯಗಳು ಮನಸ್ಸಿನಲ್ಲಿ ತುಂಬ ಗಟ್ಟಿಯಾಗಿ ನೆಲೆಯಾಗುತ್ತವೆ. ಓದುತ್ತಲೇ ಪಾಯಿಂಟ್ಸ್ ಮಾಡಿಕೊಳ್ಳುವುದು, ಈಕ್ವೇಶನ್‍ಗಳನ್ನು ಪ್ರತ್ಯೇಕ ಕಾರ್ಡ್‍ಗಳಲ್ಲಿ ಬರೆದಿಟ್ಟುಕೊಳ್ಳುವುದು, ಬೇಸಿಕ್ಸ್ ಯಾವುದನ್ನೂ ಬಿಡದೆ ಅರ್ಥ ಮಾಡಿಕೊಳ್ಳುವುದು, ಓದಿದ್ದನ್ನು ಆಗಾಗ ನೆನಪು ಮಾಡಿಕೊಳ್ಳಲು ಪ್ರಯತ್ನಿಸುವುದು, ಮಾಕ್ ಟೆಸ್ಟ್‍ಗಳನ್ನು ಬರೆಯುವುದು ಬಹಳ ಅಗತ್ಯ. ಕೊನೇ ಕ್ಷಣದಲ್ಲಿ ಹೊಸ ಟಾಪಿಕ್ ಅನ್ನು ಓದಲು ಹೊರಡದಿರುವುದೇ ಒಳ್ಳೆಯದು.

ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಜನವರಿ 3, 2020

ಅಹಂನ ಅಂತ್ಯ, ಸಾಧನೆಯ ಆರಂಭ

ಡಿಸೆಂಬರ್ 28, 2019ರಿಂದ ಜನವರಿ 3, 2020ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ನೂರಾರು ಯುದ್ಧಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸಿ ‘ದಿ ಗ್ರೇಟ್’ ಎಂದು ಕರೆಸಿಕೊಂಡ ಅಲೆಕ್ಸಾಂಡರ್ ತನ್ನ
ದಂಡಯಾತ್ರೆಯಿಂದ ಮರಳುತ್ತಿದ್ದಾಗಲೇ ಕಾಯಿಲೆ ಬಿದ್ದುಬಿಟ್ಟ. ರೋಗ ದೇಹವನ್ನೆಲ್ಲ ವ್ಯಾಪಿಸಿ ಗುಣಪಡಿಸಲಾರದ ಹಂತಕ್ಕೆ ಬಂದು ಮರಣಶಯ್ಯೆಯ ಮೇಲೆ ಮಲಗಿದ. ಸಾವನ್ನು ಎದುರು ನೋಡುತ್ತಿದ್ದ ಅಲೆಕ್ಸಾಂಡರ್ ತನ್ನ ಸೇನಾಧಿಪತಿಗಳನ್ನು ಕರೆದು ಹೀಗೆಂದನಂತೆ:

ಬೋಧಿವೃಕ್ಷ: ಸಿಬಂತಿ ಪದ್ಮನಾಭ
‘ನಾನು ಇನ್ನೇನು ಕೊನೆಯುಸಿರು ಎಳೆಯಲಿದ್ದೇನೆ. ನನ್ನ ಮೂರು ಆಸೆಗಳನ್ನು ದಯಮಾಡಿ ಈಡೇರಿಸಿ. ಮೊದಲನೆಯದು, ನನ್ನ ಶವಪೆಟ್ಟಿಗೆಯನ್ನು ಈವರೆಗೆ ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ಹೊತ್ತೊಯ್ಯಬೇಕು. ಎರಡನೆಯದು, ನನ್ನ ಶವಯಾತ್ರೆ ಸಾಗುವ ದಾರಿಯಲ್ಲಿ ನನ್ನ ಭಂಡಾರದಲ್ಲಿರುವ ಮುತ್ತುರತ್ನಗಳನ್ನೆಲ್ಲ ಚೆಲ್ಲಿರಬೇಕು. ಮೂರನೆಯದು, ನನ್ನ ಎರಡೂ ಕೈಗಳನ್ನು ಶವಪೆಟ್ಟಿಗೆಯಿಂದ ಆಚೆ ಕಾಣುವಂತೆ ಹೊರಚಾಚಿಸಿ ಇಟ್ಟಿರಬೇಕು.’

ದುಃಖಭರಿತರಾಗಿದ್ದ ಮಂತ್ರಿ ಸೇನಾಧಿಪತಿಗಳು, ‘ತಮ್ಮ ಆಸೆಗಳನ್ನು ಖಂಡಿತ ಈಡೇರಿಸುವೆವು ದೊರೆ. ಆದರೆ ಇವುಗಳ ಮರ್ಮವೇನು ತಿಳಿಯಲಿಲ್ಲವಲ್ಲ?’ ಎಂದು ಕೇಳಿದರಂತೆ. ಪ್ರಾಣೋತ್ಕ್ರಮಣದ ಸ್ಥಿತಿಯಲ್ಲೂ ಅಲೆಕ್ಸಾಂಡರ್ ವಿವರಿಸಿದನಂತೆ: ‘ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ನನ್ನ ಶವಪೆಟ್ಟಿಗೆ ಹೊರುವುದನ್ನು ನೋಡಿ ಮರಣ ಸಮೀಪಿಸಿದವನನ್ನು ವಾಸ್ತವವಾಗಿ ಯಾವ ವೈದ್ಯನೂ ಉಳಿಸಲಾರ ಎಂಬುದನ್ನು ಪ್ರಪಂಚ ಅರಿಯಲಿ.  ಶವಯಾತ್ರೆಯ ದಾರಿಯಲ್ಲಿ ಚೆಲ್ಲಿರುವ ಮುತ್ತು ರತ್ನಗಳನ್ನು ನೋಡಿ ನಾನು ಈವರೆಗೆ ಗುಡ್ಡೆಹಾಕಿದ ಯಾವ ಸಂಪತ್ತೂ ನನ್ನ ಪ್ರಾಣ ಉಳಿಸಲಿಲ್ಲ ಎಂಬುದನ್ನು ಜನ ತಿಳಿಯಲಿ. ಶವಪೆಟ್ಟಿಗೆಯಿಂದ ಹೊರಚಾಚಿರುವ ಕೈಗಳನ್ನು ನೋಡಿ ಇಷ್ಟೆಲ್ಲ ಸಾಧಿಸಿದ ಅಲೆಕ್ಸಾಂಡರ್ ಕೊನೆಗೆ ಬರಿಗೈಯಲ್ಲೇ ಮರಳಿದ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಲಿ.’

ಹೌದು, ಮನುಷ್ಯ ತಾನೇನೇ ಸಾಧಿಸಿದ್ದೇನೆ ಅಂದುಕೊಂಡರೂ ಅಂತಿಮವಾಗಿ ಯಾವುದೂ ಉಳಿಯುವುದಿಲ್ಲ. ತನ್ನೊಳಗಿನ ಅಹಂ ಕರಗದ ಹೊರತು ತಾನೇನು, ತನ್ನ ಬದುಕಿನ ಉದ್ದೇಶವೇನು ಎಂಬುದು ಅರ್ಥವಾಗುವುದೂ ಇಲ್ಲ. ತಾವು ಯಾರನ್ನೋ ಸೋಲಿಸಿದ್ದೇವೆ, ಏನನ್ನೋ ಸಾಧಿಸಿದ್ದೇವೆ, ಮುಂದೇನೋ ಮಹತ್ತರವಾದದ್ದನ್ನು ಪಡೆಯಲಿದ್ದೇವೆ ಎಂದು ಬೀಗುವವರು ಬಹಳ. ಕೊನೆಗೆ ತಮಗೂ ಅಲೆಕ್ಸಾಂಡರನ ಗತಿಯೇ ಎಂಬ ಪ್ರಜ್ಞೆಯಿರುವವರು ವಿರಳ. ಆ ಪ್ರಜ್ಞೆಯಿರುವವರ ಒಳಗೆ ಅಹಂಕಾರ ಬೆಳೆಯುವುದಾದರೂ ಹೇಗೆ?

ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ ||
ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಂಚಯಾನ್ ||
ಎನ್ನುತ್ತಾನೇ ಗೀತಾಚಾರ್ಯ. ಆಶಾರೂಪೀ ನೂರಾರು ಹಗ್ಗಗಳಿಂದ ಬಂಧಿಸಲ್ಪಟ್ಟು, ಕಾಮ-ಕ್ರೋಧಾದಿಗಳ ಪರಾಯಣರಾಗಿ ವಿಷಯಭೋಗಗಳ ಪೂರೈಕೆಗಾಗಿ ಜನರು ಅನ್ಯಾಯದಿಂದ ಹಣವೇ ಮುಂತಾದ ವಸ್ತುಗಳನ್ನು ಕೂಡಿಡಲು ಪ್ರಯತ್ನಿಸುತ್ತಾರೆ. ಆಮೇಲೆ ತಾನೇ ಶ್ರೀಮಂತ, ತಾನೇ ಬಲಾಢ್ಯ, ತನ್ನ ಸಮಾನರು ಬೇರೆ ಯಾರೂ ಇಲ್ಲ ಎಂಬ ಮದವನ್ನು ಬೆಳೆಸಿಕೊಂಡು ಘೋರ ನರಕದಲ್ಲಿ ಬೀಳುತ್ತಾರೆ.

ಕೃಷ್ಣ ಮತ್ತೆ ಅರ್ಜುನನಿಗೆ ಹೇಳುತ್ತಾನೆ:
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ |
ಮಾಮಾತ್ಮ ಪರದೇಹೇಷು ಪ್ರದ್ವಿಷಂತೋಭ್ಯಸೂಯಕಾಃ ||
ಅಂದರೆ, ಅಹಂಕಾರ, ಬಲ, ದರ್ಪ, ಕಾಮ-ಕ್ರೋಧಾದಿ ಪರಾಯಣರೂ ಮತ್ತು ಪರನಿಂದಕರೂ ಆದ ಅವರು ತಮ್ಮ ಮತ್ತು ಇತರರೆಲ್ಲರ ದೇಹದಲ್ಲಿರುವ ಅಂತರ್ಯಾಮಿಯಾದ ನನ್ನನ್ನು ದ್ವೇಷಿಸುತ್ತಾರೆ.

ವಾಸ್ತವವಾಗಿ ತಮ್ಮೊಳಗನ್ನೇ ದ್ವೇಷಿಸುವ ಇಂತಹ ಮಂದಿ ಅಂತಿಮವಾಗಿ ತಮ್ಮನ್ನು ಅರಿಯುವ ಪ್ರಯತ್ನವನ್ನೇ ಮಾಡುವುದಿಲ್ಲ. ‘ಕಾಮ, ಕ್ರೋಧ ಹಾಗೂ ಲೋಭ ಈ ಮೂರು ವಿಧವಾದ ನರಕದ ದ್ವಾರವು ಆತ್ಮನನ್ನು ನಾಶಮಾಡುವವು ಅರ್ಥಾತ್ ಅಧೋಗತಿಗೆ ತಳ್ಳುವವು’ ಎಂದು ಎಚ್ಚರಿಸುತ್ತಾನೆ ಶ್ರೀಕೃಷ್ಣ.

ಇದನ್ನು ಅರ್ಥಮಾಡಿಕೊಂಡ ದಿನವೇ ಸಿದ್ಧಾರ್ಥನೂ ತನ್ನ ಸಕಲ ಸುಖಗಳನ್ನು ತೊರೆದು ಜ್ಞಾನೋದಯದ ಮಾರ್ಗ ಹುಡುಕಿ ಹೊರಟದ್ದು? ಕಾಯಿಲೆ, ಮುಪ್ಪು, ಸಾವು- ಈ ಮೂರು ಯಾವ ಮನುಷ್ಯನನ್ನೂ ಬಿಡಲಾರವು, ಎಲ್ಲರ ಬದುಕೂ ಒಂದು ದಿನ ಕೊನೆಯಾಗಲೇಬೇಕು ಎಂದ ಮೇಲೆ ಅಂತಹ ಬದುಕನ್ನು ಅಹಂಕಾರದಿಂದಲೇ ಕಳೆಯುವ ಬದಲು ಆತ್ಮಶೋಧನೆಯಲ್ಲಿ ಕಳೆಯುವುದು ಮೇಲಲ್ಲವೇ ಎಂದು ಅವನಿಗೆ ಅನಿಸಿದ್ದು ಆತನ ನಿಜವಾದ ಯಶಸ್ಸಿನ ಹಾದಿ ಆರಂಭವಾದ ಕ್ಷಣ.

‘ಅಹಂ ಎಂಬುದು ನಮ್ಮ ಕಣ್ಣಿಗೆ ಕವಿದ ಧೂಳು. ಈ ಧೂಳನ್ನು ತೊಲಗಿಸಿದರಷ್ಟೇ ನಮ್ಮನ್ನೂ ಪ್ರಪಂಚವನ್ನೂ ಸ್ಪಷ್ಟವಾಗಿ ನೋಡಿಕೊಳ್ಳಬಹುದು’ ಎಂದ ಬುದ್ಧ. ಧೂಳನ್ನಾದರೂ ತೊಳೆದುಕೊಳ್ಳಬಹುದು, ಆದರೆ ಅಹಂ ಧೂಳಿಗಿಂತಲೂ ಹೆಚ್ಚಾದ ಒಂದು ಭ್ರಮೆ. ಅದನ್ನೇ ಮಾಯೆ ಎಂದು ಕರೆದರು. ಮಾಯೆಯಿಂದ ಬಿಡಿಸಿಕೊಳ್ಳುವುದು ಬಲುಕಷ್ಟ. ಅಹಂನ ಮಾಯೆ ದೃಷ್ಟಿಯನ್ನು ಮಂದಗೊಳಿಸುವುದಷ್ಟೇ ಅಲ್ಲ, ಮನುಷ್ಯನನ್ನೇ ಸಂಪೂರ್ಣ ಕುರುಡನನ್ನಾಗಿಸಬಹುದು. ಅಂಧತ್ವ ಶಾಪ ಅಲ್ಲ, ಆದರೆ ಒಳಗಣ್ಣನ್ನು ಕಳೆದುಕೊಳ್ಳುವುದು ಮಾತ್ರ ಮಹಾಶಾಪ.

ಪಕ್ಕದ ಸಹಪ್ರಯಾಣಿಕನೊಂದಿಗೆ ಒಂದಿಂಚು ಹೊಂದಾಣಿಕೆ ಮಾಡಿಕೊಳ್ಳಲಾಗದ, ತನ್ನೆದುರಿನ ಸಣ್ಣ ವಾಹನಕ್ಕೆ ಸಂಯಮದಿಂದ ದಾರಿ ಬಿಟ್ಟುಕೊಡಲಾಗದ ಭೂಪ ಪ್ರಯಾಣದುದ್ದಕ್ಕೂ ಕಾಣಸಿಗುವ ದೇವಸ್ಥಾನಗಳಿಗೆಲ್ಲ ಕೈಮುಗಿಯುತ್ತಾ ಸಾಗುತ್ತಾನೆ. ಎಂತಹ ವಿಪರ್ಯಾಸ! ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ/ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನನ್ನೊಳಗೆ’ ಎಂದು ಆತ್ಮಶೋಧನೆ ಮಾಡಿಕೊಳ್ಳುತ್ತಾರೆ ಕವಿ ಜಿಎಸ್ಸೆಸ್. ತನ್ನೊಳಗಿನ ಅಂಧಕಾರವನ್ನು ನೀಗಿಸಿಕೊಳ್ಳದೆ ಯಾವ ದೇವರ ಮೊರೆಹೊಕ್ಕರೂ ಆತನ ಸಾಮೀಪ್ಯ ಅರಿವಿಗೆ ಬಾರದು.  ತೇನವಿನಾ ತೃಣಮಪಿ ನ ಚಲತಿ - ನೀನಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದು, ನಾನೆಂಬುದು ಈ ಜಗತ್ತಿನಲ್ಲಿ ಏನೂ ಅಲ್ಲ ಎಂದು ಅರ್ಥ ಮಾಡಿಕೊಂಡವನಿಗೆ ಮುಂದಿನ ದಾರಿ ಸುಗಮ.

ನೀನು ಸ್ವರ್ಗಕ್ಕೆ ಹೋಗಬಲ್ಲೆಯಾ? ಎಂದು ಕೇಳಿದರಂತೆ ಶಿಷ್ಯ ಕನಕದಾಸರನ್ನು ಗುರುಗಳಾದ ವ್ಯಾಸರಾಯರು. ‘ನಾನು ಹೋದರೆ ಹೋದೇನು’ ಎಂದು ಉತ್ತರಿಸಿದರಂತೆ ಕನಕದಾಸರು. ನಾನು ಎಂಬುದನ್ನು ಕಳೆದುಕೊಳ್ಳುವುದೇ ಸಾಧನೆಯ ಆರಂಭ.
- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ನವೆಂಬರ್ 17, 2019

ನವಯುಗದ ಮಾಧ್ಯಮಗಳ ಮುಂದಿರುವ ಅವಕಾಶಗಳು ಮತ್ತು ಸವಾಲುಗಳು

ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ದಿನಾಂಕ: 17-11-2019ರಂದು ಬೆಂಗಳೂರಿನ 'ಮಿಥಿಕ್ ಸೊಸೈಟಿ' ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೀಡಿದ ಉಪನ್ಯಾಸದ ಸಂಕ್ಷಿಪ್ತ ರೂಪ

ಪ್ರೊ. ಕೆ. ಆರ್. ವೇಣುಗೋಪಾಲ್, ಶ್ರೀ ದು.ಗು. ಲಕ್ಷ್ಮಣ ಅವರೊಂದಿಗೆ
ಎಲ್ಲರಿಗೂ ನಮಸ್ಕಾರ. ಇಲ್ಲಿ ಕುಳಿತಿರುವ ಬಹುತೇಕರು ತುಂಬ ಹಿರಿಯರಿದ್ದೀರಿ. ನಿಮ್ಮ ಅನುಭವಕ್ಕಿಂತಲೂ ನನ್ನ ವಯಸ್ಸು ತುಂಬ ಸಣ್ಣದೆಂದು ನಾನು ತಿಳಿದಿದ್ದೇನೆ. ಈ ಅಳುಕಿನ ಜತೆಗೆ ನಿಮ್ಮೆದುರು ಮಾತನಾಡುವುದಕ್ಕಿರುವ ಸಣ್ಣ ಧೈರ್ಯವೆಂದರೆ ನೀವು ಹಿರಿಯರಿದ್ದೀರಿ ಎಂಬುದೇ ಆಗಿದೆ. ಏಕೆಂದರೆ ತಪ್ಪಾಗಿರುವುದನ್ನು ಹಿರಿಯರು ತಿದ್ದಬಲ್ಲರು.

