ಶುಕ್ರವಾರ 9 ಡಿಸೆಂಬರ್ 2011

ನ್ಯಾ| ಕಟ್ಜು ಹೇಳಿಕೆಗಳೂ, ಅರ್ಥವಿಲ್ಲದ ಟೀಕೆಗಳೂ



ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ನ್ಯಾ ಮಾರ್ಕಾಂಡೇಯ ಕಟ್ಜು ಮಾಧ್ಯಮಗಳ ಕುರಿತಾಗಿ 'ವಿವಾದಾಸ್ಪದ’ ಹೇಳಿಕೆ ನೀಡಿ ತಿಂಗಳೇ ಉರುಳಿದರೂ, ಆ ಕುರಿತ ವಾದವಿವಾದಗಳಿಗೆ ಇನ್ನೂ ತೆರೆಬಿದ್ದಂತೆ ಕಾಣುವುದಿಲ್ಲ. ಸದ್ಯಕ್ಕೆ ತೆರೆಬೀಳುವ ಲಕ್ಷಣವೂ ಇಲ್ಲ. ಏಕೆಂದರೆ ಅವರು ಹೇಳಿದ್ದು ಅಷ್ಟು ಸುಲಭವಾಗಿ ಮರೆಯುವಂಥದ್ದೂ ಅಲ್ಲ. ಒಂದಷ್ಟು ಸಮಯದ ಬಳಿಕ ಈಗ ಎದ್ದಿರುವ ಕಾವು 'ಕಾಲಸಹಜ ಮರೆವಿನಿಂದ’ ಕೊಂಚ ಕಮ್ಮಿಯಾಗಬಹುದಾದರೂ, ಅದು ಪೂರ್ತಿ ಆರಿಹೋಗುವುದಂತೂ ಸಾಧ್ಯವಿಲ್ಲ.



ಹಾಗೆ ನೋಡಿದರೆ, ನ್ಯಾ ಕಟ್ಜು ಹೊಸ ಆರೋಪಗಳನ್ನೇನೂ ಮಾಡಿಲ್ಲ. ಪತ್ರಿಕೆಗಳನ್ನು ಓದಿ, ಚಾನೆಲ್‌ಗಳನ್ನು ನೋಡಿ ಪ್ರತಿದಿನ ಜನಸಾಮಾನ್ಯರು ಆಡಿಕೊಳ್ಳುವ ಮಾತುಗಳನ್ನೇ ಅವರು ಪುನರುಚ್ಚರಿಸಿದ್ದಾರೆ. ಆದರೆ ಆ ಮಾತುಗಳು ಈಗ ಪತ್ರಿಕಾ ಮಂಡಳಿಯ ಅಧ್ಯಕ್ಷರ ಬಾಯಿಯಿಂದಲೇ ಬಂದಿವೆ ಎಂಬ ಕಾರಣಕ್ಕೆ ವಿಶೇಷ ಚರ್ಚೆ ನಡೆದಿದೆ. ಎರಡು ವರ್ಷಗಳ ಹಿಂದೆ ಕರ್ನಾಟಕದ ಆಗಿನ ಗೃಹಸಚಿವರಾಗಿದ್ದ ಡಾ. ವಿ. ಎಸ್. ಆಚಾರ್ಯರು 'ಮಾಧ್ಯಮ ಧರ್ಮಾಧಿಕಾರಿ’ಯನ್ನು ನೇಮಿಸುವ ಪ್ರಸ್ತಾಪ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ರಾಜ್ಯಮಟ್ಟದಲ್ಲಾದರೂ ಅವರ ಹೇಳಿಕೆ ಆಗ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಇತ್ತೀಚೆಗೆ ನಡೆದ ಮಾಧ್ಯಮ ಸಂಬಂಧೀ ಸಮ್ಮೇಳನವೊಂದರಲ್ಲೂ ಅವರು ಈ ಒಂಬಡ್ಸ್‌ಮನ್ ವಿಚಾರವನ್ನು ಪ್ರಸ್ತಾಪಿಸಿ 'ಈಗ ಮತ್ತೆ ಆ ಕುರಿತ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ’ ಎಂದಿದ್ದರು. ಒಂಬಡ್ಸ್‌ಮನ್ ನೇಮಕ ಮಾಡಬೇಕೆಂದೇನೂ ಕಟ್ಜು ಹೇಳಿಲ್ಲವಾದರೂ, ಮಾಧ್ಯಮಗಳನ್ನು ನಿಯಂತ್ರಿಸುವುದಕ್ಕೆ ವಿಶೇಷ ಅಧಿಕಾರದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದರು.



