ಶುಕ್ರವಾರ, ಮಾರ್ಚ್ 16, 2012

ಖಡ್ಗಕ್ಕಿಂತಲೂ ಹರಿತದ ಆಯುಧಪಾಣಿಗಳ ರಕ್ಷಣೆಗೆ ಇಲ್ಲವೇ ಗುರಾಣಿ?

ಮಾಧ್ಯಮಶೋಧ-೧೫, ಹೊಸದಿಗಂತ, ೧೬-೦೩-೨೦೧೨

'ಪ್ರಜೆಗಿರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವೇನೂ ಪತ್ರಕರ್ತನಿಗೆ ಬೇಕಿಲ್ಲ; ಆದರೆ ಅದಕ್ಕಿಂತ ಕಡಮೆಯಾಗಿಯೂ ಇರಬಾರದು...’ ಹೀಗೆಂದು ಕನ್ನಡ ಪತ್ರಿಕಾರಂಗದ ಭೀಷ್ಮ ಡಿ.ವಿ.ಜಿ.ಯವರು ಬರೆದಿಟ್ಟು ಸರಿಸುಮಾರು ೬೦ ವರ್ಷಗಳೇ ಉರುಳಿಹೋಗಿವೆ. ಆದರೆ ತಮ್ಮದೇ ದೇಶದಲ್ಲಿ ಮುಂದೊಂದು ದಿನ ಇದೇ ಸ್ವಾತಂತ್ರ್ಯದ ಅಣಕವೆಂಬಹಾಗೆ ಹತ್ತಾರು ಪತ್ರಕರ್ತರ ತಲೆಗಳೇ ಉರುಳಬಹುದೆಂದು ಅವರು ಊಹಿಸಿದ್ದರೇ? ಖಂಡಿತ ಇರಲಾರದು.

'ಇಂಡಿಯಾ ದೇಶದಲ್ಲಿ ಪತ್ರಿಕೆಗಳಿಗೆ ಇನ್ನೂ ಅಷ್ಟು ನಿರ್ಭಯ ಸ್ಥಿತಿ ಬಂದಿಲ್ಲ. ಈ ದೇಶದಲ್ಲಿಯೂ ಅನೇಕ ಮಂದಿ ಪತ್ರಕರ್ತರು ಸರಕಾರದ ಮೇಲೆ ತಾವು ಮಾಡಿದ ಟೀಕೆಗಳಿಗಾಗಿ ಕಾರಾಗೃಹವನ್ನು ಸೇರಿ ಕಷ್ಟಪಟ್ಟಿದ್ದಾರೆ... ಎಂಥಾ ಸಂದರ್ಭದಲ್ಲಿ, ಯಾವ ಹೊಸ ನೆವದಿಂದ, ಎಂಥಾ ಹೊಸ ಅಪಾಯ ಬಂದೀತೋ ಎಂಬ ಭಯ ಪತ್ರಿಕೆಗಳಿಗೆ ಸಂಪೂರ್ಣವಾಗಿ ಹೋಗಿಲ್ಲ...’ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಡಿ.ವಿ.ಜಿ. ಬರೆದ ಮಾತಿದು.

ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸುವ, ಪತ್ರಿಕಾ ಧರ್ಮವನ್ನು ಎತ್ತಿಹಿಡಿಯುವ ಆಗಿನ ಪತ್ರಕರ್ತರ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷರು ಬಳಸಿದ ತಂತ್ರಗಳು, ಜಾರಿಗೆ ತಂದ ಕಾನೂನು ಕಟ್ಟಳೆಗಳು ಅಸಂಖ್ಯ. ಅವರಿಂದಾಗಿ ಜೈಲಿಗೆ ಹೋದ, ಗಡೀಪಾರಾದ ಪತ್ರಕರ್ತರು, ಮುಚ್ಚಿಹೋದ ಪತ್ರಿಕೆಗಳು ಕೂಡಾ ನೂರಾರು. ಡಿ.ವಿ.ಜಿ.ಯವರು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಬರೆದಾಗ ಅವರೆದುರು ಇದ್ದ ಸನ್ನಿವೇಶ ಈ ಬಗೆಯದ್ದು ಮಾತ್ರ. ಆಕಾಶದೆತ್ತರಕ್ಕೆ ಬೆಳೆದುನಿಂತಿರುವ ಈಗಿನ ಆಧುನಿಕ ಮಾಧ್ಯಮಲೋಕ ಅವರ ಕಲ್ಪನೆಯಲ್ಲಿತ್ತೋ ಗೊತ್ತಿಲ್ಲ, ಆದರೆ ಮುಂದೊಂದು ದಿನ ತಾವು ನಂಬಿರುವ ವೃತ್ತಿಗಾಗಿ ಪತ್ರಕರ್ತರು ತಮ್ಮ ಜೀವವನ್ನೇ ಸಾಲುಸಾಲಾಗಿ ಬಲಿಕೊಡಬೇಕಾದ ಪರಿಸ್ಥಿತಿ ಎದುರಾದೀತು ಎಂದು ಮಾತ್ರ ಆ ಮಹಾನುಭಾವ ಊಹಿಸಿರಲಿಕ್ಕಿಲ್ಲ.

ಪತ್ರಕರ್ತರು ಎದುರಿಸುವ ಪ್ರಾಣಬೆದರಿಕೆ-ಹಲ್ಲೆಗಳು ತೀರಾ ಸಾಮಾನ್ಯವಾಗುತ್ತಿರುವ ದಿನಗಳಲ್ಲೇ ತಮ್ಮ ಬರವಣಿಗೆಗಳಿಗಾಗಿ ಪ್ರಾಣಕಳೆದುಕೊಳ್ಳುತ್ತಿರುವ ಪತ್ರಕರ್ತರ ಸಂಖ್ಯೆಯೂ ಒಂದೇ ಸಮನೆ ಏರುತ್ತಿದೆ. ಇರಾಕ್, ಸೊಮಾಲಿಯಾ, ಫಿಲಿಫೈನ್ಸ್‌ನಂತಹ ದೇಶಗಳಲ್ಲಿ ಅತಿಯಾಗಿದ್ದ ಪತ್ರಕರ್ತರ ಹತ್ಯಾಪ್ರಕರಣಗಳು ಈಚಿನ ವರ್ಷಗಳಲ್ಲಿ ಭಾರತದಲ್ಲೂ ತೀವ್ರಸ್ವರೂಪ ಪಡೆದುಕೊಳ್ಳುತ್ತಿರುವುದು ಮಾಧ್ಯಮಲೋಕವನ್ನು ದಿಗ್ಭ್ರಮೆಗೊಳಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸುಮಾರು ೩೦ ಪತ್ರಕರ್ತರು ಕೊಲೆಯಾಗಿದ್ದಾರೆ ಎಂಬುದು ಆತಂಕಕಾರಿ ಅಂಶ. ಅದರಲ್ಲೂ ೨೦೧೦ರಿಂದೀಚೆಗೆ ಪ್ರಾಣಕಳಕೊಂಡವರು ಐದು ಮಂದಿ. ಪ್ರಭುತ್ವದ ವಿರುದ್ಧ ಬರೆಯುವ ಪತ್ರಕರ್ತರು ನಿರ್ಬಂಧಗಳನ್ನೆದುರಿಸುವುದು ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ವಿಚಾರ; ಆದರೆ ಖಾಸಗಿ ಮಾಫಿಯಾಗಳ, ಭೂಗತ ಪಾತಕಿಗಳ ವಕ್ರದೃಷ್ಟಿಗೂ ಪತ್ರಕರ್ತರು ಬಲಿಯಾಗುತ್ತಿರುವುದು ಈಚಿನ ವರ್ಷಗಳ ಕಳವಳಕಾರಿ ಬೆಳವಣಿಗೆ. ಇದಕ್ಕಿಂತಲೂ ದುರದೃಷ್ಟಕರ ಸಂಗತಿಯೆಂದರೆ ಬಹುತೇಕ ಪತ್ರಕರ್ತರ ಹತ್ಯೆಗಳು ಇತ್ಯರ್ಥಗೊಳ್ಳದೇ ಹೋಗುತ್ತಿರುವುದು ಅಥವಾ ನಿಜವಾದ ಪಾತಕಿಗಳಿಗೆ ಶಿಕ್ಷೆಯಾಗದೇ ಇರುವುದು. ಕಳೆದ ೨೩ ವರ್ಷಗಳಲ್ಲಿ ಅಸ್ಸಾಂ ಒಂದರಲ್ಲೇ ೨೭ ಪತ್ರಕರ್ತರು ಕೊಲೆಯಾಗಿದ್ದಾರೆ; ಇವುಗಳಲ್ಲಿ ಒಂದೇ ಒಂದು ಪ್ರಕರಣದಲ್ಲೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ! ಅನೇಕ ಸಂದರ್ಭಗಳಲ್ಲಿ ನೈಜಮಾಹಿತಿ, ಸಾಕ್ಷಿ-ಪುರಾವೆಗಳಿದ್ದರೂ ಪತ್ರಕರ್ತರನ್ನು ಕೊಲೆ ಮಾಡಿದವರನ್ನು ಹಿಡಿದು ಶಿಕ್ಷಿಸುವುದು ಪೋಲೀಸರಿಂದ ಸಾಧ್ಯವಾಗುತ್ತಿಲ್ಲ. ಖಾಸಗಿಯವರ ಕಪಿಮುಷ್ಟಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ.

೨೦೧೦ ಡಿಸೆಂಬರ್‌ನಲ್ಲಿ ದೈನಿಕ್ ಭಾಸ್ಕರ್ ಪತ್ರಿಕೆಯ ಹಿರಿಯ ಪತ್ರಕರ್ತ ಸುಶೀಲ್ ಪಾಠಕ್‌ರನ್ನು ಛತ್ತೀಸ್‌ಘಡದಲ್ಲಿ ಗುಂಡಿಟ್ಟು ಕೊಲ್ಲಲಾಯಿತು. ಬಿಲಾಸ್‌ಪುರ್‌ನ ಪ್ರೆಸ್ ಕ್ಲಬ್ ಕಾರ್ಯದರ್ಶಿಯಾಗಿದ್ದ ಪಾಠಕ್ ಕೊಲೆ ಹಿಂದೆ ರಿಯಲ್ ಎಸ್ಟೇಟ್ ಕೈವಾಡವಿದೆಯೆಂದು ಶಂಕಿಸಲಾಗಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅಲ್ಲಿನ ಸರ್ಕಾರ ಬರೋಬ್ಬರಿ ಮೂರು ತಿಂಗಳು ತೆಗೆದುಕೊಂಡಿತು.ಇದಾಗಿ ಕೇವಲ ಒಂದೇ ತಿಂಗಳಲ್ಲಿ ನಯೀ ದುನಿಯಾ ಪತ್ರಿಕೆಯ ವರದಿಗಾರ ಉಮೇಶ್ ರಜಪೂತ್‌ರನ್ನು ಮತ್ತದೇ ಛತ್ತೀಸ್‌ಘಡದ ಹಳ್ಳಿಯೊಂದರಲ್ಲಿ ಹತ್ಯೆ ಮಾಡಲಾಯಿತು. ಆದಿವಾಸಿ ಮಹಿಳೆಯೊಬ್ಬರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವಲ್ಲಿ ವೈದ್ಯ ತೋರಿದ ನಿರ್ಲಕ್ಷ್ಯ ಆಕೆಯ ಸಾವಿನಲ್ಲಿ ಕೊನೆಯಾಗಿದ್ದನ್ನು ವರದಿ ಮಾಡಿದ್ದೇ ರಜಪೂತ್ ಕೊಲೆಗೆ ಕಾರಣ. ಈ ಪ್ರಕರಣದಲ್ಲಿ ಕೊಲೆ ಮಾಡಿದವರ ಬಗ್ಗೆ ಸಾಕಷ್ಟು ಪುರಾವೆ ಇದ್ದರೂ ಪೋಲೀಸರು ನಿಗೂಢ ಮೌನಕ್ಕೆ ಶರಣಾಗಿದ್ದರು.

ಕಳೆದ ವರ್ಷ ಜೂನ್‌ನಲ್ಲಿ ನಡೆದ ಮಿಡ್ ಡೇ ಪತ್ರಿಕೆಯ ತನಿಖಾ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರ ಹತ್ಯೆ ಪ್ರಕರಣ, ಮೊನ್ನೆಮೊನ್ನೆ ಫೆಬ್ರವರಿಯಲ್ಲಿ ನಡೆದ ಹವ್ಯಾಸಿ ಪತ್ರಕರ್ತ ಚಂದ್ರಿಕಾರಾಯ್ ಅವರ ಕೊಲೆ ಇನ್ನೂ ಹಸಿಹಸಿಯಾಗಿಯೇ ಜನಮಾನಸದಲ್ಲಿ ಇದೆ. ಡೇ ಕೊಲೆ ಪ್ರಕರಣದ ಹಿಂದೆ ತೈಲ ಮಾಫಿಯಾ, ಭೂಗತ ಜಗತ್ತು ಜಾಗೂ ಭ್ರಷ್ಟ ಪೋಲೀಸ್ ವ್ಯವಸ್ಥೆಯ ಬಗ್ಗೆ ಮಾತುಗಳು ಕೇಳಿ ಬಂದಿದ್ದು, ಈವರೆಗೆ ೧೧ ಮಂದಿಯ ಬಂಧನವಾಗಿದೆ; ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೋ ಅಥವಾ ಯಾವುದೋ ಒಂದು ದಿನ ಯಾರಿಗೂ ಗೊತ್ತಾಗದಂತೆ ಕಡತಕ್ಕೆ ಗೆದ್ದಲು ಹಿಡಿಯುತ್ತದೋ ಗೊತ್ತಿಲ್ಲ. ಚಂದ್ರಿಕಾರಾಯ್ ಅವರ ಕೊಲೆ ಪ್ರಕರಣವನ್ನು ಕೂಡಾ ಹಳ್ಳಹಿಡಿಸುವ ಪ್ರಯತ್ನಗಳು ಆರಂಭದಿಂದಲೇ ನಡೆದಿವೆ. ಸ್ಥಳೀಯ ಕಲ್ಲಿದ್ದಲು ಮಾಫಿಯಾದ ಕೈವಾಡದ ಬಗ್ಗೆ ಮೊದಲಿಗೇ ಮಾತುಗಳು ಕೇಳಿಬಂದರೂ, ಅದನ್ನು ವೈಯುಕ್ತಿಕ ಜಗಳದ ಮಟ್ಟಕ್ಕೆ ತಂದು ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನಗಳು ನಂತರದ ಹಂತದಲ್ಲಿ ನಡೆದಿವೆ.

ಮಧ್ಯಪ್ರದೇಶದ ರೇವಾ ಪ್ರದೇಶದಲ್ಲಿ ಮೀಡಿಯಾ ರಾಜ್ ಎಂಬ ಸಣ್ಣ ವಾರಪತ್ರಿಕೆಯೊಂದನ್ನು ನಡೆಸುತ್ತಿದ್ದ ರಾಜೇಶ್ ಮಿಶ್ರಾ ಎಂಬವರನ್ನು ಅದೇ ಊರಿನ ಇನ್ನೊಂದು ಸಾಪ್ತಾಹಿಕದ ಸಂಪಾದಕ ರಜನೀಶ್ ಬ್ಯಾನರ್ಜಿ ಎಂಬಾತ ಕೊಲೆ ಮಾಡಿದ್ದು ಇದೇ ತಿಂಗಳಲ್ಲಿ ವರದಿಯಾಗಿದೆ. ಮೇಲ್ನೋಟಕ್ಕೆ ಇದು ಎರಡು ಪತ್ರಿಕೆಗಳ ನಡುವಿನ ಜಗಳದಂತೆ ಕಂಡರೂ, ಹತ್ಯೆಯ ಹಿಂದಿನ ಕಾರಣ ಬ್ಯಾನರ್ಜಿ ಕುಟುಂಬ ನಡೆಸುತ್ತಿದ್ದ ಖಾಸಗಿ ಶಾಲೆಗಳಲ್ಲಿನ ಅವ್ಯವಹಾರಗಳ ಬಗ್ಗೆ ಮಿಶ್ರಾ ಅವರು ತಮ್ಮ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದದ್ದು ಎಂಬುದು ಈಗ ಸಾರ್ವಜನಿಕಗೊಂಡಿದೆ.

ಒಟ್ಟಿನಲ್ಲಿ ಪತ್ರಕರ್ತರ ವಿರುದ್ಧ ಖಾಸಗಿ ಪಟ್ಟಭದ್ರ ಹಿತಾಸಕ್ತಿಗಳ ಅಸಹನೆ ದಿನೇದಿನೇ ಮೇರೆಮೀರುತ್ತಿರುವುದು ಸ್ಪಷ್ಟವಾಗುತ್ತಿದೆ. ಅದರೊಂದಿಗೆ ಈ ಬಗೆಯ ಪ್ರಕರಣಗಳು ಇತ್ಯರ್ಥಗೊಳ್ಳದಂತೆ ಯೋಜಿತ ಪ್ರಯತ್ನಗಳು ನಡೆಯುತ್ತಿರುವುದೂ ನಿಚ್ಚಳವಾಗುತ್ತಿದೆ. ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಎಂಬ ಅಂತಾರಾಷ್ಷ್ರೀಯ ಸಂಘಟನೆಯ ವರದಿಯ ಪ್ರಕಾರ ೧೯೯೨ರಿಂದೀಚೆಗೆ ವಿಶ್ವದಾದ್ಯಂತ ಒಟ್ಟು ೮೮೭ ಪತ್ರಕರ್ತರು ಹತ್ಯೆಗೀಡಾಗಿದ್ದಾರೆ; ಈ ಘಟನೆಗಳ ಪೈಕಿ ೫೫೪ ಪ್ರಕರಣಗಳು ಇನ್ನೂ ಬಗೆಹರಿದಿಲ್ಲ ಅಥವಾ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಈ ಬಗೆಯ ದುರಂತಗಳು ನಿರ್ದಿಷ್ಟವಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದೆ ಎಂಬ ವರದಿಗಳು ಬರುತ್ತಿದ್ದು, ಇದು ಇನ್ನೂ ಹೆಚ್ಚಿನ ಆತಂಕದ ಸಂಗತಿಯಾಗಿದೆ. ಶ್ರೀಲಂಕಾ, ಅಪ್ಘಾನಿಸ್ತಾನ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲದೆ ಭಾರತವೂ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂಬುದನ್ನು ಗಮನಿಸಬೇಕು. ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಇತ್ತೀಚೆಗೆ ಹೇಳಿರುವಂತೆ ಪತ್ರಕರ್ತರ ಹತ್ಯೆಗೆ ಸಂಬಂಧಿಸಿದ ಇತ್ಯರ್ಥಗೊಳ್ಳದ ಪ್ರಕರಣಗಳ ಸೂಚ್ಯಂಕದಲ್ಲಿ ಭಾರತದ ಸ್ಥಾನ ೧೩ರಿಂದ ೮ಕ್ಕೆ ಏರಿದೆ. ನಂಬರ್ ೧ ಸ್ಥಾನದಲ್ಲಿರುವ ಇರಾಕ್, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿರುವ ಸೊಮಾಲಿಯಾ ಹಾಗೂ ಫಿಲಿಫೈನ್ಸ್ ದೇಶಗಳ ಜತೆ ನಾವೇನು ಸ್ಪರ್ಧೆಗಿಳಿದಿದ್ದೇವೆಯೇ!