ಇರಲಿ, ಇಂದು ನಾನು ಮಾತಾಡಬೇಕಿರುವ ವಿಷಯಕ್ಕೆ ಬರೋಣ. ಮಾಧ್ಯಮಗಳ ಬಗ್ಗೆ ಮಾತನಾಡುವುದೆಂದರೆ ಡಿಜಿಟಲ್ ಮಾಧ್ಯಮಗಳ ಬಗ್ಗೆ ಮಾತನಾಡುವುದೆಂದೇ ಆಗಿದೆ. ಏಕೆಂದರೆ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಎಂಬಿತ್ಯಾದಿ ಪ್ರತ್ಯೇಕ ಅಸ್ಮಿತೆಗಳು ಇವತ್ತು ಉಳಿದುಕೊಂಡಿಲ್ಲ. We are in the age of media convergence.  ನಾವು ಮಾಧ್ಯಮ ಸಂಗಮದ ಕಾಲದಲ್ಲಿದ್ದೇವೆ. ಪತ್ರಿಕೆ, ಟಿವಿ ಎಲ್ಲವೂ ಡಿಜಿಟಲ್ ಆಗಿವೆ. ಆನ್‌ಲೈನ್ ಆವೃತ್ತಿ ಇಲ್ಲದ ಪತ್ರಿಕೆ ಇಲ್ಲ. ಮುದ್ರಣಕ್ಕೆ ಸೀಮಿತವಾಗಿದ್ದ ಪತ್ರಿಕೆಗಳಲ್ಲಿ ಇವತ್ತು ಆಡಿಯೋ ಇದೆ, ವೀಡಿಯೋ ಇದೆ. ಅತ್ತ ಟಿವಿ ಚಾನೆಲ್‌ಗಳು ತಮ್ಮ ಜಾಲತಾಣಗಳಲ್ಲಿ ಪಠ್ಯ ರೂಪದಲ್ಲೂ ಸುದ್ದಿ ಪ್ರಕಟಿಸುತ್ತವೆ. ಎಲ್ಲವೂ ಒಟ್ಟಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ, ವಿವಿಧ ವೇಷಗಳಲ್ಲಿ ಹರಿದಾಡುತ್ತವೆ. ಹೀಗಾಗಿ ಸೋಷಿಯಲ್ ಮೀಡಿಯಾವನ್ನೇ ನಾನಿಲ್ಲಿ 'ನವಯುಗದ ಮಾಧ್ಯಮ'ಗಳೆಂದು ವ್ಯಾಖ್ಯಾನಿಸಿಕೊಂಡಿದ್ದೇನೆ.

ಜಗತ್ತಿನ ಸುಮಾರು 770 ಕೋಟಿ ಜನಸಂಖ್ಯೆಯಲ್ಲಿ 402 ಕೋಟಿಯಷ್ಟು - ಅಂದರೆ ಶೇ. 53 - ಇಂಟರ್ನೆಟ್ ಬಳಕೆದಾರರಿದ್ದಾರೆ. ಸುಮಾರು 319 ಕೋಟಿ ಮಂದಿ (ಶೇ. 42) ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರು.

ಭಾರತದ ಪ್ರಸಕ್ತ ಜನಸಂಖ್ಯೆ 137 ಕೋಟಿ. ಇವರಲ್ಲಿ ಅರ್ಧದಷ್ಟು ಮಂದಿ ಇಂಟರ್ನೆಟ್ ಬಳಕೆದಾರರು. ಸುಮಾರು 35 ಕೋಟಿ ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರು. ಭಾರತದಲ್ಲಿ ಸುಮಾರು 40 ಕೋಟಿ ಮಂದಿ ವಾಟ್ಸಾಪನ್ನೂ, 27 ಕೋಟಿ ಮಂದಿ ಫೇಸ್ಬುಕ್ಕನ್ನೂ, ತಲಾ 8 ಕೋಟಿ ಮಂದಿ ಇನ್‌ಸ್ಟಾಗ್ರಾಮನ್ನೂ, ಟ್ವಿಟರನ್ನೂ ಬಳಸುತ್ತಾರೆ. ಸಮೀಕ್ಷೆಗಳ ಪ್ರಕಾರ ಭಾರತೀಯ ಇಂಟರ್ನೆಟ್ ಬಳಕೆದಾರರು ದಿನಕ್ಕೆ ಸರಾಸರಿ 2.4 ಗಂಟೆಯಷ್ಟು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ.

ಇಂಟರ್ನೆಟ್ ಇಷ್ಟೊಂದು ಕ್ಷಿಪ್ರವಾಗಿ ಭಾರತದಲ್ಲಿ ಪಸರಿಸಲು ಪ್ರಮುಖ ಕಾರಣ ನಮ್ಮಲ್ಲಿ ದೊರೆಯುತ್ತಿರುವ ಅಗ್ಗದ ಡೇಟಾ. ಒಂದು ಜಿಬಿ ಡೇಟಾದ ದರ ಸ್ವಿಟ್ಜರ್ಲೆಂಡಿನಲ್ಲಿ ರೂ. 1425-00, ಅಮೇರಿಕದಲ್ಲಿ ರೂ. 872-00, ಇಂಗ್ಲೆಂಡಿನಲ್ಲಿ ರೂ. 470-00; ಆದರೆ ಭಾರತದಲ್ಲಿ ಕೇವಲ ರೂ. 18-00.

ಜನರು ಡಿಜಿಟಲ್/ ಸಾಮಾಜಿಕ ಮಾಧ್ಯಮಗಳನ್ನು ಪರ್ಯಾಯ ಮಾಧ್ಯಮಗಳನ್ನಾಗಿ ಕಂಡುಕೊಳ್ಳಲು ಇರುವ ಇನ್ನೊಂದು ಪ್ರಮುಖ ಕಾರಣ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಅವರ ಕಳೆದುಕೊಂಡಿರುವ ವಿಶ್ವಾಸ. ಮುಖ್ಯವಾಹಿನಿಯ ಮಾಧ್ಯಮಗಳು ವಾಣಿಜ್ಯೀಕರಣದ ಹಿಂದೆ ಬಿದ್ದಿರುವುದು, ಹೆಚ್ಚಿನ ಓದುಗರನ್ನು/ ಪ್ರೇಕ್ಷಕರನ್ನು ಸೆಳೆಯುವ ಮತ್ತು ಆ ಮೂಲಕ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅಪರಾಧ, ಹಿಂಸೆಗಳನ್ನು ವೈಭವೀಕರಿಸುತ್ತಿರುವುದು, ಅತಿಯಾದ ಸ್ಪರ್ಧೆ, ಧಾವಂತ,  ಕ್ಷುಲ್ಲಕ ವಿಚಾರಗಳನ್ನು ಮಹತ್ವದ ಸುದ್ದಿಗಳೆಂಬಂತೆ ಬಿಂಬಿಸುವುದು, ಬದ್ಧತೆಯ ಕೊರತೆ, ಬಹುತೇಕ ಮಾಧ್ಯಮಗಳೂ ಒಂದಲ್ಲ ಒಂದು ರಾಜಕೀಯ ಅಜೆಂಡಾ ಇಟ್ಟುಕೊಂಡಿರುವುದು, ಮಾಧ್ಯಮ ಮಾಲೀಕತ್ವದಲ್ಲಿ ಹೆಚ್ಚಿರುವ ಏಕಸ್ವಾಮ್ಯತೆ- ಇವೆಲ್ಲವನ್ನೂ ಈಗ ಜನಸಾಮಾನ್ಯರೂ ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕೇ ಅವರಿಗೆ ಮಾಧ್ಯಮಗಳ ಮೇಲೆ ವಿಶ್ವಾಸ ಕುಸಿದಿದೆ.

ಮಾಧ್ಯಮಗಳಲ್ಲಿ ಪ್ರಕಟವಾದ ವಿಚಾರಗಳನ್ನೂ ತಮ್ಮ ಸ್ನೇಹಿತರಲ್ಲಿ ಕೇಳಿ ಖಚಿತಪಡಿಸಿಕೊಳ್ಳುವ ಮಟ್ಟಿಗೆ ಜನ ಬದಲಾಗಿದ್ದಾರೆ. ಹಿಂದೆ ಜನರ ಬಾಯಲ್ಲಿ ಕೇಳಿದ್ದನ್ನು ಮಾಧ್ಯಮಗಳ ಮೂಲಕ ಖಚಿತಪಡಿಸಿಕೊಳ್ಳುವ ಪರಿಪಾಠ ಇತ್ತು; ಇಂದು ಮಾಧ್ಯಮಗಳಲ್ಲಿ ಬಂದುದನ್ನು ತಮ್ಮ ಪರಿಚಯದವರಲ್ಲಿ ಕೇಳಿ ಖಚಿತಪಡಿಸಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ ಎಂಬುದು ವಿಪರ್ಯಾಸ.

ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್ ಮಾಧ್ಯಮ ಜನರಿಗೆ ಪರ್ಯಾಯ ಸಂವಹನ ವೇದಿಕೆಯಾಗಿ ಒದಗಿಬಂದಿದೆ. ಇದು ನಾಗರಿಕ ಪತ್ರಿಕೋದ್ಯಮ - Citizen Journalism - ನ ಸುವರ್ಣಯುಗ. ನಾವು ನೀಡಿದ್ದನ್ನು ನೀವು ತೆಗೆದುಕೊಳ್ಳಿ ಎಂಬ ಮುಖ್ಯವಾಹಿನಿಯ ಮಾಧ್ಯಮಗಳ ಉಡಾಫೆಗೆ ಇಲ್ಲಿ ಎಡೆಯಿಲ್ಲ. ಇಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಇದೆ. ಇಲ್ಲಿ ಸಂಪಾದಕರಿಲ್ಲ. ಸುದ್ದಿಯನ್ನೋ ಲೇಖನವನ್ನೋ ಹೀಗೆಯೇ ಬರೆಯಬೇಕು ಎಂಬ ಕಟ್ಟುಪಾಡು ಇಲ್ಲ. ಯಾರು ಬೇಕಾದರೂ ಮಾತನಾಡಬಹುದು.  Consumers of news have become producers of news. ಧ್ವನಿಯೇ ಇಲ್ಲದವರಿಗೆ ಸಾಮಾಜಿಕ ಮಾಧ್ಯಮಗಳು ಧ್ವನಿ ನೀಡಿವೆ. ಮುಖ್ಯವಾಹಿನಿ ಮಾಧ್ಯಮಗಳ ಅಜೆಂಡಾಗಳು ಇಲ್ಲಿ ಕ್ಷಣಗಳಲ್ಲಿ ಬಯಲಾಗುತ್ತವೆ. ಇಲ್ಲಿ ಸುಳ್ಳು ಹೇಳುವುದು ಸುಲಭವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಮೋಚ್ಛ ಸ್ಥಿತಿ ಇದು.

ಪ್ರಧಾನಮಂತ್ರಿ, ಮುಖ್ಯಮಂತ್ರಿ, ಇನ್ನೆಲ್ಲ ನಾಯಕರು ಫೇಸ್ಬುಕ್, ಟ್ವಿಟರ್‌ಗಳಲ್ಲಿ ಸಾಮಾನ್ಯ ನಾಗರಿಕರಿಗೆ ಎದುರಾಗುತ್ತಾರೆ. ಜನ ಸಾಮಾನ್ಯರೂ ಅವರನ್ನು ಟ್ಯಾಗ್ ಮಾಡಿ ಕಮೆಂಟ್ ಮಾಡಬಹುದು. ಆ ಮಟ್ಟಿನ ನಮನೀಯತೆ ಸಾಮಾಜಿಕ ಮಾಧ್ಯಮಗಳಲ್ಲಿದೆ. ಸಂವಹನ ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಿತಿಯೂ ಇದೇ ಆಗಿದೆ. ಸಣ್ಣಪುಟ್ಟ ಸಮಸ್ಯೆಗಳನ್ನೂ ತುಂಬ ಕ್ಷಿಪ್ರವಾಗಿ ಸಂಬಂಧಿಸಿದವರ ಗಮನಕ್ಕೆ ತರುವುದಕ್ಕೆ ಸಾಮಾಜಿಕ ಮಾಧ್ಯಮಗಳು ಸಹಕಾರಿ. ಒಂದರ್ಥದಲ್ಲಿ ಜಾಗೃತಿ ಹಾಗೂ ಅಭಿವೃದ್ಧಿಯ ಅತ್ಯುತ್ತಮ ವೇಗವರ್ಧಕಗಳು. ಇವುಗಳಿಗೆ ಭೌಗೋಳಿಕ ಸೀಮೆಗಳೂ ಇಲ್ಲದಿರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಮಂದಿಯೂ ಒಂದು ಕರೆಗೆ ಓಗೊಟ್ಟು ಸಾಮೂಹಿಕ ಆಂದೋಲನಗಳಲ್ಲಿ ಸೇರಿಕೊಳ್ಳುವಂತೆ ಮಾಡುವುದರಲ್ಲಿ ಇವುಗಳ ಪಾತ್ರ ತುಂಬ ದೊಡ್ಡದು. ಅನೇಕ ಬೃಹತ್ ಆಂದೋಲನಗಳು ಸಾಮಾಜಿಕ ಮಾಧ್ಯಮಗಳ ನೆರವಿನಿಂದಲೇ ನಡೆದಿರುವ ಜೀವಂತ ಉದಾಹರಣೆಗಳು ನಮ್ಮ ಮುಂದೆ ಇವೆ.

ಇವೆಲ್ಲ ಹೊಸ ಕಾಲದ ಮಾಧ್ಯಮಗಳ ಅವಕಾಶಗಳೆಂದು ತಿಳಿದುಕೊಂಡರೆ, ಇವುಗಳ ಮುಂದಿರುವ ಸವಾಲುಗಳು ನೂರಾರು. ಮುಖ್ಯವಾಗಿ ನಿಯಂತ್ರಣದ ಕೊರತೆ. ಇಲ್ಲಿ ಸಂಪಾದಕರಿಲ್ಲ ಎಂಬುದು ಹೇಗೆ ಅನುಕೂಲವೋ, ಹಾಗೇ ಅನಾನುಕೂಲವೂ ಹೌದು. ಪತ್ರಿಕೆ, ಟಿವಿಗಳಲ್ಲಿ ಯಾವುದನ್ನು, ಎಷ್ಟು, ಹೇಗೆ ಪ್ರಕಟಿಸಬೇಕು ಎಂಬುದನ್ನು ನಿರ್ಧರಿಸಲು ವಿವಿಧ ಮಂದಿಯಿದ್ದಾರೆ. ಇಲ್ಲಿ ಅವರಿಲ್ಲ- ಗೇಟ್ ಕೀಪಿಂಗ್ ಇಲ್ಲ- ಎಂಬುದೇ ದೊಡ್ಡ ಮಿತಿ. ಇಲ್ಲಿ ಎಲ್ಲರೂ ಪತ್ರಕರ್ತರೇ. ಎಲ್ಲರೂ ಸುದ್ದಿಗಾರರೇ. ಹೀಗಾಗಿ ಯಾವುದು, ಎಷ್ಟು, ಹೇಗೆ ಪ್ರಕಟವಾಗಬೇಕು ಎಂದು ನಿರ್ಧರಿಸಲು ಯಾರೂ ಇಲ್ಲ. ಇದು ಎಷ್ಟೊಂದು ಅನಾಹುತಗಳಿಗೂ ಕಾರಣವಾಗುತ್ತದೆ ಎನ್ನುವುದನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರಾದ ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ.

