ಶುಕ್ರವಾರ, ಮೇ 13, 2016

Job creation in Karnataka: IT has Lion's Share


Karnataka, the country’s eighth largest state in terms of area and ninth largest state in terms of population has been considered one of the most progressive industrialized states of the country. The State has an illustrious history of having successfully introduced several industrial and technological initiatives and has acquired a tag of being ‘the most technology-savvy’ state in India.

Karnataka has made rapid and spectacular strides in the new economy. Research and developments in Information technology, Biotechnology, and many other fields have enhanced the state’s achievements at the national and global levels. Karnataka accounts for more than one third of electronics and computer software exports from the country.

The spectacular IT growth story of India is led by Karnataka, thanks to the availability of highly skilled professionals, dynamic entrepreneurs, a vibrant eco-system, and industry-friendly policies of the State. In other words, Karnataka’s vast and diversified resource base has emerged as a reputed investment destination for investment worldwide. Consequently Karnataka is contributing to over 30% of the IT exports of the country.

Karnataka tops in IT jobs
The recent rankings by the Assocham, showing Karnataka’s position in the country’s job market has been undoubtedly a new feather on the state’s cap. Karnataka has been ranked as country’s top job creator with over 24 per cent share during the fourth quarter of the financial year 2015-16. Maharashtra (23%) and Tamil Nadu (10.5%) have got the next consecutive places.

According to the report, IT sector created about 57% of about 9 lakh job openings recorded between January and March, 2016, followed by services (19%) and manufacturing (11%), which is a clear indication of the share of the IT industry in the job market. Apart from this, within Karnataka, ITES accounted for over 65% share in job openings across the state followed by services (16%), manufacturing (8%).

Karnataka had recorded 2.16 lakh job openings in the first quarter of the last fiscal followed by Maharashtra, Tamil Nadu, Andhra Pradesh and Telangana. Sector-wise, Karnataka leads in terms of job openings in ITES sector with 28% share in over five lakh jobs created by the sector.

IT-friendly state
As mentioned earlier, the secret of Karnataka’s rapid growth in IT sector lies in its congenial atmosphere, supported by its IT-friendly policies. The government has been keen on retaining Bengaluru’s title as the Silicon Valley of India, trying to take the fruits of its IT prosperity to the various parts of the State.

'Karnataka i-4' policy (IT, ITES, Innovation and Incentives Policy) announced by the government last year, is one such novel initiative which was aimed at giving a thrust to the growth of the IT sector in the tier-two and tier-three cities across the state. The policy has empowered the Dept. of IT, BT and S&T to act as a Single Window Agency for clearance of IT, IT-enabled services, startups, animation, gaming, computer graphics, telecom, BPO, KPO, and other knowledge-based industries. The policy has features such as employment linked incentivisation of land allotment outside Bengaluru, stamp duty exemption of 75% in Mysore and Mangalore, exemption of such industries from the applicability of Karnataka industrial employment rules, inclusion of such industries in the essential services and so on.

Startup Policy
Karnataka has emerged the first Indian state to launch a startup policy of its own, which has further boosted the prosperity of IT industry. The objective of the policy is to create a world class startup hub, in order to stimulate growth of 20,000 technology startups and to create 6,000 product startups in Karnataka alone. It is aimed to mobilize Rs. 2,000-crore funds and to facilitate generation of at least 25 innovative technology solutions with social impact. In order to support R &D, the government will support Technology Business Incubators (TBIs) in institutions of higher learning for a period of three years.

In addition to these policies, Karnataka has recently unveiled the idea of establishing India's first Information Technology Investment Region (ITIR) on the outskirts of Bengaluru, which will attract $20 billion investment and create millions of jobs in the future. When developed completely, the project is expected to overtake Silicon Valley of the US in revenue and size.

Support in the Budget
IT, BT and Science & Technology have got special provisions in the state’s new budget as a step towards implementing its i4 and startup policies. The government has announced setting up of 10 new incubators in post-graduate and professional institutions across the State under the New Age Incubation Network. The budget has proposed to support the setting-up of four technology business incubators in potential areas of Internet of Things, ESDM, etc. across the State. The budget also proposes incubators and common instrumentation facilities in Bengaluru and in the IT Parks of Shivamogga, Bagalakote and Kalaburagi by KEONICS and new IT Parks-incubator in Belagavi, Bidar and Vijayapura.

ಸೋಮವಾರ, ಮೇ 2, 2016

ಸಿದ್ಧವನವೆಂಬ ಪುಟ್ಟ ಭಾರತ

ಮೇ 1, 2016ರ 'ಉದಯವಾಣಿ'ಯಲ್ಲಿ ಪ್ರಕಟವಾದ ಲೇಖನ.

‘ಶಾಲಾ ಕಾಲೇಜುಗಳಲ್ಲಿ ಪಾಠ ಕಲಿತ ಮೇಲೆ ಪರೀಕ್ಷೆ ಬರೆಯುತ್ತೇವೆ; ಬದುಕಿನಲ್ಲಿ ಪರೀಕ್ಷೆಗಳಾದ ಮೇಲೆ ಪಾಠ ಕಲಿಯುತ್ತೇವೆ...’ ಪ್ರಾರ್ಥನಾ ಸಭೆಯಿಂದ ಈಚೆ ಬಂದ ಮೇಲೂ ಆ ಮಾತು ಕಿವಿಯಲ್ಲಿ ಗುಂಯ್‍ಗುಡುತ್ತಿತ್ತು. ಇನ್ನೂ ಚುಮುಚುಮು ಮುಂಜಾವು. ಬೆಳಕು

ಸರಿಯಾಗಿ ಹರಿದಿರಲಿಲ್ಲ. ಸಿದ್ಧವನದ ಹಸುರು ಮರಗಿಡಗಳ ನಡುವೆ ತಂಗಾಳಿ ಸುಳಿದಾಡುತ್ತಿತ್ತು. ಬೋಗುಣಿಯಲ್ಲಿ ಹಬೆಯಾಡುತ್ತಿದ್ದ ಬಿಸಿಬಿಸಿ ಚಹಾ ನಿಧಾನಕ್ಕೆ ಗಂಟಲೊಳಕ್ಕೆ ಇಳಿಯುತ್ತಿತ್ತು. ಸಿದ್ಧವನದ ಬೆಳ್ಳಂಬೆಳಗಿನ ಚಹಾ ಎಂದರೆ ಹಾಗೆಯೇ; ಕೊಂಚ ಸಪ್ಪೆಯೇ ಎನಿಸಿದರೂ ಅಂತಹದೊಂದು ಪಾನೀಯ ಪ್ರಪಂಚದ ಇನ್ಯಾವ ಪಾಕಶಾಲೆಯಲ್ಲೂ ತಯಾರಾಗದು.

ಚಹಾ ಮುಗಿದರೂ ಪ್ರಾರ್ಥನಾ ಸಭೆಯಲ್ಲಿ ಕೇಳಿದ ಆ ವಾಕ್ಯ ಮನಸ್ಸಿನಿಂದ ಮಾಸಿರಲಿಲ್ಲ. ಹುಡುಗರೆಲ್ಲ ತಾವು ತೊಟ್ಟಿದ್ದ ಶ್ವೇತ ವಸ್ತ್ರಗಳನ್ನು ಬದಲಾಯಿಸಿ ಲಗುಬಗೆಯಿಂದ ಹಾರೆ ಗುದ್ದಲಿಗಳೊಂದಿಗೆ ತೋಟದಲ್ಲಿ ಹಾಜರಾದರು. ತರಕಾರಿ ಸಾಲುಗಳಿಂದ ಕಳೆಕೀಳುವ, ನೀರು ಹಾಯಿಸುವ, ತೆಂಗಿನ ಮರಗಳಿಗೆ ಹಟ್ಟಿಯ ಸ್ಲರಿ ಊಡುವ ಕೆಲಸಗಳು ಅವ್ಯಾಹತವಾಗಿದ್ದವು. ಎರಡು ಗಂಟೆಗಳ ನಿರಂತರ ಶ್ರಮದ ಬಳಿಕ ಹೊಟ್ಟೆ ಬಕಾಸುರನಂತೆ ಬಾಯ್ದೆರೆದು ಕಾದಿದ್ದರೆ ಭೋಜನಶಾಲೆಯಲ್ಲಿ ಮತ್ತೆ ಬಿಸಿಬಿಸಿ ಗಂಜಿ-ಚಟ್ನಿ ಸಿದ್ಧವಾಗಿ ಕಾಯುತ್ತಿದ್ದವು. ಅಂತಹದೊಂದು ಮೃಷ್ಟಾನ್ನ ಭೋಜನ ಕೂಡ ಸಿದ್ಧವನದಲ್ಲದೆ ಇನ್ಯಾವ ಪಂಚತಾರಾ ಹೊಟೇಲಲ್ಲೂ ದೊರೆಯದು. ಮನಸ್ಸು ಮಾತ್ರ ನಸುಕಿನ ‘ಪಾಠ-ಪರೀಕ್ಷೆ’ಗಳ ಪ್ರಮೇಯವನ್ನು ಇನ್ನಿಲ್ಲದೆ ನೆನೆಯುತ್ತಿತ್ತು.

ಇದೆಲ್ಲ ಆಗಿ ಹದಿನೈದು ವರ್ಷಗಳೇ ಕಳೆದು ಹೋಗಿವೆ. ಆ ಪ್ರಮೇಯ ಮಾತ್ರ ಮನಸ್ಸಿನಲ್ಲಿ ನಿನ್ನೆ ಮೊನ್ನೆ ಕೇಳಿದಷ್ಟೇ ತಾಜಾ ಆಗಿ ಉಳಿದುಕೊಂಡಿದೆ. ಕಷ್ಟಗಳು ಎದುರಾದಾಗಲೆಲ್ಲ ಅದು ನೆನಪಾಗುತ್ತದೆ. ಮನಸ್ಸು ಗಟ್ಟಿಯಾಗುತ್ತದೆ. ವಿದ್ವಾನ್ ಮಹಾಬಲೇಶ್ವರ ಭಟ್ಟರ ಮಾತುಗಳೆಂದರೆ ಹಾಗೆಯೇ. ಚುಟುಕು, ಚುರುಕು. ಮುಂಜಾನೆಯ ಪ್ರಾರ್ಥನಾ ಸಭೆಯಲ್ಲಿ ಅವರಾಡುವ ಒಂದು ವಾಕ್ಯ ಇಡೀ ದಿನಕ್ಕೆ ಸಾಕಾಗುವ ಶಕ್ತಿಮದ್ದು. ಸಾಮಾನ್ಯ ಭಾಷೆಯಲ್ಲಿ ಅವರ ಹುದ್ದೆಯ ಹೆಸರು ‘ವಾರ್ಡನ್’. ಆದರೆ ಉಜಿರೆಯ ಶ್ರೀ ಸಿದ್ಧವನ ಗುರುಕುಲ ನಮಗೆ ಹಾಸ್ಟೆಲೂ ಆಗಿರಲಿಲ್ಲವಾಗಿ ಅವರು ವಾರ್ಡನ್ ಕೂಡ ಆಗಿರಲಿಲ್ಲ. ಗುರುಕುಲವಾಗಿದ್ದರಿಂದ ಅವರು ನಮಗೆ ಅಕ್ಷರಶಃ ಗುರುವೂ, ಎಲ್ಲೆಲ್ಲಿಂದಲೋ ಬಂದ ಬಡಪಾಯಿ ಹುಡುಗರಿಗೆ ಗುರುಕುಲ ಎರಡನೇ ಮನೆಯಾಗಿದ್ದರಿಂದ ಅವರೇ ಅಪ್ಪ-ಅಮ್ಮ, ಬಂಧು-ಬಳಗ ಎಲ್ಲವೂ ಆಗಿದ್ದರು. ಐದುನೂರರಷ್ಟು ಹದಿಹರೆಯದ ಹುಡುಗರ ತಂಟೆ-ತಕರಾರು, ಅವಿವೇಕತನ, ಸುಖ-ದುಃಖ, ಕಾಯಿಲೆ-ಕಸಾಲೆ ಎಲ್ಲವನ್ನೂ ಸಹಿಸಿಕೊಳ್ಳುವ ಭೂಮಿತಾಯಿ ಅವರಿದ್ದರು. ಹೀಗೆ ಬರೆಯುತ್ತಿದ್ದರೆ ಯಾಕೋ ಮನಸ್ಸೆಲ್ಲ ಆರ್ದ್ರವಾಗಿ ಕಣ್ಣಂಚು ಒ
ದ್ದೆಯಾಗುತ್ತಿದೆ.

ಸಿದ್ಧವನ ಗುರುಕುಲವನ್ನೇ ತಮ್ಮ ಮನೆಯಾಗಿ ಹೊಂದಿ ಉಜಿರೆಯ ಕಾಲೇಜಿನಲ್ಲಿ ಪದವಿ ಪಡೆದ ನನ್ನಂತಹ ಸಾವಿರಾರು ಮಂದಿಗೆ ಗುರುಕುಲದೊಂದಿಗೆ ಇಂತಹದೊಂದು ಅಖಂಡ ಮೈತ್ರಿ ಇದೆ. ಸಾವಿರಾರು ಬಡ ಮಕ್ಕಳ ವಿದ್ಯಾಭ್ಯಾಸದ ಕನಸನ್ನು ನಿಜವಾಗಿಸಿದ ಸಿದ್ಧವನ ಗುರುಕುಲಕ್ಕೀಗ 75ರ ಸಂಭ್ರಮ.  ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ದಿ| ಮಂಜಯ್ಯ ಹೆಗ್ಗಡೆಯವರು 1940ರಲ್ಲಿ ಬಿತ್ತಿದ ಬೀಜವಿದು. ದೂರದ ಬಂಗಾಲದಲ್ಲಿ ಗುರುದೇವ ರವೀಂದ್ರನಾಥ ಠ್ಯಾಗೋರರು ‘ವಿಶ್ವಭಾರತಿ’ಯ ಕನಸು ಕಂಡಿದ್ದರೆ, ಮಂಜಯ್ಯ ಹೆಗ್ಗಡೆಯವರು ಸಿದ್ಧವನ ಗುರುಕುಲದ ಕನಸು ಕಂಡರು. ‘ವಿದ್ಯೆಯೆಂದರೆ ಹೊರಗಿನಿಂದ ಹೊತ್ತಿಸಬಲ್ಲ ಮತ್ತು ಸರಿಪಡಿಸಬಲ್ಲ ಲಾಟೀನಿನ ಬೆಳಕಲ್ಲ; ಸ್ವಯಂಪ್ರಭೆ ಬೀರುವ ಮಿಂಚುಹುಳ’ ಎಂದಿದ್ದರು ಠ್ಯಾಗೋರರು. ಅಂತಹದೇ ಒಂದು ದರ್ಶನ ಹೆಗ್ಗಡೆಯವರ ಮನಸ್ಸಿನಲ್ಲಿದ್ದಿರಬೇಕು. ಅದಕ್ಕೇ ಸಿದ್ಧವನ ಕೇವಲ ಹಾಸ್ಟೆಲ್ ಆಗಲಿಲ್ಲ. ಜೀವನ ಶಿಕ್ಷಣವನ್ನು ನೀಡುವ ಗುರುಕುಲ ಆಯಿತು. ಆಧುನಿಕ ಬದುಕಿಗೆ ಬೇಕಾದ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳಿಗೆ ಪ್ರಚೋದನೆ ನೀಡಿ, ನಮ್ಮ ಸಂಸ್ಕೃತಿ, ಪರಂಪರೆಗಳ ಮಹೋನ್ನತಿಯನ್ನು ತಿಳಿಸಿಕೊಡುವಂತಹ ಆಧ್ಯಾತ್ಮಿಕ ಶಿಕ್ಷಣದ ಕೇಂದ್ರವಾಗಿ ಅದು ಬೆಳೆಯಿತು.