ವಿಶ್ವದಾದ್ಯಂತ ನಡೆಯುತ್ತಿರುವ ಈ ಬಗೆಯ ಘಟನೆಗಳಲ್ಲಿನ ಸಾಮಾನ್ಯ ಅಂಶವೆಂದರೆ, ಹತ್ಯೆಗೊಳಗಾಗುತ್ತಿರುವ ಪತ್ರಕರ್ತರ ಪೈಕಿ ಬಹುತೇಕರು ಸ್ಥಳೀಯರು. ಕೇವಲ ಶೇ. ೬ ಮಾತ್ರ ಅಂತಾರಾಷ್ಟ್ರೀಯ ವ್ಯಾಪ್ತಿಯವರು. ಅಲ್ಲದೆ, ಕೊಲೆಗೊಳಗಾಗುತ್ತಿರುವವರ ಪೈಕಿ ಶೇ. ೩೦ರಷ್ಟು ಮಂದಿ ರಾಜಕೀಯ ಬೀಟ್ ನೋಡಿಕೊಳ್ಳುತ್ತಿರುವವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಎಲ್ಲರೂ ಈ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪತ್ರಕರ್ತರ ಹತ್ಯೆಗಳು ಈ ಪ್ರಮಾಣದಲ್ಲಿ ಹೆಚ್ಚುತ್ತಾ ಹೋದರೆ, ಕಡೇಪಕ್ಷ ನಡೆದ ಪ್ರಕರಣಗಳ ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸವಾದರೂ ಆಗದಿದ್ದರೆ ಮಾಧ್ಯಮ ಜಗತ್ತಿನ ಶಕ್ತಿ ಸಾಮರ್ಥ್ಯಗಳ ಮೇಲೆ ಅಪಾರ ನಂಬಿಕೆಯಿಟ್ಟಿರುವ ನಾಗರಿಕ ಸಮಾಜದ ಗತಿಯೇನು? ಪತ್ರಿಕಾ ಮಾಧ್ಯಮದ ಆದರ್ಶ ಆಕರ್ಷಣೆಗಳಿಂದ ಅದರತ್ತ ಮುಖಮಾಡುತ್ತಿರುವ ಹೊಸತಲೆಮಾರಿನ ಪತ್ರಕರ್ತರ ಬದುಕಿಗೆ ಭರವಸೆಯೇನು? ಖಡ್ಗಕ್ಕಿಂತಲೂ ಹರಿತವಾದ ಆಯುಧ ಹಿಡಿದವರು ಎಂದು ಮೊದಲಿನಿಂದಲೂ ಸಮಾಜದಿಂದ ಹೊಗಳಿಸಿಕೊಂಡ ಈ ಪ್ರಜಾಸತ್ತೆಯ ಸೈನಿಕರನ್ನು ಕಾಪಾಡುವ ಗುರಾಣಿ ಒದಗಿಸುವವರು ಯಾರು?

ಶುಕ್ರವಾರ, ಮಾರ್ಚ್ 2, 2012

ಸದನಕ್ಕೊಂದು ಪ್ರತ್ಯೇಕ ಚಾನೆಲ್: ಯಾಕಿಷ್ಟು ಗೊಂದಲ?

ಮಾಧ್ಯಮಶೋಧ, ಹೊಸದಿಗಂತ, ಮಾರ್ಚ್ 01, 2012


ಸುದ್ದಿ ಮಾಧ್ಯಮಗಳ ಹಸಿವಿಗೆ ಈಚಿನ ದಿನಗಳಲ್ಲಿ ಸಾಕಷ್ಟು ಆಹಾರ ಒದಗಿಸುತ್ತಿದ್ದ ರಾಜ್ಯ ಸರ್ಕಾರ ಈಗ ತಾನೇ ಸ್ವತಃ ಹೊಸದೊಂದು ಚಾನೆಲ್ ಆರಂಭಿಸುವ ಪ್ರಸ್ತಾಪ ಮಾಡಿ ಹಲವು ರೀತಿಯ ಚರ್ಚೆ-ವಾದ-ವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಚರ್ಚೆ ಆರಂಭವಾಗಿರುವುದು ಮತ್ತೊಂದು ಚಾನೆಲ್ ಬೇಕೇ ಬೇಡವೇ ಎಂಬ ಬಗ್ಗೆ ಅಲ್ಲ; ಬದಲಾಗಿ ಈ ಚಾನೆಲ್ ಆರಂಭಿಸುವ ನೆಪದಲ್ಲಿ ಸರ್ಕಾರ ರಾಜ್ಯ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳಿಂದ ಖಾಸಗಿ ವಾಹಿನಿಗಳನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದೆಯೇ ಎಂಬ ಬಗ್ಗೆ.


ಗೊಂದಲಗಳಿರುವಲ್ಲಿ ವಾದ-ವಿವಾದ, ಟೀಕೆ-ಟಿಪ್ಪಣಿ ಸಾಮಾನ್ಯ. ರಾಜ್ಯ ಸರ್ಕಾರದ ಹೊಸ ಪ್ರಸ್ತಾಪ ಬಹಿರಂಗಗೊಂಡಿರುವ ಸನ್ನಿವೇಶ ಹಾಗೂ ಅದರ ಸುತ್ತಮುತ್ತಲಿನ ಗೊಂದಲಗಳಿಂದಾಗಿಯೇ ಸದ್ಯದ ವಾದ-ವಿವಾದಗಳು ಹುಟ್ಟಿಕೊಂಡಿವೆಯೆಂಬುದು ಸತ್ಯ. ಆರಂಭದಿಂದಲೇ ಸರ್ಕಾರ ತನ್ನ ಪ್ರಸ್ತಾಪಿತ ವಾಹಿನಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿರುತ್ತಿದ್ದರೆ ಯಾವ ಸಮಸ್ಯೆಯೂ ಉದ್ಭವಿಸುತ್ತಿರಲಿಲ್ಲ ಅಥವಾ ಸಮಸ್ಯೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.


ಮುಖ್ಯವಾಗಿ, ಸರ್ಕಾರದ ಹೊಸ ಯೋಜನೆ ಪ್ರಸ್ತಾಪವಾಗಿರುವುದು ಸಚಿವರ ಅಶ್ಲೀಲ ಚಿತ್ರ ವೀಕ್ಷಣೆ ಅರೋಪದ ಅಡಾವುಡಿಗಳು ಇನ್ನೂ ಹಸಿಹಸಿಯಾಗಿರುವಾಗಲೇ. ಈ ಪ್ರಸ್ತಾಪ ಹೊಸತೇನೂ ಅಲ್ಲ, ಮೂರು ವರ್ಷಗಳ ಹಿಂದೆಯೇ ಈ ಬಗ್ಗೆ ಚಿಂತನೆ ನಡೆಸಲಾಗಿತ್ತು ಮತ್ತು ಈಗ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಎ. ರಾಮದಾಸ್ ಅವರ ನೇತೃತ್ವದಲ್ಲಿ ಈ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿತ್ತು ಎಂದು ಹೇಳಲಾಗುತ್ತಿದ್ದರೂ, ಮಾಧ್ಯಮಗಳಾಗಲೀ ಜನರಾಗಲೀ ಇದನ್ನು ನಂಬುವ ಸನ್ನಿವೇಶದಲ್ಲಿ ಇಲ್ಲ. ಎಲ್ಲರೂ ಮೊನ್ನೆಮೊನ್ನೆ ಸುದ್ದಿವಾಹಿನಿಗಳ ಮೂಲಕ ಜಗಜ್ಜಾಹೀರಾಗಿರುವ ಸಚಿವರ ನೀಲಿಚಿತ್ರ ವೀಕ್ಷಣೆಯ ಆರೋಪ ಮತ್ತು ನಂತರದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲೇ ಯೋಚಿಸುವ ಪರಿಸ್ಥಿತಿ ಇದೆ. ಇದರಲ್ಲಿ ಅತಿಶಯವಾದದ್ದೇನೂ ಇಲ್ಲ. ಪ್ರಸ್ತಾಪಿತ ವಾಹಿನಿಯ ಬಗ್ಗೆ ಜನರಿಗೆ ಮೊದಲೇ ಮಾಹಿತಿ ಇರುತ್ತಿದ್ದರೆ ಅವರೂ ಆತುರಾತುರವಾಗಿ ಅಭಿಪ್ರಾಯಗಳನ್ನು ತಳೆಯುವ ಪ್ರಮೇಯ ಬರುತ್ತಿರಲಿಲ್ಲ.


ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗಳಿಗಾಗಿ ಪ್ರತ್ಯೇಕ ಚಾನೆಲ್ ಆರಂಭಿಸುವ ಸರ್ಕಾರದ ಪ್ರಸ್ತಾಪ ಆರಂಭದಲ್ಲಿ ಒಂದು ವದಂತಿಯಾಗಿ ಹಬ್ಬಿತು. ಒಂದೆರಡು ಪತ್ರಿಕೆಗಳಲ್ಲಿ ಇದು ಪ್ರಕಟವಾದಾಗ ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಬಗೆಯ ಸ್ಪಷ್ಟೀಕರಣ ನೀಡದೆ ಸುಮ್ಮನಿದ್ದುಬಿಟ್ಟರು. ಖಾಸಗಿ ಸುದ್ದಿವಾಹಿನಿಗಳಲ್ಲಿ ಈ ಕುರಿತ ಚರ್ಚಾವೇದಿಕೆಗಳು ಏರ್ಪಟ್ಟಾಗಲೂ ಸಂಬಂಧಿಸಿದವರು ಸರಿಯಾದ ರೀತಿಯಲ್ಲಿ ಮಾಹಿತಿ ನೀಡದೆ ಇನ್ನಷ್ಟು ಗೊಂದಲವೇರ್ಪಡಿಸಿದರು. ಕನ್ನಡದ ಸುದ್ದಿ ವಾಹಿನಿಯೊಂದು ಇಂತಹದೊಂದು ಚರ್ಚೆ ನಡೆಸುತ್ತಾ ಖುದ್ದು ಸ್ಪೀಕರ್ ಕೆ. ಜಿ. ಬೋಪಯ್ಯನವರಿಗೆ ದೂರವಾಣಿ ಕರೆ ಮಾಡಿ ಸ್ಪಷ್ಟೀಕರಣ ಕೇಳಿದರೆ ಅವರೋ ’ಯಾರು ನಿಮಗೆ ಈ ಥರ ಮಾಹಿತಿ ನೀಡಿದ್ದಾರೋ ಅವರನ್ನೇ ಕೇಳಿ ಹೋಗಿ. ನನಗೇನೂ ಗೊತ್ತಿಲ್ಲ’ ಎಂದು ಹೇಳಿ ಫೋನ್ ಇಟ್ಟುಬಿಟ್ಟರು. ಮುಖ್ಯಮಂತ್ರಿ, ಸಂಸದೀಯ ವ್ಯವಹಾರಗಳ ಸಚಿವರಾದಿಯಾಗಿ ಸಂಬಂಧಪಟ್ಟವರ‍್ಯಾರಿಂದಲೂ ಸ್ಪಷ್ಟ ಚಿತ್ರಣ ದೊರೆಯದೇ ಹೋಯಿತು. ಮೂರು ವರ್ಷಗಳ ಹಿಂದೆಯೇ ಇಂತಹದೊಂದು ಪ್ರಸ್ತಾಪ ಇತ್ತು ಎಂದು ಅವರು ಹೇಳಿದ್ದರೆ ಗೊಂದಲ ಆ ಹಂತದಲ್ಲಿಯೇ ಪರಿಹಾರವಾಗುತ್ತಿತ್ತು.


ಪ್ರಸ್ತಾಪವನ್ನು ನಿರಾಕರಿಸುತ್ತಲೇ ಬಂದ ಸರ್ಕಾರ ಮೊನ್ನೆ ಮಂಗಳವಾರ ಇದ್ದಕ್ಕಿದ್ದಂತೆ ಎರಡೂ ಸದನಗಳ ಮುಖ್ಯಸ್ಥರನ್ನು ಸೇರಿಸಿಕೊಂಡು ಪ್ರತ್ಯೇಕ ಚಾನೆಲ್ ಆರಂಭಿಸುವ ಬಗ್ಗೆ ಸಭೆ ನಡೆಸಿದೆ. ಹೊಸ ವಾಹಿನಿ ಆರಂಭಿಸುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಯಿತೆಂದೂ, ಇದನ್ನು ಲೋಕಸಭೆ ಹಾಗೂ ರಾಜ್ಯಸಭೆ ಟಿವಿಗಳ ಮಾದರಿಯಲ್ಲಿ ಆರಂಭಿಸುವ ಕುರಿತು ಆಯಾ ಸದನಗಳ ಮುಖ್ಯಸ್ಥರೊಂದಿಗೆ ಸದ್ಯದಲ್ಲೇ ಚಿಂತನೆ ನಡೆಸಲಾಗುವುದೆಂದೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಹೊಸ ವಾಹಿನಿ ಸ್ಥಾಪನೆಯಾದರೆ ಸದನದೊಳಗೆ ಇತರ ಖಾಸಗಿ ಚಾನೆಲ್‌ಗಳ ಪ್ರವೇಶವನ್ನು ನಿಷೇಧಿಸುವ ಯೋಜನೆಯನ್ನೇನೂ ಸರ್ಕಾರ ಹೊಂದಿಲ್ಲ ಎಂದೂ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಹೇಳಿಕೊಂಡಿದ್ದಾರೆ. ಈ ಸ್ಪಷ್ಟೀಕರಣವನ್ನು ಮೊದಲೇ ನೀಡಿರುತ್ತಿದ್ದರೆ ಯಾವುದೇ ಗೊಂದಲ ಸೃಷ್ಟಿಯಾಗುವ ಸನ್ನಿವೇಶ ಇರಲಿಲ್ಲ. ಏಕೆಂದರೆ, ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆಯ ಆರೋಪ ಜಗಜ್ಜಾಹೀರಾದದ್ದೇ ಖಾಸಗಿ ವಾಹಿನಿಗಳ ಮೂಲಕವಾದ್ದರಿಂದ ಮತ್ತು ಅದಿನ್ನೂ ಚರ್ಚೆಯಲ್ಲಿರುವಾಗಲೇ ಸರ್ಕಾರವು ಸದನದ ಕಲಾಪಗಳಿಗಾಗಿಯೇ ಪ್ರತ್ಯೇಕ ಚಾನೆಲ್ ರೂಪಿಸುತ್ತಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಜನರು ಅನುಮಾನ ಪಡದೆ ಬೇರೆ ದಾರಿಯೇ ಇರಲಿಲ್ಲ.


ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಒಂದು ಪ್ರತ್ಯೇಕ ಚಾನೆಲ್ ಆರಂಭವಾದರೆ ಅದರಲ್ಲಿ ವಿರೋಧಿಸುವಂಥದ್ದೇನೂ ಇಲ್ಲ. ಲೋಕಸಭೆ ಹಾಗೂ ರಾಜ್ಯಸಭೆಗಳಿಗಾಗಿಯೇ ಪ್ರತ್ಯೇಕ ಚಾನೆಲ್‌ಗಳು ಸ್ಥಾಪನೆಯಾಗಿರುವುದೂ ಇದೇ ಉದ್ದೇಶಕ್ಕೆ. ಸಂಸತ್ ಕಲಾಪಗಳು ನಡೆಯದ ಸಮಯದಲ್ಲಿಯೂ ಇವು ಪ್ರಚಲಿತ ವಿದ್ಯಮಾನಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ಚರ್ಚೆಗಳನ್ನು ಏರ್ಪಡಿಸುವ ಮೂಲಕ ಇತರ ಚಾನೆಲ್‌ಗಳಿಂದ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಸಂಸತ್ತಿನ ಸ್ವಂತ ಬಜೆಟ್ ಮೂಲಕವೇ ಇವುಗಳು ಕಾರ್ಯಾಚರಿಸುತ್ತಿರುವುದರಿಂದ ಇವುಗಳಿಗೆ ಟಿಆರ್‌ಪಿ ಅಥವಾ ಜಾಹೀರಾತುಗಳ ಹಂಗಿಲ್ಲ. ಇದೇ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಸಮಾಲೋಚನೆ ನಡೆಸಿದೆಯೆಂದಾದರೆ ಅದು ಆಕ್ಷೇಪಾರ್ಹವಾದದ್ದೇನೂ ಅಲ್ಲ; ಆದರೆ ಖಾಸಗಿ ವಾಹಿನಿಯವರು ನೇರವಾಗಿ ಕಲಾಪಗಳನ್ನು ಸೆರೆಹಿಡಿಯಬಾರದು, ಸರ್ಕಾರಿ ನಿಯಂತ್ರಿತ ಚಾನೆಲ್ ನೀಡುವ ಎಡಿಟೆಡ್ ತುಣುಕುಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂಬ ಷರತ್ತುಗಳು ಜಾರಿಯಾದರೆ ಮಾತ್ರ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ಕ್ರಮವಾಗುತ್ತದೆ ಮತ್ತು ಈಗಾಗಲೇ ಅಸಂಸದೀಯವಾಗಿ ನಡೆದುಕೊಂಡಿರುವ ಮತ್ತು ನಡೆದುಕೊಳ್ಳುತ್ತಿರುವ ಜನನಾಯಕರಿಗೆ ರಕ್ಷಣೆ ಮತ್ತು ಪ್ರೋತ್ಸಾಹ ನೀಡಿದಂತಾಗುತ್ತದೆ ಅಷ್ಟೆ.


ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬ ಮನ್ನಣೆಗೆ ಪಾತ್ರವಾಗಿದ್ದರೂ ಮಾಧ್ಯಮ ಸ್ವಾತಂತ್ರ್ಯದ ವಿಷಯಕ್ಕೆ ಬಂದರೆ ಭಾರತದ ಸ್ಥಾನಮಾನ ಅಷ್ಟೊಂದು ಆಶಾದಾಯಕವಾಗಿಲ್ಲ ಎಂದೇ ಹೇಳಬೇಕು. ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಎಂಬ ಸಂಘಟನೆ ಪ್ರತಿವರ್ಷ ಜಾಗತಿಕವಾಗಿ ಸಮೀಕ್ಷೆ ನಡೆಸಿ ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ಬೇರೆಬೇರೆ ದೇಶಗಳು ಯಾವಯಾವ ಸ್ಥಾನದಲ್ಲಿವೆ ಎಂಬ ಬಗ್ಗೆ ವರದಿ ನೀಡುತ್ತದೆ. ಪ್ರಸಕ್ತ ಸಾಲಿನಲ್ಲಿ ಈ ಸಮೀಕ್ಷೆಗೊಳಪಟ್ಟಿರುವ ಜಗತ್ತಿನ ೧೭೯ ದೇಶಗಳ ಪೈಕಿ ಭಾರತ ೧೩೧ನೇ ರ‍್ಯಾಂಕ್‌ನಲ್ಲಿದೆ ಎಂಬುದು ಸಂತಸದ ವಿಷಯವೇನೂ ಅಲ್ಲ. ಫಿನ್‌ಲ್ಯಾಂಡ್, ನಾರ್ವೆ, ನೆದರ್‌ಲ್ಯಾಂಡ್ಸ್, ಆಸ್ಟ್ರಿಯಾದಂತಹ ದೇಶಗಳು ಮೊದಲ ಸ್ಥಾನಗಳನ್ನು ಪಡೆದಿದ್ದರೆ, ಎರಿತ್ರಿಯಾ, ಉತ್ತರ ಕೊರಿಯಾ, ಸಿರಿಯಾ, ಇರಾನ್, ಈಜಿಪ್ಟ್ ದೇಶಗಳು ಕೊನೆಯ ಸ್ಥಾನದಲ್ಲಿವೆ. ೨೦೦೨ರಲ್ಲಿ ಭಾರತ ಈ ಪಟ್ಟಿಯಲ್ಲಿ ೮೦ನೇ ಸ್ಥಾನ ಗಳಿಸಿತ್ತು. ಹತ್ತೇ ವರ್ಷಗಳಲ್ಲಿ ಇದು ೧೩೧ಕ್ಕೆ ಕುಸಿದಿದೆ ಎಂಬುದು ಆತಂಕಕಾರೀ ಸಂಗತಿಯಲ್ಲವೇ?


ಮಾಧ್ಯಮ ಸ್ವಾತಂತ್ರ್ಯದ ರ‍್ಯಾಂಕ್ ಪಟ್ಟಿಯಲ್ಲಿ ಭಾರತದ ಕುಸಿತವನ್ನು ಕರ್ನಾಟಕದ ವಿದ್ಯಮಾನಗಳ ಹಿನ್ನೆಲೆಯಲ್ಲೇನೂ ನೋಡಬೇಕಾಗಿಲ್ಲವಾದರೂ, ಚಾನೆಲ್‌ಗಳನ್ನು ನಿರ್ದಿಷ್ಟವಾಗಿ ನಿರ್ಬಂಧಿಸುವ ಯೋಚನೆಗಳೇನಾದರೂ ಇದ್ದರೆ, ಅವು ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಪರಿಕಲ್ಪನೆಗೆ ತೀವ್ರ ಧಕ್ಕೆ ತರುವ ಸಂಗತಿ ಎಂಬುದನ್ನು ಮರೆಯಬಾರದು. ಒಂದೆಡೆ ಅಂತರ್ಜಾಲ ಮಾಧ್ಯಮವನ್ನು ಸೆನ್ಸಾರ್‌ಗೊಳಪಡಿಸುವ ಪ್ರಸ್ತಾಪ ಕೇಂದ್ರದಿಂದ ಬಂದಿದ್ದರೆ, ಇನ್ನೊಂದೆಡೆ ಸದನಗಳ ಕಲಾಪಕ್ಕೆ ಖಾಸಗಿ ಮಾಧ್ಯಮಗಳ ಪ್ರವೇಶ ನಿರ್ಬಂಧಿಸುವ ವದಂತಿ ನಮ್ಮ ರಾಜ್ಯದಿಂದಲೇ ಹಬ್ಬಿದೆ. ಸದನದ ಗಾಂಭೀರ್ಯತೆ, ಘನತೆ ಕಾಪಾಡುವ ಚಿಂತನೆ ಅದರಲ್ಲಿ ಭಾಗವಹಿಸುವವರಿಂದಲೇ ಬರಬೇಕೇ ಹೊರತು, ಮಾಧ್ಯಮಗಳನ್ನು ನಿರ್ಬಂಧಿಸುವ ಮೂಲಕ ಅಲ್ಲ. ಒಳ್ಳೆಯ ಯೋಜನೆಗಳಿಂದ ನಾವು ಇತರರಿಗೆ ಮಾದರಿಯಾಗೋಣ; ಮಾಧ್ಯಮ ಸ್ವಾತಂತ್ರ್ಯ ಪಟ್ಟಿಯಲ್ಲಿ ನಮಗಿಂತಲೂ ಪಾತಾಳದಲ್ಲಿರುವ ಕೊರಿಯಾ, ಸಿರಿಯಾ, ಈಜಿಪ್ಟ್, ಇರಾನ್, ಅಪ್ಘಾನಿಸ್ತಾನ, ಪಾಕಿಸ್ತಾನ ನಮಗೆ ಮಾದರಿಯಾಗುವುದು ಬೇಡ.

ಶನಿವಾರ, ಫೆಬ್ರವರಿ 18, 2012

ತಯಾರಾಗುತ್ತಿದ್ದಾರೆ ಭಾರತೀಯ ಮುರ್ಡೋಕ್‌ಗಳು

ಮಾಧ್ಯಮಶೋಧ-13, ಹೊಸದಿಗಂತ 16-02-2012


ಮುರ್ಡೋಕ್‌ನಂತಹ ಜಾಗತಿಕ ಮಾಧ್ಯಮ ದೊರೆಗಳ ಬಗ್ಗೆ ಕಳವಳಪಡುತ್ತಿದ್ದ ಭಾರತೀಯ ಮಾಧ್ಯಮರಂಗ ಈಗ ತಾನೇ ಅಪ್ಪಟ ಸ್ವದೇಶಿ ಮುರ್ಡೋಕ್‌ಗಳ ಸೃಷ್ಟಿಗೆ ಕಾರಣವಾಗಿರುವುದು ವಿಪರ್ಯಾಸವೇ ಇರಬಹುದು; ಆದರೆ ಸತ್ಯವನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ.


ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಮಾಲೀಕ ಮುಕೇಶ್ ಅಂಬಾನಿ ನೆಟ್‌ವರ್ಕ್೧೮ ಹಾಗೂ ಟಿವಿ೧೮ ಸಮೂಹವನ್ನು ಭಾಗಶಃ ಖರೀದಿಸುವ ಮೂಲಕ ಮುರ್ಡೋಕ್ ಹಾದಿಯಲ್ಲಿ ಮೊದಲ ಹೆಜ್ಜೆ ಇರಿಸಿದ್ದಾರೆ. ಸುಮಾರು ರೂ. ೨,೧೦೦ ಕೋಟಿಗಳ ಈ ’ಮೆಗಾ ಡೀಲ್’ ಕಂಡು ಭಾರತೀಯ ಮಾಧ್ಯಮ ಮತ್ತು ವಾಣಿಜ್ಯ ರಂಗ ದಿಗ್ಭ್ರಮೆಗೊಂಡು ಕುಳಿತಿದೆ.


ಕೊಡುಕೊಳ್ಳುವಿಕೆ ವ್ಯವಹಾರ ಭಾರತೀಯ ಮಾಧ್ಯಮಕ್ಷೇತ್ರಕ್ಕೆ ಹೊಸತೇನೂ ಅಲ್ಲ. ಒಂದು ವೃತ್ತಪತ್ರಿಕಾ ಸಮೂಹ ಇನ್ನೊಂದನ್ನು ಭಾಗಶಃ ಅಥವಾ ಪೂರ್ತಿ ಖರೀದಿಸುವುದು, ಒಂದು ಚಾನೆಲ್ ಇನ್ನೊಂದರೊಂದಿಗೆ ವಿಲೀನವಾಗುವುದು ತೀರಾ ಹೊಸತೇನಲ್ಲ. ಇವೆಲ್ಲ ಇತ್ತೀಚಿನ ಕೆಲವು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಅಲ್ಲದೆ ಕೆಲವೇ ಕೆಲವು ಕೈಗಳಿಗೆ ದೇಶದ ಮಾಧ್ಯಮರಂಗದ ಲಗಾಮು ಹೋಗುತ್ತಿದೆ ಎಂಬ ಆತಂಕಭರಿತ ಚರ್ಚೆಯೂ ಜಾರಿಯಲ್ಲಿದೆ.


ಆದರೆ ಈಗ ಹೊಸ ಕಳವಳಕ್ಕೆ ಕಾರಣವಾಗಿರುವುದು ರಿಲಯನ್ಸ್‌ನಂತಹ ಭಾರೀ ಮಾಧ್ಯಮೇತರ ಉದ್ಯಮ ಕುಳ ಇಷ್ಟು ದೊಡ್ಡ ಮಟ್ಟದಲ್ಲಿ ಮಾಧ್ಯಮರಂಗಕ್ಕೆ ಪ್ರವೇಶ ಪಡೆದಿರುವುದು. ೨೦೦೮ರಲ್ಲೇ ರಿಲಯನ್ಸ್ ಕಂಪೆನಿ ದಕ್ಷಿಣದ ದೊಡ್ಡ ಕುಳ ರಾಮೋಜಿರಾವ್ ಒಡೆತನದ ಈಟಿವಿ ಸಮೂಹವನ್ನು ಭಾಗಶಃ ಖರೀದಿಸಿತ್ತಾದರೂ ಅದು ಇತ್ತೀಚಿನವರೆಗೂ ಅಧಿಕೃತವಾಗಿರಲಿಲ್ಲ. ಆಂಧ್ರ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ ರೆಡ್ಡಿ ನಿಧನಾನಂತರ ಅವರ ಪತ್ನಿ ವೈ. ಎಸ್. ವಿಜಯಲಕ್ಷ್ಮಿ ಆಂಧ್ರ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದಾಗಲೇ ಇದು ಸ್ಪಷ್ಟವಾಗಿ ಬೆಳಕಿಗೆ ಬಂದದ್ದು. ಕೃಷ್ಣ-ಗೋದಾವರಿ ಜಲಾನಯನ ಪ್ರದೇಶದಲ್ಲಿ ಹೇರಳವಾಗಿದ್ದ ನೈಸರ್ಗಿಕ ಅನಿಲ ಸಂಪನ್ಮೂಲದ ಮೇಲೆ ಕಣ್ಣಿಟ್ಟಿದ್ದ ಅಂಬಾನಿಗೆ ಸಹಾಯ ಹಸ್ತ ಚಾಚಿದ್ದವರು ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು. ನಾಯ್ಡು ಅವರಿಗೆ ರಾಮೋಜಿರಾವ್ ಖಾಸಾ ಸ್ನೇಹಿತ. ಹೀಗಾಗಿ, ರಾಮೋಜಿರಾವ್ ಅವರ ಮಾರ್ಗದರ್ಶಿ ಚಿಟ್‌ಫಂಡ್ ದಿವಾಳಿಯಂಚಿನಲ್ಲಿದ್ದಾಗ ಅಂಬಾನಿ ನಾಯ್ಡು ಅವರಿಗೆ ಪರೋಕ್ಷವಾಗಿ ಕೃತಜ್ಞತೆ ಅರ್ಪಿಸುವ ಅವಕಾಶ ಪಡೆದುಕೊಂಡರು. ಸುಮಾರು ರೂ. ೨,೬೦೦ ಕೋಟಿ ನೀಡಿ ರಾಮೋಜಿರಾವ್ ಒಡೆತನದ ಈಟಿವಿ ಚಾನೆಲ್‌ಗಳಲ್ಲಿ ಪಾಲು ಪಡೆದುಕೊಳ್ಳುವ ಮೂಲಕ ರಾಮೋಜಿಯವರನ್ನು ಸಂಕಷ್ಟದಿಂದ ಪಾರು ಮಾಡಿದರು. ಆಗ ಈಟಿವಿ ಸಮೂಹ ಅಂದರೆ ಉಷೋದಯ ಎಂಟರ್‌ಪ್ರೈಸಸ್ ಕೂಡ ರೂ. ೫೬.೬ ಕೋಟಿ ನಷ್ಟದಲ್ಲಿತ್ತು. ಈ ವ್ಯವಹಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಈಟಿವಿ ಸಮೂಹದ ಪ್ರಾದೇಶಿಕ ಸುದ್ದಿ ವಾಹಿನಿಗಳು ಹಾಗೂ ಮನರಂಜನಾ ಚಾನೆಲ್‌ಗಳಲ್ಲಿ ತಲಾ ಶೇ. ೧೦೦ ಹಾಗೂ ತೆಲುಗು ಚಾನೆಲ್‌ಗಳಲ್ಲಿ ಶೇ. ೪೯ ಪಾಲು ಪಡೆಯಿತು.


ಈಗ ಅಂಬಾನಿ ನೆಟ್‌ವರ್ಕ್೧೮ ಹಾಗೂ ಟಿವಿ೧೮ ಸಮೂಹವನ್ನು ಖರೀದಿಸಿದ್ದೂ ಅದರ ಸಂಕಷ್ಟದ ಲಾಭ ಪಡೆದೇ. ರಾಘವ್ ಬೆಹಲ್ ಮಾಲೀಕತ್ವದ ಸಿಎನ್‌ಎನ್-ಐಬಿಎನ್, ಸಿಎನ್‌ಬಿಸಿ-ಟಿವಿ೧೮, ಕಲರ್ಸ್ ಚಾನೆಲ್ ಮುಂತಾದವುಗಳ ಸಮೂಹ ನೆಟ್‌ವರ್ಕ್೧೮ ಸಾಲದ ಹೊರೆಯಿಂದ ಬಳಲಿ ಹೋಗಿರುವಾಗ ಅದಕ್ಕೆ ಸಹಾಯ ಹಸ್ತ ಚಾಚುವ ನೆಪದಲ್ಲಿ ಅಂಬಾನಿ ಅದರ ಭಾಗಶಃ ಪಾಲನ್ನು ಪಡೆದಿದ್ದಾರೆ. ತನ್ಮೂಲಕ ಬೆಹಲ್ ಒಡೆತನದಲ್ಲಿದ್ದ ಸುಮಾರು ೨೫ ಚಾನೆಲ್‌ಗಳ ಮೇಲೆ ಅಂಬಾನಿ ಹಿಡಿತ ಸಾಧಿಸಿದ್ದಾರೆ. ಇದಕ್ಕೂ ಮುನ್ನ ಅಂದರೆ ೨೦೧೦ ಜೂನ್‌ನಲ್ಲೇ ಮುಕೇಶ್ ರೂ. ೪,೮೦೦ ಕೋಟಿ ಬಂಡವಾಳ ಹೂಡಿ ಇನ್ಫೋಟೆಲ್ ಬ್ರಾಡ್‌ಬ್ಯಾಂಡ್‌ನ್ನು ಖರೀದಿಸಿದ್ದು, ಆ ಮೂಲಕ ಹೊಸಯುಗದ ಮಾಧ್ಯಮರಂಗದ ಮೇಲೂ ಅವರು ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವುದನ್ನು ಶ್ರುತಪಡಿಸಿದ್ದಾರೆ.


ಮಾಧ್ಯಮೇತರ ವರ್ಗದಿಂದಲೇ ಭಾರತದಲ್ಲಿ ಮುರ್ಡೋಕೀರಣ ಆರಂಭವಾಗಿರುವ ಸ್ಪಷ್ಟ ಸೂಚನೆ ಇದು.ರಿಲಯನ್ಸ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ನೆಟ್‌ವರ್ಕ್ ೧೮ ರೂ. ೨,೧೦೦ ಕೋಟಿ ನೀಡಿ ಈಟಿವಿ ಸಮೂಹದಲ್ಲಿರುವ ರಿಲಯನ್ಸ್ ಪಾಲಿನಲ್ಲಿ ಬಹುಭಾಗವನ್ನು ಖರೀದಿಸಿದೆ. ಈಟಿವಿ ಸುದ್ದಿಚಾನೆಲ್‌ಗಳ ಶೇ. ೧೦೦, ಮನರಂಜನಾ ಚಾನೆಲ್‌ಗಳ ಶೇ. ೫೦ ಹಾಗೂ ತೆಲುಗು ಚಾನೆಲ್‌ಗಳ ಶೇ. ೨೪.೫೦ ಪಾಲು ಈಗ ನೆಟ್‌ವರ್ಕ್೧೮ ಖಾತೆಗೆ ಬಂದಿದೆ. ರಿಲಯನ್ಸ್-ನೆಟ್‌ವರ್ಕ್೧೮ ಮಧುಚಂದ್ರದ ಹಿಂದೆಮುಂದೆ ಈ ಬಗೆಯ ಇನ್ನಷ್ಟು ವ್ಯವಹಾರಗಳು ನಡೆದಿವೆ. ರೋನಿ ಸ್ಕ್ರೂವಾಲ ಒಡೆತನದ ಯುಟಿವಿ ಸಾಫ್ಟ್‌ವೇರ್‌ನ್ನು ರೂ. ೨೦೦೦ ಕೋಟಿಗೆ ವಾಲ್ಟ್‌ಡಿಸ್ನಿ ಖರೀದಿಸಿದೆ. ಓಸ್ವಾಲ್ ಗ್ರೀನ್‌ಟೆಕ್ ರೂ. ೨೪ ಕೋಟಿ ನೀಡಿ ಎನ್‌ಡಿಟಿವಿಯ ಶೇ. ೧೪.೧೭ ಪಾಲನ್ನು ಖರೀದಿಸಿದೆ. ಆಸ್ಟ್ರೋ ಆಲ್ ಏಷ್ಯಾ ನೆಟ್‌ವರ್ಕ್ಸ್ ರೂ. ೧೮೦ ಕೋಟಿ ನೀಡಿ ಎನ್‌ಡಿಟಿವಿ ಲೈಫ್‌ಸ್ಟೈಲ್ ಚಾನೆಲ್‌ನ ಶೇ. ೪೯ ಪಾಲನ್ನು ಖರೀದಿಸಿದೆ. ಇನ್ನೊಂದೆಡೆ ಪ್ರಮುಖ ಚಾನೆಲ್ ಸಮೂಹಗಳು ಪ್ರಾದೇಶಿಕ ಚಾನೆಲ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಸ್ಪರ್ಧೆಗೆ ಹೊರಟಿವೆ. ಸ್ಟಾರ್ ಟಿವಿಯು ವಿಜಯ್ ಟಿವಿ ಹಾಗೂ ಏಷ್ಯಾನೆಟ್‌ಗಳನ್ನು ಖರೀದಿಸಿದರೆ, ಪ್ರತಿಸ್ಪರ್ಧಿ ಜ಼ೀ ಟಿವಿಯು ಪಶ್ಚಿಮ ಬಂಗಾಳದ ಚೋಬಿಶ್ ಗಂಟಾ ಹಾಗೂ ಆಕಾಶ್ ಬಾಂಗ್ಲಾ ಚಾನೆಲ್‌ಗಳನ್ನು ಕೊಂಡುಕೊಂಡಿದೆ.