ಮಾಧ್ಯಮಗಳಿಗೆ ಪ್ರಮುಖವಾಗಿ ಬೇಕಾಗಿರುವ ವಸ್ತುನಿಷ್ಠತೆ, ಸ್ಪಷ್ಟತೆ, ನಿಖರತೆ, ಮರುಪರಿಶೀಲನೆ, ಪೂರ್ವಾಗ್ರಹಮುಕ್ತತೆ ಮುಂತಾದ ತತ್ತ್ವಗಳನ್ನು ಎಲ್ಲರೂ ಪತ್ರಕರ್ತರಾಗಿರುವ ಸನ್ನಿವೇಶದಲ್ಲಿ ಅನುಷ್ಠಾನಕ್ಕೆ ತರುವುದು ಕಡುಕಷ್ಟ.  ಇಲ್ಲಿ ವದಂತಿಗಳು, ಸುಳ್ಳುಸುದ್ದಿಗಳೇ ಜನಪ್ರಿಯ. ಸಾಮಾಜಿಕ ಮಾಧ್ಯಮಗಳು ಒಂದರ್ಥದಲ್ಲಿ ಸುಳ್ಳುಸುದ್ದಿಗಳ ಕಾರ್ಖಾನೆಗಳೇ ಆಗಿವೆ. ಕ್ಷಿಪ್ರತೆ ಎಂಬ ಗುಣ ಸಾಮಾಜಿಕ ಮಾಧ್ಯಮಗಳ ದೊಡ್ಡ ಸವಾಲೂ ಹೌದು. ಇಲ್ಲಿ ಒಳ್ಳೆಯದಕ್ಕಿಂತಲೂ ಕೆಟ್ಟದು ಬೇಗ ಹರಡುತ್ತದೆ- ಕಾಳ್ಗಿಚ್ಚಿನ ಹಾಗೆ. ಸಮಷ್ಟಿ ಹಿತದ ಚರ್ಚೆಗಳಿಗಿಂತಲೂ ವೈಯಕ್ತಿಕ ಕೆಸರೆರಚಾಟಗಳಲ್ಲಿ ಜನರಿಗೆ ಹೆಚ್ಚು ಆಸಕ್ತಿ.

ಇವನ್ನೆಲ್ಲ ನೋಡುತ್ತ ನೋಡುತ್ತ ಮುಖ್ಯವಾಹಿನಿಯ ಮಾಧ್ಯಮಗಳೂ ಸಾಮಾಜಿಕ ಮಾಧ್ಯಮಗಳ ಜಾಯಮಾನವನ್ನು ಬೆಳೆಸಿಕೊಳ್ಳುತ್ತಿವೆ. ತಮ್ಮ ಮೂಲ ರೂಪಗಳಲ್ಲಿ ಗಂಭೀರವಾಗಿರುವ ಪತ್ರಿಕೆ, ಚಾನೆಲ್‌ಗಳೂ ಸಾಮಾಜಿಕ ತಾಣಗಳಲ್ಲಿ ಬಾಲಿಶವಾಗಿ ವರ್ತಿಸುತ್ತಿರುವುದು ಇಂದಿನ ವಿದ್ಯಮಾನ. ಸೆಲೆಬ್ರಿಟಿಗಳ ಖಾಸಗಿ ಬದುಕಿನ ವಿಚಾರಗಳೇ ಅವರಿಗೆ ಪ್ರಮುಖ ಸುದ್ದಿಯಾಗುತ್ತಿವೆ. ಖಾಸಗಿಗೂ ಸಾರ್ವಜನಿಕವಾದುದಕ್ಕೂ ವ್ಯತ್ಯಾಸವೇ ಉಳಿದಿಲ್ಲ. ಎಲ್ಲವೂ ಬಟಾಬಯಲಲ್ಲೇ ನಡೆಯಬೇಕು ಎಂಬುದು ಮಾಧ್ಯಮಗಳ ಹೊಸ ನೀತಿ.

ಹೊಸ ಮಾಧ್ಯಮಗಳಿಂದ ಒಂದು ಬಗೆಯ ಮಾಹಿತಿ ಅತಿಸಾರ ಸೃಷ್ಟಿಯಾಗಿದೆ. ಎಲ್ಲ ಕಡೆಗಳಿಂದಲೂ ಬರುತ್ತಿರುವ ಭರಪೂರ ಮಾಹಿತಿಗಳಲ್ಲಿ ತಮಗೆ ಬೇಕಾದುದೇನು ಬೇಡದ್ದೇನು ಎಂದು ನಿರ್ಧರಿಸಿಕೊಳ್ಳಲಾಗದ ಸಂಕಷ್ಟ ಜನಸಾಮಾನ್ಯರನ್ನು ಕಾಡುತ್ತಿದೆ. ಅದರ ನಡುವೆ ಸುಳ್ಳುಪೊಳ್ಳುಗಳು ಸೇರಿಕೊಂಡಾಗಲಂತೂ ಜನರ ಪರಿಸ್ಥಿತಿ ಹೇಳತೀರದು. ಆಹಾರದ ಡಯೆಟ್ ಬಗ್ಗೆ ಮಾತ್ರ ಯೋಚಿಸುತ್ತಿದ್ದವರು ಇಂದು ಮೀಡಿಯಾ ಡಯೆಟ್ ಬಗ್ಗೆ ಯೋಚಿಸುವ ಸಂದರ್ಭ ಬಂದಿದೆ.

ಸಾಮಾಜಿಕ ತಾಣಗಳಲ್ಲಿ ನಾವು ಹಂಚಿಕೊಳ್ಳುತ್ತಿರುವ ಮಾಹಿತಿಗಳು ಎಲ್ಲಿ ಸಂಗ್ರಹವಾಗುತ್ತಿವೆ, ಅವು ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಚರ್ಚೆಗಳೂ ಈಗ ಮುನ್ನೆಲೆಗೆ ಬಂದಿವೆ. ಜನ ಡೇಟಾ ವಸಾಹತುಗಳ ಬಗ್ಗೆ ಎಚ್ಚರವಾಗತೊಡಗಿದ್ದಾರೆ. ದೇಶದ ಭದ್ರತೆ, ವೈಯಕ್ತಿಕ ಮಾಹಿತಿಗಳ ಗೌಪ್ಯತೆ, ಇವುಗಳ ಸುತ್ತಮುತ್ತ ಹರಡಿಕೊಂಡಿರುವ ಸೈಬರ್ ಅಪರಾಧ, ಮೋಸ-ವಂಚನೆಗಳು ಪರ್ಯಾಯ ಮಾಧ್ಯಮಗಳ ಕಡೆಗೂ ಜನ ಅಪನಂಬಿಕೆಯಿಂದ ನೋಡುವಂತೆ ಮಾಡಿವೆ.

ಒಟ್ಟಿನಲ್ಲಿ ಮಾಧ್ಯಮಗಳ ಜತೆಗಿನ ಒಡನಾಟ ಜನಸಾಮಾನ್ಯರಿಗೆ ಕತ್ತಿಯಂಚಿನ ನಡಿಗೆಯೇ ಆಗಿದೆ. ಈ ಒಟ್ಟಾರೆ ಪರಿಸ್ಥಿತಿಗೆ ಪರಿಹಾರ ಏನು ಎಂಬುದು ನಮ್ಮೆದುರಿನ ದೊಡ್ಡ ಪ್ರಶ್ನೆ. ಆ ಬಗ್ಗೆ ಮಾತನಾಡುವುದು ಇನ್ನೊಂದು ಸುದೀರ್ಘ ಚರ್ಚೆಯಾದೀತು. ಅದನ್ನು ಇನ್ನೊಮ್ಮೆ ಮಾಡೋಣ. ಧನ್ಯವಾದ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 22, 2019

ಬೀಗಿದಷ್ಟೂ ಬಾಗುವುದು ಕಷ್ಟ

19-25 ಅಕ್ಟೋಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ಬದುಕಲಿಕ್ಕೊಂದು ಭ್ರಾಂತಿ ಬೇಕಾಗ್ತದೆ, ಪ್ರಜೆಗಳಿಗೂ, ಸುಲ್ತಾನರಿಗೂ.’ ಹಾಗೆನ್ನುತ್ತದೆ ಕಾರ್ನಾಡರ ‘ರಾಕ್ಷಸತಂಗಡಿ’ ನಾಟಕದ ಒಂದು ಪಾತ್ರ. ಹೌದು, ಒಬ್ಬೊಬ್ಬರು ಸದಾ ಒಂದೊಂದು ಭ್ರಾಂತಿಯಲ್ಲೇ ಇರುತ್ತಾರೆ. ಕೆಲವರಿಗೆ ತಾವೇನೋ ಸಾಧಿಸಿದೆವೆನ್ನುವ, ಇನ್ನು ಕೆಲವರಿಗೆ ತಾವು ಯಾರನ್ನೋ ಸೋಲಿಸಿದೆವೆನ್ನುವ, ಇನ್ನು ಹಲವರಿಗೆ ತಾವು ಸಮಾಜವನ್ನು ಬದಲಾಯಿಸಿಬಿಡುತ್ತೇವೆನ್ನುವ, ಇನ್ನುಳಿದವರಿಗೆ ತಾವು ತುಂಬ ಸುಖ-ಸಂತೋಷದಿಂದ ಬದುಕುತ್ತಿದ್ದೇವೆನ್ನುವ ಭ್ರಾಂತಿ. ಸ್ವಲ್ಪ ಮಟ್ಟಿಗೆ ಇವೆಲ್ಲ ಬೇಕು. ಭ್ರಾಂತಿಯಿಂದ ಚಿಂತೆ ದೂರವಾಗುವುದಿದ್ದರೆ, ನಿರಾಸೆ ಒತ್ತಟ್ಟಿಗೆ ಸರಿಯುವುದಿದ್ದರೆ, ದುಃಖ ಕ್ಷಣಕಾಲ ಮರೆಯಾಗುವುದಿದ್ದರೆ, ಒಂದಷ್ಟು ಹುಮ್ಮಸ್ಸು-ಉತ್ಸಾಹ ಬೆನ್ನಿಗೆ ನಿಲ್ಲುವುದಿದ್ದರೆ ಕೊಂಚ ಭ್ರಾಂತಿ ಇದ್ದರೆ ಒಳ್ಳೆಯದು. ಆದರೆ ಭ್ರಾಂತಿಯೇ ಬದುಕಾಗಬಾರದಲ್ಲ!

ಬೋಧಿವೃಕ್ಷ | 19-25 ಅಕ್ಟೋಬರ್ 2019
‘ನಾನು ಯಾರು?’ ಎಂಬ ಪ್ರಶ್ನೆಯನ್ನು ಎಂದಾದರೂ ನಾವು ಅಂತರ್ಯಕ್ಕೆ ಕೇಳಿಕೊಂಡದ್ದಿದೆಯೇ? ಹಾಗೆ ಕೇಳಿಕೊಂಡರೆ ಮೊದಲ ಉತ್ತರವಾಗಿ ನಮ್ಮ ಹೆಸರು ಬರಬಹುದು. ಅದು ನಮ್ಮ ಹೆಸರಾಯಿತೇ ಹೊರತು ನಾವು ಯಾರೆಂದು ಹೇಳಿದಂತಾಗಲಿಲ್ಲ ಅಲ್ಲವೇ? ನಮ್ಮ ಹೆಸರನ್ನು ಬದಲಾಯಿಸಿಕೊಂಡರೆ ನಾವು ಬದಲಾಗುತ್ತೇವೆಯೇ? ಇಲ್ಲ. ಹೆಸರು ಮಾತ್ರ ಬದಲಾಗುವುದು; ನಾವು ಹಾಗೆಯೇ ಉಳಿಯುತ್ತೇವೆ. ಹಾಗಾದರೆ ನಾವೆಂದರೆ ನಮ್ಮ ಹೆಸರಲ್ಲ ಎಂದಾಯಿತು.

ಮತ್ತೆ ಪ್ರಶ್ನಿಸಿದರೆ ನಾನು ಇಂಥವರ ಮಗ ಅಥವಾ ಮಗಳು ಎಂದೋ, ಇಂಥ ಕುಟುಂಬಕ್ಕೆ ಸೇರಿದವರು ಎಂದೋ, ಇಂಥ ಜಾತಿ ಅಥವಾ ಪಂಗಡದವರು ಎಂದೋ, ಇಂಥ ಊರಿನವರು ಎಂದೋ, ಇಂಥ ಉದ್ಯೋಗದಲ್ಲಿರುವವರು ಎಂದೋ- ನಾನಾ ಉತ್ತರಗಳು ಬರುತ್ತಲೇ ಇರಬಹುದು. ಅವೆಲ್ಲ ನಮ್ಮ ವಿಳಾಸದ ವಿಚಾರವಾಯಿತೇ ಹೊರತು ನಾವು ಯಾರು ಎಂದು ಸಿದ್ಧಪಡಿಸಿದಂತೆ ಆಗಲಿಲ್ಲ.

ಹೆಚ್ಚೆಂದರೆ ಎಲ್ಲವಕ್ಕೂ ಒಂದೊಂದು ಗುರುತಿನ ಪತ್ರವನ್ನು ತಂದು ತೋರಿಸಬಹುದು. ಮಳೆಯಲ್ಲಿ ನೆನೆದರೆ, ಬೆಂಕಿಯಲ್ಲಿ ಬೆಂದರೆ ಆ ಗುರುತಿನ ಪತ್ರ ಉಳಿಯುವುದಿಲ್ಲ. ಮತ್ತೆ ಹೊಸದಾಗಿ ಮಾಡಿಸಬೇಕು. ಗುರುತಿನ ಪತ್ರ ಇಲ್ಲದೆಯೇ ನಮ್ಮನ್ನು ನಾವು ಉದ್ಘಾಟಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವೇ?

ಸಮಾಜದಲ್ಲಿ ನಾವು ವಿವಿಧ ಅಸ್ಮಿತೆಗಳಿಂದ ಗುರುತಿಸಿಕೊಳ್ಳುತ್ತೇವೆ: ತಂದೆ, ಗಂಡ, ಹೆಂಡತಿ, ಪ್ರಯಾಣಿಕ, ಗೆಳೆಯ, ಅಧ್ಯಾಪಕ... ಮಕ್ಕಳಿರುವುದರಿಂದ ತಂದೆ, ಹೆಂಡತಿಯಿರುವುದರಿಂದ ಗಂಡ, ಗಂಡ ಇರುವುದರಿಂದ ಹೆಂಡತಿ, ಪಾಠ ಮಾಡುತ್ತಿರುವುದರಿಂದ ಅಧ್ಯಾಪಕ, ಬಸ್ಸಿನಲ್ಲಿರುವುದರಿಂದ ಪ್ರಯಾಣಿಕ. ಅಂದರೆ ಅವೆಲ್ಲ ನಾವಿರುವ ಪರಿಸರ ಅಥವಾ ಸ್ಥಾನದಿಂದಾಗಿ ಅಥವಾ ನಾವು ನಿರ್ವಹಿಸುತ್ತಿರುವ ಕಾರ್ಯದಿಂದಾಗಿ ಒದಗಿರುವ ಉಪಾಧಿಗಳೇ ಹೊರತು ನಿಜವಾದ ಅಸ್ಮಿತೆಗಳಲ್ಲ. ಪಾತ್ರಗಳು ಬದಲಾದಂತೆ ನಮ್ಮ ಉಪಾಧಿಗಳು, ಅಸ್ಮಿತೆಗಳು ಬದಲಾಗುತ್ತಾ ಹೋಗುತ್ತವೆ. ಹೊಸ ಉಪಾಧಿಗಳು ಬಂದಂತೆಲ್ಲ ವಾಸ್ತವದಿಂದ ದೂರ ಸರಿಯುತ್ತಲೇ ಇರುತ್ತೇವೆ.

ಹಾಗಾದರೆ ‘ನಾನು ಯಾರು?’ ಮತ್ತದೇ ಪ್ರಶ್ನೆ. ಈ ಪ್ರಶ್ನೆಯನ್ನು ಮನಸ್ಸಿಗೆ ಮತ್ತೆ ಮತ್ತೆ ಕೇಳಿದಾಗೆಲ್ಲ ಸತ್ಯದ ಅರಿವಾಗುತ್ತಾ ಹೋಗುತ್ತದೆ. ನಮ್ಮ ಅಸ್ಮಿತೆಯಷ್ಟೇ ಅಲ್ಲದೆ, ನಮ್ಮ ಇತಿಮಿತಿಗಳೂ ಅರ್ಥವಾಗುತ್ತಾ ಹೋಗುತ್ತವೆ. ನಾವು ಏನು ಎಂದು ತಿಳಿಯುವಷ್ಟೇ ನಾವು ಏನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದೂ ಮುಖ್ಯ. ನಾವು ಏನು ಮತ್ತು ಏನಲ್ಲ ಎಂದು ತಿಳಿದುಕೊಳ್ಳುವುದಕ್ಕೆ ಸ್ವಸ್ಥಾನಪರಿಜ್ಞಾನವೆಂದು ಹೆಸರು. ಬದುಕಿನಲ್ಲಿ ಎದುರಾಗುವ ಹಲವು ದುಃಖ, ಸಂಕಟಗಳಿಗೆ ಸ್ವಸ್ಥಾನಪರಿಜ್ಞಾನ ಇಲ್ಲದಿರುವುದೇ ಕಾರಣ.

ಶ್ರೀಮಂತಿಕೆಯಿದೆಯೆಂದು ಬೀಗುತ್ತೇವೆ. ತುಂಬ ಸಂಪಾದಿಸಿದ್ದೇವೆ ಎಂದು ಬೀಗುತ್ತೇವೆ. ಜನಪ್ರಿಯರಾಗಿದ್ದೇವೆ ಎಂದು ಬೀಗುತ್ತೇವೆ. ಹಲವು ಪ್ರಶಸ್ತಿ-ಪದವಿಗಳನ್ನು ಪಡೆದುಕೊಂಡಿದ್ದೇವೆ ಎಂದು ಬೀಗುತ್ತೇವೆ. ಬೀಗಿದಷ್ಟೂ ಬಾಗುವುದು ಕಡಿಮೆಯಾಗುತ್ತದೆ. ಬಾಗದೇ ಹೋದರೆ ಕೆಲವೊಮ್ಮೆ ಫಟ್ಟನೆ ತುಂಡಾಗಿಬಿಡುವುದೂ ಇದೆ. ಸಾಧನೆಯ ತುತ್ತತುದಿಯಲ್ಲಿದ್ದೇವೆ ಎಂಬ ಭ್ರಮೆಯಲ್ಲಿರುವಾಗಲೇ ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಪ್ರಪಾತಕ್ಕೆ ಬಿದ್ದಿರುತ್ತೇವೆ.