ಕಟ್ಜು ಅವರು ಸಿಎನ್‌ಎನ್-ಐಬಿಎನ್‌ಗೆ ನೀಡಿದ ಸಂದರ್ಶನದಲ್ಲಿ ಭಾರತೀಯ ಮಾಧ್ಯಮಗಳ ಕುರಿತಾಗಿ ಮಾಡಿದ ಆರೋಪಗಳು ತಪ್ಪು ತಿಳುವಳಿಕೆಯ, ಅಜ್ಞಾನದ ಹಾಗೂ ಪೂರ್ವಾಗ್ರಹಪೀಡಿತ ಹೇಳಿಕೆಗಳೆಂದು ಮಾಧ್ಯಮಗಳಿಗೆ ಸಂಬಂಧಿಸಿದ ವಿವಿಧ ಸಂಘಟನೆಗಳು ಟೀಕಿಸಿವೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಇಂಡಿಯನ್ ನ್ಯೂಸ್‌ಪೇಪರ್ಸ್ ಸೊಸೈಟಿ, ನ್ಯಾಶನಲ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್, ಸೌತ್ ಏಷ್ಯಾ ಮೀಡಿಯಾ ಕಮಿಷನ್ ಮೊದಲಾದ ಸಂಘಟನೆಗಳು ಕಟ್ಜು ಹೇಳಿಕೆಗಳನ್ನು ಒಂದಾದಮೇಲೊಂದರಂತೆ ಕಟು ಶಬ್ದಗಳಲ್ಲಿ ಖಂಡಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿವೆ. ಕೆಲವರು ಕಟ್ಜು ಅವರನ್ನೇ ಪತ್ರಿಕಾ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿ ಎಂದು ಪಟ್ಟು ಹಿಡಿದರೆ ಇನ್ನು ಕೆಲವರು ಪತ್ರಿಕಾ ಮಂಡಳಿಯಂತಹ ಅನವಶ್ಯಕ ಸಂಸ್ಥೆಯನ್ನು ಮುಚ್ಚಿಬಿಡಿ ಎಂದು ಒತ್ತಾಯಿಸುವವರೆಗೆ ಮುಂದುವರಿದಿದ್ದಾರೆ. ಇಷ್ಟೊಂದು ಗುಲ್ಲೆಬ್ಬಿಸಿದ ಕಟ್ಜು ಅವರ ಹೇಳಿಕೆಗಳಾದರೂ ಏನು?