ಮಂಜಯ್ಯ ಹೆಗ್ಗಡೆಯವರು ಬಿತ್ತಿದ ಬೀಜವನ್ನು ಬೆಳೆಸಿ ಹೆಮ್ಮರವಾಗಿಸುವಲ್ಲಿ ಅವರ ನಂತರ ಬಂದ ದಿ| ರತ್ನವರ್ಮ ಹೆಗ್ಗಡೆ, ಈಗಿನ ಧರ್ಮಾಧಿಕಾರಿಯಾಗಿ ಹಳ್ಳಿಗಳಲ್ಲಿ ಅಭಿವೃದ್ಧಿಯ ಹೊಸ ಪರಂಪರೆ ಹುಟ್ಟುಹಾಕಿದ ಡಾ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ತುಂಬ ದೊಡ್ಡದು. ಸಿದ್ಧವನ ಗುರುಕುಲವೆಂದರೆ ಇವರೆಲ್ಲರಿಗೂ ತಮ್ಮ ಉಳಿದ ನೂರಾರು ಶಿಕ್ಷಣ ಸಂಸ್ಥೆಗಳಿಗಿಂತ ಒಂದು ಹಿಡಿ ಪ್ರೀತಿ ಜಾಸ್ತಿ. ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಓಡಾಡುವಾಗ ಒಂದಿಷ್ಟು ಬಿಡುವು ದೊರೆತರೂ ಗುರುಕುಲಕ್ಕೆ ಭೇಟಿ ನೀಡಿ ಮಕ್ಕಳ ಕ್ಷೇಮಸಮಾಚಾರ ವಿಚಾರಿಸದೆ ಇರರು. ನಾವು ಗುರುಕುಲದಲ್ಲಿದ್ದಾಗಲಂತೂ ವೀರೇಂದ್ರ ಹೆಗ್ಗಡೆಯವರ ತಾಯಿ ದಿ| ರತ್ಮಮ್ಮ ಹೆಗ್ಗಡೆಯವರು, ಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು, ಪ್ರೊ. ಎಸ್. ಪ್ರಭಾಕರ್, ಡಾ. ಬಿ. ಯಶೋವರ್ಮ ಮುಂತಾದವರು ಆಗಾಗ್ಗೆ ಗುರುಕುಲಕ್ಕೆ ಬಂದು ವಿದ್ಯಾರ್ಥಿಗಳನ್ನು ವಿಚಾರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಎದುರಿಗೆ ಸಿಕ್ಕ ಒಬ್ಬೊಬ್ಬರನ್ನೂ ಹತ್ತಿರ ಕರೆದು ‘ಊಟ-ತಿಂಡಿ ಚೆನ್ನಾಗಿದೆಯಾ? ತೋಟದ ಕೆಲಸ, ಹಸುಕರುಗಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಾ? ಮನೆಯ ನೆನಪಾಗುತ್ತಾ?’ ಎಂದು ಬೆನ್ನು ನೇವರಿಸಿ ಕೇಳಿದರೇ ಅವರಿಗೆ ಸಮಾಧಾನ. ಇವೆಲ್ಲಕ್ಕೂ ಸರಿಸಮನಾಗಿ ಗುರುಕುಲಕ್ಕಾಗಿ ತಮ್ಮ ಬದುಕು ತೇದವರು ಅದರ ವಾರ್ಡನ್‍ಗಳು. ಪಂಡಿತ ಜಿನರಾಜ ಶಾಸ್ತ್ರಿಯಾದಿಯಾಗಿ ಹಲವು ಮಂದಿ ಹಾಕಿಕೊಟ್ಟ ಈ ಪರಂಪರೆಯನ್ನು ಕಳೆದ ಇಪ್ಪತ್ತು ವರ್ಷಗಳಿಂದ ಸಮರ್ಥವಾಗಿ ಮುಂದುವರಿಸಿಕೊಂಡು ಬರುತ್ತಿರುವವರು ನಾನು ಆಗಲೇ ಹೇಳಿದ ಮಹಾಬಲೇಶ್ವರ ಭಟ್ಟರು.

ಸಿದ್ಧವನವನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅದರಲ್ಲೊಂದು ಮಿನಿ ಭಾರತದ ಬಿಂಬ ಕಂಡೀತು. ಭಾರತದ ವೈವಿಧ್ಯತೆ, ಅದರೊಳಗಿನ ಏಕತೆ, ಸರಳ ಜೀವನ, ಸಹಬಾಳ್ವೆ-ಸಮನ್ವಯತೆಗಳೆಲ್ಲ ಸಿದ್ಧವನ ಗುರುಕುಲದೊಳಗೆ ಅಂತರ್ಗತವಾಗಿವೆ. ಅಲ್ಲಿ ಜಾತಿ-ಮತ-ಪಂಥಗಳ ಪ್ರತ್ಯೇಕತೆಯಿಲ್ಲ. ಬಡವ-ಶ್ರೀಮಂತ ಬೇಧವಿಲ್ಲ. ಸಿದ್ಧವನದೊಳಗೆ ಕಾಲಿಟ್ಟ ಮೇಲೆ ಎಲ್ಲರೂ ಅಲ್ಲಿನ ಶ್ವೇತ ಸಮವಸ್ತ್ರದ ಒಳಗೆ ಸರ್ವಸಮಾನರು. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್-ಜೈನ ಇತ್ಯಾದಿ ಎಲ್ಲ ಮತ-ಪಂಥದವರಿಗೂ ಅಲ್ಲಿ ಪ್ರವೇಶವಿದೆ. ವಿದ್ಯಾರ್ಥಿಯ ಬಡ ಆರ್ಥಿಕ ಹಿನ್ನೆಲೆ ಹಾಗೂ ಉತ್ತಮ ಶೈಕ್ಷಣಿಕ ಸಾಧನೆಯಷ್ಟೇ ಅಲ್ಲಿನ ಪ್ರವೇಶಾತಿಯ ಮಾನದಂಡ.

ಸಿದ್ಧವನದಲ್ಲಿ ಎರಡೋ ಮೂರೋ ವರ್ಷ ಕಳೆದ ವಿದ್ಯಾರ್ಥಿ ಪ್ರಪಂಚದ ಯಾವ ಭಾಗದಲ್ಲೂ ಬದುಕಿ ಬರಬಲ್ಲ ಎಂಬುದು ಅಲ್ಲಿ ಬೆಳೆದವರ ನಡುವಿನ ಹೆಮ್ಮೆಯ ನುಡಿ. ಬರೀ ಬದುಕಿ ಬರುವುದಲ್ಲ, ಸಿದ್ಧವನದ ತೋಟದಲ್ಲಿ ಚಿಗಿತ ಸಾವಿರಾರು ಮೊಗ್ಗುಗಳು ಇಂದು ಪ್ರಪಂಚದ ನಾನಾ ಕಡೆ ನಾನಾ ಕ್ಷೇತ್ರಗಳಲ್ಲಿ ಅರಳಿ ಸುವಾಸನೆ ಬೀರುತ್ತಿವೆ. ಅವರ ಯಶಸ್ಸಿನ ಹಿಂದೆ ಸಿದ್ಧವನದಲ್ಲಿ ಕಲಿತ ಜೀವನದ ಪಾಠಗಳಿವೆ. ಅಲ್ಲಿ ಅವರಿಗೆ ತೊಡಿಸಲಾಗುವ ಶಿಸ್ತು-ಸಂಸ್ಕಾರದ ಚೌಕಟ್ಟು ಬದುಕಿನುದ್ದಕ್ಕೂ ಅವರನ್ನು ಕಾಪಾಡುತ್ತದೆ. ಅವರೆಲ್ಲ ‘ಊಟಕೆ ಹಾಜರ್’ ಸಂಸ್ಕೃತಿಯವವರಲ್ಲ. ಒಂದೊಂದು ತುತ್ತಿನ ಹಿಂದಿನ ಬೆವರಿನ ಬೆಲೆಯನ್ನು ಅರಿತವರು.

‘ಹಡಗನ್ನು ತುಂಬಿಸಲು ಹೋದವ ಹಿಂದೆ ಬಂದ, ಹೊಟ್ಟೆ ತುಂಬಿಸಲು ಹೋದವ ಹಿಂದೆ ಬರಲಿಲ್ಲ’ ಎನ್ನುತ್ತಿದ್ದರು ಮಹಾಬಲೇಶ್ವರ ಭಟ್ಟರು. ಸ್ಪರ್ಧೆಯ ಈ ಪ್ರಪಂಚದಲ್ಲಿ ಹೊಟ್ಟೆಯೆಂಬ ಹಡಗು ತುಂಬಿಸುವ ಕೆಲಸ ಎಷ್ಟು ಕಷ್ಟದ್ದು ಎಂಬುದನ್ನು ಅವರು ಪ್ರತಿದಿನ ನೆನಪಿಸುತ್ತಿದ್ದರು. ತೆಂಗಿನ ತೋಟದ ಕಳೆ ತೆಗೆಸುತ್ತಲೇ, ತರಕಾರಿ ಸಾಲು ಹಸನುಗೊಳಿಸುತ್ತಲೇ ಮನಸ್ಸು-ದೇಹಗಳನ್ನು ಹಸನುಗೊಳಿಸಲು ಕಲಿಸುವ ಅಸದೃಶ ಕಲೆಯೊಂದು ಅವರಿಗೆ ಕರಗತವಾಗಿತ್ತು. ಆ ಶಕ್ತಿ ಅವರ ಮಾತುಗಳಿಗೆ ಇತ್ತು. ಬೆಳಗ್ಗೆ ಐದು ಗಂಟೆಗೆ ಎದ್ದರೆ ತಣ್ಣೀರಿನ ಸ್ನಾನ, ಮತ್ತೆ ಅರ್ಧ ಗಂಟೆ ಪ್ರಾರ್ಥನೆ, ವಿಚಾರ ಮಂಥನ. ಆ ಪ್ರಾರ್ಥನಾ ಸಭೆಯಲ್ಲಿ ಅವರಾಡುವ ಮಾತು ಕಾಲೇಜಿನಲ್ಲಿ ನಡೆಯುವ ಇಡೀ ದಿನದ ಪಾಠ-ಪ್ರವಚನಗಳಿಗೆ ಶ್ರೇಷ್ಠ ಮುನ್ನುಡಿಯಂತೆ ಇರುತ್ತಿತ್ತು. ಸಂಜೆ ಮತ್ತೆ ನಡೆಯುತ್ತಿದ್ದ ಚಿಂತನಾ ಸಭೆಯಂತೂ ಪಠ್ಯ ಪುಸ್ತಕಗಳಾಚೆಯ ಕಲಿಕೆಯ ವೇದಿಕೆಯಾಗಿತ್ತು. ಅಲ್ಲಿ ಹೊಮ್ಮುತ್ತಿದ್ದ ಭಗವದ್ಗೀತೆ, ರಾಮಾಯಣ, ಮಹಾಭಾರತ, ಮಂಕುತಿಮ್ಮನ ಕಗ್ಗಗಳ ಸಾರ ಬದುಕಿನ ಗಾಂಭೀರ್ಯತೆಗೆ ಕೈದೀವಿಗೆಯಾಗಿತ್ತು.

ಸಿದ್ಧವನವೀಗ ಪ್ರಸಿದ್ಧವನವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ತೆರೆದುಕೊಂಡಿದೆ. ಮೊದಲು ಏಳೆಂಟು ಪ್ರತ್ಯೇಕ ಬ್ಲಾಕ್‍ಗಳಲ್ಲಿ ವಿದ್ಯಾರ್ಥಿಗಳ ವಾಸ್ತವ್ಯ ಇತ್ತು. ಈಗ ಒಂದೇ ಸುಸಜ್ಜಿತ ಕಟ್ಟಡವಿದೆ. ಸಾಕಷ್ಟು ಸೌಲಭ್ಯಗಳಿವೆ. ಬೆಳಗ್ಗೆ ಗಂಜಿ ಊಟದ ಬದಲು ವಿದ್ಯಾರ್ಥಿಗಳಿಗೆ ತಿಂಡಿ ವ್ಯವಸ್ಥೆಯಿದೆ. ಇವೆಲ್ಲ ಭೌತಿಕ ಬದಲಾವಣೆಗಳು ಮಾತ್ರ. ಸಿದ್ಧವನದ ಹಿಂದಿನ ದರ್ಶನ, ಮೌಲ್ಯಗಳ ಅಂತರ್ಯ ಇನ್ನೂ ಸಾವಿರ ವರ್ಷ ಕಳೆದರೂ ಬದಲಾಗದು, ಬದಲಾಗಬಾರದು. ಏಕೆಂದರೆ ಅದೊಂದು ಪುಟ್ಟ ಭಾರತ.

ಮಂಗಳವಾರ, ಮಾರ್ಚ್ 1, 2016

'ಮಾನವ ಹಕ್ಕುಗಳ ಸಂರಕ್ಷಣೆ: ಸವಾಲುಗಳು ಮತ್ತು ಸಾಧ್ಯತೆಗಳು' ಕುರಿತ ಯುಜಿಸಿ-ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ


ಇದೇ ಮಾರ್ಚ್ 4 ಹಾಗೂ 5, 2016ರಂದು ನಮ್ಮ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಮಾನವ ಹಕ್ಕುಗಳ ಕುರಿತ ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಬಯಸಿದ್ದೇವೆ. ಮಾನವ ಹಕ್ಕುಗಳ ಬಗ್ಗೆ ಹೊಸ ತಲೆಮಾರಿನಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ಯುಜಿಸಿ ನೀಡಿರುವ ಅನುದಾನವನ್ನು ಬಳಸಿಕೊಂಡು ಒಂದಷ್ಟು ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ಒಂದೆಡೆ ಕಲೆಹಾಕುವ ಪ್ರಯತ್ನ ಮಾಡಿದ್ದೇವೆ. ಎರಡು ದಿನಗಳ ಈ ವಿಚಾರ ಸಂಕಿರಣದ ಬಗ್ಗೆ ಒಂದಷ್ಟು ವಿವರ ಇಲ್ಲಿದೆ ನೋಡಿ:

ವಿಚಾರ ಸಂಕಿರಣದ ವಿಷಯ: ‘ಮಾನವ ಹಕ್ಕುಗಳ ಸಂರಕ್ಷಣೆ: ಸವಾಲುಗಳು ಮತ್ತು ಸಾಧ್ಯತೆಗಳು’

ದಿನಾಂಕ: ಮಾರ್ಚ್ 4 ಹಾಗೂ 5, 2016

ಸ್ಥಳ: ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣ, ತುಮಕೂರು ವಿಶ್ವವಿದ್ಯಾನಿಲಯ
---------------------------------------------------------


ಮಾರ್ಚ್ 4, 2016
ಉದ್ಘಾಟನಾ ಸಮಾರಂಭ: ಬೆಳಗ್ಗೆ 10-00 ಗಂಟೆಗೆ

ಉದ್ಘಾಟನೆ: ಪ್ರೊ. ಎ. ಎಚ್. ರಾಜಾಸಾಬ್, ಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ

ಮುಖ್ಯ ಅತಿಥಿಗಳು & ದಿಕ್ಸೂಚಿ ಉಪನ್ಯಾಸ: ಜಸ್ಟೀಸ್ ಎ. ಜೆ. ಸದಾಶಿವ, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ

ಗೌರವ ಉಪಸ್ಥಿತಿ: ಪ್ರೊ. ಡಿ. ಶಿವಲಿಂಗಯ್ಯ, ಕುಲಸಚಿವರು, ತುಮಕೂರು ವಿಶ್ವವಿದ್ಯಾನಿಲಯ

ಉಪಸ್ಥಿತಿ: ಶ್ರೀ ಬಿ. ಕರಿಯಣ್ಣ, ಉಪಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಕಲಾ ಕಾಲೇಜು

ಅಧ್ಯಕ್ಷತೆ: ಡಾ. ಎಂ. ಜಯರಾಮು, ಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಕಲಾ ಕಾಲೇಜು

----------------------------------------------------------

ಗೋಷ್ಠಿ – ಒಂದು: ಮಧ್ಯಾಹ್ನ 12-00ರಿಂದ 1-30ವರೆಗೆ

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕುಗಳು
ಡಾ. ನಿರಂಜನಾರಾಧ್ಯ ವಿ. ಪಿ.ಫೆಲೋ, ಸೆಂಟರ್ ಫಾರ್ ಚೈಲ್ಡ್ ಅಂಡ್ ದಿ ಲಾ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು

ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಸಮಾಜದ ಸಹಭಾಗಿತ್ವ
ಎನ್. ವಿ. ವಾಸುದೇವ ಶರ್ಮಾ, ಕಾರ್ಯನಿರ್ವಾಹಕ ನಿರ್ದೇಶಕರು, ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು 

ಗೋಷ್ಠಿ – ಎರಡು: ಅಪರಾಹ್ನ 2-30ರಿಂದ 4-30ರವರೆಗೆ

ಹಿರಿಯ ನಾಗರಿಕರ ಹಕ್ಕು-ಬಾಧ್ಯತೆಗಳು
ಪ್ರೊ. ಬಿ. ಎಸ್. ಲಿಂಗರಾಜು, ನಿರ್ದೇಶಕರು, ಅನನ್ಯ ಇನ್ಸ್’ಟಿಟ್ಯೂಟ್ ಆಫ್ ಕಾಮರ್ಸ್ & ಮ್ಯಾನೇಜ್ಮೇಂಟ್, ತುಮಕೂರು

ಅಭಿವೃದ್ಧಿ v/s ಮಾನವ ಹಕ್ಕುಗಳು: ರೈತರು ಹಾಗೂ ಗ್ರಾಮೀಣ ಜನತೆಯ ಹಿತರಕ್ಷಣೆ
ಶ್ರೀಮತಿ ವಿದ್ಯಾ ದಿನಕರ್, ಸಾಮಾಜಿಕ ಕಾರ್ಯಕರ್ತರು, ಮಂಗಳೂರು

---------------------------------------------------------

ಮಾರ್ಚ್ 5, 2016 ಶನಿವಾರ
ಗೋಷ್ಠಿ – ಮೂರು: ಬೆಳಗ್ಗೆ 10-00ರಿಂದ 11.30ವರೆಗೆ

ಮಹಿಳೆಯರ ಆರ್ಥಿಕ ಸಬಲೀಕರಣದ ಸವಾಲುಗಳು
ಶ್ರೀಮತಿ ವಾಸಂತಿ ಶಿವಣ್ಣ, ಅಧ್ಯಕ್ಷರು, ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ

ಗ್ರಾಮೀಣ ಆರೋಗ್ಯ ಮತ್ತು ವರ್ತಮಾನದ ಸ್ಥಿತಿಗತಿ
ಡಾ. (ಫ್ಲೈ| ಲೆ|) ಎಂ. ಎ. ಬಾಲಸುಬ್ರಹ್ಮಣ್ಯ, ಕಾರ್ಯದರ್ಶಿಗಳು ಮತ್ತು ಸಿಇಒ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಸರಗೂರು.

ಗೋಷ್ಠಿ – ನಾಲ್ಕು: ಮಧ್ಯಾಹ್ನ 12-00ರಿಂದ 1-30ರವರೆಗೆ
ಮಾಧ್ಯಮ ಮತ್ತು ಮಾನವ ಹಕ್ಕುಗಳು
ಶ್ರೀಮತಿ ಸಿ. ಜಿ. ಮಂಜುಳಾ, ಸಹ ಸಂಪಾದಕರು, ಪ್ರಜಾವಾಣಿ, ಬೆಂಗಳೂರು

ದಮನಿತ ಹಾಗೂ ನಿರ್ಲಕ್ಷಿತ ವರ್ಗಗಳ ಹಕ್ಕುಗಳ ಸಂರಕ್ಷಣೆ
ಪ್ರೊ. ಪಿ. ಎಲ್. ಧರ್ಮ, ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ

 
ಗುಂಪು ಸಂವಾದ: ಅಪರಾಹ್ನ 2-00ರಿಂದ 3-00ರವರೆಗೆವಿಚಾರ ಸಂಕಿರಣದ ವಿದ್ಯಾರ್ಥಿ ಪ್ರತಿನಿಧಿಗಳಿಂದ ಅಭಿಪ್ರಾಯ ಮಂಡನೆ

------------------------------------------------------------ 
ಸಮಾರೋಪ ಸಮಾರಂಭ: ಅಪರಾಹ್ನ 3-00ರಿಂದ 4-00ರವರೆಗೆ

ಸಮಾರೋಪ ಭಾಷಣ: ಶ್ರೀಮತಿ ಹೇಮಲತಾ ಮಹಿಷಿ, ಹಿರಿಯ ನ್ಯಾಯವಾದಿಗಳು ಮತ್ತು ಬರಹಗಾರರು, ಬೆಂಗಳೂರು

ಸಾಧ್ಯವಿದ್ದರೆ ನೀವು ಖಂಡಿತ ಇದರಲ್ಲಿ ಭಾಗವಹಿಸಿ. ಒಳ್ಳೆಯ ಚರ್ಚೆ ನಡೆಯಲು ಕಾರಣರಾಗಿ.

ಹೆಚ್ಚಿನ ವಿವರಗಳಿಗೆ: ಸಿಬಂತಿ ಪದ್ಮನಾಭ ಕೆ. ವಿ.ಸಂಘಟನಾ ಕಾರ್ಯದರ್ಶಿ (9449525854)

ಮಂಗಳವಾರ, ಫೆಬ್ರವರಿ 2, 2016

ಗಾಂಧಿ ಮಹಾತ್ಮನ ಬಿಂಬವ ಕಂಡಿರಾ?

(30 ಜನವರಿ 2016ರಂದು ತುಮಕೂರಿನ 'ಪ್ರಜಾಪ್ರಗತಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ರಕ್ಷಾಪುಟ ವಿನ್ಯಾಸ: ಶ್ರೀಶ ಪುಣಚ (ಚಿತ್ರ-ಮುದಿಗೆರೆ ಸಂದೀಪ್)
ಅದು 1969. ಮಹಾತ್ಮ ಗಾಂಧೀಜಿಯವರ ಜನ್ಮಶತಮಾನೋತ್ಸವ ವರ್ಷ. ಅದರ ಆಚರಣೆಯ ಅಂಗವಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಆಯ್ದ ಪ್ರೌಢಶಾಲಾ
ಶಿಕ್ಷಕರಿಗೆ ಹತ್ತು ದಿನಗಳ ವಿಶೇಷ ತರಬೇತಿ ಶಿಬಿರವನ್ನು ಗಾಂಧೀಜಿಯವರ ಕರ್ಮಭೂಮಿ ವಾರ್ಧಾದಲ್ಲಿ ಹಮ್ಮಿಕೊಂಡಿತ್ತು. ಕರ್ನಾಟಕದಿಂದ ಆಯ್ಕೆಯಾದ 25 ಶಿಕ್ಷಕರಲ್ಲಿ ಹಾರೋಹಳ್ಳಿ ಪ್ರೌಢಶಾಲೆಯ ಯುವ ಹೆಡ್ಮಾಸ್ತರರೂ ಸೇರಿದ್ದರು. ಆದರೆ 34ರ ಆಜುಬಾಜಿನಲ್ಲಿದ್ದ ಆ ಉತ್ಸಾಹೀ ತರುಣನಿಗೆ ವಾರ್ಧಾ ಶಿಬಿರ ತನ್ನ ಬದುಕಿನ ಉದ್ದೇಶ ಮತ್ತು ಗತಿಯನ್ನೇ ಬದಲಿಸೀತು ಎಂಬ ಊಹನೆ ಬಹುಶಃ ಇದ್ದಿರಲಾರದು.

ಹೌದು, ವಾರ್ಧಾ ಕಾರ್ಯಕ್ರಮ ಆ ಯುವಕನ ಜೀವನದ ಬಹುದೊಡ್ಡ ತಿರುವಾಯಿತು; ಆತನ ಬದುಕಿಗೆ ಹೊಸ ಕಾಣ್ಕೆ ನೀಡಿತು. ಶಿಬಿರದ ಭಾಗವಾಗಿದ್ದ ಸರಳ ಜೀವನ, ಹಳ್ಳಿಗಳ ಭೇಟಿ, ಶ್ರಮದಾನ, ಗಾಂಧೀ ಚಿಂತನ-ಮಂಥನಗಳು ಅವನ ಮನಸ್ಸನ್ನು ಅಪಾರವಾಗಿ ಪ್ರಭಾವಿಸಿದವು. 'ಗಾಂಧಿಯಂತೆ ಬದುಕಲಾದೀತೋ ಗೊತ್ತಿಲ್ಲ, ಆದರೆ ಅವರ ಹಾದಿಯಲ್ಲಿ ಕಿಂಚಿತ್ತಾದರೂ ಕ್ರಮಿಸಿದರೆ ಅದೇ ಅವರಿಗೆ ಸಲ್ಲಿಸುವ ಗೌರವ. ಅದನ್ನು ತಾನು ಮಾಡುವುದರ ಜೊತೆಗೆ ಸ್ವತಃ ಶಿಕ್ಷಕನಾಗಿ ಎಳೆಯ ಮನಸ್ಸುಗಳಲ್ಲಿ ಗಾಂಧೀ ಕನಸುಗಳ ಬೀಜ ಬಿತ್ತಬೇಕು’ ಎಂದು ಆ ಯುವಕ ಅಂದೇ ದೃಢ ಸಂಕಲ್ಪ ಮಾಡಿದ.

ಊರಿಗೆ ವಾಪಸಾದ ಮೇಲೆ ಆತ ಮಾಡಿದ ಮೊದಲ ಕೆಲಸ ತನ್ನ ಶಾಲೆಯ ಹೆಸರನ್ನು ಬಾಪೂ ಶಾಲೆಯೆಂದು ಬದಲಾಯಿಸಿದ್ದು. ಅಲ್ಲಿಂದ ಆರಂಭವಾಯಿತು ಹೊಸ ಹಾದಿ, ಹೊಸ ಬದುಕು, ಹೊಸ ಜಗತ್ತು. ಗಾಂಧೀ ತತ್ವ ಸಿದ್ಧಾಂತಗಳನ್ನು ಹೆಜ್ಜೆಹೆಜ್ಜೆಗೂ ಕನವರಿಸುತ್ತಿದ್ದ ಯುವಹೆಡ್ಮಾಸ್ತರರು ಶಾಲೆಯನ್ನು ಎತ್ತರೆತ್ತರಕ್ಕೆ ಬೆಳೆಸಿದರು. ವಿದ್ಯಾರ್ಥಿಗಳನ್ನೂ ಬೆಳೆಸಿದರು, ತಾನೂ ಬೆಳೆದರು. ಗಾಂಧೀ ಕುರಿತ ಓದು-ಅಧ್ಯಯನ-ಚಟುವಟಿಕೆಗಳು ಅವ್ಯಾಹತವಾದವು. ಇಡೀ ಹಾರೋಹಳ್ಳಿಯಲ್ಲಿ ಹೊಸ ಉತ್ಸಾಹ, ಎಚ್ಚರ, ಅಭಿಮಾನ ತುಂಬಿಕೊಂಡಿತು. ಹಳ್ಳಿಯೇ ಒಂದು ಶಾಲೆಯಾಯಿತು ಎಂದರೂ ಸರಿಯೇ.

ಅಂದಹಾಗೆ, ಆ ಯುವಕನ ಹೆಸರು ತೊಂಡೋಟಿ ಎಲ್. ನರಸಿಂಹಯ್ಯ ಎಂದು. ತುಮಕೂರಿನವರಿಗಷ್ಟೇ ಅಲ್ಲ, ಗಾಂಧೀ ಚಿಂತನೆಗಳಿಂದ ಪುಳಕಿತರಾಗುವ ನಾಡಿನ ಸಾವಿರಾರು ಮಂದಿಗೆ ಆತ್ಮೀಯತೆಯ, ಅಭಿಮಾನದ ಹೆಸರು. ಪ್ರಸ್ತುತ ಕರ್ನಾಟಕ ರಾಜ್ಯ ಸರ್ವೋದಯ ಮಂಡಲದ ಕಾರ್ಯದರ್ಶಿ ಹಾಗೂ ಗಾಂಧೀ ಸ್ಮಾರಕ ನಿಧಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ನರಸಿಂಹಯ್ಯ ಕಳೆದ ಐವತ್ತು ವರ್ಷಗಳಿಂದಲೂ ಗಾಂಧೀ ಆದರ್ಶಗಳನ್ನು ಉಸಿರಾಡಿದವರು, ಅಂತೆಯೇ ಬದುಕಿದವರು.

ಪ್ರಜಾತಂತ್ರದ ಚೌಕಟ್ಟಿನಲ್ಲೇ ಅಸಮಾನತೆ, ಸ್ವಾತಂತ್ರ್ಯಹರಣದ ವಿರುದ್ಧ ನ್ಯಾಯಯುತವಾಗಿ ಸೆಣಸಬಹುದೆಂದು ತೋರಿಸಿಕೊಟ್ಟವರು ಗಾಂಧಿ. ಶಾಂತಿ-ಸತ್ಯ-ಅಹಿಂಸೆಗಳಿಂದಲೇ ವೈರಿಗಳನ್ನು ಮಣಿಸಬಹುದೆಂದು ಸಿದ್ಧಪಡಿಸಿದ ಮಹಾತ್ಮ ಅವರು. ಸತ್ಯಾಗ್ರಹ, ಸ್ವದೇಶೀ ಆಂದೋಲನಗಳಿಗೆ ರಾಷ್ಟ್ರೀಯ ಸ್ವರೂಪ ಕೊಟ್ಟ ನೇತಾರ ಅವರು. ಅಸ್ಪೃಶ್ಯತೆ ಅಳಿಯದೆ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲ ಎಂದು ನಂಬಿದವರು ಅವರು. ಎಲ್ಲಕ್ಕಿಂತ ಮುಖ್ಯವಾಗಿ ನಡೆ-ನುಡಿಗಳ ಸಮನ್ವಯ ಪುರುಷ ಗಾಂಧಿ... ಇದು ನರಸಿಂಹಯ್ಯನವರು ಮಹಾತ್ಮನನ್ನು ಕಟ್ಟಿಕೊಡುವ ರೀತಿ. ಗಾಂಧೀಜಿ ಅವರ ಹೃದಯದ ಮಿಡಿತ. ಬದುಕಿನ ಬಿಂಬ.