ಕೆಲವೊಮ್ಮೆ ತುಂಬ ಕೊರಗುತ್ತೇವೆ. ಎಷ್ಟು ವರ್ಷ ದುಡಿದರೂ ಬದುಕಿನ ಬಂಡಿ ಒಂದು ಹದಕ್ಕೆ ಬಂದಿಲ್ಲವೆಂದೋ, ಎಷ್ಟು ಸಂಪಾದಿಸಿದರೂ ಕೈಯಲ್ಲೊಂದು ಕಾಸೂ ಉಳಿಯುತ್ತಿಲ್ಲವೆಂದೋ, ಕಷ್ಟಗಳೆಲ್ಲ ನಮಗೇ ಬರುತ್ತಿವೆ ಎಂದೋ, ಮಕ್ಕಳು ಮಾತನ್ನು ಕೇಳುತ್ತಿಲ್ಲ ಎಂದೋ, ಉಪಕಾರ ಪಡೆದುಕೊಂಡವರೆಲ್ಲ ತಿರುಗಿಬಿದ್ದಿದ್ದಾರೆಂದೋ, ಸುತ್ತಮುತ್ತಲಿನವರೆಲ್ಲ ನಮ್ಮ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆಂದೋ ಕೊರಗುತ್ತಲೇ ಇರುತ್ತೇವೆ. ಯಾವುದೋ ಒಂದು ದಿನ ಎಲ್ಲ ಕೊರಗುವಿಕೆಗಳೂ ಏಕಾಏಕಿ ಮಾಯವಾಗಿ ಸಂತೋಷದ ಉತ್ತುಂಗಕ್ಕೆ ತಲುಪಿರುತ್ತೇವೆ.

ಅಂದರೆ ಯಾವುದೂ ಶಾಶ್ವತವಲ್ಲ. ಬದಲಾವಣೆಯೊಂದೇ ಶಾಶ್ವತವಾದದ್ದು. ಬದುಕೊಂದು ಜಲಚಕ್ರ. ಕೆಳಗಿರುವುದು ಮೇಲೇರುತ್ತದೆ. ಮೇಲೇರಿದ್ದು ಕೆಳಗಿಳಿಯುತ್ತದೆ. ಇದು ಸಂಪೂರ್ಣ ಅರ್ಥವಾದಾಗ ಭ್ರಾಂತಿ ತೊಲಗುತ್ತದೆ. ಯಾರೋ ಔಪಚಾರಿಕತೆಗಾಗಿಯೋ, ಸ್ವಂತ ಲಾಭಕ್ಕಾಗಿಯೋ ನಮ್ಮನ್ನು ಬಹುವಾಗಿ ಹೊಗಳಿ ಉಬ್ಬಿಸಲು ಪ್ರಯತ್ನಿಸಬಹುದು. ಇನ್ಯಾರೋ ಮತ್ಸರದಿಂದಲೋ, ಘಾತಿಸುವ ಉದ್ದೇಶದಿಂದಲೋ ನಮ್ಮಲ್ಲಿ ನಿರಾಶೆಯನ್ನು ತುಂಬಲು ಪ್ರಯತ್ನಿಸಬಹುದು. ಸ್ವಸ್ಥಾನಪರಿಜ್ಞಾನವುಳ್ಳವನು ಹೊಗಳಿಯಿಂದ ಹಿಗ್ಗುವುದೋ, ನಿಂದೆಯಿಂದ ಕುಗ್ಗುವುದೋ ಆಗಬಾರದು. ತನ್ನ ಸಾಮರ್ಥ್ಯ
 ಮತ್ತು ಮಿತಿಗಳ ಅರಿವು ಇರುವವನಿಗೆ ಇವುಗಳಿಂದ ಯಾವ ಪರಿಣಾಮವೂ ಆಗುವುದಿಲ್ಲ. ಆ ಸ್ಥಿತಿಗೆ ಸ್ಥಿತಪ್ರಜ್ಞತೆ ಎಂದು ಹೆಸರು. ಅದು ಸ್ವಸ್ಥಾನಪರಿಜ್ಞಾನದಿಂದ ಹುಟ್ಟಿಕೊಳ್ಳುವ ಆನಂದದ ಭಾವ.

‘ನೀನು ಯಾವ ಪುಸ್ತಕ ಓದುತ್ತೀಯೋ, ಅದು ನೀನಾಗುತ್ತಿ; ಯಾವ ಸಿನಿಮಾ ನೋಡುತ್ತೀಯೋ, ಅದು ನೀನಾಗುತ್ತಿ; ಯಾವ ಸಂಗೀತ ಕೇಳುತ್ತೀಯೋ ಅದು ನೀನಾನುತ್ತಿ; ಯಾರೊಂದಿಗೆ ಸಮಯ ಕಳೆಯುತ್ತೀಯೋ, ಅವರೇ ನೀನಾಗುತ್ತಿ. ಆದ್ದರಿಂದ ನೀನು ಯಾರಾಗಬೇಕು ಎಂಬುದನ್ನು ನಿರ್ಧರಿಸಬೇಕಾದುದು ನೀನೇ’ ಎನ್ನುತ್ತಾನೆ ಒಬ್ಬ ದಾರ್ಶನಿಕ.

‘ಬ್ರಹ್ಮ ಸತ್ಯಂ, ಜಗನ್ಮಿಥ್ಯಾ, ಜೀವೋ ಬ್ರಹ್ಮೈವನಾಪರಃ’ ಎಂದರು ಆಚಾರ್ಯ ಶಂಕರರು. ಬ್ರಹ್ಮವು ಸತ್ಯ, ಜಗತ್ತು ಮಿಥ್ಯ, ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ ಎಂಬುದು ಅವರ ಅದ್ವೈತ ದರ್ಶನದ ಸಾರ. ಈ ಜಗತ್ತನ್ನು ತನ್ನ ಪ್ರಭಾವಳಿಯಲ್ಲಿ ಹಿಡಿದಿಟ್ಟುಕೊಂಡಿರುವ ಒಂದು ಮಹೋನ್ನತ ಶಕ್ತಿಯಿದೆ; ಅದನ್ನು ಕೆಲವರು ದೇವರು ಎಂದರು, ಇನ್ನು ಕೆಲವರು ಪ್ರಕೃತಿ ಎಂದರು. ಅಂತೂ ತಾನು ಅದರ ಒಂದು ಭಾಗ, ಅಥವಾ ಅದೇ ತಾನು ಎಂದು ಅರ್ಥವಾದಾಗ ಉಳಿದೆಲ್ಲ ಅಸ್ಮಿತೆಗಳ ಭ್ರಮೆ ತಾನಾಗಿಯೇ ಕರಗಿ ಹೋಗುತ್ತದೆ. ಆಗ ಉಳಿಯುವುದು ನಿರುಮ್ಮಳತೆಯ, ನಿರ್ವ್ಯಾಮೋಹದ, ಆನಂದದ ಭಾವ.

ಈ ಸತ್-ಚಿತ್-ಆನಂದದ ಸ್ವರೂಪ ಅಷ್ಟು ಸುಲಭವಾಗಿ ದಕ್ಕುವುದೇ? ‘ನಾನು ಹೋದರೆ ಹೋದೇನು’ ಎಂದು ಹೇಳಿದ ಕನಕದಾಸರ ಹಿಂದೆ ವ್ಯಾಸತೀರ್ಥರಿದ್ದರು. ಹೌದು, ಲೋಹಗಳ ನಡುವಿನಿಂದ ಚಿನ್ನವನ್ನು ಬೇರ್ಪಡಿಸುವುದಕ್ಕೆ ಒಬ್ಬ ಚಿನಿವಾರ ಬೇಕಿರುವಂತೆ ನಾವು ಯಾರು ಎಂದು ಅಂತಿಮವಾಗಿ ಅರ್ಥ ಮಾಡಿಕೊಳ್ಳಲು ಒಬ್ಬ ಗುರು ಬೇಕು. ಆತ ನಮ್ಮ ಅಂತರಂಗಕ್ಕೆ ಇಳಿದು ಬೆಳಕಿನ ಹಣತೆ ಹಚ್ಚಬಲ್ಲ. ಕತ್ತಲಲ್ಲಿರುವ ಎಲ್ಲರಿಗೂ ಬೇಕಾಗಿರುವುದು ಒಬ್ಬ ಗುರು. ಗುರುವನ್ನು ಹುಡುಕಿಹೊರಟವನಿಗೆ ಕತ್ತಲೆಂಬುದೇ ಇಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಅಕ್ಟೋಬರ್ 13, 2019

ಕೊಟ್ಟ ಕುದುರೆಯನೇರಲರಿಯದೆ...

13 ಅಕ್ಟೋಬರ್ 2019ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ

ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಹೊರಟವರದ್ದು ಅಸಹಾಯಕತೆಯಲ್ಲವೆ?
“ಯಾರು ಪತ್ರಿಕೆಗಳ ಆಕ್ಷೇಪಣೆಗಳನ್ನು ಎದುರಿಸಬಲ್ಲಷ್ಟು ಸಾಹಸ ಸಾಮಥ್ರ್ಯಗಳನ್ನು ಪಡೆದಿರುವರೋ ಅಂಥವರು ಮಾತ್ರವೇ ಸರಕಾರವನ್ನು ನಡೆಸಲು ಅರ್ಹರಾಗಿರುತ್ತಾರೆ. ಯಾರು ಪತ್ರಿಕೆಗಳಿಗೆ ಅಂಜುವಷ್ಟು ದುರ್ಬಲರೂ, ಪತ್ರಿಕೆಗಳ ಚಳವಳಿಯಿಂದಲೇ ಪ್ರಜೆಗಳ ಅಪನಂಬಿಕೆಗೆ ಪಾತ್ರರಾಗಿ ಅಧಿಕಾರವನ್ನು ಕಳೆದುಕೊಳ್ಳುವಷ್ಟು ಅವಿಚಕ್ಷಣರೂ ಅಪ್ರಶಸ್ತರೂ ಆಗಿರುವರೋ, ಅಂಥವರು ಸರಕಾರವನ್ನು ಬಿಡುವುದೇ ಲೇಸು.” ಕನ್ನಡ ಪತ್ರಿಕಾರಂಗದ ಶಕಪುರುಷರಲ್ಲಿ ಒಬ್ಬರೆನಿಸಿದ ಡಿವಿಜಿಯವರು ಈ ಮಾತನ್ನು ಹೇಳಿ ಇನ್ನೇನು ಒಂದು ಶತಮಾನವಾಗುತ್ತಾ ಬಂತು.

ಅವರು ಹೀಗೆಂದು ಹೇಳಿದಾಗ ಟಿವಿ ಚಾನೆಲ್‍ಗಳೂ ಇರಲಿಲ್ಲ, ಮಾಧ್ಯಮರಂಗದ ಒಟ್ಟಾರೆ ಪರಿಸ್ಥಿತಿಯೂ ಹೀಗಿರಲಿಲ್ಲ.
ಅಂದಿಗೂ ಇಂದಿಗೂ ಆಕಾಶ-ಪಾತಾಳದಷ್ಟು ಅಂತರ. ಆದರೆ ಆಳುವ ವರ್ಗದ ಮನಸ್ಥಿತಿ ಮಾತ್ರ ಎಲ್ಲಾ ಕಾಲದಲ್ಲೂ ಒಂದೇ ರೀತಿ ಇರುತ್ತದೆ ಎಂಬುದಕ್ಕೆ ಸದ್ಯದ ಬೆಳವಣಿಗೆಗಳೇ ಸಾಕ್ಷಿ. ಪತ್ರಿಕೆಗಳನ್ನು ನಿಯಂತ್ರಿಸಲು ಬ್ರಿಟಿಷ್ ದೊರೆಗಳು ಒಂದಾದಮೇಲೊಂದರಂತೆ ಕಾಯ್ದೆಗಳನ್ನು ರೂಪಿಸುತ್ತಿದ್ದುದಕ್ಕೂ, ತುರ್ತುಪರಿಸ್ಥಿತಿಯ ಹೆಸರಿನಲ್ಲಿ ಮಾಧ್ಯಮಗಳು ಪ್ರಭುತ್ವದ ಕಾಲ್ತುಳಿತಕ್ಕೆ ಸಿಲುಕಿದ್ದಕ್ಕೂ, ಪ್ರಸ್ತುತ ಕರ್ನಾಟಕ ವಿಧಾನಸಭೆ ಪ್ರವೇಶಕ್ಕೆ ಖಾಸಗಿ ಚಾನೆಲ್‍ಗಳ ಕ್ಯಾಮೆರಾಮೆನ್ ಹಾಗೂ ಪತ್ರಿಕಾ ಛಾಯಾಗ್ರಾಹಕರಿಗೆ ನಿರ್ಬಂಧ ವಿಧಿಸಿದ್ದಕ್ಕೂ ಅಂತಹ ವ್ಯತ್ಯಾಸವೇನೂ ಕಾಣುತ್ತಿಲ್ಲ. ಎಲ್ಲವೂ ವಿವಿಧ ಕಾಲಘಟ್ಟದ ಆಳುವವರ್ಗದ ಒಂದೇ ಮನಸ್ಥಿತಿಯ ಪ್ರತೀಕಗಳಷ್ಟೇ.

ಆಡಳಿತಾರೂಢರ ಮತ್ತು ಮಾಧ್ಯಮಗಳ ತಿಕ್ಕಾಟ ಪತ್ರಿಕೆಗಳು ಹುಟ್ಟಿಕೊಂಡಲ್ಲಿಂದಲೂ ಇದೆ. ಭಾರತದ ಪ್ರಪ್ರಥಮ ಪತ್ರಿಕೆಯ ಸಂಪಾದಕ ಜೇಮ್ಸ್ ಆಗಸ್ಟಸ್ ಹಿಕಿಯೇ ಒಂದೆರಡು ವರ್ಷದ ಪ್ರಭುತ್ವದೊಂದಿಗಿನ ಗುದ್ದಾಟದಲ್ಲಿ ನಾಮಾವಶೇಷವಾಗಿಹೋಗಿದ್ದ. ಇತಿಹಾಸದಲ್ಲಿ ಅಂತಹ ನೂರಾರು ಕತೆಗಳು ಇವೆ. ಸರ್ಕಾರ-ಮಾಧ್ಯಮಗಳ ನಡುವೆ ಒಂದು ಆರೋಗ್ಯಕರ ಗುದ್ದಾಟ ಯಾವತ್ತಿಗೂ ಅಪೇಕ್ಷಣೀಯವೇ. ಅದೊಂದು ಬಗೆಯ ಮೊಸರು-ಕಡೆಗೋಲು ನಡುವಿನ ಘರ್ಷಣೆಯ ಹಾಗೆ. ಅದರ ಕೊನೆಯಲ್ಲಿ ಸಿಗುವುದು ಪ್ರಜಾಪ್ರಭುತ್ವವೆಂಬ ನವನೀತ. ಆದರೆ ಈ ತಿಕ್ಕಾಟ ಪರಸ್ಪರರನ್ನು ಕೊಲ್ಲುವ ಯುದ್ಧವಾಗಿ ಮಾರ್ಪಟ್ಟಾಗ ಮಾತ್ರ ಪ್ರಜಾಪ್ರಭುತ್ವದ ಒಟ್ಟಾರೆ ಆಶಯವೇ ನಾಶವಾಗುತ್ತದೆ.

ಟೀಕೆಗೆ ಟೀಕೆಯ ರೂಪದಲ್ಲೂ, ಸಮರ್ಥನೆಯ ರೂಪದಲ್ಲೂ, ತಪ್ಪನ್ನು ತಿದ್ದಿಕೊಳ್ಳುವ ಮೂಲಕವೂ ಉತ್ತರ ನೀಡಬಹುದು. ಟೀಕೆಯನ್ನೇ ಮಾಡಬೇಡಿ ಎಂದೋ, ನೀವು ಸಮೀಪಕ್ಕೆ ಬರಬೇಡಿ ಎಂದೋ ಕಾನೂನು ಮಾಡುವುದು ಸರಿಯಾದ ವಿಧಾನ ಅಲ್ಲ. ಅದು ಡಿವಿಜಿ ಹೇಳುವ ಹಾಗೆ ಅವಿಚಕ್ಷಣರೂ ಅಪ್ರಶಸ್ತರೂ ಮಾಡುವ ಕೆಲಸ. ಇದನ್ನೂ ಕೂಡ ಕರ್ನಾಟಕದಲ್ಲಿ ಗುಂಡೂರಾಯರಿಂದ ತೊಡಗಿ ಕುಮಾರಸ್ವಾಮಿಯವರೆಗೆ ಅನೇಕ ಮಂದಿ ಮಾಡಿಕೊಂಡು ಬಂದಿದ್ದಾರೆ.