ಮೂಲ ಭಾರತೀಯ ಟಿವಿ ಉದ್ಯಮಿಗಳು ಆರಂಭದಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದರೂ, ಆಧುನಿಕ ಜಗತ್ತಿನ ಸವಾಲು ಎದುರಿಸಲಾಗದೆ ನಷ್ಟದತ್ತ ಸಾಗುತ್ತಿರುವುದೇ ಈ ಬಗೆಯ ಮಾರಾಟ-ಖರೀದಿಯ ಪ್ರಮುಖ ಕಾರಣ. ರಾಘವ್ ಬೆಹಲ್, ಪ್ರಣಯ್ ರಾಯ್, ರಾಮೋಜಿ ರಾವ್ ಇವರೆಲ್ಲ ಈ ಬೆಳವಣಿಗೆಗೆ ಜೀವಂತ ಉದಾಹರಣೆ. ಸದ್ಯಕ್ಕೆ ಇಂಡಿಯಾ ಟಿವಿಯ ರಜತ್ ಶರ್ಮ ಹಾಗೂ ದಕ್ಷಿಣದಲ್ಲಿ ಸನ್ ನೆಟ್‌ವರ್ಕ್‌ನ ಕಲಾನಿಧಿ ಮಾರನ್ ಮಾತ್ರ ನಷ್ಟದ ಹಾದಿ ಹಿಡಿಯದ ಅದೃಷ್ಟಶಾಲಿಗಳು. ಆದರೆ ಒಟ್ಟಾರೆಯಾಗಿ ಭಾರತದ ಟಿವಿ ಉದ್ಯಮ ಕ್ಷಿಪ್ರಗತಿಯ ಪ್ರಗತಿ ಸಾಧಿಸುತ್ತಿದೆ. ಪ್ರಸ್ತುತ ಭಾರತದ ಟಿವಿ ರಂಗದ ವಾರ್ಷಿಕ ವಹಿವಾಟು ರೂ. ೩೫,೦೦೦ ಕೋಟಿ ಆಗಿದ್ದು, ಶೇ. ೧೫ರಿಂದ ಶೇ. ೧೭ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ೨೦೧೫ರ ವೇಳೆಗೆ ಈ ವಹಿವಾಟು ರೂ. ೪೧,೬೦೦ ಕೋಟಿಗೆ ಏರಬಹುದೆಂದು ಅಂದಾಜಿಸಲಾಗಿದ್ದು, ಶೇ. ೨೦ ರ ಪ್ರಮಾಣದಲ್ಲಿ ಪ್ರಗತಿ ದಾಖಲಿಸಬಹುದೆಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ದೇಶದಲ್ಲಿರುವ ಒಟ್ಟು ಚಾನೆಲ್‌ಗಳ ಸಂಖ್ಯೆ ೭೪೫; ಇವುಗಳ ಪೈಕಿ ಸುಮಾರು ಅರ್ಧದಷ್ಟು, ಅಂದರೆ, ೩೬೬ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ವಾಹಿನಿಗಳೇ ಇವೆ. ಈ ನಡುವೆ ೬೦೦ ಹೊಸ ಚಾನೆಲ್‌ಗಳನ್ನು ಆರಂಭಿಸುವುದಕ್ಕೆ ಲೈಸೆನ್ಸ್‌ಗಾಗಿ ಬೇರೆಬೇರೆ ಮಂದಿ ಅರ್ಜಿ ಹಾಕಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಟಿವಿ ಉದ್ಯಮ ಯಾವ ಸ್ಥಿತಿಯಲ್ಲಿರಬಹುದು ಎಂಬುದನ್ನು ಊಹಿಸುವುದೂ ಕಷ್ಟ.


ಇಂತಹ ಸ್ಥಿತ್ಯಂತರ ಸನ್ನಿವೇಶದಲ್ಲಿ ಭಾರತೀಯ ಮುರ್ಡೋಕ್‌ಗಳು ತಯಾರಾಗುತ್ತಿರುವುದನ್ನು ತುಂಬ ಎಚ್ಚರದಿಂದ ಗಮನಿಸಬೇಕಾಗಿದೆ. ಭಾರತದ ಪ್ರಜಾಪ್ರಭುತ್ವ ಅಧಿಕಾರ ವಿಕೇಂದ್ರೀಕರಣದ ಮೇಲೆ ನಿಂತಿರುವಾಗ, ಪ್ರಜಾಪ್ರಭುತ್ವದ ನಾಲ್ಕನೇ ಆಯಾಮ ಎನಿಸಿರುವ ಮಾಧ್ಯಮ ರಂಗ ಮಾತ್ರ ಇದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಅಪಾಯದ ಕರೆಗಂಟೆಯೆಂಬುದನ್ನು ಮರೆಯಬಾರದು.


ಬುಧವಾರ, ಜನವರಿ 18, 2012

ಪತ್ರಕರ್ತ ಕಾರ್ಯಕರ್ತನೂ ಆಗಿರಬೇಕೆ? ಉತ್ತರಿಸಲು ಈಗ ಕೋಟೆಯವರೇ ಇಲ್ಲ

ಮಾಧ್ಯಮ ಶೋಧ-೧೨, ಹೊಸದಿಗಂತ ೧೯-೦೧-೨೦೧೨

ಪತ್ರಕರ್ತನೊಬ್ಬ ಕಾರ್ಯಕರ್ತನೂ ಆಗಿರಬೇಕೆ? ಶುಡ್ ಜರ್ನಲಿಸ್ಟ್ ಬಿ ಆನ್ ಆಕ್ಟಿವಿಸ್ಟ್? ಹೌದು ಎಂದಾದರೆ ಈ ಆಕ್ಟಿವಿಸ್ಟ್‌ನ ವ್ಯಾಪ್ತಿ ಏನು? ಸಾಮಾಜಿಕವಾದದ್ದೇ ರಾಜಕೀಯವಾದದ್ದೇ? ಅವನ ಅಜೆಂಡಾ ಏನು? ಪತ್ರಕರ್ತ ಅಜೆಂಡಾಗಳ ಹಿಂದೆ ಹೋಗಿಬಿಟ್ಟರೆ ವಸ್ತುನಿಷ್ಟತೆ ಎಂಬುದಕ್ಕೆ ಏನರ್ಥ? ಹಾಗಂತ ಗೊತ್ತುಗುರಿ ಏನೂ ಇಲ್ಲದವ ಒಬ್ಬ ಒಳ್ಳೆಯ ಪತ್ರಕರ್ತ ಹೇಗಾಗುತ್ತಾನೆ? ಅವನಿಂದ ಸಮಾಜಕ್ಕಾಗಲೀ ಪತ್ರಿಕೋದ್ಯಮಕ್ಕಾಗಲೀ ಏನು ಪ್ರಯೋಜನ? ಈ ಎಲ್ಲ ಪ್ರಶ್ನೆಗಳು ಸಾಕಷ್ಟು ಹಿಂದಿನಿಂದಲೂ ಚಾಲ್ತಿಯಲ್ಲಿವೆ. ಆಗೊಮ್ಮೆ ಈಗೊಮ್ಮೆ ಚರ್ಚೆಗೆ ಬರುತ್ತಲೂ ಇರುತ್ತವೆ. ಆದರೆ ಅವಕ್ಕೆ ಇಂತಹದೇ ಉತ್ತರವೆಂದು ಅಂತಿಮಗೊಳಿಸಿದ ಉದಾಹರಣೆಗಳೇನೂ ಇದ್ದಂತಿಲ್ಲ.



ಕಳೆದ ವಾರ ನಿಧನರಾದ ಹಿರಿಯ ಪತ್ರಕರ್ತ ಎಂ. ಎನ್. ಕೋಟೆ ನಾಗಭೂಷಣ್ ಇಂತಹ ಪ್ರಶ್ನೆಗಳಿಗೆ ತಮ್ಮೊಳಗೇ ಒಂದು ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರಾ ಎಂದು ಅನಿಸುವುದಿದೆ.



ಕೋಟೆಯವರ ನಿಧನ ಪತ್ರಿಕಾವಲಯಕ್ಕೆ, ಅದರಲ್ಲೂ ತುಮಕೂರು ಜಿಲ್ಲೆಯ ಪತ್ರಿಕೋದ್ಯಮಕ್ಕೆ ಒಂದು ದೊಡ್ಡ ಆಘಾತ. ಬಿಡುವಿಲ್ಲದ ಓಡಾಟಗಳ ಮಧ್ಯೆ ಕೋಟೆ ತಮ್ಮ ಆರೋಗ್ಯದ ಕಡೆ ಸಾಕಷ್ಟು ಗಮನ ನೀಡುತ್ತಿಲ್ಲ ಎಂದು ಅವರ ಒಡನಾಟವಿರುವವರಿಗೆಲ್ಲ ತಿಳಿದಿತ್ತಾದರೂ ಅವರು ಅಷ್ಟು ಬೇಗ ನಿರ್ಗಮಿಸುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಕೋಟೆ ಬಯಸಿದ್ದರೆ ಮುಖ್ಯವಾಹಿನಿಯ ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಬಹುದಿತ್ತು. ಅದಕ್ಕೆ ಬೇಕಾದ ಪ್ರತಿಭೆ, ಛಾತಿ, ಭಾಷಾ ಪ್ರಭುತ್ವ, ಸಂಪರ್ಕ ಎಲ್ಲವೂ ಅವರಲ್ಲಿತ್ತು. ಆದರೆ ಹೆಸರು ಮಾಡುವುದು ಅವರ ಉದ್ದೇಶವಾಗಿರಲಿಲ್ಲ. ಥಿಂಕ್ ಗ್ಲೋಬಲ್ ಆಕ್ಟ್ ಲೋಕಲ್ ಎಂಬುದನ್ನು ನಿಜದರ್ಥದಲ್ಲಿ ಜಾರಿಗೆ ತಂದವರು ಅವರು. ರಾಜ್ಯ-ರಾಷ್ಟ್ರಮಟ್ಟದ ಮಾಧ್ಯಮರಂಗದ ಸಂಪೂರ್ಣ ಅರಿವು-ಒಡನಾಟ ಇಟ್ಟುಕೊಂಡೇ ಅವರು ಪ್ರಾದೇಶಿಕ ಮಟ್ಟದಲ್ಲಿ ಅದನ್ನು ಜಾರಿಗೆ ತರುವ ಕನಸು-ಹಂಬಲ ಇಟ್ಟುಕೊಂಡಿದ್ದವರು. ದುರದೃಷ್ಟ ಎಂದರೆ ಕೋಟೆಯವರ ನಿಧನ ಕೂಡ (ಬೆರಳೆಣಿಕೆಯ ಉದಾಹರಣೆಗಳ ಹೊರತಾಗಿ) ಕೇವಲ ಸ್ಥಳೀಯ ಪತ್ರಿಕೆಗಳಿಗೆ ಮಾತ್ರ ಸುದ್ದಿಯಾಯಿತು.



ಕೋಟೆ ಎಂದೇ ಜನರಿಗೆ ಚಿರಪರಿಚಿತರಾಗಿದ್ದ ಎಂ. ಎನ್. ಕೋಟೆ ನಾಗಭೂಷಣ್ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮೂಗನಾಯಕನಕೋಟೆಯವರು. ಬಿಎಸ್ಸಿ ಪದವೀಧರರಾಗಿ ಸರ್ಕಾರಿ ಕೆಲಸ ಹಿಡಿದರೂ ಅವರಿಗೆ ಆಗಲೇ ತಮ್ಮ ಕ್ಷೇತ್ರ ಅದಲ್ಲ ಎಂಬುದು ಸ್ಪಷ್ಟವಾಗಿತ್ತು. ಶಿವಮೊಗ್ಗದಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ಸಾಮಾಜಿಕವಾಗಿ ಸಕ್ರಿಯರಾಗಿದ್ದ ನಾಗಭೂಷಣ್, ಸ್ವಲ್ಪ ಸಮಯದ ಬಳಿಕ ಹುದ್ದೆ ತ್ಯಜಿಸಿ ಮೈಸೂರಿನ ಮೈರಾಡಾ ಸಂಸ್ಥೆ ಸೇರಿಕೊಂಡರು. ಹುಟ್ಟೂರಿನ ಸೆಳೆತ ಮತ್ತೆ ಅವರನ್ನು ತುಮಕೂರಿಗೆ ಎಳೆದು ತಂದಿತು. ಅದೇ ಅವರ ಪತ್ರಿಕಾ ಜೀವನಕ್ಕೂ ನಾಂದಿಯಾಯಿತು. ಎಂಬತ್ತರ ದಶಕದಲ್ಲಿ ಎಚ್. ಎಸ್. ರಾಮಣ್ಣನವರ ಸಂಪಾದಕತ್ವದಲ್ಲಿ ಆರಂಭವಾಗಿದ್ದ 'ತುಮಕೂರು ವಾರ್ತೆ’ಗೆ ಪ್ರವೇಶ ಪಡೆದ ಕೋಟೆ ತಮ್ಮ ಸತ್ವಪೂರ್ಣ ಬರಹಗಳಿಂದ ಬಹುಬೇಗನೆ ಓದುಗ ವಲಯದಲ್ಲಿ ಪರಿಚಿತರಾದರು. ಮುಂದೆ ಎಸ್. ನಾಗಣ್ಣನವರ 'ಪ್ರಜಾಪ್ರಗತಿ’ ಸೇರಿದ ಅವರು ಒಂದೆರಡು ವರ್ಷ ಹಿಂದಿನವರೆಗೂ ಅದರಲ್ಲೇ ತಮ್ಮ ವೃತ್ತಿಜೀವನವನ್ನು ಕಂಡುಕೊಂಡಿದ್ದರು. ಹತ್ತಾರು ಕಿರಿಯರಿಗೆ ಮಾರ್ಗದರ್ಶನ ಮಾಡಿ ಅವರ ಬರವಣಿಗೆ-ಕಾರ್ಯವೈಖರಿಯನ್ನು ತಿದ್ದಿತೀಡಿ ಬೆಳೆಸಿದ ಕೋಟೆ ಸ್ವತಃ ಪತ್ರಿಕೋದ್ಯಮದ ಪ್ರಯೋಗ ಭೂಮಿಕೆಯಂತಿದ್ದರು. ತಮ್ಮ ತನಿಖಾ ವರದಿಗಳಿಂದ, ವಿಶ್ಲೇಷಣಾತ್ಮಕ ಲೇಖನಗಳಿಂದ ಸಂಚಲನ ಸೃಷ್ಟಿಸುತ್ತಿದ್ದ, ಭ್ರಷ್ಟರ ಬೆವರಿಳಿಸುತ್ತಿದ್ದ ನಾಗಭೂಷಣ್ ಒಂದು ಹಂತದಲ್ಲಿ ವೃತ್ತಿಪರ ಪತ್ರಿಕೋದ್ಯಮಕ್ಕೆ ವಿದಾಯ ಹೇಳಿ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ಪೂರ್ಣಾವಧಿ ತೊಡಗಿಸಿಕೊಂಡರು.



ಪತ್ರಕರ್ತನಾಗಿದ್ದಾಗಲೇ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕೋಟೆ ಈಗ ಪೂರ್ಣಪ್ರಮಾಣದ ಅಕ್ಟಿವಿಸ್ಟ್ ಆದರು. ಅಕ್ಟಿವಿಸ್ಟ್ ಎಂದರೆ ನಿಘಂಟು ಹೇಳುವ ಅರ್ಥ 'ರಾಜಕೀಯ ಕಾರ್ಯಕರ್ತ’. ಆದರೆ ಕೋಟೆ ಆಯ್ದುಕೊಂಡಿದ್ದು ರಾಜಕೀಯವನ್ನಲ್ಲ, ಸಾಮಾಜಿಕ ಕ್ಷೇತ್ರವನ್ನು. ಅವರೀಗ ಯಾವುದೋ ಒಂದು ಸಂಸ್ಥೆಯ ಇಷ್ಟಾನಿಷ್ಟಗಳ ಚೌಕಟ್ಟಿನಲ್ಲಿ ದುಡಿಯಬೇಕಾಗಿರಲಿಲ್ಲ. ಅವರೆದುರು ಇದ್ದುದು ಅವರನ್ನು ಸದಾ ಕಾಡುತ್ತಿದ್ದ ಸಾಮಾಜಿಕ ಅಸಮಾನತೆ, ರೈತರ ಶೋಷಣೆ ಮುಂತಾದ ಸಮಸ್ಯೆಗಳು ಹಾಗೂ ಜನಪರ ಹೋರಾಟದ ಮಾರ್ಗಗಳು.ಮಾನವ ಹಕ್ಕುಗಳ ಪರವಾದ ಹೋರಾಟದಿಂದ ತೊಡಗಿ ವರ್ಣಸಂಕರ ಬೀಜ ತಳಿಗಳ ವಿರುದ್ಧದ ಪ್ರತಿಭಟನೆಯವರೆಗೆ ಕೋಟೆಯವರು ತಲೆಕೆಡಿಸಿಕೊಳ್ಳದ ಜನಪರ ವಿಷಯಗಳೇ ಇಲ್ಲ. ಗ್ರಾಹಕರ ಹಕ್ಕು, ಮಾಹಿತಿ ಹಕ್ಕು, ಸಾವಯವ ಕೃಷಿ ಪದ್ಧತಿಗಳ ಬಗ್ಗೆ ಜನಜಾಗೃತಿ ಮೂಡಿಸಲು ಪ್ರತಿದಿನ ಒಂದಲ್ಲ ಒಂದು ಕಾರ್ಯಕ್ರಮ ಅವರ ಪಟ್ಟಿಯಲ್ಲಿ ಸಿದ್ಧವಾಗಿರುತ್ತಿತ್ತು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ಸಂಘಟನಾ ಚತುರತೆಯೂ ಅವರಲ್ಲಿತ್ತು. ಜನಸಾಮಾನ್ಯರನ್ನು ಕಾಡುವ ಒಂದಲ್ಲ ಒಂದು ವಿಚಾರ ಅವರನ್ನು ಪ್ರತಿಕ್ಷಣ ಚಿಂತೆಗೀಡು ಮಾಡುತ್ತಲೇ ಇತ್ತು. ಪತ್ರಕರ್ತರಾಗಿದ್ದಾಗಲೂ ಅವರ ವರದಿಗಳು-ವಿಶೇಷ ಲೇಖನಗಳು ಬೆಳಕು ಬೀರುತ್ತಿದ್ದುದು ಇಂತಹ ವಿಷಯಗಳ ಮೇಲೆಯೇ.



ರಂಗಭೂಮಿ ಬಗ್ಗೆ ಅಪಾರ ಸೆಳೆತ ಇದ್ದ ಕೋಟೆ 'ನಾಟಕಮನೆ’ ಕಟ್ಟಿಕೊಂಡು ಹೊಸಪ್ರಯೋಗ, ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಿದರು. ಜಿಲ್ಲಾ ಪತ್ರಿಕೋದ್ಯಮದ ಇತಿಹಾಸದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ಕೋಟೆಯವರೂ ಒಬ್ಬರಾಗಿದ್ದರು. ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರ ಎಂ. ಎಸ್. ಹನುಮಂತರಾಯರ 'ನೆನಪಿನ ಯಾನ’ ಕೃತಿಯನ್ನೂ ಬರೆದಿದ್ದರು.