ಮಧುಗಿರಿ ತಾಲೂಕಿನ ಐಡಿಹಳ್ಳಿ ಹೋಬಳಿಯ ತೊಂಡೋಟಿ ಗ್ರಾಮದಲ್ಲಿ ದಿ| ಮಾದಮ್ಮ - ದಿ| ಲಕ್ಷ್ಮೀನರಸಿಂಹಯ್ಯ ಕೃಷಿಕ ದಂಪತಿಗಳ ಮಗನಾಗಿ ಜನವರಿ 9, 1935ರಂದು ಜನಿಸಿದ ನರಸಿಂಹಯ್ಯನವರು ಬಾಲ್ಯದಲ್ಲೇ ತಂದೆಯ ಅಗಲಿಕೆ ಹಾಗೂ ಕೌಟುಂಬಿಕ ಅವಮಾನದ ಬೇನೆಗಳನ್ನು ಉಂಡವರು. ಹುಟ್ಟೂರಿನಲ್ಲಿ ಶಾಲೆಯಿಲ್ಲದ್ದರಿಂದ 9-10 ವಯಸ್ಸಿನವರೆಗೂ ಶಿಕ್ಷಣದಿಂದ ದೂರವೇ ಉಳಿಯಬೇಕಾಯಿತು. ಅವರೇ ಹೇಳುವಂತೆ ಪ್ರಾಥಮಿಕ ಶಿಕ್ಷಣ ಅವರಿಗೆ ಬಿಸಿಲು-ಬೆಳದಿಂಗಳು. ಮುಂದೆ ಕೊರಟಗೆರೆ ತಾಲೂಕಿನ ತುಂಬಾಡಿ ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣ ಪಡೆದು, ಬೆಂಗಳೂರು, ತುಮಕೂರು, ಮಂಗಳೂರುಗಳಲ್ಲಿ ಬಿ.ಇಡಿ.ವರೆಗಿನ ಶಿಕ್ಷಣ ಪೂರೈಸುವಷ್ಟರಲ್ಲಿ ನರಸಿಂಹಯ್ಯನವರ ಭವಿಷ್ಯದ ನಡೆ ನಿರ್ಧಾರವಾಗಿತ್ತು. ಮೂರು ದಶಕಗಳಿಗೂ ಹೆಚ್ಚುಕಾಲ ಮುಖ್ಯೋಪಾಧ್ಯಾಯರಾಗಿ ಹಾರೋಹಳ್ಳಿ ಶಾಲೆಯನ್ನು ಜನಮೆಚ್ಚುವಂತೆ ಮುನ್ನಡೆಸಿದ ಅವರಿಗೆ ಅಧ್ಯಾಪನ ವೃತ್ತಿ-ಪ್ರವೃತ್ತಿ ಎಲ್ಲವೂ ಆಗಿತ್ತು. 1993ರಲ್ಲಿ ಅವರು ನಿವೃತ್ತರಾದುದು ಉದ್ಯೋಗದಿಂದ ಮಾತ್ರ, ಪ್ರವೃತ್ತಿಯಿಂದ ಅಲ್ಲ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ರಾಜ್ಯ ಶಿಕ್ಷಣ ಕಲ್ಯಾಣ ನಿಧಿಯ ಸದಸ್ಯರಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯ ರಾಜ್ಯಮಟ್ಟದ ತರಬೇತುದಾರರಾಗಿ, ಬೆಂಗಳೂರು ಸಾಕ್ಷರತಾ ಆಂದೋಲನದ ಕಾರ್ಯದರ್ಶಿಯಾಗಿ, ಕ.ಸಾಪ.ದ ತಾಲೂಕು ಹಾಗೂ ಜಿಲ್ಲಾ ಘಟಕಗಳ ಸದಸ್ಯರಾಗಿ ಅವರು ನಿರ್ವಹಿಸಿದ ಜವಾಬ್ದಾರಿಗಳು, ಸಂಘಟಿಸಿದ ಕಾರ್ಯಕ್ರಮಗಳು ನೂರಾರು. ಆಕಾಶವಾಣಿ-ದೂರದರ್ಶನಗಳಲ್ಲಿ ಯುವ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದ ಸಂದರ್ಭಗಳು ಹಲವಾರು. ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳು, ರಾಷ್ಟ್ರೀಯ ಭಾವೈಕ್ಯತೆ, ಯುವಸಬಲೀಕರಣ ವಿಷಯಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಾ, ಗಾಂಧಿ ಕುರಿತ ಕ್ವಿಜ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ತಮ್ಮ 81ರ ಇಳಿವಯಸ್ಸಿನಲ್ಲೂ ಬಳಲಿಕೆಯಿಲ್ಲದೆ ಓಡಾಡುತ್ತಿರುವ ನರಸಿಂಹಯ್ಯನವರು ನಮ್ಮ 18ರ ಯುವಕರಿಗೂ ಒಂದು ಅಚ್ಚರಿ.

'ಸ್ಪರ್ಧಾಪ್ರಪಂಚ’ ಪತ್ರಿಕೆಯ ಗೌರವ ಸಂಪಾದಕರಾಗಿ ೧೦ ವರ್ಷ ಸೇವೆ ಸಲ್ಲಿಸಿದ ಅವರು ನಾಡಿನ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳು ಅಸಂಖ್ಯ. ಕೆ.ಜಿ.ಮಲ್ಯ ಅವರ The Statue of Mahatma ವಿಡಂಬನಾತ್ಮಕ ಕಾದಂಬರಿಯನ್ನು 'ಮಹಾತ್ಮರ ಪ್ರತಿಮೆ’ ಎಂಬ ಶೀರ್ಷಿಕೆಯಲ್ಲಿ ಸಮರ್ಥವಾಗಿ ಕನ್ನಡಕ್ಕೆ ತಂದು ಗಾಂಧೀ ಸ್ಮಾರಕ ನಿಧಿಯ ಪುರಸ್ಕಾರಕ್ಕೆ ಪಾತ್ರರಾದ ಅವರು ಇದೀಗ ಹೊಸದೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಅದುವೇ 'ಗಾಂಧೀ ಗೋವಿನ ಕಥೆ’.

ಯಾವ ಗಾಂಧೀಜಿಯನ್ನು ಶ್ರೇಷ್ಠ ಆದರ್ಶವೆಂದು ತಮ್ಮ ಬದುಕಿನುದ್ದಕ್ಕೂ ನಂಬಿದ್ದರೋ, ಆ ಮಹಾತ್ಮನ ಚಿಂತನೆಗಳ ಸಾರ ಸರ್ವಸ್ವವನ್ನೂ ಸಾಂಧ್ರಗೊಳಿಸಿ 'ಗಾಂಧೀ ಗೋವಿನ ಕಥೆಯಿದು!’ ಎಂಬ ವಿನೂತನ ಕೃತಿಯನ್ನು ನರಸಿಂಹಯ್ಯನವರು ರಚಿಸಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳನ್ನೇ ಗಮನದಲ್ಲಿರಿಸಿಕೊಂಡು ಬರೆದ ಈ ಕಾವ್ಯಕ್ಕೆ ಅವರು ಗೋವಿನಹಾಡಿನ ಸ್ವರೂಪವನ್ನು ಉದ್ದೇಶಪೂರ್ವಕವಾಗಿಯೇ ನೀಡಿದ್ದಾರೆ.

ಗೋವು ಮತ್ತು ಗಾಂಧೀಗೋವು ಎರಡೂ ಹಿಂಸೆ ಮಾಡದೆ ಹಿಂಸೆ ಸಹಿಸುವ ಜಾಯಮಾನದವು. ಪುಣ್ಯಕೋಟಿ ಒಂದು ವ್ಯಾಘ್ರವನ್ನು ಮಾತ್ರ ಎದುರಿಸಬೇಕಾಯಿತು, ಆದರೆ ಗಾಂಧೀಜಿ ತಮ್ಮ ಹೋರಾಟದುದ್ದಕ್ಕೂ ಹತ್ತಾರು ವ್ಯಾಘ್ರಗಳನ್ನು ಎದುರಿಸಿ ಸತ್ಯ-ಅಹಿಂಸೆಗಳಿಂದಲೇ ಅವುಗಳನ್ನು ಮಣಿಸಿದರು. ಹೀಗಾಗಿ ಗಾಂಧೀಜಿಯವರ ಬದುಕನ್ನು ನಮ್ಮ ಹೊಸತಲೆಮಾರಿಗೆ ಹೇಳುವುದಕ್ಕೆ ಗೋವಿನಹಾಡೇ ಅತ್ಯಂತ ಸೂಕ್ತ ವಿಧಾನ. ಇದು ಮಕ್ಕಳಿಗೆ ಆಪ್ಯಾಯಮಾನವೂ ಆದೀತು ಎನ್ನುತ್ತಾರೆ ನರಸಿಂಹಯ್ಯನವರು.

ಅಸ್ತ್ರ ಬಳಸದೆ, ವ್ಯಾಘ್ರ ಬಳಗವ
ಶಾಂತಿ ಮೌಲ್ಯದ ಬಲೆಗೆ ಬೀಳೀಸಿ;
ಹದವ ಮಾಡಿದ ಶ್ರೇಷ್ಠವೆನಿಸಿದ 
ಗಾಂಧಿ ಗೋವಿನ ಕಥೆಯಿದು||
ಎಂದು ಪೀಠಿಕಾ ಭಾಗದಲ್ಲೇ ಅವರು ಹೇಳಿಕೊಂಡಿರುವುದು ಹೃದ್ಯವಾಗಿದೆ. ಗಾಂಧೀಜಿಯವರು ಆಫ್ರಿಕಾದಿಂದ ಹಿಂತಿರುಗಿ 100 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಕೃತಿ ರಚಿಸಿರುವ ನರಸಿಂಹಯ್ಯನವರು, ಗಾಂಧೀಜಿಯವರ ಬಾಲ್ಯ, ವಿದ್ಯಾಭ್ಯಾಸ, ಆಫ್ರಿಕಾ ಜೀವನ, ವರ್ಣಬೇಧ ನೀತಿಯ ವಿರುದ್ಧದ ಹೋರಾಟ, ಸತ್ಯಾಗ್ರಹಗಳ ಗಾಥೆಯನ್ನು ಎಳೆಯೆಳೆಯಾಗಿ ಎಳೆಯ ಮನಸ್ಸುಗಳಿಗೆ ನಾಟುವಂತೆ ಚಿತ್ರಿಸಿದ್ದಾರೆ. ಸ್ವಾತಂತ್ರ್ಯ ಸೇನಾನಿ ಡಾ. ಎಚ್. ಎಸ್. ದೊರೆಸ್ವಾಮಿ ಹಾಗೂ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಮುನ್ನುಡಿಯಿಂದ ಇನ್ನಷ್ಟು ಮೌಲಿಕವಾಗಿರುವ ಕೃತಿ ಅದೇ ಮಹನೀಯರ ಉಪಸ್ಥಿತಿಯಲ್ಲಿ ಇಂದು (ಜನವರಿ 30, 2016) ಗಾಂಧೀಜಿ ಪುಣ್ಯತಿಥಿಯಂದೇ ಬಿಡುಗಡೆಯಾಗುತ್ತಿದೆ. ಗಾಂಧೀ ಗೋವಿನ ಕಥೆಯ ಮುಂದಿನ ಭಾಗಗಳನ್ನು ನಾವು ಬೇಗನೇ ಓದುವಂತಾಗಲಿ.

ಗುರುವಾರ, ಜನವರಿ 21, 2016

ದ್ಯಾವಾ ಪೃಥಿವೀ ಎಂಬೋ ಧ್ಯಾನಕ್ಕೆ ಮುನ್ನ...

(ಜನವರಿ 2016ರ 'ತುಷಾರ'ದಲ್ಲಿ ಪ್ರಕಟವಾದ ಪ್ರಬಂಧ)

ಅಯ್ಯೋ ರಾತ್ರಿಯೆಲ್ಲಾ ನಿದ್ದೆಗೆಟ್ಟು ಹಾಕಿದ ಗರಿಗರಿ ಇಸ್ತ್ರಿ ಏರ್‍ಪೋರ್ಟಿಗೆ ತಲುಪೋ ಮೊದಲೇ ಚುರುಮುರಿಯಾಯ್ತಲ್ಲ, ದೈವೀಸ್ವರೂಪಿಗಳಾದ ಆ ಗಗನಸಖಿಯರು ವಿಮಾನದೊಳಕ್ಕೆ ಸೇರಿಸಿಕೊಳ್ಳದಿದ್ದರೆ ಏನು ಗತಿಯೆಂದು ಟೆನ್ಷನ್ ಮಾಡಿಕೊಂಡು ಕಾರಿನಿಂದ ಇಳಿದೆ. ಆದರೆ ಅಲ್ಲೇ ಟುಸ್‍ಪುಸ್ ಮಾತಾಡಿಕೊಂಡು ವಿಮಾನಕ್ಕಿಂತಲೂ ದೊಡ್ಡ ಲಗೇಜು ಸಮೇತ ಓಡಾಡಿಕೊಂಡಿದ್ದ ಅನೇಕರು ಬರೀ ಚಡ್ಡಿ ಹಾಕಿಕೊಂಡಿದ್ದು ನೋಡಿ ಇವರಿಗಿಂತ ನಾನೇ ಪರವಾಗಿಲ್ಲ ಎಂದು ಸಮಾಧಾನ ಹೇಳಿಕೊಂಡೆ. ಅಲ್ಲ ಮಾರಾಯ್ರೆ ಏರ್‍ಪೋರ್ಟಿಗೆ ಬರುವಾಗಲಾದರೂ ಇವರು ನೆಟ್ಟಗೆ ಒಂದು ಪ್ಯಾಂಟು ಹಾಕಿಕೊಂಡು ಬರಬಾರದಾ ಎಂದು ಪಕ್ಕದಲ್ಲಿದ್ದ ಸಹೋದ್ಯೋಗಿ ಮಿತ್ರರನ್ನು ಕೇಳಿದೆ. ಅಯ್ಯೋ ಇವರೆಲ್ಲ ದಿನಾ ಎಂಬಂತೆ ವಿಮಾನದಲ್ಲಿ ಓಡಾಡೋರು ಮಾರಾಯ, ಇವರು ಚಡ್ಡಿ ಹಾಕಿಕೊಂಡು ಬರೋದೇ ಹೆಚ್ಚು ಎಂದವರು ವೈಜ್ಞಾನಿಕ ಕಾರಣ ನೀಡಿದರು. ನೀನೇನೋ ಮೊದಲ ಬಾರಿಗೆ ವಿಮಾನ ಹತ್ತುತ್ತಿದ್ದೀಯೆಂದು ದಿಬ್ಬಣಿಗನಂತೆ ಬಂದಿದ್ದೀಯ, ಇವರಿಗೆಲ್ಲ ಇದು ಸಿಟಿ ಬಸ್ಸುಗಳಲ್ಲಿ ಓಡಾಡಿದಷ್ಟೇ ಕಾಮನ್ನು ಎಂದವರು ಪ್ರತ್ಯೇಕವಾಗಿ ಹೇಳುವ ಅಗತ್ಯ ಇರಲಿಲ್ಲ.

ಅಲ್ಲಾ ಇಲ್ಲಿಗೆ ಬರೋರೆಲ್ಲಾ ಕಾರಿನಲ್ಲೇ ಬರಬೇಕಾ, ತಿಮ್ಮಪ್ಪಣ್ಣನ ಜೀಪಿನಲ್ಲೋ ಅದ್ದುಲನ ಆಟೋದಲ್ಲೋ ಬಂದರೆ ಏನಾಗುತ್ತೆ? ಈ ಲಗೇಜುಗಳನ್ನೆಲ್ಲ ಇವರ ತಳ್ಳುಗಾಡಿಗಳಲ್ಲೇ ಒಯ್ಯಬೇಕಾ, ಹೆಗಲು ಇಲ್ಲವೇ ತಲೆ ಮೇಲೆ ಏರಿಸಿಕೊಂಡರೆ ಏನಾಗುತ್ತೆ? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿಗೆ ಬಂದರೂ, ಕೇಳಿದರೆ ನನ್ನ ಅಜ್ಞಾನ ಎಲ್ಲಿ ಬಯಲಾಗುತ್ತದೋ ಎಂಬ ಭಯದಲ್ಲಿ ಎಲ್ಲರೂ ಮಾಡುತ್ತಿದ್ದ ಹಾಗೇ ನಾನೂ ಒಂದು ಗಾಡಿ ಎಳೆದುಕೊಂಡೆ. ಚಿಕ್ಕವರಿದ್ದಾಗ ತೋಟದಿಂದ ಸೋಗೆ ಸಮೇತ ಅಡಿಕೆ ಹಾಳೆ ತಂದು ಸ್ನೇಹಿತರನ್ನು ಕೂರಿಸಿ ದಾರಿಯುದ್ದಕ್ಕೂ ಎಳೆದುಕೊಂಡು ಹೋಗುತ್ತಿದ್ದುದು ನೆನಪಾಗಿ ಈ ಏರ್‍ಪೋರ್ಟಿನವರಿಗೂ ನಮ್ಮ ಐಡಿಯಾಗಳೇ ಬೇಕು ಎಂದು ಹೆಮ್ಮೆಯೆನಿಸಿತು. ಜತೆಗೇ, ಇಲ್ಲಿಗೆ ಮಾಡಿದ ಖರ್ಚಿನಲ್ಲಿ ಒಂದು ಸಾಸಿವೆಯಷ್ಟನ್ನು ನಮ್ಮ ಕೊಕ್ಕಡ-ಪಟ್ರಮೆ ರಸ್ತೆಗೂ ಉಪ್ಪಿನಂಗಡಿ ಬಸ್ಟ್ಯಾಂಡಿಗೂ ಹಾಕಿದ್ದರೆ ಜನ ವರ್ಷವಿಡೀ ಕಂಬಳ ಗದ್ದೆಯಲ್ಲಿ ಓಡಾಡುವುದು ತಪ್ಪುತ್ತಿತ್ತಲ್ಲ ಎಂಬ ಯೋಚನೆಯೂ ಬಂತು.