80ರ ದಶಕದ ಆರಂಭದಲ್ಲಿ ಗುಂಡೂರಾಯರು ಪತ್ರಕರ್ತರನ್ನೆಲ್ಲ ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಎಂದು ಗುಡುಗಿದ್ದು ಗೊತ್ತೇ ಇದೆ.  1988ರಲ್ಲೇ ರಾಮಕೃಷ್ಣ ಹೆಗಡೆಯವರು ಮಾಧ್ಯಮಗಳನ್ನು ನಿಯಂತ್ರಿಸುವ ದೂರಾಲೋಚನೆಯೊಂದಿಗೆ ಕರ್ನಾಟಕ ಶಾಸಕಾಂಗ (ಅಧಿಕಾರಗಳು, ಸವಲತ್ತುಗಳು & ವಿನಾಯಿತಿಗಳು) ಮಸೂದೆಯನ್ನು ಪ್ರಸ್ತಾಪಿಸಿದ್ದರು ಮತ್ತು ಮಾಧ್ಯಮವಲಯದ ಟೀಕೆಗೂ ಗುರಿಯಾಗಿದ್ದರು. ಆದರೆ ಅವರ ರಾಜೀನಾಮೆಯ ಬಳಿಕ ಅದು ಮೂಲೆಸೇರಿತು. 2012ರಲ್ಲಿ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಸದನಕ್ಕೊಂದು ಪ್ರತ್ಯೇಕ ಚಾನೆಲನ್ನೇ ರೂಪಿಸುವ ಚರ್ಚೆ ಮುನ್ನೆಲೆಗೆ ಬಂದು ವಾದವಿವಾದಗಳು ನಡೆದುಹೋದವು. ಆಗಿನ್ನೂ ಮೂವರು ಸಚಿವರು ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ದೃಶ್ಯಗಳು ಜಗಜ್ಜಾಹೀರಾದ ಸಮಾಚಾರ ಹಸಿಹಸಿಯಾಗಿದ್ದರಿಂದ ಸ್ವತಂತ್ರ ಚಾನೆಲ್‍ನ ಪ್ರಸ್ತಾಪ ಬೇರೆಯೇ ಸ್ವರೂಪ ಪಡೆದುಕೊಂಡಿತು. ನಿಧಾನಕ್ಕೆ ಅದೂ ಜನರಿಗೆ ಮರೆತುಹೋಯಿತು. 2017ರಲ್ಲಿ ಆಗ ಸ್ಪೀಕರ್ ಆಗಿದ್ದ ಕೆ. ಬಿ. ಕೋಳೀವಾಡ ಮಾಧ್ಯಮಗಳಿಗೆ ‘ಲಕ್ಷ್ಮಣರೇಖೆ’ಯೊಂದನ್ನು ಎಳೆಯುವುದಕ್ಕಾಗಿ ಸದನ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪ ಮಾಡಿದ್ದರು. ತಾನು ಯಾವ ಚಾನೆಲ್‍ನವರೊಂದಿಗೂ ಮಾತನಾಡುವುದಿಲ್ಲವೆಂದು ಕಳೆದ ಚುನಾವಣೆ ವೇಳೆ ಕುಮಾರಸ್ವಾಮಿಯವರು ಪ್ರತಿಜ್ಞೆ ಮಾಡಿದ್ದನ್ನು ಕೂಡ ಜನ ಮರೆತಿಲ್ಲ. ಈಗ ವಿಧಾನಸಭಾಧ್ಯಕ್ಷರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕ್ಯಾಮೆರಾಮೆನ್, ಛಾಯಾಗ್ರಾಹಕರ ಪ್ರವೇಶವನ್ನೇ ನಿರ್ಬಂಧಿಸುವ ನಿರ್ಧಾರಕ್ಕೆ ಬಂದಿರುವುದರಿಂದ ಮಾಧ್ಯಮಗಳೆಡೆಗಿನ ಸರ್ಕಾರದ ಅಸಹಿಷ್ಣುತೆ ಗರಿಷ್ಠ ಹಂತವನ್ನು ತಲುಪಿದಂತಾಗಿದೆ.

ನ್ಯಾಯಾಲಯ ವರದಿಗಾರಿಕೆಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸುವ ಸಂಬಂಧ ಜನಾಭಿಪ್ರಾಯವನ್ನು ಪಡೆಯುವುದಕ್ಕಾಗಿ 2012ರಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಆಗಿನ ಮುಖ್ಯ ನ್ಯಾಯಾಧೀಶ ಎಸ್.ಎಚ್. ಕಪಾಡಿಯಾ ನೇತೃತ್ವದಲ್ಲಿ ಪಂಚಸದಸ್ಯ ಪೀಠವೊಂದನ್ನು ರಚಿಸಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು. ಆದರೆ ಸುಪ್ರೀಂ ಕೋರ್ಟ್ ಅನುಸರಿಸಿದ ವಿಧಾನ ಪ್ರಸ್ತುತ ವಿದ್ಯಮಾನಕ್ಕಿಂತ ಭಿನ್ನವಾಗಿತ್ತು. ಮಾಧ್ಯಮಗಳ ಸಂಪಾದಕರೂ ಸೇರಿದಂತೆ ಸಮಾಜದ ವಿವಿಧ ವಲಯಗಳ ಪ್ರತಿನಿಧಿಗಳ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಲಾಗಿತ್ತು.

ಸಂವಿಧಾನದ 21ನೇ ಪರಿಚ್ಛೇದ ಹಾಗೂ 19(1)(ಎ) ಪರಿಚ್ಛೇದದ ನಡುವೆ ಸಮತೋಲನ ತರುವುದೇ ನಮ್ಮ ಪ್ರಸ್ತಾಪದ ಆಶಯ ಎಂದ ಸರ್ವೋಚ್ಛ ನ್ಯಾಯಾಲಯ, ‘ಮಾಧ್ಯಮಗಳ ಸಂಪಾದಕೀಯ ವಸ್ತುವಿಚಾರಗಳನ್ನು ನಿಯಂತ್ರಿಸುವಲ್ಲಿ ನಮಗೆ ಆಸಕ್ತಿ ಇಲ್ಲ. ತಪ್ಪು ಮಾಡುವ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಅಂತಹ ತಪ್ಪುಗಳಾಗದಂತೆ ತಡೆಗಟ್ಟುವುದೇ ನಮ್ಮ ಉದ್ದೇಶ’ ಎಂದು ಸ್ಪಷ್ಟೀಕರಿಸಿತು. ಆ ನಂತರ ನಡೆದ ಚರ್ಚೆಗಳೂ ಅಷ್ಟೇ ಆರೋಗ್ಯಕರವಾಗಿದ್ದವು.

‘ನ್ಯಾಯಾಂಗದ ತುತ್ತತುದಿಯಲ್ಲಿರುವ ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಿಬಿಟ್ಟರೆ ಅದು ಸರ್ಕಾರದ ಇತರ ಅಂಗಗಳಿಗೂ ಪ್ರೇರಣೆಯಾಗುವ ಸಾಧ್ಯತೆಯಿದೆ; ಸಂಸತ್ತು, ರಾಜ್ಯ ವಿಧಾನಸಭೆಗಳು, ಸಚಿವಾಲಯಗಳು ಹೀಗೆ ಎಲ್ಲರೂ ಪತ್ರಕರ್ತರಿಗೆ ನಿಯಮಗಳನ್ನು ರೂಪಿಸುತ್ತಾ ಹೋಗುವುದಕ್ಕೆ ಕಾರಣವಾಗಬಹುದು’ ಎಂದು ಅನೇಕ ಹಿರಿಯ ಪತ್ರಕರ್ತರು ಆತಂಕ ವ್ಯಕ್ತಪಡಿಸಿದರು. ಕೊನೆಗೆ ಸುಪ್ರೀಂ ಕೋರ್ಟ್ ತನ್ನ ಪ್ರಸ್ತಾಪದಿಂದ ಹಿಂದೆ ಸರಿಯಬೇಕಾಯಿತು.

ಮಾಧ್ಯಮಗಳಿಗೆ ಒಂದು ಹಂತದ ನಿಯಂತ್ರಣ ಅಗತ್ಯ ಎಂದು ವಾದಿಸುತ್ತಲೇ ಇದ್ದ ನ್ಯಾ| ಮಾರ್ಕಾಂಡೇಯ ಕಟ್ಜು ಕೂಡ ಅದನ್ನು ಸರ್ಕಾರ ಮಾಡಬೇಕೆಂದು ಎಲ್ಲೂ ಹೇಳಲಿಲ್ಲ. ಅವರು ಹೇಳುತ್ತಿದ್ದುದು ಭಾರತೀಯ ಪತ್ರಿಕಾ ಮಂಡಳಿಗೆ ಹೆಚ್ಚಿನ ಅಧಿಕಾರ ಕೊಡಿ ಎಂದಷ್ಟೇ. ಅಂದರೆ ತನ್ನ ಕೆಲಸಕಾರ್ಯ, ನೀತಿನಿಯಮ, ನಿಯಂತ್ರಣ ಇತ್ಯಾದಿಗಳನ್ನೆಲ್ಲ ಮಾಧ್ಯಮವಲಯವೇ ನೋಡಿಕೊಳ್ಳಬೇಕು, ಹೊರಗಿನವರಲ್ಲ ಎಂಬುದು ಅವರ ಒತ್ತಾಯದ ತಿರುಳಾಗಿತ್ತು. ‘ರೆಗ್ಯುಲೇಶನಿಗೂ ಕಂಟ್ರೋಲ್‍ಗೂ ವ್ಯತ್ಯಾಸವಿದೆ. ಮಾಧ್ಯಮಗಳನ್ನು ಕಂಟ್ರೋಲ್ ಮಾಡಬೇಕಾದ್ದಲ್ಲ; ರೆಗ್ಯುಲೇಶನ್ ರೂಪಿಸಬಹುದು. ಆ ಅಧಿಕಾರವನ್ನು ಪತ್ರಿಕಾ ಮಂಡಳಿಗೆ ಕೊಡಿ’ ಎಂಬುದು ಅವರ ವಾದ.

ಆದರೆ ಕರ್ನಾಟಕ ವಿಧಾನಸಭೆಯ ಹೊಸ ಹೆಜ್ಜೆ ‘ಕಂಟ್ರೋಲ್’ ಹಂತಕ್ಕೆ ಹೋಗಿದೆ. ಮಾಧ್ಯಮಗಳ ಕಾರ್ಯನಿರ್ವಹಣೆ ಹದತಪ್ಪಿಹೋಗದಂತೆ ನೋಡಿಕೊಳ್ಳುವುದಕ್ಕೆ ಈಗಾಗಲೇ ಇರುವ ನೀತಿನಿಯಮ, ಕಾನೂನುಗಳೇ ಬೆಟ್ಟದಷ್ಟಿವೆ. ಭಾರತೀಯ ದಂಡ ಸಂಹಿತೆಯಿಂದ ತೊಡಗಿ ಈ ದೇಶದ ಒಂದೊಂದು ಕಾನೂನು ಕೂಡ ಜನಸಾಮಾನ್ಯರಿಗೆ ಅನ್ವಯಿಸಿದಷ್ಟೇ ಸಮಾನವಾಗಿ ಪತ್ರಕರ್ತರಿಗೂ ಅನ್ವಯಿಸುತ್ತದೆ. ನಮ್ಮ ಸಂವಿಧಾನವೇ ಎಲ್ಲ ಕಾನೂನುಗಳ ಅಗ್ರಜ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವ 19(1)(ಎ) ಪರಿಚ್ಛೇದದ ಬೆನ್ನಿಗೇ 19(2) ಪರಿಚ್ಛೇದದಲ್ಲಿ ‘ಸಕಾರಣ ನಿರ್ಬಂಧ’ಗಳೂ ಇವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದ್ದರೂ ದೇಶದ ಸಾರ್ವಭೌಮತೆ ಮತ್ತು ಐಕ್ಯತೆ, ಭದ್ರತೆ, ನೈತಿಕತೆ, ನ್ಯಾಯಾಂಗ ನಿಂದನೆ, ಮಾನಹಾನಿ, ಅಪರಾಧದ ಚಿತಾವಣೆಯಂತಹ ಸನ್ನಿವೇಶಗಳಲ್ಲಿ ಆ ಸ್ವಾತಂತ್ರ್ಯವನ್ನು ಸರ್ಕಾರ ನಿರ್ಬಂಧಿಸಬಹುದು ಎನ್ನುತ್ತದೆ ಸಂವಿಧಾನದ 19(2)ನೇ ಪರಿಚ್ಛೇದ.

ತಮ್ಮ ಕಾರ್ಯಕಲಾಪಗಳನ್ನು ಸಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕೆ ಸಂಸತ್ತು ಮತ್ತು ರಾಜ್ಯವಿಧಾನಮಂಡಲಗಳಿಗೆ ಸ್ವತಃ ಸಂವಿಧಾನವೇ ವಿಶೇಷಾಧಿಕಾರವನ್ನು (ಪಾರ್ಲಿಮೆಂಟರಿ ಪ್ರಿವಿಲಿಜಸ್) ನೀಡಿದೆ. ತನ್ನ ನೀತಿನಿಯಮಗಳನ್ನು ತಾನೇ ರೂಪಿಸಿಕೊಳ್ಳುವುದು, ಅವುಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವುದು ಕೂಡ ಅದರಲ್ಲಿ ಸೇರಿದೆ. ವಿಶೇಷಾಧಿಕಾರವನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ (ಬ್ರೀಚ್ ಆಫ್ ಪ್ರಿವಿಲಿಜಸ್) ಈಗಾಗಲೇ ಅನೇಕ ಮಂದಿ ಪತ್ರಕರ್ತರು, ಮಾಧ್ಯಮಸಂಸ್ಥೆಗಳು ಸದನದ ಛೀಮಾರಿಗೆ ಒಳಗಾದ ಘಟನೆಗಳು ಕರ್ನಾಟಕವೂ ಸೇರಿದಂತೆ ಭಾರತದ ಬೇರೆಬೇರೆ ಭಾಗಗಳಲ್ಲಿ ಸಾಕಷ್ಟು ನಡೆದಿವೆ. ಅಂತಹ ಸಂವಿಧಾನದತ್ತ ವಿಶೇಷಾಧಿಕಾರವನ್ನು ಚಲಾಯಿಸಬೇಡಿರೆಂದೋ, ತೆಗೆದುಹಾಕಿರೆಂದೋ ಯಾರೂ ಈಗ ಪ್ರತಿಭಟನೆ ನಡೆಸುತ್ತಿಲ್ಲ. ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಬಿಟ್ಟು ವಾಹಿನಿಗಳನ್ನೇ ಒಳಕ್ಕೆ ಬರದಂತೆ ನಿರ್ಬಂಧಿಸುತ್ತಿರುವುದರ ಹಿಂದಿನ ರಾಜಕಾರಣವೇನು ಎಂಬುದೇ ಎಲ್ಲರ ಪ್ರಶ್ನೆ.

2002ರಲ್ಲಿ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ 80ನೆಯದಾಗಿತ್ತು. 2016ರಲ್ಲಿ ಅದು 133ಕ್ಕೆ ಕುಸಿಯಿತು. 2019ರಲ್ಲಿ ಅದು ಇನ್ನೂ ಕೆಳಗಿಳಿದು 140ನೇ ರ್ಯಾಂಕಿಗೆ ತಲುಪಿದೆ. ದೇಶದ ಪತ್ರಿಕಾ ಸ್ವಾತಂತ್ರ್ಯದ ಪರಿಸ್ಥಿತಿಗೂ ಪ್ರಸ್ತುತ ವಿದ್ಯಮಾನಕ್ಕೂ ನೇರಸಂಬಂಧವಿಲ್ಲದೇ ಹೋದರೂ, ಇಂತಹ ಬೆಳವಣಿಗೆಗಳೆಲ್ಲ ನಮ್ಮ ಒಟ್ಟಾರೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ.

ಪಾರದರ್ಶಕತೆಯೇ ಪ್ರಜಾಪ್ರಭುತ್ವದ ಜೀವಾಳ. ಮಾಧ್ಯಮ ಸ್ವಾತಂತ್ರ್ಯ ಇಲ್ಲದೇ ಹೋದರೆ ಆಡಳಿತದಲ್ಲ್ಲಿ ಪಾರದರ್ಶಕತೆ ಎಂಬ ಮಾತಿಗೆ ಅರ್ಥವೇ ಇರುವುದಿಲ್ಲ. ಅಧಿಕಾರಿಗಳಷ್ಟೇ ಅಲ್ಲ, ಜನಪ್ರತಿನಿಧಿಗಳೂ ಸದನಗಳಲ್ಲಿ ಏನು ಮಾಡುತ್ತಾರೆ, ಹೇಗೆ ವರ್ತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಒಬ್ಬೊಬ್ಬ ಮತದಾರನಿಗೂ ಇದೆ. ಆ ಹಕ್ಕು ಕಾರ್ಯರೂಪಕ್ಕೆ ಬಂದಾಗಲೇ ಮತದಾರ ನಿಜದರ್ಥದಲ್ಲಿ ಪ್ರಜ್ಞಾವಂತನಾಗುವುದು. ನಿಮ್ಮ ಒಂದೊಂದು ಮತವೂ ಅಮೂಲ್ಯ, ಯೋಗ್ಯರನ್ನು ಆಯ್ಕೆ ಮಾಡಿ ಎಂದು ಪ್ರಚಾರ ಮಾಡಿದರೆ ಸಾಲದು, ತಾನು ಎಂಥವರಿಗೆ ಮತ ಹಾಕುತ್ತಿದ್ದೇನೆ ಎಂದು ಆ ಮತದಾರನಿಗೂ ತಿಳಿಯುವಂತೆ ಮಾಡಬೇಕು. ಮತದಾನ ಮಾಡಿದಲ್ಲಿಗೆ ಮತದಾರನ ಕರ್ತವ್ಯ ಮುಗಿಯಲಿಲ್ಲವಷ್ಟೆ? ಸರ್ಕಾರಿ ಚಾನೆಲ್ ಮೂಲಕ ಪ್ರಸಾರವಾಗುವ ದೃಶ್ಯಗಳನ್ನಷ್ಟೇ ಪ್ರಸಾರ ಮಾಡಿ ಎಂದು ತಾಕೀತು ಮಾಡುವುದರ ಹಿಂದಿನ ಮರ್ಮವೇನು ಎಂದು ವೀಕ್ಷಕರಿಗೆ ಅರ್ಥವಾಗುವುದಿಲ್ಲವೇ? ಎಂಬಲ್ಲಿಗೆ ಸರ್ಕಾರದ ಭಾಗವಾಗಿರುವ ಮತದಾರನ ಮಾಹಿತಿಯ ಹಕ್ಕನ್ನೂ ಕಸಿದುಕೊಂಡಂತೆ ಆಗಲಿಲ್ಲವೇ? ಸದನದ ಗಾಂಭೀರ್ಯತೆ, ಘನತೆ ಕಾಪಾಡುವ ಚಿಂತನೆ ಅದರಲ್ಲಿ ಭಾಗವಹಿಸುವವರಿಂದಲೇ ಬರಬೇಕೇ ಹೊರತು ಮಾಧ್ಯಮಗಳನ್ನು ನಿರ್ಬಂಧಿಸುವ ಮೂಲಕ ಅಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಸೆಪ್ಟೆಂಬರ್ 30, 2019

NET ಪರೀಕ್ಷೆಗೆ ನೆಟ್ಟಗೆ ತಯಾರಾಗಿ!