ಕಳೆದ ಒಂದೆರಡುವರ್ಷಗಳಿಂದ ಕರ್ನಾಟಕದ ರಾಜಕೀಯ ಹಾಗೂ ಸಾಮಾಜಿಕ ಬದುಕನ್ನು ತಲ್ಲಣಗೊಳಿಸಿದ್ದ ಅಕ್ರಮ ಗಣಿ ವಿವಾದವು ಕೋಟೆಯವರನ್ನೂ ಬಹುವಾಗಿ ಕಾಡಿತ್ತು. ಗಣಿಗಾರಿಕೆಯ ವಿರುದ್ಧ ಹೋರಾಟ ಆರಂಭಿಸಿದ್ದ ಎಸ್. ಆರ್. ಹಿರೇಮಠರಿಗೆ ಪೂರ್ಣ ಬೆಂಬಲ ತೋರಿಸಿ ತುಮಕೂರಿನ ಕಡೆಯಿಂದ ಅಗತ್ಯವಿದ್ದ ಎಲ್ಲ ಬಗೆಯ ಸಂಘಟನಾತ್ಮಕ ಕಾರ್ಯಗಳನ್ನೂ ಮಾಡಿದವರು ಕೋಟೆ. ಅದಾಗಲೇ ದೇಹಾಯಾಸದಿಂದ ಸಾಕಷ್ಟು ದಣಿದಿದ್ದ ಅವರು ಈ ಚಳುವಳಿಯ ಉದ್ದೇಶಕ್ಕಾಗಿ ನಡೆಸಿದ ಓಡಾಟದಿಂದ ಇನ್ನಷ್ಟು ಬಳಲಿಹೋಗಿದ್ದರು. ಈ ಹೋರಾಟ ಇನ್ನೂ ಒಂದು ತಾತ್ವಿಕ ಅಂತ್ಯ ಕಾಣುವ ಮೊದಲೇ ಅವರು ವಿರಮಿಸಬೇಕಾಗಿ ಬಂದದ್ದು ಮಾತ್ರ ಒಂದು ದುಃಖಕರ ಸಂಗತಿ.



ಪತ್ರಕರ್ತನೊಬ್ಬ ಕಾರ್ಯಕರ್ತನೂ ಆಗಿರಬೇಕೆ? ಶುಡ್ ಜರ್ನಲಿಸ್ಟ್ ಬಿ ಆನ್ ಆಕ್ಟಿವಿಸ್ಟ್? ’ಇದಮಿತ್ಥಂ’ ಎಂಬ ಉತ್ತರ ಸಿಗುತ್ತದೋ ಇಲ್ಲವೋ ಆದರೆ ಕೋಟೆಯವರು ತಮ್ಮದೇ ಆದ ರೀತಿಯಲ್ಲಿ ಇವುಗಳಿಗೆ ಇತ್ತರಿಸುವ ಪ್ರಯತ್ನವನ್ನಂತೂ ಮಾಡಿದ್ದರು. ಏಕಕಾಲಕ್ಕೆ ಪತ್ರಕರ್ತನೂ ಸಾಮಾಜಿಕ ಕಾರ್ಯಕರ್ತನೂ ಆಗಿ ಬದುಕಿ ತೋರಿಸಿದ್ದರು. ಕಾರ್ಯಕರ್ತನಾಗಿ ಪತ್ರಿಕಾ ಧರ್ಮವನ್ನು ಮೀರಿದ್ದಾಗಲೀ, ಪತ್ರಕರ್ತನಾಗಿ ಒಬ್ಬ ಸಾಮಾಜಿಕ ಕಾರ್ಯಕರ್ತನ ಜವಾಬ್ದಾರಿಯನ್ನು ಮರೆತದ್ದಾಗಲೀ ಕೋಟೆಯವರು ಮಾಡಿರಲಿಲ್ಲ. ಆದರೂ ಪತ್ರಕರ್ತ-ಕಾರ್ಯಕರ್ತ ಜತೆಜತೆಗೇ ಬದುಕುವುದು ಸಾಧ್ಯವಿಲ್ಲ ಎಂದು ಒಂದು ಹಂತದಲ್ಲಿ ಕೋಟೆಯವರಿಗೆ ಅನ್ನಿಸಿತೇ? ಅದಕ್ಕೇ ಅವರು ವೃತ್ತಿಪರ ಪತ್ರಿಕೋದ್ಯಮವನ್ನು ತೊರೆದರೇ? ಉತ್ತರಿಸಲು ಈಗ ಕೋಟೆಯವರೇ ಇಲ್ಲ.

ಶನಿವಾರ, ಜನವರಿ 7, 2012

ಜಾಹೀರಾತು ನಿಯಂತ್ರಣ ಶೀಘ್ರ: ಕ್ಷಮಿಸಿ, ಷರತ್ತುಗಳು ಅನ್ವಯಿಸುತ್ತವೆ!

ಹೊಸದಿಗಂತ, ಮಾಧ್ಯಮ ಶೋಧ-೧೧, ೦೫-೦೧-೨೦೧೨


ಯುವಕನೊಬ್ಬ ಟಿಕೆಟ್ ಇಲ್ಲದೆ ತರಾತುರಿಯಲ್ಲಿ ರೈಲು ಏರುತ್ತಾನೆ. ಆಗ ಟಿ.ಸಿ.ಯ ಆಗಮನ. ಟಿ.ಸಿ. ಒಬ್ಬಳು ಯುವತಿ. ಯುವಕನ ಬಳಿ ಟಿಕೆಟ್ ಕೇಳುತ್ತಾಳೆ. ಉತ್ತರವಾಗಿ ಯುವಕ ಬಾಯ್ತೆರೆದು ಆಕೆಯ ಮುಖದತ್ತ 'ಹಾ’ ಎನ್ನುತ್ತಾನೆ. ಅಷ್ಟೇ! ಆ ಯುವತಿ ಸಮ್ಮೋಹಕ್ಕೆ ಒಳಗಾದವಳಂತೆ ಯುವಕನನ್ನು ಹಿಂಬಾಲಿಸಿ ನಡೆದುಬಿಡುತ್ತಾಳೆ. ಅಂದಹಾಗೆ, ಯುವತಿಯಲ್ಲಿ ಆದ ಈ ಅಮೋಘ ಬದಲಾವಣೆಗೆ ಕಾರಣ ಯುವಕ ಬಳಸಿದ ಟೂತ್‌ಪೇಸ್ಟ್ ಮತ್ತು ಅದರ ಪರಿಣಾಮವಾಗಿ ಆತನ ಬಾಯಿಯಿಂದ ಹೊರಹೊಮ್ಮುವ ಸುಗಂಧ.


***


ಕಟುಮಸ್ತಾದ ಯುವಕ ಠಾಕುಠೀಕಾಗಿ ಮಾಲ್ ಒಂದನ್ನು ಪ್ರವೇಶಿಸುತ್ತಾನೆ. ಶಾಪಿಂಗ್‌ನಲ್ಲಿ ತೊಡಗಿರುವ ಮಾದಕ ಯುವತಿಯರೆಲ್ಲಾ ಅನಾಮತ್ತಾಗಿ ಉನ್ಮತ್ತರಾಗಿ ಅವನನ್ನು ಮುತ್ತಿಕೊಂಡು ಸರಸಕ್ಕೆ ಮುಂದಾಗುತ್ತಾರೆ ಮತ್ತು ಆತನ ಹಿಂದೆಯೇ ನಡೆದುಬಿಡುತ್ತಾರೆ. ಹೌದು, ಇದೆಲ್ಲ ಆ ಯುವಕ ಬಳಸಿದ ಸುಗಂಧ ದ್ರವ್ಯದ ಕಾರುಬಾರು.


***


ಪಾರ್ಕ್‌ನ ಬೆಂಚ್ ಮೇಲೆ ಆಸೀನರಾದ ಇಬ್ಬರು ಚಾಕೋಲೇಟ್ ಒಂದನ್ನು ಮೆಲ್ಲತೊಡಗುತ್ತಾರೆ. ಚಾಕೋಲೇಟ್ ತಿನ್ನುತ್ತಾ ತಿನ್ನುತ್ತಾ ಅವರೊಂದು ಭ್ರಮಾಲೋಕಕ್ಕೆ/ಲಹರಿಗೆ ಜಾರಿಬಿಡುತ್ತಾರೆ. ಪಿಕ್‌ಪಾಕೆಟ್ ಮಾಡುವವನೊಬ್ಬ ಇದೇ ಸಮಯ ಸಾಧಿಸಿ ಅವರನ್ನು ದೋಚಿ ಪರಾರಿಯಾಗುತ್ತಾನೆ. ಸಂದೇಶ: ಈ ಚಾಕೋಲೇಟ್ ಎಷ್ಟು ಸೊಗಸಾಗಿದೆಯೆಂದರೆ ಇದನ್ನು ತಿಂದ ನೀವು ಜಗತ್ತನ್ನೇ ಮರೆತುಬಿಡುತ್ತೀರಿ.


***


ಗಂಡಹೆಂಡತಿ ಒಂದೇ ಛತ್ರಿ ಹಿಡಿದುಕೊಂಡು ಮಳೆಯಲ್ಲಿ ನಡೆಯುತ್ತಿದ್ದಾರೆ. ಇನ್ನು ಹೆಚ್ಚುದಿನ ಹೀಗೆ ನಡೆದುಹೋಗಬೇಕಾಗಿಲ್ಲ, ತನಗೆ ಮ್ಯಾನೇಜರ್ ಆಗಿ ಭಡ್ತಿ ದೊರೆತಿದೆ ಎಂದು ಗಂಡ ಹೇಳುತ್ತಾನೆ. ಹೆಂಡತಿಯೂ ಗಂಡನ ಬಳಿ ಆತನಿಗೊಂದು ಸ್ವೀಟ್‌ನ್ಯೂಸ್ ಇದೆಯೆಂದು ಹೇಳುತ್ತಾಳೆ. ಗಂಡ ಸಂಭ್ರಮ-ಕುತೂಹಲಗಳಿಂದ ಆಕೆಯತ್ತ ನೋಡುತ್ತಾನೆ. 'ನನಗೆ ಇನ್‌ಕ್ರಿಮೆಂಟ್ ಸಿಕ್ಕಿದೆ’ ಎನ್ನುತ್ತಾಳೆ ಪತ್ನಿ. ಪತಿ ತಾನು ನಿರೀಕ್ಷಿಸಿದ್ದು ಅದಲ್ಲ ಎಂಬ ಹಾಗೆಯೋ ಅದೇನು ಮಹಾ ಎಂಬಂತೆಯೋ ಮುಖ ಮಾಡುತ್ತಾನೆ; ರಸ್ತೆ ದಾಟಲು ಮುಂದಾಗುತ್ತಾನೆ. ಅದೆಲ್ಲಿತ್ತೋ ಒಂದು ವಾಹನ, ಮಿಂಚಿನ ವೇಗದಲ್ಲಿ ಮುನ್ನುಗ್ಗಿ ಬರುತ್ತದೆ. ಪತ್ನಿ ಭಯದಿಂದ ಕಿರಿಚುತ್ತಾಳೆ. ಗಂಡ ಕೂದಲೆಳೆಯಲ್ಲಿ ಪಾರಾಗಿರುತ್ತಾನೆ. ಇದು ಖಾಸಗಿ ಜೀವವಿಮಾ ಕಂಪೆನಿಯೊಂದರ ಜಾಹೀರಾತು.


***


ಈ ಜಾಹೀರಾತುದಾರರೆಲ್ಲ ಸಮಾಜಕ್ಕೆ ಅದೇನು ಸಂದೇಶ ರವಾನಿಸಬೇಕೆಂದಿದ್ದಾರೆ? 'ಹೆಚ್ಚು ಕೊಳ್ಳು, ಹೆಚ್ಚು ತಿನ್ನು, ಹೆಚ್ಚು ಖರ್ಚು ಮಾಡು’ - ಸಾಲಮಾಡಿಯಾದ್ರೂ ತುಪ್ಪ ತಿನ್ನು ಎಂಬ ಕೊಳ್ಳುಬಾಕ ಸಂಸ್ಕೃತಿಯ ಆಧುನಿಕ ಮಂತ್ರವನ್ನು ಬೋಧಿಸುವುದಷ್ಟೇ ಅಲ್ಲದೆ, ಮನುಷ್ಯ ಸಂಬಂಧಗಳಿಗೆ, ಭಾವನೆಗಳಿಗೆ ಬೆಲೆಯಿಲ್ಲದ ಅದ್ಯಾವ ಬರಡು ಬದುಕನ್ನು ನಿರ್ಮಿಸಲು ಹೊರಟಿದ್ದಾರೆ? ’ಇನ್ನೂ ಹೆಚ್ಚು ಬೇಕೆಂಬ ಇಚ್ಛೆಯನ್ನು ಮಾಡಿಕೊಳ್ಳಿ’ ಎಂದು ಕರೆ ನೀಡುತ್ತದೆ ಒಂದು ವಿಮಾ ಕಂಪೆನಿ. ತನ್ನಲ್ಲಿ ರೋಗಿಗಳಿಗೆ ಯಾವೆಲ್ಲ ಸೌಲಭ್ಯಗಳು ದೊರೆಯುತ್ತವೆ ಎಂದು ಮಾಹಿತಿ ನೀಡುವ ಬದಲು ತನ್ನಲ್ಲಿ ಯಾವೆಲ್ಲ ಆರೋಗ್ಯವಿಮಾ ಕಂಪೆನಿಗಳ ಕ್ಲೇಮ್ ಇದೆ ಎಂದು ದೊಡ್ಡದಾಗಿ ಬೋರ್ಡು ಬರೆಸುತ್ತದೆ ಅತ್ಯಾಧುನಿಕ ಆಸ್ಪತ್ರೆ. ಉಪಭೋಗೀ ಸಂಸ್ಕೃತಿ ಬದುಕಿನ ಇಂಚಿಂಚನ್ನೂ ಕಬಳಿಸುತ್ತಾ ಕೊನೆಗೆ ಏನನ್ನು ಉಳಿಸೀತು ಎಂಬ ಪ್ರಶ್ನೆ ಜಾಹೀರಾತುಗಳ ಕಾರಣದಿಂದಾಗಿ ಮತ್ತೆ ಮಾಧ್ಯಮಗಳ ಎದುರೇ ನಿಂತಿರುವುದು ಒಂದು ವಿಪರ್ಯಾಸ.


ಐದು ದಿನಗಳಲ್ಲಿ ಬೆಳ್ಳಗಾಗಿರಿ, ಏಳು ದಿನಗಳಲ್ಲಿ ಮೂರು ಕೆ.ಜಿ. ತೂಕ ಕಳೆದುಕೊಳ್ಳಿರಿ, ಒಂದೇ ವಾರದಲ್ಲಿ ಜೀರೋ ಡ್ಯಾಂಡ್ರಫ್, ಪುರುಷ ಶಕ್ತಿಯನ್ನು ವೃದ್ಧಿಸುವ ದಿವ್ಯೌಷಧ, ಮನದಿಚ್ಛೆಯನ್ನು ಕ್ಷಣಾರ್ಧದಲ್ಲಿ ಪೂರೈಸುವ ಪವಾಡದ ಉಂಗುರ... ಎಂಬಿತ್ಯಾದಿ ಜಾಹೀರಾತುಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎಗ್ಗಿಲ್ಲದಂತೆ ಕಾಣಿಸಿಕೊಳ್ಳುತ್ತಲೇ ಇವೆ. ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ)ದಂತಹ ಪ್ರತಿಷ್ಠಿತ ಸಂಸ್ಥೆಗಳು, ಡ್ರಗ್ಸ್ ಅಂಡ್ ಮ್ಯಾಜಿಕ್ ರೆಮೆಡೀಸ್ (ಅಬ್ಜೆಕ್ಷನಬಲ್ ಅಡ್ವರ್ಟೈಸ್‌ಮೆಂಟ್ಸ್) ಆಕ್ಟ್, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೆಗ್ಯುಲೇಶನ್ ಆಕ್ಟ್ ಮುಂತಾದ ಹಲವಾರು ಕಾನೂನುಗಳು, ಗ್ರಾಹಕ ಹಕ್ಕು ರಕ್ಷಣೆಯ ಶಾಸನಗಳು ಇದ್ದಾಗ್ಯೂ ಈ ಬಗೆಯ ಚಿತ್ರವಿಚಿತ್ರ, ಆಧಾರರಹಿತ ಜಾಹೀರಾತುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.


ಪುರುಷನ ಉಸಿರಿನಿಂದಲೋ ದೇಹದಿಂದಲೋ ಹೊರಹೊಮ್ಮುವ ಸುವಾಸನೆಗೆ ಮಾರುಹೋಗಿ ಆತನ ಹಿಂದೆ ನಡೆದುಬಿಡುವಂತೆ ಮಹಿಳೆಯನ್ನು ಚಿತ್ರಿಸುವ ಮೂಲಕ ನಮ್ಮ ಜಾಹೀರಾತುದಾರರು ಏನನ್ನು ಸಾಧಿಸಲು ಹೊರಟಿದ್ದಾರೆ? ಸ್ತ್ರೀ-ಪುರುಷ ಅಸಮಾನತೆಯ ಬಗ್ಗೆ ಹೋರಾಟ ನಡೆಯುವ, ಎಲ್ಲರಿಗೂ ಸಮಾನ ಅವಕಾಶ ನೀಡುವ ಚರ್ಚೆಗಳು ನಡೆಯುವ ಈ ಹೊತ್ತಿನಲ್ಲೂ ಸಮಾಜದ ಒಂದು ಭಾಗ ಸ್ತ್ರೀಯನ್ನು ಚಂಚಲೆ, ಅಬಲೆ, ಭೋಗದ ವಸ್ತು ಎಂದೇ ಪ್ರತಿಪಾದಿಸುತ್ತಿದೆ ಎಂಬುದಕ್ಕೆ ಈ ಬಗೆಯ ಜಾಹೀರಾತುಗಳೇ ಸಾಕ್ಷಿಯಲ್ಲವೇ? ಅಲ್ಲದೆ ಜನರು ತಮ್ಮ ಈ ಪೂರ್ವಾಗ್ರಹವನ್ನು ಸಂಪತ್ತನ್ನು ಕೂಡಿಹಾಕುವ ಉದ್ದೇಶಕ್ಕೆ ಬಳಸುತ್ತಿರುವುದು ಯಾವ ಲಂಪಟತನಕ್ಕೆ ಕಮ್ಮಿ?