ಥೇಟ್ ಧರ್ಮಸ್ಥಳದ ಭೋಜನಶಾಲೆಗೆ ಹೊರಟ ಭಕ್ತಾದಿಗಳದ್ದೇ ಎಂಬಂತಿದ್ದ ನೂರೆಂಟು ಯೂ-ಟರ್ನ್‍ಗಳ ಕ್ಯೂವನ್ನು ನೋಡಿದ ಮೇಲಂತೂ ‘ಫ್ಲೈಟ್ ಟೈಮಿಗಿಂತ ಏನಿಲ್ಲವೆಂದರೂ ಒಂದು ಗಂಟೆ ಮೊದಲೇ ಏರ್‍ಪೋರ್ಟಿನಲ್ಲಿ ಇರಬೇಕು ನೋಡಿ’ ಎಂದು ಅನುಭವೀ ಸ್ನೇಹಿತರು ಪದೇಪದೇ ನೆನಪಿಸಿದ್ದೇಕೆಂದು ಮನವರಿಕೆಯಾಯಿತು. ಅಂತೂ ಕೌಂಟರ್ ತಲುಪುತ್ತಿದ್ದ ಹಾಗೆ, ‘ನಿಮ್ಮ ಲಗೇಜನ್ನು ಈ ಕಡೆ ಇಡಿ’ ಎಂಬರ್ಥದಲ್ಲಿ ಈಗಷ್ಟೇ ಮೇಕಪ್ ರೂಮಿನಿಂದ ಹೊರಬಂದಂತಿದ್ದ ಹೆಣ್ಣುಜೀವವೊಂದು ಉಲಿಯಿತು. ನನ್ನ ಮುಂದಿದ್ದ ಪ್ರಯಾಣಿಕರೊಬ್ಬರ ಬ್ಯಾಗು ನಿಗದಿಗಿಂತ ಮೂರ್ನಾಲ್ಕು ಕೆಜಿ ಜಾಸ್ತಿಯಿದೆಯೆಂದು ಒಂದೂವರೆ ಸಾವಿರ ರೂಪಾಯಿ ಹೆಚ್ಚುವರಿ ಕಕ್ಕಿದ್ದನ್ನು ನೋಡಿ ಗಾಬರಿಗೊಂಡಿದ್ದ ನಾನು ಆತಂಕದಿಂದಲೇ ಲಗೇಜು ಎತ್ತಿ ಬೆಲ್ಟಿನ ಮೇಲಿಟ್ಟೆ. ಸದ್ಯ, ತೂಕ ಸರಿಯಾಗಿತ್ತು. ಹಾಗೆಂದು ನಿರಾಳವಾಗುವ ಮೊದಲೇ, ಅಯ್ಯೋ ನನ್ನ ಬ್ಯಾಗು ಎಲ್ಲಿ ಹೋಯಿತೆಂದು ಹೌಹಾರಿದೆ. ಬೆಲ್ಟಿನ ಮೇಲೆ ಇತರ ಬ್ಯಾಗುಗಳೊಂದಿಗೆ ಸರಸರನೆ ಸಾಗಿದ ನನ್ನ ಲಗೇಜು ಮುಂದಿನ ತಿರುವಿನಲ್ಲಿ ನನ್ನನ್ನೊಮ್ಮೆ ನೋಡಿ ನಕ್ಕು ಮರೆಯಾಯಿತು. ‘ಡೋಂಟ್ ವರಿ, ಅದಿನ್ನು ಸಿಗೋದು ವಿಮಾನ ಇಳಿಯೋವಾಗಲೇ’ ಎಂದು ಸಹೋದ್ಯೋಗಿ ಸಮಾಧಾನ ಹೇಳಿದರಾದರೂ ಇಷ್ಟೆಲ್ಲ ಮಂದಿಯ ಲಗೇಜನ್ನು ಹೊತ್ತುಕೊಂಡು ಹೋಗಿ ವಿಮಾನಕ್ಕೆ ಲೋಡ್ ಮಾಡೋರ್ಯಾರು, ನಾವು ಹೋಗಬೇಕಾದ ವಿಮಾನಕ್ಕೇ ಇವೆಲ್ಲ ಲೋಡ್ ಆಗುತ್ತಾವೆಂದು ಏನು ಗ್ಯಾರಂಟಿ, ವಿಮಾನ ಇಳಿಯುವಾಗ ನಿಮ್ಮ ಲಗೇಜು ಲಂಡನಿಗೆ ಹೋಗಿದೆಯೆಂದು ಹೇಳಿದರೆ ಏನು ಮಾಡುವುದೆಂಬ ಟೆನ್ಷನ್ ಕಮ್ಮಿಯಾಗಲೇ ಇಲ್ಲ.

ಬನ್ನಿ ಇನ್ನು ಮೊದಲನೇ ಮಹಡಿಗೆ ಹೋಗಬೇಕು, ಅಲ್ಲಿ ಸೆಕ್ಯೂರಿಟಿ ಚೆಕ್ ಇರುತ್ತೆ ಎಂದು ಸಹೋದ್ಯೋಗಿ ಕರೆದರು. ಒಂದು ಕಡೆ ಸುಮ್ಮನೇ ನಿಂತು ಮೇಲೇರಬಹುದಾದ ಎಸ್ಕಲೇಟರ್ ಜನರಿಂದ ಗಿಜಿಗುಡುತ್ತಿದ್ದರೆ ಪಕ್ಕದಲ್ಲೇ ಯಾರ ಪಾದಸ್ಪರ್ಶವೂ ಇಲ್ಲದೇ ಮೆಟ್ಟಿಲು ಒಂಟಿಯಾಗಿ ಮಲಗಿತ್ತು. ಬನ್ನಿ ಮೆಟ್ಟಿಲಿಗೆ ಬೇಜಾರಾಗೋದು ಬೇಡ ಇಲ್ಲೇ ಹತ್ತೋಣ ಎಂದು ಸಹೋದ್ಯೋಗಿಯನ್ನು ಕರೆದುಕೊಂಡು ಹೋದೆ. ಕುತೂಹಲಕ್ಕಾಗಿ ಎರಡು ನಿಮಿಷ ಅಲ್ಲೇ ನಿಂತು ನೋಡಿದೆ. ಮೆಟ್ಟಿಲು ಹತ್ತಿ ಬರುವವರು ಯಾರೂ ಇರಲಿಲ್ಲ. ನೋಡ್ರೀ ಇಡೀ ಏರ್‍ಪೋರ್ಟಿನಲ್ಲಿ ಮೆಟ್ಟಿಲು ಹತ್ತೋ ತಾಕತ್ತಿರುವವರು ನಾವು ಮಾತ್ರ ಎಂದು ಹೆಮ್ಮೆಯಿಂದಲೇ ಪಕ್ಕದಲ್ಲಿದ್ದವರಿಗೆ ಜ್ಞಾಪಿಸಿದೆ.

ವಿಮಾನ ಹೊರಡೋದು ನಿಗದಿಗಿಂತ ಅರ್ಧ ಗಂಟೆ ತಡವಿದೆ ಎಂದು ಏರ್‍ಲೈನ್ಸ್ ಸಿಬ್ಬಂದಿ ಉದ್ಘೋಷಿಸಿದಾಗ ಮಾತ್ರ ಆತನ ಮೇಲೆ ಇನ್ನಿಲ್ಲದ ಸಿಟ್ಟು ಬಂತು. ನಿಮ್ಮ ಬಸ್ ಅಲ್ಲದಿದ್ರೆ ನಾವು ಬೇರೆ ಬಸ್‍ನಲ್ಲಿ ಹೋಗುತ್ತೀವಿ ಎಂದು ಹೇಳಬೇಕೆನಿಸಿದರೂ ಅದು ಬಸ್ಟ್ಯಾಂಡ್ ಅಲ್ಲವೆಂದು ನೆನಪಾಗಿ ಸುಮ್ಮನಾದೆ. ‘ಡ್ರೈವರ್ ಕಂಡಕ್ಟರ್ ಚಾ ಕುಡಿಯೋದಕ್ಕೆ ಹೋಗಿದಾರಂತೆ. ಬನ್ನಿ ನಾವೂ ಒಂದು ಕಾಫಿ ಕುಡಿದು ಬರೋಣ’ ಅಂತ ಸಹೋದ್ಯೋಗಿಯನ್ನು ಹೊರಡಿಸಿದೆ. ಎರಡು ಕಾಫಿ ಕೊಡಿ ಎಂದು ಗತ್ತಿನಲ್ಲಿ ಹೇಳಿದೆನಾದರೂ ಬಿಲ್ ಬರುವ ಹೊತ್ತಿಗೆ ಗತ್ತು ಮಾಯವಾಗಿತ್ತು. ಏನು ತಿಂದರೂ ಒಟ್ಟು ಹತ್ತು ರೂಪಾಯಿ ಎಂದು ನಮ್ಮ ಕಿಟ್ಟಣ್ಣ ಹೇಳುವಷ್ಟೇ ಕೂಲಾಗಿ ಕಾಫಿ ಅಂಗಡಿಯವ ‘ಟೋಟಲ್ಲೀ ಟೂಟ್ವೆಂಟಿ ಓನ್ಲೀ’ ಎಂದು ಹಲ್ಲುಗಿಂಜಿದ. ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ ಹೇಗೋ ಕಾಫಿ ಮುಗಿಸಿ ಇನ್ನೆಂದೂ ಏರ್‍ಪೋರ್ಟಿನಲ್ಲಿ ಕಾಫಿ ಕುಡಿಯುವ ಯೋಚನೆ ಮಾಡಬಾರದೆಂದು ಶಪಥ ಮಾಡಿದೆ.

ಕಣ್ಣಳತೆಯ ದೂರದಲ್ಲೇ ವಿಮಾನ ನಿಂತಿದೆ, ನಾವು ನಡ್ಕೊಂಡೇ ಹೋಗ್ತೀವಿ ಮಾರ್ರೆ ಎಂದರೆ ಅಲ್ಲಿನವರು ಕೇಳಬೇಕಲ್ಲ. ಅಷ್ಟುದ್ದದ ಹಡಗಿನಂಥಾ ಬಸ್ಸೊಂದು ಬಂದು ಪ್ರಯಾಣಿಕರನ್ನೆಲ್ಲ ಹತ್ತಿಸಿಕೊಂಡಿತು. ಅಲ್ಲಾ ಮಾರಾಯ್ರೆ ವಿಮಾನದಲ್ಲಿ ಹೋಗಬೇಕೆಂದು ಬಂದರೆ ನೀವು ಬಸ್ಸಿನಲ್ಲಿ ಕರ್ಕೊಂಡು ಹೋಗ್ತಿದ್ದೀರಲ್ಲ ಎಂದು ನನ್ನಷ್ಟಕ್ಕೇ ಗೊಣಗಿಕೊಂಡೆ. ಹಾಗೇ ಹೊರಗಿಣುಕಿದರೆ ತರಹೇವಾರಿ ವಾಹನಗಳೆಲ್ಲ ಅತ್ತಿತ್ತ ಓಡಾಡಿಕೊಂಡಿದ್ದವು. ಕಾರಿನಿಂದ ತೊಡಗಿ ಟ್ರ್ಯಾಕ್ಟರ್‍ವರೆಗೆ ಎರಡು, ಮೂರು, ನಾಲ್ಕು ಚಕ್ರದ ವಾಹನಗಳೆಲ್ಲ ಲಗೇಜು, ಆಹಾರ, ಪ್ರಯಾಣಿಕರ ಸಾಗಾಣಿಕೆಯೆಂದು ಸರಭರನೆ ಚಲಿಸುತ್ತಿದ್ದವು. ಎಂತ ಮಾರಾಯ್ರೆ ಏರ್‍ಪೋರ್ಟ್ ಅಂತೆಲ್ಲ ಹೇಳಿ ಉಜಿರೆ ಬಸ್ಟ್ಯಾಂಡಿಗೆ ಕರೆದುಕೊಂಡು ಬಂದಿರಾ ಅಂತ ಕೇಳಬೇಕೆನಿಸಿತು.

ಅಂತೂ ಒಂದು ಉಪ್ಪರಿಗೆ ಮೆಟ್ಟಿಲು ಹತ್ತಿ ವಿಮಾನವೆಂಬೋ ವಿಮಾನದ ಒಳಗೆ ಸಾಗಿದ್ದಾಯಿತು. ಬಾಗಿಲಲ್ಲೇ ನಿಂತಿದ್ದ ಗಗನಸಖಿಯರು ಪಕ್ಕದ ಮನೆ ಸುಧಾ ಆಂಟಿಯಷ್ಟೇ ಪರಿಚಯದವರಂತೆ ಅಷ್ಟಗಲ ನಕ್ಕು ಸ್ವಾಗತ ಹೇಳಿದರು. ಪಾಪ ನಾವೆಲ್ಲಾ ಬರುತ್ತೇವೆಂದು ಎಷ್ಟು ಹೊತ್ತಿಂದ ಕಾದು ಕುಳಿತಿದ್ದಾರೋ ಎಂದುಕೊಂಡು ‘ರೈಟ್ ಪೋಯಿ’ ಎನ್ನುತ್ತಾ ಒಳನಡೆದರೆ, ಥೇಟ್ ರಾಜಹಂಸ ಬಸ್ಸು ಕಂಡಂತಾಗಿ ಒಂದು ಕ್ಷಣ ಆವಾಕ್ಕಾದೆ. ಎಂತ ಮಾರ್ರೆ ವಿಮಾನದ ಒಳಗೆ ಬಸ್ಸೇ ಇರುವುದಾ ಎಂದು ಬೆನ್ನಿಗೇ ನಿಂತಿದ್ದ ಸಹೋದ್ಯೋಗಿಯನ್ನು ಕೇಳಿದರೆ ಅವರು ನನ್ನ ಬಹುನಿರೀಕ್ಷಿತ ಪ್ರಶ್ನೆಗೆ ಘೊಳ್ಳೆಂದು ನಕ್ಕರು. ರಾಜಹಂಸವೋ ಐರಾವತವೋ ನೆಲದ ಮೇಲೆ ಹೋದರೆ ಬಸ್ಸು, ಗಾಳಿಯಲ್ಲಿ ಹೋದರೆ ವಿಮಾನ ಎಂದು ನನ್ನಷ್ಟಕ್ಕೇ ಹೇಳಿಕೊಂಡು ಸೀಟಿನಲ್ಲಿ ಕುಳಿತು ಏರ್‍ಹೋಸ್ಟೆಸ್ ಅಭಿನಯ ಸಮೇತ ಸಾದರಪಡಿಸಿದ ಸೂಚನೆಗಳನ್ನು ಶ್ರದ್ಧಾಭಕ್ತಿಗಳಿಂದ ಕೇಳಿ ಬೆಲ್ಟ್ ಕಟ್ಟಿಕೊಂಡದ್ದಾಯಿತು. ವಿಮಾನ ನಿಧಾನಕ್ಕೆ ಹೊರಟು ಮುಂದಮುಂದಕ್ಕೆ ಸಾಗತೊಡಗಿತು. ಒಂದು ಕಿಲೋಮೀಟರ್... ಎರಡು ಕಿಲೋಮೀಟರ್... ಇವರೆಂತ ಕಲ್ಕತ್ತಾವರೆಗೂ ರೋಡಿನಲ್ಲೇ ಹೋಗುತ್ತಾರಾ ಹೇಗೆ ಎಂಬ ಅನುಮಾನ ಬಂದರೂ ವಿಮಾನ ಹಾರೋ ಮೊದಲು ರನ್‍ವೇಯಲ್ಲಿ ಒಂದಷ್ಟು ದೂರ ಓಡಿ ಆಮೇಲೆ ಮೇಲಕ್ಕೇರುತ್ತದೆ ಎಂಬ ಹಳೇ ಪಾಠ ನೆನಪಾಯಿತು. ಇದ್ದಕ್ಕಿದ್ದ ಹಾಗೆ ಜಯಂಟ್ ವೀಲ್‍ನಲ್ಲಿ ಕುಳಿತಂತೆ ಮೈಯೆಲ್ಲ ಹಗುರವಾದಂತೆ ಭಾಸವಾಗುತ್ತಿದೆಯಲ್ಲ ಅಂತ ಒಂದಿಷ್ಟು ಕಳವಳದಿಂದ ಹೊರಗೆ ನೋಡಿದರೆ ಉಕ್ಕಿನ ಹಕ್ಕಿ ಅದಾಗಲೇ ನೆಲ ಬಿಟ್ಟು ಮೇಲಕ್ಕೇರುತ್ತಿತ್ತು.