01 ಒಕ್ಟೋಬರ್ 2019ರ ಉದಯವಾಣಿ (ಜೋಶ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಏನಾದರಾಗಲಿ, ಈ ಬಾರಿ ನೆಟ್ ಪರೀಕ್ಷೆ ಪಾಸಾಗಿಬಿಡಬೇಕು ಎಂದು ಗಟ್ಟಿ ಮನಸ್ಸು ಮಾಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಸಾಫ್ಟ್‍ವೇರ್ ಇಂಜಿನಿಯರುಗಳಂತೆ ಸಂಬಳ ಪಡೆಯುತ್ತಿರುವುದು, ಇಂತಹ ಹುದ್ದೆಗೆ ಆಯ್ಕೆಯಾಗಲು ನೆಟ್ (NET) ಪರೀಕ್ಷೆ ಪ್ರಾಥಮಿಕ ಅರ್ಹತೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ.

ಯುಜಿಸಿ-ಎನ್‍ಇಟಿ ಹಿಂದಿನಿಂದಲೂ ಒಂದು ಪ್ರತಿಷ್ಠಿತ ಪರೀಕ್ಷೆ. ಅದನ್ನು ತೇರ್ಗಡೆಯಾದವರೆಲ್ಲರಿಗೂ ಸರ್ಕಾರಿ ನೇಮಕಾತಿ ಖಾತ್ರಿಯಲ್ಲವಾದರೂ, ತೇರ್ಗಡೆಯಾಗುವುದೇ ಒಂದು ಹೆಮ್ಮೆಯ ಸಂಗತಿ. ಒಮ್ಮೆ ತೇರ್ಗಡೆಯಾದರೆ ಅದು ಜೀವಮಾನದ ಅರ್ಹತೆ - ಅದಕ್ಕೆ ಎಕ್ಸ್‍ಪಯರಿ ಡೇಟ್ ಇಲ್ಲ; ಅವಕಾಶ ಕೂಡಿ ಬಂದಾಗ ಈ ಅರ್ಹತೆ ಬೆನ್ನಿಗೆ ನಿಲ್ಲುತ್ತದೆ. ಖಾಸಗಿ ಕಾಲೇಜುಗಳೂ ನೆಟ್ ತೇರ್ಗಡೆಯಾದ ಅಭ್ಯರ್ಥಿಗಳಿಗೇ ಮಣೆ ಹಾಕುತ್ತವೆ. ಅತ್ಯುನ್ನತ ಶ್ರೇಣಿಯಲ್ಲಿ ನೆಟ್ ತೇರ್ಗಡೆಯಾದವರು ಪಿಎಚ್‍ಡಿ ಸಂಶೋಧನೆ ಕೈಗೊಳ್ಳುವುದಕ್ಕೆ ಸರ್ಕಾರದಿಂದ ಆಕರ್ಷಕ ಶಿಷ್ಯವೇತನ (JRF) ಪಡೆಯುವುದೂ ನೆಟ್ ಜನಪ್ರಿಯತೆಗೆ ಇನ್ನೊಂದು ಕಾರಣ.

ಕಷ್ಟದ ಪರೀಕ್ಷೆಯೇ?
ಕಷ್ಟವೆನ್ನುವವರಿಗೆ ಕಷ್ಟ, ಸುಲಭವೆನ್ನುವವರಿಗೆ ಸುಲಭ. ಈಜು ಬಲ್ಲವರಿಗೆ ಅದೊಂದು ಆಟ, ನಿಂತು ನೋಡುವವರಿಗೆ ಆತಂಕ. ಆದರೆ ಇದು ಎಂ.ಎ., ಎಂಎಸ್ಸಿ ಪರೀಕ್ಷೆಗಳನ್ನು ಬರೆದಂತೆ ಅಲ್ಲ. ರಾಷ್ಟೀಯ ಅರ್ಹತಾ ಪರೀಕ್ಷೆ. ತೇರ್ಗಡೆಯಾದವರು ದೇಶದ ಯಾವ ಭಾಗದಲ್ಲಾದರೂ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಬಹುದು. ಸ್ನಾತಕೋತ್ತರ ಹಂತದ ಪಠ್ಯಕ್ರಮವೇ ಆದರೂ, ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಗಳ ಸಂಕೀರ್ಣತೆಯಿಂದಾಗಿ ಗಟ್ಟಿ ಮನಸ್ಸು, ಅಪಾರ ಬದ್ಧತೆ ಹಾಗೂ ಶ್ರದ್ಧೆಯ ತಯಾರಿಯನ್ನು ಅಪೇಕ್ಷಿಸುತ್ತದೆ.

ಯಾರು ಬರೆಯಬಹುದು?
ಸ್ನಾತಕೋತ್ತರ ಪದವೀಧರರು ಅಥವಾ ಅದರ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಪರೀಕ್ಷೆ ಬರೆಯಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ. 55, ಒಬಿಸಿ/ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಶೇ. 50 ಅಂಕ ಪಡೆದಿರಬೇಕು. ಸ್ನಾತಕೋತ್ತರ ಪದವಿ ಅಂತಿಮ ವರ್ಷದಲ್ಲೇ ನೆಟ್ ತೇರ್ಗಡೆಯಾದರೆ, ಪದವಿ ಫಲಿತಾಂಶ ಬಂದಮೇಲಷ್ಟೇ ಅರ್ಹತಾ ಪ್ರಮಾಣಪತ್ರ ದೊರೆಯುತ್ತದೆ.

ನೆಟ್ ಬರೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯುವುದಕ್ಕೆ ಗರಿಷ್ಠ ವಯೋಮಿತಿ ಇಲ್ಲ. ಆದರೆ ಸಂಶೋಧನಾ ಫೆಲೋಷಿಪ್ (JRF) ಪಡೆಯಲು ಅರ್ಹರಾಗಬೇಕೆಂದರೆ 30 ವರ್ಷದ ಒಳಗಿನವರಾಗಿರಬೇಕು. ಒಬಿಸಿ/ಎಸ್‍ಸಿ/ಎಸ್‍ಟಿ/ಭಿನ್ನಲಿಂಗಿ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಅವಕಾಶವಿದೆ.

ಯಾರು ನಡೆಸುತ್ತಾರೆ?
ಹಿಂದೆ ಎನ್‍ಇಟಿ ಪರೀಕ್ಷೆಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ನಡೆಸುತ್ತಿತ್ತು. ಈಗ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸ್ಥಾಪಿತವಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುತ್ತದೆ. ಮಾನವಿಕ ವಿಷಯಗಳ (ಕಲೆ, ವಾಣಿಜ್ಯ, ಸಾಹಿತ್ಯ) ಎನ್‍ಇಟಿ ಪರೀಕ್ಷೆಗೆ ಯುಜಿಸಿ ಪ್ರಾಧಿಕಾರವಾದರೆ, ವಿಜ್ಞಾನ ವಿಷಯಗಳ ಎನ್‍ಇಟಿ ಪರೀಕ್ಷೆಗೆ ಯುಜಿಸಿ-ಸಿಎಸ್‍ಐಆರ್ ಪ್ರಾಧಿಕಾರವಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (CSIR) ನಮ್ಮ ದೇಶದ ಅತಿದೊಡ್ಡ ಸಂಶೋಧನ ಸಂಸ್ಥೆಗಳಲ್ಲೊಂದು. ಎರಡೂ ಪರೀಕ್ಷೆಗಳಿಗೆ ಬೇರೆಬೇರೆ ಸಮಯದಲ್ಲಿ ಪ್ರತ್ಯೇಕ ಅಧಿಸೂಚನೆ, ಪ್ರಕ್ರಿಯೆ ನಡೆಯುತ್ತದೆ.

ಮಾನವಿಕ ವಿಭಾಗದಲ್ಲಿ ಸುಮಾರು 100 ವಿಷಯಗಳಲ್ಲಿ ಎನ್‍ಇಟಿ ಪರೀಕ್ಷೆ ತೆಗೆದುಕೊಳ್ಳಬಹುದು. ವಿಜ್ಞಾನ ವಿಷಯಗಳಲ್ಲಿ ರಾಸಾಯನಿಕ ವಿಜ್ಞಾನ, ಭೂ ವಿಜ್ಞಾನ, ಜೀವ ವಿಜ್ಞಾನ, ಗಣಿತಶಾಸ್ತ್ರೀಯ ವಿಜ್ಞಾನ ಹಾಗೂ ಭೌತಶಾಸ್ತ್ರೀಯ ವಿಜ್ಞಾನಗಳೆಂಬ ಐದು ವಿಭಾಗಗಳಿವೆ. ತಾವು ಎಂಎಸ್ಸಿ ಓದಿದ ವಿಷಯದ ಎನ್‍ಇಟಿಯನ್ನು ಸಂಬಂಧಿತ ವಿಭಾಗದಲ್ಲಿ ಬರೆಯಬಹುದು. ಹಿಂದೆ ಇಂಜಿನಿಯರಿಂಗ್ ವಿಷಯಗಳಿಗೂ ಎನ್‍ಇಟಿ ನಡೆಯುತ್ತಿತ್ತು, ಈಗ ಇಲ್ಲ.

ಹೇಗಿರುತ್ತದೆ ನೆಟ್?
ಈಗ ಎನ್‍ಇಟಿ ಪರೀಕ್ಷೆ ಆನ್‍ಲೈನ್ ಮಾದರಿಯಲ್ಲಿ ನಡೆಯುತ್ತದೆ. ಕಲೆ/ವಾಣಿಜ್ಯ/ಸಾಹಿತ್ಯ ವಿಷಯಗಳಲ್ಲಿ ಎರಡು ಪ್ರತ್ಯೇಕ ಪತ್ರಿಕೆಗಳಿದ್ದು ಒಟ್ಟು ಮೂರು ಗಂಟೆಯ ಅವಧಿ ಇರುತ್ತದೆ. ಪ್ರಶ್ನೆಗಳು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯವು. ಮೊದಲನೇ ಪತ್ರಿಕೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೂ ಸಾಮಾನ್ಯ. ಇದರಲ್ಲಿ ಎರಡು ಅಂಕಗಳ 50 ಪ್ರಶ್ನೆಗಳಿದ್ದು ಅವು ಬೋಧನೆ ಹಾಗೂ ಸಂಶೋಧನ ಕೌಶಲಗಳಿಗೆ ಸಂಬಂಧಪಟ್ಟವು. ಎರಡನೇ ಪತ್ರಿಕೆ ಆಯಾ ಅಭ್ಯರ್ಥಿಗಳ ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಗಳಿಗೆ ಸಂಬಂಧಪಟ್ಟವು; ಉದಾ: ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಕನ್ನಡ, ಇಂಗ್ಲಿಷ್, ಇತ್ಯಾದಿ. ಇದರಲ್ಲಿ ತಲಾ ಎರಡು ಅಂಕಗಳ 100 ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗಳ ನಡುವೆ ಬ್ರೇಕ್ ಇಲ್ಲ. ಪ್ರಶ್ನೆಗಳ ನಡುವೆ ಆಯ್ಕೆ ಇಲ್ಲ, ನೆಗೆಟಿವ್ ಮಾರ್ಕಿಂಗ್ ಕೂಡ ಇಲ್ಲ.

ವಿಜ್ಞಾನ ವಿಷಯಗಳಲ್ಲಿ ಮೂರು ಗಂಟೆ ಅವಧಿಯ ಒಂದೇ ಪರೀಕ್ಷೆ. ಎರಡು ಪತ್ರಿಕೆಗಳಿಲ್ಲ. 200 ಅಂಕಗಳ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯ ಪತ್ರಿಕೆ. ಇದರಲ್ಲಿ ಮೂರು ವಿಭಾಗಗಳಿರುತ್ತವೆ: ಮೊದಲನೇ ಭಾಗ (30 ಅಂಕ) ಎಲ್ಲರಿಗೂ ಸಾಮಾನ್ಯ; ಎರಡನೇ ಭಾಗ (70 ಅಂಕ) ಅವರವರ ಎಂಎಸ್ಸಿ ವಿಷಯಗಳಿಗೆ ಸಂಬಂಧಿಸಿದ್ದು; ಮೂರನೇ ಭಾಗ (100 ಅಂಕ) ಅದೇ ವಿಷಯ, ಕೊಂಚ ಹೆಚ್ಚಿನ ಸಂಕೀರ್ಣತೆ ಹೊಂದಿರುವ ಪ್ರಶ್ನೆಗಳಿರುತ್ತವೆ. ಇಲ್ಲಿ ಪ್ರಶ್ನೆಗಳ ಆಯ್ಕೆಯೂ ಇರುತ್ತದೆ, ನೆಗೆಟಿವ್ ಮಾರ್ಕಿಂಗ್ ಕೂಡ ಇರುತ್ತದೆ.

ಪರೀಕ್ಷೆ ಯಾವಾಗ? ಎಲ್ಲಿ?
ನೆಟ್ ಪರೀಕ್ಷೆಯನ್ನು ಜೂನ್ ಹಾಗೂ ಡಿಸೆಂಬರ್ ತಿಂಗಳಲ್ಲಿ- ಅಂದರೆ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಈ ಬಾರಿಯ ನೆಟ್ ಪರೀಕ್ಷೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಅಕ್ಟೋಬರ್ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಅಕ್ಟೋಬರ್ 10ರ ರಾತ್ರಿವರೆಗೂ ಶುಲ್ಕ ಪಾವತಿಸಬಹುದು. ಸಾಮಾನ್ಯ ವರ್ಗದವರಿಗೆ ರೂ. 1000, ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಒಬಿಸಿ ವರ್ಗದವರಿಗೆ ರೂ. 500 ಮತ್ತು ಎಸ್‍ಸಿ/ಎಸ್‍ಟಿ/ವಿಕಲಾಂಗ/ತೃತೀಯಲಿಂಗಿ ಅಭ್ಯರ್ಥಿಗಳಿಗೆ ರೂ. 250 ಶುಲ್ಕವಿರುತ್ತದೆ. ನವೆಂಬರ್ 9ರಿಂದ ಎನ್‍ಟಿಎ ಜಾಲತಾಣ ದಿಂದ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.

ಯುಜಿಸಿ-ಎನ್‍ಇಟಿ ಈ ಬಾರಿ ಡಿಸೆಂಬರ್ 2ರಿಂದ 6ರವರೆಗೆ, ಸಿಎಸ್‍ಐಆರ್-ಎನ್‍ಇಟಿ ಡಿಸೆಂಬರ್ 15ಕ್ಕೆ ನಡೆಯಲಿದೆ. ಎರಡೂ ಪರೀಕ್ಷೆಗಳ ಫಲಿತಾಂಶ ಡಿಸೆಂಬರ್ 31ಕ್ಕೆ ಲಭ್ಯವಾಗಲಿದೆ. ಯುಜಿಸಿ-ಎನ್‍ಇಟಿ ಎರಡು ಪಾಳಿಗಳಲ್ಲಿ ನಡೆಯಲಿದ್ದು, ಬೆಳಗ್ಗಿನ ಶಿಫ್ಟ್ 9:30ರಿಂದ 12:30ರವರೆಗೆ, ಮಧ್ಯಾಹ್ನದ ಶಿಫ್ಟ್ 2:30ರಿಂದ 5:30ರವರೆಗೆ.

ಆನ್‍ಲೈನ್ ಪರೀಕ್ಷೆಗಾಗಿ ದೇಶದ ವಿವಿಧ ಭಾಗಗಳಲ್ಲಿ ಕಂಪ್ಯೂಟರ್ ಸೌಲಭ್ಯವಿರುವ ಕೇಂದ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಲ್ ಟಿಕೇಟಿನಲ್ಲಿ ಪರೀಕ್ಷೆಯ ಸ್ಥಳ, ದಿನಾಂಕ ಹಾಗೂ ಸಮಯ ನಮೂದಿಸುತ್ತಾರೆ.

ತಯಾರಿ ಹೇಗೆ?
ಎನ್‍ಇಟಿ ಪರೀಕ್ಷೆಗೆ ಕನಿಷ್ಠ ಆರು ತಿಂಗಳ ಗಂಭೀರ ತಯಾರಿ ಬೇಕು. ಮಾನವಿಕ ವಿಷಯಗಳ ಪಠ್ಯಕ್ರಮ https://www.ugcnetonline.in/syllabus-new.php ಜಾಲತಾಣದಲ್ಲಿಯೂ, ವಿಜ್ಞಾನ ವಿಷಯಗಳ ಪಠ್ಯಕ್ರಮ https://csirhrdg.res.in ಜಾಲತಾಣದಲ್ಲಿಯೂ ಲಭ್ಯವಿದೆ. ತಯಾರಿಯ ಮೊದಲು ಪಠ್ಯಕ್ರಮದ ಸಂಪೂರ್ಣ ಪರಿಚಯ ಮಾಡಿಕೊಳ್ಳುವುದು ಅಗತ್ಯ.