ಮುಖ್ಯವಾಗಿ ಮೂರು ವಿಷಯಗಳಲ್ಲಿ ತನಗೆ ಭಾರತೀಯ ಮೇಲೆ, ಅದರಲ್ಲೂ ಟೆಲಿವಿಷನ್ ಮಾಧ್ಯಮದ ಮೇಲೆ ಒಳ್ಳೆಯ ಅಭಿಪ್ರಾಯವಿಲ್ಲವೆಂದು ಪತ್ರಿಕಾ ಮಂಡಳಿ ಅಧ್ಯಕ್ಷರು ಹೇಳಿದ್ದರು. ಮೊದಲನೆಯದು- ಹಸಿವು, ಬಡತನ, ರೈತರ ಆತ್ಮಹತ್ಯೆ, ನಿರುದ್ಯೋಗಗಳಂತಹ ನೂರಾರು ಸಮಸ್ಯೆಗಳು ದೇಶದಲ್ಲಿ ತುಂಬಿರಬೇಕಾದರೆ, ಮಾಧ್ಯಮಗಳು ಅವುಗಳ ಬದಲು ಕ್ರಿಕೆಟ್-ಸಿನಿಮಾ-ಫ್ಯಾಷನ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು; ಎರಡನೆಯದು- ಧರ್ಮ-ಜಾತಿಗಳ ಹೆಸರಿನಲ್ಲಿ ಜನತೆಯನ್ನು ಒಡೆಯುತ್ತಿರುವುದು; ಮೂರನೆಯದು- ಜನರಲ್ಲಿ ಜ್ಯೋತಿಷ, ಕಂದಾಚಾರ ಮೊದಲಾದ ಮೂಢನಂಬಿಕೆಗಳನ್ನು ಬಿತ್ತುವುದು. ಅಲ್ಲದೆ, ಬಹುತೇಕ ಪತ್ರಕರ್ತರು ಬೌದ್ಧಿಕವಾಗಿ ದುರ್ಬಲರು, ಅವರಲ್ಲಿ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ, ತತ್ವಶಾಸ್ತ್ರಗಳ ಬಗೆಗಿನ ತಿಳುವಳಿಕೆ ಕಡಿಮೆ; ಎಲೆಕ್ಟ್ರಾನಿಕ್ ಮಾಧ್ಯಮಗಳನ್ನೂ ಪತ್ರಿಕಾ ಮಂಡಳಿಯ ವ್ಯಾಪ್ತಿಗೆ ತರಬೇಕು; ಹದ ತಪ್ಪಿ ವರ್ತಿಸುವ ಮಾಧ್ಯಮಗಳಿಗೆ ದಂಡ ವಿಧಿಸುವ, ಸರ್ಕಾರಿ ಜಾಹೀರಾತು ನಿಲ್ಲಿಸುವ ಹಾಗೂ ಪರವಾನಗಿಯನ್ನು ರದ್ದುಗೊಳಿಸುವ ಅಧಿಕಾರವನ್ನು ನೀಡಬೇಕು ಎಂಬ ಕಟ್ಜು ಅವರ ಹೇಳಿಕೆಗಳೂ ಹೆಚ್ಚಿನ ಟೀಕೆ ಹಾಗೂ ಪ್ರತಿರೋಧಗಳನ್ನು ಎದುರಿಸಿವೆ.



ನ್ಯಾ ಕಟ್ಜು ಹೇಳಿರುವ ಎಲ್ಲವನ್ನೂ ಒಪ್ಪಿಕೊಳ್ಳಬೇಕಾಗಿಲ್ಲವಾದರೂ, ಅವರು ಹೇಳಿರುವ ಹಲವಾರು ಅಂಶಗಳಲ್ಲಿ ಹುರುಳಿರುವುದಂತೂ ನಿಜ. 