'ಮಗು ಹೆತ್ತ ಮೇಲೆ ಜೀವನ ಬದಲಾಗುತ್ತೆ... ತ್ವಚೆ ಒಣದಾಗುತ್ತೆ, ಮುಖದಲ್ಲಿ ಡಾರ್ಕ್ ಸ್ಪಾಟ್ಸ್...’ ಎನ್ನುತ್ತಾಳೆ ಜಾಹೀರಾತಿನಲ್ಲಿರುವ ತಾಯಿ. ಮಗು ಹೆತ್ತ ಮೇಲೆ ಜೀವನ ಬದಲಾಗುವುದು ಎಂದರೆ ಈ ಜಾಹೀರಾತಿನ ಪ್ರಕಾರ ತ್ಚಚೆ ಒಣಗುವುದು, ಮುಖದಲ್ಲಿ ಕಪ್ಪುಕಲೆಗಳು ಮೂಡುವುದು. 'ಹೆಣ್ಣೆಂದರೆ ಹೊನ್ನು ಬೇಕು’ ಎಂಬ ಪಲ್ಲವಿಯೊಂದಿಗೆ ಆರಂಭವಾಗುತ್ತದೆ ಇನ್ನೊಂದು ಜಾಹೀರಾತು. ಜಾಹೀರಾತುಗಳ ಭಾಷೆಯಂತೂ ಅವರಿಗೇ ಪ್ರೀತಿ. 'ಪ್ರದೂಷಣೆ, ಸನ್ ಮತ್ತು ಸ್ಟೈಲಿಂಗ್‌ನಿಂದ ನನ್ನ ಕೂದ್ಲು ಹಾಳಾಗ್ತಿತ್ತು. ಏನೇ ಟ್ರೈ ಮಾಡಿದ್ರೂ ಮತ್ತೆ ಹುಲ್ಲಿನಂತೆ. ಅಗೇನ್, ಅಗೇನ್...’ ಎನ್ನುವ ರೂಪದರ್ಶಿ, ತಾನು ನಿರ್ದಿಷ್ಟ ಶ್ಯಾಂಪೂ ಬಳಸಲು ಆರಂಭಿಸಿದ ಮೇಲೆ ಆದ ಪರಿಣಾಮವನ್ನೂ ಹೇಳುತ್ತಾಳೆ: 'ನೋ ಹುಲ್ಲು, ನೋ ಡ್ಯಾಮೇಜ್; ಓನ್ಲಿ ಹೆಲ್ದೀ ಹೇರ್’. ಅಬ್ಬಾ, ಇದ್ಯಾವ ಭಾಷೆ!


ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ಕಳೆದ ವರ್ಷ ೧೫೯ ಜಾಹೀರಾತುಗಳ ಬಗ್ಗೆ ಸುಮಾರು ೨೦೦ ದೂರುಗಳನ್ನು ಸ್ವೀಕರಿಸಿದ್ದರೆ ಈ ವರ್ಷ ೧೯೦ ಜಾಹೀರಾತುಗಳ ಬಗ್ಗೆ ಒಟ್ಟು ೭೭೭ ದೂರುಗಳನ್ನು ಸ್ವೀಕರಿಸಿದೆ. ವರ್ಷದಿಂದ ವರ್ಷಕ್ಕೆ ನಮ್ಮ ಜಾಹೀರಾತುಗಳ ಗುಣಮಟ್ಟ ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ ಮಾತ್ರ. ಬಾಯ್ತೆರೆದರೆ 'ಸೆಲ್ಫ್ ರೆಗ್ಯುಲೇಶನ್’ ಎಂಬ ಮಂತ್ರಪಠಿಸುವ ಮತ್ತು ಅದರಲ್ಲೇ ಎಲ್ಲದಕ್ಕೂ ಪರಿಹಾರ ಇದೆ ಎಂದು ನಂಬಿಸುವ ಆಡಳಿತಗಾರರಿಗೆ, ಅಧಿಕಾರಿಗಳಿಗೆ ಹಾಗೂ ತಥಾಕಥಿತ ಪಂಡಿತರಿಗೆ ಎಲ್ಲವೂ ವಾಣಿಜ್ಯೀಕರಣದ ಸುಳಿಗೆ ಸಿಲುಕಿರುವ ಈ ಆಧುನಿಕ ಜಗತ್ತಿನಲ್ಲಿ ಸ್ವಯಂನಿಯಂತ್ರಣ ಎಂಬ ಪರಿಕಲ್ಪನೆ ಎಷ್ಟೊಂದು ಅರ್ಥಹೀನ ಎಂಬುದು ಅರ್ಥವಾಗುತ್ತದೆಯೇ?


ಸದ್ಯಕ್ಕೆ ಕೇಂದ್ರ ಸರ್ಕಾರ ದಾರಿತಪ್ಪಿಸುವ ಮತ್ತು ಕೀಳು ಅಭಿರುಚಿಯ ಜಾಹೀರಾತುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಂತರ್ ಇಲಾಖಾ ಸಮಿತಿಯೊಂದನ್ನು ರಚಿಸುವ ಮಾತನ್ನಾಡುತ್ತಿದೆ. ಈವರೆಗೆ ಬಂದಿರುವ ಹತ್ತಾರು ಕಾನೂನುಗಳು ಹಾಗೂ ಸಮಿತಿಗಳ ಸಾಲಿಗೆ ಇದೂ ಒಂದು ಸೇರ್ಪಡೆಯಾಗಲಿದೆಯೇ ಅಥವಾ ಏನಾದರೂ ಒಂದಿಷ್ಟು ಪ್ರಯೋಜನ ಸಿಕ್ಕೀತೇ- ಈಗಲೇ ಹೇಳಲಾಗದು. ಏಕೆಂದರೆ, 'ಷರತ್ತುಗಳು ಅನ್ವಯಿಸುತ್ತವೆ’.

ಗುರುವಾರ, ಅಕ್ಟೋಬರ್ 13, 2011

ಅಂತೂ ಹೊರಬಂತು ಪೇಯ್ಡ್ ನ್ಯೂಸ್ (Paid News), ವರದಿ ಆದರೆ...

ಮಾಧ್ಯಮಶೋಧ (೭), ಹೊಸದಿಗಂತ, ೧೩.೧೦.೨೦೧೧



ಪೇಯ್ಡ್ ನ್ಯೂಸ್ (Paid News) ಅಥವಾ ಸುದ್ದಿಗೂ ಕಾಸು ಎಂಬ ಹೆಸರಿನ ಮಾಧ್ಯಮ ಭ್ರಷ್ಟಾಚಾರದ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಭಾರತೀಯ ಪತ್ರಿಕಾ ಮಂಡಳಿ ನೇಮಿಸಿದ್ದ ಉಪಸಮಿತಿಯ ವರದಿಗೆ ಕೊನೆಗೂ ಮೋಕ್ಷ ಪ್ರಾಪ್ತಿಯಾಗಿದೆ. ಕಳೆದೊಂದು ವರ್ಷದಿಂದ ಪತ್ರಿಕಾ ಮಂಡಳಿಯ ಸೇಫ್ ಲಾಕರ್‌ನಲ್ಲಿ ಮೌನವಾಗಿ ಬಚ್ಚಿಟ್ಟುಕೊಂಡಿದ್ದ ಈ ವರದಿ ಕೇಂದ್ರ ಮಾಹಿತಿ ಆಯೋಗದ ಚಾಟಿಯೇಟಿಗೆ ಬೆದರಿ ಅದು ನೀಡಿದ ಅಂತಿಮ ಗಡುವು ಅಕ್ಟೋಬರ್ ೧೦ರಂದು ಸಾರ್ವಜನಿಕರೆದುರು ತೆರೆದುಕೊಂಡಿದೆ.


ಅಂದಹಾಗೆ ಉಪಸಮಿತಿಯ ವರದಿ ಒಂದು ಬ್ರೇಕಿಂಗ್ ನ್ಯೂಸ್ ಏನೂ ಅಲ್ಲ. ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ಸಮಿತಿಯು ಸಲ್ಲಿಸಿದ ವರದಿಯನ್ನು ಈವರೆಗೆ ಪತ್ರಿಕಾ ಮಂಡಳಿ ತನ್ನಲ್ಲೇ ಗೌಪ್ಯವಾಗಿ ಇಟ್ಟುಕೊಂಡಿದ್ದರೂ, ಅದು ಯಾವತ್ತೋ ಅಂತರ್ಜಾಲದ ಮೂಲಕ ಎಷ್ಟೋ ಮಂದಿಯನ್ನು ತಲುಪಿಯಾಗಿದೆ. ಅದೊಂಥರಾ ಓಪನ್ ಸೀಕ್ರೆಟ್. ಅಲ್ಲದೆ ಯಾರ‍್ಯಾರು ಪೇಯ್ಡ್ ನ್ಯೂಸ್ ದಂಧೆಗಳಲ್ಲಿ ತೊಡಗಿದ್ದಾರೆಂದು ಸ್ವತಃ ಮಾಧ್ಯಮಗಳಿಗೂ ಗೊತ್ತು, ಸಾಕಷ್ಟು ಸಾರ್ವಜನಿಕರಿಗೂ ಗೊತ್ತು. ಆದರೆ, ಪತ್ರಿಕಾ ಮಂಡಳಿ ತನ್ನ ಉಪಸಮಿತಿಯ ವರದಿಯನ್ನು ಬಹಿರಂಗಗೊಳಿಸುವುದರೊಂದಿಗೆ ಈಗ ಅದಕ್ಕೊಂದು ಅಧಿಕೃತತೆ ಲಭಿಸಿದೆ ಎಂಬುದು ಗಮನಿಸಬೇಕಾದ ವಿಷಯ.


ದುರಂತವೆಂದರೆ ಈ ಕೆಲಸವನ್ನೂ ಪತ್ರಿಕಾ ಮಂಡಳಿ ಮನಃಪೂರ್ವಕವಾಗಿ ಮಾಡಿಲ್ಲ. ಪೇಯ್ಡ್ ನ್ಯೂಸ್ ಕುರಿತ ವರದಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಾ ಮಂಡಳಿಯು, ಈ ವರದಿಯನ್ನು ಕೇಂದ್ರ ಮಾಹಿತಿ ಆಯೋಗದ ನಿರ್ದೇಶನದ ಮೇರೆಗೆ ಪ್ರಕಟಿಸಲಾಗುತ್ತಿದೆ... ಉಪಸಮಿತಿಯ ವರದಿಯನ್ನು ಮಂಡಳಿ ಅಂಗೀಕರಿಸಿಲ್ಲ; ಅಂತಿಮ ವರದಿ ತಯಾರಿಸುವಲ್ಲಿ ಅದನ್ನು ಆಧಾರವಾಗಿಟ್ಟುಕೊಂಡಿತ್ತು ಅಷ್ಟೇ ಎಂದು ತಿಪ್ಪೆ ಸಾರಿಸಿದೆ. ಅಲ್ಲಿಗೆ ಪತ್ರಿಕಾ ಮಂಡಳಿಯೂ ಎಂತಹ ಒತ್ತಡಗಳ ನಡುವೆ ಕೆಲಸ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ. ಅಲ್ಲದೆ, ’ಹಲ್ಲಿಲ್ಲದ ಹಾವು’, ’ಕಾಗದದ ಹುಲಿ’ ಮತ್ತಿತರ ಅದರ ಅಭಿದಾನಗಳೂ ಮತ್ತೊಮ್ಮೆ ಅನ್ವರ್ಥವಾಗಿವೆ.


೨೦೦೯ರ ಮಹಾಚುನಾವಣೆ ಹಾಗೂ ಕೆಲವು ರಾಜ್ಯ ವಿಧಾನಸಭೆಗಳ ಚುನಾವಣೆಯ ಸಂದರ್ಭ ನಡೆದ ಪೇಯ್ಡ್ ನ್ಯೂಸ್ ಚಟುವಟಿಕೆಗಳ ಬಗ್ಗೆ ಚುನಾವಣಾ ಆಯೋಗ, ಅಖಿಲ ಭಾರತ ಸಂಪಾದಕರ ಮಂಡಳಿಯೂ ಸೇರಿದಂತೆ ಹಲವಾರು ಸಂಘಸಂಸ್ಥೆಗಳಿಂದ, ಹಿರಿಯ ಪತ್ರಕರ್ತರಿಂದ, ಸಾರ್ವಜನಿಕರಿಂದ ದೇಶವ್ಯಾಪಿ ಅಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ೨೦೦೯ರ ಜುಲೈ ತಿಂಗಳಲ್ಲಿ ಭಾರತೀಯ ಪತ್ರಿಕಾ ಮಂಡಳಿಯು ತನ್ನ ಸದಸ್ಯರಲ್ಲೇ ಇಬ್ಬರನ್ನು (ಪರಂಜಯ್ ಗುಹಾ ಠಾಕುರ್ತಾ ಹಾಗೂ ಕೆ. ಶ್ರೀನಿವಾಸ ರೆಡ್ಡಿ) ಆಯ್ದುಕೊಂಡು ಉಪಸಮಿತಿಯೊಂದನ್ನು ರಚಿಸಿತು. ಸುದ್ದಿಗೂ ಕಾಸು ಪ್ರವೃತ್ತಿಯ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವ ಬಗ್ಗೆ ಅವರನ್ನು ಕೇಳಿಕೊಂಡಿತು. ಅವರಾದರೋ ಅತ್ಯಂತ ಶ್ರದ್ಧೆಯಿಂದ ಈ ಕೆಲಸ ಮಾಡಿ ಮುಗಿಸಿದರು. ೨೦೧೦ ಎಪ್ರಿಲ್‌ನಲ್ಲಿ ತಮ್ಮ ವರದಿಯನ್ನೂ ಸಲ್ಲಿಸಿದರು. ಆದರೆ ೭೧ ಪುಟಗಳ ಆ ವರದಿ ಮಂಡಳಿಯನ್ನೇ ಚಿಂತೆಗೀಡು ಮಾಡಿರಬೇಕು. ಅದನ್ನು ಹಾಗೆಯೇ ಸ್ವೀಕರಿಸುವ ಅಥವಾ ಬಹಿರಂಗಪಡಿಸುವ ಎಂಟೆದೆ ಮಂಡಳಿಗಂತೂ ಇದ್ದಿರಲಿಲ್ಲ. ಅಂದರೆ ಅದರಲ್ಲಿದ್ದ ಹಲವಾರು ಖ್ಯಾತನಾಮ ಪತ್ರಿಕೆಗಳ ಹೆಸರುಗಳನ್ನು ಸಾರ್ವಜನಿಕಗೊಳಿಸುವುದು ಮಂಡಳಿಗೆ ಬೇಕಿರಲಿಲ್ಲ. ಆಗ ಅದರ ಮುಂದಿದ್ದ ಸುಲಭದ ದಾರಿಯೆಂದರೆ ಆ ವರದಿಯನ್ನು ಅಧ್ಯಯನ ಮಾಡಲು ಇನ್ನೊಂದು ಸಮಿತಿಯನ್ನು ನೇಮಿಸುವುದು!


ಪತ್ರಿಕಾ ಮಂಡಳಿ ಮತ್ತೆ ೧೨ ಮಂದಿ ಸದಸ್ಯರ ಇನ್ನೊಂದು ಸಮಿತಿ ರಚಿಸಿತು. ಆ ಸಮಿತಿಯು ಉಪಸಮಿತಿ ನೀಡಿದ ವರದಿಯನ್ನು ಅರೆದು ಕುಡಿದು ೧೩ ಪುಟಗಳ ’ಅಂತಿಮ ವರದಿ’ಯನ್ನು ಭಟ್ಟಿಯಿಳಿಸಿತು. ಆ ವರದಿಯೊಂದಿಗೆ ಒಂದು ಅಡಿಟಿಪ್ಪಣಿ ಕೂಡಾ ಇತ್ತು: ಉಪಸಮಿತಿಯ ವರದಿಯು ಒಂದು ಪರಾಮರ್ಶನ ಕಡತವಾಗಿ ಮಂಡಳಿಯ ದಾಖಲೆಯಲ್ಲಿ ಇರಬಹುದು ಎಂದು ಮಂಡಳಿಯು ನಿರ್ಧರಿಸಿದೆ. ಅಬ್ಬ, ಎಂತಹ ಅದ್ಭುತ ಅಧ್ಯಯನ! ಸತತ ಹತ್ತು ತಿಂಗಳ ಕಾಲ ದೇಶದೆಲ್ಲೆಡೆ ಸುತ್ತಾಡಿ, ದೆಹಲಿ, ಮುಂಬೈ, ಹೈದರಾಬಾದ್‌ಗಳಲ್ಲಿ ವಿಶೇಷ ತನಿಖೆಗಳನ್ನು ನಡೆಸಿ, ಹತ್ತಾರು ಸಾಕ್ಷಿಗಳ ವಿಚಾರಣೆ ನಡೆಸಿ, ಪತ್ರಕರ್ತರನ್ನು, ಮಾಧ್ಯಮ ಮಾಲೀಕರನ್ನು, ರಾಜಕಾರಣಿಗಳನ್ನು, ಕಾನೂನು ತಜ್ಞರನ್ನು ಸಂಪರ್ಕಿಸಿ ತಯಾರಿಸಲಾದ ಸುದೀರ್ಘ ವರದಿಗೆ ಒಂದೇ ವಾಕ್ಯದ ಭಾಷ್ಯ! ಈಗ ಉಪಸಮಿತಿಯ ವರದಿಯ ಪೂರ್ಣಪಾಠವನ್ನು ಸಾರ್ವಜನಿಕರಿಗಾಗಿ ಪ್ರಕಟಿಸಿದ್ದರೂ ಅದರಲ್ಲಿ ಪುನಃ ತನ್ನ ’ಡಿಸ್‌ಕ್ಲೇಮರ್’ನ್ನು ಹಾಕಿಕೊಳ್ಳುವುದರೊಂದಿಗೆ ಮಂಡಳಿ ತನ್ನದು ’ಒತ್ತಾಯದ ರುಜು’ ಎಂಬುದನ್ನು ಮುಕ್ತವಾಗಿ ಹೇಳಿಕೊಂಡಂತಾಗಿದೆ.