ಕಿಟಕಿ ಪಕ್ಕ ಸೀಟು ಸಿಗೋ ಹಾಗೆ ಬೋರ್ಡಿಂಗ್ ಪಾಸ್ ಕೊಟ್ಟ ಪುಣ್ಯಾತ್ಗಿತ್ತಿಗೆ ಅಲ್ಲಿಂದಲೇ ಥ್ಯಾಂಕ್ಸ್ ಹೇಳಿ ಚಿಕ್ಕವನಿದ್ದಾಗ ಯಾವಾಗಲೂ ಕಿಟಕಿ ಬಳಿಯ ಸೀಟೇ ಬೇಕೆಂದು ಅಕ್ಕಂದಿರೊಟ್ಟಿಗೆ ಜಗಳವಾಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾ ಹಾಗೇ ಹೊರಗೆ ನೋಡಿದರೆ ಕೆಳಗೆ ಗೂಗಲ್ ಮ್ಯಾಪು ಕಾಣಿಸುತ್ತಿತ್ತು! ದೊಡ್ಡದೊಡ್ಡ ಕಟ್ಟಡಗಳು, ಮೇಲ್ಸೇತುವೆಗಳು, ಮರಗಿಡಗಳು, ನದಿ ಗುಡ್ಡಗಳೆಲ್ಲ ನಿಧಾನಕ್ಕೆ ಸಣ್ಣದಾಗುತ್ತ ಈ ಮ್ಯಾಪಿನೊಳಗೆ ಸೇರಿಹೋದವು. ಆಕಾಶದಲ್ಲಿ ಯಾರು ಮಾರಾಯ್ರೆ ಸುಡುಮಣ್ಣು ಇಡುವವರು ಎಂದು ಕೇಳಬೇಕೆನಿಸುವಷ್ಟು ಸಹಜವಾಗಿ ವಿಮಾನದ ಕೆಳಗೆ ಬೆಳ್ಳನೆಯ ಮೋಡಗಳು ತೇಲಾಡಿಕೊಂಡಿದ್ದವು.

ಎಂತ ವಿಮಾನ ಸಾರ್, ಇದಕ್ಕಿಂದ ನಮ್ಮ ಆಟೋ ಸ್ಪೀಡ್ ಹೋಗೋದಿಲ್ವಾ; ಇದರ ಜತೆ ನಡ್ಕೊಂಡು ಕೂಡ ಹೋಗ್ಬಹುದು ಎಂದು ಪಕ್ಕದಲ್ಲಿದ್ದ ಸ್ನೇಹಿತರ ಬಳಿ ಹೇಳಿದೆ. ‘ಹೌದೌದು ಹೀಗೇ ಹೋಗೋದು ಇದು. ದೊಡ್ಡಬಳ್ಳಾಪುರದಲ್ಲಿ ನಿಲ್ಸಿ ತಟ್ಟೆ ಇಡ್ಲಿ ತಿನ್ನಿಸ್ಕೊಂಡು ಹೋಗ್ತಾನೆ’ ಅಂತ ಅವರು ಮತ್ತೆ ನಕ್ಕರು. ಇನ್ನೂ ಎತ್ತರಕ್ಕೆ ಹೋಗಿ ಕ್ರೂಯಿಸಿಂಗ್ ಮಾಡತೊಡಗಿದಾಗಲಂತೂ ವಿಮಾನದ ಚಲನೆಯೂ ಅನುಭವಕ್ಕೆ ಬರದಂತಾಯಿತು. ಗಂಟೆಗೆ 840 ಕಿ.ಮೀ. ವೇಗ ಅಂತೆ, ಮಣ್ಣಾಂಗಟ್ಟಿ ಇವರದ್ದು, ಬಹುಶಃ ಆಕಾಶಕ್ಕೆ ಬಂದವನೇ ಸುಸ್ತಾಗಿ ಒಂದು ಕಡೆ ಪಾರ್ಕಿಂಗ್ ಮಾಡ್ಕೊಂಡಿದಾನೆ ಅಂತಂದೆ. ನನ್ನ ಕತೆ ಸರಿ, ಉಳಿದವರೆಲ್ಲ ಏನು ಮಾಡ್ತಿದಾರೆ ನೋಡೋಣ ಎಂದು ಹಾಗೇ ಸಹಪ್ರಯಾಣಿಕರತ್ತ ಒಮ್ಮೆ ದೃಷ್ಟಿ ಹರಿಸಿದೆ. ಬಹುತೇಕರು ಅದಾಗಲೇ ನಿದ್ದೆಗೆ ಜಾರಿ ಗೊರಕೆ ಹೊಡೆಯುತ್ತಿದ್ದರು. ಅಲ್ಲಾ ಮಾರ್ರೆ ವಿಮಾನಕ್ಕೆ ಬಂದು ನೀವೆಲ್ಲ ನಿದ್ದೆ ಮಾಡುತ್ತಿದ್ದೀರಲ್ಲ, ಮಾನ ಮರ್ಯಾದೆ ಉಂಟಾ ಎಂದು ಎಬ್ಬಿಸಿ ಕೇಳಬೇಕೆನಿಸಿದರೂ ವಾಪಸು ಬರುವಾಗ ನನ್ನದೂ ಇದೇ ಕಥೆ ಇರಬಹುದೆಂದು ಸುಮ್ಮನಾದೆ.

ವಿಮಾನ ಮೂವತ್ತೈದು ಸಾವಿರ ಅಡಿಯಷ್ಟು ಎತ್ತರದಲ್ಲಿ ಬಂಗಾಳ ಕೊಲ್ಲಿಯ ಮೇಲೆ ಹಾರುತ್ತಿರುವಾಗಲಂತೂ, ‘ಆಕಾಶ ಎಲ್ಲಿದೆ, ನಮ್ಮ ಮೇಲೆಯಾ ಕೆಳಗಾ’ ಎಂದು ನನ್ನನ್ನು ನಾನೇ ಕೇಳಿಕೊಂಡೆ. ಸೂರ್ಯನ ಪ್ರಖರ ಬೆಳಕಿಗೆ ಫಳಫಳನೆ ಮಿಂಚುತ್ತಿದ್ದ ವಿಮಾನದ ರೆಕ್ಕೆಗಳ ಹೊರತಾಗಿ ಹೊರಗೆ ಇನ್ನೇನೂ ಕಾಣುತ್ತಿರಲಿಲ್ಲ. ದೃಷ್ಟಿ ಹಾಯಿಸಿದಷ್ಟೂ ದೂರಕ್ಕೆ ಖಾಲಿ ನೀಲಾಕಾಶ. ಕೆಳಗೆ, ಮೇಲೆ, ಸುತ್ತಮುತ್ತ ಎಲ್ಲೆಲ್ಲೂ ನಿಗೂಢ ವ್ಯೋಮ. ಕೆಳಗಿನ ಗೂಗಲ್ ಮ್ಯಾಪೂ ಈಗ ಕಾಣುತ್ತಿಲ್ಲ. ಹಾಗಾದರೆ ಕೆಳಗಿರುವುದು, ಮೇಲಿರುವುದು ಎಲ್ಲವೂ ಆಕಾಶವೇ? ಭೂಮಿಗೂ ಆಕಾಶಕ್ಕೂ ಯತಾರ್ಥವಾಗಿ ಯಾವ ವ್ಯತ್ಯಾಸವೂ ಇಲ್ಲವೇ? ಭೂಮಿಯೇ ಆಕಾಶ, ಆಕಾಶವೇ ಭೂಮಿಯೇ? ಇದನ್ನೇ ದೊಡ್ಡವರು ದ್ಯಾವಾ-ಪೃಥಿವೀ ಎಂದಿರುವುದೇ? ನಾನು ಧ್ಯಾನಸ್ಥನಾದೆ.

ಬುಧವಾರ, ಜನವರಿ 20, 2016

ಸಾತ್ವಿಕ ಪ್ರತಿಭಟನೆಯ ಸಶಕ್ತ ದನಿ

(ನಿರಾಂಜು ಕೆ. ಎಚ್. ಅವರ ಕವನ ಸಂಕಲನ 'ಕೆಂಡಸಂಪಿಗೆ'ಗೆ ಬರೆದ ಮುನ್ನುಡಿ)

ನಿರಾಂಜು ಅವರ ಕವಿತೆಗಳ ಮೇಲೆ ಕಣ್ಣಾಡಿಸುತ್ತಿದ್ದರೆ ಥಟ್ಟನೆ ನೆನಪಾಗುವುದು 'ಗುಡಿಸಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ/ ಕತ್ತಲೆಯಲ್ಲಿ ಕಾಣುವ ಬೆಳಕು ಬಂಡಾಯದ ಈ ಕವನ' ಎಂಬ ಸಿದ್ದಲಿಂಗಯ್ಯನವರ ಹಾಡಿನ ಸಾಲುಗಳು. ಬಹುಶಃ ನಿರಾಂಜು ಅವರ ಬಹುತೇಕ ಕವಿತೆಗಳ ಒಳಗಿನಿಂದ ಹೊಮ್ಮುತ್ತಿರುವ ಸಾತ್ವಿಕ ಪ್ರತಿಭಟನೆಯ ದನಿಯೇ ಇದಕ್ಕೆ ಕಾರಣವಿರಬೇಕು.

ಸಾಹಿತ್ಯ ಇತಿಹಾಸದ ಉದ್ದಕ್ಕೂ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯ ದ್ಯೋತಕಗಳಾಗಿ ಹತ್ತುಹಲವು ಕವಿಗಳು, ನೂರಾರು ಕವಿತೆಗಳು ಕಾಣಿಸಿಕೊಂಡಿರಬಹುದು; ಆದರೆ ನಿರಾಂಜು ಈ ಸಾಲಿನಲ್ಲಿ ಹನ್ನೊಂದನೆಯವರಾಗಿ ಕಾಣುವುದಿಲ್ಲ. ಏಕೆಂದರೆ ಅವರ ಕವಿತೆಗಳಲ್ಲಿ ಅಲ್ಲಲ್ಲಿ ಗೋಚರಿಸುವ ಬಡತನ, ಹಸಿವು, ಅಸಹಾಯಕತೆ ಹಾಗೂ ಶೋಷಣೆ-ತರತಮ ಭಾವನೆಯ ನೋವು ಅವರದ್ದೇ ಹೊರತು ಇನ್ನೊಬ್ಬರದ್ದಾಗಿರಲು ಸಾಧ್ಯವಿಲ್ಲ.

ಯಾವುದೇ ಸೃಜನಶೀಲ ಪ್ರಕ್ರಿಯೆಯೂ ಮೂಲತಃ ಅನುಭವಜನ್ಯವಷ್ಟೇ. ಹೀಗಾಗಿ ನಿರಾಂಜು ಅವರ ಕವಿತೆಗಳ ಹಿಂದಿರಬಹುದಾದ ಮಾನಸಿಕ ತುಮುಲ ನಿರ್ಲಕ್ಷಿಸುವಂಥದ್ದಲ್ಲ. ವಯೋಸಹಜವಾಗಿ ಮೂಡಬಹುದಾದ ಪ್ರೀತಿ-ಪ್ರೇಮಗಳ ನವಿರು ಭಾವ, ಪ್ರಕೃತಿಯ ಕುರಿತಾದ ವಿಸ್ಮಯ, ನಾಡಿನೆಡೆಗಿನ ತುಡಿತ ನಿರಾಂಜು ಕವಿತೆಗಳಲ್ಲೂ ಇವೆ; ಆದರೆ ಅದಕ್ಕಿಂತ ಮಿಗಿಲಾಗಿ ನಮ್ಮನ್ನು ಕಾಡುವುದು ಮತ್ತು ಕಲಕುವುದು ಬಾಲ್ಯ-ಹದಿಹರೆಯವನ್ನು ಸಂಭ್ರಮಿಸಬೇಕಾದ ವಯಸ್ಸಿನಲ್ಲಿ ಅವರು ಅನುಭವಿಸಿರಬಹುದಾದ ಮಾನಸಿಕ ತುಮುಲಗಳು. ಈ ಸಂಘರ್ಷ ಬಾಲಕನದ್ದೋ, ಯುವಕನದ್ದೋ, ಮಧ್ಯವಯಸ್ಕನದ್ದೋ, ವೃದ್ಧನದ್ದೋ ಯಾರದ್ದೇ ಆದರೂ ಅದು ನಾಗರಿಕ ಸಮಾಜದ ಆತ್ಮಾವಲೋಕನಕ್ಕೆ ಕಾರಣವಾಗಬೇಕು.

ನಾರುವ ಕೆಲಸಗಳಲ್ಲಿ 
ನರಳುತ್ತಿರುವ ನನ್ನ ಜನಗಳೇ
ಮೇಲ್ವರ್ಗದ ಎದುರಿಗೆ 
ಮಾತನಾಡದ ಮೂಕಪ್ರಜೆಗಳೇ
ಎಂದು ಆರಂಭವಾಗುವ 'ಕೆಂಡಸಂಪಿಗೆ' ಕವನ ಈ ಸಂಕಲನದ ಪ್ರಮುಖ ಕವಿತೆಗಳಲ್ಲೊಂದು. ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ ಬಂದು ಆರೇಳು ದಶಕ ಸಂದರೂ ನಿಜದರ್ಥದಲ್ಲಿ ಸಮಾಜದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡಿಲ್ಲ ಎಂಬುದನ್ನು ಸೂಚಿಸುವ ಈ ಸಾಲುಗಳು ಎಳೆಯ ಕೊರಳಿನಿಂದ ಹೊರಟ ಬಲಿತ ದನಿಯಂತೆ ಭಾಸವಾಗುತ್ತವೆ.