ನೆಟ್ ಸಾಮಾನ್ಯ ಪತ್ರಿಕೆಯ ಪಠ್ಯಕ್ರಮದಲ್ಲಿ 10 ಅಧ್ಯಾಯಗಳಿವೆ. ಬೋಧನೆ ಹಾಗೂ ಸಂಶೋಧನೆಯ ಕೌಶಲ, ವಿಷಯ ಗ್ರಹಿಕೆ, ಸಂವಹನ, ಪ್ರಾಥಮಿಕ ಗಣಿತ, ತಾರ್ಕಿಕ ಚಿಂತನೆ, ದತ್ತಾಂಶ ವಿಶ್ಲೇಷಣೆ, ಮಾಹಿತಿ ಸಂವಹನ ತಂತ್ರಜ್ಞಾನ (ICT), ಅಭಿವೃದ್ಧಿ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ- ಹೀಗೆ ವೈವಿಧ್ಯಮಯ ವಿಷಯಗಳಿರುತ್ತವೆ. ಐಚ್ಛಿಕ ವಿಷಯದ ಪಠ್ಯಕ್ರಮ ಸ್ನಾತಕೋತ್ತರ ಕೋರ್ಸಿಗೆ ಸಮಾನವಾಗಿದ್ದು, ಸಮಗ್ರ ಹಾಗೂ ಆಳವಾದ ಅಧ್ಯಯನ ಅಗತ್ಯ.

ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ದಿನದಲ್ಲಿ ಕನಿಷ್ಠ 3-4 ಗಂಟೆಯನ್ನಾದರೂ ಅಭ್ಯಾಸಕ್ಕೆ ಮೀಸಲಿಡುವುದು ಒಳ್ಳೆಯದು. ಪರೀಕ್ಷೆ ವಸ್ತುನಿಷ್ಠ ಮಾದರಿಯದ್ದಾಗಿರುವುದರಿಂದ ಸಣ್ಣಸಣ್ಣ ವಿವರಗಳಿಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ಓದುತ್ತಲೇ ನೋಟ್ಸ್ ಮಾಡಿಕೊಳ್ಳುವುದು ಕೊನೆಯ ಕ್ಷಣದ ರಿವಿಶನ್‍ಗೆ ಬಹಳ ಅಗತ್ಯ. ಈಗ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯ. ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಗೊಂದಲಕ್ಕೆ ಬೀಳುವುದಕ್ಕಿಂತ ಉತ್ತಮ ಗುಣಮಟ್ಟದ ಒಂದೋ ಎರಡೋ ಪುಸ್ತಕ ಸಾಕು.

ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಅತ್ಯಂತ ಮುಖ್ಯ. ಕನಿಷ್ಠ 7-8 ವರ್ಷಗಳ ಹಿಂದಿನ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಕಲಿತರೆ ಪರೀಕ್ಷೆ ತೇರ್ಗಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆಯಾ ಪರೀಕ್ಷೆಗಳ ವೆಬ್‍ಸೈಟಿನಿಂದ ಅನೇಕ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ಈ ಪರೀಕ್ಷೆಗೆ ಪ್ರತ್ಯೇಕ ಕೋಚಿಂಗ್ ಅನಿವಾರ್ಯವೇನೂ ಅಲ್ಲ. ಪರಿಶ್ರಮಪಟ್ಟು ಸ್ವಂತ ಅಧ್ಯಯನ ಮಾಡಿದರೆ ಸಾಕು. ಈಗಂತೂ ಇಂಟರ್ನೆಟ್ಟಲ್ಲಿ ಧಾರಾಳ ಅಭ್ಯಾಸ ಸಾಮಗ್ರಿಗಳು, ಮಾಕ್ ಟೆಸ್ಟ್ ಗಳು ದೊರೆಯುತ್ತವೆ. ತೀರಾ ಅರ್ಥವಾಗದ ವಿಷಯಗಳಿದ್ದರೆ ಸ್ನೇಹಿತರ ಅಥವಾ ಅಧ್ಯಾಪಕರ ಬಳಿ ಪಾಠ ಹೇಳಿಸಿಕೊಳ್ಳಬಹುದು. ವಿದ್ಯಾರ್ಥಿಗಳಾಗಿರುವಾಗಲೇ ನೆಟ್ ಬರೆಯುವುದು ತಯಾರಿ ದೃಷ್ಟಿಯಿಂದ ತುಂಬ ಒಳ್ಳೆಯದು.

ಉದಾಸೀನ ಸಲ್ಲದು
‘ಮೊದಲನೇ ಪತ್ರಿಕೆ ಜನರಲ್, ಅಷ್ಟಾಗಿ ಓದಿಕೊಳ್ಳದಿದ್ದರೂ ಪರವಾಗಿಲ್ಲ; ಐಚ್ಛಿಕ ಪತ್ರಿಕೆಗೆ ಚೆನ್ನಾಗಿ ತಯಾರಾಗೋಣ’ ಎಂದು ಭಾವಿಸುವವರು ಹೆಚ್ಚು. ಇಲ್ಲೇ ಅವರು ಎಡವುವುದು. ಮೊದಲನೇ ಪತ್ರಿಕೆ ಅಂದುಕೊಂಡಷ್ಟು ಸುಲಭವಲ್ಲ. ಅಂದಾಜಿನ ಮೇಲೆ ಉತ್ತರ ಗುರುತು ಮಾಡುವುದೂ ಸರಿಯಲ್ಲ. ಮೊದಲನೇ ಪತ್ರಿಕೆಯಲ್ಲೇ ತೇರ್ಗಡೆಯಾಗದೆ ಎರಡನೆಯದರಲ್ಲಿ ಉನ್ನತ ಶ್ರೇಣಿ ಪಡೆದೂ ಪ್ರಯೋಜನವಿಲ್ಲ. ಆದ್ದರಿಂದ ಎರಡೂ ಪತ್ರಿಕೆಗಳಿಗೆ ಸಮಾನ ಆದ್ಯತೆ ನೀಡಿ ತಯಾರಿ ನಡೆಸುವವರೇ ಜಾಣರು.

ಎಲ್ಲ ಅಧ್ಯಾಯಗಳನ್ನು ಸಂಪೂರ್ಣವಾಗಿ ಅಭ್ಯಾಸ ಮಾಡುವುದೂ ಅಷ್ಟೇ ಮುಖ್ಯ. ಪ್ರತಿ ಅಧ್ಯಾಯದಿಂದಲೂ ಸಮಾನ ಸಂಖ್ಯೆಯ ಪ್ರಶ್ನೆಗಳನ್ನು ಕೇಳಿರುತ್ತಾರೆ. ಸಾಮಾನ್ಯವಾಗಿ ಜನರಲ್ ಪತ್ರಿಕೆಯ ಮೆಥಮೆಟಿಕಲ್ ರೀಸನಿಂಗ್ & ಆಪ್ಟಿಟ್ಯೂಡ್, ಲಾಜಿಕಲ್ ರೀಸನಿಂಗ್ ಡೇಟಾ ಇಂಟರ್‍ಪ್ರಿಟೇಶನ್ ಅಧ್ಯಾಯಗಳನ್ನು ನಿರ್ಲಕ್ಷಿಸುವವರು ಹೆಚ್ಚು. ಅದರಲ್ಲೂ ಕಲಾ ವಿಭಾಗದ ಅಭ್ಯರ್ಥಿಗಳಿಗೆ ಇವೆಲ್ಲ ಕೊಂಚ ಕಷ್ಟ ಅನಿಸಿ ಬಿಟ್ಟುಬಿಡುವುದೂ ಇದೆ. ಹಾಗೆ ಮಾಡುವುದು ತಪ್ಪು. ಅನೇಕ ಅಭ್ಯರ್ಥಿಗಳು ಮೊದಲ ಪತ್ರಿಕೆಯಲ್ಲಿ ಫೇಲ್ ಆಗುವುದಕ್ಕೆ ಇದೇ ಕಾರಣ. ಒಂದಷ್ಟು ಮಾದರಿ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೆ ಇವೆಲ್ಲ ಅಂತ ಕಠಿಣ ವಿಷಯಗಳೇನಲ್ಲ.

ಎರಡನೇ ಪತ್ರಿಕೆಯಲ್ಲಂತೂ ಹೊಂದಿಸಿ ಬರೆಯುವ, ಕಾಲಾನುಕ್ರಮದಲ್ಲಿ ಜೋಡಿಸುವ, ಪ್ರತಿಪಾದನೆ-ತರ್ಕ (Assertion-Reasoning) ಮಾದರಿಯ ಪ್ರಶ್ನೆಗಳೇ ಹೆಚ್ಚಾಗಿರುವುದರಿಂದ ಸಮಯ ಬೇಗನೆ ಕಳೆದುಹೋಗುತ್ತದೆ. ಕೊಂಚ ಏಕಾಗ್ರತೆ ತಪ್ಪಿದರೂ ಚೆನ್ನಾಗಿ ಗೊತ್ತಿರುವ ಪ್ರಶ್ನೆಗೇ ತಪ್ಪು ಉತ್ತರ ಬರೆಯುವ ಸಾಧ್ಯತೆ ಹೆಚ್ಚು. ಹಳೆಯ ಪ್ರಶ್ನೆಪತ್ರಿಕೆಗಳನ್ನು ಹೆಚ್ಚುಹೆಚ್ಚು ಬಿಡಿಸಿದಷ್ಟೂ ಈ ಸಮಸ್ಯೆ ಮನವರಿಕೆ ಆಗುವುದರಿಂದ ಸಂಭವನೀಯ ತಪ್ಪುಗಳಿಂದ ಬಚಾವಾಗಬಹುದು.

ಏನಿದು JRF?
ನೆಟ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಜೂನಿಯರ್ ರಿಸರ್ಚ್ ಫೆಲೋಷಿಪ್ (JRF-Junior Research Fellowship) ಎಂಬ ಬಂಪರ್ ಬಹುಮಾನವಿದೆ. ಪಿಎಚ್‍ಡಿ ಮಾಡಲು ಯುಜಿಸಿ ಪ್ರತೀ ತಿಂಗಳೂ ಕೈತುಂಬ ಫೆಲೋಷಿಪ್ ನೀಡುತ್ತದೆ. ಮೊದಲ ಎರಡು ವರ್ಷ ಪ್ರತೀ ತಿಂಗಳೂ ರೂ. 31,000, ಮುಂದಿನ ಮೂರು ವರ್ಷ (SRF- Senior Research Fellowship) ಪ್ರತೀ ತಿಂಗಳೂ ರೂ. 35,000 ಲಭ್ಯ. ಬೇರೆ ಭತ್ಯೆಗಳೂ ಇವೆ. ಯಾವ ಉದ್ಯೋಗ ಹಿಡಿಯುವ ಆತಂಕವೂ ಇಲ್ಲದೆ ನೆಮ್ಮದಿಯಾಗಿ ಸಂಶೋಧನೆಯಲ್ಲಿ ನಿರತರಾಗಬಹುದು. ಜೆಆರ್‍ಎಫ್ ಬಯಸುವವರು ನೆಟ್ ಅರ್ಜಿ ತುಂಬುವಾಗ ಮಾತ್ರ ‘ಅಸಿಸ್ಟೆಂಟ್ ಪ್ರೊಫೆಸರ್ & ಜೆಆರ್‍ಎಫ್’ ಎಂಬ ಅಂಕಣವನ್ನು ಕಡ್ಡಾಯ ತುಂಬಬೇಕು. ಕೇವಲ ‘ಅಸಿಸ್ಟೆಂಟ್ ಪ್ರೊಫೆಸರ್’ ಎಂದು ತುಂಬಿದರೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ಫೆಲೋಷಿಪ್‍ಗೆ ಪರಿಗಣಿಸುವುದಿಲ್ಲ.

ಕೆ-ಸೆಟ್ ಬರೆಯಿರಿ
ನೆಟ್ ಪರೀಕ್ಷೆಗೆ ಸಮಾನವಾಗಿ ರಾಜ್ಯಮಟ್ಟಗಳಲ್ಲಿ ಸೆಟ್ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಯ ವಿಧಾನ, ಮಾದರಿ, ಪಠ್ಯಕ್ರಮ ಎಲ್ಲವೂ ಯುಜಿಸಿ-ನೆಟ್‍ನಂತೆಯೇ ಇರುತ್ತದೆ. ಆದರೆ ಇದನ್ನು ತೇರ್ಗಡೆಯಾದವರು ನಮ್ಮ ರಾಜ್ಯದ ಕಾಲೇಜು, ವಿವಿಗಳಲ್ಲಿ ಮಾತ್ರ ಉದ್ಯೋಗ ಪಡೆಯಬಹುದು, ಬೇರೆ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. http://kset.uni-mysore.ac.in/ ಜಾಲತಾಣದಲ್ಲಿ ಸಂಪೂರ್ಣ ವಿವರಗಳಿವೆ.

-ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಸೆಪ್ಟೆಂಬರ್ 24, 2019

ಉದ್ಯೋಗವಿದ್ದರೂ ನಿರುದ್ಯೋಗ!

25 ಸೆಪ್ಟೆಂಬರ್ 2019ರ ವಿಜಯವಾಣಿ (ಮಸ್ತ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಎಲ್ಲೆಲ್ಲೂ ನೀರೋ ನೀರು, ಕುಡಿಯುವುದಕ್ಕೊಂದೂ ಹನಿಯಿಲ್ಲ! ಇದು ಕವಿ ಕೋಲರಿಜ್‍ನ ಪ್ರಸಿದ್ಧ ಹಾಡೊಂದರ ಸಾಲು. ಒಂದೂಕಾಲು ಶತಮಾನದ ಬಳಿಕ ಈ ಸಾಲು ಉದ್ಯೋಗದ ಅವಶ್ಯಕತೆಯಿರುವವರ ಹಾಗೂ ಉದ್ಯೋಗ ನೀಡುವವರ ಅಸಹಾಯಕ ಧ್ವನಿಯಾಗಿ ಕೇಳಿಸುತ್ತಿರುವುದು ಮಾತ್ರ ಕಾಕತಾಳೀಯ ಮತ್ತು ವಿಚಿತ್ರ.

ಪಿಎಚ್‍ಡಿ ಮಾಡಿದವರು ಹಾಸ್ಟೆಲ್ ಅಡುಗೆಯವರ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾರೆ. ಬಿಇ, ಎಂಎ ಪದವೀಧರರು ಗುಮಾಸ್ತರ ಕೆಲಕ್ಕೆ ದೌಡಾಯಿಸುತ್ತಿದ್ದಾರೆ. ನಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ ದೊರೆಯುತ್ತಿಲ್ಲ ಎಂಬುದು ಅವರ ಅಳಲು. ಇನ್ನೊಂದೆಡೆ, ನಮ್ಮಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂಬುದು ಹತ್ತುಹಲವು ಕಂಪೆನಿಗಳ ದೂರು. ಎಂಬಲ್ಲಿಗೆ ‘ನಿಮ್ಮ ಅಂಕಪಟ್ಟಿ, ಪ್ರಮಾಣಪತ್ರ ಯಾರಿಗೂ ಬೇಡ. ಉದ್ಯೋಗ ನೀಡುವವರಿಗೆ ಬೇಕಾಗಿರುವುದು ನೀವು, ಅಂದರೆ ನಿಮ್ಮೊಳಗಿನ ಕೌಶಲ’ ಎಂಬ ಹಳೆಯ ಮೇಷ್ಟ್ರುಗಳ ಮಾತು ನಿಜವಾಯಿತು.

‘ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಎಂಬುದೇ ಇಲ್ಲ. ಬೇಕಾದಷ್ಟು ಉದ್ಯೋಗಗಳು ಖಾಲಿ ಇವೆ. ಆದರೆ ಅರ್ಹ ಯುವಕರೇ ಇಲ್ಲ’ ಎಂಬ ಕೇಂದ್ರ ಕಾರ್ಮಿಕ ಸಚಿವರ ಇತ್ತೀಚಿನ ಹೇಳಿಕೆಯಿಂದ ವಿವಾದ ಉಂಟಾಯಿತು. ಅವರು ಹಾಗೆ ಹೇಳುವಾಗ ‘ಉತ್ತರ ಭಾರತದಲ್ಲಿ’ ಎಂಬ ಮಾತು ಸೇರಿಸಿದ್ದೇ ವಿವಾದಕ್ಕೆ ಕಾರಣ. ರಾಜಕೀಯದಲ್ಲಿ ವಿವಾದಗಳು ಸಾಮಾನ್ಯವೇ, ಆದರೆ ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಹೇಗೆ? ಈವರೆಗಿನ ಹತ್ತಾರು ಅಧ್ಯಯನ ವರದಿಗಳು ಕೌಶಲದ ಕೊರತೆಯೇ ಭಾರತೀಯರ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣ ಎಂಬುದನ್ನು ಮತ್ತೆಮತ್ತೆ ಹೇಳಿವೆ.

ಕೋರ್ಸುಗಳ ದುಸ್ಥಿತಿ
ಕಳೆದ ಸುಮಾರು ಹತ್ತು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಬಿಎ, ಬಿಎಸ್ಸಿಯಂತಹ ಸಾಂಪ್ರದಾಯಿಕ ಕೋರ್ಸುಗಳು ಬಿಕೋ ಎನ್ನುತ್ತಿವೆ. ಉಪನ್ಯಾಸಕರು ತಮ್ಮ ಹುದ್ದೆ ಉಳಿಸಿಕೊಳ್ಳಲು ಬೀದಿ ಬಯಲು ಸುತ್ತಿ ಕನಿಷ್ಟ ದಾಖಲಾತಿ ಮಟ್ಟವನ್ನಾದರೂ ತಲುಪುವ ಸರ್ಕಸ್ ಮಾಡುತ್ತಿದ್ದಾರೆ. ನಗರ ಪ್ರದೇಶಗಳ ಬಹುತೇಕ ಕಾಲೇಜುಗಳು ಪಿಯುಸಿ, ಪದವಿ ಹಂತಗಳಲ್ಲಿ ಕಲಾ ವಿಭಾಗವನ್ನು ಮುಚ್ಚಿಯೇಬಿಟ್ಟಿವೆ.

ಕಾಲಾಂತರದಿಂದ ಇದ್ದ ಕೋರ್ಸುಗಳೆಲ್ಲ ಆಕರ್ಷಣೆಯನ್ನು ಕಳೆದುಕೊಂಡಿವೆಯೇ? ಅವುಗಳಲ್ಲಿ ನಮ್ಮ ಯುವಕರಿಗೆ ಕೂಳಿನ ದಾರಿ ಕಾಣುತ್ತಿಲ್ಲವೇ? ಎರಡೂ ಪ್ರಶ್ನೆಗಳಿಗೆ ಉತ್ತರ ‘ಹೌದು’ ಎಂದೇ ಆಗಿದೆ. ಹಾಗಾದರೆ ಮುಂದೇನು? ಇಲ್ಲಿಗೆ ಬರಬೇಕಿದ್ದ ಯುವಕರು ಬೇರೆಲ್ಲಿ ಹೋಗುತ್ತಿದ್ದಾರೆ? ಈ ಕೋರ್ಸು-ಕಾಲೇಜುಗಳನ್ನೆಲ್ಲ ಇಡಿಯಿಡಿಯಾಗಿ ಮುಚ್ಚಿಬಿಡುವುದೇ? ಹಾಗೆ ಮಾಡಿದರೆ ನಮ್ಮ ಸಮಾಜದ ಅವಿಭಾಜ್ಯ ಅಂಗಗಳಾಗಿರುವ ಮೂಲ ವಿಜ್ಞಾನ, ಮಾನವಿಕ ಶಾಸ್ತ್ರಗಳ ಭವಿಷ್ಯವೇನು?

ಕೋರ್ಸುಗಳೂ ಮುಚ್ಚಿಹೋಗಬಾರದು, ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗಳನ್ನೂ ಕಡೆಗಣಿಸಲಾಗದು ಎಂದರೆ ಬದಲಾಗಿರುವ ಕಾಲಕ್ಕೆ ತಕ್ಕಂತೆ ಅವುಗಳ ಸ್ವರೂಪದಲ್ಲಿ ಮಾರ್ಪಾಡು ತರುವುದು ಇಂದಿನ ಅನಿವಾರ್ಯತೆ. ಕಾಲ ಬದಲಾಯಿತೆಂದು ಸಾಬೂನು, ಚಪ್ಪಲಿ, ಉಡುಪುಗಳಂತಹ ವಸ್ತುಗಳ ಉತ್ಪಾದನೆ ನಿಂತು ಹೋಗಿಲ್ಲ; ಅವುಗಳ ಬಣ್ಣ, ವಿನ್ಯಾಸ ಬದಲಾಗಿದೆ ಅಷ್ಟೇ. ಇನ್ನು ಮನುಷ್ಯರ ಅಂತರ್ಗತ ಭಾಗವಾಗಿರುವ ಶಿಕ್ಷಣವು ಸಮಾಜದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗದಿದ್ದರೆ ಹೇಗೆ?

ಉದ್ಯೋಗಗಳಿವೆ, ಅವುಗಳಿಗೆ ಬೇಕಾದ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ, ಅವರಿಗೆ ಉದ್ಯೋಗ ದೊರೆಯುತ್ತಿಲ್ಲ. ವಾಸ್ತವವಾಗಿ ಈ ಎರಡು ಪರಿಸ್ಥಿತಿಗಳ ಅರ್ಥ ಒಂದೇ. ಬೇಡಿಕೆ ಮತ್ತು ಸರಬರಾಜು-  ಉದ್ಯೋಗ ಜಗತ್ತಿನಲ್ಲಿ ಇವೆರಡರ ನಡುವೆ ದೊಡ್ಡ ಕಂದರ ಇದೆ. ಇದನ್ನು ಬೆಸೆಯದೇ ಹೋದರೆ ಮುಂದೆ ಉಳಿಗಾಲವಿಲ್ಲ.

ಉದ್ಯೋಗ ಮತ್ತು ಕೌಶಲ
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಕಾರ, ನಮ್ಮ ದೇಶದ ಒಟ್ಟಾರೆ ದುಡಿಯುವ ವರ್ಗದ ಪೈಕಿ ಶೇ. 4.69ರಷ್ಟು ಮಾತ್ರ ಕೌಶಲಯುಕ್ತ ಮಂದಿಯಿದ್ದಾರೆ. ಉಳಿದವರೆಲ್ಲರೂ ಕೌಶಲ್ಯರಹಿತರು. ಅಮೇರಿಕದಲ್ಲಿ ಶೇ. 52, ಇಂಗ್ಲೆಂಡಿನಲ್ಲಿ ಶೇ. 68, ಜರ್ಮನಿಯಲ್ಲಿ ಶೇ. 75, ಜಪಾನ್‍ನಲ್ಲಿ ಶೇ. 80 ಹಾಗೂ ದಕ್ಷಿಣ ಕೊರಿಯಾದಲ್ಲಿ ಶೇ. 96 ಕೌಶಲ್ಯಯುಕ್ತ ಉದ್ಯೋಗಿಗಳಿದ್ದಾರೆ. ಒಂದು ದೇಶದ ಅಭಿವೃದ್ಧಿಗೂ ಅಲ್ಲಿನ ಕೌಶಲ್ಯಯುಕ್ತ ದುಡಿಯುವ ವರ್ಗಕ್ಕೂ ಸಂಬಂಧ ಇದೆ ಎಂದು ಬೇರೆ ಹೇಳಬೇಕೆ?

ಯಾವ ಕೆಲಸವನ್ನೂ ಇಂದು ಯಾಂತ್ರಿಕವಾಗಿ ಮಾಡಿ ಮುಗಿಸುವಂತಿಲ್ಲ. ಪ್ರತೀ ಕಾರ್ಯವೂ ಮೌಲ್ಯವರ್ಧನೆಯನ್ನು ಬಯಸುತ್ತದೆ. ಒಂದು ವಸ್ತುವನ್ನು ಇಲ್ಲಿಂದ ಅಲ್ಲಿಗೆ ಎತ್ತಿ ಇಡುವಲ್ಲೂ ಒಪ್ಪ ಓರಣ, ನಾಜೂಕುತನ ಇರಬೇಕು. ಯುವಕರು ಸ್ಮಾರ್ಟ್ ಮತ್ತು ಸ್ಕಿಲ್ಡ್ ಆಗಿರಬೇಕು, ಅವರಲ್ಲಿ ಸೃಜನಶೀಲತೆ, ನಿರ್ಧಾರ ಕೈಗೊಳ್ಳುವಿಕೆಯ ಸೂಕ್ಷ್ಮತೆ, ಗ್ರಾಹಕ ಸಂಬಂಧ, ಸ್ಪಷ್ಟ ಯೋಚನೆ, ಉತ್ತಮ ಸಂವಹನ, ಸಮಯ ನಿರ್ವಹಣೆ, ನಾಯಕತ್ವ- ಇತ್ಯಾದಿ ಗುಣಗಳಿರಬೇಕು ಎಂದು ಉದ್ಯೋಗ ಜಗತ್ತು ಬಯಸುವುದರಲ್ಲಿ ಏನಾದರೂ ತಪ್ಪಿದೆಯೇ? ನಮ್ಮ ಶೈಕ್ಷಣಿಕ ಜಗತ್ತಿನ ನೀತಿ ನಿರೂಪಕರು, ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ.

ಎಚ್ಚೆತ್ತುಕೊಳ್ಳುವ ಕಾಲ
ಶಿಕ್ಷಣದ ಯಾಂತ್ರಿಕತೆಯಿಂದ ಹೊರಬರದೆ ನಿರುದ್ಯೋಗ ಸಮಸ್ಯೆಗೆ ಪರಿಹಾರವಿಲ್ಲ ಎಂಬುದು ಆಡಳಿತಗಾರರಿಗೆ ತಡವಾಗಿಯಾದರೂ ಮನವರಿಕೆ ಆಗಿದೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಜತೆಜತೆಯಾಗಿ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆದಿವೆ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಕೇಂದ್ರ ಸರ್ಕಾರ 2014ರಲ್ಲಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆ (ಎನ್‍ಎಸ್‍ಡಿಎ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಧಿ (ಎನ್‍ಎಸ್‍ಡಿಎಫ್)ಗಳಲ್ಲದೆ ದೇಶದಾದ್ಯಂತೆ 28 ಸೆಕ್ಟರ್ ಸ್ಕಿಲ್ ಕೌನ್ಸಿಲ್‍ಗಳು ಹೊಸ ರೂಪ ಪಡೆದು ಕಾರ್ಯಕ್ಷೇತ್ರಕ್ಕೆ ಧುಮುಕಿವೆ. ರಾಷ್ಟ್ರೀಯ ಕೌಶಲ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎನ್‍ಎಸ್‍ಡಿಸಿ ಹಾಗೂ ಎನ್‍ಎಸ್‍ಡಿಎಫ್‍ಗಳನ್ನು ಪುನಾರಚಿಸುವ ನಿರ್ಧಾರವನ್ನೂ ಕೇಂದ್ರ ಸರ್ಕಾರ ಕೈಗೊಂಡಿದೆ.

2015ರಿಂದಲೇ ‘ಸ್ಕಿಲ್ ಇಂಡಿಯಾ’ ಅಭಿಯಾನ ಆರಂಭವಾಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ರಾಜೀವ ಗಾಂಧಿ ಚೈತನ್ಯ ಯೋಜನೆ - ಹೀಗೆ ಹತ್ತಾರು ಯೋಜನೆಗಳು ಚಾಲ್ತಿಯಲ್ಲಿವೆ. ಕರ್ನಾಟಕ ವೃತ್ತಿ ಶಿಕ್ಷಣ ನಿಗಮ ಈಗ ‘ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ಯಾಗಿ ಬದಲಾಗಿದೆ. ಸಾಂಪ್ರದಾಯಿಕ ಕೋರ್ಸುಗಳ ಜತೆಗೆ ಕೌಶಲಗಳಿಗೆ ಪ್ರಾಮುಖ್ಯತೆ ನೀಡುವ ಆ್ಯಡ್-ಆನ್ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಎಂದು ಯುಜಿಸಿ ಕಾಲೇಜುಗಳಿಗೆ ದುಂಬಾಲು ಬಿದ್ದಿದೆ. ಬಿಎ/ಬಿಎಸ್ಸಿಯ ಜತೆಗೆ ಉದ್ಯೋಗ ಜಗತ್ತಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಬಿ.ವೋಕ್. ಕೋರ್ಸುಗಳನ್ನು ಪರಿಚಯಿಸಿದೆ.

ಸಮಸ್ಯೆಯಿರುವುದು ಯೋಜನೆಗಳ ಸಂಖ್ಯೆಯಲ್ಲಿ ಅಲ್ಲ; ಅವುಗಳ ಅನುಷ್ಠಾನದಲ್ಲಿ. ಇಷ್ಟೆಲ್ಲ ಯೋಜನೆಗಳು ಎಷ್ಟು ಮಂದಿಯನ್ನು ಪರಿಣಾಮಕಾರಿಯಾಗಿ ತಲುಪುತ್ತಿವೆ, ಎಷ್ಟು ಮಂದಿ ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಯೋಜನೆಗಳ ಹೆಸರು ಬದಲಾಯಿಸಿದರೆ, ಜಾರಿಗೊಳಿಸಿದರೆ ಸಾಲದು, ಅವುಗಳ ಮಾಹಿತಿ ಒಬ್ಬೊಬ್ಬ ಯುವಕನಿಗೂ ಸಿಗಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಫಲಾನುಭವಿಗಳೇ ಅವುಗಳ ಪ್ರಯೋಜನ ಪಡೆಯಬೇಕು. ಇಂತಹ ಕೋರ್ಸುಗಳನ್ನು ಮಾಡಿದರೆ ತಮಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಅವರಲ್ಲಿ ಬೆಳೆಯಬೇಕು. ಸರ್ಟಿಫಿಕೇಟ್ ದೊರೆತರೆ ಕೆಲಸ ಸಿಗುತ್ತದೆ ಎಂಬ ಯೋಚನೆ ಬಿಟ್ಟು ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಳ್ಳಲು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಇಲ್ಲವಾದರೆ ದುಡ್ಡು ಕೊಟ್ಟು ಪ್ರಮಾಣಪತ್ರ ಪಡೆಯುವ ಹಳೆಯ ದಂಧೆ ಮುಂದುವರಿಯುತ್ತದೆಯೇ ಹೊರತು ನಿರುದ್ಯೋಗ ಸಮಸ್ಯೆ ಪರಿಹಾರವಾಗದು.

*****************
ಕೌಶಲ್ಯ ಕೇಂದ್ರಗಳೆಲ್ಲಿವೆ?
ಕೌಶಲ್ಯ ತರಬೇತಿ ನೀಡುವವರಿಗೂ ಪಡೆಯುವವರಿಗೂ ಈಗ ಹೇರಳ ಅವಕಾಶ ಇದೆ. ಕೇಂದ್ರ ಹಾಗೂ ರಾಜ್ಯದ ಬಹುತೇಕ ಕೌಶಲಾಭಿವೃದ್ಧಿ ಯೋಜನೆಗಳು ಜಿಲ್ಲಾ ಮಟ್ಟದಲ್ಲೇ ಲಭ್ಯ ಇವೆ. ತರಬೇತಿ ಕೇಂದ್ರಗಳನ್ನು ನಡೆಸುವುದಕ್ಕೆ ಖಾಸಗಿಯವರಿಗೆ ಮಾನ್ಯತೆ ಹಾಗೂ ಅನುದಾನವನ್ನು ಸರ್ಕಾರವೇ ನೀಡುತ್ತಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ಪ್ರತೀ ಜಿಲ್ಲಾ ಕೇಂದ್ರದಲ್ಲೂ ಕಚೇರಿಯನ್ನು ಸ್ಥಾಪಿಸಿದೆ. https://www.kaushalkar.com/article/district-skill-mission/ ಜಾಲತಾಣ ಲಿಂಕಿನಲ್ಲಿ ಜಿಲ್ಲಾವಾರು ಕಚೇರಿಗಳ ಸಂಪರ್ಕ ವಿವರ ಇದೆ. ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಯೋಜನೆಗಳೇನು, ಆಯಾ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳಿವೆ ಇತ್ಯಾದಿ ಮಾಹಿತಿಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು.

ಬಿ.ವೋಕ್. ಕೋರ್ಸುಗಳು ಎಲ್ಲಿವೆ?
ಕೌಶಲ್ಯಾಧಾರಿತ ಪದವಿಗಳನ್ನು ನೀಡುವ ಉದ್ದೇಶದಿಂದ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ದೇಶದಾದ್ಯಂತ 150ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಿ.ವೋಕ್. ಕೋರ್ಸುಗಳನ್ನು ಮಂಜೂರು ಮಾಡಿದೆ. ಐಟಿ, ಪ್ರವಾಸೋದ್ಯಮ, ರೀಟೇಲ್ ಮ್ಯಾನೇಜ್ಮೆಂಟ್, ಫ್ಯಾಷನ್ ಡಿಸೈನಿಂಗ್, ಸಿನಿಮಾ ನಿರ್ಮಾಣ, ಆಹಾರ ಸಂಸ್ಕರಣೆ, ಸಾಫ್ಟ್‍ವೇರ್ ಅಭಿವೃದ್ಧಿ, ಫಾರ್ಮಸ್ಯುಟಿಕಲ್ಸ್, ನಿರ್ಮಾಣ ತಂತ್ರಜ್ಞಾನ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಆನ್ವಯಿಕ ಕಲೆ, ಅಟೋಮೊಬೈಲ್ಸ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಅನಿಮೇಶನ್ & ಗ್ರಾಫಿಕ್ಸ್, ಇಂಟೀರಿಯರ್ ಡಿಸೈನ್ ಇತ್ಯಾದಿ ಹತ್ತು ಹಲವು ಕೋರ್ಸುಗಳಿದ್ದು, ಉದ್ಯೋಗ ದೊರಕಿಸಿಕೊಡುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಇಂತಹ ಪದವಿಗಳನ್ನು ನೀಡುವ ಪ್ರಮುಖ ಸಂಸ್ಥೆಗಳು ಇವು:
ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ಸೈಂಟ್ ಜೋಸೆಫ್ಸ್ ಕಾಲೇಜು, ಎನ್‍ಎಂಕೆಆರ್‍ವಿ ಮಹಿಳಾ ಕಾಲೇಜು, ಬಿಎಂಎಸ್ ಮಹಿಳಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ, ಮೈಸೂರಿನ ಜೆಎಸ್‍ಎಸ್ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು, ಉಜಿರೆಯ ಎಸ್‍ಡಿಎಂ ಕಾಲೇಜು, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು, ಬೀದರಿನ ಕರ್ನಾಟಕ ಆಟ್ರ್ಸ್, ಸೈನ್ಸ್ & ಕಾಮರ್ಸ್ ಕಾಲೇಜು, ಮುಂತಾದವು.

ಸಿಬಂತಿ ಪದ್ಮನಾಭ ಕೆ. ವಿ.