ಆದಾಗ್ಯೂ ಉಪಸಮಿತಿಯ ವರದಿಯಲ್ಲಿ ಉಲ್ಲೇಖವಾಗಿರುವ ಕೆಲವು ಅಂಶಗಳು ಸಮಸ್ಯೆಯ ಗಾಂಭೀರ್ಯತೆಯ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದಿವೆ. ಸಮಿತಿಯು ನೇರವಾಗಿ ಪತ್ರಿಕೆಗಳನ್ನು, ಚಾನೆಲ್‌ಗಳನ್ನು ಆರೋಪಿಗಳೆಂದು ಬೊಟ್ಟು ಮಾಡಿಲ್ಲವಾದರೂ, ತಾನು ವಿಚಾರಣೆ ನಡೆಸಿದ ವ್ಯಕ್ತಿಗಳ ಹೇಳಿಕೆಗಳನ್ನೆಲ್ಲ ಅದು ತನ್ನ ವರದಿಯಲ್ಲಿ ದಾಖಲಿಸಿದೆ. ಹಲವಾರು ಸಾಕ್ಷಿಗಳು, ಪ್ರಮುಖವಾಗಿ ರಾಜಕಾರಣಿಗಳು, ’ಪಾಸಿಟಿವ್ ಕವರೇಜ್’ಗಾಗಿ ತಮ್ಮಲ್ಲಿ ಲಕ್ಷಗಟ್ಟಲೆ ಹಣ ಕೇಳಿದ ಮಾಧ್ಯಮಗಳ ಹೆಸರುಗಳನ್ನು ಸಮಿತಿಯ ಮುಂದೆ ಬಹಿರಂಗಪಡಿಸಿದ್ದಾರೆ. ದೈನಿಕ್ ಜಾಗರಣ್, ಲೋಕಮತ್, ಪುಢಾರಿ, ಪ್ರಥಮ್ ಪ್ರವಕ್ತಾ, ಪಂಜಾಬ್ ಕೇಸರಿ, ದೈನಿಕ್ ಭಾಸ್ಕರ್, ಹಿಂದೂಸ್ತಾನ್, ಅಮರ್ ಉಜಾಲ, ಆಜ್, ಉರ್ದು ಸಹರಾ, ಈನಾಡು, ಆಂಧ್ರಜ್ಯೋತಿ, ಸಾಕ್ಷಿ, ವಾರ್ತಾ, ಆಂಧ್ರಭೂಮಿ, ಸೂರ್ಯ ಮೊದಲಾದ ಪತ್ರಿಕೆಗಳನ್ನೂ, ಆಂಧ್ರ ಪ್ರದೇಶದ ಚಾನೆಲ್‌ಗಳಾದ ಟಿವಿ೯, ಈಟಿವಿ-೨, ಟಿವಿ-೫, ಎಚ್‌ಎಮ್‌ಟಿವಿ ನ್ಯೂಸ್ ಇತ್ಯಾದಿಗಳನ್ನೂ ಸಾಕ್ಷಿಗಳು ಹೆಸರಿಸಿದ್ದಾರೆ ಮತ್ತು ಅವನ್ನು ವರದಿ ದಾಖಲಿಸಿದೆ. ಮೀಡಿಯಾನೆಟ್ ಹಾಗೂ ಪ್ರೈವೇಟ್ ಟ್ರೀಟೀಸ್ ಯೋಜನೆಗಳ ಮೂಲಕ ಸುದ್ದಿಗೂ ಕಾಸು ಸಮಸ್ಯೆಯ ಬೀಜವನ್ನು ಬಿತ್ತಿದ್ದು ಟೈಮ್ಸ್ ಆಫ್ ಇಂಡಿಯಾ ಒಡೆತನದ ಬೆನೆಟ್, ಕೋಲ್‌ಮನ್ ಕಂಪೆನಿ ಲಿಮಿಟೆಡ್ ಸಂಸ್ಥೆಯೇ ಎಂಬುದನ್ನು ಸಮಿತಿಯು ಒಂದರ್ಥದಲ್ಲಿ ನೇರವಾಗಿಯೇ ಹೇಳಿದೆ. ಪೇಯ್ಡ್‌ನ್ಯೂಸ್ ಕುರಿತಂತೆ ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು, ಪತ್ರಕರ್ತ ಪಿ. ಸಾಯಿನಾಥ್ ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಿದ ವರದಿಗಳು, ಮೃಣಾಲ್ ಪಾಂಡೆ, ಪ್ರಭಾಶ್ ಜೋಶಿ ಮೊದಲಾದ ಹಿರಿಯ ಪತ್ರಕರ್ತರ ಅಭಿಪ್ರಾಯಗಳನ್ನೂ ವರದಿ ಉಲ್ಲೇಖಿಸಿದೆ.


ಇಡಿ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಸುದ್ದಿಗೂ ಕಾಸು ಕಾಯಿಲೆ ಸಂಘಟನಾತ್ಮಕವಾಗಿ ಇಡೀ ದೇಶವನ್ನು ವ್ಯಾಪಿಸಿರುವ ಕುರಿತು ತನ್ನ ಕಳವಳ ವ್ಯಕ್ತಪಡಿಸಿರುವ ಸಮಿತಿ, ತನ್ನ ವರದಿಯ ಕೊನೆಯಲ್ಲಿ ಈ ಸಮಸ್ಯೆಯ ನಿಯಂತ್ರಣಕ್ಕೆ ಅವಶ್ಯವಾಗಿರುವ ಕೆಲವು ಕ್ರಮಗಳನ್ನೂ ಶಿಫಾರಸು ಮಾಡಿದ್ದು ಅವು ಗಮನಾರ್ಹವಾಗಿವೆ: ಜಾಹೀರಾತು ಮತ್ತು ಸುದ್ದಿ ನಡುವೆ ಸ್ಪಷ್ಟ ವ್ಯತ್ಯಾಸ ತೋರಿಸುವಂತೆ ಪತ್ರಿಕಾ ಮಂಡಳಿಯು ಎಲ್ಲ ಪತ್ರಿಕೆಗಳಿಗೆ ಕಡ್ಡಾಯ ಮಾಡುವುದು; ರಾಜಕಾರಣಿಗಳು ಮತ್ತು ಪಕ್ಷಗಳು ತಾವು ಚುನಾವಣೆ ಸಂದರ್ಭದಲ್ಲಿ ಮಾಧ್ಯಮ ಪ್ರಚಾರಕ್ಕಾಗಿ ಮಾಡಿದ ಖರ್ಚಿನ ಲೆಕ್ಕ ಕೊಡುವುದು; ೧೯೫೧ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಹಣ ನೀಡುವುದನ್ನೂ ಚುನಾವಣಾ ಅಕ್ರಮ ಎಂದು ಪರಿಗಣಿಸಿ ಅದನ್ನೊಂದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸುವುದು; ಪೇಯ್ಡ್ ನ್ಯೂಸ್ ಬಗ್ಗೆ ದೂರು ದಾಖಲಿಸಲು ಭಾರತೀಯ ಚುನಾವಣಾ ಆಯೋಗ ಪ್ರತ್ಯೇಕ ವಿಭಾಗವೊಂದನ್ನು ತೆರೆಯುವುದು; ಪತ್ರಿಕಾ ಮಂಡಳಿಯ ಸಹಯೋಗದಲ್ಲಿ ಚುನಾವಣಾ ಆಯೋಗವು ಪೇಯ್ಡ್ ನ್ಯೂಸ್ ಅಕ್ರಮಗಳನ್ನು ಪತ್ತೆ ಮಾಡುವುದಕ್ಕಾಗಿ ಪ್ರತ್ಯೇಕ ವೀಕ್ಷಕರನ್ನು ನೇಮಿಸುವುದು; ಅರೆಕಾಲಿಕ ವರದಿಗಾರರು ಮತ್ತು ವರದಿಗಾರರು ಜಾಹೀರಾತು ಏಜೆಂಟರ ಕೆಲಸ ಮಾಡುವುದನ್ನು ಪತ್ರಿಕೆಗಳು ಕಡ್ಡಾಯವಾಗಿ ತಡೆಗಟ್ಟುವುದು; ೧೯೭೮ರ ಪತ್ರಿಕಾ ಮಂಡಳಿ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಅಧಿಕಾರವನ್ನು ಮಂಡಳಿಗೆ ನೀಡುವುದು; ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಸುದ್ದಿಗೂ ಕಾಸು ಮೋಸದಾಟದ ಬಗ್ಗೆ ಜಾಗೃತಿ ಮೂಡಿಸುವುದು... ಇತ್ಯಾದಿ.


ಭಾರತೀಯ ಪತ್ರಿಕಾ ಮಂಡಳಿಯನ್ನು ಬಲಪಡಿಸುವ ಅವಶ್ಯಕತೆಯನ್ನೂ ವರದಿ ಒತ್ತಿ ಹೇಳಿದೆ. ಪತ್ರಿಕಾ ಮಂಡಳಿ ಒಂದು ಆಂಶಿಕ ನ್ಯಾಯಿಕ ಸಂಸ್ಥೆಯಾಗಿದ್ದರೂ, ಅದು ವಾಗ್ದಂಡನೆ ವಿಧಿಸುವ, ಛೀಮಾರಿ ಹಾಕುವ, ಆಕ್ಷೇಪಣೆ ವ್ಯಕ್ತಪಡಿಸುವ ಅಧಿಕಾರ ಹೊಂದಿದೆಯೇ ಹೊರತು ತಪ್ಪಿತಸ್ಥರು ಎದುರಿಗಿದ್ದರೂ ಅವರನ್ನು ದಂಡಿಸುವ ಅಧಿಕಾರ ಹೊಂದಿಲ್ಲ. ಅದಕ್ಕೇ ಅದು ಹಲ್ಲಿಲ್ಲದ ಹಾವು. ಅಲ್ಲದೆ ಕೇವಲ ಮುದ್ರಣ ಮಾಧ್ಯಮ ಮಾತ್ರ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಈ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಪಸಮಿತಿ ಒತ್ತಾಯಿಸಿದೆ. ಪತ್ರಿಕೆಗಳನ್ನಷ್ಟೇ ಅಲ್ಲದೆ, ಟಿವಿ, ರೇಡಿಯೋ, ಇಂಟರ್ನೆಟ್‌ಗಳಲ್ಲೂ ನಡೆಯುವ ಅಕ್ರಮಗಳನ್ನು ತಡೆಯಲು ಪತ್ರಿಕಾ ಮಂಡಳಿಗೆ ಅಧಿಕಾರ ನೀಡಬೇಕು; ತಪ್ಪಿತಸ್ಥರನ್ನು ದಂಡಿಸುವ ಕಾನೂನಾತ್ಮಕ ಅಧಿಕಾರವನ್ನೂ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿರುವುದು ಉಲ್ಲೇಖಾರ್ಹ. ಈ ರೀತಿಯ ಒತ್ತಾಯವೇನೋ ಬಹಳ ಹಿಂದಿನಿಂದಲೂ ಇದೆ, ಆದರೆ ಅದಿನ್ನೂ ಕಾರ್ಯಗತವಾಗುವ ಸೂಚನೆ ಕಾಣಿಸುತ್ತಿಲ್ಲ; ಬಹುಶಃ ಕಾರ್ಯಗತವಾಗುವುದು ಅದನ್ನು ಸಾಧ್ಯವಾಗಿಸಬಲ್ಲವರಿಗೂ ಬೇಕಾಗಿಲ್ಲ.


ಎಲ್ಲಾ ಶಿಫಾರಸು ಮಾಡಿದ ಮೇಲೂ, ಉಪಸಮಿತಿ ತನ್ನ ವರದಿಯ ಕೊನೆಗೆ ಬರೆದಿರುವ ಒಂದು ಮಾತು ಗಮನಾರ್ಹ: ಈ ಎಲ್ಲ ಕ್ರಮಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ ಭಾರತೀಯ ಮಾಧ್ಯಮ ರಂಗದಲ್ಲಿನ ಅಕ್ರಮಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗದಿದ್ದರೂ, ಅವುಗಳ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಗಣನೀಯವಾಗಿ ತಗ್ಗಿಸಬಹುದು ಎಂಬ ಮಾತು ಒಂದು ಆಶಾವಾದದಂತೆ ಕಂಡುಬಂದರೂ, ’ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ...’ ಎಂಬ ಮಾತು ನಮ್ಮನ್ನು ಚಿಂತೆಗೀಡುಮಾಡುತ್ತದೆ. ಏಕೆಂದರೆ, ಅದೊಂದಿದ್ದರೆ ನಾವು ಇಷ್ಟೆಲ್ಲ ಸಮಸ್ಯೆಗಳೆಡೆಯಲ್ಲಿ ಸಿಕ್ಕಿಹಾಕಿಕೊಳ್ಳುವ, ಅವುಗಳ ನಡುವೆ ಒದ್ದಾಡುವ, ಗುದ್ದಾಡುವ ಪ್ರಮೇಯವೇ ಬರುತ್ತಿರಲಿಲ್ಲವಲ್ಲ!

ಗುರುವಾರ, ಸೆಪ್ಟೆಂಬರ್ 29, 2011

ಅಭಿವೃದ್ಧಿ ಪತ್ರಿಕೋದ್ಯಮ ಎಂಬ ಆಶಾವಾದದ ಬೆಳಕಿಂಡಿ

ನಮ್ಮ ಗ್ರಾಮಭಾರತದ ಪತ್ರಕರ್ತರು ಈ ಬಾರಿಯ ಗಾಂಧೀಜಯಂತಿಯಂದು ಸಂಭ್ರಮಿಸುವುದಕ್ಕೆ ಒಂದು ವಿಶೇಷ ಕಾರಣವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳೇಪುಣಿ ಎಂಬ ಪುಟ್ಟ ಹಳ್ಳಿಯ ಪತ್ರಕರ್ತ ಗುರುವಪ್ಪ ಎನ್. ಟಿ. ಬಾಳೇಪುಣಿಯವರು ನಾಡಿದ್ದು ಗಾಂಧೀಜಯಂತಿಯ ದಿನ ಸರೋಜಿನಿ ನಾಯ್ಡು ಹೆಸರಲ್ಲಿ ನೀಡಲಾಗುವ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಸ್ವೀಕರಿಸಲಿದ್ದಾರೆ - ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ. ಪ್ರಶಸ್ತಿಯ ಮೊತ್ತ ಎರಡು ಲಕ್ಷ ರೂಪಾಯಿ.


ಪ್ರಶಸ್ತಿಯ ಮೌಲ್ಯ ನಿರ್ಧಾರವಾಗುವುದು ಅದರೊಂದಿಗೆ ಬರುವ ಮೊತ್ತದಿಂದಲ್ಲ, ಬದಲಿಗೆ ಅದನ್ನು ಕೊಡುವವರ ಮತ್ತು ಸ್ವೀಕರಿಸುವವರ ಘನತೆಯಿಂದ ಎಂಬುದು ಅಕ್ಷರಶಃ ನಿಜವಾದರೂ, ಬಾಳೇಪುಣಿಯವರ ಮಟ್ಟಿಗೆ ಅದೊಂದು ದೊಡ್ಡ ಮತ್ತು ಉಲ್ಲೇಖಾರ್ಹ ಮೊತ್ತವೇ. ಬಂಟ್ವಾಳ ತಾಲೂಕಿನ ಇಡ್ಕಿದು ಎಂಬ ಮಾದರಿ ಗ್ರಾಮ ಪಂಚಾಯತ್ ಒಂದರ ಯಶೋಗಾಥೆಯ ಬಗ್ಗೆ ಬಾಳೇಪುಣಿ ’ಹೊಸದಿಗಂತ’ದಲ್ಲಿ ಮಾಡಿದ ವರದಿಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆಯಾದರೂ, ಇದು ಅವರ ಇಪ್ಪತ್ತೈದು ವರ್ಷಗಳ ಅಭಿವೃದ್ಧಿ ಪತ್ರಿಕೋದ್ಯಮದ ಮೌನ ಸಾಧನೆಗೆ ಸಂದ ಗೌರವ ಎಂದು ಅವರನ್ನು ಹತ್ತಿರದಿಂದ ಬಲ್ಲ ಯಾರಾದರೂ ಒಪ್ಪಿಕೊಳ್ಳುವ ಮಾತು. ಇಷ್ಟು ದೀರ್ಘ ಅವಧಿಯ ಸೇವೆಯಲ್ಲಿ ’ತನಗಾಗಿ’ ಏನೂ ಮಾಡಿಕೊಳ್ಳದ, ಇನ್ನೂ ಕಾಲ್ನಡಿಗೆಯಲ್ಲೇ ಗ್ರಾಮಗಳನ್ನು ಸುತ್ತುವ, ಮತ್ತು - ಅವರದೇ ಮಾತಿನಂತೆ - ಸಿಟಿಬಸ್‌ನಲ್ಲೇ ನೇತಾಡಿಕೊಂಡು ಪ್ರಯಾಣಿಸುವ ಒಬ್ಬ ಪತ್ರಕರ್ತನ ಮಟ್ಟಿಗೆ ಪ್ರಶಸ್ತಿಯ ಮೊತ್ತವೂ ಮಹತ್ವದ್ದು ಎಂದರೆ ತಪ್ಪಲ್ಲ.


ಹಾಜಬ್ಬ ಎಂಬ ಸಾಮಾನ್ಯ ಕಿತ್ತಳೆ ವ್ಯಾಪಾರಿಯೊಬ್ಬರು ತನ್ನೂರು ಹರೇಕಳದಲ್ಲಿ ಸದ್ದಿಲ್ಲದೆ ಒಂದು ಹೈಸ್ಕೂಲು ಕಟ್ಟಿ ನೂರಾರು ಹಳ್ಳಿ ಹುಡುಗರ ವಿದ್ಯಾಭ್ಯಾಸಕ್ಕೆ ಕಾರಣವಾದ ಅಸಾಮಾನ್ಯ ಸಂಗತಿ ಬಗ್ಗೆ ಬಾಳೇಪುಣಿಯವರು ’ಹೊಸದಿಗಂತ’ದಲ್ಲಿ ಮಾಡಿದ ವರದಿ ನಾಡಿನ ಗಮನ ಸೆಳೆದಿತ್ತು. ಮುಂದೆ ವಿವಿಧ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಂಘಸಂಸ್ಥೆಗಳಿಂದ ಹಾಜಬ್ಬನವರ ಸಾಧನೆಗೆ ಸಾಕಷ್ಟು ಮನ್ನಣೆ ದೊರೆಯಿತು; ಆದರೆ ಹಾಜಬ್ಬ ಅವರನ್ನು ಮೊದಲ ಬಾರಿಗೆ ಎಲೆಮರೆಯಿಂದ ಈಚೆಗೆ ಕರೆತಂದ ಕೀರ್ತಿ ಬಾಳೆಪುಣಿಯವರದ್ದೇ. ಅವರ ಹಳೆಯ ಕಡತಗಳನ್ನು ಬಿಚ್ಚುತ್ತಾ ಹೋದರೆ ಇಂತಹ ಹತ್ತಾರು ನಿದರ್ಶನಗಳು ತೆರೆದುಕೊಳ್ಳುತ್ತವೆ.