'ಜನರಿಗೆ ಬೇಕಾದುದನ್ನು ಮಾಧ್ಯಮಗಳು ಕೊಡಬೇಕೋ ಅಥವಾ ಜನರಿಗೆ ಏನು ಕೊಡಬೇಕೆಂಬುದನ್ನು ಮಾಧ್ಯಮಗಳು ನಿರ್ಧರಿಸಬೇಕೋ’ ಎಂಬ ಚರ್ಚೆ ಮೊದಲಿನಿಂದಲೂ ಇದೆ. ಅದು ಬೀಜವೃಕ್ಷ ನ್ಯಾಯದಂತೆ ಸಾಗುತ್ತಲೇ ಇದೆ. ಆದರೆ ಬಹುಪಾಲು ಮಾಧ್ಯಮಗಳು 'ಜನರು ಏನನ್ನು ಕೇಳುತ್ತಿದ್ದಾರೋ ಅದನ್ನು ನಾವು ಕೊಡುತ್ತಿದ್ದೇವೆ’ ಎಂದು ಹೇಳಿಕೊಂಡು ಬರುತ್ತವಾದರೂ, ಜನರ ಬೇಕು-ಬೇಡಗಳನ್ನು ತಾವಾಗಿ ನಿರ್ಧರಿಸುವುದೇ ಹೆಚ್ಚು. ಪ್ರಜಾಸತ್ತೆಯ ನಾಲ್ಕನೆಯ ಆಯಾಮ ಎಂಬ ಹೆಗ್ಗಳಿಕೆ ಹೊಂದಿರುವ ಮಾಧ್ಯಮಗಳು ಜನರ ಬೌದ್ಧಿಕ ಮಟ್ಟವನ್ನು ಮೇಲೆತ್ತುವ ಕೆಲಸ ಮಾಡಬೇಕೇ ಹೊರತು ಅವರು ಯಾವ ಮಟ್ಟದಲ್ಲಿದ್ದಾರೋ ಅಲ್ಲೇ ಉಳಿಯುವಂತೆ ಮಾಡುವ ಅಥವಾ ಇನ್ನೂ ಆಳಕ್ಕೆ ಕುಸಿಯುವ ಹಾಗೆ ಮಾಡುವುದಲ್ಲ. ಶಿಕ್ಷಣ, ಮಾಹಿತಿ, ಮನರಂಜನೆ- ಈ ಮೂರು ಯಾವತ್ತೂ ಮಾಧ್ಯಮಗಳ ಮೂಲಭೂತ ಜವಾಬ್ದಾರಿಗಳಾಗಿರುವಾಗ, ಕೇವಲ ಮನರಂಜನೆಗೆ ಮಾತ್ರ ಪ್ರಾಮುಖ್ಯತೆ ನೀಡಿ ಉಳಿದೆರಡನ್ನು ಕಡೆಗಣಿಸುವುದು ಆತ್ಮವಂಚನೆಯಾಗುವುದಿಲ್ಲವೇ? ಎಲ್ಲ ಮಾಧ್ಯಮಗಳೂ ಕೇವಲ ಸಿನಿಮಾ ಹಾಗೂ ಕ್ರಿಕೆಟ್ಟನ್ನೇ ವೈಭವೀಕರಿಸುತ್ತಿವೆ ಎಂದಲ್ಲ; ಜನಸಾಮಾನ್ಯರ ಸಮಸ್ಯೆಗಳು, ಅಭಿವೃದ್ಧಿ ಮುಂತಾದ ಗಂಭೀರ ವಿಚಾರಗಳತ್ತ ಓದುಗರನ್ನು/ನೋಡುಗರನ್ನು ಸೆಳೆಯುವ ಕೆಲಸವನ್ನೂ ಶ್ರದ್ಧೆಯಿಂದ ನಿರ್ವಹಿಸುತ್ತಿರುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಆದರೆ ಮುಖ್ಯವಾಹಿನಿಯ ಅನೇಕ ಮಾಧ್ಯಮಗಳು ಇಂಥ ಕಾರ್ಯಕ್ರಮಗಳ ಗುಂಗಿನಲ್ಲೇ ಕಾಲಯಾಪನೆ ಮಾಡುತ್ತಿರುವುದರಿಂದ ಈ ಕ್ಷೇತ್ರದಲ್ಲಿರುವ ಎಲ್ಲರೂ ಒಂದೇ ಧಾಟಿಯ ಆರೋಪಗಳನ್ನು ಎದುರಿಸಬೇಕಾಗಿರುವುದು ದುರದೃಷ್ಟಕರ ಅಷ್ಟೇ.