ಇವು ಕಣ್ಣೀರಲ್ಲಿ ಬೆಂದ ಕಣ್ಣುಗಳಾದರೂ
ನಿಮ್ಮಂಥವರ ದಾರಿಗೆ ಕೆಂಡಗಳಾಗುತ್ತವೆ
ಎಂಬ ಸಾಲುಗಳಲ್ಲಿನ ತಣ್ಣನೆಯ ಆಕ್ರೋಶ ಮತ್ತು ಸ್ಪಷ್ಟವಾಗಿ ಕೇಳಿಸುವ ಎಚ್ಚರಿಕೆಯ ಕರೆಗಂಟೆ ಎಂತಹವರನ್ನಾದರೂ ಒಂದು ಕ್ಷಣ ಯೋಚಿಸುವಂತೆ ಮಾಡುವ ಶಕ್ತಿ ಹೊಂದಿವೆ. ಆದರೆ ಕವಿಯ ಈ ಆಕ್ರೋಶ ಸಾತ್ವಿಕವಾದದ್ದು ಮತ್ತು ಅದರ ಹಿಂದಿನ ಮನಸ್ಸು ಘರ್ಷಣೆಯನ್ನು ಮೀರಿದ ಸಾಮರಸ್ಯವನ್ನು ಬಯಸುವಂಥದ್ದೆಂಬುದನ್ನು ಗಮನಿಸಬೇಕು. ಅದು ಕವಿತೆಯ ಕೊನೆಯ ಭಾಗದಲ್ಲಿ ವ್ಯಕ್ತವಾಗಿದೆ:
ಗಾಳಿ ಬೆಳಕಿನಂತೆ ಬಂದರೆ
ನಿಮ್ಮ ಜೊತೆಯೇ ಬೆಳೆದು
ಸರ್ವರ ದಾರಿಗೆ ಹೂವುಗಳಾಗುತ್ತವೆ 
ಹೂವುಗಳಾಗುತ್ತವೆ, ಹೂವುಗಳಾಗುತ್ತವೆ

'ಡೊಂಕು ಸಮಾಜ' ಎಂಬ ಕವಿತೆಯಲ್ಲಿ ತಾನು ಬದುಕುತ್ತಿರುವ ಭ್ರಷ್ಟಸಮಾಜದ ಬಗೆಗಿನ ಸಿಟ್ಟಿದೆ. ಜತೆಗೆ ಇದನ್ನು ಸರಿಪಡಿಸುವತ್ತ ತನಗೇನೂ ಮಾಡಲಾಗುತ್ತಿಲ್ಲವಲ್ಲ ಎಂಬ ಅಸಹಾಯಕತೆಯ ಭಾವವೂ ದಟ್ಟವಾಗಿದೆ.
ಒಲೆಯ ಮೇಲೆ ನೀರು 
ಕುದಿಯುತ್ತಿದೆ, ಕೊತ ಕೊತನೆ
ನನಗೂ ಕುದಿಯುತ್ತಿದೆ ರಕುತ
ಅಮ್ಮ ಬೈದು ಹೇಳುತ್ತಾಳೆ
ನಿನಗದು ಸಲ್ಲದು
ಎಂದು ತನ್ನ ಸಿಟ್ಟನ್ನು ಒಲೆಯ ಮೇಲೆ ಕೊತಕೊತನೆ ಕುದಿಯುತ್ತಿರುವ ನೀರಿಗೆ ಸಮೀಕರಿಸಿರುವುದು, ಅದಕ್ಕೆ 'ನಿನಗದು ಸಲ್ಲದು' ಎಂಬ ಅಮ್ಮನ ಬುದ್ಧಿವಾದವನ್ನು ಪೋಣಿಸಿರುವುದು ಸುಂದರವಾಗಿದೆ. 'ಅಧಿಕಾರದ ದಾಹ', 'ಇಂದಿನ ಯುಗ’, 'ಎತ್ತ ಸಾಗುತ್ತಿದೆ’ ಮುಂತಾದ ಕವಿತೆಗಳೂ ಸಮಕಾಲೀನ ಸಮಾಜದ ಸಾಗುತ್ತಿರುವ ಹಾದಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತವೆ.

ಬಣ್ಣದ ಬೊಂಬೆ ಜೊತೆ ಹೊರಟವರೆ ಸಮುದ್ರಕ್ಕೆ
ಅವರಿಗೂ ದಾರಿ ಕಾಣ್ತಾ ಇಲ್ಲ- ಬೊಂಬೆಗೆ ಮೊದ್ಲೇ ಜೀವ ಇಲ್ಲ
ಅತ್ತಲೈ ಹೋಗದೇ- ಇತ್ತಲೂ ಬರದೆ
ಎತ್ತದಾರಿ, ಎತ್ತದಾರಿ ಎಂದು ದಾರಿ ತಪ್ಪಿದೋರೇ ಎಲ್ಲಾ
ಎಂಬ 'ಇಂದಿನ ಯುಗ’ ಕವಿತೆಯ ಸಾಲುಗಳು ಆಧುನಿಕ ಸಮಾಜದಲ್ಲಿ ನೆಲೆಸಿರುವ ಒಟ್ಟಾರೆ ಗೊಂದಲವನ್ನು ಪ್ರತಿನಿಧಿಸುತ್ತವೆ.

'ಕುಸುಮ’ ಈ ಕವನ ಸಂಕಲನದಲ್ಲಿ ಗಮನ ಸೆಳೆಯುವ ಇನ್ನೊಂದು ಪ್ರಮುಖ ಕವಿತೆ. ಹೂವನ್ನು ಉದ್ದೇಶಿಸಿ ಮಾತನಾಡುತ್ತಲೇ ಅತ್ಯಂತ ಮಹತ್ವದ ಪ್ರಶ್ನೆಯೊಂದನ್ನು ಕವಿ ಎತ್ತಿರುವ ರೀತಿ ಕುತೂಹಲಕರವಾಗಿದೆ:
ಬಡವರ ಹೊಟ್ಟೆ ತುಂಬಿಸುವೆ
ನೋಡುಗರ ಕಣ್ಣಿಗೆ ಸ್ವರ್ಗವೇ ತೋರಿಸುವೆ
ಶುಭಸಮಾರಂಭಕ್ಕೆ ಆತಿಥ್ಯ ವಹಿಸುವೆ
ಮಡಿದವರ ಮೇಲೆ ಏಕೆ ಮೌನವಹಿಸುವೆ?
ಎಂಬಲ್ಲಿ 'ಮಡಿದವರ ಮೇಲೆ ಏಕೆ ಮೌನ ವಹಿಸುವೆ?’ ಎಂಬ ಸಾಲು ನಮಗರಿವಿಲ್ಲದಂತೆ ಸಣ್ಣಗೆ ಬೆಚ್ಚಿಬೀಳಿಸುತ್ತದೆ.

ದೇವರ ಮೇಲಿನ ನಿನ್ನ ಕಣ್ಣಿಗೆ ಒತ್ತಿ
ಕಿವಿಯಲ್ಲಿ ತಲೆಯಲ್ಲಿ ಮುಡಿಸುವರು
ಸ್ಮಶಾನದಲ್ಲಿ ನಿನ್ನನ್ನು ನೋಡಿ
ಏಕೆ ದೂರ ಸರಿಯುವರು?
ಎಂಬ ಪ್ರಶ್ನೆಯ ಮೂಲಕ ಹೂವಿನ ಸಂಕೇತದೊಂದಿಗೆ ಸಮಾಜದಲ್ಲಿ ಜೀವಂತವಾಗಿರುವ ಮೇಲು-ಕೀಳು ಭಾವನೆಯತ್ತ ಕವಿತೆ ಹೊರಳುತ್ತದೆ.

'ನನ್ನವರು’, 'ಹಟ್ಟಿಯ ಹುಡುಗ’, 'ಮುಳ್ಳಿನ ಹಾದಿ’, 'ಅಂದಿನಿಂದ ಇಂದಿನವರೆಗೂ’, 'ಕನಸನ್ನು ಹೊತ್ತು’, 'ಸ್ವಾಭಿಮಾನಿ’, 'ಹಸಿದವರ ಬಾಯಿಗೆ ಹಣ್ಣಾದವಳು’ ಇತ್ಯಾದಿ ಕವಿತೆಗಳು 'ಕೆಂಡಸಂಪಿಗೆ’ ಕವಿತೆಯ ಮುಂದುವರಿದ ಭಾಗಗಳಾಗಿ ಕಾಣಿಸುತ್ತವೆ. ಇನ್ನೂ ಅಸಹಾಯಕತೆಯಲ್ಲಿ ಕಾಲ ಕಳೆಯುತ್ತಿರುವ ತನ್ನಂತಹ ಸಾವಿರಾರು ಜನರ ಕಡೆಗೆ ಸಹಾನುಭೂತಿ ತೋರುತ್ತಲೇ ಅವರು ಸಾಗಬೇಕಾದ ಹಾದಿಯ ಬಗ್ಗೆ, ಅವರ ಮುಂದಿರುವ ಸವಾಲುಗಳ ಬಗ್ಗೆ ಕವಿ ಯೋಚಿಸುತ್ತಾನೆ.
ಬೆಟ್ಟದಂತಿವೆ ನಮ್ಮ ಆಸೆಗಳು
ಆದರೆ ಏನು ಮಾಡುವುದು
ಸಾಗರದಷ್ಟಿದೆ ದುಃಖ
ಈಜಿ ಬರುವುದೇ ದೊಡ್ಡ ಸವಾಲು
ಎಂದು ಆರಂಭವಾಗುವ 'ಮುಳ್ಳಿನ ಹಾದಿ’ ಎಂಬ ಕವಿತೆಯ ಕೊನೆಯ ಸಾಲುಗಳು ಕವಿ ನಿರಾಶಾವಾದಿಯಲ್ಲ ಎಂಬುದನ್ನು ದೃಢಪಡಿಸುತ್ತವೆ.

ಸಾಗರಕ್ಕೆ ಕೊನೆ ಇರಲೇಬೇಕು
ನಾವು ದಡವನ್ನು ಸೇರಲೇಬೇಕು
ಕಷ್ಟಗಳು ದೂರಾಗಿ ಸಂತಸ
ಇಮ್ಮಡಿಯಾಗಿ ನಮ್ಮ ಬಾಳಿನ 
ಹಾದಿ ಕೊನೆಗೊಳಿಸಬೇಕು
ಎಂಬ ಸಾಲುಗಳಿಂದ ಇಣುಕುವ ಆಶಾವಾದ ಮನಸ್ಸಿಗೆ ಮುದ ನೀಡುತ್ತವೆ. ನೋವುಗಳಿಂದ ಹೊರಬಂದು ಆತ್ಮವಿಶ್ವಾಸದ ಬದುಕನ್ನು ಕಟ್ಟಿಕೊಳ್ಳಬೇಕಾದರೆ ತಮಗೆ ಬೇಕಾಗಿರುವುದು ಜ್ಞಾನದ ಬೆಳಕು ಎಂಬ ಅರಿವು ಪ್ರಶಾಂಸಾರ್ಹವಾದದ್ದು. ಅದು 'ಬೆಳಕಿನೆಡೆಗೆ’ ಎಂಬ ಕವಿತೆಯಲ್ಲಿದೆ:
ನಾವು ಇಂದು ನಡೆಯಬೇಕಾಗಿದೆ
ಕತ್ತಲಿನಿಂದ ಬೆಳಕಿನೆಡೆಗೆ
ಅಜ್ಞಾನದಿಂದ ಅರಿವಿನ ಕಡೆಗೆ
ನೋಡಬೇಕಾಗಿದೆ ಕಣ್ ತೆರೆದು ಜಗವನು

ಜ್ಞಾನವೆಂಬ ಜ್ಯೋತಿಯನ್ನು ಹಿಡಿದು
ಅಜ್ಞಾನದ ಅಂಧಕಾರ ತೊಡೆಯಬೇಕಾಗಿದೆ
ಸೂರ್ಯನ ರೀತಿ ಉದಯಿಸಬೇಕಿದೆ
ಕತ್ತಲೆಯ ತೊಡೆಯಬೇಕಿದೆ
ಎಂಬ ಸಾಲುಗಳು ಕೊಂಚ ವಾಚ್ಯವೆನಿಸಿದರೂ ಅವುಗಳ ಅಂತರ್ಯದಲ್ಲಿ ಹುದುಗಿರುವ ಭರವಸೆಯ ದನಿ ಇಂದಿನ ಅವಶ್ಯಕತೆಯೆಂಬುದರಲ್ಲಿ ಎರಡು ಮಾತಿಲ್ಲ.

ಒಟ್ಟಾರೆಯಾಗಿ, ತನ್ನ ಮೊದಲ ಕವನ ಸಂಕಲನದಲ್ಲೇ ನಿರಾಂಜು ಒಬ್ಬ ಪ್ರಬುದ್ಧ ಕವಿಯಾಗಬಲ್ಲ ಭರವಸೆಯನ್ನು ತೋರಿಸಿದ್ದಾರೆ. ವಿಸ್ತಾರವಾದ ಸಾಹಿತ್ಯದ ಓದು ಮತ್ತು ಚಿಂತನೆಯ ಮೂಲಕ ತನ್ನ ಕವಿತೆಗಳಲ್ಲಿ ಇನ್ನಷ್ಟು ಪ್ರೌಢತೆಯನ್ನು ಅವರು ಸಾಧಿಸಿಕೊಳ್ಳಬಹುದು. ಹಾಗೆಯೇ ಮನಸ್ಸಿನಲ್ಲಿ ಮೂಡುವ ವಸ್ತುವನ್ನು ಕಾವ್ಯವಾಗಿಸುವಾಗ ಅದನ್ನು ವಾಚಾಳಿಯಾಗದಂತೆ ಪಳಗಿಸಲು ಒಂದಿಷ್ಟು ಧ್ಯಾನದ ಅವಶ್ಯಕತೆಯೂ ಇದೆ. ಇದನ್ನು ಮಾಡಲು ಇನ್ನೂ ವಿದ್ಯಾರ್ಥಿ ದೆಸೆಯಲ್ಲಿರುವ ನಿರಾಂಜು ಅವರಿಗೆ ಸಾಧ್ಯವಿದೆ ಮತ್ತು ಅದಕ್ಕೆ ಇದು ಸಕಾಲ ಕೂಡ.

ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಹೋರಾಡಲು ತಾನೂ ಸೇರಿದಂತೆ ಸಮಾಜದ ದೊಡ್ಡದೊಂದು ಭಾಗ ಇನ್ನೂ ಅಸಹಾಯಕವಾಗಿದೆ ಎಂಬುದನ್ನು ನಿರಾಂಜು ಅಲ್ಲಲ್ಲಿ ಹೇಳಿದ್ದಾರೆ. ಸಮಾಧಾನದ ಸಂಗತಿಯೆಂದರೆ ಅಂತಹ ವ್ಯವಸ್ಥೆಯ ವಿರುದ್ಧದ ಹೋರಾಟವನ್ನು ಸಾಧ್ಯವಾಗಿಸಬಲ್ಲ ಕವಿತೆಯೆಂಬ ಬಹುದೊಡ್ಡ ಅಸ್ತ್ರವೇ ಅವರ ಕೈಯಲ್ಲಿದೆ. ಇದು ಆರೋಗ್ಯಕರ ಸಮಾಜಕ್ಕೂ, ಸಾಹಿತ್ಯ ಲೋಕಕ್ಕೂ ಒಂದು ಒಳ್ಳೆಯ ಸುದ್ದಿ ಎಂದು ನಾನು ಭಾವಿಸುತ್ತೇನೆ. ಈ ಎರಡನ್ನೂ ಗಮನದಲ್ಲಿರಿಸಿಕೊಂಡು ನಿರಾಂಜು ಆತ್ಮವಿಶ್ವಾಸದಿಂದ ಮುಂದುವರಿಯಲಿ ಎಂಬುದು ನನ್ನ ಹಾರೈಕೆ.