ಅಂದಹಾಗೆ, ’ದಿ ಹಂಗರ್ ಪ್ರಾಜೆಕ್ಟ್’ ಎಂಬ ಸ್ವಯಂಸೇವಾ ಸಂಸ್ಥೆ ನೀಡುವ ಈ ಸರೋಜಿನಿ ನಾಯ್ಡು ಪ್ರಶಸ್ತಿ ಮಂಗಳೂರಿಗೆ ಎರಡನೆಯ ಬಾರಿಗೆ ಬಂದಿದೆ. ಮೊದಲ ಬಾರಿಗೆ ಬಂದದ್ದು ೨೦೦೯ರಲ್ಲಿ - ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥ ಡಾ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರಿಗೆ. ’ಕೊಲ: ದಿ ಓನ್ಲಿ ಮಾಡೆಲ್ ಗ್ರಾಮ ಪಂಚಾಯತ್ ಇನ್ ಅನ್‌ಡಿವೈಡೆಡ್ ದಕ್ಷಿಣ ಕನ್ನಡ’ ಎಂಬ ಅವರ ವರದಿಗೆ ಈ ರಾಷ್ಟ್ರೀಯ ಪುರಸ್ಕಾರ ಲಭಿಸಿತ್ತು.
ಕಳೆದ ೧೪ ವರ್ಷಗಳಿಂದ ಪತ್ರಿಕಾ ವ್ಯವಸಾಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಸೂಕ್ಷ್ಮ ಸಂವೇದನೆಯ ಪತ್ರಕರ್ತ ರೊನಾಲ್ಡ್. ವೃತ್ತಿಪರತೆಯಷ್ಟೇ ಅಕಾಡೆಮಿಕ್ ಶಿಸ್ತನ್ನೂ ಬೆಳೆಸಿಕೊಂಡಿರುವ, ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿ ಪಡೆದಿರುವ ಅಪರೂಪದ ಪತ್ರಕರ್ತರಲ್ಲಿ ಅವರೂ ಒಬ್ಬರು. ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಯನ ಮಂಡಳಿಗಳ ಸದಸ್ಯತನ, ವಿದೇಶ ಪ್ರವಾಸ, ಹಳ್ಳಿಗಳ ಸುತ್ತಾಟ - ಇವೆಲ್ಲ ಅವರ ವ್ಯಕ್ತಿತ್ವದ ಮುಖಗಳಾಗಿರುವಂತೆಯೇ ಸರಸ್ವತಿ ಎಂಬ ದಲಿತ ಮಹಿಳೆಯೊಬ್ಬರು ಕೊಲ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯಾಗಿ ಅದನ್ನೊಂದು ಮಾದರಿ ಗ್ರಾಮ ಪಂಚಾಯತ್ ಆಗಿ ರೂಪಿಸಿದ ಕಥೆಯನ್ನು ಪತ್ರಿಕೆಯಲ್ಲಿ ತೆರೆದಿಟ್ಟು ಅರ್ಹವಾಗಿಯೇ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾದರು. ಅಂದಹಾಗೆ ಪ್ರಶಸ್ತಿಯೊಂದಿಗೆ ತಮಗೆ ದೊರೆತ ಎರಡು ಲಕ್ಷ ರೂಪಾಯಿಯಲ್ಲಿ ಒಂದು ಲಕ್ಷವನ್ನು ರೊನಾಲ್ಡ್ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜನಶಿಕ್ಷಣ ಟ್ರಸ್ಟ್ ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದರೆಂಬುದು ಬಹಳ ಮಂದಿಗೆ ಗೊತ್ತಿಲ್ಲ.


ಕಾರ್ಪೋರೇಟ್ ಪತ್ರಿಕೋದ್ಯಮದ ಭರಾಟೆಯಲ್ಲಿ ಜನಪರ ದನಿಗಳು ದಿನೇದಿನೇ ಗೌಣವಾಗುತ್ತಿವೆ ಎಂಬ ಕೊರಗಿನ ನಡುವೆಯೂ ಅಭಿವೃದ್ಧಿ ಪತ್ರಿಕೋದ್ಯಮದ ಈ ಬಗೆಯ ತಾಜಾ ನಿದರ್ಶನಗಳು ಪ್ರಜ್ಞಾವಂತ ಜನತೆಗೆ ಒಂದಷ್ಟು ಹುರುಪನ್ನೂ, ಉತ್ಸಾಹವನ್ನೂ, ಪ್ರೇರಣೆಯನ್ನೂ ನೀಡುತ್ತವೆ ಎಂಬುದು ಸುಳ್ಳಲ್ಲ. ಜಾಹೀರಾತು ವಿಭಾಗವೇ ಸಂಪಾದಕೀಯ ವಿಭಾಗವನ್ನು ಆಳುತ್ತಿರುವ ಇಂದಿನ ಮಾಧ್ಯಮ ಜಗತ್ತಿನ ಬದಲಾದ ಸನ್ನಿವೇಶದಲ್ಲೂ ಇಡ್ಕಿದು-ಕೊಲಗಳನ್ನು, ಅವುಗಳ ಸಾಧನೆಯ ಹಿಂದಿನ ಪ್ರೇರಕ ಶಕ್ತಿಗಳಾದ ದಲಿತ ಮಹಿಳೆಯರನ್ನು ಗುರುತಿಸುವ ಪತ್ರಕರ್ತರು ಇದ್ದಾರೆ ಅಷ್ಟೇ ಅಲ್ಲ, ಅಂತಹ ಪತ್ರಕರ್ತರನ್ನೂ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂಬುದು ಒಂದು ಸಣ್ಣ ನಿರಾಳತೆಯನ್ನು ತಂದುಕೊಡುತ್ತದೆ.


೧೯೯೩ರಲ್ಲಿ ’ಟೈಮ್ಸ್ ಆಫ್ ಇಂಡಿಯಾ’ದ ಫೆಲೋಶಿಪ್‌ಗೆ ಅರ್ಜಿ ಹಾಕಿದ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರನ್ನು ಆ ಸಂಬಂಧ ಪ್ರಶ್ನಿಸಿದ ಸಂದರ್ಶನಾ ಮಂಡಳಿಯ ಸದಸ್ಯರೊಬ್ಬರು ’ನೀವು ಕೊಡಲಿರುವ ಗ್ರಾಮೀಣ ವರದಿಗಳನ್ನು ನಮ್ಮ ಓದುಗರು ಇಷ್ಟಪಡುತ್ತಾರೆಂದು ಏನು ಗ್ಯಾರಂಟಿ?’ ಎಂದು ಕೇಳಿದರಂತೆ. ಅದಕ್ಕೆ ಪ್ರತಿಯಾಗಿ ಸಾಯಿನಾಥ್, ’ನೀವು ನಿಮ್ಮ ಓದುಗರನ್ನು ಎಂದಾದರೂ ಈ ಬಗ್ಗೆ ಕೇಳಿ ನೋಡಿದ್ದೀರಾ?’ ಎಂದು ಮತ್ತೆ ಪ್ರಶ್ನಿಸಿದರಂತೆ. ಕೊನೆಗೂ ಅವರಿಗೆ ಆ ಫೆಲೋಶಿಪ್ ಸಿಕ್ಕಿತು ಮತ್ತು ಅದರ ಫಲವೇ ಅವರ ಜನಪ್ರಿಯ ’ಎವೆರಿಬಡಿ ಲವ್ಸ್ ಎ ಗುಡ್ ಡ್ರೌಟ್’ ಪುಸ್ತಕ. ಭಾರತದ ಏಳೆಂಟು ರಾಜ್ಯಗಳ ಹತ್ತಾರು ಕಡುಬಡತನದ ಜಿಲ್ಲೆಗಳನ್ನು ಸುತ್ತಾಡಿ ಅವರು ಬರೆದ ವರದಿಗಳು ದೊಡ್ಡ ಸಂಚಲನ ಮೂಡಿಸಿದ್ದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ’ದಿ ಹಿಂದೂ’ ಪತ್ರಿಕೆಯ ಗ್ರಾಮೀಣ ವಿದ್ಯಮಾನಗಳ ಸಂಪಾದಕರಾಗಿರುವ ಸಾಯಿನಾಥ್ ಈಗಲೂ ತಮ್ಮ ಅಧ್ಯಯನಪೂರ್ಣ ವರದಿಗಳಿಗೆ ಪ್ರಸಿದ್ಧರು.

ಮಾಧ್ಯಮಗಳ ವಾಣಿಜ್ಯೀಕರಣದಿಂದಾಗಿ ಅಭಿವೃದ್ಧಿ ವರದಿಗಾರಿಕೆಯ ಸಾಧ್ಯತೆಗಳು ಕ್ಷೀಣಿಸುತ್ತಿವೆ ಎಂಬ ಮಾತು ನಿಜವೇ ಇರಬಹುದಾದರೂ, ಓದುಗರ ಬೇಕುಬೇಡಗಳನ್ನು ತಾವೇ ನಿರ್ಧರಿಸಿಬಿಡುವ ಮಾಧ್ಯಮಗಳ ಪೂರ್ವಾಗ್ರಹವೂ ಇದಕ್ಕೊಂದು ಕಾರಣ ಎಂಬುದನ್ನೂ ಒಪ್ಪಿಕೊಳ್ಳಬೇಕು. ತಮ್ಮ ಸುತ್ತಲಿನ ಮಿತಿಗಳ ನಡುವೆಯೂ ಅಭಿವೃದ್ಧಿ ಪತ್ರಿಕೋದ್ಯಮವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಮತ್ತು ಮಾಡುತ್ತಿರುವ ಸಂವೇದನಾಶೀಲ ಪತ್ರಕರ್ತರ ಒಂದು ತಂಡವೂ ಬದುಕಿಕೊಂಡುಬಂದಿದೆ.

ಅಭಿವೃದ್ಧಿ ಪತ್ರಿಕೋದ್ಯಮದ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟದ್ದಲ್ಲದೆ, ಆ ಬಗೆಯ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಲೇ ’ನಮ್ಮೊಳಗಿನ ಬ್ರಹ್ಮಾಂಡ’, ’ಇರುವುದೊಂದೇ ಭೂಮಿ’, ’ಅಭಿವೃದ್ಧಿಯ ಅಂಧಯುಗ’ದಂತಹ ವಿಶಿಷ್ಟ ಕೃತಿಗಳನ್ನು ಪ್ರಕಟಿಸಿದ ’ಪ್ರಜಾವಾಣಿ’ಯ ಸಹ ಸಂಪಾದಕರಾಗಿದ್ದ ನಾಗೇಶ ಹೆಗಡೆ ಸದಾ ನೆನಪಲ್ಲಿ ಉಳಿಯುತ್ತಾರೆ. ವಿಜ್ಞಾನಿಗಳ ಸಂಶೋಧನೆಗಳೆಲ್ಲ ಹೊಲಗಳಿಗೆ ತಲುಪದೆ ಪ್ರಯೋಗಾಲಯಗಳಲ್ಲಿಯೇ ಬಿದ್ದು ಕೊಳೆಯುತ್ತಿರಬೇಕಾದರೆ, ’ಅಡಿಕೆ ಪತ್ರಿಕೆ’ಯೆಂಬ ಕೃಷಿಕರ ಪ್ರಯೋಗಾಲಯವನ್ನು ಹುಟ್ಟುಹಾಕಿದ, ರೈತರ ಕೈಗೆ ಲೇಖನಿ ಕೊಟ್ಟ, ಜಲಸಾಕ್ಷರತೆಯ ಬಗ್ಗೆ ಒಂದು ಬಗೆಯ ಆಂದೋಲನವನ್ನೇ ಸೃಷ್ಟಿಸಿದ ಶ್ರೀಪಡ್ರೆ ಹೊಸ ಭರವಸೆ ಮೂಡಿಸುತ್ತಾರೆ. ’ಉದಯವಾಣಿ’ಯ ಸಂಪಾದಕರಾಗಿ ೧೯೮೦ರ ದಶಕದ ಆದಿಯಲ್ಲೇ ’ಕುಗ್ರಾಮ ಗುರುತಿಸಿ’ ಯೋಜನೆಯ ಮೂಲಕ ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮದಲ್ಲಿ ಅಭ್ಯುದಯದ ಹಣತೆ ಬೆಳಗಿಸಿದ ಈಶ್ವರ ದೈತೋಟ ಈ ಸಾಲಿಗೆ ಸೇರುವ ಇನ್ನೊಂದು ಹೆಸರು. ೧೯೮೪ರಲ್ಲಿ ಆ ಯೋಜನೆ ಸಮಾಪ್ತಿಯಾದ ಮೇಲೆ ಅವರು ಪ್ರಕಟಿಸಿದ ’ದಿ ಎಯ್ಟೀನ್ತ್ ಎಲಿಫೆಂಟ್’ ಪುಸ್ತಕ ಅಭಿವೃದ್ಧಿ ಪತ್ರಿಕೋದ್ಯಮದ ಮಟ್ಟಿಗೆ ಈಗಲೂ ಅತ್ಯಂತ ಸ್ಮರಣೀಯ ದಾಖಲೆ.


ಹಲವು ವರ್ಷ ವೃತ್ತಿನಿರತ ಪತ್ರಕರ್ತರಾಗಿ ಮುಂದೆ ಅಧ್ಯಾಪನದಲ್ಲಿ ತೊಡಗಿಕೊಂಡು, ’ಸಾವಯವ ಕೃಷಿ’, ’ಕಾಂಕ್ರೀಟ್ ಕಾಡಿನ ಪುಟ್ಟ ಕಿಟಕಿ’, ’ನೆಲದವರು’ ಮುಂತಾದ ಕೃತಿಗಳ ಮೂಲಕ ಗುರುತಿಸಿಕೊಂಡ ಡಾ. ನರೇಂದ್ರ ರೈ ದೇರ್ಲ, ಅಭಿವೃದ್ಧಿಪರ ಬರವಣಿಗೆ ಮತ್ತು ಅಂತಹದೇ ಹಾದಿಯಲ್ಲಿ ಮುಂದುವರಿಯುವುದಕ್ಕೆ ಸಹಕಾರಿಯಾಗಿ ಯುವಕರಿಗೆ ಕಾರ್ಯಾಗಾರಗಳ ಆಯೋಜನೆ, ’ಒಡಲ ನೋವಿನ ತೊಟ್ಟಿಲ ಹಾಡು’, ’ಮೋನೋಕಲ್ಚರ್ ಮಹಾಯಾನ’, ’ಕಾನ್‌ಚಿಟ್ಟೆ’ಯಂತಹ ಪುಸ್ತಗಳನ್ನು ಪ್ರಕಟಿಸಿರುವ ಶಿವಾನಂದ ಕಳವೆ, ಬೇರೆಬೇರೆ ರೀತಿಯಾಗಿ ಈ ಬಗೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸತೀಶ್ ಚಪ್ಪರಿಕೆ, ಅನಿತಾ ಪೈಲೂರು, ಆನಂದತೀರ್ಥಪ್ಯಾಟಿ, ಪ. ರಾಮಕೃಷ್ಣ ಶಾಸ್ತ್ರಿ, ಬೇಳೂರು ಸುದರ್ಶನ, ನಾ. ಕಾರಂತ ಪೆರಾಜೆ, ಪೂರ್ಣಪ್ರಜ್ಞ ಬೇಳೂರು ಮುಂತಾದವರು ಕನ್ನಡದ ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸುತ್ತಾರೆ. ಕೃಷಿ ಮಾಧ್ಯಮ ಕೇಂದ್ರ, ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಮುಂತಾದ ಸಂಸ್ಥೆಗಳು ಸ್ವಇಚ್ಛೆಯಿಂದ ಅಭಿವೃದ್ಧಿ ಪತ್ರಿಕೋದ್ಯಮದ ಜಾಡನ್ನು ಗಟ್ಟಿಗೊಳಿಸುವತ್ತ ಶಿಕ್ಷಣ ಹಾಗೂ ತರಬೇತಿಗಳಲ್ಲಿ ತೊಡಗಿಕೊಂಡಿರುವುದೂ ಒಂದು ಆಶಾದಾಯಕ ಅಂಶವೇ.


ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮುರುಘಾಶ್ರೀ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರಿನ ಕಮ್ಯುನಿಕೇಶನ್ ಫಾರ್ ಡೆವಲಪ್‌ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆ ನೀಡುವ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಹಿರಿಯ ಪತ್ರಕರ್ತ ದಿ ಪ. ಗೋಪಾಲಕೃಷ್ಣ ಅವರ ಹೆಸರಲ್ಲಿ ನೀಡುವ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ರಾಜ್ಯ ಸರ್ಕಾರ ನೀಡುವ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳು ಹೊಸಬಗೆಯ ಪ್ರಯತ್ನಗಳಿಗೆ ಪ್ರೋತ್ಸಾಹ ಕೊಡುವಲ್ಲಿ ಸಫಲವಾದರೆ ಅವೂ ಅಭಿನಂದನೀಯವೇ.


ಆದರೂ, ಒಟ್ಟು ಪತ್ರಿಕೋದ್ಯಮದ ಸನ್ನಿವೇಶ ಗಮನಿಸಿದಾಗ ಅಭಿವೃದ್ಧಿ ವರದಿಗಾರಿಕೆಗೆ ದೊರೆಯುವ ಅವಕಾಶ ತೀರಾ ಕಡಿಮೆ ಎಂಬುದು ಈಗಲೂ ಸತ್ಯ. ೨೦೧೦ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ದೇಶದ ಐದು ರಾಜ್ಯಗಳಿಂದ ಆಯ್ದ ೧೦ ಪ್ರಮುಖ ಪತ್ರಿಕೆಗಳನ್ನಿಟ್ಟುಕೊಂಡು ಸಂಶೋಧನ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಪರಿಸರ ವಿಚಾರಗಳಿಗೆ ದೊರೆತ ಸ್ಥಳಾವಕಾಶ ಶೇ. ೩ ಮತ್ತು ಕೃಷಿಗೆ ದೊರೆತ ಅವಕಾಶ ಶೇ. ೦.೯. ಆದರೆ ರಾಜಕೀಯಕ್ಕೆ ದೊರೆತ ಸ್ಥಳಾವಕಾಶ ಶೇ. ೧೫. ೭ ಮತ್ತು ವಾಣಿಜ್ಯ ವಿಷಯಗಳಿಗೆ ದೊರೆತ ಅವಕಾಶ ಶೇ. ೧೩.೬. ಅಭಿವೃದ್ಧಿ ವರದಿಗಾರಿಕೆಗೆ ನಮ್ಮಲ್ಲಿರುವ ಅವಕಾಶ ಏನೆಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಆದಾಗ್ಯೂ ಎಲ್ಲ ಒತ್ತಡ ಅನಿವಾರ್ಯತೆಗಳ ನಡುವೆಯೂ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ಆಶಾವಾದದ ಬೆಳಕಿಂಡಿ ಇನ್ನೂ ತೆರೆದುಕೊಂಡಿಯೆಂದಾದರೆ ಅಂತಹ ಹತ್ತಾರು ಕಿಂಡಿಗಳು ಇನ್ನೂ ತೆರೆದುಕೊಳ್ಳಲಿ ಎಂಬುದೇ ಸದ್ಯದ ಆಶಯ.



(ಇದು ೨೯-೦೯-೨೦೧೧ರ ’ಹೊಸದಿಗಂತ’ದಲ್ಲಿ ಪ್ರಕಟವಾದ ಬರಹ. ಮೂಲ ಪುಟವನ್ನು ಈ ಲಿಂಕಿನ ಮೂಲಕ ನೋಡಬಹುದು. ಬೇಳೂರು ಸುದರ್ಶನ ಅವರೂ ತಮ್ಮ ಮಿತ್ರಮಾಧ್ಯಮ ಬ್ಲಾಗಿನಲ್ಲಿ ಬಾಳೇಪುಣಿಯವರ ಬಗ್ಗೆ ಒಂದು ಒಳ್ಳೆಯ ಲೇಖನ ಬರೆದಿದ್ದಾರೆ. ಅದನ್ನು ಕೂಡ ಓದಿ.)