ಮಾಧ್ಯಮಗಳು ಜನರ ಬೌದ್ಧಿಕ ಮಟ್ಟವನ್ನು ಎತ್ತರಿಸುವ ಶ್ರೇಷ್ಠ ಕರ್ತವ್ಯವನ್ನು ನಿರ್ವಹಿಸಬೇಕಾದರೆ ಜವಾಬ್ದಾರಿ ಸ್ಥಾನದಲ್ಲಿರುವ ಪತ್ರಕರ್ತರು ಕೂಡ ಉನ್ನತ ಬೌದ್ಧಿಕ ಸಾಮರ್ಥ್ಯವನ್ನು ಹೊಂದುವುದು ಅನಿವಾರ್ಯ. ಪತ್ರಕರ್ತರು ಬೌದ್ಧಿಕ ಔನ್ನತ್ಯವನ್ನು ಸಾಧಿಸಬೇಕೆಂದು ಪ್ರಜ್ಞಾವಂತನೊಬ್ಬ ಅಪೇಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಹಾಗೆ ನೋಡಿದರೆ, ಪತ್ರಕರ್ತರೆಂದರೆ ಹಿಂದಿನಿಂದಲೂ ಜನಸಾಮಾನ್ಯರಲ್ಲಿ ಬೆಳೆದುಕೊಂಡುಬಂದಿರುವ ವಿಶೇಷ ಅಭಿಮಾನ-ಗೌರವಕ್ಕೆ ಕಾರಣ ಅವರು ಎಲ್ಲ ಕ್ಷೇತ್ರಗಳನ್ನೂ ತಕ್ಕಮಟ್ಟಿಗೆ ತಿಳಿದುಕೊಂಡಿರುವವರು ಎಂದು ಸಮಾಜ ಭಾವಿಸಿರುವುದು. ರಾಜಾ ರಾಮಮೋಹನ ರಾಯ್, ಮಹಾತ್ಮಾ ಗಾಂಧಿ, ಬಾಲ ಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಸುರೇಂದ್ರನಾಥ ಬ್ಯಾನರ್ಜೀ, ಸರ್ ಫಿರೋಜ಼್‌ಶಾ ಮೆಹ್ತಾ, ಮದನ ಮೋಹನ ಮಾಳವೀಯ, ಕನ್ನಡದಲ್ಲಿ ಡಿವಿಜಿ, ತಿ.ತಾ. ಶರ್ಮ, ಸಿದ್ಧವನಹಳ್ಳಿ ಕೃಷ್ಣಶರ್ಮ, ವೆಂಕಟಕೃಷ್ಣಯ್ಯ ಮೊದಲಾದ ಉನ್ನತ ವ್ಯಕ್ತಿತ್ವಗಳು ನಮ್ಮ ಪತ್ರಿಕೋದ್ಯಮದ ತಳಹದಿ ಹಾಕಿದ್ದರಿಂದಲೇ ಜನ ಪತ್ರಕರ್ತರ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ. ಪೇಪರಿನವರನ್ನು ಎದುರುಹಾಕಿಕೊಂಡರೆ ತೊಂದರೆ ತಪ್ಪಿದ್ದಲ್ಲ ಎಂಬ ಭಯ ಜನರಲ್ಲಿದ್ದರೆ, ಅದನ್ನು ಸೃಷ್ಟಿಸಿರುವುದು ನಮ್ಮ ಭ್ರಷ್ಠ ರಾಜಕಾರಣಿಗಳು, ಕುಟಿಲ ಅಧಿಕಾರಿಗಳು ಹಾಗೂ ಪತ್ರಿಕೋದ್ಯಮವನ್ನು ಅನೈತಿಕ ದಂಧೆಯನ್ನಾಗಿ ಮಾಡಿಕೊಂಡಿರುವ ಪೀತಪತ್ರಕರ್ತರು.