ನವೆಂಬರ್ 10, 2015                                                                        ಸಿಬಂತಿ ಪದ್ಮನಾಭ ಕೆ. ವಿ.
ದೀಪಾವಳಿ                                                                                       ತುಮಕೂರು

ಬುಧವಾರ, ನವೆಂಬರ್ 4, 2015

ಮಾಹಿತಿ ಮಹಾನದಿಯ ಮಧ್ಯೆ

ಫೇಸ್‌ಬುಕ್ ಮುಖಹೀನರ ಮುಖವಾಣಿಯಾಗುತ್ತಿದೆ ಎಂದೂ (ಸಂಗತ, ಅ. 19), ಇಲ್ಲ, ಅದು ಸಮಾಜದಲ್ಲಿ ಸಂವಾದಗಳನ್ನು ಹೆಚ್ಚಿಸಿರುವ ಸಂವಹನದ ಕುಡಿ ಎಂದೂ (ಚರ್ಚೆ, ಅ. 22) ಹೇಳುವ ಎರಡು ವಾದಗಳು ಗಮನಕ್ಕೆ ಬಂದವು. ಎರಡಕ್ಕೂ ತಮ್ಮದೇ ಆದ ಸಮರ್ಥನೆಗಳೂ, ಪ್ರತಿವಾದಗಳೂ ಇವೆ. ಅವುಗಳ ಪರವಾಗಿಯಾಗಲೀ ವಿರೋಧವಾಗಿಯಾಗಲೀ ಮಾತನಾಡುವುದು ಈ ಲೇಖನದ ಉದ್ದೇಶವಲ್ಲ. ಅವುಗಳ ನಿಮಿತ್ತದಿಂದ ಒಟ್ಟಾರೆ ಸಾಮಾಜಿಕ ಮಾಧ್ಯಮ ಅಥವಾ ಮಾಹಿತಿ ತಂತ್ರಜ್ಞಾನದ ಪರಿಣಾಮ ಕುರಿತ ಮೂಲಪ್ರಶ್ನೆಯೊಂದನ್ನು ಗಮನಿಸುವುದು ಇಲ್ಲಿನ ಉದ್ದೇಶ.
ಅಭಿವ್ಯಕ್ತಿಯ ಅವಕಾಶಗಳ ಕೊರತೆ ಅನುಭವಿಸುತ್ತಿದ್ದ ಜನಸಾಮಾನ್ಯರಿಗೆ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ಪರ್ಯಾಯ ಮಾಧ್ಯಮಗಳಾದವು ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಯಾವುದೇ ಸಾಧನದ ಬಳಕೆ ಅರಿತ ಜನ ಅದರ ದುರ್ಬಳಕೆ ಕಲಿಯುವುದಕ್ಕೂ ಹೆಚ್ಚು ದಿನ ತೆಗೆದುಕೊಳ್ಳಲಾರರು ಎಂಬುದು ಅಷ್ಟೇ ನಿಜ. ಸಾಮಾಜಿಕ ಮಾಧ್ಯಮಗಳು ಅನಾಮಧೇಯರು ಹಾಗೂ ವಿಘ್ನ ಸಂತೋಷಿಗಳಿಗೂ ದೊಡ್ಡ ಆಡುಂಬೊಲವಾಗಿರಬಹುದು. ಇವೆರಡಕ್ಕೂ ಹೊರತಾದ ಇನ್ನೊಂದು ಸಂಗತಿ ಬಗ್ಗೆಯೂ ಯೋಚಿಸಬೇಕಾಗಿದೆ.
ಟ್ಯಾಬ್, ಆ್ಯಂಡ್ರಾಯ್ಡ್ ಮೊಬೈಲ್‌ಗಳ ಯುಗದಲ್ಲಿ ವಿಶ್ವವೇ ಅಂಗೈಯಲ್ಲಿ ಬಂದು ಕುಳಿತಿರುವುದು ನಿಜ. ಮಾಹಿತಿಯ ಕೊರತೆ ಎಂಬ ಪ್ರಶ್ನೆಯೇ ಈಗ ಇಲ್ಲ. ಫೇಸ್‌ಬುಕ್, ವಾಟ್ಸ್‌ ಆ್ಯಪ್‌, ಟ್ವಿಟರ್ ಮತ್ತಿತರ ಆ್ಯಪ್‌ಗಳು ಕ್ಷಣಕ್ಷಣಕ್ಕೂ ಹೊಚ್ಚಹೊಸ ಭರಪೂರ ಮಾಹಿತಿಗಳನ್ನು ತಂದು ನಮ್ಮೆದುರು ಸುರಿಯಬಲ್ಲವು. ಆದರೆ ಸಮಸ್ಯೆಯ ಮೂಲವಿರುವುದೇ ಇಲ್ಲಿ. ಏಕೆಂದರೆ ಮನುಷ್ಯನಿಗೆ ಮಾಹಿತಿ ಏಕೆ ಬೇಕು ಎಂಬುದಕ್ಕಿಂತಲೂ ಎಷ್ಟು ಬೇಕು ಎಂಬುದು ಪ್ರಮುಖ ಪ್ರಶ್ನೆ.
ಮಾಹಿತಿ ಪಡೆಯುವ, ಹಂಚಿಕೊಳ್ಳುವ ಸಾಮಾಜಿಕ ಜಾಲತಾಣಗಳ ಒಂದಷ್ಟು ಆ್ಯಪ್‌ಗಳನ್ನು ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ಕೂರಿಸಿಕೊಂಡಿರುವ ಮತ್ತು ಅವುಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಒಬ್ಬ ವ್ಯಕ್ತಿಯ ಪರಿಸ್ಥಿತಿ  ಊಹಿಸಿಕೊಳ್ಳಿ. ಆತ ಒಂದು ಕಡೆ ವಾಟ್ಸ್‌ ಆ್ಯಪ್ ಸಂದೇಶಗಳ ಮೇಲೆ ಬೆರಳಾಡಿಸುತ್ತಿರುತ್ತಾನೆ; ಬೇಕಾದ್ದೋ ಬೇಡದ್ದೋ ಎಲ್ಲವನ್ನೂ ತೆರೆದು ಅರೆಕ್ಷಣ ಕಣ್ಣಾಡಿಸುತ್ತಾನೆ; ಫೋಟೊ, ವಿಡಿಯೊಗಳಲ್ಲಿ ಒಂದಷ್ಟನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾನೆ. ಅಷ್ಟರಲ್ಲಿ ಫೇಸ್‌ಬುಕ್ ಹೊಸ ನೋಟಿಫಿಕೇಶನ್ ತೋರಿಸುತ್ತದೆ. ಅವನ ಗಮನ ಅತ್ತ ಕಡೆ ಹೋಗುತ್ತದೆ.
ಇನ್ನೊಂದು ಹೊಸ ಲೋಕದೊಳಕ್ಕೆ ಇಳಿಯುತ್ತಾನೆ. ಎಂದೂ ಮುಗಿಯದ ಸಮುದ್ರದ ಅಲೆಗಳಂತೆ ಆತ ಸ್ಕ್ರೋಲ್ ಮಾಡಿದಷ್ಟೂ ಹೊಸಹೊಸ ವಿಷಯ ಕಾಣಿಸುತ್ತಲೇ ಹೋಗುತ್ತದೆ. ಸಾಕಿನ್ನು ಮುಚ್ಚಿಡೋಣವೆಂದರೂ ಅದ್ಯಾವುದೋ ಹೊಸ ಪೋಸ್ಟ್ ಅವನಿಗೆ ಕುತೂಹಲ ಮೂಡಿಸಿಬಿಡುತ್ತದೆ. ಬೇರೆ ಯೋಚಿಸೋಣ ಎಂದುಕೊಂಡರೆ ಹೊಸ ಇ-ಮೇಲ್‌ಗಳು ಬಂದಿರುತ್ತವೆ. ಟ್ವಿಟರ್‌ನಲ್ಲಿ ನೂರಾರು ಹೊಸ ಸಂದೇಶಗಳು ಕಾಯುತ್ತಿರುತ್ತವೆ. ಎಲ್ಲದರ ಕಡೆ ಒಂದು ಸುತ್ತು ಹೊಡೆಯುವಷ್ಟರಲ್ಲಿ ಮತ್ತೆ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಹೊಸದೇನು ಬಂದಿರಬಹುದೆಂಬ ಕುತೂಹಲ. ಅಂತೂ ಈ ಹುಡುಕಾಟದ ವರ್ತುಲಕ್ಕೆ ಕೊನೆಯೇ ಇಲ್ಲ. ಅನೇಕರನ್ನು ಮೆಟ್ಟಿಕೊಂಡಿರುವ ‘ಮಾಹಿತಿ ವ್ಯಸನ’ ಅವರನ್ನು ಅಂತಿಮವಾಗಿ ಎಲ್ಲಿಗೆ ಕೊಂಡೊಯ್ದೀತು ಎಂದು ಯೋಚಿಸಿದರೆ ಆತಂಕವಾಗುತ್ತದೆ.
ಮನುಷ್ಯನಿಗೆ ಮಾಹಿತಿ ಬೇಕು, ಸಂವಹನ ಬೇಕು, ತನ್ನವರೊಂದಿಗೆ ಸ್ನೇಹ, ವಿಚಾರ ವಿನಿಮಯ ಎಲ್ಲ ಬೇಕು. ಈ ಎಲ್ಲವನ್ನೂ ಮೀರಿದ ಏಕಾಂತವೆಂಬುದೂ ಒಂದು ಇದೆ; ಅದು ಬೇಡವೇ? ಎಲ್ಲ ಗದ್ದಲಗಳ ನಡುವೆ ಒಂದು ನಿಮಿಷ ಕಣ್ಮುಚ್ಚಿ ಕುಳಿತು ಏನನ್ನಾದರೂ ಯೋಚಿಸುವ ಅಥವಾ ಯೋಚಿಸದೆ ಇರುವ ಅವಕಾಶ ಬೇಡವೇ? ಒಂದು ಕವಿತೆಯೋ ಕಥೆಯೋ ಬರಹವೋ ಒಡಮೂಡುವುದು ಇಂತಹ ಏಕಾಂತದಲ್ಲಿ. ಹಾಗಂತ ಏಕಾಂತವೆಂಬುದು ಒಬ್ಬ ಬರಹಗಾರನಿಗಷ್ಟೇ ಬೇಕಾಗಿರುವ ಅವಕಾಶ ಅಲ್ಲ. ಪ್ರತಿ ವ್ಯಕ್ತಿಯೂ ತಾನು ನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಸಂತೃಪ್ತಿ ಕಾಣಬೇಕಾದರೆ ಅಲ್ಲೊಂದು ಏಕಾಂತ ಬೇಕೇ ಬೇಕು.
ಅದು ಸೃಜನಶೀಲ ಚಟುವಟಿಕೆಯಲ್ಲಿ ತೊಡಗುವ ಮಂದಿ ಬಯಸುವ ಏಕಾಂತಕ್ಕಿಂತ ವಿಭಿನ್ನವಾಗಿರಬಹುದು ಅಷ್ಟೇ. ಆದರೆ ನಮ್ಮ ಸುತ್ತ ತುಂಬಿ ತುಳುಕುತ್ತಿರುವ ಸಾಮಾಜಿಕ ಮಾಧ್ಯಮಗಳು, ಅವುಗಳನ್ನು ಜನರಿಗೆ ತಲುಪಿಸುವ ಆ್ಯಪ್‌ಗಳು ಪ್ರತಿ ಮನುಷ್ಯನಿಗೂ ಅವಶ್ಯಕತೆಯಿರುವ ಅವನದ್ದೇ ಆದ ವಿಶಿಷ್ಟ ಏಕಾಂತವೊಂದನ್ನು ಕಸಿದುಕೊಂಡಿರುವುದು ಒಂದು ಗಂಭೀರ ವಿಚಾರ. ಈ ಮಾಹಿತಿಯ ಮಾಧ್ಯಮಗಳು ಏಕಾಏಕಿ ಕೈಗೆ ಬಂದಾಗ ಹೊಸದೊಂದು ಲೋಕ ಪ್ರವೇಶಿಸಿದಂತೆ, ಅಭಿವ್ಯಕ್ತಿಯ ಹೊಸ ದಾರಿಗಳು ತೆರೆದುಕೊಂಡಂತೆ ಹಲವರಿಗೆ ಅನ್ನಿಸಿದರೂ ಇವೆಲ್ಲವೂ ತಾನು ಬಯಸಿದ್ದಕ್ಕಿಂತ ಹೆಚ್ಚಾಯಿತು ಎಂದು ಒಂದು ಹಂತದಲ್ಲಿ ಪ್ರಾಮಾಣಿಕವಾಗಿ ಅನ್ನಿಸದೆ ಇರದು.
ಜ್ಞಾನದ ಓಟದಲ್ಲಿ ವಿವೇಕವನ್ನೂ, ಮಾಹಿತಿಯ ಮಹಾಪೂರದಲ್ಲಿ ಜ್ಞಾನವನ್ನೂ ನಾವು ಕಳೆದುಕೊಂಡಿದ್ದೇವೆಯೇ ಎಂದು ಕೇಳಿದ್ದ ಪ್ರಸಿದ್ಧ ಇಂಗ್ಲಿಷ್ ಕವಿ ಟಿ.ಎಸ್.ಎಲಿಯಟ್ ಅವರ ಪ್ರಶ್ನೆ, ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಅತ್ಯಂತ ಪ್ರಸ್ತುತ ಎನಿಸುತ್ತದೆ. ಇಂಟರ್ನೆಟ್ ಭೂಮಿ ಮೇಲೆ ಕಣ್ತೆರೆಯುವ ಹತ್ತಾರು ವರ್ಷಗಳ ಹಿಂದೆಯೇ ಗರ್ಟ್ರೂಡ್ ಸ್ಟೈನ್ ಎಂಬ ಅಮೆರಿಕನ್ ಬರಹಗಾರ್ತಿ ಒಂದು ಮಾತು ಹೇಳಿದ್ದರು: ‘ಪ್ರತಿದಿನ ಪ್ರತಿಯೊಬ್ಬರೂ ಎಷ್ಟೊಂದು ಮಾಹಿತಿಗಳನ್ನು ಪಡೆಯುತ್ತಾರೆಂದರೆ ಅವುಗಳ ಭರಾಟೆಯಲ್ಲಿ ಅವರು ತಮ್ಮ ಸಾಮಾನ್ಯ ವಿವೇಕವನ್ನೇ ಕಳೆದುಕೊಂಡುಬಿಡುತ್ತಾರೆ’.
ಇನ್ನು ಮಾಹಿತಿ ತಂತ್ರಜ್ಞಾನದ ತುರೀಯಾವಸ್ಥೆಯ ಈ ಕಾಲದಲ್ಲಿ ಜನರ ವಿವೇಕಕ್ಕೆ ಬಡಿಯುವ ಗ್ರಹಣದ ಬಗ್ಗೆ ನಾವು ಯೋಚಿಸಬೇಡವೇ? ಜ್ಞಾನಾಧಾರಿತ ಅರ್ಥ ವ್ಯವಸ್ಥೆಯ ಈ ಕಾಲದಲ್ಲಿ ಮಾಹಿತಿಯೇ ಸರ್ವಸ್ವ ಎಂಬ ಭಾವನೆ ಅತಿರೇಕದ್ದೇನೂ ಅಲ್ಲ. ಅದಕ್ಕೇ, ಅಮೆರಿಕದ ಉಪಾಧ್ಯಕ್ಷರಾಗಿದ್ದ ಅಲ್ ಗೋರೆ ಇಂಟರ್ನೆಟ್‌ ಅನ್ನು ‘ಇನ್‌ಫರ್ಮೇಶನ್‌ ಸೂಪರ್‌ಹೈವೇ’ ಎಂದಾಗ ಜಗತ್ತು  ಕಣ್ಣರಳಿಸಿ ನೋಡಿದ್ದು. ಆದರೆ ಬದುಕೆಂದರೆ ಬರೀ ಮಾಹಿತಿಯಷ್ಟೇ ಅಲ್ಲ. ಎಲ್ಲದಕ್ಕೂ ಒಂದು ಮಿತಿಯಿದೆ. ಎಷ್ಟು ಹಸಿದವನಿಗೂ ಹೊಟ್ಟೆ ತುಂಬಿದ ಮೇಲೆ ಮೃಷ್ಟಾನ್ನ ಸುರಿದರೂ ಅದು ಬೇಡ. ಉಪ್ಪಿಗಿಂತ ರುಚಿ ಇನ್ನಿಲ್ಲವಾದರೂ ಅದನ್ನೇ ಊಟ ಮಾಡುವುದಕ್ಕಾಗದು.
ಮಾಹಿತಿಯ ಮಹಾಪೂರ ಕೆಲವೊಮ್ಮೆ ಅನುಕೂಲಕ್ಕಿಂತಲೂ ಅಧ್ವಾನವನ್ನೇ ಉಂಟುಮಾಡೀತು ಎಂಬ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ‘ಇನ್‌ಫರ್ಮೇಶನ್‌ ಗ್ಲಟ್’ ಅಥವಾ ‘ಇನ್‌ಫರ್ಮೇಶನ್‌ ಓವರ್‌ಲೋಡ್’ ಕುರಿತು ನಮ್ಮಲ್ಲೂ ಗಹನವಾದ ಚರ್ಚೆಗಳಾಗಬೇಕಿದೆ. 
ಹೈವೇಗಳು, ಸೂಪರ್‌ಹೈವೇಗಳು ಇದ್ದರೆ ಒಳ್ಳೆಯದೇ. ಆದರೆ ಕೆಲವೊಮ್ಮೆ ಬರೀ ಹೆದ್ದಾರಿಗಳೇ ಸಾಕಾಗುವುದಿಲ್ಲ. ಒಬ್ಬರೇ ಧ್ಯಾನಸ್ಥವಾಗಿ ನಡೆಯುವುದಕ್ಕೆ  ಸಣ್ಣ ಕಾಲುಹಾದಿಯೂ ಬೇಕಾಗುತ್ತದೆ, ಅಲ್ಲವೇ?