ಬಹುಶಃ ಅನೇಕ ಪತ್ರಕರ್ತರು ಒಳಗೇನೂ ತಿರುಳಿಲ್ಲದಿದ್ದರೂ ತಮಗೆ ತಾವೇ ಬೃಹಸ್ಪತಿಗಳೆಂದೂ ಎದುರಿಗೆ ಕುಳಿತವನು ಏನೇನೂ ಅರಿವಿಲ್ಲದ ಬುದ್ಧಿಗೇಡಿಯೆಂದೂ ವರ್ತಿಸುವುದರಿಂದಲೇ ಜನರ ಅಭಿಮಾನ ಅಪಹಾಸ್ಯವಾಗಿ ಪರಿವರ್ತನೆಯಾಗಿದ್ದರೆ ಅಚ್ಚರಿಯೇನೂ ಇಲ್ಲ. ಪತ್ರಿಕಾಗೋಷ್ಠಿಯಲ್ಲಿ ಸಜ್ಜನ ವಿದ್ವಾಂಸನೊಬ್ಬ ಒಂದು ನಿಮಿಷ ಹೆಚ್ಚು ತೆಗೆದುಕೊಂಡುಬಿಟ್ಟರೆ ಅಷ್ಟಕ್ಕೇ ಕೆಂಡಾಮಂಡಲವಾಗಿ ಆತನನ್ನು ಅರ್ಧಕ್ಕೇ ತಡೆದು ’ನಿಮ್ಮ ಭಾಷಣ ಕೇಳೋದಕ್ಕಲ್ಲ ನಾವು ಬಂದಿರೋದು, ನ್ಯೂಸ್ ಏನು ಅಷ್ಟು ಹೇಳಿ’ ಎಂದು ದರ್ಪ ತೋರುವ, ತಮ್ಮ ಹಕ್ಕಿನ ಪಾಲೋ ಎಂಬ ಹಾಗೆ ಪೆನ್ನು-ಪ್ಯಾಡು ಎಲ್ಲಿ, ಬ್ಯಾಗ್ ಎಲ್ಲಿ, ಊಟ-ತಿಂಡಿ ವ್ಯವಸ್ಥೆ ಯಾಕೆ ಮಾಡಿಲ್ಲ ಎಂಬಿತ್ಯಾದಿ ತಕರಾರು ತೆಗೆಯುವ ಸಾಕಷ್ಟು ಮಂದಿಯನ್ನು ಕಂಡದ್ದಿದೆ. ಎಲ್ಲ ಪತ್ರಕರ್ತರೂ ಇದೇ ಸಾಲಿನವರು ಎಂದು ಈ ಮಾತಿನ ಅರ್ಥವೇನೂ ಅಲ್ಲ. ಆದರೆ ಬಹಳ ಬಾರಿ ಎಲ್ಲ ಬಣ್ಣವನ್ನೂ ಮಸಿ ನುಂಗಿತು ಎಂಬಂತಾಗಿಬಿಡುತ್ತದೆ, ಅದೇ ದುರಂತ.ಡಿವಿಜಿ, ತಿ.ತಾ. ಶರ್ಮರ ಕಾಲ ಬೇರೆ, ಈಗಿನ ಕಾಲವೇ ಬೇರೆ; ಅಂದಿನ ಪತ್ರಿಕೋದ್ಯಮವನ್ನೂ ಇಂದಿನ ಸೂಪರ್‌ಸಾನಿಕ್ ಯುಗದ ಮಾಧ್ಯಮ ಪ್ರಪಂಚವನ್ನೂ ಹೋಲಿಸಿನೋಡಬೇಡಿ; ಇದೇನಿದ್ದರೂ ಸ್ಪೆಶಲೈಸೇಶನ್ ಶಕೆ; ಪತ್ರಕರ್ತ ಎಲ್ಲ ವಿಷಯಗಳಲ್ಲೂ ಪ್ರಕಾಂಡ ಪಾಂಡಿತ್ಯ ಹೊಂದಬೇಕೆಂದು ಹೇಗೆ ಅಪೇಕ್ಷಿಸುವುದು ಎಂಬ ಸಮಜಾಯುಷಿ ಇದ್ದೇ ಇದೆ. ಆದರೆ ಪಾಂಡಿತ್ಯವಲ್ಲದೇ ಹೋದರೂ ಪ್ರಚಲಿತ ವಿದ್ಯಮಾನಗಳನ್ನೂ ಒಳಗೊಂಡಂತೆ ಎಲ್ಲ ವಿಷಯಗಳಲ್ಲೂ ಪತ್ರಕರ್ತರು ತಕ್ಕಮಟ್ಟಿನ ಸಾಮಾನ್ಯ ಜ್ಞಾನ ಹೊಂದಿರುವುದು ಎಲ್ಲ ಕಾಲಕ್ಕೂ ಅನಿವಾರ್ಯ. ಅಂತಹದರಲ್ಲಿ ಎಷ್ಟು ಮಂದಿ ಪತ್ರಕರ್ತರು ತಮ್ಮ ಪತ್ರಿಕೆಯ ಹೊರತಾಗಿ ಪ್ರತಿದಿನ ಬೇರೆ ಏನಾದರೂ ಒಂದಷ್ಟು ಹೊಸದನ್ನು ಓದುವ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ? ಪತ್ರಿಕೋದ್ಯಮವನ್ನು ತರಗತಿಯಲ್ಲಿ ಓದಿ ಬರುವುದು ನಿಷ್ಪ್ರಯೋಜಕ, ಅಲ್ಲಿ ಓದಿದ್ದು ಯಾವುದೂ ಪ್ರಾಯೋಗಿಕ ಅಲ್ಲ ಎಂದು ಮೂಗುಮುರಿಯುವವರೇ ಜಾಸ್ತಿ. ಪತ್ರಿಕೋದ್ಯಮ ಶಿಕ್ಷಣ, ಅಲ್ಲಿನ ಪಠ್ಯಕ್ರಮದಲ್ಲಿ ಪ್ರಾಯೋಗಿಕತೆಯ ಕೊರತೆ ಎಲ್ಲವೂ ನಿಜವೇ ಇರಬಹುದು, ಆದರೆ ಪ್ರಾಯೋಗಿಕ ವೃತ್ತಿಯಲ್ಲಿರುವವರು ಪುಸ್ತಕಗಳನ್ನು ಓದಬಾರದು ಎಂದಿಲ್ಲವಲ್ಲ?



ಮಾಧ್ಯಮಗಳು ಜಾತಿ-ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ, ಕಂದಾಚಾರ-ಮೂಢನಂಬಿಕೆಗಳನ್ನು ಬಿತ್ತುತ್ತಿವೆ ಎಂದು ನ್ಯಾ ಕಟ್ಜು ಹೇಳಿದ್ದರಲ್ಲೂ ಹುರುಳಿಲ್ಲದಿಲ್ಲ. ಪತ್ರಿಕೆಗಳಲ್ಲಿ ಬರುವ ಪೂರ್ವಗ್ರಹಪೀಡಿತ ಸುದ್ದಿಗಳು, ಟಿಆರ್‌ಪಿಯನ್ನೇ ಗುರಿಯಾಗಿಸಿಕೊಂಡು ಚಾನೆಲ್‌ಗಳಲ್ಲಿ ಬರುವ ಚಿತ್ರವಿಚಿತ್ರ ಕಾರ್ಯಕ್ರಮಗಳು ಈ ಭಾವನೆಯನ್ನು ಮೂಡಿಸಿದ್ದರೆ ಅಚ್ಚರಿಯೇನಲ್ಲ. ಆದರೆ ಬಹುತೇಕ ಬುದ್ಧಿಜೀವಿಗಳಂತೆ ಪತ್ರಿಕಾ ಮಂಡಳಿಯ ಅಧ್ಯಕ್ಷರೂ ಜ್ಯೋತಿಷವನ್ನು ಒಂದು ಶಾಸ್ತ್ರವಾಗಿ ಅಥವಾ ಅಧ್ಯಯನದ ಶಿಸ್ತಾಗಿ ಗ್ರಹಿಸಲಾಗದೆ, ಅದನ್ನೊಂದು ಮೂಢನಂಬಿಕೆಗೆ ಸೀಮಿತಗೊಳಿಸಿರುವುದು ಅವರ ಮಿತಿ ಎಂದಷ್ಟೇ ಹೇಳಬಹುದು.



ಭಾರತೀಯ ಪತ್ರಿಕಾ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಕಟ್ಜು ಕೇಳಿರುವುದೂ ಅಂತಹ ಅತಿರೇಕದ ಅಧಿಕಾರದಾಹದ ಮಾತೆಂದು ಅನಿಸುವುದಿಲ್ಲ. ಪತ್ರಿಕಾ ಮಂಡಳಿ ಹಲ್ಲಿಲ್ಲದ ಹಾವಿನಂತಿದೆ, ಅದೊಂದು ಕಾಗದದ ಹುಲಿ ಎಂಬ ಟೀಕೆಗಳು ಮೊದಲಿನಿಂದಲೂ ಇವೆ; ಅಂತಹದರಲ್ಲಿ ತಪ್ಪಿನಡೆಯುವ ಮಾಧ್ಯಮಗಳಿಗೆ ದಂಡವಿಧಿಸುವ, ಸರ್ಕಾರಿ ಜಾಹೀರಾತು ತಡೆಹಿಡಿಯುವ, ಲೈಸೆನ್ಸ್ ರದ್ದುಗೊಳಿಸುವ ಅಧಿಕಾರವನ್ನು ಮಂಡಳಿ ಕೇಳಿದ್ದರಲ್ಲಿ ಅಂತಹ ಪ್ರಮಾದವೇನಾಯ್ತು? ಇಷ್ಟರವರೆಗೆ ಪತ್ರಿಕಾ ಮಂಡಳಿಯ ಶಕ್ತಿಹೀನತೆಯನ್ನು ಮೂದಲಿಸುತ್ತಿದ್ದವರು ಈಗ ನಿಜವಾಗಿಯೂ ಅದಕ್ಕೆ ಹೆಚ್ಚಿನ ಅಧಿಕಾರ ನೀಡುವ ಚರ್ಚೆ ಆರಂಭವಾಗುತ್ತಿರಬೇಕಾದರೆ ಅದನ್ನು ವಿರೋಧಿಸುತ್ತಿರುವುದರ ಹಿಂದಿನ ಒಳಮರ್ಮ ಏನು? ಈಗ ಅನುಸರಿಸುತ್ತಿರುವ ಸ್ವಯಂ ನಿಯಂತ್ರಣವೇ ಸಾಕು, ಎಲೆಕ್ಟ್ರಾನಿಕ್ ಮಾಧ್ಯಮವನ್ನೂ ಪತ್ರಿಕಾ ಮಂಡಳಿಯ ವ್ಯಾಪ್ತಿಗೆ ತರುವುದು ಅನವಶ್ಯಕ ಎಂದು ಹೇಳುತ್ತಿರುವವರೂ ತಮ್ಮ ಸ್ವಯಂನಿಯಂತ್ರಣದ ಕ್ರಮದಿಂದ ಏನು ಸಾಧನೆ ಮಾಡಿದ್ದಾರೆ? ೨೦೦೮ರಲ್ಲಿ ಸ್ಥಾಪನೆಯಾದ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟಾಂಡರ್ಡ್ಸ್ ಕೌನ್ಸಿಲ್ ಅಥವಾ ಈ ವರ್ಷ ಅಸ್ತಿತ್ವಕ್ಕೆ ಬಂದ ಬ್ರಾಡ್‌ಕಾಸ್ಟಿಂಗ್ ಕಂಟೆಂಟ್ ಕಂಪ್ಲೇಂಟ್ಸ್ ಕೌನ್ಸಿಲ್‌ಗಳು ನಮ್ಮ ಚಾನೆಲ್‌ಗಳ ಗುಣಮಟ್ಟವನ್ನು ಸುಧಾರಿಸುವಲ್ಲಿ ಯಾವ ಮಹತ್ತರ ಕೊಡುಗೆ ನೀಡಿವೆ?



ಯಾರು ಯಾರ ಜೊತೆಗೂ ಭಿನ್ನಾಭಿಪ್ರಾಯ ಹೊಂದುವ ಹಕ್ಕು ಇದ್ದೇ ಇದೆ. ಕಟ್ಜು ಅವರ ಅಭಿಪ್ರಾಯಗಳನ್ನೂ ಚರ್ಚಿಸುವುದರಲ್ಲಿ ತಪ್ಪೇನಿಲ್ಲ. ಅದು ನಾವೆಲ್ಲ ಹೇಳುವ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ಒಂದು ಮಾತಿನಲ್ಲಿ ಮಾತ್ರ ಚರ್ಚೆ ಇಲ್ಲ: ಮಾಧ್ಯಮಗಳೂ ಜನತೆಗೆ ಉತ್ತರದಾಯಿಗಳಾಗಿರಬೇಕು.